ಬರಹ-ಗಣಪತಿ ಹಾಸ್ಪುರ
ಸಂಕದಗುಂಡಿಯಲ್ಲಿ ಒಬ್ಬ ಯುವಕ ಜೇನು ಕೃಷಿಯಲ್ಲಿ ತೊಡಗಿಕೊಂಡಿದ್ದಾರಂತೆ; ಅದರಿಂದ ಉತ್ತಮ ಆದಾಯವನ್ನು ಪಡೆಯುತ್ತಿದ್ದಾರೆ, ನೀವೊಮ್ಮೆ ಹೋಗಿ ಬನ್ನಿ… ಅಂತ ಮಿತ್ರರೊಬ್ಬರು ಹುರುದುಂಬಿಸಿದಾಗ. ಅವರನ್ನು ಖುದ್ದಾಗಿ ಭೇಟ್ಟಿಯಾಗಲು ಆ ಕ್ಷಣವೇ ಸಂಕಲ್ಪ ಮಾಡಿದ್ದೆ.ಇವತ್ತಿನ ಕಾಲಘಟ್ಟದಲ್ಲಿ ಯುವಕರು ತೋಟ- ಗದ್ದೆಯ ಕೃಷಿಯಿಂದಲೇ ವಿಮುಖರಾವರೇ ಹೆಚ್ಚು. ಸರ್ಕಾರಿಯೋ, ಖಾಸಗಿಯೋ ನೌಕರಿಯತ್ತ ಮುಖಮಾಡಿ; ನಗರದಲ್ಲಿಯೇ ವಾಸ್ತವ್ಯ ಉಳಿಯುವವರ ಸಂಖ್ಯೆಯೇ ಹೆಚ್ಚಾದ ಈ ಹೈಟೆಕ್ ದಿನದಲ್ಲಿ ಪದವಿ ಓದಿರುವ ಯುವಕನೊಬ್ಬ ಹಳ್ಳಿಯಲ್ಲೆ ಉಳಿದುಕೊಂಡು, ಜೇನು ಕೃಷಿಯನ್ನೇ ಜೀವನದ ಉಸಿರಾಗಿಸಿಕೊಂಡಿರುವುದು ನಿಜಕ್ಕೂ ತೀರಾ ಅಪರೂಪದ ಸಂಗತಿ. ಅಂಥಹ ಯುವಕರಲ್ಲಿ ಸಂಕದಗುಂಡಿಯ ಗಿರೀಶ್ ಮರಾಠಿ ಬಹಳ ವಿಶಿಷ್ಠವಾಗಿ ಕಾಣುತ್ತಾರೆ.
ಯಲ್ಲಾಪುರ ತಾಲೂಕಿನ ಉಮ್ಮಚ್ಗಿ ಸಮೀಪದ ಸಂಕದಗುಂಡಿಯ ನಿವಾಸಿ, ಕೂಲಿ ಕಾರ್ಮಿಕರಾದ ಮಂಜುನಾಥ ಮರಾಠಿಯವರ ಮಗನಾದ ಗಿರೀಶ ಬಿ.ಕಾಮ್ ಪದವಿ ಓದಿದವರು.ತೀರಾ ಬಡ ಕುಟುಂಬದಲ್ಲಿ ಬೆಳೆದ ಗಿರೀಶ ಅವರಿಗೆ ಯಾವುದಾದರೂ ಉದ್ಯೋಗ ಮಾಡುವುದು ಅನಿವಾರ್ಯವೇ ಆಗಿತ್ತು.ಪದವಿ ಓದಿದ ಬಳಿಕ ಉದ್ಯೋಗ ಮಾಡಲು ಹುಡುಕಾಟ ಏನೋ ಮಾಡಿದ್ದರು. ಆದ್ರೆ,ಅದ್ಯಾವ ಕೆಲಸವೂ ಇವರ ಮನಸ್ಸಿಗೆ ಹಿಡಿಸಲೇಯಿಲ್ಲ.ಈ ಯುವಕ ಹೈಸ್ಕೂಲ್ ವಿದ್ಯಾರ್ಥಿ ಆದಾಗಿನಿಂದಲೂ ಜೇನು ಸಾಕಾಣಿಕೆಯನ್ನು ಪುಟ್ಟ ಹವ್ಯಾಸವಾಗಿ ರೂಢಿಸಿಕೊಂಡಿದ್ದರು.ಆ ಹವ್ಯಾಸವೇ ಮುಂದೇ ವೃತ್ತಿಯನ್ನಾಗಿ ಮಾಡಿಕೊಳ್ಳುತ್ತೇನೆ ಎಂಬ ವಿಚಾರವೇನು ಆಗ ಹೊಳೆದಿರಲಿಲ್ಲ. ಹೊರಗಡೆ ಹೋಗಿ ಬೇರೆಯವರ ಕೈಕೆಳಗೆ ದುಡಿಯವುದಕ್ಕಿಂತ, ನಮ್ಮನೆಯಲ್ಲಿಯೇ ಜೇನು ಸಾಕಾಣಿಕೆಯನ್ನು ಮಾಡಿಕೊಂಡರೆ ಅದರಿಂದ ಸಿಗುವ ಆದಾಯದಿಂದ ಜೀವನ ಮಾಡಬಹುದು. ಇಡೀ ಕುಟುಂಬವನ್ನು ನೆಮ್ಮದಿಯಿಂದ ನಡೆಸಬಹುದು ಎಂಬ ಆಲೋಚನೆ ಇವರ ಮನದೊಳಗೆ ಜಾಗೃತವಾಗಿತ್ತು. ಗಿರೀಶ್ ಬೇರೆಯವರ ಕೈಕೆಳಗೆ ದುಡಿಯಲು ಇಚ್ಛಿಸದೇ ಮನೆಯಲ್ಲಿಯೇ ಉಳಿದುಕೊಂಡು ಸ್ವ ಇಚ್ಛೆ ಬಹಳ ಆಸಕ್ತಿ, ಛಲದಿಂದ ” ಜೇನು ಕೃಷಿ” ಯನ್ನು ಶುರು ಮಾಡಿದರು.
