spot_img
Friday, August 14, 2026
spot_imgspot_img

ಪಶ್ಚಿಮ ಘಟ್ಟದ ಅಪರೂಪದ ಕಾಡು ಹಣ್ಣು ‘ಕೋಳಿ ಕುಕ್ಕೆ’: ಕಾಂಡದಲ್ಲೇ ಗೊಂಚಲು ಗೊಂಚಲಾಗಿ ಬೆಳೆಯುವ ವಿಸ್ಮಯ!

ಚಿತ್ರ ಬರಹ: ಕುಮಾರ್ ಪರ್ನಾಜೆ

ಪಶ್ಚಿಮ ಘಟ್ಟಗಳು ಅಪರೂಪದ ಜೀವವೈವಿಧ್ಯಗಳ ತವರೂರು. ಇಲ್ಲಿನ ದಟ್ಟ ಮಳೆಕಾಡುಗಳ ನಡುವೆ ಪ್ರಕೃತಿಯ ಹಲವು ವಿಸ್ಮಯಗಳು ಕಾಣಸಿಗುತ್ತವೆ. ಅಂತಹ ಅಪರೂಪದ ಕಾಡು ಹಣ್ಣುಗಳಲ್ಲಿ ‘ಕೋಳಿ ಕುಕ್ಕೆ’ ಅಥವಾ ‘ಕೋಳಿ ಜುಟ್ಟು ಹಣ್ಣು’ ಕೂಡ ಒಂದು. ಸಾಮಾನ್ಯವಾಗಿ ಮರಗಳ ಕೊಂಬೆಗಳಲ್ಲಿ ಹಣ್ಣು ಬಿಡುವುದನ್ನು ನೋಡುತ್ತೇವೆ. ಆದರೆ ಈ ಮರದ ವಿಶೇಷತೆಯೇ ಬೇರೆ. ಹಣ್ಣುಗಳು ಕೊಂಬೆಗಳ ಬದಲಿಗೆ ನೇರವಾಗಿ ಮರದ ಕಾಂಡದಲ್ಲೇ ಗೊಂಚಲು ಗೊಂಚಲಾಗಿ ಬೆಳೆಯುತ್ತವೆ.

ಕನ್ನಡದಲ್ಲಿ ಕೋಳಿ ಕುಕ್ಕೆ ಹಣ್ಣು, ಕೋಳಿ ಜುಟ್ಟು ಹಣ್ಣು ಅಥವಾ ಮೈಂದಪುಳಿ ಎಂದು ಕರೆಯಲಾಗುವ ಈ ಹಣ್ಣಿಗೆ ಮಲಯಾಳಂನಲ್ಲಿ ಮೂಟ್ಟಿಪಳಂ ಅಥವಾ ಮೂಟ್ಟಿಪುಳಿ ಎಂಬ ಹೆಸರುಗಳಿವೆ. ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ನೈಸರ್ಗಿಕವಾಗಿ ಕಂಡುಬರುವ ಈ ಅಪರೂಪದ ಹಣ್ಣಿನ ಮರ ಇದೀಗ ನಾಡಿನ ತೋಟಗಳಲ್ಲೂ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ಕಾಂಡದಲ್ಲೇ ಹಣ್ಣುಗಳ ವೈಭವ!

ಸಸ್ಯವಿಜ್ಞಾನದಲ್ಲಿ ‘ಕೌಲಿಫ್ಲೋರಿ’ (Cauliflory) ಎಂದು ಕರೆಯಲಾಗುವ ವಿಶಿಷ್ಟ ಪ್ರಕ್ರಿಯೆಯಲ್ಲಿ ಈ ಮರದ ಹಣ್ಣುಗಳು ನೇರವಾಗಿ ಮುಖ್ಯ ಕಾಂಡದ ಮೇಲೆಯೇ ಬೆಳೆಯುತ್ತವೆ. ಮಧ್ಯಮ ಗಾತ್ರದ ಈ ಮರ ಸುಮಾರು 10ರಿಂದ 18 ಮೀಟರ್‌ಗಳಷ್ಟು ಎತ್ತರಕ್ಕೆ ಬೆಳೆಯುತ್ತದೆ.

