-ರಾಧಾಕೃಷ್ಣ ತೊಡಿಕಾನ
ಕೃಷಿಕರಲ್ಲಿ ಬಹಳಷ್ಟು ಮಂದಿ ತಮ್ಮ ತಲೆಮಾರಿಗಷ್ಟೇ ಕೃಷಿ ಸಾಕು. ಮಕ್ಕಳು ಯಾವುದಾದರೂ ಒಳ್ಳೆಯ ಉದ್ಯೋಗಕ್ಕೆ ಸೇರಿಕೊಳ್ಳಲಿ ಎಂದು ಬಯಸುತ್ತಾರೆ. ಮನೆಯವರ ಆಶಯದಂತೆ ಉದ್ಯೋಗಕ್ಕಾಗಿ ನಗರ ಸೇರಿದ ಮೇಲೆ ಮನೆಯವರಿಂದ, ಹಳ್ಳಿಯಿಂದ ದೂರವಾಗುವುದು, ಕೃಷಿಭೂಮಿಯನ್ನು ಮಾರಾಟ ಮಾಡಿ ಪೇಟೆ ಸೇರುವುದು ಸಾಮಾನ್ಯ. ಆದರೆ ಎಲ್ಲರೂ ಹಾಗಲ್ಲ. ನಗರದಲ್ಲಿದ್ದರೂ ಹಳ್ಳಿಯ ನಂಟನ್ನು ಬಿಡದೆ ಕೃಷಿ ಬದುಕಿನ ಬೇರುಗಳನ್ನು ಕತ್ತರಿಸಿಕೊಳ್ಳದೆ ಜೀವಂತವಾಗಿರಿಸಿಕೊಂಡು ಖುಷಿಪಡುವವರು ಇದ್ದಾರೆ. ವೃದ್ಧಾಪ್ಯದಲ್ಲಿರುವ ತನ್ನ ತಂದೆ ತಾಯಿ ಆರೈಕೆ ಮಾಡುತ್ತಾ ಮನೆಯಲ್ಲಿ ಇದ್ದುಕೊಂಡೇ ಉದ್ಯೋಗವನ್ನು ನಿರ್ವಹಿಸುತ್ತಾ ಕೃಷಿಯಲ್ಲಿ ತೊಡಗಿಕೊಂಡು ಯಶಸ್ಸು ಪಡೆದವರಿದ್ದಾರೆ. ಅಂತಹವರ ಸಾಲಿಗೆ ಸೇರಿದವರು ಷಣ್ಮುಖ ಗೌಡ ಕಟ್ಟ. ಅವರು ಮನೆಯಲ್ಲೇ ಉದ್ಯೋಗ ಮಾಡುತ್ತಾ, ಹಿರಿಯರಿಂದ ಬಂದ ಜಮೀನಿನಲ್ಲಿ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡ ಯುವ ಕೃಷಿಕ.
ಷಣ್ಮುಖ ಗೌಡ ಓರ್ವ ಸಾಫ್ಟ್ವೇರ್ ಇಂಜಿನಿಯರ್. ಸಾವಯುವ ಕೃಷಿಯಲ್ಲಿ ಆಸಕ್ತಿಯುಳ್ಳವರು. ಮಕ್ಕಳಲ್ಲಿ ಸಾವಯವ ತರಕಾರಿ ಕೃಷಿಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಳ್ಪ ಗ್ರಾಮದ ಬೀದಿಗುಡ್ಡೆ ಸಮೀಪದ ಕಟ್ಟ ಎಂಬ ಪ್ರದೇಶ ಕೆಲವು ವರ್ಷಗಳ ಹಿಂದೆ ತರಕಾರಿಗೆ ಹೆಸರುವಾಸಿ. ಕಟ್ಟ ಎಂದ ಕೂಡಲೇ ಹಲವಾರು ಕುಟುಂಬಗಳು ಬೆಳೆಯುತ್ತಿದ್ದ ತರಕಾರಿ ಕಣ್ಣೆದುರಿಗೆ ಬಂದು ನಿಲ್ಲುತ್ತದೆ. ಕೃಷಿಕ ಕುಟುಂಬದ ಷಣ್ಮುಖ ಗೌಡ ಅವರು ಹಲವು ಸವಾಲುಗಳನ್ನು ಮೆಟ್ಟಿ ನಿಂತು ಸಾಫ್ಟ್ವೇರ್ ಇಂಜಿನಿಯರ್ ಆಗಿ ನಗರ ಸೇರಿದರೂ ಅವರು ಬಾಲ್ಯದ ನೆನಪುಗಳನ್ನು ಮರೆತ್ತಿಲ್ಲ. ಕೃಷಿಯಲ್ಲಿ ಹೊಸತನ್ನು ಕಾಣುತ್ತಾ ಅದರಲ್ಲೇ ಮಾನಸಿಕ ನೆಮ್ಮದಿ ಸಂತೃಪ್ತಿಯನ್ನು ಕಂಡುಕೊಂಡಿದ್ದಾರೆ.
