ಬರಹ-ರಾಧಾಕೃಷ್ಣ ತೊಡಿಕಾನ, ಚಿತ್ರ-ವಿಡಿಯೋ- ಗಣೇಶ ಆರ್. ಎಂ. ಮಟ್ನಕಟ್ಟೆ
ತೋಟಗಾರಿಕಾ ಬೆಳೆ ಬೆಳೆಯಬೇಕಾದರೆ ಜಮೀನಿನಲ್ಲಿ ಜಲಮೂಲ ಸಮೃದ್ಧವಾಗಿರಬೇಕು. ಜಲಮೂಲಗಳಿಲ್ಲದಿದ್ದರೆ ನೀರಿನ ಕೊರತೆ ಉಂಟಾಗುತ್ತದೆ. ಬೇಸಿಗೆ ಬಿರುಬಿಸಿಲಿಗೆ ನೀರಿಲ್ಲದೆ ತೋಟ ಒಣಗಬಹುದು. ಕೃಷಿ ಉತ್ಪಾದನೆ ನಷ್ಟವಾಗಬಹುದು. ಈ ಹಿನ್ನೆಲೆಯಲ್ಲಿ ಕೃಷಿಕರು ಜಲಮೂಲಗಳಿಗೆ ಮೊದಲ ಆದ್ಯತೆ ನೀಡುತ್ತಾರೆ. ವಿಘ್ನೇಶ್ ಅವರ ಜಾಗದಲ್ಲಿ ತೋಟವಿದ್ದರೂ ನೀರಿನ ಸೌಲಭ್ಯ ಹೆಚ್ಚಿರಲಿಲ್ಲ. ಕೆರೆಯ ನೀರನ್ನಷ್ಟೇ ಆಶ್ರಯಿಸಬೇಕಿತ್ತು. ಅವರಿಗೆ ತೋಟ ವಿಸ್ತರಿಸುವ ಆಸೆ. ಆದರೆ ನೀರಿನ ಸಮಸ್ಯೆ. ಎರಡು ಮೂರು ಕೊಳವೆ ಬಾವಿಗಳನ್ನು ಕೊರೆಸಿದರು. ಬೇಸಿಗೆ ಬಂತೆಂದರೆ ನೀರಿನ ಕೊರತೆ ಈ ಸಮಸ್ಯೆ ಅವರನ್ನು ತೀವ್ರವಾಗಿ ಕಾಡಿದಾಗ ಅವರಿಗೆ ಹೊಳೆದದ್ದು ಮಳೆ ನೀರು ಕೊಯ್ಲು
ಹರಿಯುವ ನೀರನ್ನು ಹಿಡಿದಿಟ್ಟು ತಮ್ಮ ಕೊಳವೆ ಬಾವಿಗಳಿಗೆ ಮರುಪೂರಣ ಮಾಡದಿದ್ದರೆ ಅವರ ಮಹತ್ವದ ತೋಟ ವಿಸ್ತರಣೆಯ ಕನಸು ನೆನಸಾಗುತ್ತಿರಲಿಲ್ಲ. ನೀರಿಗಾಗಿ ಏನಾದರೂ ಮಾಡಲೇಬೇಕು ಎಂಬ ಛಲ ಅವರಲ್ಲಿತ್ತು. ಆದರೆ ಅದಕ್ಕೆ ಪೂರಕವಾದ ರೂಪುರೇಷೆಗಳಿರಲ್ಲಿಲ್ಲ. ಇದೇ ಸಂದರ್ಭದಲ್ಲಿ ಕಂಬದ ಕೋಣೆ ರೈತರ ಸೇವಾ ಸಹಕಾರಿ ಸಂಘದ ವತಿಯಿಂದ ಜಲ ಜಾಗೃತಿ ಹಾಗೂ ಕೊಳವೆಬಾವಿಗಳಿಗೆ ಮರುಪೂರಣದ ಕುರಿತು ಮಾಹಿತಿ ಶಿಬಿರ ಏರ್ಪಟ್ಟಿತ್ತು. ಈ ಮಾಹಿತಿ ಶಿಬಿರದಲ್ಲಿ ಭಾಗವಹಿಸಿದ್ದಲ್ಲದೆ ಮಳೆನೀರು ಕೊಯ್ಲು ಮಾಡುವ ಕೃಷಿಕರ ತೋಟಗಳನ್ನು ವೀಕ್ಷಿಸಿದರು. ಆನಂತರ ಮಳೆನೀರು ಕೊಯ್ಲು ಮಾಡುವ ಅವರ ಪ್ರಯತ್ನ ಆರಂಭಿಸಿದರು.