spot_img
Saturday, June 27, 2026
spot_imgspot_img

ಬೆಟ್ಟದ ಭೂಮಿಯಲ್ಲಿ ಕನಸಿನ ತೋಟ: ಒಂದು ಸ್ಪೂರ್ತಿದಾಯಕ ಕೃಷಿಗಾಥೆ!

ಬರಹ: ಗಣಪತಿ ಹಾಸ್ಪುರ
ಏಯ್! ಗಪ್ಪತಿ ಬಾವಾ, ನಾಳೆ ನಿಂಗೆ ಪುರಸೊತ್ತ ಇದ್ದನ? ಯಮ್ಮನೆ  ತೋಟವ ನಿಂಗೆ ತೋರಿಸನ ಹೇಳಿ ವಿಚಾರಮಾಡಿದ್ದಿ. ನಿನ್ನ ಜೋಸ್ತನು  ನಾಳೆನೇಯಾ ಬತ್ತೆ ಹೇಳಿದ್ನ.. ಅದಕೆಯಾ, 
ನೀನುವಾ ನಾಳೆನೆ ಬಂದುಬಿಡು..ಮುದ್ದಾಂ ಬತ್ತ್ಯಲ…ಅಂತ ಆ ದಿನ ನನ್ನ ಸಂಚಾರಿಗೆ ಮಿತ್ರನೊಬ್ಬ ಕಾಲ್ ಮಾಡಿ ಹೇಳಿದಾಗ.. ಆ ಸುವರ್ಣ ಅವಕಾಶವನ್ನು ತಿರಸ್ಕರಿಸಲು ಮನಸ್ಸು ಒಪ್ಪಲಿಲ್ಲ. ತಕ್ಷಣವೇ ಒಪ್ಪಿಕೊಂಡು ಸಮಯ ಸೂಚಿಸಿದ್ದೆ.   
ಆ ಗೆಳೆಯ ಪೋನ್ ಇಟ್ಟ ಮರುಗಳಿಗೆಯಿಂದಲೇ ನನ್ನಲ್ಲಿ ಕುತೂಹಲ ಹೆಚ್ಚಾಗಿತ್ತು. ಆತನ ತೋಟದಲ್ಲಿ ಅಂಥಹ ವಿಶೇಷತೇ ಏನಿರಬಹುದು?! ಆತ ಸೊಸೈಟಿಯ ನೌಕರಿ ಮಾಡುತ್ತಾ ಇದ್ದವನು. ಈಗೆಲ್ಲ ನೌಕರಿಯಲ್ಲಿ ಇದ್ದವರೋ, ಉದ್ಯಮವನ್ನು ಮಾಡ್ತಾ ಬದುಕಿನ ಬಂಡಿ ಸಾಗಿಸುತ್ತಾ ಇದ್ದವರೋ…ಹೀಗೆ ಬೇರೆ ಕ್ಷೇತ್ರದಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡವರು ತಮ್ಮದೇ ಕೃಷಿ  ಭೂಮಿಯ ಕೆಲಸಕ್ಕೆ ಬೀಡುವೇ ಸಿಗುವುದಿಲ್ಲ ಮಾರಾಯ್ಯ. ನಂಗೆಂತುವಾ ಕೃಷಿ ಕೆಲ್ಸ ಮಾಡಿಸುವುದೇ  ಬಳಹ ಕಷ್ಟ ಎಂದು  ಏನ್ನುವವರೇ ಈಗ ಹೆಚ್ಚು. ಅಂಥದ್ರಲ್ಲಿ,ಈತ ಅತ್ತ ನೌಕರಿಯನ್ನು ಮಾಡುತ್ತಾ; ಇತ್ತ ಕೃಷಿ ಕಾಯಕಕ್ಕು  ಸಮಯ ಕೊಟ್ಟಿದ್ದಾದ್ರು ಹೇಗೆ? ಆತ, ಈಗೇನು  ವಿಶೇಷ ಕೃಷಿ ಮಾಡುತ್ತಾ ಇರಬಹುದು, ಯಾವ ಬೆಳೆ  ಬೆಳೆದಿರಬಹುದು…ಹೀಗೆ ನಾನಾ ವಿಚಾರಗಳು ನನ್ನ ಮನಸ್ಸಿನೊಳಗೆ ಪುಟಿದೇಳತೊಡಗಿದವು.
ಅದು ಏನೇಯಿರಲಿ ಆ ಕೃಷಿಕನ ವೈಶಿಷ್ಟ್ಯ ಏನೀರಬಹುದು ಎಂಬುದನ್ನು ಪ್ರತ್ಯಕ್ಷವಾಗಿ ನೋಡಿಯೇ ಅನುಭವಿಸಬೇಕು ಎಂಬ ಸದುದ್ದೇಶದಿಂದಲೆ ಆ ದಿನ ಮುಂಜಾನೆ ಸ್ನೇಹಿತನೊಂದಿಗೆ  ಆತನ ಕೃಷಿಭೂಮಿ ಇರುವ ಸ್ಥಳಕ್ಕೆ ಹೋದಾಗ ನಿಜಕ್ಕು ನಿಬ್ಬೇರಗಾಗಿ  ನಿಂತಿದ್ದೆ. ಅತೀವ ಸಂತೋಷವೂವಾಗಿತ್ತು; ಆಕ್ಷಣ ಮನಸ್ಸಿಗೆ ರೋಮಾಂಚನವೇ ಆಗಿತ್ತು. ಏಕೆಂದರೆ, ಆತ ತನ್ನ ಪಾಲಿನ  ಸೊಪ್ಪಿನ ಬೆಟ್ಟವನ್ನು ಆತ ಮಾದರಿ ತೋಟವಾಗಿ ಬೆಳೆಸಿದ್ದ. ಅನಾವಶ್ಯಕ  ಗಿಡಗಂಟಿಗಳು ಬೆಳೆದು,ಆ ಜಾಗದಲ್ಲಿ ಮತ್ತೇನು ಮಾಡಲಾಗದೇ ಪಾಳುಬಿಟ್ಟ ಭೂಮಿಯಲ್ಲಿ  ಈಗ ಹಸಿರಿನಿಂದ ಕಂಗೊಳಿಸುವ ಹಣ್ಣಿನ ವನವನ್ನಾಗಿ  ಬೆಳೆಸಿದ್ದು ಸಣ್ಣ ಸಾಧನೆಯೇನು ಅಲ್ಲ. ಆಸಕ್ತಿ,ಛಲ,ಶ್ರದ್ದೆಯಿಂದ ಪರಿಶ್ರಮ ಪಟ್ಟರೆ  ಬೆಟ್ಟದ ಭೂಮಿಯನ್ನು ಸಹಾ ನಂದನವನವನ್ನಾಗಿ  ಬೆಳೆಸಬಹುದು ಎಂಬುದಕ್ಕೆ ಬೆಳಗುಂದ್ಲಿಯ ಗಿರೀಶ್ ಹೆಗಡೆಯವರ ಬೆಟ್ಟದ ಭೂಮಿಯೇ ತಾಜಾ ನಿದರ್ಶನ.
