spot_img
Tuesday, May 12, 2026
spot_imgspot_img

ಗೇರುಹಣ್ಣಿನ ಮೌಲ್ಯವರ್ಧನೆಯಲ್ಲಿ ತೃಪ್ತಿ ಕಂಡ “ದೀಪ್ತಿ”

-ರಾಧಾಕೃಷ್ಣ ತೊಡಿಕಾನ

ಮರದಲ್ಲಿ ಗೊಂಚಲು ಗೊಂಚಲಾಗಿ ನೇತಾಡುವ ಗೇರು ಹಣ್ಣು ಕಂಡಾಗ ಎಷ್ಟೋ ಬಾರಿ ನೆನಪುಗಳು ಬಾಲ್ಯದ ದಿನಗಳಿಗೆ ಜಾರುತ್ತವೆ. ಕೆಂಪು, ಹಳದಿ ಬಣ್ಣದ ಹಣ್ಣುಗಳನ್ನು ತಿನ್ನವುದೆಂದರೆ ವಿಶಿಷ್ಟ ಅನುಭವ. ಹಣ್ಣನ್ನು ಸೀಳಿ ಅದಕ್ಕೊಂದಿಷ್ಟು ಉಪ್ಪು ಸೇರಿಸಿ ತಿಂದರೆ ಅದರ ರುಚಿಯೇ ಬೇರೆ.

ಕರಾವಳಿ ಮತ್ತು ಮಲೆನಾಡು ಭಾಗದ ಜನರಿಗೆ ಗೇರು ಹಣ್ಣು ತೀರಾ ಪರಿಚಿತ. ಗೇರು ಹಣ್ಣಿನ ರುಚಿನೋಡದವರು ಬಹಳ ಕಡಿಮೆ. ಬಿದ್ದ ಅಥವಾ ಕೊಯ್ದ ಹಣ್ಣಿಂದ ಗೇರು ಬೀಜವನ್ನು ಬೇರ್ಪಡಿಸಿ ಹಣ್ಣನ್ನು ಗೇರುತೋಟ(ಕೊಚ್ಚಿ)ದಲ್ಲಿ ಎಸೆದು ಹೋಗುವುದು ಸಾಮಾನ್ಯ. ದನಸಾಕಣೆ ಮಾಡುವ ಕೃಷಿಕರು ದನಗಳಿಗೆ ಸ್ವಲ್ಪ ಆಹಾರವಾಗಿ ಬಳಸಿದರೂ ಉಳಿದ ಬಹುತೇಕ ಹಣ್ಣುಗಳು ಗುಡ್ಡದಲ್ಲಿ ಕೊಳೆತು ವ್ಯರ್ಥವಾಗುತ್ತದೆ.