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬೋಳಂಬಳ್ಳಿಯ ವಿಘ್ನೇಶ್ ಅವರು ಮಳೆನೀರು ಕೊಯ್ಲಿನ ಮೂಲಕ ನೀರಿನ ಬರ ನೀಗಿಸಿಕೊಂಡವರು. ಮಳೆನೀರು ಕೊಯ್ಲು ಮಾಡಿದ ಯಶಸ್ವಿ ಕೃಷಿಕ. ಹಲವಾರು ಮಂದಿ ಕೃಷಿಕರು ಅವರ ಮಳೆನೀರು ಕೊಯ್ಲು ವೀಕ್ಷಿಸಿ ತಮ್ಮ ತೋಟಗಳಲ್ಲಿಯೂ ಪ್ರಯೋಗ ಮಾಡಿದ್ದಾರೆ.
ಸುಮಾರು ಹದಿನಾರು ಎಕ್ರೆ ಜಮೀನಿದ್ದರೂ ಆರಂಭದಲ್ಲಿ ತೆಂಗು ಮತ್ತು ಮಾವಿನ ತೋಟ ಹಾಗೂ ಅಡಿಕೆ ತೋಟಕಷ್ಟೇ ಅವರಲ್ಲಿದ್ದ ನೀರಿನ ಸಂಪನ್ಮೂಲ ಸಾಕಾಗುತ್ತಿತ್ತು. ಮೂರು ನಾಲ್ಕು ಕೊಳವೆ ಬಾವಿ ನಿರ್ಮಿಸಿದರೂ ಎಪ್ರಿಲ್- ಮೇ ಹೊತ್ತಿಗೆ ನೀರು ಸಾಕಾಗುತ್ತಿರಲಿಲ್ಲ. ಜಮೀನಿನ ಮೇಲ್ಭಾಗವು ಕಣಿವೆಯಂತಿತ್ತು. ಅಲ್ಲಿಂದ ಬರುತ್ತಿದ್ದ ನೀರು ಕೆಳಭಾಗಕ್ಕೆ ಹರಿದು ಹೋಗುತ್ತಿತ್ತು. ಮಳೆನೀರು ವ್ಯರ್ಥವಾಗುವುದನ್ನು ತಡೆದು ತೋಟದ ಭಾಗದಲ್ಲಿಯೇ ಇಂಗಿಸಿಕೊಳ್ಳಬೇಕೆಂಬ ಯೋಚನೆ ಮಾಡಿದರು. ಎತ್ತರದ ಗುಡ್ಡದಿಂದ ಹರಿದು ಬರುತ್ತಿರುವ ನೀರನ್ನು ಹಿಡಿದಿಟ್ಟುಕೊಳ್ಳಲು ಅನುಕೂಲವಾಗುವಂತೆ ಕಣಿವೆಯಲ್ಲಿ ದೊಡ್ಡದಾದ ಮಣ್ಣಿನ ತಡೆಗೋಡೆ (ಕಟ್ಟೆ)ಯನ್ನು ನಿರ್ಮಿಸಿದರು. ಕಣಿವೆ ಪ್ರದೇಶದಿಂದ ಹರಿದು ಬಂದ ನೀರು ಕಟ್ಟದಲ್ಲಿ ಸಂಗ್ರಹವಾಗಿ ನಿಧಾನವಾಗಿ ಭೂಮಿಗಿಳಿಯಿತು.
