spot_img
Friday, May 15, 2026
spot_imgspot_img

ಸಮ್ಮಿಶ್ರ ಬೆಳೆಯಿದ್ದರೆ ಆರ್ಥಿಕತೆಗೆ ಬಲ:ಸಮಗ್ರ ಕೃಷಿಯಿಂದ ನೆಮ್ಮದಿ ಕಂಡ ಕಾರ್ಕಳ ಮುಡಾರಿನ ಕೃಷಿಕ

-ರಾಧಾಕೃಷ್ಣ ತೊಡಿಕಾನ

ಅವಿಭಜಿತ ದ.ಕ ಜಿಲ್ಲೆಯಲ್ಲಿ ಕೃಷಿಕರಿಗೆ ಅಡಿಕೆ, ರಬ್ಬರ್ ಬಿಟ್ಟರೆ ಇತರ ಕೃಷಿಯತ್ತ ಒಲವು ಕಡಿಮೆ. ಈ ಬೆಳೆಗಳ ಬೆಲೆ ಏರುಪೇರಾದಾಗ ಕೃಷಿಕರ ಆರ್ಥಿಕತೆ ಮೇಲೆ ಹೊಡೆತ ಬೀಳುತ್ತದೆ. ಸಮಗ್ರ ಕೃಷಿಯಿದ್ದರೆ ಒಂದು ಬೆಳೆ ಕೈಕೊಟ್ಟರೆ ಮತ್ತೊಂದು ಬೆಳೆ ಆದರಿಸುತ್ತದೆ. ಆದರಿಂದ ಪಾಠ ಕಲಿತ ಬಹುತೇಕ ಮಂದಿ ಮಿಶ್ರ ಬೆಳೆ ಪದ್ಧತಿ ಅನುಸರಿಸಿ ತನ್ನದೆ ಚೌಕಟ್ಟಿನಲ್ಲಿ ಪ್ರಯೋಗಶೀಲರಾಗಿ ಯಶಸ್ಸು ಸಾಧಿಸುತ್ತಿದ್ದಾರೆ. ಮುಡಾರಿನ ರಾಮಕೃಷ್ಣ ಕಾಮತ್ ಅವರ ತೋಟದಲ್ಲಿ ಪ್ರಧಾನ ಬೆಳೆ ಅಡಿಕೆ. ಆದರೂ ವೀಳ್ಯದೆಲೆ, ತಾಳೆ, ಕಾಳುಮೆಣಸು ಹಾಗೂ ಇತರ ಬೆಳೆಗಳು ನಳನಳಿಸುತ್ತಿವೆ. ಇದಕ್ಕೆ ಪೂರಕವಾಗಿ ಪರಂಪರೆಯ ಹೈನುಗಾರಿಕೆಯಿದೆ. ಜಮೀನು ಎಷ್ಟಿದೆ ಎಂಬುದಕ್ಕಿಂತ ಜಮೀನಿನಲ್ಲಿ ಎಷ್ಟು ಬೆಳೆಯಿದೆ ಎಂಬುದು ಮುಖ್ಯ. ಕಾಮತರ ಶ್ರಮದ ಹಿಂದಿರುವುದು ಮಿಶ್ರ ಬೆಳೆ. ಸಮಗ್ರ ಕೃಷಿಯ ಅಳವಡಿಕೆ. ಪ್ರಗತಿಪರ ಚಿಂತನೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಏರ್ನೋಟ್ಟು ಕಾಮತ್ ನಿವಾಸದ ರಾಮಕೃಷ್ಣ ಕಾಮತ್ ಅವರು ಪ್ರಗತಿಪರ ಕೃಷಿಕರು. ಭತ್ತದ ಕೃಷಿಯಿಂದ ತಾಳೆ ಕೃಷಿಯವರೆಗೆ ವಿವಿಧ ಬೆಳೆಗಳಲ್ಲಿ ಕೈಯಾಡಿಸಿ ಯಶಸ್ಸನ್ನು ಪಡೆದವರು. ವೀಳ್ಯದೆಲೆ, ತಾಳೆ, ರಬ್ಬರ್, ಅಡಿಕೆ, ಕಾಳುಮೆಣಸು ಮೊದಲಾದ ಕೃಷಿಯಲ್ಲದೆ ಹೈನುಗಾರರಾಗಿಯೂ ಗುರುತಿಸಿಕೊಂಡಿದ್ದಾರೆ

