spot_img
Saturday, July 27, 2024
spot_imgspot_img
spot_img
spot_img

ಕೆಂಪು ಭೂಮಿಯಲ್ಲಿ ಅರಳಿದ ಕೆಂಪು ಚೆಲುವೆ: ಬಿಸಿಲುನಾಡಿನಲ್ಲೂ ಸೇಬು ಸೊಗಡು

ಗುಲಾಬಿ ಕುಟುಂಬದಲ್ಲಿನ (ರೋಸೇಸೀ) ಮೇಲಸ್ ಡೊಮೆಸ್ಟಿಕಾಕ್ಕೆ ಸೇರಿದ ಮತ್ತು ಸಮಶೀತೋಷ್ಣ ವಲಯದ ಕಾಶ್ಮೀರಿ ಕೆಂಪು ಚೆಲುವೆಯ ಸೇಬು ಹಣ್ಣು ಬೀದರ ಜಿಲ್ಲೆಯಲ್ಲಿಯೂ ಕೊನರಬಹುದೆಂದು ಯಾರೂ ಊಹಿಸಿರಲಿಲ್ಲ. ಇಲ್ಲಿನ ಹವಾಗುಣಕ್ಕೆ ಈ ಬೆಳೆ ಹೊಂದಿಕೊಳ್ಳುವುದಿಲ್ಲವೆಂದೇ ಬಹಳಷ್ಟು ಜನ ಭಾವಿಸಿದ್ದರು. ಸೇಬು ಹಣ್ಣನ್ನು ನಮ್ಮ ನೆಲದಲ್ಲಿಯೂ ಬೆಳೆಯಬಹುದೆಂದು ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಘಾಟಬೋರಳ ಗ್ರಾಮದ ಅಪ್ಪಾರಾವ ದಿಗಂಬರರಾವ ಭೋಸಲೆ ಅವರು ತೋರಿಸಿಕೊಟ್ಟು ಜಿಲ್ಲೆಯ ಇತರ ರೈತರಿಗೆ ಮಾದರಿಯಾಗಿದ್ದಾರೆ.

ಬಡ ಕೃಷಿಕ ಕುಟುಂಬದಲ್ಲಿ ಹುಟ್ಟಿದ 51 ವರ್ಷ ವಯಸ್ಸಿನ ಅಪ್ಪಾರಾವ ಓದಿದ್ದು ಕೇವಲ ಏಳನೆಯ ತರಗತಿ. ಕಡು ಬಡತನದಿಂದಾಗಿ ಶಿಕ್ಷಣವನ್ನು ಮೊಟಕುಗೊಳಿಸಿ ಕೃಷಿಕಾರ್ಯದಲ್ಲಿ ತೊಡಗಿಸಿಕೊಂಡರು. ಇವರಿಗಿರುವ ಏಳು ಎಕರೆ ಭೂಮಿಯಲ್ಲಿ ಮೊದಲು ಹೀರೇಕಾಯಿ, ಕುಂಬಳಕಾಯಿ, ಜೋಳ, ತೊಗರಿ ಮುಂತಾದ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದರು.

ಭೋಸಲೆ  ಪಂಜಾಬ, ಹರಿಯಾಣಾ, ಆಂಧ್ರಪ್ರದೇಶ, ಬೆಂಗಳೂರು, ಮೈಸೂರು ಮುಂತಾದೆಡೆ ಪ್ರಯಾಣ ಮಾಡಿ ಸೇಬು ಮತ್ತಿತರ ತೋಟಗಾರಿಕೆ ಬೆಳೆಗಳ ಮಾಹಿತಿ ಸಂಗ್ರಹಿಸಿದರು. ಸದಾ ಕೃಷಿಯಲ್ಲಿ ಪ್ರಯೋಗಶೀಲತೆ ಮತ್ತು ಹೊಸತನ ಕಂಡುಕೊಳ್ಳುವ ಛಲ, ಬದ್ಧತೆ, ದೃಢವಿಶ್ವಾಸದೊಂದಿಗೆ ಒಂದು ಎಕರೆ ಕೆಂಪು ಮತ್ತು ಬರಡು ಭೂಮಿಯಲ್ಲಿ ಹಿಮಾಚಲ ಪ್ರದೇಶ ಸಿಮ್ಲಾದ ಹೆಚ್‌ಆರ್‌ಎಂಎನ್-99(ಹರಿಮನ್) ತಳಿಯ ಸೇಬು ಹಣ್ಣನ್ನು ಬೆಳೆದು ಯಶಸ್ವಿಯಾಗಿದ್ದಾರೆ. ಈ ಭೂಮಿ ಇವರ ಪಾಲಿಗೆ ಬಂದಿದ್ದು, ಸಹೋದರ ರಾಮರಾವ ಹೆಸರಿನಲ್ಲಿದೆ.