 ಇವರು ಅತ್ತ ನೌಕರಿಯನ್ನು ಮಾಡುತ್ತಲೇ, ಇತ್ತ ತನ್ನ ಕೃಷಿ ಭೂಮಿಯನ್ನು ತಮ್ಮ ಇಚ್ಛೆಯಂತೆ ಅಭಿವೃದ್ಧಿ ಮಾಡಿ,ಕೃಷಿ ಕ್ಷೇತ್ರದಲ್ಲಿಯೂ ವಿಭಿನ್ನ ಸಾಧನೆ ಮಾಡಬಹುದು ಎಂಬುದಕ್ಕೆ ಈ ಕೃಷಿಕರೇ ಸಾಕ್ಷಿಯಾಗಿದ್ದಾರೆ ಎಂದರೂ ಅತೀಶಯೋಕ್ತಿ ಆಗಲಾರದು.
 ಹೌದು,ಯಲ್ಲಾಪುರ ತಾಲೂಕಿನ ಉಮ್ಮಚ್ಗಿ ಸಮೀಪದ ಬೆಳಗುಂದ್ಲಿಯ ಗಿರೀಶ ವೆಂಕಟ್ರಮಣ ಹೆಗಡೆ ಉಮ್ಮಚ್ಗಿಯ ಸೇವಾ ಸಹಕಾರಿ ಸಂಘದಲ್ಲಿ ಅನೇಕ ವರುಷಗಳಿಂದ ಸೇವೆ ಸಲ್ಲಿಸುತ್ತಾ ಇದ್ದವರು. ” ಸೊಸೈಟಿ ಗಿರಿ” ಎಂದೇ ಜನಪ್ರೀಯರಾದ ಇವರು  ಅವಿಭಕ್ತ ಕೃಷಿ ಕುಟುಂಬದಿಂದಲೇ  ಬೆಳೆದು ಬಂದವರು‌. ಕಷ್ಟ- ನೋವುಗಳನ್ನು ಅನುಭವಿಸಿದವರು. ಇವರಿಗೆ ಐದು ವರುಷದ ಹಿಂದಷ್ಟೇ ಒಂದುವರೆ ಎಕರೆ  ಪ್ರಿರ್ತಾಜಿವಾದ ಕೃಷಿ ಭೂಮಿಯೂ ಇವರ ಪಾಲಿಗೆ ಲಭಿಸಿತ್ತು. ಅದ್ರಲ್ಲಿ ಎಕರೆಯಷ್ಟು ಅಡಿಕೆ ತೋಟ, ತರಿ ಭೂಮಿ., ಖಾಲಿ ಜಾಗ..ಹೀಗೆ ಎಲ್ಲವೂ ಇತ್ತು. ಹಾಗಂತ ಇದು ಆ ದಿನದಲ್ಲಿ ಹೇಳಿಕೊಳ್ಳುವಷ್ಟು ವ್ಯವಸ್ಥಿತವಾಗಿ ನಿರ್ವಹಣೆಯಲ್ಲಿ ಇದ್ದ ಕೃಷಿ ಭೂಮಿಯೇನು  ಆಗಿರಲಿಲ್ಲ.ಇವರ ಪಾಲಿಗೆ ಬಂದ ಜಾಗದಲ್ಲಿ ಆ ವರುಷ ಕೇವಲ ಒಂದುವರೆ ಕ್ವಿಂಟಲ್ ನಷ್ಟು ಅಡಿಕೆ ಫಸಲು ಲಭಿಸಿತ್ತು.ಈ ತೋಟದಲ್ಲಿ ಇನ್ನಷ್ಟು ಇಳುವರಿ ಹೆಚ್ಚು ಪಡೆಯಬೇಕೆಂಬ ಹಟದಿಂದ  ಸುಧಾರಿತ ಪದ್ದತಿಯಲ್ಲಿ ತೋಟವನ್ನು ಅಭಿವೃದ್ಧಿ ಮಾಡಲು ಆರಂಭಿಸಿದರು. ಖಾಲಿ ಜಾಗವನ್ನು ಸಹಾ ಅಡಿಕೆ ತೋಟವಾಗಿ ಪರಿವರ್ತನೆ ಮಾಡಿದರು.
