-ರಾಧಾಕೃಷ್ಣ ತೊಡಿಕಾನ, ಪ್ರಸಾದ್ ಶೆಣೈ ಕಾರ್ಕಳ
ಗೋವಿನ ಹಾಲಿನ ಉತ್ಪನ್ನಗಳು ಒಂದೆಡೆಯಾದರೆ ಗೋಮಯ ಮತ್ತು ಗೋಮೂತ್ರವನ್ನೂ ಬಳಸಿಕೊಂಡು ವಿವಿಧ ಉತ್ಪನ್ನಗಳನ್ನು ತಯಾರಿಸಿ ಆದಾಯ ಗಳಿಸಲು ಸಾಧ್ಯವಿದೆ. ಗೋಮಯದಿಂದ ಅಗರಬತ್ತಿ, ಸೊಳ್ಳೆ ಬತ್ತಿ, ಧೂಪ ಸೇರಿದಂತೆ ಹಲವು ಉತ್ಪನ್ನಗಳನ್ನು ತಯಾರಿಸುವ ಪ್ರಯತ್ನಗಳು ಈಗಾಗಲೇ ನಡೆದಿವೆ. ಕೆಲವರು ಮಾರುಕಟ್ಟೆಯಲ್ಲಿ ಯಶಸ್ಸು ಕಂಡರೆ, ಇನ್ನು ಕೆಲವರು ಉತ್ಪನ್ನಗಳ ಮಾರಾಟದಲ್ಲಿ ಸವಾಲುಗಳನ್ನು ಎದುರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಗೋಮಯದಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಿ, ಅವುಗಳಿಗೆ ಮಾರುಕಟ್ಟೆ ರೂಪಿಸುವ ಮೂಲಕ ತಮ್ಮದೇ ಆದ ಉದ್ಯಮವನ್ನು ಕಟ್ಟಿಬೆಳೆಸಿದವರು ಹಾವೇರಿ ಜಿಲ್ಲೆಯ ಅಗಡಿ ಗ್ರಾಮದ ಕುಲದೀಪ್ ಕುಲಕರ್ಣಿ.
ರೈತ ಕುಟುಂಬದಲ್ಲಿ ಜನಿಸಿದ ಕುಲದೀಪ್ ಕುಲಕರ್ಣಿ ಅವರು ಎಂಬಿಎ ಪದವೀಧರರು. ಕೃಷಿಯಿಂದ ಬಂದ ಆದಾಯದ ನೆರವಿನಿಂದಲೇ ಶಿಕ್ಷಣವನ್ನು ಪೂರ್ಣಗೊಳಿಸಿದ ಅವರು, ಮುಂದೆ ನಗರದತ್ತ ಮುಖ ಮಾಡಿದರು. ಬೆಂಗಳೂರಿನ ಹಣಕಾಸು ಸಂಸ್ಥೆಯೊಂದರಲ್ಲಿ ಉದ್ಯೋಗಕ್ಕೆ ಸೇರಿದರು. ಉತ್ತಮ ವಿದ್ಯಾಭ್ಯಾಸ, ನಗರದಲ್ಲಿ ಉದ್ಯೋಗ ಹಾಗೂ ಸುಸಜ್ಜಿತ ಬದುಕಿನ ಅವಕಾಶಗಳಿದ್ದರೂ, ಅವರ ಮನಸ್ಸು ಮಾತ್ರ ಹಳ್ಳಿಯ ಕೃಷಿಭೂಮಿಯತ್ತಲೇ ಸುತ್ತುತ್ತಿತ್ತು.

