-ಕೃಷಿಬಿಂಬ ಸ್ಪೆಷಲ್
ಸಮಾಜದಲ್ಲಿ ಕೆಲವರು ತಮ್ಮ ಕೆಲಸವನ್ನು ಕೇವಲ ಸಂಬಳಕ್ಕಾಗಿ ಮಾಡುವುದಿಲ್ಲ. ಅವರು ತಮ್ಮ ವೃತ್ತಿಯನ್ನೇ ಸೇವೆಯನ್ನಾಗಿ ಪರಿವರ್ತಿಸಿ, ಜನರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆಯುತ್ತಾರೆ. ಅಂತಹ ಅಪರೂಪದ ವ್ಯಕ್ತಿತ್ವಗಳಲ್ಲಿ ಸರ್ಕಾರಿ ಪಶುವೈದ್ಯಾಧಿಕಾರಿ ಡಾ. ನಾಗರಾಜ ಮರವಂತೆ ಅವರು ಒಬ್ಬರು.

ಬಡ ಕುಟುಂಬದಲ್ಲಿ ಜನಿಸಿದ ಡಾ. ನಾಗರಾಜ ಮರವಂತೆ ಅವರು ಬದುಕಿನ ಕಷ್ಟಗಳನ್ನು ಹತ್ತಿರದಿಂದ ಕಂಡವರು. ಬಹುಶಃ ಅದಕ್ಕಾಗಿಯೇ ನೋವಿನ ಮೌಲ್ಯ ಅವರಿಗೆ ಚೆನ್ನಾಗಿ ತಿಳಿದಿದೆ. ಆದರೆ ಅವರು ಕೇವಲ ಮನುಷ್ಯರ ನೋವಿಗೆ ಮಾತ್ರವಲ್ಲ, ಮಾತನಾಡಲಾರದ ಮೂಕ ಪ್ರಾಣಿಗಳ ಸಂಕಟಕ್ಕೂ ಸ್ಪಂದಿಸುತ್ತಾರೆ.
ಅವರ ಹೆಗಲ ಮೇಲೆ ಸದಾ ಒಂದು ಬ್ಯಾಗ್ ಇರುತ್ತದೆ.; ಅನೇಕ ಪ್ರಾಣಿಗಳ ಪಾಲಿಗೆ ಜೀವದಾನ ನೀಡುವ ಕಿಟ್. ಅದರೊಳಗೆ ತುರ್ತು ಚಿಕಿತ್ಸೆಗೆ ಬೇಕಾದ ಔಷಧಿಗಳು, ಇಂಜೆಕ್ಷನ್‌ಗಳು ಹಾಗೂ ಅಗತ್ಯ ವೈದ್ಯಕೀಯ ಸಾಮಗ್ರಿಗಳು ಇರುತ್ತವೆ. ಎಲ್ಲೇ ಅಪಘಾತವಾದರೂ, ಯಾವುದೇ ಸಮಯವಾದರೂ, ಕರೆ ಬಂದ ತಕ್ಷಣ ಸ್ಥಳಕ್ಕೆ ಧಾವಿಸುವುದು ಅವರ ದಿನಚರಿಯ ಭಾಗವಾಗಿದೆ.

ಪಶುಗಳ ಪಾಲಿಗೆ ಜೀವದಾನಿ
ಹಗಲು ಇರುಳೆನ್ನದೆ ಕುಂದಾಪುರ ಮತ್ತು ಬೈಂದೂರು ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿದಿನ ಅನೇಕ ದನಗಳು ಅಪಘಾತಕ್ಕೆ ಒಳಗಾಗುತ್ತವೆ. ರಸ್ತೆಯ ಡಿವೈಡರ್‌ಗಳಲ್ಲಿ ಬೆಳೆದ ಹುಲ್ಲಿಗಾಗಿ ಬಂದ ದನಗಳು ವೇಗವಾಗಿ ಚಲಿಸುವ ವಾಹನಗಳಿಗೆ ಸಿಲುಕಿ ಗಾಯಗೊಳ್ಳುತ್ತವೆ. ಅನೇಕರು ಇಂತಹ ಘಟನೆಗಳನ್ನು ನೋಡಿದರೂ ನಿರ್ಲಕ್ಷ್ಯ ಮಾಡಬಹುದು. ಆದರೆ ಡಾ. ನಾಗರಾಜ ಮರವಂತೆ ಪ್ರಾಣಿಗಳ ಪಶುಗಳ ಪಾಲಿಗೆ ಜೀವದಾನಿಯಾಗಿದ್ದಾರೆ.
ಮಳೆ ಇರಲಿ, ಬಿಸಿಲಿರಲಿ, ಮಧ್ಯರಾತ್ರಿಯಾಗಿರಲಿ ಅಥವಾ ಮುಂಜಾನೆಯಾಗಿರಲಿ, ಅವರು ಸ್ಥಳಕ್ಕೆ ತೆರಳಿ ಗಾಯಗೊಂಡ ಪ್ರಾಣಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಅನೇಕ ಬಾರಿ ತಮ್ಮ ವೈಯಕ್ತಿಕ ಸಮಯವನ್ನೇ ತ್ಯಾಗ ಮಾಡಿ ಸೇವೆ ಸಲ್ಲಿಸಿದ್ದಾರೆ. ಸರ್ಕಾರಿ ಕರ್ತವ್ಯದ ಮಿತಿಯನ್ನು ಮೀರಿ ಮಾನವೀಯತೆಯ ಕರೆಯಂತೆ ಕೆಲಸ ಮಾಡುತ್ತಿದ್ದಾರೆ.