ಷಣ್ಮುಖ ಗೌಡ ಅವರ ತಂದೆ ಬಾಲಕೃಷ್ಣ ಗೌಡ ಮತ್ತು ತಾಯಿ ವೆಂಕಮ್ಮ ತರಕಾರಿ ಕೃಷಿಕರಾಗಿದ್ದರು. ತರಕಾರಿ ಬೆಳೆಯಲ್ಲಿ ವರ್ಷವೊಂದಕ್ಕೆ 4,೦೦೦ ಕೆಜಿ ಬದನೆ ಬೆಳೆದಿರುವುದು ಅವರ ಹೆಗ್ಗಳಿಕೆ. ವಿವಿಧ ನಮೂನೆಯ ಬದನೆ, ಅಲಸಂಡೆ, ಹಿರೇಕಾಯಿ, ಹರಿವೆ, ಬೆಂಡೆ, ಕುಂಬಳ, ಸಿಹಿಗುಂಬಳ (ಚೀನಿಕಾಯಿ) ಹಲವು ಬಗೆ ತರಕಾರಿಗಳನ್ನು ಬೆಳೆದು ಅದರಿಂದಲೇ ಮನೆಯ ಇತರ ಖರ್ಚು ವೆಚ್ಚಗಳನ್ನು ಸರಿದೂಗಿಸಿಕೊಂಡು ಸಂಸಾರದ ನೊಗ ಎಳೆದವರು.

ಬಾಲ್ಯದಲ್ಲಿ ತರಕಾರಿ ಕೃಷಿಯನ್ನು ನೋಡುತ್ತಾ, ಮಾಡುತ್ತಾ ತರಕಾರಿಯಲ್ಲಿ ಖುಷಿ ಕಾಣುತ್ತಾ ಬೆಳೆದ ಷಣ್ಮುಖರಿಗೆ ಅದೆಲ್ಲವೂ ಈಗ ಅಚ್ಚಳಿಯದ ನೆನಪು. ಚಿಕ್ಕವರಾಗಿದ್ದಾಗ ತಂದೆಯೊಂದಿಗೆ ತರಕಾರಿ ಬೆಳೆಯಲು ಸಹಕರಿಸುತ್ತಿದ್ದುದಲ್ಲದೆ ತಾನೂ ಪ್ರತ್ಯೇಕವಾಗಿ ತರಕಾರಿ ಬೆಳೆದು ಖುಷಿಪಟ್ಟವರು. ತಂದೆ ಬದನೆ ಕೊಯ್ಲು ಮಾಡುತ್ತಾ ಹೋದರೆ ಷಣ್ಮುಖ ಅವರು ಅದನ್ನೆಲ್ಲಾ ಬುಟ್ಟಿಗೆ ತುಂಬಿಸುತ್ತಾ ಹೋಗುತ್ತಿದ್ದುದು ಅವರ ನೆನಪಿನಲ್ಲಿ ಬುಟ್ಟಿಯಲ್ಲಿ ಹಸಿರಾಗಿದೆ. ತಂದೆ ಬೆಳೆದ ತರಕಾರಿ ಲೆಕ್ಕ, ಬಂದ ಹಣ, ಕಡಿಮೆ ಬೆಲೆಗೆ ಮಾರಾಟವಾಗಿ ದುಡಿಮೆಗೆ ಪ್ರತಿಫಲ ಸಿಕ್ಕದೆ ಹೋದುದು, ತಾನು ಬರೆದಿರಿಸಿದ ಪುಸ್ತಕದ ಹಳೆಯ ಹಾಳೆಗಳನ್ನು ಈಗಲೂ ಜೋಪಾನವಾಗಿರಿಸಿಕೊಂಡಿದ್ದಾರೆ. ಬೇಸಗೆಯ ರಜಾದಿನಗಳಲ್ಲಿ ಗೇರುಬೀಜ ಕೊಚ್ಚಿ(ತೋಟ)ಕ್ಕೆ ಗೇರುಬೀಜ ಹಿಕ್ಕುವ ಕೆಲಸಕ್ಕೆ ಹೋಗಿ ಅದರಲ್ಲಿ ಸಂಪಾದಿಸಿದ ಹಣದಲ್ಲಿ ತನ್ನ ಸಣ್ಣಪುಟ್ಟ ಆವಶ್ಯಕತೆಯನ್ನು ಪೂರೈಸಿಕೊಳ್ಳುತ್ತಿದ್ದುದಲ್ಲದೆ ತೋಟಕ್ಕೆ ಪೈಪುಗಳನ್ನು ಅಳವಡಿಸಲು ನೆರವಾದನ್ನು ನೆನಪಿಸುತ್ತಾರೆ.
