spot_img
Tuesday, September 17, 2024
spot_imgspot_img
spot_img
spot_img

ಗ್ರಾಮೀಣ ಭಾಗದ ಈ ಯುವ ಕೃಷಿಕನಿಗೆ ಒಲಿದಿದೆ ಕೃಷಿಯಿಂದ ಆರ್ಥಿಕ ಶಕ್ತಿ:ಇಲ್ಲಿದೆ ಒಂದು ಯಶೋಗಾಥೆ!

ನನಗೆ ಪದವಿ ಶಿಕ್ಷಣದ ಬಳಿಕ ಸರಕಾರಿ ಉದ್ಯೋಗಕ್ಕೆ ಸೇರಬೇಕೆಂಬ ಮಹದಾಸೆಯಿತ್ತು. ಅದಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ನಡೆಸಿದ್ದೆ. ಪೋಲಿಸ್ ಉಪನಿರೀಕ್ಷಕ ಹುದ್ದೆಗೆ ಅಂತಿಮ ಹಂತದ ಸಂದರ್ಶನ ಮುಗಿದಿತ್ತು. ಆದರೆ ಕಾರಣಾಂತರಗಳಿಂದ ಆಯ್ಕೆಯಾಗಲಿಲ್ಲ. ನಿರಾಸೆಯಾಯಿತು. ಮುಂದೇನು ಎಂಬ ಪ್ರಶ್ನೆ ಎದುರಿತ್ತು. ಊರಿಗೆ ಮರಳಿದೆ. ಆಗ ಕೈ ಬೀಸಿ ಕರೆದದ್ದು ಕೃಷಿ ಕ್ಷೇತ್ರ. ಅದೇ ನನ್ನ ಪ್ರಯೋಗ ಶಾಲೆಯಾಯಿತು. ಯಶಸ್ಸಿನ ಮೆಟ್ಟಿಲೇರುವಂತೆ ಮಾಡಿತು. ಎನ್ನುವ ಬಸವರಾಜ ಈರಯ್ಯ ನಡುವಿನಮನಿ ನಡೆದು ಬಂದ ಕೃಷಿ ಬದುಕಿನ ಯಶೋಗಾಥೆಯ ಹಾದಿಯಿದು.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಹುಲಿಹೊಂಡ ಸಣ್ಣ ಹಳ್ಳಿ. ಕೃಷಿಯೇ ಇಲ್ಲಿಯವರ ಮುಖ್ಯ ಕಾಯಕ. ಬಸವರಾಜ ನಡುವಿನಮನಿಯವರು ವೈಜ್ಞಾನಿಕ ಹಾಗೂ ಸಮಗ್ರ ಕೃಷಿಯಲ್ಲಿ ತೊಡಗಿಕೊಂಡು ಯಶಸ್ಸಿನ ಹಾದಿ ಹಿಡಿದದ್ದು ಇಲ್ಲಿಂದಲೇ.

ಬಸವರಾಜ ಅವರ ತಂದೆ ಈರಯ್ಯನವರದ್ದು ಅವಿಭಕ್ತ ಕುಟುಂಬ. ಉಗ್ಗಿನಕೇರಿ ಮತ್ತು ಹುಲಿಹೊಂಡ ಸೇರಿದಂತೆ ಎರಡೂ ಕಡೆಗಳಲ್ಲಿ ಅವರಿಗೆ ಜಮೀನಿದೆ.

ಬಸವರಾಜ ಅವರು ತಾನು ಕೃಷಿಯಲ್ಲಿ ತೊಡಗಿಕೊಳ್ಳುವುದಾಗಿ ಹೇಳಿಕೊಂಡಾಗ ಈರಯ್ಯ ಅವರು ಹುಲಿಹೊಂಡ ಬಳಿ ಇರುವ 63 ಎಕರೆಯನ್ನು ಮಗನ ಸುಪರ್ದಿಗೆ ಬಿಟ್ಟರು. ಅಲ್ಲಿಂದ ಬಸವರಾಜರ ಕೃಷಿಕ್ಷೇತ್ರದ ಯಾನ ಆರಂಭವಾಯಿತು. ಈ ಜಾಗದಲ್ಲಿ ಸಮಗ್ರ ಕೃಷಿ, ಅರಣ್ಯ ಕೃಷಿ, ನೀರು ನಿರ್ವಹಣೆಯಲ್ಲಿ ಯಾಂತ್ರಿಕತೆ ಮೊದಲಾದ ಹೊಸ ಪ್ರಯೋಗಗಳನ್ನು ಕೈಗೊಂಡರು. ಕಳೆದ ಐದಾರು ವರ್ಷದಲ್ಲಿಯೇ ಅವರು ಮಾದರಿ ಕೃಷಿಕರಾದರು. ಕೃಷಿ ಪ್ರಶಸ್ತಿ ಪುರಸ್ಕಾರಗಳಿಗೂ ಭಾಜನರಾದರು

