spot_img
Wednesday, June 19, 2024
spot_imgspot_img
spot_img
spot_img

ಕಾಡು ಮರಗಳೇ ಕೃಷಿ ಮಣ್ಣಿಗೆ ಆಧಾರ: ಎಂ.ಟಿ ಶಾಂತಿಮೂಲೆ ಬರಹ ಓದಿ

ಈ ಸೃಷ್ಟಿಯೇ ಒಂದು ವಿಚಿತ್ರ. ಇಲ್ಲಿ ಸೂಕ್ಷ್ಮಾಣುಗಳಿಂದ ಆರಂಭಿಸಿ ಆನೆಗಳ ವರೆಗೆ ಪ್ರಾಣಿ ಸಾಮ್ರಾಜ್ಯ (ಚಲಿಸುವ ಜೀವಿಗಳು). ಕಾಡು ಕಳೆ ಪಾಚಿಗಳಂತಹ ಸೂಕ್ಷ್ಮ ಸಸ್ಯಗಳಿಂದ ಹೆಮ್ಮರಗಳ ತನಕ ಹುಟ್ಟಿ ಬೆಳೆದು ಸತ್ತು ಮಣ್ಣನ್ನು ನಿರಂತರ ಬದುಕಿಸುವ ಸಸ್ಯ ಪ್ರಪಂಚವಿದೆ.

ಸಸ್ಯ ವಿಜ್ಞಾನದ ವಿಜ್ಞಾನಿಗಳು ಲಘು ಪೋಷಕಾಂಶದಿಂದ ಆರಂಭಿಸಿ ಕೀಟ ನಾಶಕಗಳ ತನಕ ಕೃಷಿಗೆ ಬೇಕಾದ ಗೊಬ್ಬರಗಳ ಪಟ್ಟಿ ಮಾಡಿ ಕೊಡುತ್ತಾರೆ. ಇದನ್ನೆಲ್ಲಾ ತಂದು ಕೃಷಿ ಮಾಡಿದರೆ ಕೆಲವೇ ವರ್ಷಗಳಲ್ಲಿ ರೈತ ಜಮೀನು ಮಾರಿ ಕೂಲಿ-ನಾಲಿ ಮಾಡಿ ಜೀವಿಸಬೇಕು.

ಸಣ್ಣ ಕೃಷಿಕರಿಗೆ ಮಣ್ಣೇ ಜೀವನಾಧಾರ. ಕಾಲ ಕೆಟ್ಟರೆ ಸಣ್ಣ ರೈತ ಜಾತಿ ಬಿಟ್ಟು ಹೋಟೆಲ್ ಕಾರ್ಮಿಕನೋ ಮತ್ತೊಂದೋ ಆಗಬೇಕು. ಕಳೆದ ಹಲವು ವರ್ಷಗಳಿಂದ ದುಡಿಯುವ ಮಂದಿ ನಮ್ಮ ಸರಕಾರಿ ಬಸ್ ನಿಲ್ದಾಣದಲ್ಲಿ ಬಂದು ಬೆಳ್ಳಂಬೆಳಿಗ್ಗೆಯೇ ಕಾದು ನಿಂತು ಕರೆದ ಮಧ್ಯವರ್ತಿಗಳ ಜೊತೆ ಹೋಗಿ ಕೂಲಿ ಮಾಡಿ ಅವರೇ ನಿಶ್ಚಯ ಮಾಡಿಕೊಟ್ಟ ಕಾಸನ್ನು ಜೇಬಿಗಿಳಿಸಿ ಬದುಕು ಕಟ್ಟಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಪರಿಹಾರವೇನು?

ಈ ಮೊದಲೇ ಹೇಳಿದ್ದೇನೆ. “ಕಾಡು ನೋಡಿ ಕೃಷಿ ಮಾಡಿ” ಎಂದು. ಆದರೆ ಏಕೋ ಕೆಲ ಮಂದಿ ಅಲ್ಲೇನಿದೆ ಮಣ್ಣು ಎಂದು ಹೇಳಿದ್ದೂ ಇದೆ. ಹೌದು ಮಾರಾಯ್ರೆ. ಅಲ್ಲೇ ಇರುವುದು ನಿಜವಾದ ಮಣ್ಣು, ಅದುವೇ ನೈಜ ಕೃಷಿಯ ವಿ ವಿ. ಪಟ್ಟಣದ ವಿ.ವಿ ಗಳಲ್ಲಿ ಏನಿದೆ ಗಿಣ್ಣು! ಹಳ್ಳಿಗಾಡಲ್ಲಿ ಹುಟ್ಟಿ ಬೆಳೆದ ಒಬ್ಬ ಕೃಷಿಕನ ಮಗ ವಿವಿ ಪದವಿ ಪಡೆದು ಊರಿಗೆ ಬಂದರೆ ಆತ ಕೃಷಿ ಮಾಡಲು ಆರಂಭಿಸಬೇಕಿದ್ದಲ್ಲಿ ಪಟ್ಟಣಕ್ಕೆ ಹೋಗಿ ಅಂಗಡಿಯ ರಸಗೊಬ್ಬರ ಕೀಟನಾಶಕ ತರಲೇಬೇಕು ತಾನೆ!

