ಮನೆಯ ಸುತ್ತಮುತ್ತ, ಅಂಗಳ, ರಸ್ತೆಬದಿಯಲ್ಲಿ, ಹೊಲಗದ್ದೆಗಳಲ್ಲಿ, ತೋಟ-ಬಯಲುಗಳಲ್ಲಿ ತಾನಾಗಿಯೇ ಬೆಳೆಯುವ ಅನೇಕ ಕಾಡುಸಸ್ಯಗಳು ಆಯಾ ಕಾಲಕ್ಕೆ ಅವು ಆಹಾರವಾಗುತ್ತವೆ; ವಾತಾವರಣಕ್ಕೆ ತಕ್ಕಂತೆ ಔಷಧಿಯಾಗುತ್ತವೆ.
ಯಾರೂ ನೆಟ್ಟು ಬೆಳೆಸಬೇಕಾಗಿಲ್ಲ. ಮಣ್ಣಿನ ಸತ್ವ, ಮಳೆ ವಾತಾವರಣ ಮತ್ತು ಪರಿಸರಕ್ಕೆ ಅನುಕೂಲವಾದ ಜಾಗ ಸಿಕ್ಕರೆ ಸಾಕು; ತಾವೇ ಮೊಳಕೆಯೊಡೆದು ಬೆಳೆಯುತ್ತವೆ. ಹೂ ಬಿಟ್ಟು, ಕಾಯಿಯಾಗಿ ಬೆಳದು ಮರುಹುಟ್ಟಿನ ಬೀಜಗಳನ್ನು ಬಿತ್ತಿ ಮತ್ತೆ ಮರೆಯಾಗುತ್ತವೆ..

ಪ್ರಕೃತಿ ನೀಡಿರುವ ಬಹುತೇಕ ಸಸ್ಯಗಳಲ್ಲಿ ಒಂದಲ್ಲ ಒಂದು ರೀತಿಯ ಔಷಧೀಯ ಗುಣವಿರುತ್ತದೆ. ಕೆಲವು ಆಹಾರವಾಗುತ್ತವೆ, ಕೆಲವು ಔಷಧಿಯಾಗುತ್ತವೆ, ಮತ್ತೆ ಕೆಲವು ಜೀವಜಾಲಕ್ಕೆ ಆಶ್ರಯವಾಗುತ್ತವೆ. ಒಂದರ ನೆರಳಿನಲ್ಲಿ ಮತ್ತೊಂದು, ಅದರ ಆಸರೆಯಲ್ಲಿ ಇನ್ನೊಂದು ಸಸ್ಯ ಬೆಳೆಯುವ ಪ್ರಕೃತಿಯ ವ್ಯವಸ್ಥೆಯೇ ಅಚ್ಚರಿದಾಯಕ
ಹಳ್ಳಿಗಳಲ್ಲಿ ಹಿಂದೆ ಮಳೆಗಾಲ ಆರಂಭವಾದಾಗ ಹಿತ್ತಲಿನಲ್ಲಿ ತರಕಾರಿ ಬೆಳೆಯುವ ಸಂಪ್ರದಾಯವಿತ್ತು. ಈಗಲೂ ಕೆಲವರು ತರಕಾರಿ ಬೆಳೆಯುತ್ತಾರೆ. ಆ ನಡುವೆ ಮಳೆಯ ನೀರನ್ನು ಮಿಂದು, ಮಣ್ಣಿನಿಂದ ಮೆಲ್ಲನೆ ಮೇಲೆದ್ದು ಬರುವ ಕೆಲ ಕಾಡು ಸೊಪ್ಪುಗಳು ಅಡುಗೆಮನೆ ಸೇರಿ ತರಕಾರಿಯಾಗುತ್ತಿದ್ದವು. ಅಂತಹ ಮಳೆಗಾಲದ ಸೊಪ್ಪುಗಳಲ್ಲಿ ಚಗ್ತೆ ಕೂಡ ಒಂದು.
ಚಗ್ತೆ, ಚಗಚೆ, ಚಗತೆ, ತಜಂಕ್ ಮುಂತಾದ ಹೆಸರುಗಳಿಂದ ಬೇರೆ ಬೇರೆ ಪ್ರದೇಶಗಳಲ್ಲಿ ಕರೆಯಲ್ಪಡುವ ಈ ಸೊಪ್ಪು ಮಲೆನಾಡು ಮತ್ತು ಕರಾವಳಿ ಭಾಗದ ಜನರಿಗೆ ಪರಿಚಿತವಾದ ಮಳೆಗಾಲದ ಖಾದ್ಯ. ಎಲ್ಲೆ ಕಂಡರೂ ಅದರ ತುದಿಗಳನ್ನು ಚಿವುಟಿ ತಂದು ರುಚಿಕರವಾದ ಖಾದ್ಯ ತಯಾರಿಸುವ ಪರಿಪಾಠ ಹಿಂದಿನಿAದಲೂ ಇದೆ. ಅದರ ರುಚಿ ಗೊತ್ತಿರುವವರು ದಾರಿಯಲ್ಲಿ ಸಿಕ್ಕರೆ ನೋಡಿ ಸುಮ್ಮನೆ ಹೋಗುವುದಿಲ್ಲ; ಒಂದಿಷ್ಟು ಸೊಪ್ಪನ್ನು ಚಿವುಟಿಕೊಂಡು ಮನೆಗೆ ತಂದೆ ತರುತ್ತಾರೆ.
