ಬರಹ : ರಾಧಾಕೃಷ್ಣ ತೊಡಿಕಾನ ಚಿತ್ರ : ಚಂದ್ರನಾಥ ಬಜಗೋಳಿ
ಮೈದನಮಕ್ಕಿ ಆಸ್ತಿಕ್ ಎಂಬಿಎ ಪದವೀಧರರು. ನಗರದಲ್ಲಿ ಓದಿದವರು. ಊರಲ್ಲಿ ಕೃಷಿಭೂಮಿ, ಆದಾಯವಿದ್ದರೂ ಬಹಳಷ್ಟು ಯುವಕರು ಆಯ್ದು ಕೊಳ್ಳುವುದು ನಗರದ ಉದ್ಯೋಗವನ್ನೇ. ಆದರೆ ಆಸ್ತಿಕ್ ಹಾಗೆ ಮಾಡಲಿಲ್ಲ. ಊರಿಗೆ ಬಂದರು. ಪರಿಚಿತರೆಲ್ಲಾ ಮನೆಯಲ್ಲಿದ್ದು ಏನು ಮಾಡ್ತಿಯಾ.. ಯಾವುದಾದರೂ ಉದ್ಯೋಗಕ್ಕೆ ಸೇರ್ಕೊಳ್ಬಾರ್ದ..ಎಂದು ಸಲಹೆ ನೀಡುತ್ತಿದ್ದರು. ಆದರೆ ಆಸ್ತಿಕ್‌ಗೆ ಊರಲ್ಲಿದ್ದು ಕೃಷಿ ಬದುಕಿನೊಂದಿಗೆ ಸ್ವಂತ ಉದ್ಯೋಗ ಕಂಡುಕೊಳ್ಳುವುದು ಗುರಿಯಾಗಿತ್ತು. ನಾಟಿ ಕೋಳಿ ಸಾಕಣೆಯನ್ನು ಆರಂಭಿಸಿದರು. ನಾಲ್ಕು ವರ್ಷಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿದ ಕೋಳಿ ಸಾಕಣೆಯೀಗ ಪಶುಸಂಗೋಪನೆಯತ್ತ ಹೊರಳುವಂತೆ ಮಾಡಿದೆ. ಕೋಳಿ, ಮೇಕೆ, ಹಂದಿ, ದನ, ಮೀನು ಸಾಕಣೆಯು ಅವರನ್ನು ಯಶಸ್ಸಿನ ಹಾದಿಗೆ ತಂದು ನಿಲ್ಲಿಸಿದೆ. ಅಲ್ಲದೆ ವೈಜ್ಞಾನಿಕ ಹಾಗು ಸಮಗ್ರ ಕೃಷಿಯನ್ನು ಅಳವಡಿಸಿಕೊಂಡು ಪ್ರಗತಿಪರ ಕೃಷಿಕರಾಗಿ ಆಸ್ತಿಕ್ ಗುರುತಿಸಿಕೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಳಿಗನಾಡು ಗ್ರಾಮದ ಮೈದನಮಕ್ಕಿ ಆಸ್ತಿಕ್ ಎಂ. ಎಸ್ ಅವರು ತನ್ನ ಕಾಲೇಜು ದಿನಗಳಿಂದಲೇ ಕೋಳಿ ಸಾಕಣೆಗೆ ಒಲವು ತೋರಿದ್ದರು. ತನ್ನ ಶಿಕ್ಷಣದ ನಂತರ ಅವರು ನಾಟಿ ಕೋಳಿ ಸಾಕಣೆಯನ್ನು ಸ್ವ ಉದ್ಯೋಗಕ್ಕಾಗಿ ಆಯ್ಕೆ ಮಾಡಿಕೊಂಡಿದ್ದರು. ತೀರಾ ಗ್ರಾಮೀಣ ಪ್ರದೇಶವಾದ್ದರಿಂದ ಹಲವು ಸಮಸ್ಯೆಗಳು ಎದುರಾದವು.

