spot_img
Tuesday, September 17, 2024
spot_imgspot_img
spot_img
spot_img

ಪ್ಯಾಶನ್ ಫ್ರೂಟ್ ಕೃಷಿ ಬಗ್ಗೆ ಯೋಚಿಸಲು ಇದು ಸೂಕ್ತ ಸಮಯ: ನಾಟಿ, ನಿರ್ವಹಣೆ, ಯೋಜನೆ ಹೇಗೆ?

-ಡಾ. ರಶ್ಮಿ ಆರ್. ಮತ್ತು ಡಾ. ರಮೇಶ, ಟಿ. ಜೆ.

ಪ್ಯಾಶನ್ ಫ್ರೂಟ್, ಇದು ಬಹುಬೇಗ ಬೆಳೆದು ಹಬ್ಬಬಲ್ಲ ತೆವಳುಬಳ್ಳಿ. ಆಸರೆ ಸಿಕ್ಕಿದರೆ ಸಾಕು ನುಲಿ ಬಳ್ಳಿಗಳ ನೆರವಿನಿಂದ ಮೇಲಕ್ಕೆ ಬರಬಲ್ಲದು. ಹಣ್ಣು ಗುಂಡಗೆ ಕ್ರಿಕೆಟ್‌ ಚೆಂಡಿನಂತಿದ್ದು, ನೀಲಿ ಇಲ್ಲವೇ ಹಳದಿ ಬಣ್ಣ ಹೊಂದಿದೆ. ಹಣ್ಣೊಳಗಿನ ತಿರುಳು ಬೀಜಗಳಿಂದ ಕೂಡಿದ್ದು, ಲೋಳೆಯಂತಿರುತ್ತದೆ. ಹಣ್ಣನ್ನು ಹಾಗೆಯೇ ತಿನ್ನಬಹುದು. ಇಲ್ಲವೇ ಸ್ವಾದಯುಕ್ತ ಪದಾರ್ಥ ಪೇಯಗಳನ್ನಾಗಿ ಮಾಡಿ ಬಳಸಬಹುದು. ವಿವಿಧ ಜೀವಸತ್ವ ಮತ್ತು ಖನಿಜ ಪದಾರ್ಥಗಳೂ ಸಹ ಅಧಿಕ ಪ್ರಮಾಣದಲ್ಲಿರುತ್ತವೆ. ಈ ಹಣ್ಣುಗಳ ರಸವನ್ನು ಸೇವಿಸುತ್ತಿದ್ದಲ್ಲಿ ಕಣ್ಣುಗಳ ದೃಷ್ಟಿ ಸುಧಾರಿಸುತ್ತದೆ, ಹೃದಯ ರೋಗಗಳ ನಿವಾರಣೆಗೆ ಉಪಯೋಗಿಸಬಹುದು.

ಈ ಬೆಳೆಗೆ ಮರಳು ಮಿಶ್ರಿತ ಗೋಡು ಮತ್ತು ಕಪ್ಪುಗೋಡು ಮಣ್ಣು ಸೂಕ್ತ. ಇದು ಉಷ್ಣವಲಯದ ಹಣ್ಣಿನ ಗಿಡವಾಗಿದ್ದು, ಸಮಶೀತೋಷ್ಣ ವಲಯಗಳಲ್ಲಿಯೂ ಸಹ ಚೆನ್ನಾಗಿ ಬೆಳೆಯುತ್ತದೆ. ಜೂನ್ –ಜುಲೈ ನಾಟಿ ಮಾಡಲು ಸೂಕ್ತ.

ಪ್ರಭೇದ ಮತ್ತು ತಳಿಗಳು: ಪ್ಯಾಸ್ಸಿಫ್ಲೋರ್ ಉಪವರ್ಗದಲ್ಲಿ ತಿನ್ನಲು ಯೋಗ್ಯವಿರುವ ಹಣ್ಣುಗಳು ಆರು ಪ್ರಭೇದಗಳಲ್ಲಿವೆ. ಅವುಗಳಲ್ಲಿ ವಾಣಿಜ್ಯವಾಗಿ ಮೂರು ಪ್ರಭೇದಗಳು ಮುಖ್ಯವಾಗಿವೆ.