ಈಗ ಎರಡು ವರುಷಕ್ಕೊಮ್ಮೆ ಒಂದು ಬುಟ್ಟಿಯಷ್ಟು ದಡ್ಡಿ ಗೊಬ್ಬರ ,ಒಂದು ವರುಷ ಭೂಚೈತನ್ಯ ಗೊಬ್ಬರ/ ಅನ್ನಪೂರ್ಣ ಗೊಬ್ಬರವನ್ನು ಎರಡು ಕೆ.ಜಿ.ಯಷ್ಟು ಸಕಾಲದಿನದಲ್ಲಿ ಪ್ರತಿ ಮರಕ್ಕೆ ಕೊಟ್ಟು ಪೋಷಣೆ ಮಾಡುತ್ತಿದ್ದಾರೆ. ಅಲ್ಲದೆ, ವರುಷದಲ್ಲಿ ಎರಡು ಟೈಂ ನಲ್ಲಿ ತಜ್ಞರು ಸೂಚಿಸಿದಷ್ಟು ರಾಸಾಯನಿಕ ಗೊಬ್ಬರವನ್ನು ಕೊಟ್ಟು ಆರೈಕೆ ಮಾಡುತ್ತಾರೆ.ತೋಟಕ್ಕೆ ನೀರಾವರಿ ವ್ಯವಸ್ಥೆಯನ್ನು ಸಹಾ ಅಳವಡಿಸಿಕೊಂಡರು. ಹೀಗೆ ಇವರು ಅಡಿಕೆ ತೋಟಕ್ಕೆ ಇವತ್ತಿನ ದಿನಮಾನಕ್ಕೆ ಬೇಕಾಗುವುದನ್ನು ಅಣಿಗೊಳಿಸಿದರು. ಹೀಗೆ ಹಂತ ಹಂತವಾಗಿ ಬದಲಾವಣೆ ಮಾಡಿ, ಮಾಡುವ ಕೆಲಸಗಳನ್ನು ವ್ಯವಸ್ಥಿತವಾಗಿ ಸಕಾಲದಲ್ಲಿ ಮಾಡಿದರ ಪರಿಣಾಮ ಇವರ ತೋಟದ ಅಡಿಕೆ ಮರಗಳು ಚನ್ನಾಗಿ ಬಲಿಯ ತೊಡಗಿತು.
ಇವರ ಜವಾಬ್ದಾರಿಗೆ ಭೂಮಿ ಸಿಕ್ಕದ ದಿನದಿಂದಲೂ ಈ ಉತ್ಸಾಹಿ ಕೃಷಿಕರು ಅಡಿಕೆ ಇಳುವರಿ ಹೆಚ್ಚಿಸಲು ಅತೀವ ಪ್ರಯತ್ನವನ್ನು ನಿರಂತರ ಮಾಡುತ್ತಲೇ ಬಂದಿದ್ದಾರೆ.ಅವರ ಕಠಿಣ ಪರಿಶ್ರಮದ ಫಲ; ಮರಕ್ಕೆ ಬೇಕಾಗುವುದನ್ನು ವ್ಯವಸ್ಥಿತವಾಗಿ ನೀಡಿದ ಪರಿಣಾ‌ಮ ಈಗ ಸರಾಸರಿ ಎಕರೆಗೆ ಹದಿನೆಂಟು ಕ್ವಿಂಟಲ್ ನಷ್ಟು ಅಡಿಕೆ ಉತ್ಪನ್ನ ಪಡೆಯುತ್ತಿದ್ದಾರೆ ಗಿರೀಶ್ ಹೆಗಡೆ. ಮೊದಲಿನಗಿಂತ ಉತ್ಪನ್ನವನ್ನು  ಜಾಸ್ತಿ ಪಡೆದಿದ್ದೇನೆ ಎಂಬ ಅಭಿಮಾನ ನನಗಿದೆಯೇ ವಿನಃ ಅಹಂಕಾರವಿಲ್ಲ. ಇನ್ನಷ್ಟು ಪ್ರಯತ್ನ ಪಟ್ಟರೇ ಇನ್ನು ಹೆಚ್ಚು ಅಡಿಕೆ ಫಸಲು ಪಡೆಯಬಹುದು ಎಂಬ ಲೆಕ್ಕಾಚಾರ ಈ ಕೃಷಿಕರದ್ದು.
ಚಿಕ್ಕಹಿಂಡುವಳಿಯ ಕೃಷಿಕರಾದ ಗಿರೀಶ್ ಹೆಗಡೆ ಪ್ರಧಾನವಾಗಿ ಅಡಿಕೆ ಕೃಷಿ ಮಾಡಿದರೂ ಸಹಾ ಹಲವಾರು ಉಪ ಬೆಳೆಗಳನ್ನು ಬಹಳ ಆಸಕ್ತಿಯಿಂದ ಬೆಳೆಯುತ್ತಾ ಇರುವುದು ವಿಶೇಷ. ಒಂದಿಷ್ಟು ಬಾಳೆ, 350  ಹಿಂಡು ಏಲಕ್ಕಿ, ಹೊಸದಾಗಿ ನಾಟಿ ಮಾಡಿದ್ದು ಸೇರಿ  250 ಕಾಳುಮೆಣಸಿನ ಬಳ್ಳಿ,ವೆನಿಲ್ಲ (  ಕಳೆದ ಸೀಜನ್ನಿನಲ್ಲಿ ಇದ್ರ ಕಟಿಂಗ್ ಶೇಲ್ ಮಾಡಿ ಮೂವತ್ತು ಸಾವಿರ ಗಳಿಸಿದ್ದಾರೆ) …ಹೀಗೆ ತಮ್ಮ  ತೋಟದಲ್ಲಿ ಆಗಬಹುದಾದ ಉಪಬೆಳೆಗಳ ಕೃಷಿಗೂ ಆಶ್ರಯವನ್ನು ಕೊಟ್ಟು ಶ್ರದ್ದೆಯಿಂದ ಅದ್ರ ನಿರ್ವಹಣೆ ಮಾಡಿ,  ತೃಪ್ತಿದಾಯಕ ಫಲ
ಪಡೆಯುತ್ತಿದ್ದಾರೆ.ಜೊತೆಗೆ ಇವರ ಅಡಿಕೆ ತೋಟದಲ್ಲಿ ಹಳೆಯ ಕಾವೇರಿ ತಳಿ ಕಾಫಿ ಇಪ್ಪತ್ತೈದು ಗಿಡವಿದ್ದು ಅದರಿಂದ ಸುಮಾರು ಕ್ವಿಂಟಲ್ ಬೆಳೆ ಪಡೆದಿರುವ ಗಿರೀಶ್ ಹೆಗಡೆ  ಈ ಎಲ್ಲ ಉಪಬೆಳೆಗಳನ್ನು ನಿರ್ಲಕ್ಷ ಮಾಡದೇ ಅವುಗಳನ್ನು ವ್ಯವಸ್ಥಿತವಾಗಿ  ಆರೈಕೆ ಮಾಡುತ್ತಾ ಇರುವುದು ಗಮನಾರ್ಹ ಸಂಗತಿ.ಈ ತೋಟದ ಖಾಲಿ ಜಾಗದಲ್ಲಿ ಇಂಗು, ಹಲಸು, ಮಾವು,ಸಾಗವಾನಿ…ಹೀಗೆ ಭಿನ್ನ ಭಿನ್ನ ವಾದ ಗಿಡಗಳಿವೆ.
