ಬರಹ : ♦ರಾಧಾಕೃಷ್ಣ ತೊಡಿಕಾನ ♦ಚಿತ್ರ : ರಾಮ್ ಅಜೆಕಾರ್
ಮಂಡೆ ಹಾಳೆ, ಮುಟ್ಟಾಳೆ, ಮುಟ್ಟಪಾಳೆ, ಮಡಪ್ಪಾಳೆ ಎಂದೆಲ್ಲಾ ಕರೆಸಿಕೊಳ್ಳುವ ಹಾಳೆಯ ಟೊಪ್ಪಿ ಗ್ರಾಮೀಣ ಭಾಗದ ಜನರ ಶ್ರಮ ಸಂಸ್ಕೃತಿಯ ಭಾಗ. ಮಳೆಯಿರಲಿ, ಬಿಸಿಲಿರಲಿ ಅಥವಾ ಭಾರ ಹೊರುವ ಸಮಯವೇ ಬರಲಿ ಮಂಡೆಹಾಳೆ ತಲೆಗೊಂದು ರಕ್ಷಣಾ ಕವಚ. ಅಡಿಕೆ ಮರದಿಂದ ಒಣಗಿ ಬೀಳುವ ಹಾಳೆ ಕರಕುಶಲ ಕರ್ಮಿಯ ಕೈಚಳಕದಿಂದ ತಯಾರಾಗಿ ಜನೋಪಯೋಗಿಯಾಗುತ್ತದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲದೆ ಮಲೆನಾಡ ಭಾಗದ , ಕೃಷಿಕೂಲಿ ಕೆಲಸ ಮಾಡುವವರು ಆದ್ಯತೆಯಲ್ಲಿ ಬಳಸುವ ಟೊಪ್ಪಿಯಿದು. ಉಡುಪಿ ಜಿಲ್ಲೆ ಪರಿಸರದ ಮಂಡೆ ಹಾಳೆಗೂ ದಕ್ಷಿಣಕನ್ನಡ ಜಿಲ್ಲೆಯ ಮುಟ್ಟಾಲೆಗೆ ಹಾಳೆ ಬಳಕೆಯಾದರೂ ಎದುರು ಮತ್ತು ಹಿಂದಿನ ಭಾಗವನ್ನು ನೈಯ್ಯುವುದರಲ್ಲಿ ಭಿನ್ನ ಮಾದರಿಯಿದೆ.

ಮಂಡೆ ಹಾಳೆ ಅಥವಾ ಮುಟ್ಟಾಳೆ ತಯಾರಿ ಕೆಲವೇ ಕೆಲವು ಸಮುದಾಯ, ಕುಟುಂಬಗಳಿಗೆ ಒಲಿದು ಬಂದ ಕಲೆ. ಹಿರಿಯ ಜೀವ ಮಂಜು ಪಾಣರ ಕಳೆದ ಎಪ್ಪತ್ತು ವರ್ಷದಿಂದ ಅರೆಕಾಲಿಕ ಸ್ವ ಉದ್ಯೋಗವಾಗಿ ಅದೆಷ್ಟೋ ಮಂಡೆಹಾಳೆಯನ್ನು ತಯಾರಿಸಿದ್ದಾರೆ. ಮಂಜು ಪಾಣರ ಅವರು ದೈವ ನರ್ತನ ಸೇವೆಯಲ್ಲಿ ತೊಡಗಿಸಿಕೊಂಡವರು. ದೈವದ ಕೋಲ, ನೇಮಾದಿಗಳಲ್ಲಿ ಸುದೀರ್ಘಕಾಲ ಕಳೆದವರು. ಮಳೆಗಾಲ ಅವರಿಗೆ ಬಿಡುವಿನ ಕಾಲ. ಆ ಸಮಯದಲ್ಲಿ ಬದುಕಿನ ಬುತ್ತಿ ತುಂಬಿಸಿಕೊಳ್ಳುವುದಕ್ಕೆ ಅವರದು ಕರಕುಶಲತೆಯ ಸ್ವ ಉದ್ಯೋಗ- ಮಂಡೆಹಾಳೆ ಅಥವಾ ಮುಟ್ಟಾಳೆ ತಯಾರಿ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ರಟ್ಟಾಡಿಯ ಮಂಜು ಪಾಣರ ಎಳೆಯ ವಯಸ್ಸಿನಲ್ಲಿಯೇ ಪರಂಪರೆಯಿಂದ ಬಂದ ದೈವ ನರ್ತನ ಸೇವೆಯಲ್ಲಿ ತೊಡಗಿಕೊಂಡುದುದಲ್ಲದೆ ಮಂಡೆ ಹಾಳೆ ಮಾಡುವ ಕೆಲಸವನ್ನು ಕರಗತ ಮಾಡಿಕೊಂಡಿದ್ದರು. ದೈವ ನರ್ತನ ಸೇವೆಯನ್ನು ಅವರು ಈಗ ಮಾಡುತ್ತಿಲ್ಲವಾದರೂ ಮಂಡೆ ಹಾಳೆ ತಯಾರಿಯನ್ನು ಈಗಲೂ ಮುಂದುವರಿಸಿದ್ದಾರೆ. ದೇವಸ್ಥಾನದಲ್ಲಿ ದೇವರ ಬಲಿ ಬರುವ ಸಂದರ್ಭದಲ್ಲಿ ಬಳಸುವ ತಾಳೆಗರಿಯ ಒಲಿ ಕೊಡೆಯನ್ನು ಕೆಲ ದೆವಸ್ಥಾನಗಳಿಗೆ ಮಾಡಿಕೊಡುತ್ತಿದ್ದರು. ವಿಶಿಷ್ಟತೆ ಮತ್ತು ಕಲಾತ್ಮಕವಾದ ಒಲಿಕೊಡೆಯ ತಯಾರಿಗೆ ದೂರದ ಹೊನ್ನಾವರ, ಕುಮುಟಾ ಮೊದಲಾದ ಕಡೆ ಸುತ್ತಾಡಿ ತಾಳೆಗರಿಗಳನ್ನು ಆಯ್ದು ತಂದು ಒಲಿಕೊಡೆಗಳನ್ನು ಮಾಡುತ್ತಿದ್ದರು. ೧೦ ವರ್ಷದ ಬಾಲಕನಾಗಿದ್ದಾಗಲೇ ಆರಂಭಿಸಿದ ಮಂಡೆಹಾಳೆ ತಯಾರಿ ಕರಕುಶಲ ಕೆಲಸವನ್ನು ೮೦ರ ಇಳಿವಯಸ್ಸಿನಲ್ಲೂ ಮುಂದುವರಿಸಿದ್ದಾರೆ. ಹಾಳೆಗಳನ್ನು ತರುವ ಓಡಾಟ ಕಡಿಮೆಯಾಗಿದೇ ಹೊರತು ಉತ್ಸಾಹ ಕಡಿಮೆಯಾಗಿಲ್ಲ.

ಈ ಮಂಡೆ ಹಾಳೆ ತಯಾರಿಕೆಗೆ ಎರಡು ಹಾಳೆಗಳು ಬೇಕಾಗುತ್ತದೆ. ಅಡಿಕೆ ಬೆಳೆಗಾರರ ತೋಟದಿಂದ ಹಾಳೆಗಳನ್ನು ಆಯ್ದು ತಂದು ನೀರಿನಲ್ಲಿ ನೆನೆಸಿ ಬೇಕಾದ ಆಕಾರದಲ್ಲಿ ತುಂಡರಿಸಿ ಎರಡು ತುದಿಯನ್ನು ಕಲಾತ್ಮಕವಾಗಿ ಜೋಡಿಸಿ ನೈಲಾನ್ ದಾರದಿಂದ ಕಟ್ಟುತ್ತಾರೆ. ಇದಕ್ಕೆ ಒಂದಿಷ್ಟು ತಾಳ್ಮೆ ನಾಜೂಕು ಬೇಕು. ಮಂಜು ಅವರ ನರ್ತನ ಸೇವೆಯನ್ನು ಗುರುತಿಸಿ ಗೌರವಿಲಾಗಿದೆ. ಸನ್ಮಾನಗಳು ಸಂದಿವೆ.
