spot_img
Friday, October 11, 2024
spot_imgspot_img
spot_img
spot_img

ಮಡಕೆ ಬದುಕಿನ ಕುಡಿಕೆ: ಮಣ್ಣಿನ ಪಾತ್ರೆಯ ಕಾಯಕದಲ್ಲೇ ಬೆಳಗಿದ ಶ್ರಮಜೀವಿಗಳು

-ನವಜಾತ ಕಾರ್ಕಳ

ಮನೆ ಮನೆಗಳಲ್ಲಿ ಮಣ್ಣಿನ ಪಾತ್ರೆಗಳೇ ತುಂಬಿದ್ದ ದಿನಗಳಿದ್ದವು. ಬರಬರುತ್ತಾ ಹೆಚ್ಚು ಬಾಳಿಕೆ ಬರುವ ಹಾಗೂ ಆಕಸ್ಮಾತ್ ಕೈಜಾರಿದರೂ ಒಡೆದಯದ ಅಲ್ಯೂಮಿನಿಯಮ್, ಸ್ಟೀಲ್ ಪಾತ್ರೆಗಳು ಅಡುಗೆ ಮನೆಯ ಆದ್ಯತೆಗಳಾದವು. ಮಣ್ಣಿನ ಪಾತ್ರೆಗಳ ಬಳಕೆ ಕಡಿಮೆ ಆದರೂ ಅದರ ವೈಶಿಷ್ಟ್ಯತೆ ಅಸ್ತಿತ್ವವನ್ನು ಅಲುಗಾಡಿಸಲು ಸಾಧ್ಯವಾಗಲಿಲ್ಲ. ಸಾಂಪ್ರದಾಯಿಕ ಮಣ್ಣಿನ ಪಾತ್ರೆಗಳು ಜನರ ಮನದಾಳದಲ್ಲಿ ಅಚ್ಚೊತ್ತಿ ಉಳಿದಿವೆ. ಆಧುನಿಕತೆ ಎಷ್ಟೇ ಮೈಗೂಡಿಸಿಕೊಂಡರೂ ಮಣ್ಣಿನ ಪಾತ್ರೆಯ ನಂಟು ಬಿಟ್ಟು ಹೋಗಿಲ್ಲ. ಹೊಸ ಮೆರುಗಿನೊಂದಿಗೆ ಮತ್ತೆ ಮಣ್ಣಿನ ಪಾತ್ರೆಗಳು ಮನೆ ಸೇರುತ್ತಿವೆ.

ಮಣ್ಣಿನ ಪಾತ್ರೆಗಳ ತಯಾರಿಕೆಯನ್ನೇ ಪರಂಪರಾಗತ ವೃತ್ತಿಯನ್ನಾಗಿಸಿ ಜೀವನೋಪಾಯ ಕಂಡುಕೊಂಡ ಸಮುದಾಯವಿದೆ. ಸಾಧಕರಿದ್ದಾರೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಾರ್ಕಳ ಪೇಟೆಗೆ ಸಮೀಪದ ಕುಕ್ಕುಂದೂರು ಗ್ರಾಮದ ನಕ್ರೆಯಲ್ಲಿರುವ ನಾರಾಯಣ ಮೂಲ್ಯ ಮತ್ತು ಸುಂದರಿ ಮಡಕೆ ಮಾಡುವುದನ್ನೇ ಉದ್ಯೋಗವಾಗಿಸಿ ಬದುಕು ಕಟ್ಟಿಕೊಂಡವರು. ಎಪ್ಪೆತ್ತೆöÊದರ ಆಸುಪಾಸಿನ ನಾರಾಯಣ ಮೂಲ್ಯ ಮತ್ತು ಎಪ್ಪರ ಗಡಿಯಂಚಿನ ಸುಂದರಿ ಅವರು ೫೩ ವರ್ಷಗಳಿಂದ ಮಣ್ಣಿನ ಒಡನಾಟದಿಂದ ಜೀವನದ ಏಳುಬೀಳುಗಳನ್ನು ಕಂಡವರು. ಅವರ ಪಾತ್ರೆ ಪಗಡೆಗಳು ಸಾವಿರಾರು ಮನೆಯನ್ನು ಸೇರಿವೆ. ಬಾಲ್ಯದಲ್ಲೇ ಪರಂಪರಾಗತ ಮಣ್ಣಿನ ಮಡಕೆ ಮಾಡುವ ಕಾಯಕದಲ್ಲಿ ತೊಡಗಿಕೊಂಡ ಇಬ್ಬರೂ ಮದುವೆಯ ನಂತರ ಅದನ್ನೇ ಮುಂದುವರಿಸಿ ಸತಿಪತಿ ತಿಗರಿಯ ತಿರುಗಿಸಿ ಮಣ್ಣಿನ ಮುದ್ದೆಗೆ ಆಕಾರ ನೀಡುತ್ತಾ ಅದರಲ್ಲಿಯೇ ಸಂತೃಪ್ತಿ ಪಡೆದವರು.