ಊಟದ ಬಟ್ಲಿನಲ್ಲಿ ಕೇವಲ ಉಪ್ಪು, ಉಪ್ಪಿನಕಾಯಿ,ಅನ್ನ, ಪಲ್ಯ,ಸಾಂಬಾರ..ಇದ್ರಷ್ಟೇ ಸಾಲದು.ವಿಶೇಷದ ಊಟಕ್ಕೆ ಏಡೆಯ ತುಂಬೇಲ್ಲ  ನಾನಾ ಬಗೆಯ ಐಟಂಗಳನ್ನು ಮಾಡಿ ತುಂಬಿಸಿದಾಗ ಊಟದ ಏಲೆಯ ಸೊಬಗು ಹೇಗೆ ಹೆಚ್ಚಾಗುತ್ತದಿಯೋ ..ಹಾಗೇಯೇ, ಅಡಿಕೆ ತೋಟವೆಂದರೆ  ಕೇವಲ ಅಡಿಕೆ ಮರಗಳು ಒಂದೇಯಿದ್ದರೇ ಸಾಲದು; ನಮ್ಮ ಕೃಷಿಭೂಮಿಯಲ್ಲಿ ಆಗಬಹುದಾದ ಹಾಗೂ ತಮ್ಮ ಸಾಮರ್ಥ್ಯ ದಲ್ಲಿ ನಿರ್ವಹಣೆ ಮಾಡುವಷ್ಟು ಪ್ರಮುಖ ಉಪಬೆಳೆಗಳ ಕೃಷಿ ಇದ್ದರೇನೆ ಆ ತೋಟಕ್ಕೆ ಶೋಭೆ ಬರುತ್ತದೆ. ಆ ತೋಟವು ನೋಡಲು ಬಹಳ ಆಕರ್ಷಕವಾಗಿರುತ್ತದೆ..ಎಂದು ಗಿರೀಶ್ ಹೆಗಡೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಬೆಟ್ಟದ ಭೂಮಿಯ ಸದ್ಬಳಕೆ! 
ಸಾಮಾನ್ಯವಾಗಿ ಈಗ  ಮಲೆನಾಡಿನ ಬಹುಭಾಗ ಜಮೀನಲ್ಲಿ ಅಡಿಕೆ ಕೃಷಿಯೇ ಮೈಸೆಟೆದು ನಿಂತಿದೆ.ಎಲ್ಲಿ ನೋಡಿದರೂ ಅಡಿಕೆ ಗಿಡಗಳೆ ರಾರಾಜಿಸುತ್ತಿವೆ. ಅದು, ಈ ಭಾಗದ ಪ್ರಧಾನ  ಬೆಳೆಯೇನೋ ಹೌದು.ಆದ್ರೆ ಈ ಭಾಗದ ಅನುಕೂಲವಿದ್ದ ರೈತರು, ಬೆಟ್ಟದ ಜಾಗವಿದ್ದ ತೋಟದ ಮಾಲೀಕರು ತಗ್ಗಿನ ಪ್ರದೇಶಕ್ಕಿಂತ, ಏತ್ತರದ ಭೂಮಿಯಲ್ಲಿಯೇ  ಅಡಿಕೆ ಕೃಷಿ ಚನ್ನಾಗಿ ಆಗುತ್ತೆ.ಅಲ್ಲಿ ನಿರ್ವಹಣೆಯೂ ಕಡಿಮೆ,ಸಾಕಷ್ಟು ಇಳುವರಿಯನ್ನು ಪಡೆಯಬಹುದು ಎಂಬ ಉದ್ದೇಶದಿಂದ ಬೆಟ್ಟದ ಭೂಮಿ, ಕರಡವನ್ನು ಬೆಳೆಯುವ ಜಾಗದಲ್ಲಿಯೂ ಸಹಾ ಈಗ ಅಡಿಕೆ ತೋಟ ತಲೆಏತ್ತಿ ನಿಂತಿದೆ. ಸದ್ಯದ ವಾತಾವರಣ ಹೀಗಿದ್ದರೂ ಸಹಾ ಉಮ್ಮಚ್ಗಿ ಸಮೀಪದ ಬೆಳಗುಂದ್ಲಿಯ ಗಿರೀಶ್ ಹೆಗಡೆ ಸೊಪ್ಪಿನ ಬೆಟ್ಟವನ್ನು ಅಡಿಕೆ ತೋಟವಾಗಿ ಪರಿವರ್ತಿಸಲು ಆಸಕ್ತಿ ತೊರದೇ ” ಹಣ್ಣುಹಂಪಲಿನ ವನ”ವಾಗಿ ಮಾರ್ಪಡಿಸಿರುವುದು ನಿಜಕ್ಕು ಹೆಮ್ಮೆಯ ಸಂಗತಿ.