ಷಣ್ಮುಖ ಅವರ ಶಿಕ್ಷಣಕ್ಕೆ ಸಹಕಾರಿಯಾದುದು ಕೂಡಾ ತರಕಾರಿ ಕೃಷಿಯೇ. ಪಿಯುಸಿ ಶಿಕ್ಷಣ ನಂತರ ಕೃಷಿ ಪದವಿ ಪಡೆಯಬೇಕೆಂಬ ಆಸೆ ಇತ್ತಾದರೂ ಅದು ಈಡೇರಲಿಲ್ಲ. ಇಂಜಿನಿಯರಿಂಗ್ ಪದವಿ ಪಡೆದಾದ ಮೇಲೆ ಉದ್ಯೋಗ ನಿಮಿತ್ತ ಬೆಂಗಳೂರಿಗೆ ಸೇರಿ ಐಟಿ ಕಂಪನಿಯೊಂದರಲ್ಲಿ ಉದ್ಯೋಗಕ್ಕೆ ಸೇರಿದರು. ಈ ಉದ್ಯೋಗದ ನಡುವೆಯೂ ಅವರಲ್ಲಿ ಕೃಷಿಯಾಸಕ್ತಿ ಕಡಿಮೆಯಾಗಿರಲಿಲ್ಲ. ಕೃಷಿ ಬಗೆಗಿನ ಸೆಳೆತ, ತಂದೆ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ನಡುವೆ ಮಾನಸಿಕವಾಗಿ ಜರ್ಜರಿತರಾದರು. ಮರಳಿ ಊರಿಗೆ ಬಂದರು. ಕಳೆದ 18 ವರ್ಷಗಳಿಂದ ಸಾಫ್ಟ್ವೇರ್ ಇಂಜಿನಿಯರಿಂಗ್ ಆಗಿ ನೌಕರಿಯಲ್ಲಿದ್ದಾರೆ. ಈ ನಡುವೆ ಮನೆಯಿಂದಲೇ ಉದ್ಯೋಗ ಮಾಡುತ್ತಾ ಕೃಷಿ ಕಾಯಕದಲ್ಲಿ ತೊಡಗಿಕೊಂಡುದ್ದಲ್ಲದೆ ಮತ್ತೆ ತರಕಾರಿ ಬೆಳೆಯುವ ಆಸಕ್ತಿ ಮೂಡಿತು. ತಂದೆ ಕಾಲದಲ್ಲಿ ಇದ್ದಂತೆ ಭತ್ತದ ಗದ್ದೆಗಳಿಲ್ಲ. ಮನೆ ಅಂಗಳದಲ್ಲಿಯೇ ಗ್ರೋ ಬ್ಯಾಗ್ ಮೂಲಕ ತರಕಾರಿ ಬೆಳೆಯುವುದಕ್ಕೆ ಮುಂದಾದರು. ಈ ಬಾರಿ ತರಕಾರಿ ಮಾಡಡಿ ವ್ಯಾಪಾರದ ಉದ್ದೇಶ ಅವರದ್ದಲ್ಲ. ಮನೆಯ ಬಳಕೆಗೆ ಬೇಕಾದುದನ್ನು ಬೆಳೆದರು. ಮಿಕ್ಕಿದ್ದನ್ನು ನೆಂಟರಷ್ಟರಿಗೆ ನೀಡಿ ತೃಪ್ತಿಪಟ್ಟುಕೊಂಡರು.