ಅಡಿಕೆ ಮರದಲ್ಲಿ ವೀಳ್ಯದೆಲೆ

ಪರಂಪರೆಯಲ್ಲಿ, ಧಾರ್ಮಿಕ ನೆಲೆಗಟ್ಟಿನಲ್ಲಿಯೂ ವೀಳ್ಯದೆಲೆಗೆ ಮಹತ್ವವಿದೆ. ಔಷಧಿಯ ಗುಣ ಹೊಂದಿದೆಯಲ್ಲದೆ ಆರೋಗ್ಯ ಮತ್ತು ಸೌಂದರ್ಯ ವರ್ಧಕವೂ ಆಗಿದೆ. ವೀಳ್ಯದೆಲೆಯಲ್ಲಿ ಬಹಳಷ್ಟು ನಮೂನೆಗಳಿದ್ದರೂ ಗ್ರಾಮೀಣ ಭಾಗದಲ್ಲಿ ಹೆಚ್ಚು ಚಾಲ್ತಿಯಲ್ಲಿರುವುದು ಪಂಚವಳ್ಳಿ ವೀಳ್ಯದೆಲೆ. ಮರದ ಕಂಬ(ಗೂಟ)ಗಳನ್ನು ಆಧಾರವಾಗಿರಿಸಿಕೊಂಡು ಎಲೆ ಬಳ್ಳಿಗಳನ್ನು ನೆಟ್ಟು ಬೆಳೆಯುವುದು ಹೆಚ್ಚಿನವರು ಅನುಸರಿಸುವ ಪದ್ಧತಿ. ರಾಮಕೃಷ್ಣ ಕಾಮತರೂ ಗೂಟಗಳ ಮೂಲಕ ಎಲೆ ಬಳ್ಳಿ ಬೆಳೆಸಿದ್ದಾರೆ. ಈ ಗೂಟಗಳು ಹೆಚ್ಚು ವರ್ಷ ಬಾಳಿಕೆ ಬರುವುದಿಲ್ಲ. ಗೂಟಗಳು ಹಳತಾದಂತೆ ಮುರಿದು ಬೀಳುತ್ತವೆ. ವಾಣಿಜ್ಯ ಉದ್ದೇಶಕ್ಕೆ ಬೆಳೆಸುವವರು ಅಡಿಕೆ ಮರದಲ್ಲಿ ಎಲೆ ಬಳ್ಳಿಗಳನ್ನು ಬಿಡುವುದು ತೀರಾ ಕಡಿಮೆ. ಅಡಿಕೆ ಕೊಯ್ಲು ಮಾಡಲು ಸಮಸ್ಯೆಯಾಗುತ್ತದೆ. ಅಲ್ಲದೆ ಎಲೆಬಳ್ಳಿ ಮೇಲೆ ಮೇಲೆ ಹೋದರೆ ಎಲೆ ಕೊಯ್ಲು ಮಾಡುವುದು ಕಷ್ಟಕರ ಎಂಬ ಭಾವನೆಯಿದೆ. ಆದರೆ ಕಾಮತರಿಗೆ ಆ ಸಮಸ್ಯೆ ಎದುರಾಗಲಿಲ್ಲ. 6೦ ಕ್ಕೂ ಹೆಚ್ಚಿನ ಅಡಿಕೆ ಮರಕ್ಕೆ ವೀಳ್ಯದೆಲೆ ಬಳ್ಳಿ ಹಬ್ಬಿಸಿದ್ದಾರೆ. ಏಣಿಯಿಟ್ಟು ಕೊಯ್ಲು ಮಾಡುವಷ್ಟು ಅಂದರೆ 20ಅಡಿ ಎತ್ತರಕ್ಕೆ ಹಬ್ಬಲು ಬಿಟ್ಟು ನಂತರ ಅದರ ತುದಿಯನ್ನು ಮೇಲೇರದಂತೆ ತುಂಡರಿಸಿತ್ತಾರೆ.

ಮಳೆಗಾಲ ಎಲೆ ಸಮೃದ್ಧಿಯಾಗಿ ಬೆಳೆಯುವುದರಿಂದ ಎಲೆಗೆ ಕೊರತೆ ಇರುವುದಿಲ್ಲ. ಆದರೆ ಬೇಸಿಗೆಯಲ್ಲಿ ಬೇಡಿಕೆ ಹೆಚ್ಚು. 15  ದಿನಕ್ಕೊಮ್ಮೆ ಎಲೆ ಕೊಯ್ಲು ಮಾಡುತ್ತಾರೆ. ಒಮ್ಮೆಗೆ ಸುಮಾರು 4-5 ಸಾವಿರ ಎಲೆಗಳನ್ನು ಕಟಾವು ಮಾಡಲಾಗುತ್ತದೆ. ವಾರ್ಷಿಕವಾಗಿ ಬುಡವೊಂದರಿಂದ ಸುಮಾರು ಒಂದು ಸಾವಿರ ರೂಪಾಯಿ ದೊರೆಯುತ್ತದೆ. ಅಡಿಕೆಗೇನು ಸಮಸ್ಯೆ ಇಲ್ಲ ಎರಡು ರೀತಿಯ ಬೆಳೆ ಒಂದೇ ಬುಡದಲ್ಲಿ ಸಿಗುತ್ತದೆ ಸುಮಾರು 25 ವರ್ಷಗಳಿಂದ ವೀಳ್ಯದೆಲೆ ಕೃಷಿಯಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಹಿಂದೆ ದರ ಕಡಿಮೆ ಇತ್ತು. ಈಗ ಉತ್ತಮ ದರ ಸಿಗುತ್ತಿದೆ.

ತಾಳೆ ಕೃಷಿ

ಅಡಿಕೆ ಇತ್ತೀಚೆಗಿನ ದಿನಗಳಲ್ಲಿ ರೋಗಕ್ಕೆ ತುತ್ತಾಗುತ್ತಿದೆ. ಅದಕ್ಕೆ ಪರ್ಯಾಯವಾಗಿ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಭರವಸೆ ಮೂಡಿಸಿದ್ದು ತಾಳೆ ಕೃಷಿ. ರಾಮಕೃಷ್ಣ ಕಾಮತರು ಕಳೆದ 13 ವರ್ಷಗಳಿಂದ ತಾಳೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ಎಕರೆಯಲ್ಲಿ ತಾಳೆ ಕೃಷಿಯಿದೆ. ಎರಡನೇ ವರ್ಷದಲ್ಲಿಯೇ ತಿಂಗಳಿಗೆ ಎರಡು ಕ್ವಿಂಟಾಲಿಗಿಂತಲೂ ಹೆಚ್ಚು ತಾಳೆ ಕೊಯ್ಲು ಮಾಡಿದ್ದಾರೆ. ವರ್ಷ ಹೆಚ್ಚಾದಂತೆ ತಾಳೆ ಫಸಲು ಜಾಸ್ತಿಯಾಗುತ್ತದೆ. ವರ್ಷವಿಡೀ ಫಸಲು ಇರುವುದಲ್ಲದೆ ತಿಂಗಳಿಗೊಮ್ಮೆ ಕಟಾವಿಗೆ ಸಿಗುತ್ತದೆ. ಕೆಲವು ತಾಳೆ ಗೊನೆಗಳು 4೦ಕೆಜಿ ತೂಕ ಬಂದಿವೆ. ಹೆಚ್ಚು ನೀರು ಬೇಕಾಗಿಲ್ಲ.