ಆರೋಗ್ಯದಾಯಕ ಗುಣಗಳು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ ಸಾಮರ್ಥ್ಯ ಗೇರು ಹಣ್ಣಿಗಿದ್ದರೂ ಅದನ್ನು ಸಮರ್ಪಕವಾಗಿ ಬಳಸುವ ಪ್ರಯತ್ನಗಳು ಕಡಿಮೆ. ನಿರ್ಲಕ್ಷ್ಯ ಮಾಡಿರುವುದು ಜಾಸ್ತಿ. ಒಗರಿನ ಗುಣ ಮತ್ತು ಹೆಚ್ಚು ಕಾಲ ಆ ಹಣ್ಣು ಉಳಿಸಿಕೊಳ್ಳಲು ಸಾಧ್ಯವಾಗದಿರುವುದು ಕಾರಣವಿರಬಹುದು. ಹಳ್ಳಿಗಳಲ್ಲಿ ಗೇರು ಹಣ್ಣಿನ ಪಾನೀಯ ಮತ್ತು ರಸ ತಯಾರಿಸಿದರೂ ಅದಕ್ಕೆ ಮಾರುಕಟ್ಟೆ ಕಂಡುಕೊಳ್ಳುವುದು ಕಷ್ಟದ ಕೆಲಸ. ಇತ್ತೀಚಿನ ದಿನಗಳಲ್ಲಿ ಈ ಗೇರು ಹಣ್ಣಿನ ಮೌಲ್ಯವರ್ಧನೆಗೆ ಹೆಚ್ಚಿನ ಮಹತ್ವ ದೊರಕುತ್ತಿದೆ. ವಿವಿಧ ಹಣ್ಣುಗಳಿಂದ ಹೊಸ ರುಚಿಯ ಆಹಾರ ಉತ್ಪನ್ನಗಳನ್ನು ತಯಾರಿಸುವ ಪ್ರಯತ್ನಗಳು ಯಶಸ್ವಿಯಾಗುತ್ತಿವೆ. ಮನೆಮಟ್ಟಕ್ಕೆ ಸೀಮಿತವಾಗಿದ್ದ ಗೇರು ಹಣ್ಣಿನ ವಿವಿಧ ಆಹಾರ ಉತ್ಪನ್ನಗಳು ಮಾರುಕಟ್ಟೆಯಲ್ಲಿಯೂ ಕಾಣಿಸಿಕೊಳ್ಳಲಾರಂಭಿಸಿವೆ.

ಇತ್ತೀಚೆಗೆ ಮಂಗಳೂರಿನಲ್ಲಿ ರೈತ ಕುಡ್ಲ ಪ್ರತಿಷ್ಠಾನದ ನೇತೃತ್ವದಲ್ಲಿ ನಡೆದ ಗೇರು, ಹಲಸು, ಮಾವು ಮೇಳದಲ್ಲಿ ಗೇರುಹಣ್ಣಿನಿಂದ ಮಾಡಲಾದ ಹಲವು ಉತ್ಪನ್ನಗಳು ಗಮನ ಸೆಳೆದವು. ದೀಪ್ತಿ ಅವರು ತಯಾರಿಸಿದ ಗೇರು ಹಣ್ಣಿನ ಶೀರಾ ಮತ್ತು ಪಾಯಸದ ಸವಿ ನೆನಪಿನಲ್ಲಿ ಉಳಿಯುವಂತೆ ಮಾಡಿತು.

ಬಹಳ ಮಂದಿ ಇಂತಹ ಹೊಸರುಚಿಯ ಪ್ರಯತ್ನಗಳನ್ನು ಮಾಡಿದರಾದರೂ ದೀಪ್ತಿಯವರು ಹೊಸ ಪ್ರಯತ್ನವಾಗಿ ಪಾಯಸ ಹಾಗೂ ಶೀರಾವನ್ನು ಮೇಳದ ಮಳಿಗೆಯಲ್ಲಿ ಪ್ರದರ್ಶನ ಮತ್ತು ಮಾರಾಟದ ಮೂಲಕ ಮಾರುಕಟ್ಟೆಗೆ ಪರಿಚಯಿಸಿದರು. ಈ ಹೊಸ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಕೊಳೆತು ಹಾಳಾಗುವ ಗೇರು ಹಣ್ಣನ್ನು ಬೇರೆಬೇರೆ ರೀತಿಯಲ್ಲಿ ಉಪಯೋಗಿಸಿ ಮೌಲ್ಯವರ್ಧನೆಗೊಳಿಸಿದರೆ ಸಂಪನ್ಮೂಲಗಳ ಬಳಕೆಯಾಗುತ್ತದೆ. ಜೊತೆಗೆ ಗ್ರಾಮೀಣ ಭಾಗದಲ್ಲಿ ಲಭ್ಯವಿರುವ ಉತ್ಪನ್ನಗಳಿಂದ ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಬಹುದು.

