ಬರಹ-ಅಡ್ಡೂರು ಕೃಷ್ಣ ರಾವ್
ಹದಿನೈದು ಎಕ್ರೆಯಲ್ಲಿರುವ 25,000 ಮಾವಿನ ಮರಗಳಿಂದ 7 ಪಟ್ಟು ಜಾಸ್ತಿ ಇಳುವರಿ! ಇದು ಸಾಧ್ಯವೆಂದು ತೋರಿಸಿ ಕೊಟ್ಟಿದ್ದಾರೆ ಬೆಂಗಳೂರಿನ “ಮ್ಯಾಂಗೋಮೇಜ್ ಫಾರ್ಮಿ”ನ ಸೂರಜ್ ಪಾಣಿಗ್ರಾಹಿ. ಇದು ಸಾಧ್ಯವಾದದ್ದು ಹೇಗೆ? ಡ್ರೋನ್-ಗಳು, ಸೆನ್ಸರುಗಳು ಮತ್ತು ಹನಿ ನೀರಾವರಿ ಅಳವಡಿಕೆಯಿಂದ. ಇದಕ್ಕೆ ಪ್ರೇರಣೆ: ಯುರೋಪಿನ ದ್ರಾಕ್ಷಿ ತೋಟಗಳಲ್ಲಿ ಅಳವಡಿಸಿರುವ ಪ್ರಿಸಿಷನ್ ಮತ್ತು ಡೆನ್ಸಿಟಿ (ನಿಖರತೆ ಮತ್ತು ದಟ್ಟಣೆ) ತಂತ್ರಗಳು.
ಈ ಅಪೂರ್ವ ತೋಟದ ಆಕಾಶದಲ್ಲಿ ಸುತ್ತಾಡುವ ಡ್ರೋನುಗಳಿಂದ ಮಾವಿನ ಮರಗಳ ಆರೋಗ್ಯ ಮತ್ತು ಪೀಡೆಕೀಟಗಳ ಸುಳಿದಾಟದ ಬಗ್ಗೆ ಮಾಹಿತಿ ಸಂಗ್ರಹ. ಆಯಾ ಕ್ಷಣದಲ್ಲೇ ಈ ಮಾಹಿತಿ (ಫೋಟೋಗಳು ಮತ್ತು ವಿಶ್ಲೇಷಣೆ ವರದಿಗಳು) ಮಾವಿನ ತೋಟದ “ನರಕೇಂದ್ರ”ಕ್ಕೆ ರವಾನೆ. ಅವನ್ನು ಆಧರಿಸಿ ಆಯಾ ಮಾವಿನ ಮರಗಳ ಆರೈಕೆ ಬಗ್ಗೆ ಅಗತ್ಯವಿರುವ ಬದಲಾವಣೆಗಳನ್ನು ಮಾಡಿಕೊಳ್ಳಲಾಗುತ್ತದೆ.
ಉದಾಹರಣೆಗೆ, ಹನಿ ನೀರಾವರಿ ಅಳವಡಿಕೆಯಿಂದ ನೀರಿನ ಬಳಕೆಯಲ್ಲಿ ಶೇಕಡಾ 70ರಷ್ಟು ಉಳಿತಾಯ. ಎಲ್ಲ ಮರಗಳಿಗೆ ಸಾರಾಸಗಟಾಗಿ ನೀರು ಹರಿಸುವ ಬದಲಾಗಿ ಆಯಾ ಮರದ ಅಗತ್ಯಕ್ಕೆ ಅನುಗುಣವಾಗಿ ನೀರಿನ ಪೂರೈಕೆ. ಇದರಿಂದಾಗಿ ರಸಭರಿತ ಮಾವಿನ ಫಲ ಬಿಡುವ ರತ್ನಗಿರಿ ಅಲ್ಫಾನ್ಸೋ ಮಾವಿನ ಮರಗಳ ಆರೈಕೆಗೆ ಪ್ರತಿಯೊಂದು ಹನಿ ನೀರಿನ ಸದ್ಬಳಕೆ.
ಈ ವಿಧಾನದಿಂದ ನೀರು ಇತ್ಯಾದಿ ಒಳಸುರಿಗಳು ಪೋಲಾಗುವುದು ತಪ್ಪುತ್ತದೆ. ಜೊತೆಗೆ ಪ್ರತಿಯೊಂದು ಮಾವಿನ ಮರವೂ ಅದಕ್ಕೆ ಅಗತ್ಯವಾದಷ್ಟು ಪೋಷಕಾಂಶಗಳನ್ನು ಪಡೆಯುತ್ತದೆ. ಇದುವೇ ಎಕರೆಗೆ 1,450 ಮರಗಳ ದಟ್ಟಣೆಯ (ಸಾಂಪ್ರದಾಯಿಕ ದಟ್ಟಣೆಗೆ ಹೋಲಿಸಿದಾಗ 15 ಪಟ್ಟು ಜಾಸ್ತಿ) ಯಶಸ್ಸಿನ ಗುಟ್ಟು.