ಪಾರಂಪರಿಕ ಕೃಷಿಯ ಬದಲಾದ ಮುಖವೇ ಸಾವಯವ ಬೇಸಾಯ. (ಬೇಸಾಯಗಾರ ಬೇಗ ಸಾಯ) ಅಂದು ಹೈನುಗಾರಿಕೆ ದ್ವಿಮುಖ ಲಾಭದ ವಿಚಾರ ಹಾಲು+ ಆರೋಗ್ಯ + ಗೊಬ್ಬರ ಸೇರಿ ಕೃಷಿಕನ ಆರೋಗ್ಯ ಹಾಲಿನಿಂದ ಬಂದ ಹಣ ಇತರೆ ಖರ್ಚಿಗೆ ಗೊಬ್ಬರ ಬೇಸಾಯಕ್ಕೆ. ಇದು ಅಂದಿನ ವಿಧಾನ. ಅದನ್ನೇ ಆಧುನಿಕ ರೀತಿಯಲ್ಲಿ ಬದಲಾಯಿಸಲು ಹೊರಟು ಆರಂಭಿಸಿದ ಸಾವಯವದಲ್ಲಿ ಪೋಸ್ಟ್ (ಕಳಿತ) ಗೊಬ್ಬರ ನಿಸರ್ಗದಲ್ಲಿರುವ ಸಸ್ಯಜನ್ಯ ಕೀಟ ನಿಯಂತ್ರಕ ಮುಂದುವರೆದು ಏರೆ ಗೊಬ್ಬರ, ದ್ರವಗೊಬ್ಬರ ಇತ್ಯಾದಿ ಬಳಕೆ ಆರಂಭ.

ಕಾಡಿನಲ್ಲಿರುವ ಮರ ಗಿಡ ಬಳ್ಳಿಗಳ ಎಲೆ+ಹೂವು+ಕಾಯಿ ಮುಂತಾದವುಗಳೆಲ್ಲಾ ಮಣ್ಣಿಗೆ ಬೇಕಾದ ಪೋಷಕಾಂಶಗಳನ್ನು ನೀಡುವ ಗೊಬ್ಬರದ ಮೂಲ ದ್ರವ್ಯಗಳಾಗಿರುವುದೇ ಕಾಡು. ಏನೂ ಮಾಡದೇ ತಾನೇ ತಾನಾಗಿ ಬೆಳೆಯುತ್ತಿದೆ. ನಮ್ಮ ವಿಜ್ಞಾನ ಹೇಳುವ ತರ್ಕಕ್ಕೆ ಇಳಿಯುವ ವಿಜ್ಞಾನಿಗಳು ನಮ್ಮಲ್ಲಿರುವ ಅಜ್ಞಾನವನ್ನು ಬದಿಗಿರಿಸಿ ಕಾಡಿನ ಸಸ್ಯಗಳ ವರ್ಗೀಕರಣ ಮಾಡಿದರೆ ಯಾವುದರ ಎಲೆಯಲ್ಲಿ ಯಾವ ಪೋಷಕಾಂಶವಿದೆ ಎಂದು ತಿಳಿದು ಮತ್ತೆ ವಿವಿಗಳಲ್ಲಿ ಉಪನ್ಯಾಸ ಪ್ರಾರಂಭಿಸಲಿ. ಆಗ ಮುಂದಿನ ತಲೆಮಾರಿನ ಕೃಷಿಕ ಆತ್ಮಹತ್ಯೆ ಮಾಡುವುದು ಬಿಟ್ಟು ಕೃಷಿಯಲ್ಲೇ ಉಳಿಯುತ್ತಾನೆ. ಆತನ ಮಕ್ಕಳಿಗೂ ಅದು ಹೆಚ್ಚಿನ ಕೆಲಸವಾಗುತ್ತದೆ.

