ಬರಹ-ರಾಧಾಕೃಷ್ಣ ತೊಡಿಕಾನ
“ಕೃಷಿಯಲ್ಲಿ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು, ಉಳಿಸುವುದು ಮರೀಚಿಕೆ” ಎಂಬ ಭಾವನೆ ಅನೇಕ ಸಣ್ಣ ರೈತರ ಮನಸ್ಸಿನಲ್ಲಿ ಮನೆ ಮಾಡಿದೆ. ಕೃಷಿಯನ್ನು ಬಿಟ್ಟು ಬೇರೆ ಕ್ಷೇತ್ರಗಳಲ್ಲಿ ದುಡಿದರೆ ಮಾತ್ರ ಬದುಕು ಸುಗಮವಾಗುತ್ತದೆ ಎಂಬುದು ಸಾಮಾನ್ಯವಾಗಿರುವ ಅಭಿಪ್ರಾಯ. ಆದರೆ ಈ ಮನೋಭಾವವನ್ನು ಬದಲಿಸಿ, “ಸಣ್ಣ ರೈತರೂ ಸಮಗ್ರ ಮತ್ತು ಸಾವಯವ ಕೃಷಿಯಿಂದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬಹುದು” ಎಂಬ ವಿಶ್ವಾಸವನ್ನು ಹೆಚ್ಚಿಸಿದವರು ಹೇರೂರು ಗ್ರಾಮದ ಮಡ್ಲಗೇರಿಯ ಬಾಬು ಆಚಾರ್ಯ.
ತಮ್ಮ ಪರಿಸರದ ರೈತರಿಗೆ ಕಡಿಮೆ ಬಂಡವಾಳದಲ್ಲಿ ಹೆಚ್ಚು ಆದಾಯ ಪಡೆಯುವ ಮಾರ್ಗದರ್ಶನ ನೀಡುತ್ತಾ, ಕೃಷಿಯತ್ತ ಯುವಕರನ್ನು ಮತ್ತು ಸಣ್ಣ ರೈತರನ್ನು ಆಕರ್ಷಿಸುವ ಕೆಲಸವನ್ನು ಅವರು ಹಲವು ವರ್ಷಗಳಿಂದ ಮಾಡುತ್ತಿದ್ದಾರೆ. ರೈತರ ಬಳಗವನ್ನು ಕಟ್ಟಿಕೊಂಡು ಕೃಷಿಯಿಂದಲೂ ಸಂತೋಷದ, ಸಮೃದ್ಧ ಜೀವನ ಸಾಧ್ಯ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.
ಮಹಾನಗರದಿಂದ ಮಣ್ಣಿನತ್ತ
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಹೇರೂರು ಗ್ರಾಮದ ಮಡ್ಲಗೇರಿಯ ಬಾಬು ಆಚಾರ್ಯರು ಪದವಿ ಮುಗಿದ ತಕ್ಷಣ ಉದ್ಯೋಗ ಹುಡುಕಿ ಮುಂಬೈ ನಗರಕ್ಕೆ ತೆರಳಿದ್ದರು. ಮಹಾನಗರವು ಕೆಲವರನ್ನು ಎತ್ತರಕ್ಕೆ ಏರಿಸಿದರೆ, ಕೆಲವರನ್ನು ಕೆಳಕ್ಕೆ ತಳ್ಳಿ ಬದುಕಿನ ಹೊಸ ಪಾಠ ಕಲಿಸಿ ಬಿಡುತ್ತದೆ. ಬಾಬು ಆಚಾರ್ಯರ ಬದುಕಿನಲ್ಲಿ ಕೂಡ ಅದೇ ರೀತಿಯ ಅನುಭವ. ಮಹಾನಗರದಲ್ಲಿ ಒಂದಾಗಲಿಲ್ಲ. ಅದರಿಂದ ಹೊರಬರಬೇಕಾದ ಅನಿವಾರ್ಯತೆ ಅವರಿಗಾಯಿತು.