ಸಮಗ್ರ ಕೃಷಿ

ಕೃಷಿಯೆಂದರೆ ಒಂದೇ ಬೆಳೆಯನ್ನು ಆಶ್ರಯಿಸುವುದಲ್ಲ. ನಡುವಿನಮನಿಯವರದು ಅಡಿಕೆ ಪ್ರಧಾನ ಬೆಳೆ. ಅವರು ಅದನ್ನಷ್ಟೇ ನೆಚ್ಚಿಕೊಂಡಿಲ್ಲ. ಉತ್ತರ ಕರ್ನಾಟಕದ ಬಯಲು ಪ್ರದೇಶಗಳಿಗೂ ಅಡಿಕೆ ವಿಸ್ತರಿಸಿಕೊಳ್ಳುತ್ತಿರುವುದರಿಂದ ಅಡಿಕೆ ಉತ್ಪಾದನೆ ಹೆಚ್ಚಾದಂತೆ ಬೆಲೆಯಲ್ಲೂ ಏರುಪೇರು ಆಗುತ್ತದೆ. ಅದರಿಂದ ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಅದನ್ನು ಮನಗಂಡು ಸಮಗ್ರ ಕೃಷಿಯತ್ತ ಗಮನ ಹರಿಸಿದ್ದಾರೆ.

5೦ಎಕ್ರೆ ಅಡಿಕೆ ತೋಟ ಹೊಂದಿರುವ ಅವರು ಅದನ್ನು ವಿವಿಧ ಭಾಗಗಳಾಗಿ ವಿಂಗಡಿಸಿ ಆರಂಭದಲ್ಲಿ ಏಲಕ್ಕಿ ಬಾಳೆ ಅಂತರ ಬೆಳೆಯಾಗಿ ಬೆಳೆದರು. ತೋಟದ ವಿವಿಧ ಭಾಗದಲ್ಲಿ ಪಪ್ಪಾಯಿ. ಕಪ್ಪು ಬಂಗಾರವೆಂದೇ ಪ್ರಖ್ಯಾತವಾದ ಕಾಳು ಮೆಣಸು ಆದಾಯದ ಭಾಗವಾಗಿದೆ. ಅಡಿಕೆ ಮರದ ತುಂಬಾ ಕಾಳುಮೆಣಸು ಆಸರೆ ಪಡೆದುಕೊಂಡಿದೆ. ಕೊಡಗು, ಚಿಕ್ಕಮಗಳೂರು ಮತ್ತಿತರ ಕಡೆಗಳಲ್ಲಿ ಹೆಸರುವಾಸಿಯಾದ ಕಾಫಿಯನ್ನು ಇಲ್ಲೂ ಪ್ರಯೋಗ ಮಾಡಿದ್ದಾರೆ.

ಕಾವೇರಿ, ಚಂದ್ರಗಿರಿ ತಳಿಗಳು ಉತ್ತಮ ನೆಲೆ ಕಂಡುಕೊಂಡಿವೆ. ಕಾವೇರಿ ಫಸಲನ್ನೂ ನೀಡಿದೆ. ಅರಣ್ಯ ಕೃಷಿಗೆ ಪೂರಕವಾಗಿ ಶ್ರೀಗಂಧ, ಚಂದನ, ಮಹಾಗನಿ, ನೆಲ್ಲಿ, ದಾಳ್ಚಿನಿ ಲವಂಗ, ಕರಿಬೇವು ಮೊದಲಾದುವುಗಳಿದ್ದರೆ ಗೇರು, ಹಲಸು, ಮಾವು, ರಾಮ್‌ಫಲ, ಲಕ್ಷö್ಮಣ ಫಲ, ಹನುಮ ಫಲ, ಬಾಳೆ, ಪಪ್ಪಾಯಿ, ನಿಂಬೆ ಅವರ ಆರ್ಥಿಕ ಬಲವನ್ನು ಹೆಚ್ಚಿಸಿವೆ. ಆರೈಕೆಯೇನೂ ಹೆಚ್ಚಿಗೆ ಮಾಡದಿದ್ದರೂ ಗೇರು ಸುಮ್ಮನೆ ಬಿಡಲಿಲ್ಲ. ೫ಕ್ವಿಂಟಲ್ ಇಳುವರಿ ನೀಡಿ ಸಾರ್ಥಕತೆ ಪಡೆದಿದೆ.