ಇದುವರೆಗೆ ಸುಮಾರು 12 ಸಾವಿರಕ್ಕೂ ಹೆಚ್ಚು ದನಗಳಿಗೆ ಚಿಕಿತ್ಸೆ ನೀಡಿರುವುದು ಅವರ ಸೇವೆಯ ವ್ಯಾಪ್ತಿಯನ್ನು ತೋರಿಸುತ್ತದೆ. ಸಾವಿರಾರು ರೈತ ಕುಟುಂಬಗಳ ಆಸ್ತಿಯನ್ನು ಉಳಿಸಿರುವುದಷ್ಟೇ ಅಲ್ಲ, ಸಾವಿರಾರು ಮೂಕ ಜೀವಗಳಿಗೆ ಹೊಸ ಬದುಕು ನೀಡಿದ್ದಾರೆ. ಅವರ ಸ್ಪರ್ಶದಿಂದ ಮತ್ತೆ ಎದ್ದು ನಿಂತ ಪ್ರಾಣಿಗಳ ಸಂಖ್ಯೆ ಅಸಂಖ್ಯಾತ.
ಗ್ರಾಮಸಭೆಗಳಲ್ಲಿ ತಪ್ಪದೆ ಭಾಗವಹಿಸಿ ಪಶುಸಂಗೋಪನೆ, ಜಾನುವಾರುಗಳ ಆರೋಗ್ಯ, ರೋಗ ನಿಯಂತ್ರಣ ಹಾಗೂ ಜಾಗೃತಿ ಕುರಿತು ಜನರಿಗೆ ಮಾಹಿತಿ ನೀಡುತ್ತಾರೆ. ಜನರ ನಡುವೆ ಬೆರೆತು ಸಮಸ್ಯೆಗಳನ್ನು ಆಲಿಸಿ ಪರಿಹಾರ ಸೂಚಿಸುತ್ತಾರೆ. ರೇಬೀಸ್ ಎಂಬ ಅಪಾಯಕಾರಿ ರೋಗದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಈ ವರ್ಷ ಸುಮಾರು 2500 ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ಮಾಹಿತಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.
ಸಮಾಜಮುಖಿ ಚಿಂತನೆಯೇ ಮೊದಲು:
ಭವಿಷ್ಯದ ಪೀಳಿಗೆಯನ್ನು ಜಾಗೃತಗೊಳಿಸುವ ಈ ಕಾರ್ಯ ಸಮಾಜಮುಖಿ ಚಿಂತನೆಯ ಪ್ರತೀಕವಾಗಿದೆ.ಗ್ರಾಮೀಣ ಭಾಗದಲ್ಲಿ ವೈದ್ಯರಿಗೆ ಮಾಹಿತಿಯನ್ನು ನೀಡಲು ಐವರು ಪಶುಸಖಿಯರು ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮನೆಮನೆಗೆ ತೆರಳಿ ಪ್ರಾಣಿಗಳ ಆರೈಕೆ, ಲಸಿಕೆ, ಆರೋಗ್ಯ ಹಾಗೂ ಸುರಕ್ಷತೆ ಕುರಿತು ತಿಳಿಸುವ ಮೂಲಕ ಆರೋಗ್ಯಕರ ಗ್ರಾಮಗಳ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ.

ಇಂದಿನ ಕಾಲದಲ್ಲಿ ಅನೇಕರು ತಮ್ಮ ಕರ್ತವ್ಯದ ಗಡಿಯನ್ನು ಮೀರಿ ಕೆಲಸ ಮಾಡಲು ಹಿಂಜರಿಯುತ್ತಾರೆ. ಆದರೆ ಡಾ. ನಾಗರಾಜ ಮರವಂತೆ ಅವರು ಕರ್ತವ್ಯಕ್ಕಿಂತ ಸೇವೆಯನ್ನು ದೊಡ್ಡದಾಗಿ ಕಂಡವರು. ಅವರಿಗೆ ಪ್ರಶಸ್ತಿ, ಗೌರವ ಅಥವಾ ಪ್ರಚಾರ ಮುಖ್ಯವಲ್ಲ; ಒಂದು ಪ್ರಾಣಿಯ ಜೀವ ಉಳಿದರೆ ಅದೇ ಅವರ ದೊಡ್ಡ ಸಂತೋಷ.

ಮೂಕ ಜೀವಿಗಳ ನೋವಿಗೆ ಮಿಡಿಯುವ ಹೃದಯ, ಜನರ ಕಷ್ಟಗಳಿಗೆ ಸ್ಪಂದಿಸುವ ಮನಸ್ಸು, ಹಗಲು-ರಾತ್ರಿ ಎನ್ನದೆ ಸೇವೆ ಸಲ್ಲಿಸುವ ಸಮರ್ಪಣೆ ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸುವ ಬದ್ಧತೆ ಇವೆಲ್ಲವೂ ಡಾ. ನಾಗರಾಜ ಮರವಂತೆ ಅವರನ್ನು ಸಾಮಾನ್ಯ ವೈದ್ಯರ ಸಾಲಿನಿಂದ ವಿಭಿನ್ನರನ್ನಾಗಿ ಮಾಡಿವೆ.