ಸೂರಜ್ ಪಾಣಿಗ್ರಾಹಿ ಪಿಲಾನಿಯ ಬಿಟ್ಸ್ ವಿದ್ಯಾಲಯದ ಪದವೀಧರ. ನಂತರ ವಿಪ್ರೊ, ನೋಕಿಯಾ, ಮೇಕ್-ಮೈ-ಟ್ರಿಪ್ ಇತ್ಯಾದಿ ಕಾರ್ಪೊರೇಟ್ ಕಂಪೆನಿಗಳಲ್ಲಿ ಸುಮಾರು 20 ವರುಷ ಉದ್ಯೋಗದ ನಂತರ ಈ ಸಾಹಸದ ಯೋಜನೆ ಕೈಗೆತ್ತಿಕೊಂಡವರು. ತನ್ನ ಉದ್ಯೋಗದ ನಿಮಿತ್ತ ಅಮೆರಿಕಾ, ಯುರೋಪ್ ಇತ್ಯಾದಿ ಖಂಡಗಳಲ್ಲಿ ಸುತ್ತಾಡಿದವರು. ಆ ಸಮಯದಲ್ಲಿ, ಮುಖ್ಯವಾಗಿ ಯುರೋಪಿನ ದ್ರಾಕ್ಷಿ ತೋಟಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿ ಕೃಷಿ ಮಾಡುವುದನ್ನು ಗಮನಿಸಿದವರು.
ಕೃಷಿ ತಂತ್ರಜ್ಞಾನದ ಒಂದು ಸ್ಟಾರ್ಟ್-ಆಪ್ ಕಂಪೆನಿಗಾಗಿ ಕೆಲಸ ಮಾಡುತ್ತಿದ್ದಾಗ ದ್ರಾಕ್ಷಿ ತೋಟಗಳು ಮತ್ತು ವೈನ್ ಉತ್ಪಾದನೆಯನ್ನು ಹತ್ತಿರದಿಂದ ಪರಿಶೀಲಿಸುವ ಅವಕಾಶ ಅವರಿಗೆ ಲಭ್ಯವಾಯಿತು. ಆಸ್ಟ್ರಿಯಾ, ಇಟೆಲಿ, ಜರ್ಮನಿ ಮತ್ತು ಫ್ರಾನ್ಸ್ ದೇಶಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಅತ್ಯಂತ ದಕ್ಷತೆಯಿಂದ ದ್ರಾಕ್ಷಿ ತೋಟಗಳನ್ನು ನಿರ್ವಹಿಸುತ್ತಿದ್ದುದನ್ನು ಕಣ್ಣಾರೆ ಕಂಡರು. ಪ್ರತಿಯೊಂದು ದ್ರಾಕ್ಷಿ ಬಳ್ಳಿಗೂ ಸೂಕ್ತವಾದ ಆರೈಕೆ ಸಿಗುತ್ತಿದ್ದ ಕಾರಣ, ಜಗತ್ – ಪ್ರಸಿದ್ಧ ವೈನ್ ಉದ್ಯಮದಲ್ಲಿ ಆ ಬಳ್ಳಿಗಳ ದ್ರಾಕ್ಷಿ ಫಲಗಳ ಕೊಡುಗೆ ಅರ್ಥ ಮಾಡಿಕೊಂಡರು.
ಭಾರತದ ಫಲಗಳಲ್ಲಿ ಜಗತ್ತಿನಲ್ಲೇ ಹೆಸರುವಾಸಿಯಾದ ಅಲ್ಫಾನ್ಸೋ ಮಾವುಗಳ ಕೃಷಿಗೆ ಅದೇ ತಂತ್ರಜ್ಞಾನ ಬಳಸಿದರೆ ಹೇಗೆ? ಎಂಬ ಅವರ ಐಡಿಯಾ “ಮ್ಯಾಂಗೋಮೇಜ್” ಎಂಬ ಕನಸಿನ ಯೋಜನೆಗೆ ಮೂಲವಾಯಿತು. ಅವರು ಅಳವಡಿಸಿರುವ ಇಳುವರಿಯನ್ನು ಗರಿಷ್ಠ ಪ್ರಮಾಣಕ್ಕೆ ಹೆಚ್ಚಿಸುವ ‘ಕ್ವಾಂಟಮ್ ದಟ್ಟಣೆ ಕೃಷಿ ತಂತ್ರ” ಅವರ ಯಶಸ್ಸಿನ ಬೀಜ ಮಂತ್ರ.