ಹಾಗೇ ನೋಡಿದರೆ ಸಂಕದಗುಂಡಿಯ ಏಳೆ ವಯಸ್ಸಿನ ತರುಣ ಗಿರೀಶ 2015 ರಿಂದಲೇ ಜೇನು ಕೃಷಿಗೆ ಧುಮುಕಿದವರು.ಆ ದಿನ ಕಾಡಿನಲ್ಲಿ ಅಲೆಯುವಾಗ ಒಂದು ಕೆಂಪು ತಳಿಯ ಜೇನು ಆಕಸ್ಮಿತವಾಗಿ ಇವರಿಗೆ ಕಂಡಿತ್ತು. ನಾಜೂಕಿನಿಂದ ಅದನ್ನು ಹಿಡಿದುಕೊಂಡು ಬಂದು ಪೆಟ್ಟಿಗೆಯಲ್ಲಿಟ್ಟು ಸಾಕಿದರು. ಅದುವರೆಗೂ ಜೇನಿನ ಬಗ್ಗೆ ಗಂಧಗಾಳಿಯೂ ಇವರಿಗೆ ತಿಳಿದಿರಲಿಲ್ಲ.ಊರಿನ ಹಿರಿಯರಿಂದ ಅಲ್ಪಸ್ವಲ್ಪ ಜೇನಿನ ಬಗ್ಗೆ ತಿಳಿದಕೊಂಡ ಇವರಿಗೆ ಸಹಜವಾಗಿ ಅದ್ರ ಬಗ್ಗೆ ಕುತೂಹಲ ಉಂಟಾಗಿತ್ತು.ಆವೊಂದು ಕುಟುಂಬವನ್ನು ಬದುಕಿಸಿದರೇ ಮನೆಗೂ ತುಪ್ಪ ಸಿಗುತ್ತೆ; ಜೇನಿನ ಕುಟುಂಬಕ್ಕೂ ಆಶ್ರಯ ನೀಡಿದಂತೆ ಆಗುತ್ತೆ ಎಂದುಕೊಂಡು ಆ ಜೇನಿನ ಕುಟುಂಬಕ್ಕೆ ಆಶ್ರಯ ನೀಡಿದರು. ಕೇವಲ ಒಂದು ಪೆಟ್ಟಿಗೆಯಲ್ಲಿ ಜೇನು ಸಾಕಾಣಿಕೆಯಲ್ಲಿ ತೊಡಗಿಕೊಂಡ ಗಿರೀಶ್ ಮರಾಠಿಗೆ ಅದ್ರ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳಲು ನಾಲ್ಕಾರು ವರುಷಗಳೆ ಉರುಳಿದವು. ಹಾಗಂತ ಇವರು ಯಾವುದೋ ತರಬೇತಿಗೆ ಎಲ್ಲ ಹೋದವರೇ ಅಲ್ಲ. ಅಕ್ಕಪಕ್ಕದ ಹಿರಿಯರಿಂದ, ಜೇನು ಸಾಕುವವರಿಂದ, ಸಾಮಾಜಿಕ ಜಾಲವಾದ ಯುಟೂಬಿನಿಂದ ಸಾಕಷ್ಟು ಮಾಹಿತಿಯನ್ನು ಸಂಗ್ರಹ ಮಾಡಿಕೊಂಡಿದ್ದಾರೆ.ಆ ಕೃಷಿಯ ಬಗ್ಗೆ ಸಾಕಷ್ಟು ಮಾಹಿತಿಯ ಆಧಾರದ ಮೇಲೆಯೇ ಈಗ, ದೈರ್ಯದಿಂದ ಜೇನು ಸಾಕಾಣಿಕೆಯ ಕೃಷಿಯಲ್ಲೀಗ ಸಕ್ರೀಯವಾಗಿದ್ದಾರೆ.

