spot_img
Thursday, April 16, 2026
spot_imgspot_img

ಜಲಕೃಷಿಯಲ್ಲಿ ಸ್ಟ್ರಾಬೆರಿ ಬೆಳೆದರೆ ಪಡೆಯಬಹುದು ಲಕ್ಷಗಟ್ಟಲೆ ರೂಪಾಯಿ ಲಾಭ!

ಬರಹ-ಅಡ್ಡೂರು ಕೃಷ್ಣ ರಾವ್

ಧೀರಜ್ ವರ್ಮಾ ಉತ್ತರಪ್ರದೇಶದ ಬಾರಬಂಕಿ ಜಿಲ್ಲೆಯ ಮೀನಾಪುರ ಗ್ರಾಮದ ಯುವಕ. ಕೆಲವು ವರುಷಗಳ ಮುಂಚೆ ಅವರು ಟಿವಿ ಚಾನೆಲುಗಳನ್ನು ಬದಲಾಯಿಸುತ್ತಾ ಅವುಗಳಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮಗಳನ್ನು ನೋಡುತ್ತಿದ್ದರು. ಆಗ, ಒಂದು ಚಾನೆಲಿನಲ್ಲಿ ಕಾಣಿಸಿತು: ಜಲಕೃಷಿ (ಹೈಡ್ರೋಪೋನಿಕ್ಸ್)ನಲ್ಲಿ ಇಸ್ರೇಲ್ ದೇಶ ಸಾಧಿಸಿದ ಪ್ರಗತಿಯ ಚಿತ್ರಣ. ಮಣ್ಣು ಬಳಸದೆ, ಕಡಿಮೆ ಜಾಗದಲ್ಲಿ ವಿವಿಧ ಬೆಳೆಗಳನ್ನು ಬೆಳೆಯುವ ಆ ವಿನೂತನ ವಿಧಾನ ಕಂಡು ಅವರಿಗೆ ಅಚ್ಚರಿ.

ಒಣ ಹವೆ, ನೀರಿನ ಕೊರತೆ ಮತ್ತು ಅಧಿಕ ಜನಸಾಂದ್ರತೆ ಇದ್ದರೂ ಸಣ್ಣ ದೇಶ ಇಸ್ರೇಲ್ ಕೃಷಿಯಲ್ಲಿ ಅಪ್ರತಿಮ ಪ್ರಗತಿ ಸಾಧಿಸಿದೆ. ಕೇವಲ ಒಂದು ಎಕರೆ ಜಮೀನಿನಲ್ಲಿ ಬೆಳೆದ ಬೆಳೆಗಳ ಫಸಲನ್ನು ಅವರು ಹಲವು ದೇಶಗಳಿಗೆ ರಫ್ತು ಮಾಡುತ್ತಿದ್ದಾರೆ. ಅದನ್ನೆಲ್ಲ ಕಂಡು ಧೀರಜ್ ವರ್ಮಾರಿಗೆ ಅನಿಸಿತು: “ನನಗೆ ಹತ್ತು ಎಕರೆ ಜಮೀನು ಇದ್ದರೂ ಬೇಸಾಯದಿಂದ ಹೆಚ್ಚಿನ ಲಾಭವಿಲ್ಲ. ವಿದೇಶಗಳಿಗೆ ನನ್ನ ಫಸಲನ್ನು ರಫ್ತು ಮಾಡುವುದು ಹಾಗಿರಲಿ, ನಾನು ಬೆಳೆದ ಫಸಲನ್ನು ಪಕ್ಕದ ಹಳ್ಳಿಯಲ್ಲಿ ಮಾರಾಟ ಮಾಡಲಿಕ್ಕೂ ನನಗೆ ಸಾಧ್ಯವಾಗುತ್ತಿಲ್ಲ.”

ಅನಂತರ ಅವರಿಗೆ ಜಲಕೃಷಿಯಲ್ಲಿ ವಿಪರೀತ ಆಸಕ್ತಿ ಮೂಡಿತು. ಇಸ್ರೇಲಿನ ಜಲಕೃಷಿಯ ಸಾಧನೆಗಳ ಬಗ್ಗೆ ನೂರಕ್ಕಿಂತ ಜಾಸ್ತಿ ವಿಡಿಯೋಗಳನ್ನು ಅವರು ವೀಕ್ಷಿಸಿದರು. ಮೀನಾಪುರ ಗ್ರಾಮದ ಸಾಂಪ್ರದಾಯಿಕ ಬೆಳೆಗಳು ಗೋಧಿ, ಜೋಳ ಮತ್ತು ಭತ್ತ. ಅಂತಹ ಪ್ರದೇಶದಲ್ಲಿ ಜಲಕೃಷಿಗೆ ಶುರುವಿಟ್ಟರು ಧೀರಜ್ ವರ್ಮಾ. 2025ರ ಆರಂಭದಲ್ಲಿ ಜಲಕೃಷಿ ವಿಧಾನದಲ್ಲಿ ಸ್ಟ್ರಾಬೆರಿ ಬೆಳೆಸಿ, ಕೇವಲ ಎರಡೇ ತಿಂಗಳಿನಲ್ಲಿ 5 ಟನ್ ಫಸಲು ಕೊಯ್ದು ರೂ. 3 ಲಕ್ಷ ಆದಾಯ ಗಳಿಸಿದರು!