ಇದೇ ಸಂದರ್ಭ ತನ್ನ ತೋಟದ ಕೆಳ ಹಂತದ ಕೆರೆಗಳಲ್ಲಿ ಒಳ ಹರಿವು ಹೆಚ್ಚಾಯಿತು. ಕಣಿವೆಯಲ್ಲಿ ಅಡ್ಡಲಾಗಿ ಕಟ್ಟಿದ ತಡೆಗೋಡೆಯ ಮೂಲಕ ಸಂಗ್ರಹವಾದ ನೀರನ್ನು ಕೊಳವೆ ಬಾವಿಗಳಿಗೆ ಗುರುತ್ವಾಕರ್ಷಣೆಯ ಬಲದಿಂದ ತುಂಬಿಸಿದರು. ಅದಲ್ಲದೆ ಸುಮಾರು 5 ಎಕ್ರೆ ಗುಡ್ಡ ಜಾಗದಿಂದ ಹರಿದು ಬರುತ್ತಿದ್ದ ಮಳೆಯ ನೀರು ಎಲ್ಲೋ ಹರಿದು ಹೋಗುತ್ತಿತ್ತು. ಆ ಭಾಗದಲ್ಲಿ ಕಂದಕವನ್ನು ನಿರ್ಮಿಸಿ ಮಳೆಯ ನೀರನ್ನು ತಡೆದು ನಿಧಾನಿಸಿದರು. ಆನಂತರ ಕೆಸರು ತುಂಬಿದ ಆ ನೀರನ್ನು ಶುದ್ಧೀಕರಣ ಗುಂಡಿಗೆ ಹರಿಸಿದರು. ಮೊದಲ ಗುಂಡಿಯಲ್ಲಿ ಶುದ್ಧೀಕರಣಗೊಂಡ ನೀರನ್ನು ಎರಡನೆಯ ಗುಂಡಿಗೆ ಹರಿಸಲಾಯಿತು. ಅಲ್ಲಿಂದ ಸೋಸಿದ ನೀರನ್ನು ಕೊಳವೆ ಬಾವಿಯ ಜಲಮರುಪೂರಣ ವ್ಯವಸ್ಥೆಗೆ ಜೋಡಿಸಲಾಯಿತು. ಕೊಳವೆ ಬಾವಿಯಲ್ಲೀಗ ನೀರು ಸಮೃದ್ಧವಾಗಿದೆ
ಕೊಳವೆ ಬಾವಿಗೆ ಜಲ ಮರುಪೂರಣ ಹೇಗೆ ಮಾಡಬಹುದು?
ಕೊಳವೆ ಬಾವಿಯ ಸುತ್ತ 10*10*1೦ ಉದ್ದ, ಅಗಲ, ಎತ್ತರದ ಗುಂಡಿತೋಡಿಕೊಳ್ಳಬೇಕು. ಆನಂತರ ತಳಭಾಗದಲ್ಲಿ ಕಾಂಕ್ರಿಟ್ ಬೆಡ್ ನಿರ್ಮಿಸಿಕೊಳ್ಳಬೇಕು. ಕೇಸಿಂಗ್ ಪೈಪಿಗೆ ಸುಮಾರು 1೦೦ ರಂಧ್ರಗಳನ್ನು ಮಾಡಿಕೊಳ್ಳಬೇಕು. ರಂಧ್ರಗಳನ್ನು ನೈಲಾನ್ ಮೆಶನ್ನಿಂದ ಮುಚ್ಚಿ ಬಿಗಿಯಾಗಿ ಕಟ್ಟಿಕೊಳ್ಳಬೇಕು. ಬೋಲ್ರ‍್ಸನ್ನು (ಕಲ್ಲುಗಳನ್ನು )ಹಾಕಿ ಅದರ ಮೇಲೆ 4೦ಮಿಮಿ ಜಲ್ಲಿ ತುಂಬಿಸಬೇಕು. ಆ ಜಲ್ಲಿಯ ಮೇಲೆ ಒಂದು ಕೆಜಿಯಷ್ಟು ಇದ್ದಿಲನ್ನು ಹರಡಬೇಕು. ಆಮೇಲೆ 20ಮಿಮಿಯ ಸಣ್ಣ ಜಲ್ಲಿ ತುಂಬಿಸಿ ಅದರ ಮೇಲೆ ನೈಲಾನ್ ಮೆಶ್ ಹಾಸಬೇಕು. ಕೊನೆಗೆ ಸ್ಥಳೀಯವಾಗಿ ಲಭ್ಯವಿರುವ ಸಣ್ಣ ಅಥವಾ ದಪ್ಪ ಮರಳನ್ನು ತುಂಬಿದರೆ ಜಲಮರುಪೂರಣಕ್ಕೆ ಎಲ್ಲಾ ಸಿದ್ಧವಾದಂತಾಗುತ್ತದೆ.

