ಆ ಎಲೆಯನ್ನು ಕೊಡೆಯಂತೆ ಹಿಡಿದು ಮಳೆಯಿಂದ ರಕ್ಷಿಸಿಕೊಳ್ಳುವುದಿದೆ. ಹೃದಯದ ಆಕಾರವನ್ನು ಹೊಂದಿರುವ ಆ ಎಲೆಗೆ ಮಳೆ ನೀರು ಬಿದ್ದರೆ ಸಾಕು. ಸರ‍್ರನೆ ಜಾರಿ ಹೋಗುತ್ತದೆ; ಒಂದು ಹನಿ ನೀರೂ ಎಲೆಯ ಮೇಲೆ ಉಳಿಯುವುದಿಲ್ಲ. ಹಾಗೆಂದು ನೀರಿಲ್ಲದಿದ್ದರೆ ಅದರ ಎಲೆಗಳು ಅರಳಲಾರವು. ನೀರು ನಿಂತರೂ ಅದೊಂದು ಹೊಳೆಯುವ ಬಿಂದುವಿನಂತೆ ಕಾಣಿಸುತ್ತದೆ. ಸೂರ್ಯನ ಬೆಳಕು ಆ ನೀರಿನ ಹನಿಯ ಮೇಲೆ ಬಿದ್ದಾಗ, ಮುತ್ತಿನಂತಹ ಹೊಳಪು. ಹಲವು ಬಣ್ಣಗಳು… ಆ ಎಲೆ ಬೇರಾವುದೂ ಅಲ್ಲ; ಕೆಸುವಿನ ಎಲೆ.
ತರಕಾರಿ ಸೊಪ್ಪುಗಳಲ್ಲಿ ಕೆಲವು ರೈತರ ತಮ್ಮ ಜಮೀನಿನಲ್ಲಿ ಬೆಳೆಯುವಂತವು. ಮತ್ತೆ ಕೆಲವು ಪ್ರಾಕ್ರತಿಕವಾಗಿಯೇ ದೊರೆಯುವಂತವು. ಅವುಗಳಿಗೆ ನೀರು ಗೊಬ್ಬರ ನೀಡಿ ಬೆಳೆಸಬೇಕೆಂದಿಲ್ಲ. ಪ್ರಕ್ರತಿಯಿಂದಲೇ ಎಲ್ಲವನ್ನೂ ಪಡೆದುಕೊಂಡು ಹುಲುಸಾಗಿ ಬೆಳೆಯುತ್ತದೆ. ಸುಂದರವಾದ ಹಸಿರೆಲೆಯ ಕೆಸು ನೈಸರ್ಗಿಕವಾಗಿಯೇ ಎಲೆಯರಳಿ ನಿಲ್ಲುತ್ತದೆ. ಬೇಸಿಗೆಯಲ್ಲಿ ನಲುಗುತ್ತದೆ. ಗಡ್ಡೆಗಳು ಮಣ್ಣೊಳಗೆ ಜೀವಂತಿಕೆಯನ್ನು ಹಿಡಿದಿಟ್ಟುಕೊಳ್ಳುತ್ತವೆ

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕೆಸುವಿನ ಎಲೆಯ ಖಾದ್ಯಗಳು ಪರಿಚಿತ. ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮಳೆಗಾಲದಲ್ಲಿ ಕೆಸುವಿನ ಎಲೆಯ ಪತ್ರೊಡೆ, ಸಾಂಬಾರು, ಪಲ್ಯ, ಚಟ್ನಿ ಹಾಗೂ ಇನ್ನಿತರ ಖಾದ್ಯಗಳನ್ನು ಸವಿಯುವುದೊಂದು ಸಂಪ್ರದಾಯ. ಪತ್ರೊಡೆ ಜನಪ್ರಿಯ ಖಾದ್ಯವೂ ಹೌದು.