 
ಗಿರೀಶ್ ಹೆಗಡೆಯವರಿಗೆ ತಮ್ಮ ಅಡಿಕೆ ತೋಟದ ಸಮೀಪ ಸಾಕಷ್ಟು ಬೆಟ್ಟದ ಭೂಮಿಯಿತ್ತು. ಅಲ್ಲಿ ಅನವಶ್ಯಕ ಬಲಿತ ಗಿಡಗಂಟಿಗಳೆ ತುಂಬಿಕೊಂಡಿದ್ದವು. ಅವೆಲ್ಲವನ್ನು ಕಳೆದ ನಾಲ್ಕು ವರುಷಗಳ ಸತತ ಪ್ರಯತ್ನದಿಂದ ಸ್ವಪರಿಶ್ರಮದಿಂದ ಸ್ವಚ್ಛಗೊಳಿಸಿಕೊಂಡ ಈ ಯುವ ಕೃಷಿಕರು ಇದನ್ನು ತನ್ನ ಕನಸಿನ ತೋಟವಾಗಿ ಮಾರ್ಪಡಿಸಲು ಚಿಂತಿಸಿದರು. ಆ ಜಾಗದಲ್ಲಿ ಯಾವುದನ್ನು ಮಾಡಬೇಕೆಂಬ ವಿಚಾರ ಮಾಡುವ ಸಂದರ್ಭದಲ್ಲಿ ಇವರಿಗೆ ಸಮಸ್ಯೆ ಯಾಗಿತ್ತು. ಆಮೇಲೆ, ಕೃಷಿ ತಜ್ಞರಾದ ಡಾ. ವಿ.ಎಮ್. ಹೆಗಡೆಯವರನ್ನು ಸ್ಥಳಕ್ಕೆ ಕರೆಸಿಕೊಂಡು ಮಾಹಿತಿ ವಿನಿಮಯ ಮಾಡಿ ಚರ್ಚಿಸಿದರು.ಅಡಿಕೆ ಬಿಟ್ಟು ಬೇರೆ ಏನಾದ್ರು ಬೆಳೆ ಬಗ್ಗೆ ಹೇಳಿ ಎಂದಾಗ, ಅವರ ಸಲಹೆ ಮೇರೆಗೆ ಗಿರೀಶ್ ಹೆಗಡೆ ನಾನಾ ಬಗೆಯ ಹಣ್ಣು- ಹಂಪಲಿನ ಕೃಷಿ ಮಾಡಲು ಆಸಕ್ತಿ ವಹಿಸಿದರು. 
ಉಮ್ಮಚ್ಗಿ ಸೊಸೈಟಿಯಲ್ಲಿ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಗಿರೀಶ್ ಹೆಗಡೆ ಅವರು ಸುಮಾರು ಎರಡು ಎಕರೆ ಪ್ರದೇಶದಲ್ಲಿ 800 ಜಿ- 9 ಬಾಳೆಯನ್ನು ಮೇ.8, 2025 ರಲ್ಲಿ ಮಾರ್ಗದರ್ಶಕರ ನಿರ್ದೇಶನದಂತೆ  ಹೂಳಿದರು. ಬಾಳೆಯ ಮಧ್ಯೆ ಅಲ್ಲಲ್ಲಿ ಒಂದಿಷ್ಟು ಅಂತರದಲ್ಲಿ  30 ರಂಭೂಟಾನ್,  30 ಬಟರ್ ಫ್ರುಟ್, 30 ಮ್ಯಾಂಗೊಸ್ಟಿನ್ ಇಂಥಹ ಹಣ್ಣಿನ ಗಿಡಗಳಿಗೆ ಜಾಗವಿಟ್ಟು,ಅವುಗಳನ್ನು ವ್ಯವಸ್ಥಿತವಾಗಿ ನೆಟ್ಟು ಪೋಷಿಸಿದರು. ಅಲ್ಲದೇ, ಈ ಬಾಳೆತೋಟದ ಸುತ್ತ  ಹೈಬ್ರಿಡ್ ತೆಂಗು,( ಸದ್ಯ 40  ಗಿಡವಿದೆ)ಬಗೆ ಬಗೆಯ ತಳಿಯ ಹಲಸು, ಅಪ್ಪೆ ಮಿಡಿಗೆ ಆದ್ಯತೆ ಕೊಟ್ಟು ವಿಭಿನ್ನ ಮಾವು,ಚಿಕ್ಕು, ಲಿಂಬು, ಮೂಸುಂಬೆ, ಪೇರಲೆ… ಹೀಗೆ ನಾನಾ
ರೀತಿಯ ಹಣ್ಣಿನ ಗಿಡಗಳನ್ನು ನೆಟ್ಟು ತಮ್ಮ “ಕನಸಿನ ತೋಟ”ವನ್ನು ಮಾದರಿ ತೋಟವಾಗಿ ಮಾರ್ಪಡಿಸಲು ಗಿರೀಶ ಹೆಗಡೆ ಅತೀವ ಪ್ರಯತ್ನವನ್ನು ಮಾಡಿದ್ದಾರೆ. ಬೀಡುವಿನ ಸಮಯವನ್ನು ಈ ತೋಟದಲ್ಲಿ ಇದ್ದು ಪ್ರತಿಯೊಂದು ಗಿಡವನ್ನು ಸೂಕ್ಷ್ಮವಾಗಿ ಗಮನಿಸಿ,ನಿತ್ಯವೂ ಅವುಗಳ ಲಾಲನೆ- ಪಾಲನೆಗೆ  ಆದ್ಯತೆ ಕೊಡುತ್ತಾ ಕಾಳಜಿಯಿಂದ ಅವುಗಳನ್ನು ಬೆಳೆಸುತ್ತಿರುವ ಇವರು,ಬಹಳ ಪರಿಶ್ರಮವನ್ನು ಪಡುತಿದ್ದಾರೆ. ಈಗಾಗಲೇ ಜಿ –  9 ಬಾಳೆಯೂ ಉತ್ಕೃಷ್ಟವಾದ ಗೊನೆಗಳು ಬಿಡಲು ಆರಂಭಿಸಿದೆ. ಅದನ್ನು ನೋಡುವುದೇ ನನಗೀಗ ನಿತ್ಯವೂ ಸಂಭ್ರಮ.! ಪ್ರತಿ ಬಾಳೆಗೊನೆ ಗೇಣುದ್ದದ ಕುಂಡಿಗೆ ನೋಡುತ್ತಲೇ  ಸಂತಸವನ್ನು ಹಂಚಿಕೊಳ್ಳುತ್ತಾರೆ ಈ ಕೃಷಿಕರು.