ಮುಂಬೈಯಲ್ಲಿ ಮೊದಲಿಗೆ ಕಾರ್ಪೆಂಟರ್ ಕೆಲಸ ಆರಂಭಿಸಿದ ಅವರು ಬಳಿಕ ಹೋಟೆಲ್ ಉದ್ಯಮಕ್ಕೂ ಕೈಹಾಕಿದರು. ಉಡುಪಿ ಭಾಗದ ಅನೇಕರು ಮುಂಬೈನಲ್ಲಿ ಹೋಟೆಲ್ ಕ್ಷೇತ್ರದಲ್ಲಿ ಯಶಸ್ಸು ಕಂಡರೂ, ಆ ಉದ್ಯಮವು ಬಾಬು ಆಚಾರ್ಯರ ಕೈಹಿಡಿಯಲಿಲ್ಲ. 1992 ರ ಅವಧಿಯಲ್ಲಿ ಮುಂಬೈ ಬಿಟ್ಟು ಹೊರಟ ಅವರು ನಂತರ ಸೊರಬದಲ್ಲಿ ಹಂಚಿನ ವ್ಯವಹಾರ ಆರಂಭಿಸಿದರು. ಆದರೆ ಅಲ್ಲಿ ಕೂಡ ಯಶಸ್ಸು ಸಿಗಲಿಲ್ಲ. ಉಳಿದ ಏಕೈಕ ದಾರಿ ಊರಿಗೆ ಮರಳುವುದಾಗಿತ್ತು. ಮರಳಿ ಊರಿಗೆ ಬಂದ ಬಾಬು ಆಚಾರ್ಯರಿಗೆ ಕೃಷಿಯೇ ಬದುಕಿನ ನೆಮ್ಮದಿಯ ನಿಟ್ಟುಸಿರು ನೀಡಿತು. ಕೃಷಿಯಲ್ಲೇ ಸಂತೋಷ ಕಂಡ ಅವರು ತಮ್ಮ ಮನೆಗೆ “ಕೃಷಿ ಸಿರಿ” ಎಂಬ ಹೆಸರನ್ನೇ ಇಟ್ಟಿದ್ದಾರೆ.
ಸಮಗ್ರ ಕೃಷಿಯತ್ತ ಹೆಜ್ಜೆ
ಈ ಭಾಗದ ರೈತರು ಪರಂಪರೆಯಿಂದ ಭತ್ತದ ಬೆಳೆಗೆ ಮಾತ್ರ ಸೀಮಿತರಾಗಿದ್ದ ಸಂದರ್ಭದಲ್ಲಿ, ತೋಟಗಾರಿಕಾ ಬೆಳೆಗಳತ್ತ ಅವರನ್ನು ಪ್ರೇರೇಪಿಸಿದವರಲ್ಲಿ ಬಾಬು ಆಚಾರ್ಯ ಪ್ರಮುಖರು. ತಮ್ಮ ಸಣ್ಣ ಹಿಡುವಳಿಯ ಜಮೀನಿನಲ್ಲಿ ಅಡಿಕೆಯನ್ನು ಪ್ರಧಾನ ಬೆಳೆಯಾಗಿ ಇಟ್ಟುಕೊಂಡು ಕಾಳುಮೆಣಸು, ಬಾಳೆ, ಗೇರು ಸೇರಿದಂತೆ ಮಿಶ್ರ ಬೆಳೆ ಪದ್ಧತಿಯನ್ನು ಅಳವಡಿಸಿಕೊಂಡರು.
“ಒಂದು ಬೆಳೆ ವಿಫಲವಾದರೂ ಇನ್ನೊಂದು ಬೆಳೆ ರೈತನನ್ನು ಕೈಹಿಡಿಯಬೇಕು” ಎಂಬ ತತ್ವವನ್ನು ಅವರು ಅಳವಡಿಸಿ ಅನುಷ್ಠಾನಗೊಳಿಸಿದ್ದಾರೆ. ಮತ್ತು ಇತರರಿಗೂ ಪ್ರೇರೇಪಿಸಿದ್ದಾರೆ.

ಅಡಿಕೆ ಗಿಡಗಳ ತಯಾರಿ
ತೋಟಗಾರಿಕಾ ಬೆಳೆಗಳ ಕುರಿತು ರೈತರಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡುವ ಬಾಬು ಆಚಾರ್ಯರು, ದೂರದ ನರ್ಸರಿಗಳಿಂದ ಗಿಡಗಳನ್ನು ತರಿಸುವ ಬದಲು ಉತ್ತಮ ತಳಿಯ ಅಡಿಕೆ ಗಿಡಗಳನ್ನು ತಾವೇ ತಯಾರಿಸಲು ಆರಂಭಿಸಿದರು.
ಪ್ರತಿ ವರ್ಷ 50 ಸಾವಿರಕ್ಕಿಂತಲೂ ಹೆಚ್ಚು ಅಡಿಕೆ ಗಿಡಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಯಾವುದೇ ರಾಸಾಯನಿಕ ಗೊಬ್ಬರ ಬಳಸದ ಈ ಗಿಡಗಳನ್ನು ಜೀವಾಮೃತದ ಸಹಾಯದಿಂದ ಬೆಳೆಸಲಾಗುತ್ತದೆ. ಪರಿಣಾಮವಾಗಿ ಉತ್ತಮ ಬೆಳವಣಿಗೆ ಹಾಗೂ ರೋಗನಿರೋಧಕ ಶಕ್ತಿಯುಳ್ಳ ಗಿಡಗಳಿಗೆ ರೈತರಿಂದ ಉತ್ತಮ ಬೇಡಿಕೆ ಇದೆ.