ಕೆಸುವಿನಲ್ಲಿ ಹಲವು ವಿಧವಿದೆ. ಕೆಲವೊಂದು ನೆಟ್ಟು ಬೆಳೆಸಬಹುದು. ಮತ್ತೆ ಕೆಲವು ತಂಪಿನ ವಾತಾವರಣದಲ್ಲಿ ತನ್ನಿಂದ ತಾನೇ ಬೆಳೆಯುತ್ತದೆ. ಕೆಸುವಿನ ಎಲೆ, ದಂಟು ಮತ್ತು ಗಡ್ಡೆ—ಎಲ್ಲವೂ ಆಹಾರಕ್ಕಾಗಿ ಬಳಕೆಯಾಗುತ್ತವೆ. ಮುಂಡಿ ಕೆಸು ನೆಲದ ಮೇಲಿನಿಂದ ದಿಂಡಿನಾಕಾರದಲ್ಲಿ ಎತ್ತರಕ್ಕೆ ಬೆಳೆದರೆ, ಹಾಲು ಮುಂಡಿಯನ್ನು ನೆಟ್ಟು ಬೆಳೆಸಬಹುದು. ಇದರ ಎಲೆ, ದಂಟು ಮತ್ತು ಗಡ್ಡೆ ಎಲ್ಲವೂ ಅಡುಗೆಯಲ್ಲಿ ಉಪಯುಕ್ತ. ಗಡ್ಡೆಗಳಲ್ಲಿ ತುರಿಕೆಯಿಲ್ಲ. ಹಾಲುಮುಂಡಿಯನ್ನೇ ಹೋಲುವ ಮತ್ತೊಂದು ಜಾತಿಯ ಕೆಸುವಿನ ಎಲೆಯನ್ನು ಸಲಾಡಿಗೂ ಬಳಸಬಹುದು. ಅದೊಂದು ತುರಿಕೆಯಿಲ್ಲದ ಅಪರೂಪದ ಕೆಸುವಾಗಿದೆ.

ಪಿಳ್ಳೆ ಕೆಸು ಅಥವಾ ಉಮಿ ಕೆಸು : ನಾಟಿ ಮಾಡಿ ಬೆಳೆಸಬಹುದು. ಇವುಗಳ ಗಡ್ಡೆಗಳು ಒಂದರ ಮೇಲೊಂದು ಒತ್ತೊತ್ತಾಗಿರುತ್ತವೆ
ಕರಿ ಕೆಸು: ಇದರ ಎಲೆ ಮತ್ತು ದಂಟು ಅಡುಗೆಗೆ ಬಳಕೆಯಾಗುವುದಲ್ಲದೆ, ನೆಲದ ಮೇಲೆ ಉದ್ದವಾಗಿ ಹರಡುವ ಬಳ್ಳಿ ರುಚಿಕರವಾದ ಪದಾರ್ಥವಾಗುತ್ತದೆ. ಈ ಬಳ್ಳಿಯನ್ನು ಒಣಗಿಸಿ ಇರಿಸಿಕೊಳ್ಳಬಹುದು.
ಮರ ಕೆಸು: ಮಳೆಗಾಲದಲ್ಲಿ ಮರಗಳ ಪೊಟರೆಗಳಲ್ಲಿ ಬೆಳೆಯುವ ಈ ಕೆಸುವಿನ ಎಲೆಗೆ ಭಾರೀ ಬೇಡಿಕೆ. ಈ ಎಲೆಗಳು ಕರಾವಳಿ ಮತ್ತು ಮಲೆನಾಡಿನ ಜನರ ಪತ್ರೊಡೆ ಮಾಡಲು ಮೊದಲ ಆಯ್ಕೆ. ಮರಕೆಸುವಿನಿಂದ ತಯಾರಿಸುವ ಮಸಾಲೆ ಭರಿತ ‘ಪತ್ರೊಡೆ’ ಅತ್ಯಂತ ರುಚಿಕರವಾದುದು.
ಮಳೆಗಾಲದಲ್ಲಿ ಉಪಯೋಗಿಸಲ್ಪಡುವ ಕೆಸುವಿನ ಎಲೆಗಳು ಆರೋಗ್ಯ ದೃಷ್ಟಿಯಿಂದಲೂ ಉತ್ತಮವಾದವು. ಹಲವು ಪೋಷಕಾಂಶಗಳಿವೆ. ಔಷಧೀಯ ಗುಣವಿದೆ. ಅನೇಕ ರೋಗಗಳನ್ನು ನಿಯಂತ್ರಿಸುವ ಶಕ್ತಿಯಿದೆ.
ಬರಹ-ಆರ‍್ಕೆ ಕಾರ್ಕಳ






