spot_img
Tuesday, July 21, 2026
spot_imgspot_img

ಪ್ರಕೃತಿಯ ಕೊಡುಗೆ ಅಣಬೆಗಳ ಬಗ್ಗೆ ಒಂದಷ್ಟು ತಿಳಿದುಕೊಳ್ಳೋಣ ಬನ್ನಿ

ಮಳೆಗಾಲ ಆರಂಭವಾಗಿ ಭೂಮಿ ತಂಪಾಗುತ್ತಿದ್ದಂತೆ ಇಡೀ ಪ್ರಕೃತಿ ಹೊಸ ಚೈತನ್ಯವನ್ನು ಪಡೆದುಕೊಳ್ಳುತ್ತದೆ. ಬೇಸಿಗೆಯ ಕಡು ಬಿಸಿಲಿಗೆ ಒಣಗಿ, ಮಾಯವಾಗಿದ್ದ ಹಲವು ಜೀವರಾಶಿಗಳಿಗೆ ಮಳೆ ಹನಿಗಳು ಮರುಹುಟ್ಟು ನೀಡುತ್ತವೆ. ಇಂತಹ ಜೀವಿಗಳು ಭೂಮಿಯಿಂದ ಮೇಲೇಳುತ್ತಾ, “ನಮ್ಮನ್ನು ಮರೆತು ಬಿಡಬೇಡಿ, ನಾವೂ ನಿಮ್ಮೊಂದಿಗೇ ಇದ್ದೇವೆ”ಎಂದು ನೆನಪಿಸುವಂತೆ ತಲೆಯೆತ್ತಿ ನಿಲ್ಲುತ್ತವೆ. ತಮ್ಮ ಅಲ್ಪಾವಧಿಯ ಇರುವನ್ನು ಸಾಬೀತುಪಡಿಸಿ, ಕೆಲವು ದಿನಗಳಲ್ಲೇ ಸದ್ದಿಲ್ಲದೆ ಮತ್ತೆ ಮಾಯವಾಗುವ ಪ್ರಕೃತಿಯ ಕೊಡುಗೆ ಅಣಬೆಗಳು

ಮಳೆಗಾಲದಲ್ಲಿ ಕಾಡು-ಮೇಡುಗಳು, ಗುಡ್ಡಗಳು, ತರಗಿಲೆಗಳು ಕೊಳೆತ ಪ್ರದೇಶಗಳು, ಒಣಗಿದ ಮರಗಳು ಹಾಗೂ ಗೊಬ್ಬರದ ಗುಂಡಿಗಳಲ್ಲಿ ಅಣಬೆಗಳು ಪ್ರತ್ಯಕ್ಷವಾಗುತ್ತವೆ. ಆರಂಭದಲ್ಲಿ ಮಡಚಿದ ಕೊಡೆಯಂತೆ ಮಣ್ಣಿನಿಂದ ಮೂಡಿಬರುವ ಇವು, ನಂತರ ಚಕ್ರಾಕಾರದಲ್ಲಿ ಅರಳಿ ನಿಲ್ಲುವ ದೃಶ್ಯ ಮನಮೋಹಕ. ವಿವಿಧ ಬಗೆಯ ಕಾಡು ಅಣಬೆಗಳಲ್ಲಿ ಕೆಲವು ಮಾತ್ರ ತಿನ್ನಲು ಯೋಗ್ಯವಾಗಿದ್ದರೆ, ಉಳಿದ ಹಲವು ಕೇವಲ ನೋಡುವುದಕ್ಕಷ್ಟೇ ಚಂದ.