ಹಿರಿಯರು ಬೆವರು ಸುರಿಸಿ ಬೆಳೆಸಿದ ಕೃಷಿಭೂಮಿ ಭವಿಷ್ಯದಲ್ಲಿ ಉತ್ತಮ ಬದುಕಿಗೆ ಆಧಾರವಾಗಬಲ್ಲದು ಎಂಬ ನಂಬಿಕೆ ಅವರಲ್ಲಿತ್ತು. ನಗರದ ಉದ್ಯೋಗದಲ್ಲಿ ದುಡಿಯುವುದಕ್ಕಿಂತ ತನ್ನ ಊರಿನಲ್ಲೇ ಕೃಷಿ ಹಾಗೂ ಕೃಷಿ ಆಧಾರಿತ ಉದ್ಯಮದಲ್ಲಿ ತೊಡಗಿಸಿಕೊಂಡರೆ ಏನಾದರೂ ಸಾಧಿಸಬಹುದು ಎಂಬ ಆಲೋಚನೆ ಬಲವಾಯಿತು. ಬೆಂಗಳೂರಿನ ಉದ್ಯೋಗಕ್ಕೆ ವಿದಾಯ ಹೇಳಿ ಅಗಡಿ ಗ್ರಾಮಕ್ಕೆ ಮರಳಿದರು.
ನಗರದ ಉದ್ಯೋಗ ಬಿಟ್ಟು ಹಳ್ಳಿಗೆ ಬಂದಾಗ, ‘ಇಲ್ಲಿಗೆ ಬಂದು ಏನು ಮಾಡುತ್ತೀಯ?’ ಎಂಬ ಪ್ರಶ್ನೆಗಳು ಎದುರಾದವು. ಆದರೆ ಇಂತಹ ಪ್ರಶ್ನೆಗಳಿಗೆಲ್ಲ ಉತ್ತರಿಸುತ್ತಾ ಸಮಯ ಕಳೆಯುವ ಬದಲು, ತಮ್ಮ ಕನಸನ್ನು ನನಸಾಗಿಸುವತ್ತ ಗಮನ ಹರಿಸಿದರು. ಕೃಷಿಯೊಂದಿಗೆ ಗೋವುಗಳನ್ನು ಆಧರಿಸಿದ ಸಣ್ಣ ಉದ್ಯಮವನ್ನು ಆರಂಭಿಸುವ ಯೋಜನೆ ರೂಪಿಸಿದರು.

ಗೋಮಯದಿಂದ ಮೌಲ್ಯವರ್ಧಿತ ಉತ್ಪನ್ನ:
ಕೃಷಿಕರ ಬದುಕಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಗೋವುಗಳನ್ನು ಉದ್ಯಮದ ಮೂಲವಾಗಿಸಿಕೊಳ್ಳಲು ನಿರ್ಧರಿಸಿದ ಕುಲದೀಪ್, ಗೋಮಯದಿಂದ ತಯಾರಿಸಬಹುದಾದ ಉತ್ಪನ್ನಗಳ ಕುರಿತು ಮಾಹಿತಿ ಸಂಗ್ರಹಿಸಿದರು. ದಿನನಿತ್ಯ ಅನೇಕ ಮನೆಗಳಲ್ಲಿ ಬಳಕೆಯಾಗುವ ಅಗರಬತ್ತಿ ತಯಾರಿಕೆಯತ್ತ ಅವರ ಗಮನ ಹರಿಯಿತು. ಗೋಮಯವನ್ನು ಕಚ್ಚಾ ವಸ್ತುವಾಗಿ ಬಳಸಿಕೊಂಡು ಅಗರಬತ್ತಿ, ಧೂಪ ಮತ್ತಿತರ ಉತ್ಪನ್ನಗಳನ್ನು ತಯಾರಿಸುವ ಯೋಜನೆಯನ್ನು ಕಾರ್ಯರೂಪಕ್ಕಿಳಿಸಿದರು.ಈ ಉದ್ದೇಶಕ್ಕಾಗಿ ಸ್ವತಃ ಆಕಳುಗಳನ್ನು ಸಾಕುವುದರ ಜೊತೆಗೆ, ಇತರ ರೈತರಿಂದಲೂ ಗೋಮಯವನ್ನು ಖರೀದಿಸುತ್ತಾರೆ. ಗೋಮಯವನ್ನು ಮೌಲ್ಯವರ್ಧನೆ ಮಾಡುವುದರೊಂದಿಗೆ ಸ್ಥಳೀಯ ರೈತರಿಂದ ಕಚ್ಚಾ ವಸ್ತುಗಳನ್ನು ಸಂಗ್ರಹಿಸುವ ವ್ಯವಸ್ಥೆಯನ್ನೂ ರೂಪಿಸಿಕೊಂಡಿದ್ದಾರೆ.
