spot_img
Thursday, August 6, 2026
spot_imgspot_img

ಪ್ರಕೃತಿಯ ಮಡಿಲಲ್ಲಿ ಯಶಸ್ವಿ ಸಹಜ ಕೃಷಿ, ನೈಸರ್ಗಿಕ ಕೃಷಿ ಮಾಡುವವರಿಗೆ ಮಾದರಿ ಕಾರ್ಕಳದ ಈ ಕೃಷಿಕ!

ಸುತ್ತ ಮುತ್ತಲೂ ಮರಗಿಡಗಳು. ಅವುಗಳ ನಡುವೆ ಮಿಶ್ರ ಬೆಳೆಯ ತೋಟ ಮತ್ತು ಭತ್ತದ ಗದ್ದೆಗಳು. ಮೇಲ್ನೋಟಕ್ಕೆ ಕಾಡಿನಂತೆ ಬೆಳೆದು ನಿಂತಿರುವ ಈ ಜಮೀನನ್ನು ನೋಡಿದಾಗ, ಉತ್ಪಾದನೆ ಮತ್ತು ಆದಾಯ ಹೆಚ್ಚಿಸಿಕೊಳ್ಳಲು ಎಲ್ಲಾ ಅವಕಾಶಗಳಿದ್ದರೂ ಇಲ್ಲಿ ಯಾಕೆ ಹೀಗೆ ಮರಗಿಡಗಳನ್ನು ಪೊದೆಯಂತೆ ಬೆಳೆಸಿದ್ದಾರೆ ಎಂಬ ಪ್ರಶ್ನೆ ಯಾರಿಗಾದರೂ ಮೂಡಬಹುದು. ಆದರೆ, ಇದರ ಹಿಂದಿರುವ ನೈಸರ್ಗಿಕ ಸತ್ಯವನ್ನು ಅರಿತಾಗ ಅಚ್ಚರಿಯಾಗುತ್ತದೆ.

ಸಾವಯುವ ಕೃಷಿಯಲ್ಲಿ ತೊಡಗಿಕೊಂಡು ಪ್ರಯೋಗಗಳನ್ನು ಮಾಡುತ್ತಾ, ಸಾಧನೆಯೊಂದಿಗೆ ಆತ್ಮಸಂತೃಪ್ತಿ ಕಾಣಬಹುದು ಎಂದು ಬಲವಾಗಿ ನಂಬಿದವರು ಶ್ರೀನಿವಾಸ ಭಟ್ ಇರ್ವತ್ತೂರು. “ಸಹಜ ಸಾವಯುವ ಕೃಷಿ ಲಾಭದಾಯಕವಲ್ಲ” ಎಂಬ ನಂಬಿಕೆ ಸೃಷ್ಟಿಯಾಗಿರುವ ಈ ದಿನಗಳಲ್ಲಿ, ನೈಸರ್ಗಿಕ ಪದ್ಧತಿಯಿಂದಲೂ ಉತ್ತಮ ಫಸಲು ತೆಗೆಯಬಹುದು ಎಂಬುದನ್ನು ಅವರು ಪ್ರಾಯೋಗಿಕವಾಗಿ ನಿರೂಪಿಸಿದ್ದಾರೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಇರ್ವತ್ತೂರು ಗ್ರಾಮದ “ಸಾಧನಾ” ನಿವಾಸದ ಶ್ರೀನಿವಾಸ ಭಟ್ ಮತ್ತು ಸುಜಾತ ಭಟ್ ದಂಪತಿ ಸಹಜ ಕೃಷಿಯಲ್ಲಿ ಯಶಸ್ಸು ಕಂಡವರು. ಇವರಿಗೆ ಕೃಷಿ ಎಂಬುದು ಕೇವಲ ಉದ್ಯೋಗವಲ್ಲ, ಅದೊಂದು ಕಠಿಣ ಪರಿಶ್ರಮ, ಶ್ರದ್ಧೆ ಮತ್ತು ತಪಸ್ಸು. ಅಡಿಕೆ, ತೆಂಗು, ಕಾಳುಮೆಣಸು, ಬಾಳೆ ಮುಂತಾದ ಮಿಶ್ರ ಬೆಳೆಗಳೊಂದಿಗೆ ಭತ್ತವನ್ನೂ ಬೆಳೆಯುತ್ತಿರುವ ಇವರಿಗೆ ಸಹಜ ಕೃಷಿಯೇ ನೆಮ್ಮದಿಯ ಬದುಕು ನೀಡಿದೆ.