ಮಾರುಕಟ್ಟೆ ಮಾಡುವ ಸಮಸ್ಯೆಯೂ ಇಲ್ಲ. ಮಧ್ಯವರ್ತಿಗಳ ಹಾವಳಿಯಿಲ್ಲ. ರೈತರಿಂದ ಕಂಪೆನಿಯೇ ನೇರವಾಗಿ ಖರೀದಿಸುತ್ತದೆ. ನಿಗದಿತ ದರವನ್ನು ಕೃಷಿಕರ ಖಾತೆಗೆ ಜಮಾ ಮಾಡಲಾಗುತ್ತದೆ. ಬೇರೆ ಬೇರೆ ಬೆಳೆಗಳಿರುವುದರಿಂದ ಬರುವ ಆದಾಯ ಸಂತುಷ್ಟ ಬದುಕಿಗೆ ಪೂರಕವಾಗುತ್ತದೆ

ಹೈನುಗಾರಿಕೆ

ಹೈನುಗಾರಿಕೆ ಕೃಷಿಗೆ ಪೂರಕವಾದುದು. ಬೆಳಗಳಿಗೆ ಬೇಕಾದ ಗೊಬ್ಬರ ಖರೀದಿ ಹೊರೆ ಇದರಿಂದ ಕಡಿಮೆಯಾಗುತ್ತದೆ. ರಾಸಾಯನಿಕ ಗೊಬ್ಬರಕ್ಕಾಗಿ ಮಾಡಬೇಕಾದ ಖರ್ಚು ವೆಚ್ಚಗಳನ್ನು ಇಲ್ಲವಾಗಿಸಬಹುದು. ರಾಮಕೃಷ್ಣ ಕಾಮತರು ಕಳೆದ 25 ವರ್ಷಗಳಿಂದ ಹೈನುಗಾರಿಕೆ ಮಾಡುತ್ತಿದ್ದಾರೆ. ಆರಂಭದಲ್ಲಿ ಊರ ತಳಿಯ ದನವಿದ್ದರೆ ಈಗ ಮಿಶ್ರ ತಳಿಯಿದೆ. ಮನೆ ಬಳಕೆಗೆ ಬೇಕಾದಷ್ಟು ಹಾಲು ಉಳಿಸಿಕೊಂಡು 25 ಲೀಟರ್ ಮುಡಾರಿನ ಹಾಲಿನ ಡೈರಿಗೆ ನೀಡುತ್ತಾರೆ. ಇದಲ್ಲದೆ ಮನೆಗೆ ಬೇಕಾದಷ್ಟು ಹಾಲಿನ ಉಪ ಉತ್ಪನ್ನಗಳನ್ನು ತಯಾರಿಸುತ್ತಾರೆ. ಗೋಬರ್ ಗ್ಯಾಸ್ ಇರುವುದರಿಂದ ಎಲ್ಪಿಜಿಯ ಬಳಕೆಯು ಕಡಿಮೆಯಾಗುತ್ತದೆ. ಸ್ಲರಿಯನ್ನು ಪಂಪು ಮೂಲಕ ಅಡಿಕೆ ತೋಟಕ್ಕೆ ಬಿಡುತ್ತಾರೆ. ಇದರೊಂದಿಗೆ ದನಗಳಿಗೆ ಬೇಕಾದಷ್ಟು ಹಸಿರು ಹುಲ್ಲು ತೋಟದಲ್ಲಿ ಸಿಗುತ್ತದೆ. ಬೈಹುಲ್ಲು ಹಿಂಡಿ ಅವಶ್ಯಕತೆಗೆ ತಕ್ಕಂತೆ ಕೊಳ್ಳುತ್ತಾರೆ. ಬಹಳಷ್ಟು ಮಂದಿ ಹೈನುಗಾರಿಕೆ ಕಷ್ಟ ಮತ್ತು ನಷ್ಟ ಹಾದಿಯೆಂದೇ ಭಾವಿಸಿದ್ದಾರೆ.