ಜೀವಾಮೃತವೇ ಜೀವಾಳ

ಬಸವರಾಜ ನಡುವಿನಮನಿ ಕೃಷಿಗೆ ಗೊಬ್ಬರದ ಬದಲಿಗೆ ಹೆಚ್ಚು ಆಶ್ರಯಿಸಿಕೊಂಡಿರುವುದು ಜೀವಾಮೃತವನ್ನೇ. ಇವರ ತೋಟಕ್ಕೆ ಜೀವಾಮೃತವೇ ಜೀವಾಳ. ಎನ್‌ಪಿಕೆ, ಕೊಟ್ಟಿಗೆ ಗೊಬ್ಬರದಲ್ಲೂ ನಕಲಿ ಹೆಚ್ಚಾಗಿರುವುದರಿಂದ ತಾವೇ ತಯಾರಿಸಿದ ಜೀವಾಮೃತವನ್ನೇ ಡ್ರಿಪ್ ಮೂಲಕ ನೀಡುತ್ತಾರೆ.

1೦ ಕೆಜಿ ಸಗಣಿಯಿದ್ದರೆ ಒಂದು ಎಕ್ರೆ ತೋಟವನ್ನು ನಿರ್ವಹಿಸಬಹುದು ಎಂಬುದು ಅವರ ಅನುಭವದ ಮಾತು. ಅದಕ್ಕಾಗಿ ಗೀರ್ ದೇಶೀಯ ತಳಿಯ ಆಕಳನ್ನು ಸಾಕುತ್ತಿದ್ದು ಅವುಗಳಿಂದಲೇ ತನ್ನ ಜಮೀನಿಗೆ ಬೇಕಾದ ಜೀವಾಮೃತ ಗೊಬ್ಬರವನ್ನು ತಯಾರಿಸಿಕೊಳ್ಳುತ್ತಾರೆ.

4೦ ಕೆಜಿ ಸಗಣಿ, ಗಂಜಲ, 5 ಕೆಜಿ ಬೆಲ್ಲ, ದ್ವಿದಳ ಧಾನ್ಯಗಳ ಹಿಟ್ಟನ್ನು ಮಿಶ್ರ ಮಾಡಿ ಏಳು ದಿನಗಳ ಕಾಲ ನೆನೆಸಿ ಜೀವಾಮೃತ ತಯಾರಿಸಿಕೊಳ್ಳುತ್ತಾರೆ. ಇದಕ್ಕಾಗಿ ಪೃಥ್ವಿರಾಜ್ ಕಂಪೆನಿಯ ಸ್ಲರಿ ಫಿಲ್ಟರನ್ನು ಬಳಸಿಕೊಂಡಿದ್ದಾರೆ. ಶೇ.೭೦ರಷ್ಟು ಪೋಷಕಾಂಶವನ್ನು ಸಾವಯವದಿಂದಲೇ ಪಡೆಯುತ್ತಾರೆ.

ಮಣ್ಣಿನ ಪರೀಕ್ಷೆ ನಡೆಸಿ ಕಡಿಮೆಯಾಗಿರುವ ಲಘು ಪೋಷಕಾಂಶಗಳನ್ನು ಇತರ ಮೂಲಗಳಿಂದ ಬಳಸುತ್ತಾರೆ. ಕಳೆನಾಶಕದ ಬಳಕೆಯೂ ಕಡಿಮೆ. ಅಡಿಕೆ ತೋಟದ ತ್ಯಾಜ್ಯಗಳಾದ ಹಾಳೆ, ಸೋಗೆಯನ್ನೇ ತೋಟಕ್ಕೆ ಮುಚ್ಚಿಗೆಯಾಗಿ ಮಾರ್ಪಡಿಸಿಕೊಂಡಿದ್ದಾರೆ. ತೋಟದ ಕಳೆ ಮತ್ತೆ ತೋಟಕ್ಕೆ ಗೊಬ್ಬರವಾಗುತ್ತದೆ. ನೀರಿನ ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ. ಜೊತೆಗೆ ಸೂಕ್ಷಾö್ಮಣು ಜೀವಿಗಳು ಸೃಷ್ಟಿಯಾಗುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ.

ಆದಾಯ ತಂದ ಪಪ್ಪಾಯಿ

ಅಡಿಕೆ ತೋಟದಲ್ಲಿ ತೈವಾನ್ ರೆಡ್ ಲೇಡಿ  786  ಪಪ್ಪಾಯಿ ಬೆಳೆದಿದ್ದಾರೆ. 1800 ಗಿಡಗಳನ್ನು ನೆಟ್ಟಿದ್ದರು. ಕೆಲ ಪಪ್ಪಾಯಿ ತೂಕ 7 ಕೆಜಿ ವರೆಗೂ ಬಂದಿತ್ತು. ಈ ಪಪ್ಪಾಯಿ ಮಾರಾಟಕ್ಕೆ ಮಾರುಕಟ್ಟೆ ಸಮಸ್ಯೆಯೇನೂ ಕಾಡಿಲ್ಲ. ಟ್ರೋಫಿಕಲ್ ಎಂಬ ಸಂಸ್ಥೆ ಎಲ್ಲವನ್ನೂ ಖರೀದಿಸಿದೆ. ಅಲ್ಲದೆ ಅರಬ್ ಹಾಗೂ ಯುರೋಪ್ ದೇಶಗಳಿಗೆ ಈ ಸಂಸ್ಥೆಯೇ ರಫ್ತು ಮಾಡುತ್ತಿದೆ. ವರ್ಷವೊಂದಕ್ಕೆ ಸುಮಾರು 33 ಲಕ್ಷ ಆದಾಯವನ್ನು ಪಪ್ಪಾಯಿಯಿಂದ ಪಡೆದಿದ್ದಾರೆ