ಮರದ ಬೂದು ಬಣ್ಣದ ತೊಗಟೆಯ ಮೇಲೆ ಮೊದಲು ಸಣ್ಣ ಗಂಟುಗಳಂತಹ ರಚನೆಗಳು ಕಾಣಿಸಿಕೊಳ್ಳುತ್ತವೆ. ನಂತರ ಹೂವುಗಳು ಮೂಡಿ, ಮುಂದೆ ಅವು ದಟ್ಟವಾದ ಗಾಢ ಕೆಂಪು ಬಣ್ಣದ ಹಣ್ಣಿನ ಗೊಂಚಲುಗಳಾಗಿ ಪರಿವರ್ತನೆಯಾಗುತ್ತವೆ. ಹಣ್ಣಿನ ಗೊಂಚಲುಗಳಿಂದ ಮರದ ಕಾಂಡವೇ ಕೆಂಪು ಹಾಸಿನಂತೆ ಕಂಗೊಳಿಸುವ ದೃಶ್ಯ ನೋಡುಗರನ್ನು ಆಕರ್ಷಿಸುತ್ತದೆ.

ಒಂದು ಗೊಂಚಲಿನಲ್ಲಿ 25ರಿಂದ 50 ಹಣ್ಣು!

ಕೋಳಿ ಕುಕ್ಕೆ ಹಣ್ಣಿನ ಮತ್ತೊಂದು ವಿಶೇಷವೆಂದರೆ ಒಂದೇ ಗೊಂಚಲಿನಲ್ಲಿ ಸುಮಾರು 25ರಿಂದ 50 ಹಣ್ಣುಗಳು ಕಂಡುಬರುತ್ತವೆ. ಆಕರ್ಷಕ ಬಣ್ಣ ಹೊಂದಿರುವ ಈ ಹಣ್ಣು ಹುಳಿ-ಸಿಹಿ ರುಚಿಯನ್ನು ಹೊಂದಿದ್ದು, ಸ್ಥಳೀಯರು ತಾಜಾ ಹಣ್ಣಾಗಿ ಸೇವಿಸುತ್ತಾರೆ.

ಹಣ್ಣಾಗದ ಕಾಯಿಗಳು ಹೆಚ್ಚು ಹುಳಿ ಹೊಂದಿರುವುದರಿಂದ ಉಪ್ಪಿನಕಾಯಿ, ಚಟ್ನಿ ಹಾಗೂ ವಿವಿಧ ಆಹಾರ ಪದಾರ್ಥಗಳ ತಯಾರಿಕೆಯಲ್ಲೂ ಬಳಸಲಾಗುತ್ತದೆ.

ಪೋಷಕಾಂಶಗಳ ಆಗರ

ಈ ಹಣ್ಣಿನಲ್ಲಿ ವಿಟಮಿನ್ ‘ಸಿ’ ಸೇರಿದಂತೆ ವಿವಿಧ ಪೋಷಕಾಂಶಗಳು ಹಾಗೂ ನಾರಿನ ಅಂಶವಿದೆ ಎಂದು ಸ್ಥಳೀಯವಾಗಿ ಹೇಳಲಾಗುತ್ತದೆ. ಕಡಿಮೆ ಕ್ಯಾಲರಿ ಹೊಂದಿರುವುದರಿಂದ ಆರೋಗ್ಯಕರ ಆಹಾರದಲ್ಲಿ ಬಳಸಬಹುದಾದ ಹಣ್ಣಾಗಿದೆ. ನಾರಿನ ಅಂಶ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ ಎಂಬ ನಂಬಿಕೆಯೂ ಇದೆ.

ಆದರೆ ಹಣ್ಣಿನ ಔಷಧೀಯ ಗುಣಗಳ ಕುರಿತು ಹೇಳಲಾಗುವ ಹಲವು ಸ್ಥಳೀಯ ನಂಬಿಕೆಗಳಿಗೆ ಹೆಚ್ಚಿನ ವೈಜ್ಞಾನಿಕ ಅಧ್ಯಯನದ ಅಗತ್ಯವಿದೆ.

