spot_img
Tuesday, June 2, 2026
spot_imgspot_img

ಸಾವಯವ ಕೃಷಿ, ಹೈನುಗಾರಿಕೆಯಿಂದ ಸ್ವಾವಲಂಬನೆಯ ದಾರಿ ಕಂಡುಕೊಂಡ ಯಶಸ್ವಿ ಕೃಷಿಕನ ಯಶೋಗಾಥೆ!

-ರಾಧಾಕೃಷ್ಣ ತೊಡಿಕಾನ

ದನಗಳು ಈಗಷ್ಟೇ ಹಾಕಿದ ಹಸಿರು ಮೇವನ್ನು ಸವಿಯುವುದರಲ್ಲಿ ತಲ್ಲೀನವಾಗಿದ್ದವು. ತಮ್ಮ ಪಾಲಕ ಮತ್ತೆ ತಮ್ಮತ್ತ ಬರುತ್ತಿರುವುದನ್ನು ಕಂಡು, “ಇನ್ನೇನಾದರೂ ತಿನ್ನಲು ತಂದಿರಬಹುದೇ?” ಎಂಬ ಕುತೂಹಲ ಅವುಗಳ ಕಣ್ಣಲ್ಲಿ ಸ್ಪಷ್ಟವಾಗಿತ್ತು. ಬಾಯಲ್ಲಿ ಹಸಿರು ಹುಲ್ಲು ಇದ್ದರೂ ಅವುಗಳ ನೋಟವೇ ಅದರ ಭಾವವನ್ನು ವ್ಯಕ್ತಪಡಿಸುತ್ತಿತ್ತು.

“ಅಂಬಾ” ಎಂಬ ಧ್ವನಿಯನ್ನು ಹೊರತುಪಡಿಸಿ ಬೇರೇನನ್ನೂ ಹೇಳಲಾಗದ ಈ ಮೂಕ ಜೀವಿಗಳು ಮನೆಯವರ ಭಾವನೆಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳುತ್ತವೆ. ಅವುಗಳ ಮೌನದ ಮಾತು, ಚಲನ-ವಲನ ಹಾಗೂ ಸ್ವಭಾವಗಳನ್ನು ದನ ಸಾಕಾಣಿಕೆ ಮಾಡುವವರು ಸುಲಭವಾಗಿ ಗ್ರಹಿಸಬಲ್ಲರು. ಇತರರಿಗೆ ಇದು ಕುತೂಹಲದಾಯಕವಾಗಿ ಕಾಣಬಹುದಾದರೂ, ಹೈನುಗಾರರಿಗೆ ಇದು ಸಾಮಾನ್ಯ ಅನುಭವ.

ಹೈನುಗಾರಿಕೆಯನ್ನೇ ನೆಚ್ಚಿ ಯಶಸ್ಸು ಪಡೆದವರು ಕೆಲವರಿದ್ದಾರೆ. ಕೃಷಿಗೆ ಪೂರಕವಾಗಿ ಹೈನುಗಾರಿಕೆಯನ್ನು  ಮಾಡುತ್ತಾ ಅದರಲ್ಲಿಯೂ ಆದಾಯದ ಮೂಲವನ್ನು  ಕಂಡು ಕೊಂಡವರು ಹಲವರಿದ್ದಾರೆ.  ಕಡಬ ತಾಲೂಕಿನ ಬಳ್ಪ ಗ್ರಾಮದ ಅಡ್ಡಬೈಲು ನಿವಾಸಿ ಅಗೋಳಿ ಬೈಲುಗುತ್ತು ಮನೆಯ ಗಣೇಶ್ ರೈ ಕೆ. ಅವರು ಹೈನುಗಾರಿಕೆ ಮತ್ತು ಸಾವಯವ ಕೃಷಿಯ ಮೂಲಕ ಸ್ವಾಭಿಮಾನದ ಬದುಕು ಕಟ್ಟಿಕೊಂಡವರು.

ಕೃಷಿಕ ಕುಟುಂಬದ ಗಣೇಶ್ ರೈ ಅವರು ಪಿಯುಸಿ ಶಿಕ್ಷಣದ ಬಳಿಕ ಅನಿವಾರ್ಯವಾಗಿ ಕೃಷಿ ಕ್ಷೇತ್ರವನ್ನೇ ಆಯ್ದುಕೊಂಡರು. ಕೃಷಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಆರಂಭಿಸಿದ ದನ ಸಾಕಣೆ, ಕ್ರಮೇಣ ಅವರ ಉಪಕಸುಬಾಗಿ ಬೆಳೆಯಿತು.  ಎರಡು ದನಗಳಿಂದ ಆರಂಭವಾದ ಹೈನುಗಾರಿಕೆ ಇಂದು ಒಂಬತ್ತು ದನಗಳವರೆಗೆ ವಿಸ್ತರಿಸಿದೆ. ಅವೆಲ್ಲವೂ ಅವರ ದನದ ಕೊಟ್ಟಿಗೆಯಲ್ಲಿ ಹುಟ್ಟಿ ಬೆಳೆದವು