ಬೈಂದೂರು, ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ರೈತರು ಇವರ ಬಳಿಯಿಂದ ಗಿಡಗಳನ್ನು ಖರೀದಿಸುತ್ತಾರೆ. ಅಡಿಕೆಯ ಜೊತೆಗೆ ತೆಂಗು, ಕಾಳುಮೆಣಸು, ಜಾಯಿಕಾಯಿ ಮೊದಲಾದ ಗಿಡಗಳನ್ನೂ ಅವರು ತಯಾರಿಸುತ್ತಿದ್ದಾರೆ.
ಸಾವಯವ ಸಂದೇಶ
ತಮ್ಮಲ್ಲಿ ಹೆಚ್ಚು ಜಮೀನು ಇಲ್ಲದಿದ್ದರೂ, ಇರುವ ಜಾಗದಲ್ಲೇ ಸಮಗ್ರ ಕೃಷಿ ಅಳವಡಿಸಿಕೊಂಡು ನೆಮ್ಮದಿಯ ಬದುಕು ನಡೆಸುತ್ತಿರುವ ಬಾಬು ಆಚಾರ್ಯರು, ಕೃಷಿಗೆ ರಾಸಾಯನಿಕ ಗೊಬ್ಬರ ಅನಿವಾರ್ಯವಲ್ಲ ಎಂಬುದನ್ನು ಮನಗಂಡಿದ್ದಾರೆ.
ಸಾವಯವ ಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆ ಉಳಿಯುತ್ತದೆ, ಬೆಳೆಗಳ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಕೃಷಿ ವೆಚ್ಚ ಕಡಿಮೆಯಾಗುತ್ತದೆ ಎಂಬುದು ಅವರ ನಿಲುವು. ಜೀವಾಮೃತದ ಬಳಕೆಯಿಂದ ಜೈವಿಕ ಕ್ರಿಯೆ ಹೆಚ್ಚಾಗಿ ಬೆಳೆ ಆರೋಗ್ಯಕರವಾಗುತ್ತದೆ ಎಂದು ಅವರು ಹೇಳುತ್ತಾರೆ. ತೋಟಕ್ಕೆ ಬೇಕಾದ ಗೊಬ್ಬರಕ್ಕಾಗಿ ದೇಶೀ ದನಗಳನ್ನು ಸಾಕಿರುವ ಅವರು, ನೀರಿನ ಮಿತ ಬಳಕೆಯ ಮೇಲೂ ಹೆಚ್ಚಿನ ನಿಗಾ ವಹಿಸಿದ್ದಾರೆ. “ಅವಶ್ಯಕತೆಯಷ್ಟೇ ನೀರು ಹಾಯಿಸಬೇಕು; ಅತಿಯಾದ ನೀರು ಕೂಡ ಬೆಳೆಗಳಿಗೆ ಹಾನಿಕಾರಕ” ಎಂಬುದು ಅವರ ಅಭಿಪ್ರಾಯ.
ಕೃಷಿಕರ ಒಡನಾಡಿ
ಬಾಬು ಆಚಾರ್ಯರು ಕೇವಲ ಗಿಡಗಳನ್ನು ಮಾರಾಟ ಮಾಡುವುದಲ್ಲ; ರೈತರ ತೋಟಗಳಿಗೆ ತೆರಳಿ ನೇರವಾಗಿ ಮಾರ್ಗದರ್ಶನ ನೀಡುತ್ತಾರೆ. ತಾರಸಿ ಕೃಷಿ, ಸಾವಯವ ಕೃಷಿ, ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವ ವಿಧಾನಗಳು ಸೇರಿದಂತೆ ಅನೇಕ ಕೃಷಿ ತಾಂತ್ರಿಕ ಮಾಹಿತಿಗಳನ್ನು ಉಚಿತವಾಗಿ ಹಂಚಿಕೊಳ್ಳುತ್ತಾರೆ.