ತೋಟದಲ್ಲಿ ನೀರು ನಿರ್ವಹಣೆ ಅತೀ ಮುಖ್ಯ. ನೀರು ಹೆಚ್ಚು ಕಡಿಮೆ ಆದರೆ ಕಷ್ಟ-ನಷ್ಟ ತಪ್ಪಿದ್ದಲ್ಲ. ನಡುವಿನಮನಿ ಅವರು ನೀರು ನಿರ್ವಹಣೆಗೆ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಹೆಚ್ಚು ಆಳ ಹೊಂದಿರದ 1೦ಕೊಳವೆ ಬಾವಿಗಳಿವೆ. ತೋಟಕ್ಕೆ ಬೇಕಾದ ನೀರು ಇದರಿಂದಲೇ ಪೂರೈಕೆಯಾಗುತ್ತದೆ. ಹನಿ ನೀರಾವರಿ ಪದ್ಧತಿಯಿಂದ ನೀರು ಕೂಡ ವ್ಯಯವಾಗದೆ ಹನಿ ಹನಿ ನೀರೂ ಉಪಯೋಗವಾಗುತ್ತದೆ.

ಎರೆಗೊಬ್ಬರ ತಯಾರಿ
ತೋಟದ ತ್ಯಾಜ್ಯವನ್ನು ಒಂದೆಡೆ ಮುಚ್ಚಿಗೆಯಾಗಿ ಬಳಸಿಕೊಂಡರೆ ಅಡಿಕೆ ಸಿಪ್ಪೆ ಹಾಗೂ ಇತರ ತ್ಯಾಜ್ಯಗಳನ್ನು ತೊಟ್ಟಿಯಲ್ಲಿ ಕೊಳೆಯಿಸಿ ಎರೆ ಗೊಬ್ಬರ ತಯಾರಿಸಿಕೊಳ್ಳುತ್ತಾರೆ. ಇದರಿಂದ ಗೊಬ್ಬರ ಕೊಂಡುಕೊಳ್ಳವ ಪ್ರಮೇಯ ಬರುವುದಿಲ್ಲ. ಕೃಷಿ ತ್ಯಾಜ್ಯವೂ ಉಪಯೋಗವಾಗುತ್ತದೆ. ಸುಮಾರು ಒಂದು ಟನ್ ಎರೆಗೊಬ್ಬರ ಒಮ್ಮೆಗೆ ತಯಾರಾಗುತ್ತದೆ.

ಅಡಿಕೆಯ ಉಪ ಉತ್ಪನ್ನಗಳತ್ತಲೂ ಇವರ ಗಮನ ಹರಿದಿದೆ. ಅಡಿಕೆ ಹಾಳೆಯ ತಟ್ಟೆಗಳಿಗೆ ಭಾರೀ ಬೇಡಿಕೆಯಿದೆ. ಅದನ್ನರಿತು ಇವರೂ ಹಾಳೆಯಿಂದ ತಟ್ಟೆ ತಯಾರಿಸುತ್ತಿದ್ದು ಈಗ ಅವರಲ್ಲಿ ಇರುವುದು ಮಾನವ ಚಾಲಿತ ಯಂತ್ರ. ಮುಂದೆ ಸ್ವಯಂ ಚಾಲಿತ ಯಂತ್ರವನ್ನು ಕೊಂಡುಕೊಳ್ಳುವ ಆಶಯವಿದೆ.

ಈಗಿರುವ ಹೆಚ್ಚುವರಿ ಹಾಳೆಯನ್ನು ಹಾಳೆತಟ್ಟೆ ತಯಾರಕರಿಗೆ ಮಾರಾಟ ಮಾಡುತ್ತಾರೆ. ಅಡಿಕೆ ಕೊಚ್ಚುವ ಯಂತ್ರವನ್ನು ಹೊಂದಿದ್ದು ಅಡಿಕೆ ಸಿಪ್ಪೆಯ ತ್ಯಾಜ್ಯವನ್ನು ಎರೆಹುಳ ಗೊಬ್ಬರ ತಯಾರಿಗೆ ಉಪಯೋಗಿಸಿದರೆ ಕೆಂಪಡಿಕೆ ತಯಾರಿಕೆಯಲ್ಲಿ ಸಿಗುವ ಚೊಗರನ್ನು 35 ಲೀಟರ್ ಕ್ಯಾನುಗಳಲ್ಲಿ ತುಂಬಿಸಿ ಸಹಕಾರಿ ಸಂಘಕ್ಕೆ ಮಾರಾಟ ಮಾಡುತ್ತಾರೆ. ಇದಕ್ಕೂ ಉತ್ತಮ ಬೆಲೆಯಿದೆ.