ಇವರು ತನಗೆ ಅನುಭವ ಹೆಚ್ಚಾದಂತೆ ಪೆಟ್ಟಿಗೆ ಸಂಖ್ಯೆ ಹೆಚ್ಚಿಸಲು ಶುರು ಮಾಡಿದರು. ಆರಂಭದಲ್ಲಿ ಈ ತರುಣ ಹೆಚ್ಚು ಪೆಟ್ಟಿಗೆ ಮಾಡಿ, ಜೇನು ಕುಟುಂಬವನ್ನು ವೃದ್ದಿ ಮಾಡಲು ದಿಢೀರ್ ನಿರ್ಧಾರ ಮಾಡಲೇ ಇಲ್ಲ. ನಾಲ್ಕೈದು ಪೆಟ್ಟಿಗೆ ಇಟ್ಟುಕೊಂಡು, ಸಿಗುವಷ್ಟು ತುಪ್ಪ ಪಡೆದುಕೊಂಡರು. ಬಂದಷ್ಟು ತುಪ್ಪದ ಜೊತೆ ಕುಟುಂಬವನ್ನು ಮಾರಾಟ ಮಾಡಿ ಒಂದಿಷ್ಟು ಆದಾಯ ಪಡೆದುಕೊಂಡರು. ಹೀಗೆ ಹಂತ ಹಂತವಾಗಿ ಆ ಕಾರ್ಯದ ಅನುಭವದ ಜೊತೆಗೆ, ಪೆಟ್ಟಿಗೆ ಸಂಖ್ಯೆಯನ್ನು ಹೆಚ್ಚಿಸಿಕೊಂಡರು. ಈಗ ಗಿರೀಶ್ ಮರಾಠೆಯವರಲ್ಲಿ ಅಂದಾಜು 350 ಕ್ಕು ಹೆಚ್ಚು ಜೇನು ಕುಟುಂಬಕ್ಕೆ ಆಶ್ರಯವನ್ನು ಕಲ್ಪಿಸಿದ್ದಾರೆ.ಈ ಜೇನು ಕೃಷಿಯೇ ಇವರ ಮೂಲ ಕಸುಬಾಗಿದ್ದು,ಕೂಲಿ ಮಾಡುತ್ತಿದ್ದ ತಂದೆಯನ್ನು ಸಹಾ ಇದೇ ಕೆಲಸದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿರುವ ಗಿರೀಶ್ ಮರಾಠಿಯವರ ಸಾಹಸ -ಸಾಧನೆಯನ್ನು ಮೆಚ್ಚಲೇಬೇಕು.

ಜೇನು ಕೃಷಿಗೆ ಸ್ವಂತಃ ಭೂಮಿಯೇ ಬೇಕಿಲ್ಲ!
ಸಾಮಾನ್ಯವಾಗಿ ಕೃಷಿ ಎಂದಾಕ್ಷಣ ಸ್ವತಃ ಭೂಮಿಯೇ ಇರಬೇಕು ಎಂದುಕೊಳ್ಳುವುದು ಸಹಜ. ಆದ್ರೆ, ಇಂದಿನ ಸುಧಾರಣೆಯ ಕಾಲದಲ್ಲಿ ಲೀಜ್ ಗೂ ಭೂಮಿಯನ್ನು ಪಡೆದುಕೊಂಡು ಬೇರೆ ಬೇರೆ ಕೃಷಿಯನ್ನು ಮಾಡಿ ಸಾಕಷ್ಟು ಆದಾಯ ಗಳಿಸುವರು ಇದ್ದಾರೆ. ಕೃಷಿ ಭೂಮಿಯಲ್ಲಿ ಸ್ವ ಉದ್ಯಮವನ್ನು ಸಹಾ ಮಾಡುತ್ತಿದ್ದಾರೆ. ವಾಸ್ತವಸಂಗತಿ ಹೀಗಿದ್ದರೂ ಸಂಕದಗುಂಡಿಯ ಯುವಕ ಗಿರೀಶ್ ಮರಾಠೆಯವರ ಪ್ರಕಾರ ಜೇನು ಕೃಷಿ ಮಾಡಲು ಸ್ವಂತ ಭೂಮಿಯೇ ಬೇಕಾಗಿಲ್ಲ. ಹಾಗೂ ಒಪ್ಪಂದ ಭೂಮಿಯನ್ನು ಪಡೆದುಕೊಂಡು ಜೇನು ಕೃಷಿ ಮಾಡುವುದು ಸಹ ಕಷ್ಟವಾಗಬಹುದು ಎನ್ನುತ್ತಾರೆ.
ನಮ್ಮ ಮಲೆನಾಡಿನಲ್ಲಿ ತೋಟಪಟ್ಟಿ ಹೊಂದಿದ ಕೃಷಿಕರಲ್ಲಿ ಆತ್ಮೀಯತೆಯಿಂದ ಹೊಂದಾಣಿಕೆ ಮಾಡಿಕೊಂಡರೇ ಅವರ ಕೃಷಿ ಭೂಮಿಯ ಸುತ್ತಮುತ್ತ ಜೇನು ಪೆಟ್ಟಿಯನ್ನು ಇಟ್ಟು ಸರಾಗವಾಗಿ ಜೇನು ಕೃಷಿಯನ್ನು ಮಾಡಲು ಸಾಧ್ಯವಿದೆ.ಇದರಿಂದ ಅವರ ಅಡಿಕೆ , ತೆಂಗಿನ ಬೆಳೆಗಳಿಗೂ ಅನುಕೂಲವಾಗುತ್ತದೆ. ಸಂಕದಗುಂಡಿಯ ಗಿರೀಶ ಅವರು ತಮ್ಮ ಮನೆಯ ಸುತ್ತಮುತ್ತ ಸುಮಾರು ಇಪ್ಪತೈದು ಬಾಕ್ಸಗಳನ್ನು ಮಾತ್ರ ಇರಿಸಿದ್ದಾರೆ. ಇನ್ನುಳಿದ ಪೆಟ್ಟಿಗೆ ಯನ್ನು ಕಾಗಾರಕೊಡ್ಲು, ಶಿಗೇಮನೆ, ಗಿಡಗನಮನೆ, ಗಣೇಶ್ ಪಾಲ್, ಭರತನಹಳ್ಳಿ, ಸೂರಬೈಲ್, ಮಂಚಿಕೇರಿ, ಹಲಸಿನಕೊಪ್ಪ ಹೀಗೆ ಹತ್ತಾರು ಊರಿನಲ್ಲಿ ಬೇರೆ ಬೇರೆ ಕೃಷಿಕರ ಜಾಗದಲ್ಲಿ ವಿಶ್ವಾಸದಿಂದ ಇವರು ಜೇನು ಪೆಟ್ಟಿಗೆಯನ್ನು ಇರಿಸಿದ್ದಾರೆ. ಆಗಾಗ ಹೋಗಿ ಜೇನು ಕುಟುಂಬದ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಬರುತ್ತಾರೆ. ಆವೆಲ್ಲ ಊರಿನಲ್ಲಿ ಇರುವ ಜೇನು ಪೆಟ್ಟಿಗೆಯಿಂದ ಒಂದೇ ಪ್ರಮಾಣದ ತುಪ್ಪವೂ ಸಿಗುವುದಿಲ್ಲ; ತುಪ್ಪದ ಕ್ವಾಲಿಟಿಯೂ ಭಿನ್ನ ಭಿನ್ನವಾಗಿತ್ತದೆ. ಅದ್ಕೆ ಆಯಾ ಪ್ರದೇಶದಲ್ಲಿ ಆಗಬಹುದಾದ ಹೂಗಳೇ ಕಾರಣ ಎಂದು ಗಿರೀಶ್ ಹೇಳುತ್ತಾರೆ.