ದ.ಕ. ಜಿಲ್ಲೆಯ ಪುತ್ತೂರಿನವರಾದ ದೀಪ್ತಿ ಪಿ.ಎಂ ಅವರು ಕೃಷಿಕ ಕುಟುಂಬದ ಹಿನ್ನಲೆಯುಳ್ಳವರು. ಬೆಂಗಳೂರಿನಲ್ಲಿ ವಾಸ್ತವ್ಯವಿರುವ  ಅವರು ಎಂ.ಎಸ್ಸಿ ಪದವೀಧರರು. ಎರಡು ವರ್ಷ ಉದ್ಯೋಗದಲ್ಲಿದ್ದರು. ಅನಿವಾರ್ಯವಾಗಿ ಉದ್ಯೋಗವನ್ನು ತೊರೆಯಬೇಕಾಯಿತು. ನಂತರ ಹವ್ಯಾಸವಾಗಿ ಬೆಳೆಸಿಕೊಂಡ ಕರಕುಶಲ ವಸ್ತುಗಳ ತಯಾರಿಯತ್ತ ಗಮನ ಹರಿಸಿದರು.

ಈ ನಡುವೆ ಯೂ ಟ್ಯೂಬ್‌ನಲ್ಲಿದ್ದ ಹೊಸ ರುಚಿಯ ಅಡುಗೆ ವಿಧಾನಗಳು ಅವರನ್ನು ಆಕರ್ಷಿಸಿತು. ಅದರ ಪ್ರೇರಣೆಯಿಂದ ಗೇರು ಹಣ್ಣಿನ ಶೀರಾ ಮತ್ತು ಪಾಯಸವನ್ನು ತಯಾರಿಸಿದರು. ಬಳಿಕ ಅದನ್ನು ಮಾರುಕಟ್ಟೆಗೆ ಪರಿಚಯಿಸುವ ಯೋಚನೆಯೂ ಮೂಡಿತು. ಮೇಳದಲ್ಲಿ ಈ ಉತ್ಪನ್ನಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನಲೆಯಲ್ಲಿ ಮದುವೆ, ಸಭೆ ಹಾಗೂ ಇತರ ಸಮಾರಂಭಗಳಿಗೆ ಬೇಡಿಕೆ ಬಂದರೆ ತಯಾರಿಸಿ ನೀಡುವ ಯೋಜನೆ ಅವರದಾಗಿದೆ.

ವರ್ಷದಲ್ಲಿ ಎರಡು ಮೂರು ತಿಂಗಳಷ್ಟೇ ಲಭ್ಯವಾಗುವ ಗೇರು ಹಣ್ಣನ್ನು ಮನೆ ಬಳಕೆಗೆ ಮಾತ್ರ ಸೀಮಿತಗೊಳಿಸದೆ ಮೌಲ್ಯವರ್ಧಿತ ಉತ್ಪನ್ನಗಳನ್ನಾಗಿ ರೂಪಿಸಿದರೆ ಗ್ರಾಮೀಣ ಮಟ್ಟದಲ್ಲಿ ಕಡಿಮೆ ಬಂಡವಾಳದಲ್ಲಿ ಸ್ವದ್ಯೋಗ ಉದ್ಯಮವನ್ನು ಹುಟ್ಟು ಹಾಕಲು ಸಾಧ್ಯವಾಗಬಹುದು.

ಇದಲ್ಲದೆ ಅವರು ಕರಕುಶಲ ವಸ್ತುಗಳ ತಯಾರಿಯಲ್ಲಿ ತೊಡಗಿಕೊಂಡಿರುವುದರಿಂದ ಕಿವಿಯೋಲೆ, ಮ್ಯಾಕ್ರೇಂಮ್ ಚೀಲ, ಡ್ರೀಮ್ ಕ್ರೀಯೆಚರ್ ಹಾಗೂ ಉಡುಗೊರೆಯಾಗಿ ನೀಡಬಲ್ಲ ಇನ್ನಿತ್ತರ ಕರಕುಶಲ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿಗೆ: 7892847231

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group