ಮನೆಯ ಅಂಗಳದಿಂದ ಹಿಡಿದು ದಟ್ಟ ಕಾಡಿನವರೆಗೆ ಬೆಳೆಯುವ ಸಸ್ಯ ಸಂಕುಲಗಳೆಲ್ಲವೂ ಪ್ರಕೃತಿಯ ಅಮೂಲ್ಯ ಕೊಡುಗೆಗಳಾಗಿವೆ.. ಕಳೆಗಿಡಗಳೆಂದೋ, ಅನುಪಯುಕ್ತವೆಂದೋ ಯಾವುದನ್ನೂ ಕಡೆಗಣಿಸುವಂತಿಲ್ಲ. ಬಹಳ ಗಿಡಗಳಲ್ಲಿ ಔಷಧೀಯ ಗುಣಗಳಿವೆ. ಅದರ ರಸಗಳಲ್ಲಿ ರೋಗ್ಯ ವರ್ಧಕ ಜೀವ ಸತ್ವಗಳಿವೆ. ಅವುಗಳ ಎಲೆ, ಬೇರು, ತೊಗಟೆ, ಹೂವು, ಕಾಯಿ, ಹಣ್ಣುಗಳು ವಿವಿಧ ರೀತಿಯ ಗಿಡ ಮೂಲಿಕೆ ಔಷಧಿ ಹಾಗೂ ಆಹಾರವಾಗಿ ಉಪಯೋಗವಾಗುತ್ತದೆ.
ಗಿಡ ಮೂಲಿಕೆಗಳು ಎಲ್ಲಾ ಪ್ರದೇಶಗಳಲ್ಲಿ ಇವೆಯಾದರೂ ಮಲೆನಾಡು ಭಾಗದಲ್ಲಿ ಜೀವವೈವಿಧ್ಯತೆಯ ಸಸ್ಯ ಸಂಪತ್ತು ಅನನ್ಯವಾದುದು. ಇಲ್ಲಿರುವ ಅನೇಕ ಗಿಡ, ಮರ, ಬಳ್ಳಿಗಳಲ್ಲಿ ಕೆಲವು ಆಹಾರಕ್ಕೆ ಉಪಯೋಗವಾದರೆ ಮತ್ತೆ ಕೆಲವು ಔಷಧಿಯಾಗಿ ಬಳಕೆಯಾಗುತ್ತಿದೆ. ಔಷಧೀಯ ಸಸ್ಯಗಳ ಮಹತ್ವವನ್ನು ಅರಿತ ಹಿರಿಯರು ನಾಟಿ ವೈದ್ಯ ಪದ್ಧತಿಯ ಪರಂಪರೆಯನ್ನು ತಲೆಮಾರಿನಿಂದ ತಲೆಮಾರಿಗೆ ಉಳಿಸಿಕೊಂಡು ಬಂದಿದ್ದಾರೆ. ಅವುಗಳಲ್ಲಿ ಕೆಲವು ಗಿಡಮೂಲಿಕೆಗಳು ಎಣ್ಣೆ, ಕಷಾಯ, ಗುಳಿಗೆ ಸೇರಿದಂತೆ ವಿವಿಧ ಔಷಧಿಯ ಉತ್ಪನ್ನಗಳಾಗಿವೆ. ಗುಡ್ಡಗಾಡು ಪ್ರದೇಶದ ತೇವಾಂಶ ಹೆಚ್ಚಿರುವ ಕಡೆಗಳಲ್ಲಿ, ಕಲ್ಲು ಬಂಡೆಯ ಸಂದುಗಳಲ್ಲಿ ಮೇಲೆದ್ದ ಹಸಿರಿನ ನೂಲು ತೂಗು ಬಿಟ್ಟಂತೆ ನೇತಾಡುವ ಅಪರೂಪದ ಬಳ್ಳಿಯೊಂದು ಸಿಕ್ಕಿದರೆ ಅದು ತೆರೆದಿಡುವ ಅನುಭವ ವಿಶಿಷ್ಟವಾದುದು. ಪ್ರಾಚೀನ ಕಾಲದಲ್ಲಿ ಯಜ್ಞ ಯಾಗಾದಿಗಳಲ್ಲಿ, ಸೋಮಪಾನ ತಯಾರಿಯಲ್ಲಿ ಬಳಸುಲಾಗುತ್ತಿದ್ದ ಸೋಮಲತೆಯಂತೆ ಮೇಲ್ನೋಟಕ್ಕೆ ಕಂಡರೂ ಈ ಹಸಿರು ಕಾಂಡದ ಬಳ್ಳಿ ಅದಕ್ಕಿಂತ ವಿಭಿನ್ನವಾದುದು.