ಯಾವುದೇ ಹೊಸ ಉದ್ಯಮ ಆರಂಭಿಸುವಾಗ ಉತ್ಪನ್ನ ತಯಾರಿಕೆಯಷ್ಟೇ ಅದರ ಮಾರುಕಟ್ಟೆ ನಿರ್ಮಾಣವೂ ಮುಖ್ಯ. ಕುಲದೀಪ್ ಅವರಿಗೂ ಆರಂಭದಲ್ಲಿ ಇದೇ ದೊಡ್ಡ ಸವಾಲಾಗಿತ್ತು. ಹೊಸ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸಿ, ಅವುಗಳ ಬಗ್ಗೆ ವಿಶ್ವಾಸ ಮೂಡಿಸುವುದು ಸುಲಭವಾಗಿರಲಿಲ್ಲ. ಆರಂಭದಲ್ಲಿ ಊರಿನ ಜನರೇ ಅವರ ಮೊದಲ ಗ್ರಾಹಕರಾದರು. ಉತ್ಪನ್ನಗಳಿಗೆ ದೊರೆತ ಉತ್ತಮ ಪ್ರತಿಕ್ರಿಯೆ ಉದ್ಯಮವನ್ನು ಮುಂದುವರಿಸಲು ಪ್ರೋತ್ಸಾಹ ನೀಡಿತು.

ಸುಮಾರು ಎಂಟು ವರ್ಷಗಳ ಹಿಂದೆ ಆರಂಭವಾದ ‘ಶ್ರೀ ಗುರುದೇವ ಅರೋಮಾ ಇಂಡಸ್ಟ್ರೀಸ್’ ಇಂದು ಬೆಳವಣಿಗೆಯ ಹಾದಿಯಲ್ಲಿದೆ. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿದ್ದ ಉತ್ಪಾದನೆ ಈಗ ವಿಸ್ತರಿಸಿದ್ದು, ತಿಂಗಳಿಗೆ ಸುಮಾರು ೩ ಟನ್ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಿದ್ಧಪಡಿಸುವ ಸಾಮರ್ಥ್ಯವನ್ನು ಸಂಸ್ಥೆ ಹೊಂದಿದೆ ಎಂದು ಕುಲದೀಪ್ ಹೇಳತ್ತಾರೆ.
ಅಗರಬತ್ತಿ, ಧೂಪ ಸೇರಿದಂತೆ ೨೨ಕ್ಕೂ ಹೆಚ್ಚು ಬಗೆಯ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಸಂಸ್ಥೆಯ ಧೂಪದ ಉತ್ಪನ್ನಗಳಲ್ಲಿ ೧೬ಕ್ಕೂ ಹೆಚ್ಚು ಬಗೆಯ ಗಿಡಮೂಲಿಕೆಗಳನ್ನು ಬಳಸಲಾಗುತ್ತದೆ. ಗೋಮಯವನ್ನು ಆಧರಿಸಿ ವಿವಿಧ ಉತ್ಪನ್ನಗಳನ್ನು ತಯಾರಿಸುವ ಮೂಲಕ, ಕೃಷಿಯ ಉಪ ಉತ್ಪನ್ನಕ್ಕೂ ವಾಣಿಜ್ಯ ಮೌಲ್ಯ ಕಲ್ಪಿಸುವ ಪ್ರಯತ್ನವನ್ನು ಅವರು ಮುಂದುವರಿಸಿದ್ದಾರೆ.
ಉತ್ಪನ್ನಗಳ ಮಾರಾಟಕ್ಕಾಗಿ ಆನ್ಲೈನ್ ಮಾರುಕಟ್ಟೆಯನ್ನೂ ಬಳಸಿಕೊಳ್ಳುತ್ತಿದ್ದಾರೆ. ಅಮೆಜಾನ್ ಮೂಲಕ ದೇಶದ ವಿವಿಧ ಭಾಗಗಳ ಗ್ರಾಹಕರನ್ನು ತಲುಪುವ ಅವಕಾಶ ದೊರೆತಿದೆ. ಸ್ಥಳೀಯವಾಗಿ ಆರಂಭವಾದ ಉದ್ಯಮಕ್ಕೆ ಆನ್ಲೈನ್ ಮಾರಾಟ ಹೊಸ ಮಾರುಕಟ್ಟೆಯ ಬಾಗಿಲು ತೆರೆದಿದೆ.

