ಬರಹ-ರಾಧಾಕೃಷ್ಣ ತೊಡಿಕಾನ
ನಾವು ಆ ಆವರಣದೊಳಗೆ ಹೆಜ್ಜೆ ಇಟ್ಟಾಗ ಅವುಗಳೆಲ್ಲ ಬೆಳಗಿನ ಆಹಾರ ಮುಗಿಸಿ ಧ್ಯಾನಸ್ಥ ಸ್ಥಿತಿಯಲ್ಲಿದ್ದವು. ಯಾರೋ ಹೊಸಬರ ಆಗಮನವನ್ನು ಗಮನಿಸಿದ ಕೂಡಲೇ ಕುತೂಹಲದ ನೋಟ, ಏನೋ ನಿರೀಕ್ಷೆಗಳು… ಹತ್ತಿರ ಹೋದರೆ ಒಮ್ಮೆಲೇ ಒಪ್ಪಿಕೊಳ್ಳದ ನಿರಾಕರಣೆ! ಅಪರಿಚಿತರಾದ ಕಾರಣ ಮೊದಮೊದಲು ಅನುಮಾನದಿಂದ ನೋಡಿದರೂ, “ಇವರಿಂದ ತನಗೇನು ತೊಂದರೆಯಿಲ್ಲ” ಎಂಬ ಧೈರ್ಯ ಬಂದ ಮೇಲೆ ಮುಖ ಮುಂದೊಡ್ಡಿ, “ಏನು.. ಹೇಗಿದ್ದೀಯಾ?” ಎಂಬ ಭಂಗಿಯಲ್ಲಿ ಕಣ್ಣು ನೆಟ್ಟವು. ಅದರ ಮುಖವನ್ನು ಪ್ರೀತಿಯಿಂದ ಸವರಿದಾಗ, ಮೆಲ್ಲನೆ ನಾಲಿಗೆ ಚಾಚಿ ಕೈ ನೆಕ್ಕ ತೊಡಗಿದವು. ಇನ್ನು ಕೆಲವು ತಮ್ಮನ್ನು ಮುಟ್ಟಿಕೊಳ್ಳುವುದೂ ಇಷ್ಟವಿಲ್ಲದೆ ದೂರ ಸರಿದವು.
ಹೌದು! ಇಂತಹ ಅಪರೂಪದ, ಭಾವನಾತ್ಮಕ ಅನುಭವಗಳು ನಮಗಾಗಿದ್ದು ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಬಜೆಗೋಳಿ ಸಮೀಪವಿರುವ ಬಂಡಸಾಲೆಯ ವಿರಂಜಯ ಅವರ “ಅಹಿಂಸಾ” ಗೋಶಾಲೆಯಲ್ಲಿ. ಇಲ್ಲಿ ಕಾಲಿಟ್ಟರೆ ಸಾಕು, ಅಲ್ಲಿರುವ ಪ್ರತಿಯೊಂದು ಜೀವವೂ ಒಂದೊಂದು ಕಥೆ ಹೇಳುತ್ತವೆ. ಬಜಗೋಳಿಯ ಅಹಿಂಸಾ ಅನಿಮಲ್ ಕೇರ್ ಟ್ರಸ್ಟ್ನ ಸಂಚಾಲಕರಾದ ಎಂ.ಕೆ. ವಿರಂಜಯ ಹೆಗ್ಡೆ ಅವರು ಕಳೆದ ಹದಿನೇಳು ವರ್ಷಗಳಿಂದ ಅಪಘಾತಕ್ಕೀಡಾದ, ರೋಗಪೀಡಿತ ಅನಾಥ ನಾಯಿ, ಬೆಕ್ಕು, ದನಗಳ ಆರೈಕೆಯಲ್ಲಿ ನಿರತರು. ಆರಂಭದಲ್ಲಿ ಅಪಘಾತಕ್ಕೀಡಾದ ನಾಯಿಗಳನ್ನು ಸಂರಕ್ಷಣೆ ಮಾಡುತ್ತಿದ್ದ ಅವರು ಗೋವು, ಬೆಕ್ಕುಗಳಿಗೂ ಆಶ್ರಯ ನೀಡಿದರು. ಈಗ ನಿರಾಶ್ರಿತ ಮೂಕಪ್ರಾಣಿಗಳ ಪುನರ್ವಸತಿಯ ದೊಡ್ಡ ಕೇಂದ್ರವಾಗಿ “ಅಹಿಂಸಾ” ಬೆಳೆದಿದೆ.