ಕಳೆದ 18 ವರ್ಷಗಳಿಂದ ಬಳ್ಪ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಅತಿಹೆಚ್ಚು ಹಾಲು ಪೂರೈಸುವ ರೈತನಾಗಿ ಅವರು ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಪ್ರತಿದಿನ ಸುಮಾರು 35 ಲೀಟರ್ ಹಾಲನ್ನು ಸಂಘಕ್ಕೆ ನೀಡುತ್ತಿದ್ದು, ಒಂದು ಹಂತದಲ್ಲಿ ದಿನಕ್ಕೆ 80 ಲೀಟರ್‌ವರೆಗೂ ಹಾಲು ಪೂರೈಸಿದ ದಾಖಲೆ ಅವರದು. ಮನೆ ಬಳಕೆಗೆ ಬೇಕಾದ ತುಪ್ಪ, ಮೊಸರು ಸೇರಿದಂತೆ ಹಾಲಿನ ಉತ್ಪನ್ನಗಳನ್ನು ತಾವೇ ತಯಾರಿಸಿಕೊಳ್ಳುತ್ತಾರೆ.

ದನಗಳಿಗೆ ಬೇಕಾದ ಹಸಿರು ಮೇವು ತೋಟದಲ್ಲೇ ಲಭ್ಯವಿದ್ದು, ಜೊತೆಗೆ ಜೋಳದ ಸೈಲೆಜ್, ಹಿಂಡಿ, ಜೋಳದ ಭೂಸ, ನೆಲಗಡಲೆ ಹಿಂಡಿ, ಎಳ್ಳು ಹಿಂಡಿ ಹಾಗೂ ಖನಿಜಾಂಶಯುಕ್ತ ಆಹಾರಗಳನ್ನು ಖರೀದಿಸಿ ನೀಡುತ್ತಾರೆ.

ಗಣೇಶ್ ರೈ ಅವರ ಮನೆಯಲ್ಲಿ ಗೋಬರ್ ಗ್ಯಾಸ್ ಘಟಕವೂ ಇದೆ. ಇದರಿಂದ ಅಡುಗೆಗೆ ಅಗತ್ಯವಾದ ಗ್ಯಾಸ್ ದೊರೆಯುತ್ತಿದ್ದು, ಎಲ್‌ಪಿಜಿ ಬಳಕೆ ಗಣನೀಯವಾಗಿ ಕಡಿಮೆಯಾಗಿದೆ. ಕಳೆದ 15 ವರ್ಷಗಳಿಂದ ಅವರು ಕಟ್ಟಿಗೆ ಬಳಕೆ ಮಾಡುತ್ತಿಲ್ಲ. ಗೋಬರ್ ಗ್ಯಾಸ್ ಉತ್ಪಾದನೆಯ ನಂತರ ಉಳಿಯುವ ಸ್ಲರಿಯನ್ನು ಸಂಗ್ರಹಿಸಿ ತೋಟಕ್ಕೆ ಬಿಡಲಾಗುತ್ತದೆ. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚುವುದರ ಜೊತೆಗೆ ಉತ್ತಮ ಸಾವಯವ ಗೊಬ್ಬರವೂ ಲಭ್ಯವಾಗುತ್ತಿದೆ.

ಸಾವಯವ ತೋಟ

ಹೆಚ್ಚಿನ ಇಳುವರಿಗಾಗಿ ಅನೇಕ ರೈತರು ರಾಸಾಯನಿಕ ಗೊಬ್ಬರಗಳ ಮೊರೆ ಹೋಗುತ್ತಿದ್ದಾರೆ. ಆದರೆ ಅಗತ್ಯಕ್ಕಿಂತ ಹೆಚ್ಚು ರಾಸಾಯನಿಕ ಗೊಬ್ಬರ ಬಳಕೆ ಮಣ್ಣಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಸಾವಯವ ಕೃಷಿಯ ಹೆಸರಲ್ಲಿಯೂ ಕೆಲವೊಮ್ಮೆ ಮೋಸ ನಡೆಯುತ್ತಿರುವುದುಂಟು.

ಆದರೆ ಗಣೇಶ್ ರೈ ಅವರು ತಮ್ಮ ತೋಟಕ್ಕೆ ಬೇಕಾದ ಸಾವಯವ ಗೊಬ್ಬರವನ್ನು ತಾವೇ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ದನದ ಸಗಣಿ ಹಾಗೂ ಗೋಬರ್ ಗ್ಯಾಸ್ ಸ್ಲರಿಯನ್ನು ಬಳಸಿಕೊಂಡು ಸಾವಯವ ಕೃಷಿ ನಡೆಸುತ್ತಿದ್ದಾರೆ. ಇದರಿಂದ ದನಗಳಿಗೆ ಸಮೃದ್ಧ ಹಸಿರು ಮೇವು ದೊರೆಯುವುದರ ಜೊತೆಗೆ ಅಡಿಕೆ ತೋಟಕ್ಕೂ ಉತ್ತಮ ಪೋಷಕಾಂಶ ಸಿಗುತ್ತಿದೆ. ಮಣ್ಣಿನಲ್ಲಿ ಎರೆಹುಳುಗಳ ಸಂಖ್ಯೆಯೂ ಹೆಚ್ಚಾಗಿ, ನೈಸರ್ಗಿಕ ಎರೆಗೊಬ್ಬರ ಉತ್ಪತ್ತಿಯಾಗುತ್ತಿದೆ.