ನಿರ್ವಹಣೆಯೇ ಅತೀ ಮುಖ್ಯ!
ತನ್ನಲ್ಲಿ ಹಣವಿದೆ ಎಂದುಕೊಂಡು ಹತ್ತಾರು ಜೇನು ಕುಟುಂಬವನ್ನು ಸಾಕಲು ಒಮ್ಮೇಲೆಯೇ ಇಚ್ಚಿಸುವುದು ಯೋಗ್ಯವಲ್ಲ.ಆ ಕೃಷಿಯನ್ನು ಮಾಡಬೇಕು ಎಂಬ ಅಭಿಲಾಷೆಯಿದ್ದರೇ ಒಂದೆರಡು ಪೆಟ್ಟಿಗೆಯಿಂದಲೇ ಶುರು ಮಾಡಬೇಕು. ಜೇನು ಪೆಟ್ಟಿಗೆಯನ್ನು ಕಾಯ್ದುಕೊಳ್ಳುವುದೇ ದೊಡ್ಡ ಸವಾಲನ್ನು ಜೇನುಕೃಷಿಕ ಏದುರಿಸಲೇಬೇಕು. ಬೇರೆ ಬೇರೆ ಊರಿನಲ್ಲಿ ಪೆಟ್ಟಿಗೆ ಇಟ್ಟಾಗ ಹಲವಾರು ಬಗೆಯ ಸಮಸ್ಯೆ ಉದ್ಬವಿಸುತ್ತದೆ. ಕೆಂಪು ಇರುವೆ, ಕಡಿಜೇನು ( ಕಣಜ),..ಇಂಥಹ ಕೀಟಗಳು ದಾಳಿ ಮಾಡುವ ಸಂಭವವೂ ಇರುತ್ತದೆ. ಅದು ಬರದಂತೆ ಏಚ್ಚರಿಕೆ ವಹಿಸಬೇಕು.ಪೆಟ್ಟಿಗೆಗೆ ಆಧಾರವಾಗಿ ಇರಿಸಿದ ಸ್ಟ್ಯಾಂಡ್ ಮೆಂಟೆನ್ ಮಾಡಬೇಕು, ಪೆಟ್ಟಿಗೆ ಯೊಳಗೆ ಜೇನು ಹುಳ ಬಿಡುವ ಮೊದಲು ಕ್ಲೀನ್ ಮಾಡಬೇಕು, ಅಡಿಮಣೆ ವ್ಯವಸ್ಥಿತವಾಗಿ ಇಡಬೇಕು., ಕುಟುಂಬವನ್ನು ಬೇರ್ಪಡಿಸುವಾಗ ಸೂಕ್ಷ್ಮವಾಗಿ ನಿರ್ವಹಣೆ ಮಾಡಬೇಕು, ಅಂತಸ್ತುಗಳ ನ್ನು ಕೊಡುವಾಗಲು ಏಚ್ಚರ ವಹಿಸಬೇಕು.,ಜೇನಿನ ಬರಗಾಲದಲ್ಲಿ ಆಹಾರವನ್ನು ನೀಡಬೇಕು….ಹೀಗೆ ಸಕಾಲದಲ್ಲಿ, ವ್ಯವಸ್ಥಿತವಾಗಿ ಜೇನು ಪೆಟ್ಟಿಗೆಯನ್ನು ನಿರ್ವಹಣೆ ಮಾಡಿದರೇ ಮಾತ್ರವೇ ಒಂದಿಷ್ಟು ಜೇನುತುಪ್ಪವನ್ನು ಪಡೆಯಬಹುದು.ಇಳುವರಿಯನ್ನು ಸಹಾ ಹೆಚ್ಚಿಸಿಕೊಳ್ಳಬಹುದು.