ನಾಟಿ ಕೋಳಿಗಳು ಗ್ರಾಮೀಣ ಭಾಗದಲ್ಲಿ ಮಾತ್ರವಲ್ಲ ನಗರದಲ್ಲೂ ಜನಪ್ರಿಯ. ಮಾಂಸ ಮತ್ತು ಮೊಟ್ಟೆಗೆ ಉಪಯೋಗವಾಗುವ ಇವುಗಳನ್ನು ಮನೆಯ ಹಿತ್ತಲಲ್ಲಿ ಬಿಟ್ಟು ಸಾಕಬಹುದು. ಕಟ್ಟಡದ ಒಳಗೂ ಸಾಕಬಹುದು. ಬಂಡವಾಳ ಹಾಗೂ ಖರ್ಚು-ವೆಚ್ಚಗಳು ಕಡಿಮೆ, ರೋಗ ನಿರೋಧಕ ಶಕ್ತಿಯೂ ಹೆಚ್ಚು. ಪ್ರಕೃತಿಗೆ ಹಾನಿಕಾರವಲ್ಲದ, ಕೃಷಿಗೆ ಪೂರಕವಾದ ನಾಟಿಕೋಳಿಯನ್ನೇ ಸಾಕುವುದಕ್ಕೆ ಮನಮಾಡಿದರು. ಸಣ್ಣ ಪ್ರಮಾಣದಲ್ಲಿ ಆರಂಭಿಸಿದ್ದ ನಾಟಿಕೋಳಿ ಈಗ ಸುಮಾರು 1೦೦೦ ಕೋಳಿಗಳ ವರೆಗೆ ತಲುಪಿದೆ. ನಾಟಿಕೋಳಿಗಳು ಕಚ್ಚಾಡಿಕೊಳ್ಳುವುದು ಹೆಚ್ಚು. ಆದ್ದರಿಂದ ತೋಟಕ್ಕೆ ಬಲೆ ಬೇಲಿ ಅಳವಡಿಸಿ ಹಿತ್ತಲಿನಲ್ಲಿಯೂ ಸಾಕುತ್ತಿದ್ದಾರೆ. ಬೇಡಿಕೆ ಮತ್ತು ಮಾರಾಟಕ್ಕೆ ಅನುಗುಣವಾಗಿ ಸಂಖ್ಯೆಯೂ ಹೆಚ್ಚು ಕಡಿಮೆಯಾಗುತ್ತದೆ..
ಪ್ರತಿದಿನ 450-500 ಮೊಟ್ಟೆ ಸಿಗುತ್ತಿದೆ. ಆರಂಭದಲ್ಲಿ ಸ್ಥಳೀಯವಾಗಿಯೇ ಮೊಟ್ಟೆ ಮಾರಾಟ ಮಾಡುತ್ತಿದ್ದರು. ಮಂಗಳೂರು, ಚಿಕ್ಕಮಗಳೂರು, ಬೆಂಗಳೂರು ಮೊದಲಾದ ಮಾರಾಟ ಕೇಂದ್ರಗಳಲ್ಲೂ ಇವರ ನಾಟಿಕೋಳಿಯ ಮೊಟ್ಟೆ ಮಾರಾಟವಾಗುತ್ತಿದೆ. ಗ್ರಾಹಕರ ಬೇಡಿಕೆಯಷ್ಟು ಮೊಟ್ಟೆ ಪೂರೈಕೆ ಮಾಡಲಾಗುತ್ತಿಲ್ಲ.. ಈಗಿರುವ ಕೋಳಿ ಸಾಕಣೆಯ ಕಟ್ಟಡ ವಿಸ್ತರಿಸಿ ಮುಂದೆ 3೦೦೦ ನಾಟಿ ಕೋಳಿಗಳನ್ನು ಸಾಕುವ ಉದ್ದೇಶವಿದೆ. ಅದಲ್ಲದೆ ಯಾಂತ್ರೀಕವಾಗಿ ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡಿ ಮರಿಗಳನ್ನು ಸಾಕಿ ಮಾರಾಟ ಮಾಡುವ ಯೋಚನೆಯೂ ಅವರಲ್ಲಿದೆ. ಕೋಳಿಗೆ ಆಹಾರವಾಗಿ ಗೋಧಿ, ಅಕ್ಕಿ, ಭತ್ತ, ಜೋಳ, ತರಕಾರಿ ಸೊಪ್ಪು ಹೀಗೆ ಅವು ತಿನ್ನಬಹುದಾದ ಎಲ್ಲಾ ತರಹದ ಕೋಳಿ ಆಹಾರ ನೀಡುತ್ತಿದ್ದು ಹೈಡ್ರೋಪೋನಿಕ್ಸ್ ಮೂಲಕ ಕೋಳಿ ಆಹಾರ ಬೆಳೆಯುವ ಚಿಂತನೆ ಅವರದು
ಆಡು ಸಾಕಣೆ:
ನಾಟಿ ಕೋಳಿಗಳಲ್ಲದೆ ಆಡು/ಮೇಕೆ ಅವರಲ್ಲಿವೆ. ಮೊದಲು ಮೂರು ಮೇಕೆಗಳನ್ನು ತಂದು ಸಾಕಿದ್ದರು. ಹಳ್ಳಿಗಳಲ್ಲಿ ಮೇಕೆಗಳನ್ನು ಸಾಕುವುದಕ್ಕೆ ಎಲ್ಲಾ ಅನುಕೂಲತೆಗಳಿದ್ದರೂ ಮೇವಿಗಾಗಿ ಬಿಟ್ಟವುಗಳು ಯಾರದೋ ತೋಟಕ್ಕೆ ನುಗ್ಗಿ ಬೆಳೆಗಳನ್ನು ಮೆದ್ದು ಜಗಳ ತಂದೊಡ್ಡಿ ಬಿಡುತ್ತವೆ. ಇವರು ಬಿಟ್ಟು ಸಾಕುವುದಿಲ್ಲವಾದರೂ ಒಂದಷ್ಟು ಕಾಲಾಡಿ ಬರುವುದಕ್ಕೆ ತನ್ನ ತೋಟದಲ್ಲಿ ಬಿಡುತ್ತಾರೆ. ಮೇಕೆ ಸಾಕುವುದರ ಸಾಧಕ ಬಾಧಕಗಳು ಮಾರುಕಟ್ಟೆ ವ್ಯವಸ್ಥೆಯ ಅನುಭವದ ಮೇಲೆ ಸುಮಾರು 3೦-4೦ ರವರೆಗೆ ಸಾಕಿದ್ದಿದೆ. ಮಳೆಗಾಲ ಬರುತ್ತಿದ್ದಂತೆ ಬಹುತೇಕ ಮಾರಾಟ ಮಾಡುತ್ತಾರೆ. ಈಗ ಹೆಚ್ಚಿಲ್ಲವಾದರೂ ಮುಂದೆ ನೂರರ ತನಕ ಸಾಕುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಸ್ಥಳೀಯ ತಳಿ, ಶಿರೋಹಿ ಮತ್ತು ಬಿಟೆಲ್ ತಳಿ ಸಾಕಿದ್ದಾರೆ. ಮೇಕೆಗಳು ಸುಮಾರು 2 ಲೀಟರ್ ಹಾಲು ನೀಡುತ್ತಿದ್ದರೂ ಹಾಲನ್ನು ಮರಿಗಳಿಗೇ ಬಿಡಲಾಗಿದೆ. ಮಾಂಸಕ್ಕೆ ಬೇಡಿಕೆ ಇದೆ. ಆಡುಗಳು ಮರಿ ಮಾಡುವುದಕ್ಕೆ ಮೊದಲ ಆದ್ಯತೆ. ಮರಿಗಳನ್ನು ಸಾಕಿ ದೊಡ್ಡದಾದ ನಂತರವೇ ಮಾರಾಟ ಮಾಡುತ್ತಾರೆ. ಗೊಬ್ಬರವನ್ನು ಕಾಂಪೋಸ್ಟ್ ಮಾಡಿ ಮಾರಾಟ ಮಾಡುತ್ತಾರೆ.