ಕಾಡು ಅಣಬೆಗಳು

ಮಲೆನಾಡು ಹಾಗೂ ಕರಾವಳಿ ಭಾಗವಲ್ಲದೆ ಇತರ ಕಡೆಯ ಕಾಡು ಹಾಗೂ ಹಸಿರಿನ ಪರಿಸರದಲ್ಲಿ ವೈವಿಧ್ಯಮಯ ಅಣಬೆಗಳು ಕಂಡುಬರುತ್ತವೆ. ಇವುಗಳಲ್ಲಿ ಕೆಲವು ಸ್ಥಳೀಯವಾಗಿ ಮತ್ತು ಸಾಂಪ್ರದಾಯಿಕವಾಗಿ ಅತ್ಯಂತ ಜನಪ್ರಿಯವಾಗಿವೆ. ಬೇರೆ ಬೇರೆ ಪ್ರದೇಶಗಳಲ್ಲಿ ಅವುಗಳನ್ನು ಬೇರೆ ಬೇರೆ ಹೆಸರುಗಳಲ್ಲಿ ಕರೆಯಲಾಗುತ್ತಿದೆ

ಸುಳಿರ್ ಅಥವಾ ಹುಲ್ಲಣಬೆ ಸ್ಥಳೀಯರ ನೆಚ್ಚಿನ ಖಾದ್ಯ ಪ್ರಭೇದಗಳಲ್ಲಿ ಪ್ರಮುಖವಾದದ್ದು. ಗುಂಪು ಗುಂಪಾಗಿ, ರಾಶಿ ರಾಶಿ ಬೆಳೆಯುವ ಈ ಅಣಬೆಯನ್ನು ನೋಡುವುದಕ್ಕೂ ಚೆಂದ.

ಹೆಗ್ಗಲಣಬೆ ಗಾತ್ರದಲ್ಲಿ ದೊಡ್ಡದು. ಈ ಅಣಬೆಗಳು ತನ್ನ ವಿಶಿಷ್ಟ ರುಚಿಗೆ ಹೆಸರಾಗಿವೆ. ಇದರಿಂದ ಸ್ವಾದಿಷ್ಟ ಖಾದ್ಯಗಳನ್ನು ತಯಾರಿಸುವುದು ಮಾತ್ರವಲ್ಲ. ಇವುಗಳನ್ನು ಉಪ್ಪು, ಖಾರ ಸವರಿ ಕೆಂಡದಲ್ಲಿ ಬೇಯಿಸಿ ತಿನ್ನುವುದಕ್ಕೂ ರುಚಿಕರವಾಗಿರುತ್ತದೆ.

ಕಲ್ಲಲಾಂಬು ಎಂದು ಕರೆಸಿಕೊಳ್ಳುವ ಕಾರ್ಕಳ ಮತ್ತು ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶಗಳಲ್ಲಿ ಆರಂಭದ ಮಳೆ ಗುಡುಗು ಸಿಡಿಲುಗಳ ಅಬ್ಬರದ ನಡುವೆ ಭೂಮಿಯಲ್ಲಿನ ತೇವಾಂಶ ಹೆಚ್ಚಾಗುತ್ತಿದ್ದಂತೆ ಮಣ್ಣಿನಡಿಯಿಂದ ಮೆಲ್ಲನೆ ಇಣುಕುತ್ತವೆ. ಮೇಲ್ನೋಟಕ್ಕೆ ಗೋಚರಿಸದಂತೆ ಇದ್ದರೂ ಸೂಕ್ಷö್ಮವಾಗಿ ಹುಡುಕಾಡಿದಾಗ ಗುಂಡಗಿನ ಅಣಬೆಗಳು ಒಂದೇ ಸ್ಥಳದಲ್ಲಿ ಬಹಳಷ್ಟು ಕಾಣುತ್ತವೆ. ತಿನ್ನಲು ಅತ್ಯಂತ ರುಚಿಕರ ಹಾಗೂ ಪೌಷ್ಟಿಕಾಂಶಭರಿತ. ಗುಡ್ಡಗಾಡುಗಳಲ್ಲಿ ಇದನ್ನು ಆಯ್ದು ಮಾರಾಟ ಮಾಡುವವರಿದ್ದಾರೆ. ಮಾರುಕಟ್ಟೆಯಲ್ಲಿ ಬೇಡಿಕೆಯಿದೆ.