ಪ್ರಾಕೃತಿಕವಾಗಿ ಸಿಗುವ ಆವೆಮಣ್ಣು, ಜೇಡಿಮಣ್ಣನ್ನು ತಮ್ಮ ಕುಶಲ ಕಲೆಗಾರಿಕೆಯಲ್ಲಿ ಬಳಸಿಕೊಂಡು ಕುಟ್ಟಿ ತಟ್ಟಿ ಹದಗೊಳಿಸಿ ಪರಿಸರ ಸ್ನೇಹಿಯಾದ ಆಕರ್ಷಕವಾದ ಪಾತ್ರೆಯನ್ನು ಸುದೀರ್ಘ ಕಾಲದಿಂದ ತಯಾರಿಸುತ್ತಲೇ ಬಂದಿದ್ದಾರೆ. “ಮಣ್ಣಿಂದ ಕಾಯ, ಮಣ್ಣಿಂದ ಸಕಲ ವಸ್ತುಗಳೆಲ್ಲಾ, ಮಣ್ಣು ಬಿಟ್ಟವರಿಗೆ ಆಧಾರವಿಲ್ಲ” ಎಂಬಂತೆ ದುಡಿಯುತ್ತಾ ಮಣ್ಣಿನಿಂದ ಮಡಕೆ, ಕುಡಿಕೆ, ಚಟ್ಟಿ, ಹೂಜಿ, ಭರಣಿ, ರೊಟ್ಟಿ ಕಾವಲಿ, ಸೇರಿದಂತೆ ಸಣ್ಣ ದೊಡ್ಡ ಗಾತ್ರದ ಹಲವು ಬಗೆಯ ಪಾತ್ರೆಗಳನ್ನು ಜನರ ಅನುಕೂಲಕ್ಕೆ ಅನುಗುಣವಾಗಿ ಮಾಡಿಕೊಟ್ಟಿರುವುದು ಇವರ ಹೆಗ್ಗಳಿಕೆ.

ಚಕ್ರದಲ್ಲಿ ರೂಪು ಪಡೆದ ಪಾತ್ರೆಗಳನ್ನು ಒಣಗುವ ಮುನ್ನವೇ ಸಣ್ಣ ಚಪ್ಪಟೆ ಕಲ್ಲು ಮತ್ತು ಸಟುಗದಾಕಾರದ ಮರದ ಹಿಡಿಕೆಯಿಂದ ತಟ್ಟಿ ಇನ್ನಷ್ಟು ಗಟ್ಟಿಗೊಳಿಸುತ್ತಾರೆ. ಒಣಗಿಸಿದ ಮೇಲೆ ಸುಟ್ಟು ಸುದೃಢಗೊಳಿಸದ ನಂತರ ಬಳಕೆದಾರನತ್ತ ಪಯಣ. ತಿಗರಿಯಲ್ಲಿರಿಸಿದ ಮಣ್ಣ ಮುದ್ದೆಗೆ ಆಕಾರ ಕೊಡುವ ಕೈಚಳಕ ಸುಂದರಿ ಅವರದು. ಉಳಿದ ಕೆಲಸಗಳಲ್ಲಿ ತಾನೂ ಭಾಗಿ ಎನ್ನತ್ತಾರೆ ನಾರಾಯಣ ಮೂಲ್ಯರು.

ಮಡಿಕೆ ಮಾಡುವುದೂ ಕಲೆಗಾರಿಕೆಯೇ. ತಿರುಗುವ ಚಕ್ರದಲ್ಲಿರುವ ಮಣ್ಣಿನ ಮುದ್ದೆಗೆ ಕೈ ಬೆರಳುಗಳ ಸ್ಪರ್ಶದಿಂದ ನೋಡು ನೋಡುತ್ತಿದ್ದಂತೆಯೇ ಮಣ್ಣನ್ನು ಬೇಕಾದ ಆಕಾರದಲ್ಲಿ ಕಟೆದು ನಿಲ್ಲಿಸುತ್ತದೆ. ಪರಿಸರ ಸ್ನೇಹಿಯಾದ ಈ ಮಣ್ಣಿನ ಪಾತ್ರೆಯಲ್ಲಿ ಮಾಡಿದ ಅಡುಗೆಗೆ ರುಚಿ ಹೆಚ್ಚು. ಸಸ್ಯಾಹಾರವೇ ಇರಲಿ, ಮಾಂಸಾಹಾರವೇ ಆಗಲಿ ಮಣ್ಣಿನ ಪಾತ್ರೆ (ಚಟ್ಟಿ)ಯಲ್ಲಿ ಮಾಡಿದರೆ ಅಡುಗೆಯ ಸ್ವಾದ ಹೆಚ್ಚುತ್ತದೆ. ಬೇಗನೆ ಹಳಸುವುದಿಲ್ಲ. ಜಾಗರೂಕತೆಯಿಂದ ಮಣ್ಣ ಪಾತ್ರೆ ಬಳಸಿದರೆ ಕೆಲ ವರ್ಷಗಳ ಬಾಳಿಕೆ ಬರುತ್ತದೆ ಎನ್ನುತ್ತಾರೆ ಬಳಕೆದಾರರು.

ಉಡುಪಿ ಜಿಲ್ಲೆಯ ಕಾಪುವಿನಿಂದ ಆವೆಮಣ್ಣನ್ನು ಹಾಗೂ ಜೇಡಿ ಮಣ್ಣನ್ನು ಆಸುಪಾಸಿನಿಂದ ಕಲೆ ಹಾಕುತ್ತಾರೆ. ಹಿಂದೆ ಹಳ್ಳಿಗಳಲ್ಲಿ ಸಂಚರಿಸಿ ಮಡಕೆ ಮಾರಾಟ ಮಾಡಲಾಗುತ್ತಿತ್ತು. ಈಗ ಆಸಕ್ತರು ಅವರಲ್ಲಿಗೆ ಬಂದು ಕೊಂಡೊಯ್ಯುತ್ತಾರೆ. ಕೆಲಸ ಮಾಡಲು ಮನಸ್ಸಿದ್ದರೂ ವಯಸ್ಸು ಆಗಿದೆ. ಈಗ ಹೆಚ್ಚು ಕೆಲಸ ಮಾಡಲಾಗುತ್ತಿಲ್ಲ ಎನ್ನುತ್ತಾರೆ ಗಂಡ ಹೆಂಡತಿ. ಮೊಮ್ಮಗನಿಗೆ ರಜೆಯಿದ್ದಾಗ ಆತನ ಸಹಾಯ ಪಡೆಯುತ್ತಾರೆ. ಕೃಷಿ ಮೇಳಗಳಿಗೆ ಹೋಗಿ ಮಡಕೆಗಳ ಪ್ರದರ್ಶನ-ಮಾರಾಟ ಪ್ರಾತ್ಯಕ್ಷಿಕೆ ನೀಡುತ್ತಾರೆ. ವೃತ್ತಿಗೆ ವಿದಾಯ ಹೇಳುವ ಮನಸ್ಸು ಇಬ್ಬರಲ್ಲೂ ಇಲ್ಲ. ಸಾಧ್ಯವಾದಷ್ಟು ಕಾಲ ಮುಂದುವರಿಸುವ ಆಸೆ. ಕಾರ್ಕಳ ಸಂತೆಯ ದಿನ ಸುಂದರಿ ಅವರು ಪಾತ್ರೆಗಳನ್ನು ತಂದು ಮಾರಾಟ ಮಾಡುತ್ತಾರೆ. ಇದ್ದುದರಲ್ಲಿ ತೃಪ್ತಿಯ ಜೀವನ ಅವರದು.

ಚಿತ್ರ: ರಾಮ್ ಅಜೆಕಾರ್

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group