-ರಾಧಾಕೃಷ್ಣ ತೊಡಿಕಾನ
ಜೇನು ಎಂದ ಕೂಡಲೇ ಮರದ ಕೊಂಬೆಗಳ ಮೇಲೆ ಗೆರಸೆಯಂತೆ ನೇತಾಡುವ ಎರಿಗಳು… ಮರದ ಪೊಟೆರೆಯನ್ನು ಆಶ್ರಯಿಸಿಕೊಂಡು ಕಲಾತ್ಮಕವಾಗಿ ಹೆಣೆದ ಜೇನ್ಮನೆ, ಜೇನು ಹುಟ್ಟಿನಿಂದ ಜಿನುಗುವ ಜೇನು ಹನಿ.ಕಣ್ಣ ಮುಂದೆ ನಿಲ್ಲುತ್ತದೆ. ಹಿಂದಿನ ಹಾಗೆ ಜೇನು ಹುಡುಕಿ ಕಾಡು ಗುಡ್ಡ ಅಲೆಯಬೇಕಾಗಿಲ್ಲ. ಮನಸ್ಸು ಮಾಡಿದರೆ ಸಾಕು. ಮನೆಯಂಗಳದಲ್ಲೇ ಜೇನಿನ ಸಂಸಾರವನ್ನು ಆರಂಭಿಸುವಂತೆ ಮಾಡಬಹುದು. ಜೇನು ಹನಿ ಹನಿ ಜಿನುಗಿಸಬಹುದು.
. ಆಯುರ್ವೇದ ಗಿಡಮೂಲಿಕೆಯ ಔಷಧಿಗಳಲ್ಲಿ ಜೇನು ಬಳಕೆ ಹೆಚ್ಚು. ಅದಕ್ಕಾಗಿ ಹೆಚ್ಚಿನ ಮನೆಗಳಲ್ಲಿ ಮದ್ದಿಗಾಗಿ ಜೇನು ಜೋಪಾನವಾಗಿರಿಸಲಾಗುತ್ತಿತ್ತು. ಈಗದು ನಮ್ಮ ಆಹಾರದ ತಟ್ಟೆಗೂ ಬಂದಿದೆ. ಔಷಧ-ಆಹಾರ ಎರಡರಲ್ಲೂ ಉಪಯೋಪವಾಗುತ್ತಿದೆ. ಜೇನು ಕೃಷಿ ಉದ್ಯಮ-ವ್ಯವಹಾರವಾಗಿ ಮಾರ್ಪಟ್ಟಿದೆ. ಬದುಕಿನ ಬುತ್ತಿಯಾಗಿ ರೂಪುಗಂಡಿದೆ. ಅದನ್ನೇ ನಂಬಿ ಸಂಸಾರದ ನೌಕೆಯನ್ನು ಸಾಗಿಸಿದವರಿದ್ದಾರೆ.
ಕಾಡು ನಾಡಿನ ಒಡನಾಡಿಗಳಾದ ಜೇನುನೊಣಗಳು ಪರೋಪಕಾರಿ ಜೀವಿಗಳು. ಪ್ರಕೃತಿಯಲ್ಲಿ ನಡೆಯುವ ಪರಾಗ ಸ್ಪರ್ಶ, ಗಿಡಮರಗಳ ಫಲವಂತಿಕೆಯ ರಾಯಬಾರಿಗಳು. ಕಾಡಿನ ಹಾಗೂ ಕೃಷಿಕರ ಬೆಳೆಗಳ ಮಕರಂದವನ್ನು ಹೀರಿ ಸಂಗ್ರಹಿಸಿದ ಮಧುವನ್ನು ಪರರಿಗೆ ನೀಡಿ ಧನ್ಯತೆಯನ್ನು ಕಂಡುಕೊಳ್ಳುವ ಜೇನು ನೊಣಗಳ ಬದುಕಿನ ಒಳನೋಟ ಅಚ್ಚರಿ ಮೂಡಿಸುತ್ತದೆ. ಜಮೀನು ಇರುವವರು, ಇಲ್ಲದವರು, ಉದ್ಯೋಗದಲ್ಲಿರುವವರು, ನಿವೃತ್ತರು, ನಿರುದ್ಯೋಗಿಗಳು ಆಸಕ್ತಿಯಿದ್ದರೆ ಯಾರೂ ಬೇಕಾದರೂ ಮಾಡಬಹುದಾದ ಉಪಕಸುಬು ಅಥವಾ ಸ್ವ ಉದ್ಯೋಗ ಜೇನು ಕೃಷಿ.