ದನ ಸಾಕಣೆ: ರೈತರಲ್ಲಿ ದನ ಸಾಕಾಣೆ ಸಾಂಪ್ರದಾಯಿಕವಾದುದು. ಇಲ್ಲಿ ಲಾಭ ನಷ್ಟದ ಪ್ರಶ್ನೆಯಿಲ್ಲ. ಆಸ್ತಿಕ್ ಕೂಡಾ ದನ ಸಾಕಾಣಿ ಮಾಡುತ್ತಿದ್ದಾರೆ. ಈ ದನಗಳು ಹೆಚ್ಚು ಹಾಲು ಕೊಡುವ ತಳಿಗಳಲ್ಲ. ಹಳ್ಳಿಯಲ್ಲಿ ಹೆಚ್ಚಾಗಿರುವ ಮಲೆನಾಡ ಗಿಡ್ಡ ತಳಿಗಳೇ. ಹೆಚ್ಚು ಹಾಲು ಕೊಡುವ ತಳಿಗಳನ್ನು ಸಾಕಿದರೂ ಹಾಲು ನೀಡುವುಕ್ಕೆ ಅಕ್ಕಪಕ್ಕದಲ್ಲಿ ಹಾಲಿನ ಸೊಸೈಟಿಗಳಿಲ್ಲ. ಸಿಗುವ ಹಾಲನ್ನು ಸಂಸ್ಕರಿಸಿ ಬೆಣ್ಣೆ ತುಪ್ಪ ತಯಾರಿಸುತ್ತಾರೆ. ದೇಶಿಯ ದನದ ತುಪ್ಪಕ್ಕೆ ಬೇಡಿಕೆ ಇರುವುದರಿಂದ ಮನೆ ಬಳಕೆಗೆ ಉಪಯೋಗಿಸಿ ಉಳಿದದ್ದನ್ನು ಮಾರಾಟ ಮಾಡುತ್ತಾರೆ. ಸುಮಾರು 4೦ವರ್ಷದ ಹಿಂದಿನ ಗೋಬರ್ ಗ್ಯಾಸ್ ತಯಾರಿ ಘಟಕವಿದೆ. ಗೋಬರ್ ಗ್ಯಾಸ್ ಅಡುಗೆ ಅಲ್ಲದೆ ಪರಂಪರೆಯ ಸೌದೆ ಒಲೆಯಲ್ಲಿ ಅಡುಗೆ. ಗ್ಯಾಸನ್ನು ಹೆಚ್ಚಾಗಿ ಅವಲಂಭಿಸಿಲ್ಲ. ಎನ್ನುತ್ತಾರೆ ಆಸ್ತಿಕ್ ಅವರ ತಾಯಿ ಮಮತಾ.
ಕೋಳಿ, ದನ, ಆಡು ಮಾತ್ರವಲ್ಲದೆ ಹಂದಿ ಸಾಕಣೆಯಿದೆ. ಇವು ಕೂಡಾ ರೈತರ ಆದಾಯವನ್ನು ಹೆಚ್ಚಿಸಬಲ್ಲವು. ಮರಿಗಳನ್ನು ಸಾಕಿ ದೊಡ್ಡದಾದ ಮೇಲೆ ಮಾರಾಟ ಮಾಡುವುದು ಲಾಭದಾಯಕ. ಸ್ವಂತದ್ದಾದ ಮಾರುಕಟ್ಟೆಯಿದ್ದರೆ ಒಳ್ಳೆಯದು. ಹಂದಿಗೆ ಇತರ ಆಹಾರದೊಂದಿಗೆ ಸೊಪ್ಪು ತರಕಾರಿಗಳನ್ನು ಬೇಯಿಸಿ ನೀಡುತ್ತಾರೆ.
