ಉಡುಪಿ: ನಮ್ಮದು ಕೃಷಿ ಸಂಸ್ಕೃತಿ. ಕೃಷಿ ಸಂಸ್ಕೃತಿಯ ಹಿರಿಯರಿಗೆ ಆಹಾರವೇ ಔಷಧಿಯಾಗಿತ್ತು. ಆಧುನಿಕ ಜಗತ್ತಿನಲ್ಲಿ ಔಷಧಿಯೇ ಆಹಾರವಾಗುತ್ತಿರುವಾಗ ನಮ್ಮ ಪ್ರಕೃತಿ-ಆಹಾರ ವಿಹಾರ ಸಂಸ್ಕೃತಿ ಮಳೆ ಬೆಳೆ ಉಳಿಯಬೇಕಾದರೆ ಹಿರಿಯರು ಉತ್ತು-ಬಿತ್ತಿ ಬದುಕನ್ನು ರೂಪಿಸುತ್ತಿದ್ದ ಕೃಷಿಭೂಮಿ ಹಡೀಲು ಬೀಳುವುದನ್ನು ತಡೆದು ಮತ್ತೆ ಹಸಿರನ್ನು ನಾವು ಹೊದೆಸಬೇಕಾಗಿದೆ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಹೇಳಿದರು. ಉಡುಪಿ ಜಿಲ್ಲಾ ಕೃಷಿಕ ಸಂಘದ ಪೆರಂಪಳ್ಳಿ ವಲಯ ಸಮಿತಿ ಆಯೋಜಿಸಿದ್ದ ಆಟಿದ ಕಮ್ಮೆನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಲಯ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ ಶೀಂಬ್ರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪೆರಂಪಳ್ಳಿ ಫಾತಿಮಾ ಮಾತೆ ದೇವಾಲಯದ ಧರ್ಮಗುರು ರೆ| ಫಾ| ವಿಶಾಲ್ ಲೋಬೋ ಶುಭಾಶಂಸನೆಗೈದರು. ಸಂಪನ್ಮೂಲ ವ್ಯಕ್ತಿಯಾಗಿ ಕವಯತ್ರಿ ಮಾಲತಿ ರಮೇಶ್ ಕೆಮ್ಮಣ್ಣು ಭಾಗವಹಿಸಿದರು. ಮುಖ್ಯ ಅತಿಥಿಗಳಾಗಿ ಸಿರಿ ತುಳುವ ಚಾವಡಿಯ ಗುರಿಕಾರ ಈಶ್ವರ ಚಿಟ್ಪಾಡಿ, ಕೃಷಿಕ ಸಂಘದ ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ, ಪೆರಂಪಳ್ಳಿ ವಲಯ ಗೌರವಾಧ್ಯಕ್ಷ ಅಂತಪ್ಪ ಪೂಜಾರಿ, ಹರಿಕೃಷ್ಣ ಶಿವತ್ತಾಯ, ಉಮೇಶ್ ಬಂಗೇರಾ ಭಾಗವಹಿಸಿದರು.
ಜೂಲಿಯನ್ ದಾಂತಿ, ಫೆಡ್ರಿಕ್ ಡಿಸೋಜಾ,ರಾಘವೇಂದ್ರ ಭಟ್, ಶಂಕರ ಕೋಟ್ಯಾನ್,ರವೀಂದ್ರ ಗುಜ್ಜರಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಮತ್ತು ವಲಯದ ಗ್ರಾಮಸ್ಥರುಗಳಿಗಾಗಿ ಜಾನಪದ ಗೀತೆ ಸ್ಪರ್ಧೆ ನಡೆಸಲಾಯಿತು. ಕೃಷಿಯಲ್ಲಿ ಯಾಂತ್ರೀಕರಣ ಬಳಸಿ ಯಶಸ್ವೀ ಕೃಷಿಕ ಉದ್ಯಮಿಯಾಗಿರುವ ಚಂದ್ರ ಶೇಖರ ನಾಯ್ಕ್ ಕರಂಬಳ್ಳಿಯವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ವಿಶೇಷವಾಗಿ ಊರ ಮನೆಮಂದಿ, ಕೃಷಿಕರೇ ತಯಾರಿಸಿದ ಸುಮಾರು ೪೦ ಬಗೆಯ ಆಟಿಯ ಹಳ್ಳೀ ತಿಂಡಿ ತಿನಿಸುಗಳನ್ನು ಉಣಬಡಿಸಲಾಯಿತು.
ಅರುಣಾ ಸುಧಾಮ, ಹೇಮ, ಪ್ರೇಮ ರೈತಗೀತೆ ಹಾಡಿದರು. ಸುಬ್ರಹ್ಮಣ್ಯ ಶ್ರೀಯಾನ್ ಕಾರ್ಯಕ್ರಮ ನಿರ್ವಹಿಸಿದರು. ವಲಯ ಪ್ರ.ಕಾರ್ಯದರ್ಶಿ ಚಂದ್ರಶೇಖರ್ ಶೀಂಬ್ರ ಧನ್ಯವಾದವಿತ್ತರು.