ಒಳ್ಳೆಯ ವಾತಾವರಣ
ಪ್ರಸ್ತುತ ವರುಷ ಜೇನು ಕೃಷಿಕರಿಗೆ ಸುಗ್ಗಿಕಾಲ ಎಂದರೂ ತಪ್ಪಿಲ್ಲ. ಏಕೆಂದರೇ ಈ ವರುಷ ದ ಬೇಸಿಗೆಯಲ್ಲಿ ವಿಪರೀತ ಸೆಖೆಗೆ ಜೇನು ಹುಳಗಳಿಗೆ ತೊಂದರೆ ಆಗಬಹುದು ಎಂದುಕೊಂಡಿದ್ದೆ. ಆದ್ರೇ ದೇವರ ಧಯೆಯಿಂದ ಹುಳಗಳಿಗೆ ಹವಾಮಾನದಿಂದ ಯಾವ ಸಮಸ್ಯೆಯೂ ಆಗಲಿಲ್ಲ. ಆದರೇ, ಅಡಿಕೆಗೆ ಸಿಂಪಡಿಸುವ ಔಷಧಿಯಿಂದಲೇ ಕೆಲವು ಪೆಟ್ಟಿಗೆಯಲ್ಲಿದ್ದ ಹುಳಗಳೆ ಸತ್ತು ಹೋಗಿದೆ.ಹಾಗೆ ಔಷಧ ಹೊಡೆಯುವವರು ಮೊದಲೇ ಸೂಚನೆ ಕೊಟ್ಟಿದ್ದರೇ ಪೆಟ್ಟಿಗೆಯನ್ನು ಸ್ಥಳಾಂತರ ಮಾಡಿ ಜೇನು ಕುಟುಂಬವನ್ನು ಉಳಿಸಿಕೊಳ್ಳುತ್ತಿದ್ದೆ. ಮುಂಚಿತವಾಗಿ ಹೇಳದ ಕಾರಣ ಕೆಲ ಕುಟುಂಬದ ಜೇನನ್ನು ಕಳೆದುಕೊಂಡ ಬೇಸರವೊಂದು ಬಿಟ್ಟರೇ…ಈ ವರುಷ ಜೇನು ಕೃಷಿಗೆ ಒಳ್ಳೆಯ ಹದ ಸಿಕ್ಕಿದೆ ಎಂದು ಗಿರಿಶ್ ಮರಾಠಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಉತ್ತಮ ಇಳುವರಿ
ಜೇನು ಕೃಷಿಯನ್ನು ಹೇಗೆಗೋ ಮಾಡುತ್ತೇನೆ ಅಂದರೇ ಸಾಧ್ಯವಿಲ್ಲ. ಅದ್ಕು ನಿರ್ದಿಷ್ಟವಾದ ಸಮಯದಲ್ಲಿ ಆಗಬೇಕಾದ ಕೆಲಸವನ್ನು ಬಹಳ ಏಚ್ಚರಿಕೆಯಿಂದ, ಸಕಾಲದಲ್ಲಿ ವ್ಯವಸ್ಥಿತವಾಗಿ ಶ್ರಮ ವಹಿಸಿ ಮಾಡಬೇಕು. ಇಂದು ಮಾಡುವ ಕೆಲಸವನ್ನು ನಾಳೆಯೋ..ನಾಡದು ಮಾಡುತ್ತೇನೆ ಅಂದರೂ ಸಾಧ್ಯವಿಲ್ಲ ಎನ್ನುತ್ತಾರೆ ಗಿರೀಶ್. ಮೂರು ಕಾಲದಲ್ಲಿಯೂ ಗಡಿಯಾರದಂತೆ ಪೆಟ್ಟಿಗೆಯ ಕೆಲಸಗಳು ಆಗ್ಲೇಬೇಕು. ಪೆಟ್ಟಿಗೆಗೆ ಹಂತಸ್ತು ನೀಡುವುದಾಗಲಿ, ಕುಟುಂಬವನ್ನು ಬೇರ್ಪಡಿಸುವ ಕೆಲಸವಾಗಲಿ ನಿರ್ದಿಷ್ಟ ಸಮಯದಲ್ಲಿಯೇ ಆಗಬೇಕು ಎನ್ನುತ್ತಾರೆ ಗಿರೀಶ್.
ಒಂದು ನೂರು ಪಟ್ಟೆಗೆಯನ್ನು ಇರಿಸಿದಾಗ ಎಲ್ಲ ಬಾಕ್ಸ್ ನಲ್ಲಿಯೂ ಒಂದೇ ಬಗೆಯ ತುಪ್ಪ ಸಿಗಲು ಸಾಧ್ಯವಿಲ್ಲ.ಒಂದು ಪೆಟ್ಟಿಗೆಯಲ್ಲಿ ಐದು ಕೆ.ಜಿ ಸಿಕ್ಕಿದರೇ, ಇನ್ನೊಂದು ಬಾಕ್ಸನಲ್ಲಿ ಹದಿನೈದು ಕೆ.ಜಿಯೂ ಸಿಗಬಹುದು. ಈ ವರುಷದ ಸೀಜನ್ನಿನಲ್ಲಿ ನನ್ನಲ್ಲಿರುವ ಒಂದು ಗೂಡಿನಲ್ಲಿ ಮೂವತ್ತು ಕೆ.ಜಿ ತುಪ್ಪವು ಲಭಿಸಿದ್ದು ಉಂಟು. ಈ ಸೀಜನ್ನಿನಲ್ಲಿ ಉತ್ತಮ ವಾತಾವರಣದಿಂದ ಇಳುವರಿಯೂ ಹೆಚ್ಚಾಗಿದೆ. ಪ್ರಸಕ್ತ ಸಾಲಿನಲ್ಲಿ ನಾನು ನಿಷ್ಟೆ, ಶ್ರದ್ಧೆ ಛಲದಿಂದ ನಿರ್ವಹಣೆ ಮಾಡುತ್ತಾ ಬಂದಿರುವ ಈ ಜೇನು ಕೃಷಿಯಲ್ಲಿ ಎರಡುವರೆ ಟನ್ ನಷ್ಟು ತುಪ್ಪ ಲಭಿಸಿದೆ ಎಂದು ಗಿರೀಶ್ ಮರಾಠಿ ಹೆಮ್ಮೆಯಿಂದ ಹೇಳುತ್ತಾರೆ.
ಉತ್ತಮ ಜಾಗ!
ಜೇನು ಕೃಷಿಯನ್ನು ಮಲೆನಾಡಿನಂತೆ ಬಯಲು ಸೀಮೆಯಲ್ಲಿಯೂ ಮಾಡ್ತಾ ಇರುವುದನ್ನು ಗಮನಿಸಿದ್ದೇವೆ. ಆದ್ರೇ, ಈ ಕೃಷಿಗೆ ನಮ್ಮ ಜಿಲ್ಲೆಯೇ ಹಲವಾರು ದೃಷ್ಟಿಯಿಂದ ಉತ್ತಮ ಎಂಬುದು ಸಂಕದಗುಂಡಿಯ ಜೇನು ಕೃಷಿಕ ಗಿರೀಶ್ ಮರಾಠೆಯವರ ಅನುಭವದ ಮಾತು. ನಮ್ಮ ಪ್ರದೇಶದಲ್ಲಿ ಏಕ ಪ್ರಕಾರದ ಗಿಡಮರಗಳಿಲ್ಲ. ಇಲ್ಲಿರುವ ವೈವಿಧ್ಯಮಯ ಪರಿಸರ, ರೈತರು ಬಹುವಿಧದ ಕೃಷಿ ಬೆಳೆಗಳನ್ನು ಮಾಡ್ತಾ ಇರುವುದರಿಂದ ಜೇನು ಕೃಷಿಗಾಗಿಯೇ ಹೇಳಿ ಮಾಡಿದ ಜಿಲ್ಲೆ ನಮ್ಮದು. ಬಹುವಿಧದ ಗಿಡಮರಗಳು ಇರುವುದರಿಂದ ಬೇರೆ ಬೇರೆ ಸಮಯದಲ್ಲಿ ಹೂಗಳು ಅರಳುತ್ತಲೇ ಇರುವುದರಿಂದ ಜೇನು ಹುಳುಗಳಿಗೆ ಅನಕೂಲ.ಅದ್ರಲ್ಲಿಯೂ ತೆಂಗಿನ ಮರಗಳಲ್ಲಿ ನಿರಂತರ ಹೂಗಳು ಇರುವುದರಿಂದ ಜೇನು ಸಾಕಾಣಿಕೆ ಮಾಡುವುದಕ್ಕೆ ಬಹಳ ಪ್ರಸಕ್ತ ಎಂಬುದು ಗಿರೀಶ್ ಅವರ ಅನುಭವದ ಮಾತಾಗಿದೆ.ತುಪ್ಪದ ಕ್ವಾಲಿಟಿಯಲ್ಲಿಯೂ ಚನ್ನಾಗಿ ಬರುತ್ತದೆ ಎಂದು ಅವರು ಹೇಳುತ್ತಾರೆ.
ತ್ರಿಕಾಲದಲ್ಲಿಯೂ ಕೆಲಸ ಇರುತ್ತದೆ
ಯಾರೋ ಜೇನು ಸಾಕಿದರೂ, ಅವರು ಬಹಳ ಹಣ ಮಾಡುತ್ತಾರೆ ಎಂದುಕೊಂಡು ಈ ಕೃಷಿಯನ್ನೇ ಮಾಡುತ್ತೇನೆ ಅಂದರೆ ಈ ಕೃಷಿಯಲ್ಲಿ ಯಶಸ್ಸು ಸಿಗುವುದು ಕಷ್ಟ.ಜೇನು ಕೃಷಿ ಮಾಡಲು ನಿಜವಾಗಿಯೂ ಆಸಕ್ತಿ ಇದ್ದರೆ ಅದ್ರ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ತಿಳಿದುಕೊಳ್ಳುವುದು ಅತೀ ಅವಶ್ಯಕ ಎಂದು ಪ್ರತಿಪಾದಿಸುತ್ತಾರೆ ಸಂಕದಗುಂಡಿಯ ಯುವ ಜೇನು ಕೃಷಿಕ ಗಿರೀಶ್. ಅವರು ತಾವು ತಿಳಿದುಕೊಂಡ ಮಾಹಿತಿಯನ್ನು ಪಟಪಟನೆ ತೆರೆದಿಡುವುದನ್ನು ನೋಡಿದರೆ ಜೇನು ಕೃಷಿಯ ಬಗ್ಗೆ ಈತ ಪಿ.ಎಚ್.ಡಿ. ಮಾಡಿರಬಹುದೇನೋ ಅಂದುಕೊಂಡರೂ ಆಶ್ಚರ್ಯವಿಲ್ಲ. ಆಸಕ್ತರಿಗೆ ಇವರು ಜೇನಿನ ಪಾಠವನ್ನು ಮಾಡುತ್ತಾರೆ.ಹೊರ ಊರುಗಳಿಗೆ ಹೋಗಿ ಜೇನಿನ ಮಾಹಿತಿಯನ್ನು ನೀಡಬಲ್ಲ ಸಾಮರ್ಥ್ಯ ವೂ ಇವರಲ್ಲಿದೆ.ಕಲಿಯುವ ವಿಧ್ಯಾರ್ಥಿಗಳು, ಜೇನು ಕೃಷಿಯ ತರಬೇತಿಗೆ ಭಾಗವಹಿಸಿದ ಶಿಬಿರಾರ್ಥಿಗಳು ಸಹಾ ಇವರಲ್ಲಿಗೆ ಬಂದು ಸಮಗ್ರವಾದ ಮಾಹಿತಿ ಪಡೆದುಕೊಂಡು ಹೋಗುತ್ತಾರೆ.ಸ್ಥಳದಲ್ಲಿ ಪ್ರಾತ್ಯಕ್ಷಿಕೆ ನೀಡುತ್ತಾರೆ.