ತನ್ನ ಯೋಜನೆ ಕಾರ್ಯಗತಗೊಳಿಸಲಿಕ್ಕಾಗಿ 2018ರಲ್ಲಿ 15 ಎಕ್ರೆ ಜಮೀನು ಖರೀದಿಸಿದರು. ಅಲ್ಲಿ ಮಾವಿನ ಸಸಿಗಳನ್ನು ನೆಡಲು ಶುರುವಿಟ್ಟು, 2021ರಲ್ಲಿ ಮ್ಯಾಂಗೋಮೇಜ್ ಫಾರ್ಮ್ ಸ್ಥಾಪಿಸಿದರು.
ಸಾಂಪ್ರದಾಯಿಕವಾಗಿ ಒಂದು ಎಕರೆಯಲ್ಲಿ 50 – 80 ಮಾವಿನ ಸಸಿಗಳನ್ನು ನೆಟ್ಟು ಬೆಳೆಸಲಾಗುತ್ತದೆ. ಆದರೆ ಮ್ಯಾಂಗೋಮೇಜ್ ಫಾರ್ಮಿನಲ್ಲಿ 15 ಎಕ್ರೆಯಲ್ಲಿ 25,000 ಮಾವಿನ ಮರಗಳ ದಟ್ಟಣೆ. ಇಲ್ಲಿ ಮರದಿಂದ ಮರಕ್ಕೆ ಕೇವಲ 3 ಅಡಿ ಮತ್ತು ಸಾಲಿನಿಂದ ಸಾಲಿಗೆ 7 ಅಡಿ ಅಂತರ!
ಇದರಿಂದಾಗಿ ಒಂದು ಎಕ್ರೆಯಲ್ಲಿ 1,450 ಮರಗಳು ಅಂದರೆ ಮರಗಳ ಸಂಖ್ಯೆ ಎಕ್ರೆಗೆ 15 ಪಟ್ಟು ಜಾಸ್ತಿ. ಆದ್ದರಿಂದ ಗರಿಷ್ಠ ಇಳುವರಿ (ಅಂದರೆ 7 ಪಟ್ಟು ಜಾಸ್ತಿ) ಪಡೆಯಲು ಸಾಧ್ಯ. ಈ ಹಂಗಾಮಿನಲ್ಲಿ ಸೂರಜ್ ನಿರೀಕ್ಷಿಸುತ್ತಿರುವ ಇಳುವರಿ 40 ಟನ್!
ಹಲವಾರು ದೇಶಗಳು ಬಾಳೆಹಣ್ಣಿನಿಂದ ತೊಡಗಿ ಖರ್ಜೂರದ ವರೆಗೆ ತಮ್ಮತಮ್ಮ ದೇಶದ ಮುಖ್ಯ ಹಣ್ಣುಗಳನ್ನು ರಫ್ತು ಮಾಡಿ ಕೋಟಿಗಟ್ಟಲೆ ರೂಪಾಯಿ ಆದಾಯ ಗಳಿಸುತ್ತಿವೆ. ಆದರೆ, ಜಗತ್ತಿನಲ್ಲಿ ಅತ್ಯಧಿಕ ಮಾವು ಉತ್ಪಾದಿಸುವ ಭಾರತ ರಫ್ತು ಮಾಡುತ್ತಿರುವುದು ತನ್ನ ಒಟ್ಟು ಉತ್ಪನ್ನದ ಶೇಕಡಾ 10ರಷ್ಟು ಮಾತ್ರ. ಈ ಪರಿಸ್ಥಿತಿಗೆ ಕಾರಣ ಗುಣಮಟ್ಟದ ಏರುಪೇರು. ಅದಕ್ಕಾಗಿಯೇ ಮ್ಯಾಂಗೋಮೇಜ್ ಫಾರ್ಮ್ ತನ್ನ ತೋಟದ ಮಾವಿನ ಹಣ್ಣುಗಳ ಗುಣಮಟ್ಟ ಉತ್ತಮವಾಗಿರಲು ಆದ್ಯತೆ ನೀಡುತ್ತಿದೆ. ಇಲ್ಲಿ ಅನುಸರಿಸುವ ಅತ್ಯಾಧುನಿಕ ಕೃಷಿ ತಂತ್ರಜ್ಞಾನದಿಂದಾಗಿ ಇಲ್ಲಿನ ಮರಗಳು ರಫ್ತಿನ ವ್ಯವಹಾರಕ್ಕೆ ಅಗತ್ಯವಾದ ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳನ್ನು ಉತ್ಪಾದಿಸುತ್ತಿವೆ. ಈ ತಂತ್ರಜ್ಞಾನದಲ್ಲಿ ಪೀಡೆಕೀಟಗಳ ನಿಯಂತ್ರಣಕ್ಕಾಗಿ ರಾಸಾಯನಿಕ ಪೀಡೆನಾಶಕಗಳ ಬದಲಾಗಿ ಬೇವಿನ ಎಣ್ಣೆ ಸಿಂಪಡಣೆ ಮತ್ತು ಪರಾಗಸ್ಪರ್ಶಕ್ಕಾಗಿ ಜೇನ್ನೊಣಗಳ ಬಳಕೆಯೂ ಸೇರಿವೆ. ಇಂತಹ ಕ್ರಮಗಳಿಂದಾಗಿ ತೋಟದ ಉತ್ಪಾದಕತೆ ಶೇಕಡಾ 25ರಷ್ಟು ಹೆಚ್ಚಾಗಿದೆ.
