spot_img
Thursday, July 30, 2026
spot_imgspot_img

ಆರೋಗ್ಯದ ಹಸಿರು ಅಮೃತ ಈ ಅವಕಾಡೊ: ಬೆಣ್ಣೆ ಹಣ್ಣಿನ ಬಗ್ಗೆ ಒಂದಷ್ಟು!

-ಬರಹ: ಡಾ. ಜಯವೀರ ಎ. ಕೆ. ಖೇಮಲಾಪುರ

ಒಂದು ಕಾಲದಲ್ಲಿ ವಿದೇಶಿ ಹಣ್ಣೆಂದು ಮಾತ್ರ ಪರಿಚಿತವಾಗಿದ್ದ ಅವಕಾಡೋ (ಬೆಣ್ಣೆ ಹಣ್ಣು) ಇಂದು ಉತ್ತರ ಕರ್ನಾಟಕದ ಮಾರುಕಟ್ಟೆಗಳಲ್ಲಿಯೂ ತನ್ನದೇ ಆದ ಸ್ಥಾನವನ್ನು ಗಳಿಸುತ್ತಿದೆ. ಧಾರವಾಡ ಸೇರಿದಂತೆ ಹಲವು ನಗರಗಳಲ್ಲಿ ಇದರ ಲಭ್ಯತೆ ಹೆಚ್ಚುತ್ತಿದ್ದು, ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಜನರ ಮೊದಲ ಆಯ್ಕೆಗಳಲ್ಲಿ ಒಂದಾಗಿ ರೂಪುಗೊಳ್ಳುತ್ತಿದೆ. ವಿಶ್ವದಾದ್ಯಂತ “ಸೂಪರ್ ಫುಡ್” ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಹಣ್ಣು, ರುಚಿಗಿಂತಲೂ ತನ್ನ ಅಪಾರ ಪೌಷ್ಟಿಕಾಂಶಗಳಿಂದಲೇ ಹೆಚ್ಚು ಗಮನ ಸೆಳೆದಿದೆ.

ಮೂಲತಃ ಮೆಕ್ಸಿಕೋ ಮತ್ತು ಮಧ್ಯ ಅಮೆರಿಕದ ಈ ಹಣ್ಣು, ಇಂದು ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ಸಿಕ್ಕಿಂ ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ಯಶಸ್ವಿಯಾಗಿ ಬೆಳೆಯಲಾಗುತ್ತಿದೆ. ಬೆಣ್ಣೆಯಂತಹ ಮೃದುವಾದ ತಿರುಳಿನ ಕಾರಣದಿಂದ ಕನ್ನಡದಲ್ಲಿ ಇದನ್ನು ಬೆಣ್ಣೆ ಹಣ್ಣು ಎಂದೂ ಕರೆಯುತ್ತಾರೆ.

 ಅವಕಾಡೋ ಆರೋಗ್ಯಕರ ಕೊಬ್ಬು, ನಾರಿನಾಂಶ, ಪೊಟ್ಯಾಸಿಯಂ, ವಿಟಮಿನ್ ಇ, ಸಿ, ಕೆ, ಫೋಲೇಟ್ ಹಾಗೂ ಮ್ಯಾಗ್ನೀಷಿಯಂನ ಸಮೃದ್ಧ ಮೂಲವಾಗಿದೆ. ಹೃದಯದ ಆರೋಗ್ಯವನ್ನು ಕಾಪಾಡುವುದು, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸುವುದು, ಜೀರ್ಣಕ್ರಿಯೆಯನ್ನು ಸುಧಾರಿಸುವುದು ಹಾಗೂ ಮಲಬದ್ಧತೆಯನ್ನು ತಡೆಯುವುದು ಇದರ ಪ್ರಮುಖ ಪ್ರಯೋಜನಗಳಾಗಿವೆ. ಲ್ಯುಟೀನ್ ಮತ್ತು ಜಿಯಾಕ್ಸಾಂಥಿನ್ ಕಣ್ಣಿನ ಆರೋಗ್ಯವನ್ನು ರಕ್ಷಿಸಿದರೆ, ವಿಟಮಿನ್ ಇ ಚರ್ಮ ಮತ್ತು ಕೂದಲಿನ ಪೋಷಣೆಗೆ ನೆರವಾಗುತ್ತದೆ. ಮೆದುಳಿನ ಕಾರ್ಯಕ್ಷಮತೆ, ನೆನಪಿನ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸುವಲ್ಲಿಯೂ ಇದು ಸಹಕಾರಿಯಾಗಿದೆ. ಕಡಿಮೆ ಸಕ್ಕರೆ ಅಂಶ ಹೊಂದಿರುವುದರಿಂದ ವೈದ್ಯರ ಸಲಹೆಯೊಂದಿಗೆ ಮಧುಮೇಹಿಗಳೂ ಮಿತ ಪ್ರಮಾಣದಲ್ಲಿ ಸೇವಿಸಬಹುದು.