ಇಲ್ಲಿರುವ ಗೋವುಗಳು ತಿಂದುಂಡು ಒಡೆಯನ ಕೆಲಸ ಮಾಡಲು ಸಜ್ಜಾದವುಗಳಲ್ಲ. ಮುದಿಯಾದವು, ಸಾಕಲಾಗದು ಎಂದು ಹೊರಹಾಕಲ್ಪಟ್ಟವುಗಳು; ಕಸಾಯಿಖಾನೆಗೆ ತಲೆಕೊಡಲು ಹೋಗುತ್ತಿದ್ದಾಗ ರಕ್ಷಿಸಲ್ಪಟ್ಟವುಗಳು. ಇನ್ನು ಕೆಲವು ರಸ್ತೆ ಬದಿಯಲ್ಲಿ ವಾಹನಗಳ ಚಕ್ರಕ್ಕೆ ಸಿಲುಕಿ ಜೀವ ಉಳಿಸಿಕೊಳ್ಳಲು ಒದ್ದಾಡುತ್ತಿದ್ದವು, ಮತ್ತೆ ಕೆಲವು ಅನಾಥ ಗೋವುಗಳು. ತನ್ನ ಎತ್ತರದ ನಿಲುವು ಹಾಗೂ ಗಂಭೀರತೆಯಿಂದ ಭಯ ಹುಟ್ಟಿಸುವಂತೆ ಕಂಡರೂ, ಅತ್ಯಂತ ಮೃದು ಸ್ವಭಾವದ ಗೀರ್ ಹೋರಿಗಳಿವೆ. ಸಿಂಧಿ, ಜೆರ್ಸಿ, ಮಲೆನಾಡ ಗಿಡ್ಡ, ಹಳ್ಳಿಕಾರ್ ಹಾಗೂ ಮಿಶ್ರತಳಿ ಸೇರಿದಂತೆ ಅನೇಕ ಹೋರಿಗಳು ಇಲ್ಲಿ ಆಶ್ರಯ ಪಡೆದಿವೆ. ರಾಜ್ಯದ ವಿವಿಧೆಡೆಯಿಂದ ಬಂದಿರುವ ಇವೆಲ್ಲವೂ ಇಂದು ಯಾವುದೇ ಪ್ರತಿಫಲದ ಬಯಕೆಯಿಲ್ಲದ ಒಡೆಯನ ಆಶ್ರಯದಲ್ಲಿ ಹಾಯಾಗಿ ನಿಶ್ಚಿಂತವಾಗಿವೆ.

ಎತ್ತುಗಳದ್ದೇ ದೊಡ್ಡ ಸಂಸಾರ!
ಈ ಗೋಶಾಲೆಯಲ್ಲಿ ಗಂಡು ಕರುಗಳು, ಹೋರಿಗಳು ಎತ್ತುಗಳದ್ದೇ ದೊಡ್ಡ ಸಂಸಾರ.. ಸಾಮಾನ್ಯವಾಗಿ ದನಸಾಕಣೆ ಮಾಡುವ ಕೃಷಿಕರಾಗಲಿ, ಹೈನುಗಾರರಾಗಲಿ ಹೆಣ್ಣು ಕರು ಹುಟ್ಟಿದರೆ ಸಂತೋಷಪಡುತ್ತಾರೆ. ಆದರೆ ಗಂಡು ಕರು ಹುಟ್ಟಿದರೆ ಅಲ್ಲಿಗೆ ತಲೆನೋವು ಆರಂಭವಾಗುತ್ತದೆ.

ಮೊದಲೆಲ್ಲ ಕೃಷಿ ಕೆಲಸ ಹಾಗೂ ಸರಕು ಸಾಗಾಟಕ್ಕೆ ಗಂಡು ಕರುಗಳು ಅನಿವಾರ್ಯವಾಗಿದ್ದವು. ಆದರೆ ಇಂದು ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಹೆಚ್ಚಾದ ಕಾರಣ ಇವುಗಳ ಅಗತ್ಯ ಕಡಿಮೆಯಾಗಿದೆ. ಆದಾಯದ ಮೂಲವಲ್ಲದ ಕಾರಣ ಇವು ಮನೆಯಿಂದ ಹೊರಹಾಕಲ್ಪಡುತ್ತಿವೆ. ವಿರಂಜಯ ಅವರ ಗೋಶಾಲೆಯಲ್ಲಿ ಪ್ರಸ್ತುತ ಇರುವುದೇ ಹೋರಿಗಳು ಮತ್ತು ಬಡಕಲಾದ ದನಗಳು. ಕೇವಲ ಗೋಸೇವೆಯೊಂದೇ ಇದರ ಹಿಂದಿನ ಮುಖ್ಯ ಉದ್ದೇಶ. ಕೃಷಿಕರು ಸಗಣಿ ಗೊಬ್ಬರವನ್ನು ತೆಗೆದುಕೊಂಡು ಹೋಗುವುದನ್ನು ಬಿಟ್ಟರೆ ಇಲ್ಲಿ ಬೇರೆ ಯಾವುದೇ ಆದಾಯದ ಮೂಲಗಳಿಲ್ಲ.

ಅನಾಥ ನಾಯಿಗಳಿಗೆ ಆಶ್ರಯ
ಅಹಿಂಸಾ ಗೋಶಾಲೆಯ ಆವರಣದಲ್ಲಿ ಕೇವಲ ಗೋವುಗಳಷ್ಟೇ ಇಲ್ಲ, ನೂರಾರು ಅನಾಥ ನಾಯಿಗಳೂ ಆಶ್ರಯ ಪಡೆದಿವೆ. ಕೆಲವು ನಾಯಿಗಳು ಬಂದವರ ಬಳಿ ಬಂದು ಮೂಸಿ ನೋಡಿ ಬಾಲ ಆಡಿಸಿದರೆ, ಇನ್ನು ಕೆಲವು ತಲೆ ಸವರಿದರೆ ಸಾಕು ಮುಂಗಾಲನ್ನು ನಮ್ಮ ಮೇಲಿಟ್ಟು ತನ್ನದೇ ಭಾಷೆಯಲ್ಲಿ ಮಾತನಾಡಲು ಆರಂಭಿಸುತ್ತವೆ. ಮತ್ತೆ ಕೆಲವು ತಮ್ಮದೇ ಲೋಕದಲ್ಲಿ ವಿಹರಿಸುತ್ತಾ ಸುದ್ದಿಸದ್ದಿಲ್ಲದೆ ಮಲಗಿದ್ದರೆ ಮತ್ತೆ ಅಪರಿತರನ್ನು ಕಂಡು ಬೊಗಳಿ ಸಹಚರರನ್ನು ಎಚ್ಚರಿಸುತ್ತದೆ. ನಿರುಪದ್ರವಿ ನಾಯಿಗಳು ಆರಾಮವಾಗಿ ಓಡಾಡಿಕೊಂಡಿದ್ದರೆ, ಕೊಂಚ ಜೋರಾಗಿರುವ ನಾಯಿಗಳನ್ನು ಪ್ರತ್ಯೇಕ ಗೂಡುಗಳಲ್ಲಿ ಇರಿಸಲಾಗಿದೆ. ವಾಹನ ಅಪಘಾತಕ್ಕೀಡಾಗಿ ನಡೆಯಲಾಗದವುಗಳು, ಕಾಯಿಲೆಯಿಂದ ಬಳಲುತ್ತಿರುವವುಗಳು ಹಾಗೂ ಮನೆಯಲ್ಲಿ ಸಾಕಲು ಸಾಧ್ಯವಾಗದೆ ಜನರು ಬಿಟ್ಟು ಹೋದ ನಾಯಿಗಳು ಇಲ್ಲಿವೆ.