ಮಂಜು ಅವರಿಗೆ ತನ್ನ ತಂದೆಯಿಂದ ಈ ಕಲೆ ಕರಗತವಾದರೆ ಮಂಜು ಅವರ ಮಗ ಸುಧಾಕರ ಅವರಿಗೆ ಪರಂಪರೆಯ ಬಳುವಳಿಯನ್ನು ವರ್ಗಾಯಿಸಿದ್ದಾರೆ. ಕುಟುಂಬದ ಸಹೋದರ ಸಂಬಂಧಿಗಳು ಮಂಡೆ ಹಾಳೆ ತಯಾರಿಯಲ್ಲಿ ಪಳಗಿದ್ದಾರೆ. ಸುಧಾಕರ ಅವರೂ ದೈವ ನರ್ತನ ಸೇವೆಯಲ್ಲಿ ತೊಡಗಿಕೊಂಡವರು.

ಗ್ರಾಮೀಣ ಬದುಕು ಶ್ರಮ ಸಂಸ್ಕೃತಿಯ ಭಾಗವಾಗಿ ಬಂದಿರುವ ಹಾಳೆ ಟೊಪ್ಪಿ ಪ್ರಕೃತಿಯ ಕೊಡುಗೆ. ಕುಶಲಕರ್ಮಿಗೆ ಉದ್ಯೋಗ, ಜೀವನಕ್ಕೆ ಆದಾಯದ ದಾರಿಯಾಗುತ್ತದೆ. ಅಡಿಕೆ ಹಾಳೆ ಕೊಡುವವರಿಗೂ ಅನುಕೂಲವಾಗುತ್ತದೆ. ಮಾಡಿದ ಕಲಾ ಉತ್ಪನ್ನಗಳು ಮಾರುಕಟ್ಟೆ ಸೇರಿದಾಗ ಮಾರಾಟಗಾರರಿಗೂ ಲಾಭಾಂಶ ದೊರೆಯುತ್ತದೆ. ಕೂಲಿ ಕಾರ್ಮಿಕರಿಗೆ ತಲೆಗೆ ರಕ್ಷಣಾ ಕವಚವಾಗುತ್ತದೆ . ಈಗೀಗ ಪಾಸ್ಟಿಕ್ ಟೊಪ್ಪಿಗಳು ಬಂದಿವೆ. ಆದರೆ ಮಂಡೆಹಾಳೆಗೆ ಅವು ಸರಿಸಮಾನವಾಗಲಾರದು. ಹಾಳಾದರೆ ಮಣ್ಣಲ್ಲಿ ಕರಗಿ ಹೋಗುವ ಪರಿಸರ ಸ್ನೇಹಿ ಟೊಪ್ಪಿಯಾಗಿದೆ. ಹಾಳೆಯಿಂದ ಮಾಡಲಾದ ನಾನಾ ವಸ್ತುಗಳು ಆಧುನಿಕತೆಯ ಸ್ಪರ್ಶ ಪಡೆದು ಮಾರುಕಟ್ಟೆಗೆ ಬಂದಿದೆ. ಗ್ರಾಮೀಣ ಭಾಗದಲ್ಲಿರುವ ಮಂಜು ಪಾಣರಂತಹ ಕುಶಲಕರ್ಮಿಗಳನ್ನು ಸರಕಾರ ಪ್ರೋತ್ಸಾಹಿಸಿದರೆ ಹಳ್ಳಿಗಳಲ್ಲಿ ಹೆಚ್ಚು ಸ್ವ ಉದ್ಯೋಗಗಳನ್ನು ಸೃಷ್ಟಿಸಲು ಸಾಧ್ಯವಾಗಬಹುದು.ಮಾಹಿತಿಗೆ 9900790517