ಹೈನುಗಾರಿಕೆಯಿಂದ ಅನುಕೂಲವೇ ಹೊರತು ನಷ್ಟವಾಗದು. ಕೃಷಿಗೆ ಬೇಕಾದ ಗೊಬ್ಬರ ಉತ್ಪಾದನೆ ಆಗುತ್ತದೆ. ಹಾಲಿನ ಉಪ ಉತ್ಪನ್ನಗಳನ್ನು ಮಾಡಿಕೊಂಡರೆ ಅದಕ್ಕೂ ಉತ್ತಮ ಬೇಡಿಕೆ ಇದೆ. ದನ ಕೂಡ ಠೇವಣಿ ಇದ್ದಹಾಗೆ ಅವುಗಳನ್ನು ಬೇಕಾದಾಗ ಮಾರಾಟ ಮಾಡಬಹುದು. ದನಸಾಕಣೆಯನ್ನು ಸಮಗ್ರವಾಗಿ ನೋಡಿದಾಗ ಕೃಷಿಕರಿಗೆ ಲಾಭವೇ ಹೊರತು ನಷ್ಟವಾಗದು ಎನ್ನುತ್ತಾರೆ ರಾಮಕೃಷ್ಣ ಕಾಮತರು. ಕೃಷಿಯಲ್ಲಿ ಪತ್ನಿ ರಾಧಾ ಹಾಗೂ ಮಕ್ಕಳು ಸಹಕರಿಸುತ್ತಿರುವುದರಿಂದ ಕೃಷಿ ಕೆಲಸ ಕಾರ್ಯವನ್ನು ಮನೆಯವರೇ ಸರಿದೂಗಿಸಿಕೊಳ್ಳುತ್ತಾರೆ. ಅನಿವಾರ್ಯವಾದ ಕೆಲಸಗಳಿಗೆ ಹೊರಗಿಂದ ಕೆಲಸದಾಳುಗಳನ್ನು ಕರೆಸಿಕೊಳ್ಳುತ್ತಾರೆ. ಕಾಮತರು ತನ್ನ ಮೂರು ಮಂದಿ ಮಕ್ಕಳಿಗೆ ಕೃಷಿಯಲ್ಲಿ ಬಂದ ಆದಾಯದಿಂಲೇ ಶಿಕ್ಷಣ ನೀಡಿದ್ದು ಈಗ ಉತ್ತಮ ಉದ್ಯೋಗದಲ್ಲಿದ್ದಾರೆ.

ಕೃಷಿಯಲ್ಲಿ ಇರುವ ನೆಮ್ಮದಿ ಇತರ ಕೆಲಸಗಳಿಂದ ಸಿಗದು. ಅದು ಪ್ರಕೃತಿಯೊಂದಿಗಿನ ಒಡನಾಟ. ಎನ್ನುವ ಕಾಮತರು ಯುವಕರು ಕೃಷಿಯಲ್ಲಿ ತೊಡಗಿಕೊಳ್ಳಬಹುದು. ಆದರೆ ಒಮ್ಮಿಂದೊಮ್ಮೆಲೇ ಆದಾಯ  ನಿರೀಕ್ಷಿಸಿದರೆ ಸಾಧ್ಯವಾಗದು. ಕೃಷಿಯನ್ನು ನಷ್ಟದ ದಾರಿಯೆಂದು ಭಾವಿಸಬಾರದು. ಪರಿಶ್ರಮ ಹಾಗೂ ಶ್ರದ್ಧೆಯಿದ್ದರೆ ಕೃಷಿಯಲ್ಲೂ ಯಶಸ್ಸು ಇದೆ. ಮಿಶ್ರ ಬೆಳೆಯಿದ್ದರೆ ಸಣ್ಣಪುಟ್ಟ ಆವಶ್ಯಕತೆಗಳನ್ನು ಅವು ಈಡೇರಿಸಬಲ್ಲವು. “ಹನಿ ಕೂಡಿ ಹಳ್ಳ ತೆನೆ ಕೂಡಿ ಕಣಜ” ಎಂಬ ಅಭಿಪ್ರಾಯ ಅವರದು.

ಮಾಹಿತಿಗೆ 9902456089

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group