ಸೇಬಿನ ಸಸಿಗಳ ನಾಟಿಗಾಗಿ ಜೆಸಿಬಿಯಿಂದ 11 ದಿನ 4×6 ಅಡಿ ಆಳದ ನಾಲೆ ತೆಗೆದು 8 ಟ್ರಾö್ಯಕ್ಟರ್ ಕೊಟ್ಟಿಗೆ ಗೊಬ್ಬರ ಹಾಕಿ ಮಣ್ಣಿನಿಂದ ಮುಚ್ಚಿ, 1೦೦ ಚೀಲ ಕೋಕೋವಿಟ್ ಗೊಬ್ಬರ ಮತ್ತು ಕೋನಿಕಾ ಔಷಧ ಸಿಂಪಡಿಸಿದರು. ಎಂಟು ದಿನಗಳ ಬಳಿಕ ಹಿಮಾಚಲ ಪ್ರದೇಶದ ರೂಪೇಶ ಸುನವಾನೆಯವರಿಂದ ಪ್ರತಿ ಸಸಿ 210 ರೂ.ದಂತೆ ಖರೀದಿಸಿದ 222 ಸೇಬು ಸಸಿಗಳನ್ನು 2021 ರ ನವೆಂಬರಿನಲ್ಲಿ ಗಿಡದಿಂದ ಗಿಡಕ್ಕೆ 14×14 ಅಡಿ ಮತ್ತು ಸಾಲಿನಿಂದ ಸಾಲಿಗೆ 14×14 ಅಡಿ ಅಂತರದಲ್ಲಿ ನಾಟಿ ಮಾಡಿದ್ದಾರೆ. ಸಸಿಗಳ ಸಾಗಾಣಿಕೆಗಾಗಿ 9೦೦೦ರೂ. ನೀಡಿದ್ದಾರೆ.

ಎರಡು ತೆರೆದ ಬಾವಿಗಳಿಂದ ಹನಿ ನೀರಾವರಿ ಅಳವಡಿಸಿಕೊಂಡಿದ್ದು, ಈ ಹಿಂದೆ ಹೂವಿನ ಬೇಸಾಯಕ್ಕೆ ತೋಟಗಾರಿಕೆ ಇಲಾಖೆಯಿಂದ ಹನಿ ನೀರಾವರಿಗಾಗಿ ಸಹಾಯಧನ ಪಡೆದಿದ್ದರು. ಸೇಬಿನ ಸಸಿಗಳಿಗೆ ತಂಪು ವಾತಾವರಣ ಕಲ್ಪಿಸಲು ಅನುವಾಗುವಂತೆ ಮಿಶ್ರಬೆಳೆಯಾಗಿ ಗಂಗಾ ತಳಿಯ ತೆಂಗನ್ನೂ ಬೆಳೆದಿದ್ದಾರೆ. ಇಪ್ಪತ್ತು ದಿನಕ್ಕೊಮ್ಮೆ ಕಾಲುವೆಯ ಮೂಲಕ ಮತ್ತು ಪ್ರತಿದಿನ ಒಂದು ಗಂಟೆ ಹನಿ ನೀರಾವರಿ ಮೂಲಕ ನೀರುಣಿಸುವರು. ಪತ್ನಿ ಕಸ್ತೂರಬಾಯಿ, ಐದಾರು ಆಳುಗಳ ಸಹಾಯದಿಂದ ಕೃಷಿಕಾರ್ಯದಲ್ಲಿ ತೊಡಗಿದ್ದು, ಐದು ಹೈನು ದನಗಳ ಸಾಕಣೆಯಿಂದ ಹಾಲನ್ನು ಪಡೆಯುತ್ತಿದ್ದಾರಲ್ಲದೆ ಇವುಗಳ ತ್ಯಾಜ್ಯದಿಂದ ಜೀವಾಮೃತವನ್ನು ತಯಾರಿಸಿ ಸೇಬಿಗೆ 2೦ ದಿನಕ್ಕೊಮ್ಮೆ ಸಿಂಪಡಿಸುತ್ತಿರುವುದರಿಂದ ಸೇಬಿಗೆ ರೋಗಗಳ ಬಾಧೆ ಕಡಿಮೆ.