ಈ ಸಾವಯವ ಗೊಬ್ಬರದ ಬಳಕೆಯಿಂದ ಅಡಿಕೆಗೆ ಬಾಧಿಸುವ ಎಲೆ ಚುಕ್ಕಿ ರೋಗವನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗಿದೆ. ಜೊತೆಗೆ ಉತ್ತಮ ಇಳುವರಿಯೂ ದೊರೆಯುತ್ತಿದೆ.ಎಂದು ಅವರು ಹೇಳುತ್ತಾರೆ. ಮನೆ ಬಳಕೆಗೆ ಬೇಕಾದ ತರಕಾರಿಗಳಾದ ಬದನೆಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ಅಲಸಂಡೆ, ಚೀನಿಕಾಯಿ, ಕುಂಬಳಕಾಯಿ ಸೇರಿದಂತೆ ಹಲವು ತರಕಾರಿಗಳನ್ನು ತಮ್ಮ ಮನೆಯ ಹಿತ್ತಲಲ್ಲಿ ಬೆಳೆದುಕೊಳ್ಳುತ್ತಾರೆ. ಗಣೇಶ್ ರೈ ಅವರ ಕೃಷಿ ಹಾಗೂ ಹೈನುಗಾರಿಕೆ ಕಾರ್ಯಗಳಲ್ಲಿ ಪತ್ನಿ ವನಿತಾ ರೈ ಮತ್ತು ಮಕ್ಕಳಾದ ಪ್ರಾಪ್ತಿ ರೈ ಹಾಗೂ ಸ್ತುತಿ ರೈ ಸಹ  ಕೈಜೋಡಿಸುತ್ತಿದ್ದಾರೆ.

ಮನೆಯವರೇ ಸೇರಿ ಎಲ್ಲಾ ಕೆಲಸಗಳನ್ನು ನಿರ್ವಹಿಸಿದರೆ ಹೈನುಗಾರಿಕೆ ಖಂಡಿತವಾಗಿಯೂ ಲಾಭದಾಯಕ.ಎಲ್ಲಾ ಕೆಲಸಗಳಿಗೂ  ಕೂಲಿ ಕಾರ್ಮಿಕರನ್ನೇ ಅವಲಂಬಿಸಬಾರದು. ಹಾಲಿನ ಆದಾಯವಷ್ಟೇ ಅಲ್ಲದೆ, ಗೋಮಯ, ಗೋಬರ್ ಗ್ಯಾಸ್, ಸಾವಯವ ಗೊಬ್ಬರ ಸೇರಿದಂತೆ ಅದರ ಎಲ್ಲ ಪ್ರಯೋಜನಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಹೈನುಗಾರಿಕೆ ಉತ್ತಮ ಆದಾಯದ ಮೂಲವಾಗುತ್ತದೆ” ಎಂದು ಗಣೇಶ್ ರೈ ಅಭಿಪ್ರಾಯಪಡುತ್ತಾರೆ.

ಸನ್ಮಾನ ಮತ್ತು ಗೌರವ

ಸಾವಯವ ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಸಾಧನೆ ಮಾಡಿದ ಗಣೇಶ್ ರೈ ಅವರನ್ನು ವಿವಿಧ ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಬಂಟರ ಸಂಘ ಸುಳ್ಯ ಘಟಕದಿಂದ ತಾಲೂಕು ಮಟ್ಟದಲ್ಲಿ ಸನ್ಮಾನಿಸಲ್ಪಟ್ಟಿರುವ ಅವರು, ಬಳ್ಪ ಗ್ರಾಮೋತ್ಸವದಲ್ಲಿಯೂ ಗೌರವಕ್ಕೆ ಪಾತ್ರರಾಗಿದ್ದಾರೆ. ಹೈನುಗಾರಿಕೆ ಮತ್ತು ಸಾವಯವ ಕೃಷಿಗೆ ಸಂಬಂಧಿಸಿದಂತೆ ಇಲಾಖಾ ಮಟ್ಟದಲ್ಲಿಯೂ ಪ್ರಶಂಸೆ ಪಡೆದಿದ್ದಾರೆ.

ಇದಲ್ಲದೆ, ಬಳ್ಪ ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ಕಳೆದ 18 ವರ್ಷಗಳಿಂದ ನಿರಂತರವಾಗಿ ಪ್ರಥಮ ಸ್ಥಾನ ಪಡೆದು ವಿಶೇಷ ಗೌರವವನ್ನು ಪಡೆದಿದ್ದಾರೆ. ಮಾಹಿತಿಗೆ 9380282740

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group