ಮೀನು ಸಾಕಣೆ: ಮೀನು ಕೃಷಿ ಕೂಡಾ ಗ್ರಾಮೀಣ ಉದ್ಯೋಗದ ಭಾಗವೇ ಆಗಿದೆ. ಕೃಷಿಹೊಂಡವನ್ನು ಹೊಂದಿದ್ದು ಸುಮಾರು 2೦೦೦ ಮರಿಗಳನ್ನು ಸಾಕಿದ್ದಾರೆ. ರೊಹು, ಗ್ಲಾಸ್ ಕಪ್, ಗೌರಿ ಮೀನುಗಳಿವೆ. ಈಗಿನ ಹೊಂಡ ಗಾತ್ರದಲ್ಲಿ ಚಿಕ್ಕದು. ಈ ಮೀನು ಸಾಕಾಣೆಯ ಅನುಭವದ ಮೇಲೆ ಮುಂದೆ ಒಂದು ಎಕ್ರೆ ಪ್ರದೇಶದಲ್ಲಿ ಹೊಸ ಕೆರೆಯನ್ನು ನಿರ್ಮಿಸಿ ಒಂದು ಲಕ್ಷ ಮೀನು ಮರಿ ಸಾಕಾಣೆ ಉದ್ದೇಶ ಅವರದು. ವರ್ಷವೊಂದರಲ್ಲಿಯೇ ಮೀನು ಬೆಳೆದು ಮಾರಾಟಕ್ಕೆ ಸಿದ್ಧವಾಗುತ್ತದೆ. ಕೆಲವೊಂದು ಮೀನುಗಳು ಒಂದು ಕೆಜಿಯವರೆಗೆ ಬೆಳೆದರೆ ಮತ್ತೆ ಕೆಲವು ಅದಕ್ಕಿಂತಲೂ ಹೆಚ್ಚು ಬೆಳೆಯುತ್ತವೆ. ಮೀನು ಸ್ಥಳಕ್ಕೆ ಬಂದು ಕೊಂಡೊಯ್ಯುತ್ತಾರೆ.
ಆಸ್ತಿಕ್ ಅವರ ತಂದೆ ಸುದರ್ಶನ್ ಎಂ.ಆರ್. ಕಾಫಿ ಬೆಳೆಗಾರರು. ಪ್ರಧಾನ ಬೆಳೆ ಕಾಫಿ ಆದರೂ ಅಡಿಕೆ ಬೆಳೆಯುವುದಲ್ಲದೆ ಕಾಳುಮೆಣಸು, ಏಲಕ್ಕಿ ಕೃಷಿಯಿದೆ. ವಿವಿಧ ಜಾತಿಯ ಹಣ್ಣಿನ ಗಿಡಗಳು ಅವರ ತೋಟದಲ್ಲಿದೆ. ಹಿಂದೆ ಭತ್ತ ಹೆಚ್ಚಾಗಿ ಬೆಳೆಯಲಾಗುತ್ತಿತ್ತು. ಭತ್ತದ ಕೃಷಿ ಈಗ ಇಲ್ಲವಾದರೂ ಮುಂದಿನ ದಿನಗಳಲ್ಲಿ ಯಾಂತ್ರಿಕರಣದ ಮೂಲಕ ಭತ್ತದ ಕೃಷಿಯನ್ನು ಮಾಡುವ ಉದ್ದೇಶವಿದೆ. ಅದಲ್ಲದೆ ನುಗ್ಗೆ, ತೆಂಗು, ಅವಕಾಡೊವನ್ನು ಬೆಳೆಯುವುದಕ್ಕೆ ನಿರ್ಧರಿಸಿದ್ದಾರೆ. ಆಸ್ತಿಕರ ಎಲ್ಲಾ ಕೆಲಸಗಳಿಗೆ ತಂದೆ ಸುದರ್ಶನ್ ಮತ್ತು ತಾಯಿ ಮಮತಾ ಪ್ರೇರಕ ಶಕ್ತಿ ಮತ್ತು ಪ್ರೋತ್ಸಾಹಕರು.