ಕಳೆದ 3೦ ವರ್ಷಗಳಿಂದ ಇವರು ತಮ್ಮ ತೋಟಕ್ಕೆ ಯಾವುದೇ ರಾಸಾಯನಿಕ ಗೊಬ್ಬರ ತಂದು ಸುರಿದಿಲ್ಲ. ಅಡಿಕೆಗೆ ಕೊಳೆ ರೋಗ ಬಾಧಿಸಿದರೂ ಹೆಚ್ಚಾಗಿ ಬೋರ್ಡೋ ದ್ರಾವಣವನ್ನು ಸಿಂಪಡಿಸುವುದಿಲ್ಲ. ಹಾಗಾದರೆ ರೋಗ ಬಾಧೆ ನಿಯಂತ್ರಣ ಹೇಗೆ ಎಂಬ ಅನುಮಾನ ಮೂಡಬಹುದು. ಸಹಜ ಕೃಷಿಯಲ್ಲಿ ಸಹಜವಾಗಿಯೇ ರೋಗಗಳನ್ನು ನಿಯಂತ್ರಿಸುವ ಶಕ್ತಿಯನ್ನು ಗಿಡಗಳು ಪಡೆದಿರುತ್ತವೆ. ತೀವ್ರವಾಗಿ ಕಾಡಿದಾಗ ಇಳುವರಿಯ ಮೇಲೆ ವ್ಯತ್ಯಾಸಗಳಾಗುವುದನ್ನು ಸಹಿಸಿಕೊಳ್ಳುವ ಮಾನಸಿಕ ಸಿದ್ಧತೆಯೂ ಇರಬೇಕಾಗುತ್ತದೆ. ಗೋಬರ್ ಗ್ಯಾಸ್‌ನ ನಂತರ ಬರುವ ಸ್ಲರಿ ತ್ಯಾಜ್ಯ, ಗೋಕೃಪಾಮೃತ, ಮಳೆನೀರು ಇಂಗುಗುಂಡಿಗಳಲ್ಲಿ ಶೇಖರಣೆಯಾಗುವ ಕೂಳೆ ಮಣ್ಣು, ಸುಡುಮಣ್ಣು ಮತ್ತು ತರಗೆಲೆಗಳೇ ಇವರ ವಾಣಿಜ್ಯ ಬೆಳೆಗಳ ಮುಖ್ಯ ಆಹಾರ. ತೋಟದ ಕಳೆ ಗಿಡಗಳು ಮತ್ತು ತರಗೆಲೆಗಳು ಸ್ಲರಿಯೊಂದಿಗೆ ಕೊಳೆತು ಅತ್ಯುತ್ತಮ ಗೊಬ್ಬರವಾಗುತ್ತವೆ. ಈ ನೈಸರ್ಗಿಕ ಪೋಷಕಾಂಶಗಳೇ ತೆಂಗು, ಅಡಿಕೆ ಮತ್ತು ಕಾಳುಮೆಣಸಿನ ಗಿಡಗಳನ್ನು ಸಮೃದ್ಧವಾಗಿ ಬೆಳೆಸಿವೆ.

“ಸಹಜ ಕೃಷಿಯಿಂದ ಬೆಳೆಗಳ ಇಳುವರಿಯಲ್ಲಿ ದೊಡ್ಡ ವ್ಯತ್ಯಾಸವೇನೂ ಆಗುವುದಿಲ್ಲ. ಆಧುನಿಕ ಕೃಷಿಯಲ್ಲಿ ಖರ್ಚು-ವೆಚ್ಚಗಳು ದುಬಾರಿ. ಒಟ್ಟಾರೆ ಲೆಕ್ಕಾಚಾರ ಹಾಕಿದಾಗ, ಆಧುನಿಕ ಹಾಗೂ ಸಾವಯುವ ಕೃಷಿಯ ನಿವ್ವಳ ಆದಾಯದಲ್ಲಿ ಹೆಚ್ಚಿನ ವ್ಯತ್ಯಾಸ ಇರುವುದಿಲ್ಲ,” ಎನ್ನುತ್ತಾರೆ ಶ್ರೀನಿವಾಸ ಭಟ್. ಹಿಂದೆ ಕಾರ್ಕಳ ಭಾಗದಲ್ಲಿದ್ದ ಪ್ರಸಿದ್ಧ ನರ್ಸರಿಗಳಲ್ಲಿ ಇವರ ‘ಸಾಧನಾ ನರ್ಸರಿ’ ಕೂಡ ಒಂದಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಕಾರ್ಮಿಕರ ಸಮಸ್ಯೆ ಹೆಚ್ಚಾದುದರಿಂದ ನರ್ಸರಿಯನ್ನು ನಿಲ್ಲಿಸಬೇಕಾಯಿತು.