ಪ್ರಾಣಿಗಳ ಮೇಲೆ ಅಪಾರ ಕರುಣೆಯಿರುವ ಹೃದಯಗಳಿಗೆ ಮಾತ್ರ ಇಂತಹ ಕೆಲಸ ಮಾಡಲು ಸಾಧ್ಯ. ವಿರಂಜಯ ಪ್ರಾಣಿಗಳ ಮೇಲೆ ದಯೆ ಕರುಣೆಯನ್ನು ಇರಿಸಿಕೊಂಡವರು. ಅನಾಥ ಪ್ರಾಣಿಗಳನ್ನು ಕಂಡಾಗ ಕರಗುತ್ತಿದ್ದ ಇವರ ಮನಸ್ಸು, ಈ ಸೇವೆಗೆ ಕೈಹಾಕುವಂತೆ ಮಾಡಿತು. ಆರಂಭದಲ್ಲಿ ಸಿಕ್ಕ ಆತ್ಮತೃಪ್ತಿಯೇ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಗೋವು ಹಾಗೂ ನಾಯಿಗಳನ್ನು ಸಾಕಲು ಪ್ರೇರೇಪಿಸಿತು. ಈಗ ಪುನರ್ವಸತಿ ಕೇಂದ್ರದಲ್ಲಿ ಎತ್ತು, ಹಸು, ಕರು ಸೇರಿದಂತೆ 150-2೦೦ ದನಗಳು, 2೦೦ಕ್ಕೂ ಹೆಚ್ಚು ನಾಯಿಗಳು, 35-50 ಬೆಕ್ಕುಗಳು ಆಶ್ರಯ ಪಡೆದಿವೆ. ಅವುಗಳಲ್ಲಿ ಅಪಘಾತಕ್ಕೀಡಾಗಿ ಕಾಲು ಕಳೆದುಕೊಂಡು ಮೂರು ಕಾಲುಗಳಿಂದಲೇ ಓಡಾಡುವ ದನ, ನಾಯಿ ಹಾಗೂ ರೋಗಕ್ಕೆ ತುತ್ತಾದವುಗಳು.. ಕಲ್ಲು ಮನಸ್ಸನ್ನೂ ಕರಗಿಸಬಲ್ಲವು. ಗೋವುಗಳಿಗೆ ಹಸಿರು ಹುಲ್ಲು, ಬೈಹುಲ್ಲು, ಹಿಂಡಿಯ ಮಿಶ್ರಣ ಆಹಾರವಾದರೆ ನಾಯಿ ಬೆಕ್ಕುಗಳಿಗೆ ಮೊಸರನ್ನ. ನಿರ್ವಹಣೆಗೆ ದಿನವೊಂದಕ್ಕೆ ಸುಮಾರು 17೦೦೦ ಖರ್ಚುವೆಚ್ಚ . ಸರಿದೂಗಿಸುವುದೇ ಸವಾಲಾಗಿದೆ.