ನಾಟಿ ಮಾಡಿದ 11 ತಿಂಗಳಿಗೇ ಸಸಿಗಳ ಟ್ರಿಮ್ ಮಾಡಿದ್ದು, ಡಿಸೆಂಬರಿನಲ್ಲಿ ಹೂಬಿಟ್ಟು ಈಗ ಪ್ರತಿ ಗಿಡದಲ್ಲಿ 20-25 ಹಣ್ಣುಗಳು ಬಿಟ್ಟು ಪಕ್ವವಾಗುತ್ತಿವೆ. ಇಲ್ಲಿನ ಹವಾಗುಣಕ್ಕನುಗುಣವಾಗಿ 15 ತಿಂಗಳ ಸೇಬಿನ ಗಿಡಗಳು ಪೂರಕವಾಗಿ ಮತ್ತು ಸಮೃದ್ಧವಾಗಿ ಏಳೆಂಟು ಅಡಿ ಎತ್ತರ ಬೆಳೆದು ನಳನಳಿಸುತ್ತಿವೆ. ಈವರೆಗೆ ಸೇಬಿನ ಬೇಸಾಯಕ್ಕಾಗಿ ಒಟ್ಟು 5.50 ಲಕ್ಷ ರೂ. ವೆಚ್ಚವಾಗಿದ್ದು, 7-8 ಲಕ್ಷ ರೂ. ಆದಾಯ ನಿರೀಕ್ಷಿಸಿದ್ದಾರೆ.

ಅಪ್ಪಾರಾವ ಗುಜರಾತಿನ 5೦೦ ವಿಶೇಷ ಸಪೋಟಾ ಗಿಡಗಳಿಂದ 2019 ರಿಂದ ವರ್ಷಕ್ಕೆ ಮೂರು ಬಾರಿಯಂತೆ ಇಳುವರಿ ಪಡೆದು ಸುಮಾರು 12 ಲಕ್ಷ ರೂ. ಆದಾಯ ಮತ್ತು 2009ರಲ್ಲಿ ಗಂಗಾ ತಳಿಯ ತೆಂಗನ್ನು, ವಿವಿಧ ತಳಿಯ ಮಾವು, ನಾಗಪುರ ಕಿತ್ತಳೆ, ಅಂಜೂರ, ನೇರಳೆ, ಲಿಂಬೆ ಮತ್ತು ಗಜಲಿಂಬೆ, ಗೋಡಂಬಿ ಗಿಡಗಳನ್ನು ಸಹ ಬೆಳೆದು ಲಾಭ ಪಡೆಯುತ್ತಿದ್ದಾರೆ.