ಹೈನುಗಾರಿಕೆ: ಕೃಷಿಯ ಬೆನ್ನೆಲುಬು

ಸಾಂಪ್ರದಾಯಿಕ ಕೃಷಿಯಲ್ಲಿ ಹೈನುಗಾರಿಕೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆ ಲಾಭದಾಯಕವಲ್ಲ; ಕೆಲಸದ ಒತ್ತಡವೂ ಹೆಚ್ಚು ಎಂದು ಅನೇಕರು ಕೊಟ್ಟಿಗೆಗಳನ್ನು ಖಾಲಿ ಮಾಡುತ್ತಿದ್ದರೆ, ಭಟ್ಟರು ಮಾತ್ರ ದೇಶೀಯ ತಳಿಗಳ ಹಸುಗಳನ್ನು ಪ್ರೀತಿಯಿಂದ ಸಾಕುತ್ತಿದ್ದಾರೆ. ಇವರು ಹಾಲನ್ನು ನೇರವಾಗಿ ಮಾರಾಟ ಮಾಡುವುದಿಲ್ಲ. ಮನೆ ಬಳಕೆಗೆ ಬೇಕಾದಷ್ಟನ್ನು ಇಟ್ಟುಕೊಂಡು, ಉಳಿದ ಹಾಲಿನಿಂದ ತುಪ್ಪ ತಯಾರಿಸುತ್ತಾರೆ. ಇವರ ಮನೆಯ ಶುದ್ಧ ದೇಶೀಯ ತಳಿಯ ಹಸುವಿನ ತುಪ್ಪಕ್ಕೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ.

ಗೋಬರ್ ಗ್ಯಾಸ್

ಹಸು ಸಾಕಣೆಯಿಂದ ಸಿಗುವ ಸಗಣಿ ಮತ್ತು ಗಂಜಲವನ್ನು ಇವರು ಗೋಬರ್ ಗ್ಯಾಸ್ ಉತ್ಪಾದನೆಗೆ ಬಳಸುತ್ತಾರೆ. ಇವರ ಜಮೀನಿನಲ್ಲಿ ಎರಡು ಹಂತದ ಗೋಬರ್ ಗ್ಯಾಸ್ ಟ್ಯಾಂಕಿಗಳಿದ್ದು, ಇದರಿಂದ ಇಡೀ ಮನೆಗೆ ಬೇಕಾಗುವಷ್ಟು ಅಡುಗೆ ಅನಿಲ ನಿರಂತರವಾಗಿ ಸಿಗುತ್ತದೆ. ಗ್ಯಾಸ್ ತಯಾರಾದ ಬಳಿಕ ಉಳಿಯುವ ಸ್ಲರಿ (ತ್ಯಾಜ್ಯ) ಮತ್ತೊಂದು ಟ್ಯಾಂಕಿನಲ್ಲಿ ಶೇಖರಣೆಯಾಗುತ್ತದೆ. ಈ ಸ್ಲರಿಯೊಂದಿಗೆ ಮನೆಯ ತ್ಯಾಜ್ಯ ನೀರು ಮತ್ತು ಸ್ವತಃ ತಾವೇ ತಯಾರಿಸುವ ಬೆಲ್ಲ-ಮಜ್ಜಿಗೆ ಒಳಗೊಂಡ ಗೋಕೃಪಾಮೃತವನ್ನು ಬೆರೆಸಿ ತೋಟ ಹಾಗೂ ಗದ್ದೆಗಳಿಗೆ ಸಿಂಪಡಿಸುತ್ತಾರೆ. ಗೋಬರ್ ಗ್ಯಾಸ್ ಬೇಕಾದಷ್ಟು ಸಿಗುವುದರಿಂದ ಅಡುಗೆ ಅನಿಲದ ಸಮಸ್ಯೆ ಅವರಿಗೆ ಎದುರಾಗಿಲ್ಲ