ಗ್ರಾಮೀಣ ಉದ್ಯೋಗ ಸೃಷ್ಟಿ
ನಗರದಲ್ಲಿ ಉದ್ಯೋಗಿಯಾಗಿದ್ದ ಕುಲದೀಪ್ ಕುಲಕರ್ಣಿ, ಇಂದು ತಮ್ಮ ಊರಿನಲ್ಲೇ ಉದ್ಯಮಿಯಾಗಿ ಬೆಳೆದಿದ್ದಾರೆ. ಉದ್ಯೋಗ ಅರಸಿ ನಗರಕ್ಕೆ ತೆರಳಿದ್ದ ಅವರು, ಈಗ ಗ್ರಾಮೀಣ ಭಾಗದ ಆರು ಮಂದಿಗೆ ಉದ್ಯೋಗ ಒದಗಿಸಿದ್ದಾರೆ. ಇದು ಅವರ ವೈಯಕ್ತಿಕ ಸಾಧನೆಯಷ್ಟೇ ಅಲ್ಲದೆ, ಗ್ರಾಮೀಣ ಪ್ರದೇಶದಲ್ಲಿಯೂ ಉದ್ಯಮಗಳನ್ನು ಸ್ಥಾಪಿಸಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ
ಕೃಷಿಯನ್ನು ಕೇವಲ ಬೆಳೆ ಬೆಳೆದು ಆದಾಯ ಗಳಿಸುವ ಚಟುವಟಿಕೆಯಾಗಿಯಷ್ಟೇ ನೋಡದೆ, ಅದರೊಂದಿಗೆ ಸಂಬAಧಿಸಿದ ಕಚ್ಚಾ ವಸ್ತುಗಳಿಗೆ ಮೌಲ್ಯವರ್ಧನೆ ಮಾಡಿ ಹೊಸ ಉದ್ಯಮಗಳನ್ನು ರೂಪಿಸುವುದು ಇಂದಿನ ಅಗತ್ಯವಾಗಿದೆ. ಗೋಮಯದಂತಹ ಸಂಪನ್ಮೂಲಗಳನ್ನು ಬಳಸಿಕೊಂಡು ಉತ್ಪನ್ನಗಳನ್ನು ತಯಾರಿಸುವ ಮೂಲಕ ಕೃಷಿಕರಿಗೆ ಪರ್ಯಾಯ ಆದಾಯದ ಅವಕಾಶಗಳನ್ನು ಸೃಷ್ಟಿಸಬಹುದು. ಆದರೆ ಉತ್ಪನ್ನದ ಗುಣಮಟ್ಟ, ಗ್ರಾಹಕರ ವಿಶ್ವಾಸ, ಸೂಕ್ತ ಬೆಲೆ ನಿಗದಿ ಮತ್ತು ಮಾರುಕಟ್ಟೆ ಸಂಪರ್ಕ ಇವು ಉದ್ಯಮದ ಬೆಳವಣಿಗೆಯಲ್ಲಿ ಪ್ರಮುಖವಾಗುತ್ತವೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಣ್ಣ ಪ್ರಮಾಣದಲ್ಲಿ ಆರಂಭಿಸಿದ ಉದ್ಯಮವನ್ನು ಹಂತ ಹಂತವಾಗಿ ಬೆಳೆಸುತ್ತಿರುವ ಕುಲದೀಪ್ ಕುಲಕರ್ಣಿ, ಕೃಷಿ ಹಿನ್ನೆಲೆಯ ಯುವಕರಿಗೆ ತಮ್ಮದೇ ಊರಿನಲ್ಲಿ ಹೊಸ ಸಾಧ್ಯತೆಗಳನ್ನು ಹುಡುಕಲು ಪ್ರೇರಣೆಯಾಗಿದ್ದಾರೆ.
ಮಾಹಿತಿಗಾಗಿ ಸಂಪರ್ಕಿಸಿ: 9886407255