ನೀರಿನ ಉಳಿತಾಯ: ಮಳೆನೀರು ಕೊಯ್ಲು ಮಾಡುವ ಮೊದಲು ನೀರಿನ ಸಮಸ್ಯೆ ಎದುರಾಗುತ್ತಿತ್ತು . ಮೇಲ್ಭಾಗದ ಕಣಿವೆಯ ಕಟ್ಟದಿಂದ ನೀರು ನೈಸರ್ಗಿಕ ವಿಧಾನದ ಗುರುತ್ವಾಕರ್ಷಣೆಯ ಬಲದಿಂದ ಕೆಳಬಾಗದಲ್ಲಿರುವ ಕೊಳವೆ ಬಾವಿಗಳಿಗೆ ತುಂಬಿದರೆ ಕೆರೆಗಳು ನೀರಿನ ಒಳಹರಿವಿನಿಂದಲೇ ಭರ್ತಿಯಾದವು. ತೋಟದಲ್ಲಿ ನಾಲ್ಕು ಕೊಳವೆ ಬಾವಿಗಳಿವೆ. ಆದರೆ ನೀರಿನ ಬಳಕೆಯಾಗುತ್ತಿರುವುದು ಎರಡು ಕೊಳವೆ ಬಾವಿಗಳು ಮಾತ್ರ. ಎರಡು ಕೊಳವೆ ಬಾವಿಯ ನೀರು ಕಾದಿರಿಸಿದಂತಿದೆ. ಇವರ ಹಳೆಯ ತೋಟ ಒಂದೆಡೆಯಾದರೆ ಎರಡು ಕಡೆಯಲ್ಲಿ ಇಳಿಜಾರು ಭೂಮಿಯನ್ನು ಸಮತಟ್ಟುಗೊಳಿಸದೆ ಭೂಮಿ ಸ್ವರೂಪವನ್ನು ಹಾಗೆಯೇ ಉಳಿಸಿಕೊಂಡು ಹೊಸ ಅಡಿಕೆ ತೋಟ ನಿರ್ಮಿಸಿದ್ದಾರೆ. ಅಡಿಕೆ ಗಿಡಗಳನ್ನು ಗುಂಡಿ ಮಾಡಿ ನೆಡುವ ಬದಲು ಕಂದಕವನ್ನು ನಿರ್ಮಿಸಿಕೊಂಡು ಅದರಲ್ಲಿ 9*9 ಅಡಿ ಅಂತರದಲ್ಲಿ ಗಿಡ ನೆಟ್ಟಿದ್ದಾರೆ. ಇದರಿಂದ ಅವರು ಕಂಡುಕೊಂಡ ಪ್ರಯೋಜನವೆಂದರೆ ಮಳೆ ನೀರು ಅಲ್ಲಿಯೇ ಇಂಗುತ್ತದೆ. ಜೊತೆಗೆ ತೋಟದಲ್ಲಿ ಬೀಳುವ ಹಾಳೆ ಕಳೆಗಳನ್ನು ಕಿತ್ತು ಎಸೆಯಬೇಕಾಗಿಲ್ಲ ಅದುವೇ ಗೊಬ್ಬರವಾಗುತ್ತದೆ. ಗಿಡಗಳಿಗೆ ಮಣ್ಣು ಹಾಕಬೇಕಾದರೆ ಕಂದಕದ ಬದಿಯ ಮಣ್ಣನ್ನೇ ಸಡಿಲಿಸಿ ಅಡಿಕೆ ಬುಡಗಳಿಗೆ ಸೇರಿಸುತ್ತಾರೆ. ತೋಟಕ್ಕೆ ಹನಿ ನೀರಾವರಿ ಅಳವಡಿಸಿಕೊಂಡಿರುವುದರಿಂದ ನೀರಿನ ಮಿತಬಳಕೆಗೆ ಒತ್ತು ನೀಡಿದ್ದಾರೆ. ದನ ಸಾಕಾಣೆ ಇರುವುದರಿಂದ
ಗೊಬ್ಬರ ತಯಾರಿಗಾಗಿ ಮೂರು ಸ್ಲರಿ ಹೊಂಡ ತಯಾರಿಸಿಕೊಂಡಿದ್ದಾರೆ. ಅದರಲ್ಲಿ ಒಂದು ಹೊಂಡಕ್ಕೆ ಹಸಿರು ಸೊಪ್ಪುಗಳನ್ನು ಹಾಕಿ ಗೊಬ್ಬರ ತಯಾರಿಸಿದರೆ ಬಯೋಡೈಜಸ್ಟರ್ ಅನ್ನು ಪಂಪು ಅಳವಡಿಸಿ ಪೈಪುಗಳ ಮೂಲಕ ತೋಟಕ್ಕೆ ಬಿಡುತ್ತಾರೆ. ಸೊಪ್ಪು ಗೊಬ್ಬರವನ್ನು ಹಂತ ಹಂತವಾಗಿ ತೋಟಕ್ಕೆ ಹಾಕುತ್ತಾರೆ. ಕೋಳಿಗೊಬ್ಬರ ಹಾಗೂ ಪೋಷಕಾಂಶಗಳುಳ್ಳ ಗೊಬ್ಬರವನ್ನು ಹೊರಗಿಂದ ತಂದು ಹಾಕುವುದನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಹಟ್ಟಿಗೊಬ್ಬರ ಮತ್ತು ಅದರ ಸಾರ. ಅಡಿಕೆ, ತೆಂಗು, ಕಾಳುಮೆಣಸು, ಮಾವು, ಕೊಕ್ಕೊ, ಬಾಳೆ, ಗೇರು ಅಲ್ಲದೆ ಹಣ್ಣಿನ ಗಿಡಗಳಿವೆ. ಸಮಗ್ರ ಕೃಷಿ ಅಳವಡಿಕೆಯೊಂದಿಗೆ ಮಾದರಿ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ. ಇವರ ಸಾಧನೆಗೆ ಪತ್ನಿ ಪ್ರಿಯಾ ಅವರ ಸಹಕಾರ, ಪ್ರೋತ್ಸಾಹವೂ ದೊರೆತಿದೆ. ಮೂರು ನಾಲ್ಕು ಮಂದಿಗೆ ತೋಟದಲ್ಲಿ ಉದ್ಯೋಗವನ್ನು ಕಲ್ಪಿಸಿದ್ದಾರೆ.