ಹರಿವೆ, ಬೆಂಡೆ, ಬದನೆ, ಬಸಳೆ, ತೊಂಡೆ, ಹಿರೇಕಾಯಿ ಮೊದಲಾದ ತರಕಾರಿ ಬೆಳೆಯುವುದಲ್ಲದೆ ಬೀಜಗಳನ್ನು ಸಂಗ್ರಹಿಸಿ ಇತರರಿಗೂ ನೀಡಿದರು. ಬಸಳೆಗೆ ಅವರು ಬಳ್ಳಿಯನ್ನು ಆಶ್ರಯಿಸುವುದಿಲ್ಲ. ಬೀಜವನ್ನು ಬಳಸಿ ಬಸಳೆ ಬೆಳೆಯುತ್ತಾರೆ. ಸ್ಥಳೀಯವಾದ ನಾಟಿ ಬೀಜಗಳನ್ನು ಸಂರಕ್ಷಿಸುವುದು ಮತ್ತು ಅದನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವುದು ಅವರ ಮುಖ್ಯ ಉದ್ದೇಶವಾಗಿದೆ.
ಜೀವಾಮೃತ ಗೋ ಕೃಪಾಮೃತ
ಆರಂಭದ ದಿನಗಳಲ್ಲಿ ರಾಸಾಯನಿಕ ಗೊಬ್ಬರವನ್ನು ತೋಟದ ಬೆಳೆಗಳಿಗೆ ಹಾಕಲಾಗುತ್ತಿತ್ತು. ಮಣ್ಣಿನ ಫಲವತ್ತತೆ ಉಳಿಸುವುದು ಮತ್ತು ಆರೋಗ್ಯದಾಯಕವಾದ ಉತ್ಪನ್ನಗಳನ್ನು ಬೆಳೆಸುವ ಉದ್ದೇಶದಿಂದ ಷಣ್ಮುಖ ಅವರು ಸಾವಯುವ ಕೃಷಿಗೆ ಮೊರೆ ಹೋಗಿದ್ದಾರೆ. ಅವರ ಅಡಿಕೆ ತೋಟವನ್ನು ಸಾವಯವಕ್ಕೆ ಪರಿವರ್ತಿಸಿದ್ದಾರೆ. ಜೀವಾಮೃತ ಮತ್ತು ಗೋಕೃಪಾಮೃತಅಮೃತದ ಬಳಕೆಯನ್ನು ಹೆಚ್ಚಿಸಿದ್ದಾರೆ
ಸಾವಯುವ ಬೆಲ್ಲ, ಸಗಣಿ, ಗೋಮೂತ್ರ, ದ್ವಿದಳ ಧಾನ್ಯದ ಹಿಟ್ಟು ಬಳಸಿಕೊಂಡು ಜೀವಾಮೃತವನ್ನು ತಯಾರಿಸುತ್ತಿದ್ದು ಜೀವಾಮೃತದ ಒಂದು ಲೀಟರ್ ಸಾರಕ್ಕೆ 1೦ಲೀಟರ್ ನೀರು ಸೇರಿಸಿ ಗಿಡವೊಂದಕ್ಕೆ 2-3 ಲೀ. ನೀಡುತ್ತಾರೆ. ಗೋ ಕೃಪಾಮೃತವನ್ನು ತಯಾರಿಸಿಕೊಳ್ಳುತ್ತಾರೆ. ಗೋ ಮೂತ್ರ, ಮಜ್ಜಿಗೆ, ಬೆಲ್ಲ, ಮೊದಲಾದುವುಗಳನ್ನು ಬಳಸಿಕೊಂಡು ಗೋ ಕೃಪಾಮೃತವನ್ನು ತಯಾರಿಸಿ ನೀಡುತ್ತಾರೆ. ಇದಲ್ಲದೆ ಇತರ ಸಾವಯವ ಗೊಬ್ಬರವನ್ನು ಬಳಸುತ್ತಾರೆ. ಈ ಸಾವಯುವ ಗೊಬ್ಬರದಿಂದ ಗಿಡಗಳು ಉತ್ತಮವಾಗಿ ಬೆಳೆಯುವುದಲದ್ಲೆ ಒಳ್ಳೆಯ ಫಸಲು ದೊರೆಯುತ್ತಿದೆ ಎನ್ನತ್ತಾರೆ ಷಣ್ಮುಖ ಗೌಡರು.