ಮ್ಯಾಂಗೋಮೇಜ್ ಫಾರ್ಮಿನಲ್ಲಿ ಎ-ಐ ಆಧಾರಿತ ತಂತ್ರಜ್ಞಾನ ಅಳವಡಿಕೆಯ ಮುಂದಾಳುತನ ವಹಿಸಿರುವವರು ಪ್ರಶಾಂತ್ ಪಟಾಲೆ. “ಸೆನ್ಸರುಗಳು, ಉಪಗ್ರಹ ಚಿತ್ರಗಳು ಮತ್ತು ಎ-ಐ ಡ್ಯಾಶ್ ಬೋರ್ಡುಗಳನ್ನು ಬಳಸಿ, ಮಣ್ಣಿನ ಆರೋಗ್ಯ, ನೀರಾವರಿ ಮತ್ತು ಪೀಡೆಕೀಟಗಳ ಚಟುವಟಿಕೆಗಳನ್ನು ನಾವು ಗಮನಿಸುತ್ತೇವೆ. ಎ-ಐ ಆಧಾರಿತ ಡ್ರೋನುಗಳು ಮತ್ತು ಮಣ್ಣು ಹಾಗೂ ಮರಗಳ ಅತ್ಯಾಧುನಿಕ ಆರೋಗ್ಯ ಮೇಲುಸ್ತುವಾರಿ ವ್ಯವಸ್ಥೆಗಳಿಂದಾಗಿ ಪ್ರತಿಯೊಂದು ಮರದ ಬಗ್ಗೆ ನಿಗಾ ಮಹಿಸಲು ಸಾಧ್ಯವಾಗಿದೆ. ಹನಿ ನೀರಾವರಿ ವ್ಯವಸ್ಥೆಯಿಂದಾಗಿ ನೀರಿನ ಬಳಕೆಯ ಪರಿಣಾಮಕಾರಿ ನಿಯಂತ್ರಣ ಆಗುತ್ತಿದೆ. ಸೆನ್ಸರುಗಳು ಮಣ್ಣಿನ ಪೋಷಕಾಂಶಗಳ ಸ್ಥಿತಿಗತಿ ತಿಳಿಸುವ ಕಾರಣ ಪ್ರತಿಯೊಂದು ಮರಕ್ಕೆ ಅಗತ್ಯವಿರುವಷ್ಟು ಪೋಷಕಾಂಶ ಒದಗಿಸಲಾಗುತ್ತಿದೆ” ಎಂದು ಅವರು ವಿವರಿಸುತ್ತಾರೆ.
ಈ ಅತ್ಯಾಧುನಿಕ ಮಾವಿನ ತೋಟದ ಮಗದೊಂದು ವಿಶೇಷ ಏನೆಂದರೆ ಸೂರಜ್ ಪಾಣಿಗ್ರಾಹಿ ದೂರದ ಬಾರ್ಸಿಲೋನಾದಲ್ಲಿದ್ದು, ಅಲ್ಲಿಂದಲೇ ಸ್ಮಾರ್ಟ್ ಫಾರ್ಮ್ ಮೆನೇಜ್-ಮೆಂಟ್ ಸಾಫ್ಟ್-ವೇರ್ ಸಹಾಯದಿಂದ ಮೇಲ್ವಿಚಾರಕ ಮತ್ತು ಸ್ಥಳೀಯ ಕೆಲಸಗಾರರ ಮೂಲಕ ಮ್ಯಾಂಗೋಮೇಜ್ ಫಾರ್ಮನ್ನು ನಿರ್ವಹಿಸುತ್ತಿದ್ದಾರೆ. ಕೃಷಿಯ ಭವಿಷ್ಯದ ಬಗ್ಗೆ ಸಾಧಕ ಸೂರಜ್ ಅವರ ಮಾತು: “ಕೃಷಿಯ ಭವಿಷ್ಯ ನಾವು ಏನು ಬೆಳೆಸುತ್ತಿದ್ದೇವೆ ಎಂಬುದನ್ನಲ್ಲ, ಬದಲಾಗಿ ನಾವು ಅದನ್ನು ಹೇಗೆ ಬೆಳೆಸುತ್ತಿದ್ದೇವೆ ಎಂಬುದನ್ನು ಅವಲಂಬಿಸಿದೆ.”