ಪದವಿ ಅಥವಾ ಉನ್ನತ ಶಿಕ್ಷಣ ಪಡೆದ ಮೇಲೆ ಬಹುತೇಕ ಯುವಕರ ದೃಷ್ಟಿಯಿರುವುದು ಉದ್ಯೋಗ ಹುಡುಕುವುದರತ್ತ. ನಗರದಲ್ಲಿ ಉದ್ಯೋಗ ಸಿಕ್ಕ ಮೇಲೆ ತಮ್ಮನ್ನು ಸಬಲಗೊಳಿಸಿದ ಕೃಷಿಯನ್ನು ಮರೆತು ಬಿಡುವುದೇ ಹೆಚ್ಚು. ಆದರೆ ಕೀರ್ತನ್ ಮಾತ್ರ ಹಾಗೆ ಮಾಡಲಿಲ್ಲ. ತನ್ನೂರಿನಲ್ಲಿನಲ್ಲಿಯೇ ದೊರೆಯಬಹುದಾದ ಅವಕಾಶಗಳನ್ನು ಹುಡುಕಾಡಿದರು. ಆಗ ಅವರನ್ನು ಆಕರ್ಷಿಸಿದ್ದು ಜೇನು ಕೃಷಿ.
ದ.ಕ.ಜಿಲ್ಲೆಯ ಸುಳ್ಯ ತಾಲೂಕಿನ ಅಮರಪಡ್ನೂರು ಗ್ರಾಮದ ಪಿಂಡಿ ಬನದ ಕೀರ್ತನ್ ವಾಣಿಜ್ಯ ಶಾಸ್ತçದಲ್ಲಿ ಸ್ನಾತಕೋತ್ತರ ಪದವಿಧರರು. ಮೊದಲಾಗಿ ಕೃಷಿಕ ಕುಟುಂಬದವರು. ಅವರ ತಂದೆ ಕುಶಾಲಪ್ಪ ಗೌಡರು ಜೇನು ಕೃಷಿ ತರಬೇತಿ ಪಡೆದು ಕೊಂಡಿದ್ದರು.
ತೋಟಗಾರಿಕೆ ಇಲಾಖೆ ಎರಡು ಜೇನುಪೆಟ್ಟಿಗೆಯನ್ನು ನೀಡಿತ್ತು. ಈ ಸಂದರ್ಭಗಳಲ್ಲಿ ಜೇನುಕೃಷಿ ಅವರಿಗೆ ಮುಖ್ಯವಾಗಿರಲಿಲ್ಲ. ತೋಟದ ಸುತ್ತಮುತ್ತ ಜೇನು ಕುಟುಂಬವಿದ್ದರೆ ಬೆಳೆಗೆ ಅನುಕೂಲ. ಎಂಬ ದೃಷ್ಟಿಯಿಂದ ಜೇನು ಸಾಕಣೆ ಮಾಡಿದ್ದರು. ಕೀರ್ತನ್ ಅವರು ಬಾಲ್ಯದಿಂದಲೇ ಜೇನು ನೊಣಗಳ ಒಡನಾಟದೊಂದಿಗೆ ಬೆಳೆದು ಬಂದವರು. ಜೇನು ಸಂಸಾರ ಅವರ ಆಸಕ್ತಿಯನ್ನು ಹೆಚ್ಚಿಸಿತ್ತು. ಪೈಲೂರಿನಲ್ಲಿ ಕೃಷಿಭೂಮಿ ತಂದೆ ಖರೀದಿಸಿದ್ದರು. ಆಗ ಜೇನು ಕೃಷಿಕ ಕೆಳಪಾರೆ ಈಶ್ವರ ಭಟ್ ಅವರ ಪರಿಚಯವಾಯಿತು. ಅವರ ಒಡನಾಟ ಹೆಚ್ಚಾದಾಗ ತಾನು ಈ ಕೃಷಿಯಲ್ಲಿ ತೊಡಗಿಸಿಕೊಳ್ಳುವಬಹುದೆಂಬ ಭರವಸೆ ಕೀರ್ತನ್ ಅವರಲ್ಲಿ ಮೂಡಿತು.