ಮಮತೆಯ ಮಡಿಲು
ಒಂದೇ ಮನೆಯ ನಾಯಿ ಬೆಕ್ಕುಗಳಾದರೂ ಒಂದಾಗಿ ಇರುವುದು ಕಡಿಮೆ. ಬಹುತೇಕರಲ್ಲಿ ಬೆಕ್ಕಿಗೆ ಒಳಮನೆ , ನಾಯಿಗೆ ಹೊರಮನೆ. ನಮ್ಮನೆಯ ಸದಸ್ಯೆನೆಂದು ಎರಡೂ ತಂಟೆಗೆ ಹೋಗದೆ ಅವುಗಳ ಪಾಡಿಗೆ ಅವು ಇರುವುದೇ ಹೆಚ್ಚು. ಆದರೆ ಇಲ್ಲಿರುವ ಬೆಕ್ಕು ಮತ್ತು ನಾಯಿಯೊಂದರ ಸಂಬಂಧ ವಿಶಿಷ್ಠವಾದುದು. ಹೆಣ್ಣು ನಾಯಿ ತನ್ನ ಮೊಲೆ ಹಾಲನ್ನು ಬೆಕ್ಕಿಗೆ ಉಣಿಸುತ್ತದೆ, ಹಾಗಂತ ಬೆಕ್ಕು ಚಿಕ್ಕ ಮರಿಯೇನೂ ಅಲ್ಲ. ದೊಡ್ಡ ಬೆಕ್ಕು ಹಾಲುಂಡು ಅದರ ಮಡಿಲಿನಲ್ಲಿಯೇ ಹಾಯಾಗಿ ಮಲಗಿರುತ್ತದೆ. ಅಲ್ಲಿರುವುದು ಮಮತೆಯ ಮಡಿಲು. ಸಾಮರಸ್ಯದ ಬದುಕಿಗೆ ಮತ್ತು ಕರುಣೆಗೆ ಗಡಿಗಳಿಲ್ಲ.
ಶಿರ್ಲಾಲಿನಲ್ಲಿ ಆಧುನಿಕ ಸೌಲಭ್ಯದ ಪುನರ್ವಸತಿ ಕೇಂದ್ರ
ಗೋವುಗಳ ಸಂಖ್ಯೆ ಹೆಚ್ಚುತ್ತಿದೆ. ಈಗ ಅಲ್ಲಲ್ಲಿ ಶೆಡ್ಡುಗಳನ್ನು ನಿರ್ಮಿಸಿ ಸಾಕಲಾಗುತ್ತದೆ. ಒಂದೇ ಕಡೆ ಸಾಕಲಾಗುತ್ತಿಲ್ಲ. ಪ್ರಸ್ತುತ ಜಾಗದ ಅಭಾವವಿರುವುದನ್ನು ಮನಗಂಡ ವಿರಂಜಯ ಅವರು ಶಿರ್ಲಾಲು ಗ್ರಾಮದ ಆಲ್ದಬೈಲು ಎಂಬಲ್ಲಿ ಜಾಗ ಖರೀದಿಸಿ ಸುಸಜ್ಜಿತವಾದ ಪುನರ್ವಸತಿ ಕೇಂದ್ರ ನಿರ್ಮಿಸಿದ್ದಾರೆ. ಮೂಕಪ್ರಾಣಿಗಳಿಗೆ ಇನ್ನಷ್ಟು ಆರಾಮದಾಯಕ ಹಾಗೂ ಪ್ರಕೃತಿ ರಮಣೀಯ ಪರಿಸರ ಸಿಗಲಿದೆ. ವಿಶಾಲವಾದ ಜಾಗದಲ್ಲಿ ದನಗಳು ಓಡಾಡುತ್ತಾ ಹಸಿರು ಹುಲ್ಲು ಮೇಯಬಹುದು. ನಾಯಿ, ಬೆಕ್ಕು ಮುಕ್ತವಾಗಿ ಅಡ್ಡಾಡಬಹುದು