. ಪ್ಯಾಸ್ಸಿಫ್ಲೋರಾ ಎಡ್ಯುಲಿಸ್ : ಇದು ನೀಲಿ ಬಣ್ಣದ ಫ್ಯಾಷನ್ ಹಣ್ಣು. ಗುಡ್ಡ ಪ್ರದೇಶಗಳು ಹಾಗೂ ಸ್ವಲ್ಪಎತ್ತರದ ಪ್ರದೇಶಗಳಲ್ಲಿ ಬೆಳೆಯಲು ಸೂಕ್ತ.
. ಪ್ಯಾಸ್ಸಿಫ್ಲೋರಾ ಎಡ್ಯುಲಿಸ್ ತಳಿ ಫ್ಲೇವಿಕಾರ್ಪ : ಇದನ್ನು ಹಳದಿ ಬಣ್ಣದ ಫ್ಯಾಷನ್ ಹಣ್ಣುಎನ್ನುತ್ತಾರೆ. ಇದು ಮೈದಾನ ಪ್ರದೇಶಗಳಿಗೆ ಸೂಕ್ತ.
ಪ್ಯಾಸ್ಸಿಫ್ಲೋರಾ ಕ್ವಾಡ್ರಾಂಗುಲ್ಯಾರಿಸ್ : ಇದರ ಹಣ್ಣುಗಾತ್ರದಲ್ಲಿ ಬಲು ದೊಡ್ಡದು. ಹಣ್ಣು ನೋಡಲು ಸೌತೆಕಾಯಿಯಂತೆ ಇರುತ್ತದೆ.
ಕಾವೇರಿ :ಇದು ಸುಧಾರಿತ ತಳಿಯಾಗಿದ್ದು ಕೇಂದ್ರೀಯ ತೋಟಗಾರಿಕ ಪ್ರಯೋಗಿಕಕೇಂದ್ರ, ಚೆಟ್ಟಹಳ್ಳಿ, ಕರ್ನಾಟಕ ಇವರು ಬಿಡುಗಡೆ ಮಾಡಿರುತ್ತಾರೆ. ಈ ತಳಿಯು ಎಲೆ ಚುಕ್ಕೆ ರೋಗ, ಕತ್ತು ಕೊಳೆ ರೋಗಮತ್ತು ಬೇರುಜೆಂತು ಹುಳ ನಿರೋದಕ ಶಕ್ತಿ ಹೊಂದಿರುತ್ತದೆ. ಈ ತಳಿಯ ಸರಾಸರಿ 40-60 ಕಾಯಿಗಳು ಪ್ರತಿ ವರ್ಷಕ್ಕೆ ನೀಡುತ್ತದೆ. ಹಣ್ಣುಗಳು ಗೋಲಾಕಾರದಲ್ಲಿದ್ದು ಕಾಯಿಯ ಸಿಪ್ಪೆ ಮೇಲೆ ನೇರಳೆ ಬಣ್ಣದ ಚುಕ್ಕೆಗಳಿದ್ದು ಶೇ. 25-30 ರಷ್ಟು ತಿರುಳು ಹೊಂದಿರುತ್ತದೆ.

ಸಸ್ಯಾಭಿವೃದ್ಧಿ : ಇದನ್ನು ಬೀಜದಿಂದ ಹಾಗೂ ನಿರ್ಲಿಂಗ ವಿಧಾನಗಳಲ್ಲಿ ವೃದ್ಧಿ ಮಾಡಬಹುದು.
ನಿರ್ಲಿಂಗ ಪದ್ಧತಿಯಲ್ಲಿಹಂಬಿನ ಬಲಿತ ತುಂಡುಗಳು, ಕಸಿ ಮಾಡುವುದು ಹಾಗೂ ಹಂಬುಗಳನ್ನು ನೆಲದಲ್ಲಿ ಊರಿ ಬೇರು ಬಿಡುವಂತೆ ಮಾಡುವುದು ಮುಖ್ಯ ವಿಧಾನ.

ಸಸಿಗಳನ್ನು ನೆಡುವುದು : ಭೂಮಿಯನ್ನುಒಂದೆರಡು ಸಾರಿ ಆಳವಾಗಿ ಉಳಮೆಮಾಡಿ, ಸಮಮಾಡಬೇಕು. ಅನಂತರ ಸೂಕ್ತ ಅಂತರದಲ್ಲಿಒಂದುವರೆ ಘನ ಅಡಿ ಗಾತ್ರದ ಗುಂಡಿಗಳನ್ನು ತೆಗೆದು ಸ್ವಲ್ಪ ಕಾಲ ಬಿಸಿಲಿಗೆ ಬಿಟ್ಟು ಅನಂತರ ಕಾಂಪೋಸ್ಟ್ ಗೊಬ್ಬರ ಮತ್ತು ಮೇಲ್ಮಣ್ಣುಗಳಿಂದ ತುಂಬಿಸಬೇಕು. ಗುಂಡಿಗಳನ್ನು ಮಾರ್ಚ-ಏಪ್ರಿಲ್ ತಿಂಗಳುಗಳಲ್ಲಿ ತೆಗೆದು ಒಂದೆರಡು ಮಳೆಗಳಾದ ನಂತರ ತುಂಬಿ ಭರ್ತಿ ಮಾಡಬೇಕು. ಸಾಲುಗಳ ನಡುವೆ 16 ಅಡಿ ಹಾಗೂ ಸಸಿಗಳ ನಡುವೆ 16 ಅಡಿ ಅಂತರಇರಬೇಕು. ಪ್ರತಿಗುಂಡಿಯ ಮಧ್ಯೆ ಹೆಪ್ಪು ಹಿಡಿಸುವಷ್ಟೇ ಗಾತ್ರದ ತಗ್ಗು ತೆಗೆದು ಬೇರು ಸಮೂಹ ಸುತ್ತಲೂ ಹರಡುವಂತೆ ಮಾಡಿ ಹಸಿ ಮಣ್ಣನ್ನು ಹರಡಿ ಬಿಗಿಯಾಗಿ ಅದುಮಿ ತುಳಿಯಬೇಕು. ಗಿಡಗಳು ನೆಟ್ಟಗಿರಬೇಕು ಹಾಗೂ ಕೂಡಲೇ ಅವುಗಳಿಗೆ ಆಸರೆಕೋಲು ಹೊಟ್ಟುಕಟ್ಟಬೇಕು. ಒಂದುಎಕರೆ ಭೂಮಿಯಲ್ಲಿ ಸರಾಸರಿ 160 ಕಡ್ಡಿಗಳನ್ನು ನೆಡಬಹುದಾಗಿದೆ.