ರೈತರ ಕೈಗಳಲ್ಲಿ ದೇಶದ ಭವಿಷ್ಯವಿದೆ. ಸರಕಾರಗಳು ಸಹಾಯಧನ, ನೆಪ ಮಾತ್ರದ ಬೆಂಬಲ ಬೆಲೆಗಳನ್ನು ಘೋಷಿಸಿ ಪ್ರಯೋಜನವಿಲ್ಲ. ವೈಜ್ಞಾನಿಕವಾದ ಬೆಲೆ ನಿಗದಿಯಾದಲ್ಲಿ ರೈತರಿಗೆ ಅನುಕೂಲ. ರೈತರ ಸ್ವಾಭಿಮಾನಕ್ಕೆ ದಕ್ಕೆಯಾಗದಂತೆ ನೋಡಿಕೊಳ್ಳುವುದು ಮುಖ್ಯ ಎಂಬುದು ಅವರ ಅಭಿಪ್ರಾಯ. ಹವಾಮಾನ ವೈಪರಿತ್ಯ ಸಂದರ್ಭದಲ್ಲಿ ಸರಕಾರ ರೈತರ ನೆರವಿಗೆ ಬರಬೇಕಾಗಿದೆ.

ರೈತರು ಕೂಡ ವೈಜ್ಞಾನಿಕ ದೃಷ್ಟಿ ಬೆಳೆಸಿಕೊಳ್ಳಬೇಕು. ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಪಡೆಯಬೇಕು. ಹಳೆಯ ಸಂಪ್ರದಾಯಗಳನ್ನು ನೆಚ್ಚಿಕೊಳ್ಳದೆ ಹೊಸ ಆವಿಷ್ಕಾರಗಳು, ಮೌಲ್ಯವರ್ಧನೆ ಕಡೆಗೂ ಆದ್ಯತೆ ನೀಡಬೇಕು. ಕಸ ಗುಡಿಸುವುದಾದರೂ ಆದೀತು. ಸರಕಾರಿ ಉದ್ಯೋಗವೇ ಬೇಕು ಎನ್ನುವ ಮನಸ್ಥಿತಿ ಬೆಳೆದಿದೆ.

ರೈತರನ್ನು ಕಾಣುವ ದೃಷ್ಟಿಕೋನವು ಬದಲಾಗಬೇಕು ಜನರಿಗೆ ಕೃಷಿ, ತೋಟಗಾರಿಕೆ ಇಲಾಖೆಯ ಮಾಹಿತಿ ಎಂದರೆ ಸಹಾಯಧನ ಮತ್ತಿತ್ತರ ಸವಲತ್ತಿಗಷ್ಟೇ ಸೀಮಿತವಾಗಿರುತ್ತದೆ. ರೈತರು ಇಲಾಖೆಯವರನ್ನು ಸಂಪರ್ಕಿಸಿ ಮಾಹಿತಿಗಳನ್ನು ಪಡೆದುಕೊಳ್ಳಬೇಕು ಎನ್ನುತ್ತಾರೆ ಬಸವರಾಜ ನಡುವಿನಮನಿ.

ಕಬ್ಬು

ಅಡಿಕೆಯ ನಂತರ ಇವರ ಆರ್ಥಿಕತೆಗೆ ಬಲ ನೀಡುವ ಮತ್ತೊಂದು ಬೆಳೆ ಕಬ್ಬು. ಸುಮಾರು 1೦ ಎಕ್ರೆ ಕಬ್ಬು ಬೆಳೆಯಿದೆ. ಮೂರು ಕೂಳೆ ಬೆಳೆಯನ್ನು ಪಡೆಯುತ್ತಾರೆ. ಇದರ ಕೃಷಿ ತ್ಯಾಜ್ಯವನ್ನು ಅಡಿಕೆ ತೋಟದ ಮುಚ್ಚಿಗೆ ಹಾಗೂ ಗೊಬ್ಬರ ತಯಾರಿಗೆ ಬಳಸಿಕೊಳ್ಳುತ್ತಾರೆ. ಕಬ್ಬು ಕಟಾವಿನ ನಾಲ್ಕು ತಂಡಗಳಿದ್ದು ಕಬ್ಬು ಸಾಗಾಟಕ್ಕೆ ತನ್ನದೇ ವ್ಯವಸ್ಥೆ ಹೊಂದಿದ್ದಾರೆ. ನಿರಾಣಿ, ಮುನವಳ್ಳಿ ಮುಂಡಗೋಡ ಮತ್ತಿತರ ಕಬ್ಬಿನ ಕಾರ್ಖಾನೆಗಳಿಗೆ ಕಬ್ಬು ನೀಡುತ್ತಾರೆ. ಅವಶ್ಯಕತೆಗೆ ತಕ್ಕ ಹಾಗೆ ಜೋಳವನ್ನು ಬೆಳೆಯುತ್ತಿದ್ದಾರೆ