ಎಕ್ಸರೇ, ಸ್ಕಾö್ಯನಿಂಗ್‌ಮೊದಲಾದುವು ಒಳಗೊಂಡ ಆಧುನಿಕ ಚಿಕಿತ್ಸಾ ಸೌಲಭ್ಯವುಳ್ಳ ಪಶು ಆಸ್ಪತ್ರೆ, ಗೋಸಂರಕ್ಷಣಾ ಕಟ್ಟಡ, ಅಲ್ಲಿ ಬರುವ ಸಂದರ್ಶಕರಿಗೆ ಊಟದ ವ್ಯವಸ್ಥೆಗೆ ಗೋಪ್ರಸಾದ ಕಟ್ಟಡ, ಕೃಷ್ಣ, ದತ್ತಾತ್ರೇಯ, ಗಣಪತಿ ಮತ್ತು ಮಹಾವೀರ ಸ್ವಾಮಿ ಸನ್ನಿಧಿಯ ಭಕ್ತಿ ಮಂದಿರ, ಅಪಘಾತಕ್ಕೀಡಾದ ನಾಯಿ ಬೆಕ್ಕುಗಳ ಪುನರ್ವಸತಿ ಕೇಂದ್ರ ಅಲ್ಲಿವೆ. ಮುಂದೆ ಇನ್ನಷ್ಟು ಯೋಜನೆ ವಿರಂಜಯರ ಚಿಂತನೆಯಲ್ಲಿದೆ. ಅವರು ಕೈಗೊಂಡಿರುವ ಸೇವೆಯನ್ನು ನೋಡಿದ ಕೆಲಮಂದಿ ಪರವೂರ ದಾನಿಗಳು ನೆರವು ನೀಡಿ ಪ್ರೋತ್ಸಾಹಿಸಿದ್ದಾರೆ. ಸರಕಾರ, ಪ್ರಾಣಿ ದಯಾಪರರು ಸಹಾಯ ಮಾಡಿದರೆ ಇನ್ನಷ್ಟು ಸೌಲಭ್ಯ ಕಲ್ಪಿಸಲು ಸಹಕಾರವಾಗುತ್ತದೆ. ಈ ನಿರಾಶ್ರಿತ ಪಶುಗಳ ಪುನರ್ವಸತಿ ಕೇಂದ್ರವು ಆಗಸ್ಟ್ 16 ರಂದು ಲೋಕಾರ್ಪಣೆಯಾಗಲಿದೆ. ವಿರಂಜಯ ಅವರ ದಯೆ ಕರುಣೆಯ ನೆಲೆ ‘ಅಹಿಂಸಾ’ ತಪಸ್ಸು ಹೀಗೆಯೇ ಮುಂದುವರಿಯಲಿ. ಮತ್ತು ಇತರರಿಗೂ ಪ್ರೇರಣಾದಾಯಕವಾಗಲಿ
ಅಹಿಂಸಾ ಅನಿಮಲ್ ಕೇರ್ ಟ್ರಸ್ಟ್ ಆಶ್ರಯದಲ್ಲಿ ಪ್ರತೀ ತಿಂಗಳು ಸುಮಾರು 40 ನಾಯಿಗಳಿಗೆ ಉಚಿತವಾಗಿ ಸಂತಾನಹರಣ ಚಿಕಿತ್ಸೆ ನಡೆಯುತ್ತದೆ. ಸೇವಾನೆಲೆಯಲ್ಲಿ ಪಶುವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ವಿರಂಜಯ ಅವರು ಒಬ್ಬ ಕ್ರೀಡಾಪಟು. ಹಿಂದೆ ತನಗಾದ ಅಪಘಾತದ ಸಮಯದಲ್ಲಿ, ಮನೆಯಲ್ಲಿದ್ದಾಗ ಸಮಯ ಕಳೆಯುವುದಕ್ಕಾಗಿ ಅವರು ಆರಂಭಿಸಿದ ಸೆಟ್ಲ್ ಬ್ಯಾಡ್ಮಿಂಟನ್’ ಕ್ರೀಡೆ, ಇಂದು ಅವರನ್ನು ರಾಜ್ಯ ಮಟ್ಟದ ತರಬೇತುದಾರನನ್ನಾಗಿ ಮಾಡಿದೆ.
ಮನೆಯ ಬಳಿಯೇ ಒಳಾಂಗಣ ಕ್ರೀಡಾಂಗಣ ನಿರ್ಮಿಸಿ ಮಕ್ಕಳಿಗೆ ಯುವಕರಿಗೆ ತರಬೇತಿ ನೀಡುತ್ತಿರುವ ಇವರು ಹಲವು ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಮೊ.9611944763