ಹಿಂದಿನ ಕಾಲದಲ್ಲಿ ಮಾರುಕಟ್ಟೆಯಿಂದ ಪ್ರತಿದಿನ ತರಕಾರಿ ತರುವ ಅಗತ್ಯವಿರಲಿಲ್ಲ. ಮನೆಯ ಹಿತ್ತಲಿನಲ್ಲಿ ಬೆಳೆದ ತರಕಾರಿಗಳನ್ನು ನೆರೆಹೊರೆಯವರು ಪರಸ್ಪರ ಹಂಚಿಕೊಳ್ಳುತ್ತಿದ್ದರು. ಜೊತೆಗೆ ಮಳೆಗಾಲದಲ್ಲಿ ಕಾಡಿನಲ್ಲಿ, ಹೊಲದ ಬದಿಯಲ್ಲಿ, ಬಯಲು ಪ್ರದೇಶಗಳಲ್ಲಿ ಬೆಳೆಯುತ್ತಿದ್ದ ಸೊಪ್ಪುಗಳು ಮತ್ತು ಚಿಗುರುಗಳು ಅಡುಗೆಮನೆಯ ವೈವಿಧ್ಯತೆಯನ್ನು ಹೆಚ್ಚಿಸುತ್ತಿದ್ದವು. ಈ ಕಾಡು ಸೊಪ್ಪುಗಳಿಂದ ಸಾಂಬಾರು, ಪಲ್ಯ, ಚಟ್ನಿ, ವಡೆ ಸೇರಿದಂತೆ ಹಲವು ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತಿತ್ತು. ಇಂದಿನ ದಿನಗಳಲ್ಲಿ ಹೊಸ ರುಚಿಗಳನ್ನು ಹುಡುಕುತ್ತಿರುವ ಸಂದರ್ಭದಲ್ಲಿ ಚಗ್ತೆ ಸೊಪ್ಪಿನ ವಡೆಯೂ ಸೇರಿದಂತೆ ಅನೇಕ ಖಾದ್ಯಗಳು ಹಳ್ಳಿ ಹಾಗೂ ನಗರ ಪ್ರದೇಶಗಳಲ್ಲೂ ಜನಪ್ರಿಯವಾಗಿದೆ. ಸರಳವಾದ ಸೊಪ್ಪೊಂದು ಹಲವು ಬಗೆಯ ಅಡುಗೆಗೆ ತೆರೆದುಕೊಳ್ಳುತ್ತಿರುವುದು ಗ್ರಾಮೀಣ ಆಹಾರ ಪದ್ಧತಿಗೆ ಹೊಸ ಮೆರುಗನ್ನು ತಂದಿತ್ತಿದೆ.

ಚಗ್ತೆ ಸೊಪ್ಪಿನಲ್ಲಿ ಪೌಷ್ಟಿಕಾಂಶಗಳಿವೆ. ಉಪಯುಕ್ತವಾದ ಜೀವ ಸತ್ವಗಳಿವೆ. ಔಷಧೀಯ ಗುಣಗಳಿವೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಬಹುದು. ಆದರೆ ಅದೇ ಎಲ್ಲವೂ ಅಲ್ಲ. ಕಾಲಮಾನಕ್ಕೆ ತಕ್ಕ ಹಾಗೆ ತಿನ್ನಬಹುದಾದ ಸೊಪ್ಪು ತರಕಾರಿಯದು. ಮಾರುಕಟ್ಟೆಯಲ್ಲಿ ಎಲ್ಲಾ ತರಕಾರಿಗಳೂ ವರ್ಷಪೂರ್ತಿ ಈಗ ಲಭ್ಯ. ಹಾಗಾಗಿ ಅಡುಗೆಮನೆಯ ಭಾಗವಾಗಿದ್ದ ಕಾಡುಸೊಪ್ಪುಗಳು ಅನೇಕರಿಗೆ ಅಪರಿಚಿತವಾಗುತ್ತಿವೆ.. ಆದರೂ ಕಾಡಿನ ಸೊಪ್ಪುಗಳು ಕೂಡಾ ನಮ್ಮ ಆಹಾರ ಸಂಸ್ಕೃತಿಯ ಭಾಗವಾಗಿ ಉಳಿದಿದೆ. ಅದೊಂದು ಸಂಭ್ರಮದ ಆಚರಣೆಯಾಗುತ್ತಿದೆ.
ಚಗ್ತೆ ಕೇವಲ ಆಹಾರವಾಗಿರಲಿಲ್ಲ. ಗ್ರಾಮೀಣ ಬದುಕಿನಲ್ಲಿ ಅದು ಮಕ್ಕಳ ಆಟದ ವಸ್ತುವೂ ಆಗಿತ್ತು. ಅದರ ಕೋಡುಗಳನ್ನು ಒಂದಕ್ಕೊಂದು ಸಿಕ್ಕಿಸಿ ಎಳೆದಾಡಿ ಸಂಭ್ರಮಿಸುತ್ತಿದ್ದ ಆ ದಿನಗಳು ಹಿರಿಯರ ನೆನಪಿನ ಪುಟಗಳಲ್ಲಿ ಇಂದಿಗೂ ಉಳಿದಿರಬಹುದು. . ಪ್ರಕೃತಿಯ ಸುತ್ತಲೂ ಬೆಳೆದ ವಸ್ತುಗಳೇ ಆಗಿನ ದಿನದ ಮಕ್ಕಳಿಗೆ ಆಟಿಕೆಗಳಾಗುತ್ತಿದ್ದವು. ಇವು ಕೇವಲ ಬಾಲ್ಯದ ಹಳೆಯ ನೆನಪುಗಳಷ್ಟೇ ಅಲ್ಲ. ಪ್ರಕೃತಿಯೊಂದಿಗಿನ ಒಡನಾಟದ ಬೆಸುಗೆಯದು.
–ಬರಹ : ರಾಧಾಕೃಷ್ಣ ತೊಡಿಕಾನ
ಚಿತ್ರ : ಪ್ರಸಾದ್ ಶೆಣೈ ಕಾರ್ಕಳ