ವೀರಪ್ಪ ಗೌಡ ಕಣಕಲ್ ಮತ್ತು ತೋಟಗಾರಿಕೆ ಇಲಾಖೆಯ ಮೂಲಕ ತರಬೇತಿ ಪಡೆದುಕೊಂಡರು. ಬೇರೆ ಬೇರೆ ಬೆಳೆಗಾರರ ಮಾಹಿತಿ ಮಾರ್ಗದರ್ಶನವೂ ದೊರೆಯಿತು. ಈಗ ಕೀರ್ತನ್ ಅವರಲ್ಲಿ 3೦೦ಕ್ಕೂ ಹೆಚ್ಚು ಜೇನು ಕುಟುಂಬಗಳಿವೆ. ಇವುಗಳನ್ನು ತಮ್ಮ ತೋಟವಲ್ಲದೆ ಬೇರೆ ಬೇರೆ ತೋಟಗಳಲ್ಲಿ ಸಾಕುತ್ತಿದ್ದಾರೆ. ಅದಲ್ಲದೆ ಬೇರೆಯವರ ತೋಟದ ಜೇನು ಕುಟುಂಬಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಜೇನು ಸಂಸ್ಕರಣೆ ಯಂತ್ರವಿದ್ದು 5 ಎರಿಗಳನ್ನು ಏಕಕಾಲಕ್ಕೆ ತಿರುಗಿಸಿ ಜೇನು ಹೊರ ತೆಗೆಯುವಂತೆ ಗೇಟ್ ವಾಲ್‌ಗಳನ್ನು ಅಳವಡಿಸಿ ಯಂತ್ರವನ್ನು ತನ್ನ ಅನುಕೂಲಕ್ಕೆ ಅನುಗುಣವಾಗಿ ಮಾರ್ಪಡಿಸಿಕೊಂಡಿದ್ದಾರೆ.

ಫೆಬ್ರವರಿಯಿಂದ ಮೇವರೆಗಿನ ಋತುಮಾನದಲ್ಲಿ 6-7 ಜೇನು ಕೊಯ್ಲು ಮಾಡಬಹುದು. ಒಂದು ಪೆಟ್ಟಿಗೆಯಿಂದ ಸರಾಸರಿ 8 ಕೆಜಿ ಜೇನು ಪಡೆಯಬಹುದು. ಜೇನಿನ ಪ್ರಮಾಣ ಆ ಕಾಲದಲ್ಲಿರುವ ಹೂವನ್ನು ಆಧರಿಸಿಕೊಂಡಿರುತ್ತದೆ. ಕುಂಟು ನೇರಳೆ, ಮಾಗುವಾನಿ, ಹುಣಿಸೆ, ರಬ್ಬರ್, ಎಂಜಿರ ಬಳ್ಳಿ , ಚಾಕೋಟೆ ಇತರ ಕಾಡು ಹೂ ಹಾಗೂ ತೋಟದ ಬೆಳೆಗಳಿಂದ ಮಕರಂದವನ್ನು ಸಂಗ್ರಹಿಸಿ ಜೇನಾಗಿ ಪರಿವರ್ತನೆ ಮಾಡುತ್ತವೆ.
ಮುಜೆಂಟಿ : ತೊಡುವೆ ಜೇನು ಸಾಕಣೆ ಒಂದು ತೆರನಾದರೆ ಮುಜೆಂಟಿ ಜೇನು ಇನ್ನೊಂದು ರೀತಿಯದು. ಇದರದು ಸಣ್ಣ ಸಂಸಾರ, ಸಣ್ಣಮನೆ. ಜೇನಿನ ಪ್ರಮಾಣ ಹೆಚ್ಚೇನು ಇಲ್ಲ. ಆದಾಯ ತರುವಂಹದ್ದಲ್ಲ. ಆದರೂ ಮುಜೆಂಟಿಗೆ ಮಹತ್ವ ಹೆಚ್ಚಿನದು. ಸಣ್ಣ ಸಣ್ಣ ಹೂವುಗಳನ್ನು ಸ್ಪರ್ಶಿಸಿ ಮಧು ಸಂಗ್ರಹ ಮಾಡುತ್ತದೆ. ವರ್ಷಕ್ಕೆ ಹೆಚ್ಚೆಂದರೆ ೩೦೦ಎಲ್‌ಎಂ ಜೇನು ಉತ್ಪಾದನೆ ಅಷ್ಟೇ. ಆದರೂ ದರ ಮಾತ್ರ ಕಿಲೋವೊಂದಕ್ಕೆ 2೦೦೦ ಕ್ಕಿಂತ ಹೆಚ್ಚು.