ಮೀನು ಸಾಕಣೆ : ಹರಿದು ಹೋಗುವ ನೀರನ್ನು ತಡೆದು ಜಮೀನಿನಲ್ಲಿ ಇಂಗಿಸಿಕೊಂಡರೆ ಭೂಮಿಯ ಜಲಮಟ್ಟವೂ ವೃದ್ಧಿಯಾಗುತ್ತದೆ. ಸ್ವಲ್ಪ ಮಟ್ಟಿಗೆ ನೀರಿನ ಭವಣೆಯೂ ಕಡಿಮೆಯಾಗುತ್ತದೆ. ಅದಕ್ಕಾಗಿ ಅವರು ಒಂದು ಬದಿಯಲ್ಲಿ ಮಳೆ ನೀರನ್ನು ಇಂಗಿಸಲು ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ.

ಅದರ ಸಮೀಪ ಕೆರೆಯಿದೆ. ಅದರಿಂದಲೂ ಆದಾಯ ಪಡೆವ ಯೋಜನೆ ರೂಪಿಸಿಕೊಂಡು ಮೀನು ಸಾಕಣೆ ಮಾಡುತ್ತಿದ್ದಾರೆ. ಮೀನು ದೊಡ್ಡದಾದ ನಂತರ ಕೆರೆಯನ್ನು ಮೀನು ಹಿಡಿಯುವುದಕ್ಕಾಗಿ ಗುತ್ತಿಗೆ ನೀಡುತ್ತಾರೆ.
ತೋಟದಲ್ಲಿ ಏಲಕ್ಕಿ ಬೆಳೆಯಿದೆ. ಅರಸೀಕೆರೆಯ ತೆಂಗು ಬೆಳೆದಿದ್ದು ಅದು ಎಳೆನೀರು ಮತ್ತು ಕೊಬ್ಬರಿಗೂ ಬಳಕೆಯಾಗುತ್ತಿದೆ.

ಪ್ರಶಸ್ತಿಗಳು

ಇವರ ಸಾಧನೆಯನ್ನು ಗುರುತಿಸಿ ಅನೇಕ ಪ್ರಶಸ್ತಿಗಳು ದೊರೆತಿವೆ. ಆತ್ಮ ಯೋಜನೆಯಡಿ ತಾಲೂಕ ಶ್ರೇಷ್ಠ ಪ್ರಶಸ್ತಿ, ಕೃಷಿ ಕಾಡುಕರ್ತರ ಪ್ರಶಸ್ತಿ, ಬಾಗಲಕೋಟ ತೋಟಗಾರಿಕಾ ವಿಶ್ವವಿದ್ಯಾಲಯದ ಶ್ರೇಷ್ಠ ತೋಟಗಾರಿಕಾ ಪ್ರಶಸ್ತಿ, ಕೃಷಿ ವಿಶ್ವವಿದ್ಯಾಲಯದ ಶ್ರೇಷ್ಠ ರೈತ ಪ್ರಶಸ್ತಿ, ವಿಜಯ ಕರ್ನಾಟಕ ಪತ್ರಿಕೆ ಸೂಪರ್ ಸ್ಟಾರ್ ರೈತ ಪ್ರಶಸ್ತಿ, ಟಿಎಸ್ಎಸ್ ಸಿರಸಿ ತೋಟಗಾರಿಕಾ ಪ್ರಶಸ್ತಿ, ಐಸಿಎಆರ್ ಸಿರಸಿಯ ಯುವ ಶ್ರೇಷ್ಠ ಕೃಷಿಕ ಪ್ರಶಸ್ತಿ, ಹುಲಿಕಲ್ ನಟರಾಜ್ ಅವರು ನೀಡುವ ಕಾಯಕರತ್ನ ಪ್ರಶಸ್ತಿ ಇದರ ಜೊತೆಗೆ ಅನೇಕ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿವೆ.