ಯಾಂತ್ರೀಕರಣ: ಇತ್ತೀಚಿಗಿನ ದಿನಗಳಲ್ಲಿ ಕೃಷಿಕೂಲಿಕಾರ್ಮಿಕರ ಅಭಾವ ತಲೆದೋರಿದೆ. ಕೃಷಿ ಕೆಲಸಕ್ಕೆ ನುರಿತ ಕೆಲಸಗಾರರಿಲ್ಲ. ಹೊರರಾಜ್ಯದ ಕೆಲಸಗಾರರನ್ನೇ ನೆಚ್ಚಿಕೊಳ್ಳಬೇಕಾಗಿದೆ. ಒಮ್ಮೊಮ್ಮೆ ಊರಿಗೆ ಹೋದರೆ ಮರಳಿ ಬಂದರಾಯಿತು. ಇಲ್ಲವಾದರೆ ಮತ್ತೆ ಕೂಲಿಗಾರರಿಗೆ ಹುಡುಕಾಟವಾಗುತ್ತದೆ. ಕೃಷಿ ಕೆಲಸ ಸಮಯಕ್ಕೆ ಸರಿಯಾಗಿ ಆಗದಿದ್ದರೆ ನಷ್ಟವೇ ಹೆಚ್ಚು. ಆ ಹಿನ್ನಲೆಯಲ್ಲಿ ಆಸ್ತಿಕರ ಕುಟುಂಬ ಯಂತ್ರೋಪಕರಣಗಳನ್ನು ಹೆಚ್ಚು ನೆಚ್ಚಿಕೊಂಡಿದೆ. ಹಸಿ ಹಾಗೂ ಒಣ ಅಡಿಕೆ ಸುಲಿಯುವುದಕ್ಕೆ ಯಂತ್ರ, ಕಾಫಿ ತೋಟಗಳಲ್ಲಿರುವ ಮರಕಸಿಗೆ ಮರದ ಗೆಲ್ಲು ಕತ್ತರಿಸುವ ಯಂತ್ರ, ಹುಲ್ಲು ಕತ್ತರಿಸುವ ಯಂತ್ರ. ಪಶು ಆಹಾರಕ್ಕೆ ಪೂರಕವಾಗಿ ಚಾಪ್ ಕಟ್ಟರ್, ಟಿಲ್ಲರ್, ಟ್ರ‍್ಯಾಕ್ಟರ್, ಕಾಫಿ ಕೊಯ್ಲು ಯಂತ್ರವನ್ನು ಹೊಂದಿದ್ದು ಆದಷ್ಟು ಯಾಂತ್ರೀಕರಣದತ್ತ ಸಾಗಿದ್ದಾರೆ. ಕಾಫಿ ಕೊಯ್ಲು ಮತ್ತು ಕೆಲಸಗಾರರ ಅವಶ್ಯಕತೆ ಇರುವ ಸಂದರ್ಭದ ಏಳೆಂಟು ತಿಂಗಳು 10-15 ಮಂದಿಗೆ ಕೆಲಸವಿದೆ. ತಮ್ಮ ಕೃಷಿ ಭೂಮಿಯ ಸುತ್ತ ಓಡಾಡುವುದಕ್ಕೆ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಅನುಕೂಲವಾಗಲೆಂದು ರಸ್ತೆಗಳನ್ನು ನಿರ್ಮಿಸಿಕೊಂಡಿರುವುದರಿಂದ ಗೊಬ್ಬರವಾಗಲಿ, ಕೃಷಿ ಉತ್ಪನ್ನಗಳನ್ನು ಮನೆಗೆ ಸಾಗಿಸಲು ಅನುಕೂಲವಾಗಿದೆ. ಕೆಲಸ ಮತ್ತು ಸಮಯದ ಉಳಿತಾವಾಗಿದೆ.
ಕೋಳಿ,ಆಡು, ದನ ಮೀನು ಸಾಕಾಣೆಗೆ ಈಗಿರುವ ಸ್ಥಳಾವಕಾಶಗಳು ಕಡಿಮೆ ಇರುವುದರಿಂದ ಹೊಸದಾದ ಶೆಡ್ಡುಗಳನ್ನು ನಿರ್ಮಿಸುವ ಇನ್ನಷ್ಟು ಅತ್ಯಾಧುನಿಕಗೊಳಿಸುವ ಯೋಚನೆ ಆಸ್ತಿಕ್ ಅವರದು. ಪಶುಪಾಲನೆಯಲ್ಲಿ ಮುಖ್ಯವಾಗಿ ಬೇಕಾಗಿರುವುದು ನೈಸರ್ಗಿಕ ಮೇವು. ಜೋಳ, ನೇಪಿಯರ್ ಹುಲ್ಲು. ಬೆಳೆದಿರುವುದಲ್ಲದೆ ಸೈಲೆಜ್, ಸೊಪ್ಪು ತರಕಾರಿ ಹಾಗೂ ಪಶು ಆಹಾರವನ್ನು ನೀಡುತ್ತಾರೆ.