ಜೇನು ಕೃಷಿ ಮಾಡಲು ಇಚ್ಛೆಯುಳ್ಳವರು ಅದ್ರ ಬಗ್ಗೆ ಕನಿಷ್ಠ ಮಾಹಿತಿಯನ್ನು ಅರಿತುಕೊಂಡೇ ಜೇನು ಕೃಷಿಗೆ ಧುಮುಕಿದರೆ ಆ ಕೃಷಿಯನ್ನು ವ್ಯವಸ್ಥಿತವಾಗಿ ಮಾಡಲು ಸಾಧ್ಯ.ಇದು ಅತೀ ಸುಲಭದಲ್ಲಿ ನಿರ್ವಹಣೆ ಮಾಡುವ ಕೃಷಿಯೇನು ಅಲ್ಲ. ವರುಷವಿಡೀ ಈ ಕೃಷಿಯಲ್ಲಿ ಕೆಲಸವೂ ಇರುತ್ತದೆ. ಅದ್ರ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಅವರು ಮುಕ್ತ ಮನಸ್ಸಿನಿಂದ ತೆರೆದಿಡುತ್ತಾರೆ. ಈ ಕೃಷಿಯಲ್ಲಿಯೂ ಮೂರು ಕಾಲವೂ ಬರುತ್ತದೆ. ಅಭಿವೃದ್ದಿ ಕಾಲ (ಸಷ್ಟೆಂಬರ್, ಅಕ್ಟೋಬರ್, ನವೆಂಬರ್); ಬರಗಾಲ ( ಜೂನ್, ಜುಲೈ,ಅಗಸ್ಟ್); ಹಾಗೂ ಸುಗ್ಗಿಕಾಲ ( ಜನವರಿ, ಫೆಬ್ರುವರಿ,ಮಾರ್ಚ್) ಈ ತ್ರಿಕಾಲವೂ ಬರುತ್ತದೆ. ಆ ದಿನಗಳಲ್ಲಿ ಬೇರೆ ಬೇರೆ ಕೆಲಸವೂ ಇರುತ್ತದೆ. ಜೇನಿನ ಬರಗಾಲದ ಸಮಯದಲ್ಲಿ ಬೆಟ್ಟದಲ್ಲಿ ಹೂವುಗಳು ಅರಳುವಿಕೆ ಇರುವುದಿಲ್ಲ. ಆ ಸಮಯದಲ್ಲಿ ಜೇನು ಹುಳಗಳಿಗೆ ಆಹಾರದ ಕೊರತೆ ಆಗುವುದರಿಂದ ಸಕ್ಕರೆ ಪಾಕ ಮಾಡಿ ಕೊಡಬೇಕು, ಅಭಿವೃದ್ಧಿಯ ಕಾಲದಲ್ಲಿ ಪೆಟ್ಟಿಗೆ ವಿಭಜನೆ ಯಂತ ಮುಖ್ಯ ಕೆಲಸ ಇರುತ್ತದೆ. ಇನ್ನು ಸುಗ್ಗಿ ಕಾಲದಲ್ಲಿ ಪೆಟ್ಟಿಗೆ ಯಿಂದ ತುಪ್ಪವನ್ನು ತೆಗಿಯಬೇಕಾಗುತ್ತದೆ….. ಹೀಗೆ ಈ ಜೇನು ಕೃಷಿಯಲ್ಲಿ ತ್ರಿ ಕಾಲದಲ್ಲಿಯೂ ಸಹಾ ಒಂದೆಲ್ಲ ಒಂದು ಕೆಲಸಗಳು ಇದ್ದೆ ಇರುತ್ತವೆ ಎಂದು ಗಿರೀಶ್ ಮರಾಠೆ ಜೇನು ಕೃಷಿಯ ಅನುಭವದ ಬುತ್ತಿಯನ್ನು ತೆರೆದಿಡುತ್ತಾರೆ.
ಮಿಸ್ರಿ ಜೇನುಗೂಡು ಉಂಟು
ಗಿರೀಶ್ ಮರಾಠೆಯವರು ಬೃಹತ್ ಸಂಖ್ಯೆಯ ಪೆಟ್ಟಿಯಲ್ಲಿ ಕೆಂಪು ಜೇನನ್ನು ಸಾಕಿದರೆ, ಪುಟ್ಟ ಪೆಟ್ಟಿಗೆಯಲ್ಲಿ ಮಿಶ್ರಿ ಜೇನನ್ನು ಸಾಕುತ್ತಿದ್ದಾರೆ. ಸದ್ಯ ಮನೆಯ ಮಾಡಿನ ಸುತ್ತಮುತ್ತ ಸುಮಾರು ಐವತ್ತು ಪೆಟ್ಟಿಗೆಯಲ್ಲಿ ಮಿಸ್ರಿ ಜೇನು ಸಾಕಿದ್ದಾರೆ. ಹಾಗಂತ ಇದ್ರಲ್ಲಿ ಸಾಕಷ್ಟು ತುಪ್ಪವೇನು ಸಿಗುವುದಿಲ್ಲ. ಒಂದು ಪೆಟ್ಟಿಗೆಯಲ್ಲಿ ಹೆಚ್ಚು ಅಂದರೆ 250 ಗ್ರಾಂ ನಷ್ಟು ತುಪ್ಪ ಸಿಗುತ್ತದೆ. ಔಷಧಕ್ಕೆ ಹೆಚ್ಚು ಬಳಕೆ ಆಗುವುದರಿಂದ ಇದಕ್ಕೂ ಒಳ್ಳೆಯ ಬೇಡಿಕೆಯೂ ಇದೆ ಎನ್ನುತ್ತಾರೆ ಗಿರೀಶ್.