“ಈಗ ನೆಮ್ಮದಿಯ ಬದುಕು ರೂಪುಗೊಂಡಿದ್ದು, ಕುಟುಂಬದಲ್ಲಿ ಸಂತೋಷ ಹರಿದಾಡುತ್ತಿದೆ. ಹಿಮಾಲಯ ಪರ್ವತದ ತಪ್ಪಲು ಪ್ರದೇಶದಲ್ಲಿ ಸೇಬು ವರ್ಷಕ್ಕೊಮ್ಮೆ ಬಂದರೆ ನಾವು ಬೆಳೆದ ಸೇಬು ಇಲ್ಲಿನ ವಾತಾವರಣದಲ್ಲಿ ವರ್ಷಕ್ಕೆರಡು ಸಲ ಅಂದರೆ ಡಿಸೆಂಬರ್ ಮತ್ತು ಮೇ ತಿಂಗಳಲ್ಲಿ ಇಳುವರಿ ಕೊಡುವುದು ವಿಶೇಷ. ಹಿತಮಿತ ನೀರು, ಸಾವಯವ ಗೊಬ್ಬರ, ಜೀವಾಮೃತದಿಂದ ಸೇಬು ಗಿಡಗಳ ಸರಿಯಾಗಿ ನಿರ್ವಹಣೆ ಮಾಡಿದರೆ ಗಿಡಗಳ ಜೀವಿತಾವಧಿ ಸುಮಾರು 25 ವರ್ಷವಿರುತ್ತದೆ. ಸೇಬು ಕೃಷಿಯನ್ನು ಸವಾಲಾಗಿ ಸ್ವೀಕರಿಸಿ ಕೇವಲ 15 ತಿಂಗಳಲ್ಲೇ ಇಳುವರಿ ಪಡೆಯಲಾದ ಸೇಬು ಹೆಚ್ಚು ರುಚಿಕಟ್ಟಾಗಿದ್ದು, ಹಣ್ಣಿನ ಗಾತ್ರ, ಆಕಾರ, ಬಣ್ಣ ಅತ್ಯಾಕರ್ಷಕವಾಗಿದೆ. ಈ ಸಲ ಹಣ್ಣು ಮಾರಾಟದ ಬಗ್ಗೆ ಯೋಚಿಸಿಲ್ಲ. ಮುಂದಿನ ಬೆಳೆ ಬಂದಾಗ ಹಣ್ಣು ಯೋಚಿಸುವೆ. ಸೇಬು ಬೆಳೆಯನ್ನು ಗಾಳಿಮಳೆಯಿಂದ ಮತ್ತು ಜಾನುವಾರುಗಳಿಂದ ಸಂರಕ್ಷಿಸಲು ಪಾಲಿಹೌಸ್ ನಿರ್ಮಿಸಲು ಮತ್ತು ಹೊಲದ ಸುತ್ತ ತಂತಿಬೇಲಿ ಅಳವಡಿಸಲು ಯೋಜಿಸಲಾಗಿದೆ” ಎನ್ನುತ್ತಾರೆ ಅಪ್ಪಾರಾವ ಭೋಸಲೆ.

“ಸಾಂಪ್ರದಾಯಿಕವಾಗಿ ಸೇಬು ಬೆಳೆಯಲು ಬೇಸಿಗೆಯಲ್ಲಿ 21 ರಿಂದ 24 ಡಿಗ್ರಿ ಸೆಲ್ಸಿಯಸ್ ತಾಪಮಾನವಿರಬೇಕು. ಬೀದರ ಜಿಲ್ಲೆಯ ಬೇಸಿಗೆ ತಾಪಮಾನ 35 ರಿಂದ 40 ಡಿಗ್ರಿ ಸೆಲ್ಸಿಯಸ್ ಇರುವುದರಿಂದ ಸೇಬು ಬೆಳೆಯಲು ಜಿಲ್ಲೆಯ ಹವಾಗುಣ ಸೂಕ್ತವಲ್ಲ. ಆದರೂ ಕೆಲವು ರೈತರು ಸ್ವ-ಇಚ್ಛೆಯಿಂದ ಹೆಚ್‌ಆರ್‌ಎಂಎನ್-99 ತಳಿಯ ಸೇಬು ಬೆಳೆಯಲು ಪ್ರಯತ್ನಿಸುತ್ತಿದ್ದಾರೆ. ಇವರಲ್ಲಿ ಸೇಬು ಕೃಷಿಯ ವಿಧಾನಗಳನ್ನು ಸರಿಯಾಗಿ ಅಳವಡಿಸಿಕೊಂಡ ಅಪ್ಪಾರಾವ ಭೋಸಲೆ ಸೇಬನ್ನು ಯಶಸ್ವಿಯಾಗಿ ಬೆಳೆದಿದ್ದಾರೆ” ಎಂಬುದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ವಿಶ್ವನಾಥ ಝಿಳ್ಳೆ ಮತ್ತು ಹಿರಿಯ ಸಹಾಯಕ ನಿರ್ದೇಶಕ ಮಾರುತಿ ಅವರ ಅಭಿಪ್ರಾಯ.

ಬರಹ: ಜಿ.ಚಂದ್ರಕಾಂತ, ನಿವೃತ್ತ ಉಪನಿರ್ದೇಶಕರು
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ಕಲಬುರಗಿ

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group