ವನ್ಯಜೀವಿಗಳಿಗೂ ಅಚ್ಚುಮೆಚ್ಚು

ಕೋಳಿ ಕುಕ್ಕೆ ಮರ ಕಾಡಿನ ಜೀವಚಕ್ರದಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಹಣ್ಣುಗಳು ಹಾಗೂ ಚಿಗುರೆಲೆಗಳು ಹಲವು ವನ್ಯಜೀವಿಗಳಿಗೆ ಆಹಾರವಾಗುತ್ತವೆ. ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ವಿವಿಧ ಕೋತಿ ಪ್ರಭೇದಗಳು ಸೇರಿದಂತೆ ಹಲವು ಪ್ರಾಣಿಗಳು ಮಾಗಿದ ಹಣ್ಣುಗಳನ್ನು ಸೇವಿಸುತ್ತವೆ.

ಕಡಬದ ತೋಟದಲ್ಲಿ ನೂರಕ್ಕೂ ಅಧಿಕ ಗಿಡಗಳು

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಬಿಳಿನೆಲೆ ನಿವಾಸಿ ಹಾಗೂ ವಾಸ್ತು ತಜ್ಞ ಎಸ್. ಪ್ರಸಾದ್ ಮುನಿಯಂಗಳ ಅವರು ಈ ಅಪರೂಪದ ಕಾಡು ಹಣ್ಣಿನ ಬಗ್ಗೆ ಆಸಕ್ತಿ ವಹಿಸಿ ತಮ್ಮ ತೋಟದಲ್ಲಿ ನೂರಕ್ಕೂ ಅಧಿಕ ಗಿಡಗಳನ್ನು ಬೆಳೆಸಿದ್ದಾರೆ.

ಸುಮಾರು ಮೂರು ವರ್ಷಗಳ ಹಿಂದೆ ನರ್ಸರಿಯಿಂದ ಗಿಡಗಳನ್ನು ತಂದು ನಾಟಿ ಮಾಡಲಾಗಿತ್ತು. ಹೆಚ್ಚಿನ ಆರೈಕೆಯ ಅಗತ್ಯವಿಲ್ಲದೆ ಉತ್ತಮವಾಗಿ ಬೆಳೆದಿರುವ ಗಿಡಗಳಲ್ಲಿ ಇದೀಗ ಜೂನ್-ಜುಲೈ ಅವಧಿಯಲ್ಲಿ ಹಣ್ಣುಗಳು ಗೊಂಚಲು ಗೊಂಚಲಾಗಿ ಕಾಣಿಸಿಕೊಂಡಿವೆ.

ಕಾಡಿನಲ್ಲಿ ಮಾತ್ರ ಕಂಡುಬರುತ್ತಿದ್ದ ಈ ಅಪರೂಪದ ಹಣ್ಣನ್ನು ನಾಡಿನಲ್ಲೂ ಬೆಳೆಸಿ ಫಲ ಪಡೆಯುವ ಮೂಲಕ ಪ್ರಸಾದ್ ಮುನಿಯಂಗಳ ಅವರು ಗಮನ ಸೆಳೆದಿದ್ದಾರೆ.

ಸಂರಕ್ಷಣೆ ಅಗತ್ಯ

ಪಶ್ಚಿಮ ಘಟ್ಟದ ಜೀವವೈವಿಧ್ಯದ ಭಾಗವಾಗಿರುವ ಇಂತಹ ಅಪರೂಪದ ಸಸ್ಯಗಳನ್ನು ಸಂರಕ್ಷಿಸುವ ಅಗತ್ಯವಿದೆ. ಕಾಡಿನ ನೈಸರ್ಗಿಕ ಸಂಪತ್ತನ್ನು ಉಳಿಸುವುದರ ಜೊತೆಗೆ, ಸ್ಥಳೀಯವಾಗಿ ಬೆಳೆಸುವ ಮೂಲಕ ಈ ವಿಶಿಷ್ಟ ಹಣ್ಣಿನ ತಳಿಯನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಪ್ರಯತ್ನಗಳು ನಡೆಯಬೇಕಿದೆ.

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group