ಪ್ರಶಸ್ತಿಗಳು: ಕೃಷಿ ಮತ್ತು ಕೃಷಿಪೂರಕ ಉಪಕಸುಬುಗಳಲ್ಲಿ ಇವರ ಆಸಕ್ತಿ ಹಾಗೂ ತಮ್ಮ ಜಮೀನಿನಲ್ಲಿ ಸಮಗ್ರ ಕೃಷಿಯಲ್ಲಿ ತೊಡಗಿಕೊಂಡಿರುವುದನ್ನು ಗಮನಿಸಿ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯವು 2025 ರಲ್ಲಿ ಜಿಲ್ಲಾ ಮಟ್ಟದ ಸಮಗ್ರ ಕೃಷಿ ಪ್ರಶಸ್ತಿ ನೀಡಿದೆ. ವಿಜಯ ಕರ್ನಾಟಕ ಪತ್ರಿಕೆ ಸಾಧಕ ರೈತರಿಗೆ ನೀಡುತ್ತಿರುವ ಸೂಪರ್ ಸ್ಟಾರ್ ಜಿಲ್ಲಾ ಮಟ್ಟದ ರೈತ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ಇವರ ಕೃಷಿ ಸಾಧನೆಯನ್ನು ಗುರುತಿಸಿ ರೈತರು ವಿವಿಧ ಮಾಹಿತಿಗಾಗಿ ಆಗಾಗ ಭೇಟಿ ನೀಡುತ್ತಿರುತ್ತಾರೆ. ಕೋಳಿ, ಕುರಿ, ಮೀನು, ಜೇನು, ಅಣಬೆ ಕೃಷಿಯ ಬಗ್ಗೆ ಮೂಡಿಗೆರೆ ಕೆವಿಕೆಯಲ್ಲಿ ತರಬೇತಿ ಪಡೆದುಕೊಂಡಿದ್ದಾರೆ.
ಕೃಷಿ ಮತ್ತು ಕೃಷಿ ಪೂರಕ ಉದ್ಯಮವನ್ನು ಯುವಕರು ಮಾಡಬಹುದು. ಆದರೆ ವಾಸ್ತವಿಕತೆ, ಪ್ರಯೋಗಶೀಲತೆ, ಆಧುನಿಕ ಕೃಷಿ ಪದ್ಧತಿಯ ಅಳವಡಿಕೆಯ ಬಗ್ಗೆ ಅರಿವು ಇರಬೇಕು. ಹೆಸರಿಗಾಗಿ ಕೃಷಿಯಲ್ಲ. ಪ್ರಗತಿಗಾಗಿ ಕೃಷಿ ಎಂಬ ಧ್ಯೇಯದೊಂದಿಗೆ ಕೆಲಸ ಮಾಡಿದರೆ ಹೆಸರು ತನ್ನಿಂದ ತಾನಾಗಿ ಬರುತ್ತದೆ. ಕೃಷಿಯನ್ನು ಲಾಭದಾಯಕ ಉದ್ದೇಶದಿಂದಷ್ಟೇ ನೋಡಬಾರದು. ಪ್ರಾಕೃತಿಕ ವೈಪರಿತ್ಯದಿಂದ ಆದಾಯದಲ್ಲಿ ಕೆಲವೊಮ್ಮೆ ಏರುಪೇರು ಆಗಬಹುದು. ಆಗ ಧೃತಿಗೆಡಬಾರದು. ಶ್ರದ್ಧೆಯಿಂದ ಮಾಡಿದ ಕೆಲಸ ಆದಾಯವನ್ನು ತಂದುಕೊಡುತ್ತದೆ. ತಾನು ಅದೇ ಸಿದ್ಧಾಂತದಿಂದ ಕೆಲಸ ಮಾಡುತ್ತಿದ್ದೇನೆ. ಅದರಿಂದ ಜನರು ತನ್ನನ್ನು ಗುರುತಿಸುವಂತಾಗಿದೆ ಎಂದು ಹೇಳುತ್ತಾರೆ ಆಸ್ತಿಕ್. ಮಾಹಿತಿಗೆ ಮೊ. 6362745800