ಪೋಷಕಾಂಶ ನಿರ್ವಹಣೆ:ಕಾಂಪೋಸ್ಟ್ ಗೊಬ್ಬರ  1೦ ಕಿ.ಗ್ರಾಂ ಪ್ರತಿಗಿಡಕ್ಕೆ ಕೊಡಬೇಕಾಗುತ್ತದೆ. ರಾಸಾಯನಿಕ ಗೊಬ್ಬರಗಳು ಸಾರಜನಕ 1೦೦, ರಂಜಕ 25, ಪೊಟ್ಯಾಶ್ 1೦೦ ಕಿ.ಗ್ರಾಂ ಪ್ರತಿ ಎಕರೆಗೆ ಕೊಡಬೇಕಾಗುತ್ತದೆ.

ಹಬ್ಬಿಸುವುದು ಮತ್ತು ಸವರುವಿಕೆ : ಸಶಕ್ತ ಬಳ್ಳಿ ಮತ್ತು ಹಂಬುಗಳನ್ನು ನೆಲದ ಮೇಲೆ ಹರಿಯಲು ಬಿಡದೇಎತ್ತರದಆಧಾರಕ್ಕೆ ಹಬ್ಬಿಸಿದಲ್ಲಿ ಅಧಿಕ ಫಸಲು ಸಾಧ್ಯ. ಬಳ್ಳಿಗಳನ್ನು ಎರಡುರೀತಿಯಾಗಿ ಹಬ್ಬಿಸಬಹುದು.  ತಡಿಕೆ ಅಥವಾ ತಂತಿಯ ಬೇಲಿ ವಿಧಾನ ಮತ್ತು ಚಪ್ಪರ ವಿಧಾನ.

ನೀರಾವರಿ: ಈ ಹಣ್ಣಿನ ಬೆಳೆಗೆ ನೀರಾವರಿ ಅಗತ್ಯ. ಬಹುದೀರ್ಘಕಾಲ ಒಣ ಹವೆಯಿರುವ ದಿನಗಳಲ್ಲಿ ಅಂದರೆ ಜನವರಿ –ಮಾರ್ಚ್ ತಿಂಗಳುಗಳಲ್ಲಿ ನೀರನ್ನು ಹಾಯಿಸಬೇಕು. ಮಳೆಯಿಲ್ಲದ ದಿನಗಳಲ್ಲಿ 10-12 ದಿನಗಳಿಗೊಮ್ಮೆ ನೀರುಕೊಡಬೇಕು.

ಅಂತರ ಬೇಸಾಯ ಮತ್ತು ಕಳೆಗಳ ಹತೋಟಿ: ಇದರ ಬೇರು ಸಮೂಹ ಬಹು ಮೇಲೆಯೇ ಹರಡಿರುತ್ತದೆ. ಹಾಗಾಗಿ ಆಳವಾದ ಬೇಸಾಯ ಮಾಡಬಾರದು. ಆಗಾಗ್ಗೆ ಸಾಲುಗಳ ಹಾಗೂ ಪಾತಿಗಳ ಮಣ್ಣನ್ನು ಹಗುರವಾಗಿ ಸಡಲಿಸಿದಲ್ಲಿ ಕಳೆಗಳ ಬಾಧೆ ಇರುವುದಿಲ್ಲ. ಮಳೆಗಾಲದ ಪ್ರಾರಂಭದಲ್ಲಿ ಒಮ್ಮೆ ಮತ್ತು ಮಳೆಗಾಲದ ಕೊನೆಯಲ್ಲಿ ಮತ್ತೆ ಒಮ್ಮೆ ಮಣ್ಣನ್ನು ಸಡಿಲಿಸಬೇಕು.