ಆಧುನಿಕ ಕೃಷಿಯ ಹೆಸರಲ್ಲಿ ಏನೇನೋ ಆಂಗ್ಲ ಭಾಷೆಕ ಪದಗಳಿಂದ ಕರೆಯುವ (೬-೨೧) ಎಂದೆಲ್ಲಾ ಸಂಖ್ಯೆಗಳನ್ನೂ ನೀಡಿದ ಪೋಷಕಾಂಶಗಳಿಗಿಂತ ಅಧಿಕ ಲಘು ಪೋಷಕಾಂಶಗಳು ಕಾಡಿನ ಮಣ್ಣಿನಲ್ಲಿವೆ. ಇವುಗಳನ್ನು ಸಂಖ್ಯೆಯಿಂದ ಲೆಕ್ಕಾಚಾರ ಮಾಡಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ಈಗಾಗಲೇ ಹೆಸರಿಸಿರುವ ಸಾರಜನಕ, ರಂಜಕ, ಪೊಟಾಷ್, ಕ್ಯಾಲ್ಸಿಯಂ, ಬೋರಾನ್‌ಗಳಂತಹ ಹೆಸರೇ ರೈತನಿಗೆ ಅರ್ಥವಾಗದ ಮೇಲೆ ಇನ್ನಷ್ಟು ಸೇರಿಸಿದರೆ ಹೇಗೆ! ಅಷ್ಟಕ್ಕೂ ಕಾಡು ಮಣ್ಣಿನ ಸಂಶೋಧನೆ ನಡೆಸುವುದು ಸಾಧ್ಯವೇ? ಕೆಲವೊಂದು ಮಣ್ಣಿನಲ್ಲಿ ನೂರಾರು ಜಾತಿಯ ಖನಿಜಾಂಶಗಳು ಸೇರಿಕೊಂಡಿವೆ. ಅವುಗಳನ್ನು ಪ್ರತ್ಯೇಕವಾಗಿಸಿ ಮತ್ತೆ ನಾಮಕರಣ ಮಾಡುವುದೆಂದರೆ ಗುರು ಗ್ರಹಕ್ಕೆ ರಾಕೆಟ್ ಬಿಟ್ಟು ಆರಾಮವಾಗಿ ಕುಳಿತಂತೆಯೇ.

ಮುಖ್ಯವಾಗಿ ಬೆಳೆ ಬೆಳೆಯುವ ರೈತ ಅನುಸರಿಸಬೇಕಾಗಿರುವುದು ಹವಾಮಾನ, ಲಭ್ಯ ನೀರಿನ ವ್ಯವಸ್ಥೆ, ಸಾವಯುವ ಗೊಬ್ಬರ, ಬೆಳೆ ಪರಿವರ್ತನೆ, ಬೆಳೆಗಳ ಸಮ್ಮಿಲನ (ಬಹು ಬೆಳೆ ಪದ್ಧತಿ) ಔಷಧೀಯ ಗಿಡಗಳ ಸಾಕಾಣಿಕೆ ಇಷ್ಟೇ ಸಾಕು. ಋತುಮಾನಕ್ಕೆ ಅನುಗುಣವಾಗಿ ನಮ್ಮ ಪ್ರದೇಶದಲ್ಲಿ ಬೆಳೆಯುವ ಬೆಳೆಗಳನ್ನೇ ಬೆಳೆಯಬೇಕು. ಬೆಳೆಯ ಆವರ್ತನೆಯ ಮೂಲಕ ಬೆಳೆದ ಬೆಳೆಯ ತ್ಯಾಜ್ಯಗಳನ್ನು ಪುನಃ ಮಣ್ಣಿಗೆ ಮರಳಿಸುವ ಮೂಲಕ ಸರಳವಾಗಿ ಕಡಿಮೆ ಖರ್ಚಿನಲ್ಲಿ ಬೆಳೆ ಬೆಳೆಯುವುದು ಜಾಣ ನಡೆ.

ನಾಟಿ ತಳಿಗಳ ಬೀಜ ರಕ್ಷಣೆ ಮಾಡಿ ಕೀಟ ರೋಗ ನಿಯಂತ್ರಣಕ್ಕೆ ಆದ್ಯತೆ ನೀಡಿದರೆ ನಷ್ಟಕ್ಕಿಂತ ಲಾಭ ಹೆಚ್ಚು. ಅದೇ ಹೊಸ ಹೊಸ ಮಾನವ ನಿರ್ಮಿತ ಪ್ರಯೋಗಾಲಯ ತಯಾರಿಸಿದ ತಳಿಗಳು ನಮ್ಮ ಮಣ್ಣು ಹವಾಮಾನಕ್ಕೆ ಒಗ್ಗದಿದ್ದರೆ ಲಾಭಕ್ಕಿಂತ ನಷ್ಟವೇ ಹೆಚ್ಚು. ತೆಂಗು ಅಡಿಕೆ ಬೆಳೆಯುವ ರೈತ ಸ್ಥಳೀಯ ನಾಟಿ ತಳಿಗಳನ್ನು ಬೆಳೆದರೆ ಅದು ಅಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ.