ಬಿ.ಎಸ್ಸಿ. ಪದವೀಧರರಾದ ಧೀರಜ್ ವರ್ಮಾ ಕಳೆದ 13 ವರುಷಗಳಲ್ಲಿ ಸಾಂಪ್ರದಾಯಿಕ ವಿಧಾನದಲ್ಲಿ ಬೆಳೆಗಳನ್ನು ಬೆಳೆಯುತ್ತಿದ್ದರು. ತನ್ನ ಜಮೀನಿನ ಐದೆಕ್ರೆಯಲ್ಲಿ ಸ್ಟ್ರಾಬೆರಿಗಳನ್ನೂ ಬೆಳೆಯುತ್ತಿದ್ದರು.

“ನಾವು ಜಮೀನಿನಲ್ಲಿ ಬೆಳೆ ಬೆಳೆಸಲು ಬಹಳ ಕಷ್ಟ ಪಡಬೇಕಾಗಿತ್ತು. ವಿಸ್ತಾರವಾದ ಜಮೀನು, ಸಸಿಗಳಿಗೆ ನೆಲಹೊದಿಕೆ ಮತ್ತು ಹನಿ ನೀರಾವರಿ ಅಗತ್ಯವಾಗಿತ್ತು. ಮಣ್ಣಿನಲ್ಲಿ ಸ್ಟ್ರಾಬೆರಿ ಬೆಳೆಸುವಾಗ ಕಳೆ ತೆಗೆಸುವುದು ದೊಡ್ಡ ಸವಾಲು. ಹೊಲದಲ್ಲಿ ಬೆಳೆದ  ಅನಗತ್ಯ ಹುಲ್ಲು ಕೀಳಲು ಕೆಲಸಗಾರರು ಬೇಕೇ ಬೇಕು. ಸುಮಾರು ಅರ್ಧ ಎಕರೆ ಜಮೀನಿನ ಕಳೆ ಕೀಳಲು 50,000 ರೂಪಾಯಿ ವೆಚ್ಚವಾಗುತ್ತದೆ” ಎನ್ನುತ್ತಾರೆ ಧೀರಜ್ ವರ್ಮಾ.

ಈ ಎಲ್ಲ ಸವಾಲುಗಳಿಗೆ ಜಲಕೃಷಿ ಉತ್ತಮ ಪರಿಹಾರ ವಿಧಾನ ಎಂದು ಅವರು ನಿರ್ಧರಿಸಿದರು. ಹಾಗಾಗಿ, 2021ರಲ್ಲಿ ಮಧ್ಯಪ್ರದೇಶದ ಧಾಕಡ್ ಬ್ರದರ್ಸ್ ಸಂಸ್ಥೆಗೆ ಹೋಗಿ ಜಲಕೃಷಿ ವಿಧಾನದ ಬಗ್ಗೆ ತರಬೇತಿ ಪಡೆದರು. ಸಸ್ಯಗಳ ಬೆಳವಣಿಗೆಗೆ 13 ವಿವಿಧ ಪೋಷಕಾಂಶಗಳು ಅವಶ್ಯ. ಜಲಕೃಷಿ ವಿಧಾನದಲ್ಲಿ ಇವನ್ನು ಅಂದರೆ ಪ್ರಧಾನ ಪೋಷಕಾಂಶಗಳಾದ ಸಾರಜನಕ ರಂಜಕ, ಪೊಟಾಷಿಯಂ ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ನೀರಿನ ಮೂಲಕ ಸಸ್ಯಗಳಿಗೆ ಒದಗಿಸಲಾಗುತ್ತದೆ. ಇವನ್ನು ಯಾವ ಅನುಪಾತದಲ್ಲಿ ಸಸ್ಯಗಳಿಗೆ ಒದಗಿಸಬೇಕು ಎಂಬುದನ್ನು ಕಲಿಯಲು ಅವರಿಗೆ ತರಬೇತಿಯಿಂದ ಸಹಾಯವಾಯಿತು.