ಕಾಡು ಪ್ರಾಣಿಗಳ ಹಾವಳಿ
ಹೊಸದಾಗಿ ನಿರ್ಮಿಸಿದ ತೋಟಕ್ಕೆ ಕಾಡು ಹಂದಿ ಬಂದು ನೂರಕ್ಕೂ ಹೆಚ್ಚಿನ ಸಣ್ಣ ಗಿಡಗಳನ್ನು ಹಾಳುಗೆಡವಿದೆ. ನವಿಲುಗಳು ತೋಟದಲ್ಲಿಯೇ ಸುತ್ತಾಡುತ್ತಿರುವುದರಿಂದ ತರಕಾರಿ ಬೆಳೆಸುವುದು ಕನಸಿನ ಮಾತು. ತೋಟದ ಸುತ್ತು ಬ್ಯಾಟರಿ ಚಾಲಿತ ಬೇಲಿ ಇದ್ದರೂ ಹಂದಿ ನುಗ್ಗಿ ಬಂದು ಗಿಡಗಳನ್ನು ಹಾನಿಗೊಳಿಸಿದೆ. ಸಣ್ಣ ಗಿಡಗಳ ಬುಡಗಳಿಗೆ ಪ್ಲಾಸ್ಟಿಕ್ ಚೀಲಗಳನ್ನು ಸುತ್ತಿ ಹಂದಿ ಹಾವಳಿಯನ್ನು ತಡೆಯುವಲ್ಲಿ ಯಶಸ್ಸು ಕಂಡಿದ್ದಾರೆ. ಆರಂಭದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸೌಲತ್ತು ಪಡೆದುಕೊಂಡು ನೀರಿಂಗಿಸಿಕೊಂಡು ನಂತರ ತನ್ನದೇ ಬೇರೆ ಬೇರೆ ರೀತಿಯಲ್ಲಿ ನೀರನ್ನು ಇಂಗಿಸುತ್ತಿದ್ದಾರೆ. ಇವರ ಮಳೆ ನೀರು ಕೊಯ್ಲು ಸಾಧನೆಯನ್ನು ನೋಡಿ ಮಾಹಿತಿ ಪಡೆದು ಹಲವಾರು ಅವರವರ ಜಮೀನುಗಳಲ್ಲಿ ಅಳವಡಿಸಿಕೊಂಡು ನೀರಿನ ಸಮಸ್ಯೆ ನೀಗಿಸಿಕೊಂಡಿದ್ದಾರೆ. ನೀರಿಂಗಿಸುವ ಶಿಬಿರಗಳು ಇವರ ತೋಟದಲ್ಲಿ ನಡೆದಿವೆ.


ಸನ್ಮಾನ : ಇವರ ಸಮಗ್ರ ಕೃಷಿ ಮಳೆ ನೀರು ಕೊಯ್ಲು ಸೇರಿದಂತೆ ಕೃಷಿಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಇಲಾಖಾವತಿಯಂದ ಶ್ರೇಷ್ಠ ಕೃಷಿಕ ಪ್ರಶಸ್ತಿ ಸಂದಿದೆ. ಖಂಬದ ಕೋಣೆ ರೈತರ ಸೇವಾಸಹಕಾರಿ ಸಂಘದ ವತಿಯಿಂದ ಸನ್ಮಾನಿತರಾಗಿದ್ದಾರೆ. ಬೈಂದೂರಿನಲ್ಲಿ ನಡೆದ ಹಲಸು ಮೇಳದಲ್ಲೂ ಗೌರವಿಸಲ್ಪಟ್ಟಿದ್ದಾರೆ. ಇದಲ್ಲದೆ ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ.
ಯುವ ಜನರು ಕೃಷಿ ಕ್ಷೇತ್ರವನ್ನು ಆಯ್ದುಕೊಳಬಹುದು. ಈ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು. ನಷ್ಟವಾಗದು. ಆಸಕ್ತಿ, ತಾಳ್ಮೆ, ಶ್ರದ್ಧೆ ಬೇಕು. ಸಮಗ್ರ ಕೃಷಿಯನ್ನು ಅಳವಡಿಸಿಕೊಂಡು ಕೃಷಿಯಿಂದಲೂ ಉತ್ತಮ ಆದಾಯವನ್ನು ಪಡೆಯಬಹುದು. ಎಂದು ವಿಘ್ನೇಶ್ ಅವರ ಮಾತು. ಮಾಹಿತಿಗೆ-8971885557
ವಿಘ್ನೇಶ್ ಅವರ ಮಾತು ಮತ್ತು ವಿಡಿಯೋ ನೋಡಿ