ಇವಾಗ ಅಲ್ಲಿ ಉದ್ದೂದ್ದದ ಬಾಳೆಗೊನೆಗಳು ಬಲಿಯುತಿದ್ದು,ಇನ್ನು ಕೆಲವು ತಿಂಗಳಲ್ಲಿ  ಆ ಕೃಷಿಯಿಂದ ಮೊದಲ ಫಸಲಿನ ಕೊಯ್ಲಿನ ನಿರೀಕ್ಷೆಯಲ್ಲಿದ್ದಾರೆ ಗಿರೀಶ್ ಹೆಗಡೆ.  ಈ ಜಾಗದಲ್ಲಿ ದಿನವಿಡಿ ಬೀಸಿಲು ಬೀಳುವುದರಿಂದ ಹಣ್ಣಿನ ಗಿಡಗಳ ಕೃಷಿಗೆ ಹೇಳಿ ಮಾಡಿಸಿದ ಜಾಗವೆಂದು ತಿಳಿದವರು ಹೇಳುತ್ತಾರೆ. ಹೀಗಾಗಿ ಈ ಪ್ರಸಕ್ತವಾದ  ಬೆಟ್ಟದ ಭೂಮಿಯಲ್ಲಿಯೇ ಅತೀಯಾದ ಕಾಳಜಿ, ಆಸಕ್ತಿಯಿಂದ  ಸುಮಾರು ಒಂದುವರೆ ಲಕ್ಷಕ್ಕು ಹೆಚ್ಚು ಹಣವನ್ನು ಬರೇ ಹಣ್ಣಿನ ಗಿಡಗಳಿಗೆ ವ್ಯಯ ಮಾಡಿದ್ದಾರೆ.ಅಲ್ಲದೇ, ಈ ಜಾಗವನ್ನು ಕಳೆದ ನಾಲ್ಕು ವರುಷದಿಂದ ಸಮತಟ್ಟು ಮಾಡಲು, ಅನಾವಶ್ಯಕ ಬಲಿತ ಗಿಡಗಂಟಿಗಳನ್ನು ಕಡಿಯಲು,ಸುತ್ತಲೂ ಮುಳ್ಳಿನ ತಂತಿ, ಐಬಿಕ್ಸ್…ಹೀಗೆ ಪೂರ್ವ ಸಿದ್ದತೇಗೆ ..ಎಲ್ಲ ಸೇರಿ ಅಂದಾಜು ಐದು ಲಕ್ಷ ಹಣವನ್ನು ಇದುವರೆಗೆ ವ್ಯಯಸಿದ್ದಾರೆ ಗಿರೀಶ್ ಹೆಗಡೆ. 
ಅಲ್ಲದೇ ಈ ಉತ್ಸಾಹಿ ಕೃಷಿಕರು ತಮ್ಮ ಕನಸಿನ ತೋಟದ ಇನ್ನೊಂದು ಭಾಗದಲ್ಲಿ ( ಸುಮಾರು ಮೂರು ಎಕರೆ ಪ್ರದೇಶದಲ್ಲಿ)ಬೆಟ್ಟದಲ್ಲಿರುವ ಪ್ರತಿಯೊಂದು ಮರಗಳನ್ನು ಉಳಿಸಿಕೊಂಡು, ಅದಕ್ಕೆಲ್ಲ ಕಾಳುಮೆಣಸಿನ ಗಿಡವನ್ನು ಹೂಳಿದ್ದಾರೆ. ಈಗಾಗಲೇ 250 ಪಿ-1 ತಳಿಯ ಮೆಣಸಿನ ತಳಿಯನ್ನು ನಾಟಿ ಮಾಡಿರುವ ಗಿರೀಶ್ ಹೆಗಡೆ  ಮುಂದಿನ ದಿನಗಳಲ್ಲಿ ಅದನ್ನು ವಿಸ್ತರಿಸುವ ಯೋಜನೇಯನ್ನು ಇಟ್ಟುಕೊಂಡಿದ್ದಾರೆ.ಇದೇ ಜಾಗದಲ್ಲಿ ತಜ್ಞರ ಸಲಹೆ ಮೇರೆಗೆ  450 ರೋಬೊಸ್ಟಾ ಕಾಫಿ, 50ದಾಲ್ಚಿನ್ನಿ, 50 ಜಾಯಿಕಾಯಿ,400 ಮಹಾಘನಿ ಗಿಡ ( ಮೆಣಸು ಹಚ್ಚುವ ಸಲುವಾಗಿ), ಗಳನ್ನು  ಶಿಸ್ತಾಗಿ  ಸರಿಯಾದ ಕಾಂಬಿನೇಷನ್ ಮಾಡಿ ನಾಟಿ ಮಾಡಿ ವ್ಯವಸ್ಥಿತವಾಗಿ ಜವಾಬ್ದಾರಿಯಿಂದ ನಿರ್ವಹಣೆ ಮಾಡುತ್ತಿದ್ದಾರೆ. ಕಳೆದ ಜೂನ್ ನಲ್ಲಿ ಅಷ್ಟೇ ಈ ವೈವಿದ್ಯಮಯ ಗಿಡಗಳನ್ನು ನೆಟ್ಟು ಆರೈಕೆ ಮಾಡುತ್ತಾ ಬಂದಿರುವ ಗಿರೀಶ್ ಹೆಗಡೆ ಆ ಗಿಡಗಳ ಬೆಳವಣಿಗೆಯನ್ನು ಕಂಡು ಬಹಳ ಸಂತೋಷವಾಗುತ್ತದೆ. ಇವುಗಳನ್ನು