ರಾಜ್ಯ ಸರಕಾರದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಯೋಜನೆಯಡಿ ಕಂದುರೋಗದ ಲಸಿಕ ಕಾರ್ಯಕ್ರಮವನ್ನು ಹಮ್ಮಿಕೊಂಡು ರಾಜ್ಯವನ್ನು ಸಂಪೂರ್ಣ ಕಂದು ರೋಗ ಮುಕ್ತ ಮಾಡುವ ಪ್ರಯತ್ನಕ್ಕೆ ಇಲಾಖೆ ಮುಂದಾಗಿದೆ
ಕಂದು ರೋಗಕ್ಕೆ (ಬ್ರೂಸೆಲ್ಲೋಸಿಸ್)
ತುತ್ತಾಗುವ ಪ್ರಾಣಿಗಳು: ಹಸು, ಎಮ್ಮೆ, ಕುರಿ, ಮೇಕೆ, ಹಂದಿ, ನಾಯಿ, ಒಂಟೆ ಮತ್ತು ಕುದುರೆಗಳು.
ರೋಗ ಲಕ್ಷಣಗಳು: ಗರ್ಭಪಾತದ ಮೊದಲು ಜನನೇಂದ್ರಿಯದಿಂದ ಬಿಳಿ ಸ್ರಾವ.ಗರ್ಭ ಧರಿಸಿದ ಹಸು, ಎಮ್ಮೆಗಳಲ್ಲಿ ಕೊನೆಯ ತ್ರೈಮಾಸಿಕದಲ್ಲಿ ಗರ್ಭಪಾತ,ಮಾಸು / ಸತ್ತೆ ಹೊರಬಿಳದೆ ಗರ್ಭದಲ್ಲೇ ಉಳಿದು ಗರ್ಭಾಶಯವನ್ನು ಹಾಳುಗೆಡವುತ್ತದೆ, ಕೀಲುಗಳಲ್ಲಿ ನೀರು ತುಂಬಿಕೊಂಡು ಊತ ಮೊದಲಾದ ರೋಗ ಲಕ್ಷಣಗಳು ಕಂಡುಬರುತ್ತವೆ
ಕಂದು ರೋಗದಿಂದ ಹರಡುವ ರೀತಿ:
ಕಲುಷಿತಗೊಂಡ ಆಹಾರ ಮತ್ತು ನೀರು ಸೇವಿಸುವುದರಿಂದ ಹಾಗೂ ಕಣ್ಣು ಮತ್ತು ಚರ್ಮದ ಮುಖಾಂತರ, ಕೃತಕ ಗರ್ಭಧಾರಣೆಯಲ್ಲಿ ಸೋಂಕಿತ ವೀರ್ಯಗಳ ಉಪಯೋಗದಿಂದ, ರೋಗಗ್ರಸ್ತ ಹೋರಿಗಳಿಂದ ತಳಿ ಸಂವರ್ಧನೆ ಮಾಡುವುದರಿಂದ ಈ ರೋಗವು ಜಾನುವಾರುಗಳಲ್ಲಿ ಹರಡುತ್ತದೆ, ರೋಗಗ್ರಸ್ಥ ಜಾನುವಾರುಗಳ ಗರ್ಭಸ್ರಾವ ಹಾಗೂ ಮಾಸುಗಳಲ್ಲಿ ರೋಗಾಣುಗಳು ಕಂಡುಬರುತ್ತದೆ. ಅಂತಹ ರಾಸುಗಳ ಚಿಕಿತ್ಸೆಯಲ್ಲಿ ನಿರತರಾದವರು, ಹೈನುಗಾರರು ಈ ಖಾಯಿಲೆಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚು.
ಜಾನುವಾರುಗಳಲ್ಲಿ ಈ ರೋಗದ ನಿಯಂತ್ರಣ:
ವರ್ಷಕ್ಕೊಮ್ಮೆ ಆರೋಗ್ಯವಂತ ರಾಸುಗಳಲ್ಲಿ ರೋಗದ ಪರೀಕ್ಷೆ ಮಾಡಿಸುವುದು. ರೋಗಗ್ರಸ್ತ ಹೋರಿಗಳಿಂದ ರೋಗ ಪ್ರಸಾರವಾಗುವುದನ್ನು ತಡೆಗಟ್ಟಲು ಆಕಳು ಮತ್ತು ಎಮ್ಮೆಗಳಲ್ಲಿ ಸೋಂಕುರಹಿತ ವೀರ್ಯಗಳನ್ನು ಬಳಸಿ ಕೃತಕ ಗರ್ಭಧಾರಣೆಗೆ ಪ್ರೋತ್ಸಾಹ ನೀಡಬೇಕು.