ಬೆಳೆಯುವ ಮಕ್ಕಳು, ವಿದ್ಯಾರ್ಥಿಗಳು, ಕ್ರೀಡಾಪಟುಗಳು, ಗರ್ಭಿಣಿಯರು ಹಾಗೂ ಹಿರಿಯ ನಾಗರಿಕರಿಗೆ ಅವಕಾಡೋ ಉತ್ತಮ ಪೌಷ್ಟಿಕ ಆಹಾರವಾಗಿದೆ. ಇದನ್ನು ನೇರವಾಗಿ ತಿನ್ನುವುದರ ಜೊತೆಗೆ ಮಿಲ್ಕ್ಶೇಕ್, ಸ್ಮೂದಿ, ಸಲಾಡ್, ಬ್ರೆಡ್ ಸ್ಪ್ರೆಡ್ ಮತ್ತು ಗ್ವಾಕಮೋಲೆ ರೂಪದಲ್ಲಿಯೂ ಬಳಸಬಹುದು. ಆದರೆ ಕ್ಯಾಲೊರಿಗಳು ಹೆಚ್ಚಿರುವುದರಿಂದ ದಿನಕ್ಕೆ ಅರ್ಧ ಅಥವಾ ಒಂದು ಹಣ್ಣನ್ನು ಮಿತವಾಗಿ ಸೇವಿಸುವುದು ಆರೋಗ್ಯಕರ.

ಆರೋಗ್ಯದ ಜೊತೆಗೆ ಜೀವನದ ಪಾಠವೂ

ಅವಕಾಡೋ ಕೇವಲ ಪೌಷ್ಟಿಕ ಹಣ್ಣಲ್ಲ; ಅದು ಬದುಕಿನ ಮೌಲ್ಯಗಳ ಪ್ರತೀಕವೂ ಹೌದು. ಹೊರಗೆ ಗಟ್ಟಿಯಾದ ಸಿಪ್ಪೆ, ಒಳಗೆ ಮೃದುವಾದ ಪೋಷಕ ತಿರುಳು ಮತ್ತು ಭವಿಷ್ಯದ ಬದುಕನ್ನು ಹೊತ್ತಿರುವ ಬೀಜ—ಈ ಮೂರು ಪದರಗಳು ವ್ಯಕ್ತಿಯ ವ್ಯಕ್ತಿತ್ವ, ಮೌಲ್ಯ ಮತ್ತು ಬೆಳವಣಿಗೆಯನ್ನು ನೆನಪಿಸುತ್ತವೆ. ಮನುಷ್ಯನ ನಿಜವಾದ ಸೌಂದರ್ಯ ಮತ್ತು ಶ್ರೇಷ್ಠತೆ ಹೊರಗಿನ ಆಕರ್ಷಣೆಯಲ್ಲ; ಒಳಗಿನ ಗುಣ, ಜ್ಞಾನ ಮತ್ತು ಆರೋಗ್ಯದಲ್ಲಿದೆ ಎಂಬ ಜೀವನಸತ್ಯವನ್ನು ಅವಕಾಡೋ ಸೊಗಸಾಗಿ ಸಾರುತ್ತದೆ.

“ಅವಕಾಡೋ ಕೇವಲ ಹಣ್ಣಲ್ಲ; ಅದು ಆರೋಗ್ಯ, ಪೌಷ್ಟಿಕತೆ, ಪ್ರಕೃತಿಯ ಸಮತೋಲನ ಮತ್ತು ಉತ್ತಮ ಜೀವನಶೈಲಿಯ ಪ್ರತೀಕ.”ಎಂದು ಧಾರವಾಡದ ಚಿದಂಬರ ಪಿ ನಿಂಬರಗಿ ಅಭಿಪ್ರಾಯಪಡುತ್ತಾರೆ. ಧಾರವಾಡದಂತಹ ಕೃಷಿ ಸಮೃದ್ಧ ಪ್ರದೇಶಗಳಲ್ಲಿ ಅವಕಾಡೊ ಹೆಚ್ಚುತ್ತಿರುವ ಬೇಡಿಕೆ ರೈತರಿಗೆ ಹೊಸ ವಾಣಿಜ್ಯ ಬೆಳೆಯ ಅವಕಾಶವನ್ನು ಕಲ್ಪಿಸುತ್ತಿದೆ. ಇದೇ ವೇಳೆ ಆರೋಗ್ಯಕರ ಆಹಾರದ ಬಗ್ಗೆ ಜನರಲ್ಲಿ ಹೆಚ್ಚುತ್ತಿರುವ ಜಾಗೃತಿಯನ್ನೂ ಇದು ಪ್ರತಿಬಿಂಬಿಸುತ್ತದೆ. ಪೌಷ್ಟಿಕ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯತ್ತ ಸಮಾಜ ಹೆಜ್ಜೆ ಇಡುತ್ತಿರುವ ಈ ಸಂದರ್ಭದಲ್ಲಿ, ಅವಕಾಡೋ ನಿಸರ್ಗ ನೀಡಿದ ಅಮೂಲ್ಯ ಕೊಡುಗೆಯಾಗಿ ಗುರುತಿಸಿಕೊಳ್ಳುತ್ತಿದೆ.

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group