ನೋಡ್ತಾ ಇದ್ದರೇ ಮನೆಗೆ ಹೋಗಲು ಮನಸ್ಸೆ ಬರುವುದಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ನಾನು ಆಫೀಸ್ ಡ್ಯುಟಿ ಮಾಡುತ್ತಾ ಕಛೇರಿಯ ರಜಾದಿನ  ಹಾಗೂ  ಬೀಡುವಿನ ಸಮಯವನ್ನು ಕ‌ಸಿನ ತೋಟದ ಕಡೆಯೇ ನೀಡುತ್ತಾ ಇರುವುದರಿಂದ ಮನೆಯ ಕಡೆ ಹೆಚ್ಚಿನ ಸಮಯ ನೀಡಲು ನನ್ನಿಂದ ಆಗಲಿಲ್ಲ.ಮನೆಯ ಸಂಪೂರ್ಣ ಜವಾಬ್ದರಿಯನ್ನೇಲ್ಲ ನಿಭಾಯಿಸಿಕೊಂಡು, ನನ್ನ ಕೃಷಿ ಕಾರ್ಯಗಳಿಗೂ ಸಲಹೆ ಸೂಚನೆ ಕೊಡುತ್ತಾ ಬೇನ್ನುಲುಬಾಗಿ ನಿಂತವಳು ನನ್ನ ಪತ್ನಿ ಮುಕ್ತಾ. ಮನೆಯವಳ ಸಂಪೂರ್ಣ ಸಹಕಾರ ಇರುವುದರಿಂಲೇ ನನ್ನ ಈ ಕನಸಿನ ತೋಟ ನನಸಾಗಲು ಕಾರಣ ಎಂದು ಗಿರೀಶ್ ಹೆಗಡೆ ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಾರೆ.
ಪಾಳುಬಿದ್ದ  ಬೆಟ್ಟದ ಭೂಮಿಯನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬಹುದು; ಯಾವೆಲ್ಲ ಕೃಷಿಯನ್ನು ಮಾಡಬಹುದು ಎಂಬುದಕ್ಕೆ ಗಿರೀಶ್ ಹೆಗಡೆಯವರ ಕನಸಿನತೋಟವೇ ಅಡಿಕೆ ಬೆಳೆ ಗಾರರಿಗೆ ಸ್ಪೂರ್ತಿಯಾಗಿದೆ. ಇಂದು ಮಲೆನಾಡಿನ ಅಡಿಕೆ ಬೆಳೆಗಾರರು ವಿಭಿನ್ನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆ ಕೃಷಿಗೂ ಈಗ ಭಯಾನಕ ರೋಗ ಅಂಟಿಕೊಂಡಿದ್ದು, ಪರ್ಯಾಯ ಬೆಳೆ ಏನು ಎಂಬುದಕ್ಕೆ ಸ್ಪಷ್ಟವಾದ ಉತ್ತರ ಕಾಣುತ್ತಿಲ್ಲ.  ಆದರೂ ಮಲೆನಾಡಿನ  ತೋಟಪಟ್ಟಿ ಹೊಂದಿದ ಕೃಷಿಕರು ತಮಗಿರುವ ಸೊಪ್ಪಿನ ಬೆಟ್ಟದ ಭೂಮಿಯನ್ನು ಕೇವಲ ತೆರಕೋ, ಸೊಪ್ಪಿಗೋ ಬಳಕೆ ಮಾಡುವುದಕ್ಕಿಂತ ಆ ಜಾಗದಲ್ಲಿಯೂ  ಬೇರೆ ಬೇರೆ ಬೆಳೆಗಳನ್ನು ಬೆಳೆಯಲು ಆಸಕ್ತಿ ವಹಿಸಿದರೇ ಮಾತ್ರ ಇರುವ ಜಾಗವನ್ನು ಸದ್ಬಳಕೆ ಮಾಡಿದ ಹಾಗೂ ಆಗುತ್ತದೆ; ತೃಷ್ತಿದಾಯಿಕ ಉತ್ಪನ್ನವನ್ನು ಪಡೆಯಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ಈ ಭಾಗದ ಕೃಷಿಕರು  ಆಸಕ್ತಿ ವಹಿಸಬೇಕಾದ ಅವಶ್ಯಕತೆಯಿದೆ. 
ಏಣಿ ಮೇಲಿನ ಸರ್ಕಸ್! 