ಮಳೆನೀರು ಕೊಯ್ಲು

ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮಳೆ ಹೆಚ್ಚಾಗಿದ್ದರೂ, ಬೇಸಿಗೆಯಲ್ಲಿ ನೀರಿನ ಕೊರತೆ ಕಾಡುತ್ತದೆ. ಆದರೆ ಶ್ರೀನಿವಾಸ್ ಭಟ್ ಅವರು ತಮ್ಮ ಜಮೀನಿನಲ್ಲಿ ಬೀಳುವ ಪ್ರತಿ ಹನಿ ಮಳೆನೀರನ್ನೂ ಸಂರಕ್ಷಿಸುತ್ತಾರೆ. ಜಮೀನಿನ ಮೂರು ಕಡೆಗಳಲ್ಲಿ 1೦೦ ಅಡಿಗೂ ಹೆಚ್ಚು ಉದ್ದ ಹಾಗೂ 10-12 ಅಡಿ ಆಳದ ಕೃಷಿ ಹೊಂಡಗಳನ್ನು ನಿರ್ಮಿಸಿದ್ದಾರೆ. ಮಳೆನೀರು ಇದರಲ್ಲಿ ಸಂಗ್ರಹವಾಗಿ ಹಂತಹಂತವಾಗಿ ಭೂಮಿಗೆ ಇಂಗುವುದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗಿದ್ದು, ಇಡೀ ಕೃಷಿ ಭೂಮಿಗೆ ವರದಾನವಾಗಿದೆ.

ಅರಣ್ಯ ಕೃಷಿ

ಸಾಮಾನ್ಯವಾಗಿ ರೈತರು ಜಮೀನಿನ ತುಂಬೆಲ್ಲಾ ವಾಣಿಜ್ಯ ಬೆಳೆಗಳನ್ನೇ ನೆಡಲು ಇಷ್ಟಪಡುತ್ತಾರೆ. ಆದರೆ ಶ್ರೀನಿವಾಸ ಭಟ್ಟರು ತಮ್ಮ ಜಮೀನಿನ ಅರ್ಧಕ್ಕಿಂತ ಹೆಚ್ಚಿನ ಭಾಗವನ್ನು ಅರಣ್ಯ ಕೃಷಿಗಾಗಿ ಮೀಸಲಿಟ್ಟಿದ್ದಾರೆ! ಇಲ್ಲಿ 1,೦೦೦ಕ್ಕೂ ಹೆಚ್ಚು ಸಾಗುವಾನಿ, 150 ಧೂಪದ ಮರಗಳು, ರಾಮಪತ್ರೆ, ಮಹಾಗನಿ, ಪುನರ್ಪುಳಿ (ಕೋಕಂ) ಹಾಗೂ ೪ ತರಹದ ಬಿದಿರುಗಳಿವೆ. ಇವರಿಗೆ ಕಾಡು ಕೂಡ ಒಂದು ಕೃಷಿಯೇ. ಈ ಕಾಡು ಅಂತರ್ಜಲ ಹೆಚ್ಚಿಸುವುದರ ಜೊತೆಗೆ, ಉದುರುವ ಎಲೆಗಳು ತೋಟಕ್ಕೆ ಮುಚ್ಚಿಗೆಯಾಗುತ್ತದೆ. ತೇವಾಂಶವನ್ನು ಕಾಯ್ದುಕೊಳ್ಳುತ್ತವೆ. ಕಾಡುಕೋಳಿ, ನವಿಲು ಸೇರಿದಂತೆ ಹತ್ತಾರು ಪಕ್ಷಿ-ಪ್ರಾಣಿಗಳಿಗೆ ಇದು ಆಶ್ರಯ ತಾಣವಾಗಿದೆ.

ಹಣ್ಣುಗಳ ಮೌಲ್ಯವರ್ಧನೆ

ತಮ್ಮ ಜಮೀನಿನಲ್ಲಿ ಬೆಳೆಯುವ ಮಾವು, ಹಲಸು, ಅಂಬಟೆಕಾಯಿ ಮತ್ತು ಬಿಂಬುಳಿಗಳನ್ನು ಉಪ್ಪಿನಕಾಯಿ ತಯಾರಿಕೆಗೆ ಬಳಸಿದರೆ, ಪುನರ್ಪುಳಿಯನ್ನು ಒಣಗಿಸಿ ಜ್ಯೂಸ್ ತಯಾರಿಸಲು ಬಳಸುತ್ತಾರೆ. ಇಂತಹ ಸಣ್ಣ ಸಣ್ಣ ಮೌಲ್ಯವರ್ಧನೆಗಳು ಇವರಿಗೆ ಉಪ ಆದಾಯದ ಮೂಲಗಳಾಗಿವೆ.