ಪ್ರತಿಬಂಧಕೋಪಾಯವಾಗಿ 4 ರಿಂದ 8 ತಿಂಗಳು ಪ್ರಾಯದ ಹಸು ಮತ್ತು ಎಮ್ಮೆಗಳ ಹೆಣ್ಣು ಕರುಗಳಿಗೆ ತಪ್ಪದೇ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರವೇ ಲಸಿಕೆ ಹಾಕಿಸಬೇಕು. ಗರ್ಭಪಾತವಾದ ಭ್ರೂಣ, ಮಾಸು, ಸ್ರಾವ ಇತ್ಯಾದಿಗಳನ್ನು ದೂರ ಕೊಂಡೊಯ್ದು ಆಳವಾಗಿ ಹೂಳಬೇಕು ಅಥವಾ ಸುಡಬೇಕು. ಸತ್ತ ರಾಸುಗಳನ್ನು ಆಳವಾಗಿ ಹೂಳಬೇಕು. ಕೊಟ್ಟಿಗೆ ಹಾಗೂ ಗರ್ಭಪಾತವಾದ ಸ್ಥಳವನ್ನು ಸೋಂಕುನಾಶಕ ದ್ರಾವಣದಿಂದ ಶುಚಿಗೊಳಿಸಬೇಕು. ರೋಗಮುಕ್ತವಾಗಿರುವ ಹಿಂಡಿನಿಂದಲೇ ಹಸುಗಳನ್ನು ಖರೀದಿಸಬೇಕು.
ಹೊಸದಾಗಿ ಖರೀದಿಸಿದ ರಾಸುಗಳನ್ನು ಕನಿಷ್ಠ 30 ದಿನಗಳವರೆಗೆ ಉಳಿದ ರಾಸುಗಳಿಂದ ದೂರವಿರಿಸಬೇಕು. (ನಿಗಾ ಘಟಕದಲ್ಲಿರಿಸಬೇಕು). ಬ್ರೂಸೆಲ್ಲೋಸಿಸ್ ಇರಬಹುದೆಂದು ಸಂಶಯಿಸಿದ ಸಂದರ್ಭದಲ್ಲಿ ಪ್ರಯೋಗಾಲಯಕ್ಕೆ ಮಾದರಿ ಕಳುಹಿಸಿ ರೋಗದ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಅಥವಾ ರೋಗ ಪತ್ತೆಗೆ ಕಾಲಕಾಲಕ್ಕೆ ಹಾಲಿನ ಪರೀಕ್ಷೆ ಮಾಡಿಸಬೇಕು. (ವರ್ಷಕ್ಕೆ ಕನಿಷ್ಠ 2 ಬಾರಿ).
ಲಸಿಕೆಯಿಂದ ಆಗುವ ಅನುಕೂಲಗಳು:
ಜಾನುವಾರುಗಳಲ್ಲಿ ಗರ್ಭಪಾತವಾಗುವುದನ್ನು ತಡೆಗಟ್ಟಬಹುದು. ಒಮ್ಮೆ ಲಸಿಕೆ ಹಾಕಿದರೆ ರಾಸಿನ ಜೀವಿತಾವಧಿಯವರೆಗೆ ಕಂದುರೋಗದಿಂದ ರಕ್ಷಣೆ. ಜಾನುವಾರುಗಳ ಹಿಂಡಿನಲ್ಲಿ ರೋಗ ಪ್ರತಿಬಂಧಕ ಶಕ್ತಿ ಹೆಚ್ಚಿಸಲು ಸಾಧ್ಯವಾಗುತ್ತದೆ.
ಪಶುಸಂಗೋಪನಾ ಇಲಾಖೆಯ ವತಿಯಿಂದ ಸಾಮೂಹಿಕ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ರಾಜ್ಯಾದ್ಯಂತ 4 ರಿಂದ 8 ತಿಂಗಳ ಪ್ರಾಯದ ಹೆಣ್ಣು ಎಮ್ಮೆ ಮತ್ತು ಹಸು ಕರುಗಳಿಗೆ ಉಚಿತವಾಗಿ ಲಸಿಕೆ ಹಾಕಲಾಗುತ್ತದೆ.
-ಮಾಹಿತಿ : ಸಹಾಯಕ ನಿರ್ದೇಶಕರು, ಪಶುಸಂಗೋಪನಾ ಇಲಾಖೆ ಕಾರ್ಕಳ ತಾಲೂಕು