ಸಂಕದಗುಂಡಿಯ ಗಿರೀಶ್ ಆರಂಭದ ದಿನದಲ್ಲಿ ಕೇವಲ ಹವ್ಯಾಸವಾಗಿ ರೂಢಿಸಿಕೊಂಡ ಈ ಜೇನು ಕೃಷಿಯನ್ನೇ ಈಗ ಮುಖ್ಯ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಇದರಲ್ಲಿ ಹತ್ತಾರು ಬಗೆಯ ಸವಾಲು, ಸಮಸ್ಯೆಗಳಿದ್ದರೂ ಇದು ಲಾಭದಾಯಿಕ ಕೃಷಿ ಎನ್ನುತ್ತಾರೆ.ಇವರು ಜೇನು ಪೆಟ್ಟಿಗೆಯನ್ನು ಸಹ ಸ್ವಂತಃವಾಗಿ ಸಿದ್ದ ಮಾಡಿಕೊಂಡು ಉಪಯೋಗ ಮಾಡುತ್ತಾ ಇರುವುದು ವಿಶೇಷ. ಅವಶ್ಯಕತೆ ಇರುವವರಿಗೆ ಕುಟುಂಬ ಸಹಿತ ಪೆಟ್ಟಿಯನ್ನು ನೀಡಬಲ್ಲರು. ” ಹನಿ” ಹೆಸರಿನಲ್ಲಿ ತಾವೇ ಬ್ರಾಂಡ್ ಮಾಡಿಕೊಂಡಿರುವ ಗಿರೀಶ್ ತಮ್ಮಲ್ಲಿ ಉತ್ಪಾದನೆ ಆದ ತುಪ್ಪದ ಅರ್ಧದಷ್ಟು ( ಸುಮಾರು 12 ಕ್ವಿಂ. ನಷ್ಟು) ತಾವೇ ಮಾರಾಟ ಮಾಡುತ್ತಾರೆ. ಇನ್ನು ಉಳಿದಿದ್ದನ್ನು ಹೊಲ್ ಸೇಲ್ ನವರಿಗೆ, ಬೇರೆ ಬೇರೆ ಸಂಘ – ಸಂಸ್ಥೆಗಳಿಗೆ ನೀಡುತ್ತಾರೆ. ಸಿಗುವಷ್ಟು ಜೇನು ಮೆಣವನ್ನು ಸಹ ಮಾರಾಟ ಮಾಡುತ್ತಾರೆ. ಒಂದು ಸೀಜನ್ನಿನಲ್ಲಿ ಒಂದು ಪೆಟ್ಟಿಗೆಯಲ್ಲಿ ಮೂರು ಭಾರಿ ತುಪ್ಪ ತೆಗೆಯುತ್ತಿದ್ದೇನೆ. ನನ್ನದು ಸುಮಾರು 350 ಕ್ಕು ಪೆಟ್ಟಿಗೆ ಇರುವುದರಿಂದ ಒಂದು ಸೀಜನ್ನಿನಲ್ಲಿ ಏನಿಲ್ಲವೆಂದರೂ ಮೂರು ನಾಲ್ಕು ಲಕ್ಷ ಖರ್ಚು ಬರುತ್ತದೆ. ಸರಿಯಾಗಿ ತುಪ್ಪ ಲಭಿಸಿದರೆ ಒಂದು ಸೀಜನ್ನಿನಲ್ಲಿ ಇಷ್ಟು ಬಾಕ್ಸ್ ನಿಂದ ಏಂಟತ್ತು ಲಕ್ಷ ಆದಾಯವೂ ಸಿಗುತ್ತದೆ. ಯಾವ ದೃಷ್ಟಿಯಿಂದ ನೋಡಿದರೂ ಇದು ನಷ್ಟವಾಗುವ ಕೃಷಿಯಲ್ಲ ಎನ್ನುತ್ತಾರೆ ಗಿರೀಶ್.
ಸರಿಯಾಗಿ ತಿಳಿದುಕೊಂಡು ಮಾಡಿದರೆ ಜೇನು ಕೃಷಿಯಲ್ಲಿ ಸಂತೃಪ್ತಿಯೂ ಇದೆ; ನೆಮ್ಮದಿಯೂ ಇದೆ. ಹೆಚ್ಚು ಬಂಡವಾಳ ಇಲ್ಲದೆ, ಗುಂಟೆ ಜಾಗವೂ ಇಲ್ಲದಿದ್ದರೂ ಪರಿಶ್ರಮ ಪಡುವ ಮನಸ್ಸಿದ್ದರೇ ಈ ಪೈಪೋಟಿಯುಳ್ಳ ಕಾಲದಲ್ಲಿಯೂ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಈ ಜೇನು ಕೃಷಿಯೂ ವರದಾನವೇ ಆಗಿದೆ ಎನ್ನುತ್ತಾರೆ ಗಿರೀಶ್ ಮರಾಠಿ