ಸೌರಶಕ್ತಿಯಿಂದ ವಿದ್ಯುತ್ ಸ್ವಾವಲಂಬನೆ

ಮಳೆಗಾಲವಿರಲಿ, ಬೇಸಿಗೆಯಿರಲಿ ಕೃಷಿ ಮತ್ತು ಗೃಹಬಳಕೆಗೆ ವಿದ್ಯುತ್ ಅತ್ಯಗತ್ಯ. ಹಳ್ಳಿಗಳಲ್ಲಿ ಈ ಎರಡು ಕಾಲದಲ್ಲೂ ವಿದ್ಯುತ್ ಸಮಸ್ಯೆ ಕಾಡುತ್ತದೆ. ಇದರಿಂದ ಮುಕ್ತಿ ಪಡೆಯಲು ಇವರು 5 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. ಇದರ ಮೂಲಕ ಇಡೀ ಮನೆ ಹಾಗೂ ತೋಟಕ್ಕೆ ಬೇಕಾದ ವಿದ್ಯುತ್ ಉತ್ಪಾದನೆಯಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸಿದ್ದಾರೆ.

ಸಾವಯುವ ಭತ್ತದ ಕೃಷಿ

ತಮ್ಮ ಜಮೀನಿನ ಎರಡು ಗದ್ದೆಗಳಲ್ಲಿ ಸಾವಯುವ ಪದ್ಧತಿಯಲ್ಲಿ ಭತ್ತ ಬೆಳೆಯುತ್ತಾರೆ. ಈ ಬಾರಿ ಜಯ ಕಜೆ ಸೇರಿದಂತೆ ನಾಲ್ಕು ವಿಧದ ಭತ್ತದ ತಳಿಗಳನ್ನು ಬೆಳೆಸಿದ್ದಾರೆ. ಸಾಂಪ್ರದಾಯಿಕ ತಳಿಗಳ ಉಳಿವಿಗಾಗಿ ಮತ್ತು ಮನೆ ತುಂಬಿಸುವ ಶುಭ ಕಾರ್ಯದ ‘ತೆನೆ’ಗಾಗಿ ಅಂಗಳದ ಬದಿಯಲ್ಲಿ ಬುಟ್ಟಿಗಳಲ್ಲೂ ಭತ್ತ ಬೆಳೆಸಿರುವುದು ಇವರ ಕೃಷಿ ಪ್ರೇಮಕ್ಕೆ ಸಾಕ್ಷಿ. ಮನೆ ಬಳಕೆಗೆ ಬೇಕಾದಷ್ಟು ಭತ್ತ ಇಟ್ಟುಕೊಂಡು, ಉಳಿದ ಭತ್ತವನ್ನು ಸಾವಯುವ ಆಸಕ್ತರಿಗೆ ಮಾರಾಟ ಮಾಡುತ್ತಾರೆ.

“ಭತ್ತದ ಕೃಷಿಯನ್ನು ಕೇವಲ ವ್ಯವಹಾರ ಅಥವಾ ಲಾಭ-ನಷ್ಟದ ದೃಷ್ಟಿಯಿಂದ ನೋಡಬಾರದು. ಅದು ನಮ್ಮ ಆಹಾರ ಬೆಳೆಯಾಗಿರುವುದರಿಂದ ಉತ್ಪಾದನೆಗೆ ಆದ್ಯತೆ ನೀಡಬೇಕು,” ಎಂಬುದು ಶ್ರೀನಿವಾಸ್ ಭಟ್ ಅವರ ನಿಲುವು.