ತನ್ನ ಕೃಷಿಯೊಂದಿಗೆ ರೈತರು ಅರಣ್ಯ ಕೃಷಿಯನ್ನು ಮಾಡಿ ಆರ್ಥಿಕವಾಗಿ ಸಬಲರಾಗಲಿ ಎಂಬ ಉದ್ದೇಶದಿಂದ ವಿಶ್ವ ಪರಿಸರ ದಿನದಂದು ತೋಟದಲ್ಲಿ ಎಲ್ಲಾ ರೈತರನ್ನು ಸೇರಿಸಿ ಅರಣ್ಯ ಕೃಷಿ ಮಹತ್ವವನ್ನು ತಿಳಿಸಿ ಅವರಿಗೆ ಉಚಿತವಾಗಿ ಅರಣ್ಯ ಸಸಿಗಳನ್ನು ಹಂಚುತ್ತಾರೆ. ಕಳೆದ ಐದು ವರ್ಷಗಳಿಂದ 3೦ ಸಾವಿರ ಸಸಿಗಳನ್ನು ಹಂಚಿದ್ದಾರೆ. ಅದರ ಜೊತೆಗೆ ಈ ವರ್ಷ ಗಾಂಧಿ ಜಯಂತಿಯಂದು ಸರಕಾರಿ ಶಾಲೆಗಳಿಗೆ ಉಚಿತವಾಗಿ ಸಸಿಗಳನ್ನು ನೀಡಿದ್ದಾರೆ.

ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಹಮ್ಮಿಕೊಳ್ಳುವಂತಹ ಕೃಷಿ ಕಾರ್ಯಕ್ರಮಗಳಿಗೆ ಕೃಷಿ  ತರಬೇತಿಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡುತ್ತಿದ್ದಾರೆ. ಇವರ ತೋಟವನ್ನು ನೋಡಲು ಕಾಲೇಜುಗಳ ವಿದ್ಯಾರ್ಥಿಗಳು, ಶಾಲಾ ವಿದ್ಯಾರ್ಥಿಗಳು, ಸಂಘ ಸಂಸ್ಥೆ ಸದಸ್ಯರು, ಸ್ವಸಹಾಯ ಸಂಘಗಳ ಹಾಗೂ ಸಹಕಾರಿ ಸಂಘದ ಸದಸ್ಯರು, ರೈತರು ಭೇಟಿ ನೀಡುತ್ತಿರುತ್ತಾರೆ. ಭೂಮಿ ವಿಕಾಸ ಎಂಬ ಸೇವಾ ಸಂಸ್ಥೆಯನ್ನು ಹುಟ್ಟು ಹಾಕಿ ಕೃಷಿಕರಿಗೆ ಮಾಹಿತಿ ಮಾರ್ಗದರ್ಶನ ನೀಡುತ್ತಿದ್ದಾರೆ ತನ್ನ ತೋಟದಲ್ಲಿ 15 ಮಂದಿಗೆ ನಿರಂತರ ಉದ್ಯೋಗವನ್ನು ನೀಡುತ್ತಿದ್ದು ವರ್ಷಕ್ಕೊಮ್ಮೆ ಅವರನ್ನು ಪ್ರವಾಸಕ್ಕೂ ಕರೆದೊಯ್ಯುತ್ತಾರೆ.

ತೋಟದಲ್ಲಿ ಹೆದ್ದಾರಿ!

ಈ ಸುಧಾರಣೆಯ ಕಾಲದಲ್ಲಿ ಹೊಸದಾಗಿ ಅಡಿಕೆ ತೋಟವನ್ನು ಹಾಕುವವರು ಬಹಳಷ್ಟು ವಿಚಾರ ಮಾಡುತ್ತಾರೆ. ಹತ್ತಾರು ವಿಧಾನದಲ್ಲಿ ಮಾಡಬೇಕಾದ ಕೆಲಸದ ಬಗ್ಗೆ ಯೋಚಿಸುತ್ತಾರೆ. ಅನುಭವಿಗಳಲ್ಲಿ ಚರ್ಚೆ ಮಾಡುತ್ತಾರೆ. ಅದ್ರಲ್ಲಿ ತಮಗೆ ಅನುಕೂಲ ಆಗುವ ವಿಧಾನವನ್ನು ಆಯ್ದುಕೊಂಡು ಅದ್ರ ಸಾಧಕ ಬಾಧಕವನ್ನು ನೋಡಿಯೇ ಹೊಸ ತೋಟದ ಕೆಲಸ ಮಾಡಿಸುತ್ತಾರೆ.

ಎಷ್ಟೇ ವೈಜ್ಞಾನಿಕ ವಿಧಾನದಲ್ಲಿ ತೋಟ ಮಾಡಿದರೂ, ಹಲವಾರು ಕೆಲಸಗಳಿಗೆ ಯಂತ್ರೋಪಕರಣಗಳು ಬಂದಿದ್ದರೂ….ಮಾನವನ ಶ್ರಮವೂ ಬೇಕೆಬೇಕಾಗುತ್ತದೆ ಅದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿರುವ ಬಸವರಾಜ್ ನಡುವಿನಮನಿ ಅವರು ಆದಷ್ಟು ಜಾಗ್ರತೆ ವಹಿಸಿಯೇ ಹೊಸ ತೋಟವನ್ನು ಮಾಡಿದ್ದಾರೆ.