ಏನಿದರ ವಿಶೇಷ
ಈ ಹಸಿರ ಬಳ್ಳಿಗೆ ಎಲೆಗಳಿಲ್ಲ. ಅದರ ಮೂಲ ಹುಡುಕಿದರೆ ಬೇರುಗಳಿಲ್ಲ. ಇದರ ಹುಟ್ಟು ಬದುಕು ಕೆದಕಿದರೆ ಅಚ್ಚರಿಯ ಭಾವಗಳೇ ಹೊರತು ಅದರ ನೆಲೆ ಮೂಲದ ಗಟ್ಟಿ ಕುರುಹುಗಳಿಲ್ಲ. ಕವಲೊಡೆದು ಬೆಳೆಯುತ್ತ ಸಾಗುವ ಹಗ್ಗದಂತ ಹಸಿರು ಬಳ್ಳಿಯಿದು. ಸಾಮಾನ್ಯವಾಗಿ ಸಸ್ಯಗಳು ಬೇರು, ಗಡ್ಡೆ, ಬೀಜದ ನೆಲದ ಆಶ್ರಯ ಪಡೆದು ವಂಶಾಭಿವೃದ್ಧಿಯನ್ನು ಮಾಡಿಕೊಂಡು ಬದುಕುತ್ತವೆ. ಆದರೆ ಈ ಹಸಿರ ಬಳ್ಳಿಗೆ ಅದಾವ ಸೌಲಭ್ಯವು ಇಲ್ಲ. ಎಲ್ಲವೂ ಪ್ರಕೃತಿಯ ಅನುಸಂಧಾನದೊಂದಿಗೆ ನಡೆಯುವ ಹೊರನೋಟಕ್ಕೆ ಕಾಣದ ಕ್ರಿಯೆ.
ವಿಡಿಯೋ ಕೂಡ ನೋಡಿ:
ವಿಸ್ಕ್ ಪರ್ನ್ಎಂದು ಕರೆಯಲಾಗುವ ಈ ಬಳ್ಳಿ ಕನ್ನಡದಲ್ಲಿ ಪೊರಕೆ ಜೀವಿ ಗಿಡ, ತುಳುವಿನಲ್ಲಿ “ಮುದೆಲ್‌ದಾಂತಿ ಬೂರು” ಎಂದು ಕರೆಸಿಕೊಳ್ಳುತ್ತಾದರೂ “”ಬೇರು ಎಲೆಗಳಿಲ್ಲದ ಬೀಳು”ವಿಗೆ ಬೇರೆ ಬೇರೆ ಪ್ರದೇಶದ ಜನ ಬೇರೆ ಬೇರೆ ಹೆಸರಿನಿಂದ ಗುರುತಿಸಿರಬಹುದು.