ತರಬೇತಿಯಿಂದ ಹಿಂತಿರುಗಿದ ನಂತರ, ತನ್ನ ಜಮೀನಿನಲ್ಲಿ 3,500 ಚದರ ಅಡಿ ವಿಸ್ತಾರದ ಜಲಕೃಷಿ ವ್ಯವಸ್ಥೆಯನ್ನು ನಿರ್ಮಿಸಿದರು. ಒಂದೂವರೆ ತಿಂಗಳು ತಗಲಿದ ಈ ಕೆಲಸಕ್ಕೆ ಆದ ವೆಚ್ಚ ರೂ.12 ಲಕ್ಷ. ಅದರಲ್ಲಿ, ಕೋಕೋ ಪೀಟ್ ಮಾಧ್ಯಮದಲ್ಲಿ 9,000 ಸ್ಟ್ರಾಬೆರಿ ಸಸಿಗಳನ್ನು ನೆಡಿಸಿದರು.

“ಗ್ರೋಬ್ಯಾಗುಗಳಲ್ಲಿ ನಾನು ಕೋಕೋ ಪೀಟ್ ತುಂಬಿದೆ. ಪ್ರತಿಯೊಂದು ಗ್ರೋಬ್ಯಾಗಿಗೆ ನಾಲ್ಕು ಡ್ರಿಪ್ಪರು ಜೋಡಿಸಿದೆ ಮತ್ತು ಹೆಚ್ಚಿನ ನೀರು ಹೊರಹೋಗಲಿಕ್ಕಾಗಿ ಪ್ರತಿಯೊಂದು ಗ್ರೋಬ್ಯಾಗಿಗೆ ನಾಲ್ಕು ಸಣ್ಣ ತೂತು ಮಾಡಿದೆ. ನಂತರ ಸ್ಟ್ರಾಬೆರಿ ಸಸಿಗಳನ್ನು ನೆಟ್ಟು, ಎಲ್ಲ ಪೋಷಕಾಂಶಗಳನ್ನು ನೀರಿನ ಮೂಲಕವೇ ಕೊಟ್ಟೆ. ಈ ಸಸಿಗಳಿಗೆ ನೀರು ಹಾಕಿದ್ದು ವಾರಕ್ಕೊಮ್ಮೆ ಮಾತ್ರ. ಇದರಿಂದಾಗಿ ಶೇಕಡಾ 70ರಷ್ಟು ನೀರನ್ನು ಕೋಕೋ ಪೀಟ್ ಹೀರಿಕೊಂಡು, ಸಸಿಗಳಿಗೆ ಪೋಷಕಾಂಶಗಳು ಸಿಕ್ಕಿದವು” ಎಂದು ವಿವರಿಸುತ್ತಾರೆ ಧೀರಜ್ ವರ್ಮಾ.

“ಒಂದು ಸಲ ಲಕ್ಷಗಟ್ಟಲೆ ಖರ್ಚಾದರೂ ಇನ್ನು ಮುಂದಿನ ಐದು ವರುಷಗಳಲ್ಲಿ ಕೃಷಿಯ ವ್ಯವಸ್ಥೆಗಾಗಿ ನಾನು ಬೇರೇನೂ ಖರ್ಚು ಮಾಡಬೇಕಾಗಿಲ್ಲ. ಬೀಜಗಳು, ಪೋಷಕಾಂಶಗಳು, ನೀರಾವರಿ ಮತ್ತು ಕೊಯ್ಲಿಗಾಗಿ ಖರ್ಚು ಮಾಡಿದರೆ ಸಾಕು” ಎಂಬುದು ಅವರ ಅಭಿಪ್ರಾಯ.

ಜಲಕೃಷಿಯ ಪಾಲಿಹೌಸ್ ವ್ಯವಸ್ಥೆ ನಿರ್ಮಿಸಿದ ನಂತರ ಎರಡೇ ತಿಂಗಳಿನಲ್ಲಿ ಸ್ಟ್ರಾಬೆರಿ ಬೆಳೆಸಿ, ಅವರು ಗಳಿಸಿದ ಆದಾಯ  ರೂ.3 ಲಕ್ಷ. “ಸಾಂಪ್ರದಾಯಿಕ ಕೃಷಿ ವಿಧಾನಕ್ಕಿಂತ ಜಲಕೃಷಿ ವಿಧಾನ ಬಹಳ ಉತ್ತಮ. ಸಾಂಪ್ರದಾಯಿಕ ಕೃಷಿಯ ಫಸಲಿಗೆ ಹೋಲಿಸಿದಾಗ, ಜಲಕೃಷಿಯಿಂದ ನಾನು ಪಡೆದ ಫಸಲು ಐದು ಪಟ್ಟು ಜಾಸ್ತಿ” ಎಂದು ತಿಳಿಸುತ್ತಾರೆ ಧೀರಜ್ ವರ್ಮಾ.