ಮಾರುಕಟ್ಟೆ
ಕೃಷಿಕರು ಬಿತ್ತಿ ಬೆಳೆಯೋದ್ರದಲ್ಲಿ ಮುಂದಿದ್ದರೂ ಮಾರುಕಟ್ಟೆ ಮಾಡುವಲ್ಲಿ ಹಿಂದೆ ಬೀಳುತ್ತಾರೆ. ಕೀರ್ತನ್ ಅವರಿಗೆ ಮಾರುಕಟ್ಟೆಯನ್ನು ಹುಡುಕಿ ಹೋಗಬೇಕಾಗಿಲ್ಲ. ಅಗ್ಗದ ದರಕ್ಕೆ ಬೇರೆ ಯಾರಿಗೋ ಕೊಟ್ಟು ಕೈ ಸುಟ್ಟುಕೊಳ್ಳುವ ಪ್ರಮೇಯವಿಲ್ಲ. “ಪ್ರಸಾದ್ ಹನಿ” ತನ್ನದೇ ಬ್ರಾಂಡಿನಲ್ಲಿ ಜೇನು ಮಾರಾಟ ಮಾಡುತ್ತಾರೆ. ಬೇರೆ ಬೇರೆ ಬ್ರಾಂಡ್ ಮಾಡುವವರಿಗೂ ನೀಡುತ್ತಾರೆ. ಜೇನಿಗೆ ಬೇಡಿಕೆಯಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಇವರ ಜೇನು ಕೊಳ್ಳುವವರೆಉ ಇದ್ದಾರೆ. ಮಾರುಕಟ್ಟೆ ಸಮಸ್ಯೆ ಇಲ್ಲ
ಆಸಕ್ತಿ ಮತ್ತು ಅನುಭವ ಇದ್ದರೆ ಮಾತ್ರ ಜೇನು ಕೃಷಿಯಲ್ಲಿ ತೊಡಗಿಕೊಳ್ಳಬಹುದು ಒಮ್ಮೆಲೇ ದೊಡ್ಡ ಮಟ್ಟದಲ್ಲಿ ಹೂಡಿಕೆಯನ್ನು ಮಾಡಬಾರದು. ಜೇನುನೊಣಗಳಿಗೆ ಬರುವ ಸಮಸ್ಯೆಗಳಿಂದಲೂ ನಷ್ಟ ಅನುಭವಿಸುವ ಸಂಭವವಿದೆ.ನೊಣಗಳ ಸಂಖ್ಯೆ ಕಡಿಮೆಯಾದಾಗ ಉತ್ಪಾದನೆಯೂ ಕುಂಠಿತವಾಗುತ್ತದೆ. ಎಲ್ಲದರ ಬಗ್ಗೆ ಗಮನವನ್ನು ಇಡಬೇಕು ಎನ್ನುತ್ತಾರೆ ಕೀರ್ತನ್. ಜೇನು ಕೃಷಿ ತರಬೇತಿ ನೀಡುತ್ತಾರೆ ಜೇನು ಕುಟುಂಬಗಳನ್ನು ಅಭಿವೃದ್ಧಿ ಗೊಳಿಸಿ ನಿರ್ವಹಣೆಯನ್ನು ಮಾಡಿಕೊಡುತ್ತಾರೆ. ತಾನಿರುವ ಹಳ್ಳಿಯಲ್ಲೇ ಸ್ವಯಂ ಉದ್ಯೋಗ ಸೃಷ್ಟಿಸಿಕೊಂಡಿರುವ ಕೀರ್ತನ್ ಮಾದರಿಯಾಗಿದ್ದಾರೆ.
ಮಾಹಿತಿಗೆ:6362551193