ಕಾರ್ಮಿಕರ ಕೊರತೆಯನ್ನು ನೀಗಿಸಲು ಇವರು ಭತ್ತದ ಬೇಸಾಯದಲ್ಲಿ ಆಧುನಿಕ ‘ಚಾಪೆ ನೇಜಿ’ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಇದರಿಂದ ಖರ್ಚು ಮತ್ತು ಸಮಯದ ಭಾರೀ ಉಳಿತಾಯವಾಗುತ್ತಿದೆ. ಗದ್ದೆಗೆ ಗೊಬ್ಬರವಾಗಿ ಸ್ಲರಿ ಮತ್ತು ಸುಡುಮಣ್ಣು ಬಳಸುತ್ತಾರೆ. ಭತ್ತದ ಕೊಯ್ಲಿನ ನಂತರ ಗದ್ದೆಯಲ್ಲಿ ತರಕಾರಿ ಬೆಳೆಯುವ ಹವ್ಯಾಸ ಹೊಂದಿದ್ದರೂ, ಇತ್ತೀಚಿನ ದಿನಗಳಲ್ಲಿ ನವಿಲುಗಳ ಸಮಸ್ಯೆ ಹೆಚ್ಚಾಗಿರುವುದರಿಂದ ತರಕಾರಿ ಕೃಷಿ ಸವಾಲಾಗಿ ಪರಿಣಮಿಸಿದೆ.

ಶ್ರೀನಿವಾಸ್ ಭಟ್ ಅವರು ಕೃಷಿಯ ಜೊತೆಗೆ ಸಾಮಾಜಿಕವಾಗಿಯೂ ಸಕ್ರಿಯರಾಗಿದ್ದಾರೆ. ಪ್ರಸ್ತುತ ಅವರು ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದರೊಂದಿಗೆ ಕೃಷಿ ಪ್ರಯೋಗ ಪರಿವಾರ, ಸಾವಯುವ ಕೃಷಿ ಪರಿವಾರ ಹಾಗೂ ಸುಭಿಕ್ಷ ಸೇರಿದಂತೆ ಹತ್ತಾರು ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಸಾವಯುವ ಕೃಷಿ ಸಾಧನೆಯನ್ನು ಗುರುತಿಸಿ ಹಲವು ಸಂಘ-ಸಂಸ್ಥೆಗಳು ಗೌರವಿಸಿ ಸನ್ಮಾನಿಸಿವೆ.

ಅವರ ಪತ್ನಿ ಸುಜಾತ ಭಟ್ ಅವರು ಕೂಡ ಪ್ರಗತಿಪರ ಕೃಷಿಕರಾಗಿದ್ದು, ಇವರ ಕೃಷಿ ಸಾಧನೆಗೆ ಜೊತೆಯಾಗಿ ಶ್ರಮಿಸುತ್ತಿರುವವರು. ಸುಜಾತ ಭಟ್ ಅವರಿಗೆ ಪ್ರತಿಷ್ಠಿತ ‘ವಿಕ ಸೂಪರ್ ಸ್ಟಾರ್ ರೈತ ಮಹಿಳಾ ಪ್ರಶಸ್ತಿ’ ಲಭಿಸಿರುವುದು ಈ ದಂಪತಿಯ ಕಠಿಣ ಪರಿಶ್ರಮಕ್ಕೆ ದೊರೆತ ಮನ್ನಣೆ. ಶ್ರೀನಿವಾಸ ಭಟ್ಟರ ಸಹಜ ಕೃಷಿ ಸಾಧನೆಗೆ ತಾಯಿ ಪ್ರೇಮಾ ಭಟ್ ಅವರ ಪ್ರೋತ್ಸಾಹ ಬೆಂಬಲವೂ ಸಹಕಾರಿಯಾಗಿದೆ. ಪ್ರಕೃತಿ ಪರಿಸರವನ್ನು ಪ್ರೀತಿಸುತ್ತಾ, ಸಂತೃಪ್ತ ಜೀವನ ನಡೆಸುತ್ತಿರುವ ಇರ್ವತ್ತೂರಿನ ಈ ದಂಪತಿ ಇಂದಿನ ಯುವ ಪೀಳಿಗೆಯ ಕೃಷಿಕರಿಗೆ ಮಾದರಿ.

ತನ್ನ ಮನೆಯಲ್ಲಿಯೇ ಕೃಷಿ ತರಬೇತಿಗಳನ್ನು ಆಯೋಜಿಸುವುದಲ್ಲದೆ ಸಂಪನ್ಮೂಲ ವ್ಯಕ್ತಿಗಳಾಗಿಯೂ ಭಾಗವಹಿಸುತ್ತಾರೆ

ಬರಹ: ರಾಧಾಕೃಷ್ಣ ತೊಡಿಕಾನ

 ಚಿತ್ರ : ಚಂದ್ರನಾಥ ಬಜಗೋಳಿ

 

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group