‘ಜಲಕೃಷಿ ಪಾಲಿಹೌಸನ್ನು ಕೃಷಿಕ ದಿನಕ್ಕೆ ಒಮ್ಮೆಯಾದರೂ ಗಮನಿಸಬೇಕು. ಸ್ಟ್ರಾಬೆರಿ ಸಸಿಗಳಿಗೆ ಕೀಟಗಳು ಮತ್ತು ಫಂಗಸ್ ದಾಳಿ ವಿಪರೀತ. ಜಮೀನಿನಲ್ಲಿ ಸ್ಟ್ರಾಬೆರಿ ಬೆಳೆಸುವಾಗ ಅವುಗಳ ನಿಯಂತ್ರಣಕ್ಕಾಗಿ ಹಿಂದೆಮುಂದೆ ಯೋಚಿಸದೆ ವಿಷ ರಾಸಾಯನಿಕಗಳನ್ನು ಸಿಂಪಡಿಸುವುದು ಅನಿವಾರ್ಯವಾಗಿತ್ತು. ಜಲಕೃಷಿಯಲ್ಲಿ ಆ ಖರ್ಚು ಕಡಿಮೆ ಮಾಡಲು ಸಾಧ್ಯವಾಯಿತು” ಎಂಬ ಮಾಹಿತಿ ನೀಡುತ್ತಾರೆ ವರ್ಮಾ.

ಫಂಗಸ್ ನಿಯಂತ್ರಣಕ್ಕಾಗಿ ಧೀರಜ್ ವರ್ಮಾ ಸಿಂಪಡಿಸಿದ್ದು ತಾವೇ ತಯಾರಿಸಿದ ವಿಶೇಷ ದ್ರಾವಣವನ್ನು. ಅದರ ತಯಾರಿಕಾ ವಿಧಾನ: ಒಂದು ಲೀಟರ್ ಮೊಸರಿನಲ್ಲಿ ಒಂದು ತಾಮ್ರದ ಲೋಟ ಅಥವಾ 50 ಗ್ರಾಮ್ ತಾಮ್ರದ ಸರಿಗೆ ಮುಳುಗಿಸಿ ಇಡಬೇಕು. ಕನಿಷ್ಠ 15 ದಿನಗಳ ವರೆಗೆ ಅಂದರೆ, ದ್ರಾವಣದ ಬಣ್ಣ ಅಚ್ಚ ನೀಲಿ ಆಗುವ ವರೆಗೆ ಹಾಗೇ ಬಿಡಬೇಕು. ಒಂದು ಲೀಟರ್ ನೀರಿಗೆ ಈ ದ್ರಾವಣದ 2 ಮಿಲೀ ಬೆರೆಸಬೇಕು. ಹೀಗೆ ತೆಳು ಮಾಡಿದ ದ್ರಾವಣವನ್ನು ಪೂರ್ತಿ ಹಂಗಾಮಿನಲ್ಲಿ  ವಾರಕ್ಕೊಮ್ಮೆ ಸಸಿಗಳಿಗೆ ಸಿಂಪಡಿಸಬೇಕು. ಇದರಿಂದ ಫಂಗಸ್ ನಿಯಂತ್ರಣವಾಗಿ, ಇಳುವರಿ ಉತ್ತಮವಾಗುತ್ತದೆ ಎಂಬುದು ಅವರ ಅನುಭವ.

ಜಲಕೃಷಿಯ ಆರಂಭದಲ್ಲಿ, ಯಾರೋ ತನಗೆ ತಪ್ಪು ಮಾಹಿತಿ ನೀಡಿದ್ದರಿಂದಾಗಿ ವಂಚಕ ಕಂಪೆನಿಯ ಪೋಷಕಾಂಶಗಳನ್ನು ಖರೀದಿಸಿ ತನಗೆ ನಷ್ಟವಾದದ್ದನ್ನು ಧೀರಜ್ ವರ್ಮಾ ನೆನಪು ಮಾಡಿಕೊಳ್ಳುತ್ತಾರೆ. ಅದೇನಿದ್ದರೂ, “ಜಲಕೃಷಿ ರಾಕೆಟ್ ಉಡಾವಣೆ ವಿಜ್ಞಾನವಲ್ಲ. ಸಾಮಾನ್ಯ ರೈತರೂ ಈ ವಿನೂತನ ವಿಧಾನದಲ್ಲಿ ಬೆಳೆಗಳನ್ನು ಬೆಳೆಸಿ ತನ್ನಂತೆ ಉತ್ತಮ ಲಾಭ ಗಳಿಸಬಹುದು” ಎಂಬುದು ಅವರ ಸಲಹೆ.

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group