ಮರ ಅಣಬೆಗಳು ಒಣಗಿದ ಮರಗಳ ಮೇಲೆ ಬೆಳೆಯುತ್ತವೆ. ಇತರ ಅಣಬೆಗಳಿಗೆ ಹೋಲಿಸಿದರೆ ಇವುಗಳ ಜೀವಿತಾವಧಿ ಸ್ವಲ್ಪ ಹೆಚ್ಚು. ಆದರೆ, ಆಹಾರವಾಗಿ ಇವುಗಳ ಬಳಕೆ ಮತ್ತು ಉಪಯುಕ್ತತೆಯೂ ತೀರಾ ಕಡಿಮೆ.

ವಾಣಿಜ್ಯ ಬೆಳೆಯಾಗಿ ಅಣಬೆ

ಕಾಡಿನಲ್ಲಿ ಸಿಗುವ ಅಣಬೆಗಳ ಜೀವಿತಾವಧಿ ತೀರಾ ಕಡಿಮೆ. ಶೀಘ್ರವಾಗಿ ಮುದುಡಿ ಮಾಯವಾಗುತ್ತವೆ. ಆದರೆ ಅಣಬೆಯ ರುಚಿ ಮತ್ತು ಅದರಲ್ಲಿರುವ ಪೌಷ್ಟಿಕಾಂಶಗಳ ಕಾರಣದಿಂದಾಗಿ ಇತ್ತೀಚಿನ ದಿನಗಳಲ್ಲಿ ಅಣಬೆ ಕೃಷಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಮಳೆಗಾಲಕ್ಕೆ ಮಾತ್ರ ಸೀಮಿತವಾಗಿದ್ದ ಅಣಬೆ ಈಗ ವರ್ಷದ ಎಲ್ಲಾ ದಿನಗಳಲ್ಲೂ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿವೆ. ಅಣಬೆ ಕೃಷಿ ಪದ್ಧತಿಯಿಂದಾಗಿ ಅಣಬೆ ಇಂದು ಕೇವಲ ಕಾಡಿನಲ್ಲಿ ಸಿಗುವ ಆಹಾರವಾಗಿ ಉಳಿದಿಲ್ಲ; ಬದಲಿಗೆ ಲಾಭದಾಯಕ ಹಾಗೂ ಜನಪ್ರಿಯ ವಾಣಿಜ್ಯ ಬೆಳೆಯಾಗಿ ರೂಪಾಂತರಗೊಂಡಿದೆ.

ಪ್ರಕೃತಿಯಲ್ಲಿ ಸಿಗುವ ಎಲ್ಲಾ ಅಣಬೆಗಳೂ ಆಹಾರವಲ್ಲ. ಕೆಲವು ಅತ್ಯಂತ ಆಕರ್ಷಕವಾಗಿ ಕಂಡರೂ, ಅವು ತಿನ್ನುವುದಕ್ಕೆ ಯೋಗ್ಯವಾಗಿಲ್ಲ. ವಿಷಕಾರಿಯಾಗಿರುತ್ತವೆ. ಕಾಡಿನ ಅಣಬೆಗಳನ್ನು ಆಯ್ದುಕೊಳ್ಳುವಾಗ ಜಾಗರೂಕರಾಗಿರಬೇಕು. ಅರಿವಿಲ್ಲದೆ ಇವುಗಳನ್ನು ಸೇವಿಸಿದರೆ ಜೀವಕ್ಕೇ ಕಂಟಕ ಪ್ರಾಯವಾಗಬಹುದು.

ಬರಹ : ರಾಧಾಕೃಷ್ಣ ತೊಡಿಕಾನ ಚಿತ್ರ : ಚಂದ್ರನಾಥ ಬಜಗೋಳಿ

 

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group