ಪ್ರಾಚೀನ ಇತಿಹಾಸವನ್ನು ಹೊಂದಿರುವ ಈ ಬಳ್ಳಿಗೆ ಬೇರಿಲ್ಲ, ಎಲೆಗಳಿಲ್ಲ. ಅದರ ಹಸಿರು ಕಾಂಡಗಳ ಮೂಲಕವೇ ಜೀವಶಕ್ತಿಯ ಸಂಚಲನ. ತುದಿಯೆಲ್ಲಿ ಎಂಬುದು ಕಂಡುಕೊಳ್ಳಬಹುದು. ಬುಡದ ಮೂಲ ಕುತೂಹಲವನ್ನು ಕೆರಳಿಸದಿರದು. ಆದರೆ ವಂಶಾಭಿವೃದ್ಧಿ ಮತ್ತು ಮುಂದಿನ ತಲೆಮಾರಿಗೆ ಸಾಗಲು ಅದಕ್ಕೆ ಅದರದೇ ಆದ ದಾರಿಗಳಿವೆ. ಹಸಿರು ಬಳ್ಳಿಯು ಕವಲೊಡೆಯುತ್ತಾ ಮರಗಿಡಗಳ ಮೇಲೆ ವಿಸ್ತರಿಸಿಕೊಳ್ಳುವ ಈ ಬಳ್ಳಿಯಲ್ಲಿ ಅತೀ ಸಣ್ಣ ಸಣ್ಣ ಗುಂಡಗಿನ ಹಸಿರು ಕಾಯಿಗಳು ಬಲಿತು ಅದರಲ್ಲಿರುವ ಸೂಕ್ಷö್ಮ ಜೀವಕೋಶಗಳು ಗಾಳಿಯಲ್ಲಿ ಪರಿಸರಕ್ಕೆ ಪಸರಿಸಿದಾಗ ಮರು ಹುಟ್ಟು ಪಡೆಯುತ್ತದೆ.
ಉಪಯೋಗ
ಈ ಬಳ್ಳಿ ಪುರಾತನದೆಂಬ ಹೆಗ್ಗಳಿಕೆಯಿದೆ. ಗಿಡಮೂಲಿಕೆ ಸಸ್ಯಗಳಂತೆ ನಾಟಿ ಔಷಧವಾಗಿ ಬಳಕೆಯಾಗುತ್ತದೆ. ಆರೋಗ್ಯವರ್ಧಕವಾಗಿದೆ. ಈ ಹಸಿರು ಬಳ್ಳಿಯ ರಸವನ್ನು ಪೇಯದಂತೆ ಕುಡಿಯಬಹುದು.. ಕಾಡು ಗುಡ್ಡಗಳಿಂದ ಆಯ್ದು ತಂದು ಚೆನ್ನಾಗಿ ತೊಳೆದು ಸ್ವಲ್ಪ ಜಜ್ಜಿ ನೀರು ಹಾಕಿ ಹಿಂಡಿದಾಗ ಅದರಲ್ಲಿರುವ ಲೋಳೆಯುಕ್ತ ಹಸಿರು ದ್ರವವು ಹೊರಬರುತ್ತದೆ. ಅದನ್ನು ಸೋಸಿ ಅದಕ್ಕೆ ಸ್ವಲ್ಪ ಬೆಲ್ಲ, ಏಲಕ್ಕಿ, ಜೀರಿಗೆಯನ್ನು ಮಿಶ್ರ ಮಾಡಿ ಪೇಯದ ರೂಪದಲ್ಲಿ ಕುಡಿದರೆ ದೇಹಕ್ಕೆ ತಂಪಾದ ಅನುಭವ. ಮನಸ್ಸಿಗೆ ಮುದ ನೀಡುತ್ತದೆ
ಈ ಬಳ್ಳಿಯ ರಸವನ್ನು ಸೇವಿಸುವುದರಿಂದ ಬಾಯಿ ಹುಣ್ಣು ಹಾಗೂ ಇತರ ಕೆಲವು ಸೋಂಕುಗಳ ನಿವಾರಣೆಗೆ ಸಹಕಾರಿಯಾಗುತ್ತದೆ. ಎಂದು ಹೇಳಲಾಗುತ್ತಿದೆ. ಇತರ ಗಿಡಮೂಲಿಕೆಯಂತೆ ಇದನ್ನೂ ಮಿತವಾಗಿ ಬಳಸಿದರೆ ಹಿತ. ಬೇರು ಎಲೆಗಳಿಲ್ಲದ ಹಸಿರು ಬಳ್ಳಿ ಎಂದಿಗೂ ನೆನಪಿನಲ್ಲಿ ಉಳಿಯುವ ಸಸ್ಯ.
ಬರಹ : ರಾಧಾಕೃಷ್ಣತೊಡಿಕಾನ, ವೀಡಿಯೋ ಮಾಹಿತಿ : ಚಂದ್ರನಾಥ್ ಬಜಗೋಳಿ
ಚಿತ್ರ-ವೀಡಿಯೋ: ಪ್ರಸಾದ್ ಶೆಣೈ






