ಉಡುಪಿ: ಕಡಿಮೆ ಇಳುವರಿ ನೀಡುತ್ತಿರುವ ಹಾಗೂ ಅನುತ್ಪಾದಕ ತೆಂಗಿನ ತೋಟಗಳ ಪುನಶ್ಚೇತನಕ್ಕೆ ತೋಟಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಸಹಾಯಧನ ನೀಡಲಾಗುತ್ತಿದ್ದು, ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಯೋಜನೆಯಡಿ ಸತ್ತುಹೋದ ಹಾಗೂ ಅನುತ್ಪಾದಕ ತೆಂಗಿನ ಮರಗಳನ್ನು ತೆರವುಗೊಳಿಸಲು ಪ್ರತಿ ಮರಕ್ಕೆ ₹1,000 ಸಹಾಯಧನ ನೀಡಲಾಗುತ್ತದೆ. ಪ್ರತಿ ಎಕರೆಗೆ ಗರಿಷ್ಠ 12 ಮರಗಳನ್ನು ತೆರವುಗೊಳಿಸಲು ಅವಕಾಶವಿದೆ. ಹೊಸ ತೆಂಗಿನ ಗಿಡಗಳನ್ನು ನಾಟಿ ಮಾಡಲು ಪ್ರತಿ ಗಿಡಕ್ಕೆ ₹45 ಸಹಾಯಧನ ದೊರೆಯಲಿದೆ. ಉಳಿದ ಮರಗಳಿಗೆ ಗೊಬ್ಬರ ಹಾಗೂ ಪೋಷಕಾಂಶಗಳನ್ನು ನೀಡಿ ನಿರ್ವಹಣೆ ಮಾಡಲು ಪ್ರತಿ ಎಕರೆಗೆ ₹3,500 ಸಹಾಯಧನ ನೀಡಲಾಗುತ್ತದೆ.
ಕನಿಷ್ಠ 10 ವರ್ಷಕ್ಕಿಂತ ಹಳೆಯದಾದ, ಅರ್ಧ ಎಕರೆಗಿಂತ ಹೆಚ್ಚಿನ ವಿಸ್ತೀರ್ಣದಲ್ಲಿ ತೆಂಗಿನ ಮರಗಳನ್ನು ಹೊಂದಿರುವ ತೋಟಗಳು ಈ ಯೋಜನೆಗೆ ಅರ್ಹವಾಗಿವೆ. ಈ ಹಿಂದೆ ತೆಂಗು ಅಭಿವೃದ್ಧಿ ಮಂಡಳಿಯಿಂದ ಪ್ರತ್ಯೇಕ ತೆಂಗು ಅಭಿವೃದ್ಧಿ ಕಾರ್ಯಕ್ರಮದಡಿ ಸಹಾಯಧನ ಪಡೆದಿರದ ತೋಟಗಳಿಗೆ ಮಾತ್ರ ಯೋಜನೆಯ ಸೌಲಭ್ಯ ಲಭ್ಯವಿರುತ್ತದೆ.
ಆಸಕ್ತ ರೈತರು ನವೆಂಬರ್ 21ರೊಳಗೆ ಉಡುಪಿ ತೋಟಗಾರಿಕೆ ಇಲಾಖೆಯ ಕಚೇರಿಗೆ ಅರ್ಜಿ ಸಲ್ಲಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.