ಸಸ್ಯ ಸಂರಕ್ಷಣೆ:ರೋಗಗಳು

 ಕಂದು ಮುಚ್ಚೆ ರೋಗ :ರೋಗಸೋಂಕಿದ ಎಲೆಗಳ ಮೇಲೆಲ್ಲಾಕಂದು ಬಣ್ಣದಗುಂಡಗಿನ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಹಾನಿ ತೀವ್ರವಿದ್ದಾಗ ಬಳ್ಳಿಗಳು ನಶಿಸುತ್ತವೆ. ಎಲೆಗಳು ಪೂರ್ಣ ಬಲಿಯುವುದಕ್ಕೆ ಮುಂಚೆಯೇ ಕಳಚಿಬೀಳುತ್ತವೆ. ಹಾನಿಗೀಡಾದ ಹಂಬುಗಳನ್ನು ಸವರಿತೆಗೆದು ಸುಡಬೇಕು. ಪ್ರತಿ ಲೀಟರ್ ನೀರಿಗೆ ಶೇ. 2 ಗ್ರಾಂ ಡೈಥೇನ್‌ಜಡ್ -78 ಇಲ್ಲವೇ ಮ್ಯಾನೆಬ್ ಶಿಲೀಂಧ್ರನಾಶಕವನ್ನು ನೀರಲ್ಲಿ ಕರಗಿಸಿ ಸಿಂಪಡಿಸಬೇಕು.

ಬೇರು ಕೊಳೆ ರೋಗ: ಇದೂ ಸಹ ಶಿಲೀಂಧ್ರ ರೋಗವೇ. ಬೇರು ಕೊಳೆಯುತ್ತವೆ.ನೀರು ಬಸಿಯುವಂತೆ ವ್ಯವಸ್ಥೆ ಮಾಡಬೇಕು. ಹಾಗೂ ಶೇ.1 ರ ಬೋರ್ಡೊ ಮಿಶ್ರಣವನ್ನು ಬುಡದ ಸುತ್ತ ಸುರಿದು ಮಣ್ಣುತೊಯ್ಯುವಂತೆ ಮಾಡಬೇಕು ಹಾಗೂ ಅವುಗಳ ಬುಡಭಾಗಕ್ಕೆ ಮಣ್ಣು ಏರಿಸಬೇಕು.

ಕೀಟಗಳು

ಹಣ್ಣಿನ ನೊಣ: ಎಳೆಯವಿದ್ದಾಗ ಹಣ್ಣನ್ನು ಚುಚ್ಚಿ ತೂತು ಮಾಡುತ್ತವೆ. ತೂತು ಗಾಯಗಳ ಸುತ್ತ ಮರಗಟ್ಟಿ ಹಣ್ಣು ವಿಕಾರಗೊಳ್ಳುತ್ತದೆ. ಪ್ರತಿ ಲೀಟರ್ ನೀರಿಗೆ 2 ಮಿಲಿ ಮೆಲಾಥಿಯಾನ್‌ ಕೀಟನಾಶಕವನ್ನು ಸಿಂಪಡಿಸಬೇಕು. ಅಂಶ ಕುಸಿಯುತ್ತದೆ.

ಥ್ರಿಪ್ಸ್: ಹೂ ಮೊಗ್ಗು ಹಾಗೂ ಎಳೆಯ ಹೀಚನ್ನುಕೆರೆದು ವಿಕಾರಗೊಳಿಸುತ್ತವೆ. ಪ್ರತಿ ಲೀಟರ್ ನೀರಿಗೆ ಶೇ. 2 ಮಿಲಿ ಮೆಲಾಥಿಯಾನ್‌ ಕೀಟನಾಶಕವನ್ನು ಸಿಂಪಡಿಸಬೇಕು.

ಕೊಯ್ಲು ಮತ್ತು ಇಳುವರಿ: ಈ ಹಣ್ಣಿನ ಬೆಳೆಯು ನಾಟಿಮಾಡಿದ ಒಂಬತ್ತು ತಿಂಗಳಿಗೆ ಮೊದಲ ಕಟಾವು ಪ್ರಾರಂಭವಾಗುವುದು. ನಾಟಿ ಮಾಡಿದ 16 ರಿಂದ 18 ತಿಂಗಳ ನಂತರ ವಾಣಿಜ್ಯ ಫಸಲು ಪ್ರಾರಂಭವಾಗುವುದು, ಎಕರೆಗೆ ಸುಮಾರು 4.8 ರಿಂದ 5.2  ಟನ್ ಹಣ್ಣು ಸಿಗುತ್ತದೆ.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group