ಕರಾವಳಿಯ ತೆಂಗು ಮಲೆನಾಡಿಗೆ ಹೊಂದುವುದಿಲ್ಲ. ವೈಜ್ಞಾನಿಕವಾಗಿ ತಯಾರಿಸಿದ ತೆಂಗು ಮಲೆನಾಡಿನಲ್ಲಿ ಬೆಳೆದರು ಗಿಡ ತಯಾರಿಸಲು ಉತ್ಕೃಷ್ಟ ಫಸಲು ಪಡೆಯಲು ಸಾಧ್ಯವಿಲ್ಲ. ಹಣ್ಣುಗಳ ಗಿಡಗಳೂ ಕೂಡ ಹಾಗೆಯೇ. ಕೊಡಗಿನ ಬೆಣ್ಣೆ ಹಣ್ಣು ತಂದು ಗಿಡ ಮಾಡಿದರೆ ನಮ್ಮಲ್ಲಿ ಫಲ ನೀಡುವುದಿಲ್ಲ. ಊರಲ್ಲೇ ಯಾರದೋ ತೋಟದಲ್ಲಿ ಫಲ ಕೊಡುವ ಮರವಿದ್ದರೆ ಅದರ ಗೆಲ್ಲು ತಂದು ಕಸಿ ಮಾಡಿದರೆ ಸಾಕು ಅದು ಹೊಂದಿಕೊಳ್ಳುತ್ತದೆ.

ನಾವು ಗೊಬ್ಬರ ತಯಾರಿಸುವಾಗ ಸ್ಥಳೀಯವಾಗಿ ಸಿಗುವ ಹಸುರೆಲೆಗಳ ಜೊತೆಗೆ ಗಿಡ ಮರಗಳ ಒಣ ಎಲೆಗಳನ್ನು ಕಂಪೋಸ್ಟಿಗೆ ಸೇರಿಸಿದರೆ ಬೇರೆ ಬೇರೆ ಮರಗಿಡಗಳ ಎಲೆಗಳಲ್ಲಿ ಬೇರೆ ಬೇರೆ ಧಾತುಗಳು ಇರುವುದರಿಂದ ನಾವು ತಯಾರಿಸಿದ ಗೊಬ್ಬರದಲ್ಲಿ ಅನೇಕ ಲಘು ಪೋಷಕಾಂಶಗಳು ಸೇರಿ ಮಣ್ಣನ್ನು ಫಲವತ್ತಾಗಿಸುತ್ತದೆ. ಗಿಡ ಮರಗಳಿಗೆ ನೇರ ಗೊಬ್ಬರ ನೀಡದೆ ಸುತ್ತಲ ಮಣ್ಣಿಗೆ ಬೆರೆಸಿ ಅಥವಾ ಮೊದಲೇ ಮಣ್ಣಿಗೆ ಬೆರೆಸಿದರೆ ಮೀರಿನಿಂದ – ಬಿಸಿಲಿನಿಂದ ಹಾನಿಯಾಗುವುದನ್ನು ತಪ್ಪಿಸಬಹುದು. ಬೆಳೆಗಳಿಗೆ ಸುತ್ತಲೂ ತೆಳ್ಳಗೆ ಮುಚ್ಚಿಗೆ ಮಾಡಿದರೆ ಬೇಸಿಗೆಯ ಬಿಸಿಲಿನಿಂದ ಮಳೆಗಾಲದ ಅತಿ ನೀರಿನಿಂದ ರಕ್ಷಣೆ ನೀಡಬಹುದು. ಯಾವುದೇ ತ್ಯಾಜ್ಯವನ್ನು ಹಾಗೇ ಎಸೆಯದೆ ಗಿಡಗಳ ಸುತ್ತ ಮುಚ್ಚಿದರೂ ಸಾಕು. ಅದು ಮುಂದೆ – “ಕಟ್ಟಿಹುದು ಬುತ್ತಿ ಸರ್ವಜ್ಞ”

-ಎಂ.ಟಿ ಶಾಂತಿಮೂಲೆ

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group