ಗೊಬ್ಬರ ಒಯ್ಯುವುದಾಗಿರಲಿ, ಫಸಲನ್ನು ತೆಗೆದು ಮನೆಗೆ ಕೊಂಡು ಹೋಗುವಾಗ ಅನುಕೂಲಕ್ಕೆ…ಹೀಗೆ ಯಾವುದೆ ಕೆಲ್ಸಕ್ಕೆ ತೊಂದ್ರೆ, ತಾಪತ್ರಯ ಆಗಬಾರದು, ಓಡಾಡಲು ಅನುಕೂಲ ಆಗಬೇಕು, ಮಾಡುವ ಕೆಲಸವು ಸುಲಭವಾಗಿ ಆಗಬೇಕು ಎನ್ನುವ ಕಾರಣಕ್ಕಾಗಿ ತಮ್ಮ ಬೃಹತ್ ಪ್ರಮಾಣದ ಅಡಿಕೆ ತೋಟದಲ್ಲಿ, ತಮಗೆ ಅನುಕೂಲ ಆಗುವಂತೆ ರಸ್ತೆ ಇಟ್ಟುಕೊಂಡಿದ್ದಾರೆ. ಇವತ್ತಿನ ದಿನದಲ್ಲಿ ಇದು ಅವಶ್ಯಕವೂ ಹೌದು.

ಸಾಮಾನ್ಯವಾಗಿ ಮಲೆನಾಡಿನಲ್ಲಿ ಹೊಸ ತೋಟ ಮಾಡುವವರು ಯಾವ ಮುನ್ನೇಚ್ಚರಿಕೆಯನ್ನು ಮಾಡದೇ, ಮುಂದಾಗುವ ಕಷ್ಟದ ಸವಾಲುಗಳನ್ನು ತಲೆಕೆಡಿಸಿಕೊಳ್ಳದೇ ,ಅತೀ ಅವಶ್ಯಕತೆ ಉಳ್ಳ ರಸ್ತೆಯನ್ನು ಮಾಡಲು ಸ್ಥಳವಕಾಶ ಇಟ್ಟುಕೊಳ್ಳದೇ ಅಡಿಕೆ ಸಸಿಗಳನ್ನು ಹಚ್ಚುತ್ತಾರೆ. ಆಮೇಲೆ ಪಶ್ಚಾತ್ತಾಪ ಪಟ್ಟುಕೊಳ್ಳುವ ರೈತರು ಇದ್ದಾರೆ. ಆಮೇಲೆ ಅನುಕೂಲವಂತರು ಒಂದು ಅಡಿಕೆ ಸಾಲನ್ನು ತೆಗೆದು ತೋಟದ ಮಧ್ಯ ಗಾಡಿ ಓಡಾಡಲು ವ್ಯವಸ್ಥೆ ಮಾಡಿಕೊಳ್ಳುವವರು ಇದ್ದಾರೆ.

ನಮಗೆ ಬೇಕಾದ ಸಮಯದಲ್ಲಿ ಈ ವ್ಯವಸ್ಥೆ ಮಾಡಿಕೊಳ್ಳುವುದಕ್ಕಿಂತ, ಹೊಸದಾಗಿ ತೋಟ ಮಾಡುವಾಗಲೇ ರಸ್ತೆಗೆ ಬೇಕಾಗುವಷ್ಟು ಜಾಗ ಇರಿಸಿಕೊಳ್ಳುವುದು ಎಲ್ಲ ದೃಷ್ಟಿಯಿಂದ ಉತ್ತಮ. ಮುಂಡಗೋಡಿನ ಹುಲಿಹೊಂಡದ ಉತ್ಸಾಹಿ ರೈತರಾದ ಬಸವರಾಜ ಅವರು ತಮ್ಮ ತೋಟದಲ್ಲಿ ಅಲ್ಲಲ್ಲಿ ರಸ್ತೆಯನ್ನು ಇರಿಸಿಕೊಂಡಿದ್ದಾರೆ. ಅವರ ತೋಟವನ್ನು ಸುತ್ತಾಡುವಾಗ ಈ ರಸ್ತೆಗಳು ಹೆದ್ದಾರಿಯಂತೆ ಆಕರ್ಷಿಸುತ್ತವೆ.! ಮಾಹಿತಿಗೆ ಮೊ.೯೬೮೬೪೯೧೭೬೮

ಬರಹ-ರಾಧಾಕೃಷ್ಣ ತೊಡಿಕಾನ , ಗಣಪತಿ ಹಾಸ್ಪುರ 

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group