ಸಮಗ್ರ ಕೃಷಿಗೆ ಒತ್ತು
ಈಗ ತೋಟದಲ್ಲಿ ಅಡಿಕೆ, ತೆಂಗು, ಮೊದಲಾದಗಳಿವೆ. ಅದರೊಂದಿಗೆ ಸಮಗ್ರ ಬೆಳೆಯ ಒತ್ತು ನೀಡುವುದು ಅವರ ಉದ್ದೇಶವಾಗಿದೆ ಆಹಾರ ಬೆಳೆ, ವಾಣಿಜ್ಯ ಬೆಳೆ, ಅರಣ್ಯ ಬೆಳೆಯನ್ನು ಬೆಳೆಯುವ ಉದ್ದೇಶ ಅವರದು. ಅದಕ್ಕಾಗಿ ಜಾಗವನ್ನು ಹುಡುಕುತ್ತಿದ್ದಾರೆ. ಅವರ ತೋಟದ ಬಳಿಯಲ್ಲಿ ಇರುವ ಅರಣ್ಯ ಇಲಾಖೆಯ ಗೇರು ತೋಟವನ್ನು ಅವಕಾಶವಿದ್ದರೆ ಹೊಸ ಅರಣ್ಯ ಬೆಳೆಗಳಿಂದ ಇನ್ನಷ್ಟು ಸಮೃದ್ಧಗೊಳಿಸುವ ಆಶಯ ಅವರದಾಗಿದೆ.
ಅಗ್ರಿಕಲ್ಚರ್ ಡೆಸ್ಕ್
ಏನಿದು ಅಗ್ರಿಲ್ಚರ್ ಡೆಸ್ಕ್? ಇದೊಂದು ಕೃಷಿ ಜಾಗೃತಿಯನ್ನು ಮೂಡಿಸುವ ಜಾಲತಾಣ. ಮಕ್ಕಳಲ್ಲಿ ಕೃಷಿ ಆಸಕ್ತಿಯನ್ನು ಹೆಚ್ಚಿಸುವ , ಕೃಷಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಈ ಸಂಸ್ಥೆ ಹುಟ್ಟಿಕೊಂಡಿದೆ. ಮಕ್ಕಳಲ್ಲಿ ಕೃಷಿ ಆಸಕ್ತಿಯನ್ನು ಬಿತ್ತಿದರೆ ಮುಂದಿನ ತಲೆಮಾರಿಗೆ ಕೃಷಿ ಸಂಸ್ಕೃತಿ ಒಯ್ಯಲು ಸಾಧ್ಯ ಎಂಬುದು ಅವರ ನಂಬಿಕೆ. ಈ ನಿಟ್ಟಿನಲ್ಲಿ ಸ್ಥಳೀಯ ಬಳ್ಪ ಸರಕಾರಿ ಶಾಲೆಯಲ್ಲಿ ಅಗ್ರಿಕಲ್ಚರ್ ಡೆಸ್ಕ್ ವತಿಯಿಂದ ಮಕ್ಕಳಿಗೆ ತರಕಾರಿ ಬೆಳೆಯುವ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ನೀಡಲಾಯಿತು. ಕಾರ್ಯಕ್ರಮದಿಂದ ಮಕ್ಕಳಲ್ಲಿ ಕೃಷಿ ಆಸಕ್ತಿಯನ್ನು ಹೆಚ್ಚಿಸಿತು, ಮಕ್ಕಳ ಮನಸ್ಸನ್ನು ತಳಸ್ಪರ್ಶಿಸಿತು. ಹಲವು ಮಕ್ಕಳ ಮನೆಯಂಗಳ ತರಕಾರಿ ಕೃಷಿಗೆ ವೇದಿಕೆಯಾದವು . ಇದರಿಂದ ತಮ್ಮ ಮನೆಗೆ ತಾಜಾ ತರಕಾರಿ ಅಲ್ಲದೆ ತಾವು ಬೆಳೆದ ತರಕಾರಿಯನ್ನು ಶಾಲೆಯ ಬಿಸಿಯೂಟಕ್ಕೂ ನೀಡಿ ಮಕ್ಕಳಲ್ಲಿ ಸಾರ್ಥಕತೆಯನ್ನು ಮೂಡಿಸಿದೆ. ಕೃಷಿ ಕ್ಷೇತ್ರದಲ್ಲಿ ಅರಿವು ಮೂಡಿಸುವುದನ್ನು ಗುರುತಿಸಿ ಬೆಂಗಳೂರಿನ ಗಂಧದ ಗುಡಿ ಬಳಗವು ಅಪ್ಪು ಸೇವಾ ಪ್ರಶಸ್ತಿಯನ್ನು ನೀಡಿ ಅವರನ್ನು ಗೌರವಿಸಿದೆ

ಅಗ್ರಿಕಲ್ಚರ್ ಡೆಸ್ಕ್ ರೈತರಿಗೆ ಮಾಹಿತಿ ಮಾರ್ಗದರ್ಶನ ನೀಡುವುದರ ಜತೆಗೆ ರೈತರ ಸಂಪರ್ಕ, ಉತ್ಪನ್ನಗಳ ಖರೀದಿ ಮತ್ತು ಮಾರಾಟ ಮೊದಲಾದ ವೇದಿಕೆಯನ್ನಾಗಿ ರೂಪಿಸುವ ಯೋಚನೆ ಅವರಲ್ಲಿದೆ. ಕಂಪ್ಯೂಟರ್ ಅಥವಾ ಆಧುನಿಕವಾದ ತಂತ್ರಜ್ಞಾನಗಳಿಲ್ಲದಿದ್ದರೂ ಬದುಕಬಹುದು. ಆಹಾರ ಬೆಳೆಯಲ್ಲದೆ ಬದುಕಲು ಸಾಧ್ಯವಾಗದು. ಹಳ್ಳಿಯ ಯುವ ಜನತೆ ಕೃಷಿಯನ್ನು ತೊರೆದು ಪಟ್ಟಣದತ್ತ ಮುಖ ಮಾಡಿದರೆ ಮುಂದೆ ನಾವು ಆಹಾರ ಪದಾರ್ಥಗಳಿಗಾಗಿ ಬೇರೆ ದೇಶಗಳನ್ನು ಅವಲಂಭಿಸಬೇಕಾಗಬಹುದು. ಅದಕ್ಕಾಗಿಯೇ ಮಕ್ಕಳಲ್ಲಿ ಕೃಷಿ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಅವಶ್ಯಕವಾಗಿದೆ. ಎನ್ನತ್ತಾರೆ ಷಣ್ಮುಖ ಗೌಡ.
ಮಲೆನಾಡಿನ ಗೋ ತಳಿಯನ್ನು ಉಳಿಸುವುದು, ತುಳುನಾಡಿನ ಕೃಷಿ ಬೆಳೆ ಸಂರಕ್ಷಿಸುವುದು ತರಕಾರಿ ಬೀಜಗಳನ್ನು ಸಂಗ್ರಹಿಸಿ ಬೆಳೆಸುವುದು ಮತ್ತು ಇತರರಿಗೂ ನೀಡುವುದು ಅವರ ಆಸಕ್ತಿಯ ವಿಚಾರ. ತರಕಾರಿ ಬೆಳೆಸುವುದಲ್ಲದೆ ವಿವಿಧ ಹಣ್ಣುಗಳನ್ನು ಬೆಳೆಸುವುದಕ್ಕೂ ಮನ ಮಾಡಿದ್ದಾರೆ. ನಕ್ಷತ್ರ ಹಣ್ಣು, ಐಸ್ ಕ್ರೀಮ್ ಬೀಮ್, ಕ್ಯಾಟ್ ಐ, ನಿಂಬೆ ಜಮ್ ನೇರಳೆ, ಮೊದಲಾದ ಗಿಡಗಳು ಇವೆಯಾದರೂ ಇನ್ನು ಕೆಲವು ಹಣ್ಣಿನ ಗಿಡ ನೆಡುವ ಉದ್ದೇಶವಿರಿಸಿಕೊಂಡಿದ್ದಾರೆ.ಮಾಹಿತಿಗೆ 9880814948