ಅವರ ಎರಡುವರೆ ಎಕರೆ ಜಾಗದಲ್ಲಿ ಅಡಿಕೆ ಪ್ರಧಾನ ಬೆಳೆಯಿದ್ದರೂ, ಪಾರಂಪರಿಕ ಭತ್ತದ ಬೆಳೆಯನ್ನು ಬಿಡದೆ ಮುಂದುವರಿಸಿದ್ದಾರೆ. ಹೀಗಾಗಿ ಮನೆ ಬಳಕೆಯ ಅಕ್ಕಿಗಾಗಿ ಮಾರುಕಟ್ಟೆಯನ್ನು ಅವಲಂಬಿಸಬೇಕಾಗಿಲ್ಲ. ಜೊತೆಗೆ ಬೆಂಡೆ, ತೊಂಡೆ, ಅಲಸಂಡೆ, ಹಿರೇಕಾಯಿ, ಹಾಗಲಕಾಯಿ ಸೇರಿದಂತೆ ವಿವಿಧ ತರಕಾರಿಗಳನ್ನು ತಾವೇ ಬೆಳೆಯುವುದರಿಂದ ಮನೆ ಬಳಕೆಯ ತರಕಾರಿ ಖರ್ಚೂ ಕಡಿಮೆಯಾಗಿದೆ.
ಬಾಬು ಆಚಾರ್ಯರ ಉದ್ದೇಶ ಕೇವಲ ವ್ಯಾಪಾರವಲ್ಲ. ಹಳ್ಳಿಗಳಲ್ಲಿರುವ ಕೃಷಿಕ ಕುಟುಂಬಗಳು ಕೃಷಿಯನ್ನು ತೊರೆಯದಂತೆ ತಡೆಯುವುದು, ಯುವಕರನ್ನು ಕೃಷಿಯತ್ತ ಆಕರ್ಷಿಸುವುದು ಹಾಗೂ ಸಾವಯವ ಕೃಷಿಗೆ ಪ್ರೇರೇಪಿಸುವುದೇ ಅವರ ಮುಖ್ಯ ಆಶಯವಾಗಿದೆ.
“ಕೃಷಿಯಿಂದಲೇ ಸ್ವಾವಲಂಬಿ ಜೀವನ ನಡೆಸಬಹುದು” ಎಂಬುದನ್ನು ಸಮಾಜಕ್ಕೆ ತೋರಿಸುವ ನಿಟ್ಟಿನಲ್ಲಿ ಅವರು ರೈತರ ತಂಡವನ್ನೇ ಕಟ್ಟಿಕೊಂಡಿದ್ದಾರೆ. ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಕೃಷಿಕರಿಗಾಗಿ ದುಡಿಯುತ್ತಿರುವ ಅವರ ಕೆಲಸಕ್ಕೆ ಪತ್ನಿ ಹೇಮಾವತಿಯವರ ಸಹಕಾರವೂ ಅಪಾರವಾಗಿದೆ. ಬಹುತೇಕ ಕೃಷಿ ಕೆಲಸಗಳನ್ನು ಮನೆಯವರೇ ನಿಭಾಯಿಸುತ್ತಾರೆ; ಅನಿವಾರ್ಯವಾದಾಗ ಮಾತ್ರ ಕೂಲಿ ಕಾರ್ಮಿಕರ ನೆರವನ್ನು ಪಡೆಯುತ್ತಾರೆ.
ಸನ್ಮಾನ ಮತ್ತು ಗೌರವ
ಸಾವಯವ ಕೃಷಿ ಹಾಗೂ ರೈತರಿಗೆ ನೀಡುತ್ತಿರುವ ಮಾರ್ಗದರ್ಶನವನ್ನು ಗುರುತಿಸಿ ಬಾಬು ಆಚಾರ್ಯರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕಂಬದಕೋಣೆ ವ್ಯವಸಾಯ ಸೇವಾ ಸಹಕಾರಿ ಸಂಘ, ಮರವಂತೆ ಬಡಾಕರೆ ವ್ಯವಸಾಯ ಸೇವಾ ಸಹಕಾರಿ ಸಂಘ, ವಿವಿಧ ಶಿಕ್ಷಣ ಸಂಸ್ಥೆಗಳು ಹಾಗೂ ಹಲವು ಸಂಘ-ಸಂಸ್ಥೆಗಳು ಇವರ ಸೇವೆಯನ್ನು ಗುರುತಿಸಿ ಸನ್ಮಾನಿಸಿವೆ.
“ರೈತ ಬಂಧು” ಎಂಬ ಗೌರವಕ್ಕೂ ಪಾತ್ರರಾಗಿರುವ ಬಾಬು ಆಚಾರ್ಯರು, ಕೃಷಿಯನ್ನು ಬದುಕಿನ ಸಾಧನೆಯಾಗಿ ರೂಪಿಸಿಕೊಂಡ ಅಪರೂಪದ ಕೃಷಿಕರಾಗಿದ್ದಾರೆ. ಮಾಹಿತಿಗೆ: 9980270485