ಸೊಸೈಟಿಯಲ್ಲಿ ನೌಕರಿ ಮಾಡುತ್ತಲೇ ಕೃಷಿಭೂಮಿಯನ್ನು ಅಭಿವೃದ್ಧಿ ಮಾಡಲು ಹೆಗಲುಕೊಟ್ಟಿರುವ ಗಿರೀಶ್ ಹೆಗಡೆ ಪ್ರತಿನಿತ್ಯವೂ ತಮ್ಮ ಕನಸಿನ ತೋಟಕ್ಕೆ ಭೇಟ್ಟಿ ನೀಡುತ್ತಾರೆ.ಹಾಗೇ ಬಂದವರು ಬೆಟ್ಟದಲ್ಲಿ ನೆಟ್ಟಿರುವ ವೈವಿಧ್ಯಮಯ ಹಣ್ಣಿನ ಗಿಡಗಳನ್ನು  ಅತೀ ಸಮೀಪದಿಂದ ವೀಕ್ಷಿಸಿ ಅದ್ರ ಆರೈಕೆಯನ್ನು ಗಮನಿಸುತ್ತಾರೆ. ನೀರು ಸರಿಯಾಗಿ ಬೀಳುತ್ತದಿಯೇ, ಗಿಡದ ಬೆಳವಣಿಗೆ ಚನ್ನಾಗಿಯೇ …ಹೀಗೆ ಎಲ್ಲವನ್ನು ಪರಿಶೀಲಿಸುತ್ತಾರೆ. ಅಲ್ಲದೇ, ಅಲ್ಲಿಯೇ ಸಮೀಪದಲ್ಲಿ ಇರುವ ಫಲಬರುತ್ತಿರುವ ಅಡಿಕೆ ತೋಟವನ್ನು ಸುತ್ತಾಡುತ್ತಾರೆ. ಅವರು ಸೊಪ್ಪಿನ ಬೆಟ್ಟದಿಂದ, ಅಡಿಕೆ ತೋಟಕ್ಕೆ ಹೋಗುವ ಮಾರ್ಗ  ಸುಲಭವಿಲ್ಲ.
ಸುಮಾರು ನಾಲ್ಕೈದು ಆಳಿನ ಧರೆಯನ್ನು ಇಳಿಯಬೇಕು. ತೋಟಕ್ಕೆ ಹೋಗಲು ಕಾಲುದಾರಿ ಇದ್ದರೂ ಸುತ್ತಿರುಗಿ ಬರಬೇಕು. ಆ ಸಮಯವನ್ನು ಉಳಿಸುವ ಸಲುವಾಗಿ ಗಿರೀಶ್ ಹೆಗಡೆ ತಮ್ಮ  ಕನಸಿನತೋಟದ ಅಂಚಿನಲ್ಲಿರುವ ಧರೆಗೆ ಅಲ್ಯುಮಿನಿಯಮ್ ಏಣಿ ಇಟ್ಟುಕೊಂಡಿದ್ದಾರೆ.ಆಧಾರಕ್ಕೆ ದಪ್ಪದಾದ ಹಗ್ಗವನ್ನು ಇಳಿ ಬಿಟ್ಟಿದ್ದಾರೆ. ಅದರ ಆದಾರದ ಮೇಲೆ ಪ್ರಯಾಸ ಪಟ್ಟು ಇಳಿಯುವುದು ಇವರಿಗೆ ದೊಡ್ಡ ಸಾಹಸದ ಕೆಲಸ!  ಕಷ್ಟಪಟ್ಟು ಏಣಿ ಮೂಲಕ ಹತ್ತಿಳಿಯುತ್ತಾರಲ್ಲ ಅದ್ಕೆ ಇವರ ಸಾಹಸವನ್ನು ಅಭಿನಂದಿಸಲೇಬೇಕು.ಬೇಸಿಗೆಯ ದಿನದಲ್ಲಿ ಈ ವ್ಯವಸ್ಥೆ ಇವರಿಗೆ ಅನುಕೂಲ ಎನ್ನುವುದನ್ನು ಬಿಟ್ಟರೇ, ಮಳೆಗಾಲದಲ್ಲಿ ಇಲ್ಲಿನ ಧರೆ ಹಿಸಿಯುವುದರಿಂದ  ಈ ಏಣಿಯ ಮೇಲಿಂದ ಇಳಿದು ತೋಟಕ್ಕೆ ಹೋಗಲು ಸಾಧ್ಯವಿಲ್ಲ ಎನ್ನುತ್ತಾರೆ ಗಿರೀಶ್ ಹೆಗಡೆ. ಮನಸ್ಸಿದ್ದರೇ ಮಾರ್ಗ..ಎಂಬ ವಾಡಿಕೆಯ ಮಾತು ಹೇಳುತ್ತಾರಲ್ಲ… ಹಾಗೇಯೇ ಬೆಟ್ಟದ ತೋಟದಿಂದ ಅಡಿಕೆ ತೋಟಕ್ಕೆ ಸುತ್ತಿರುಗಿ ಬರುವುದಕ್ಕಿಂತ, ಧರೆ ಅಂಚಿನಲ್ಲಿ
ಏಣಿ ಮೇಲಿಂದ ಇಳಿಯುವುದೇ ಸದ್ಯಕ್ಕೆ ಸುಲಭದ ದಾರಿ ಅನಿಸಿದ್ದರಿಂದ ಅದ್ನೇ ಉಪಯೋಗ ಮಾಡುತ್ತಿದ್ದೇನೆ ಎನ್ನುತ್ತಾರೆ ಗಿರೀಶ್ ಹೆಗಡೆ.
ಬೆಳಗುಂದ್ಲಿಯ ಪುಟ್ಟ ಅಡಿಕೆ ಬೆಳೆಗಾರರಾದ ಗಿರೀಶ್ ಹೆಗಡೆಯವರು ತೋಟಕ್ಕೆ ನೀರಾವರಿ ವ್ಯವಸ್ಥೆ ಮಾಡಬೇಕೆಂದು ಸಂಕಲ್ಪಿದ್ದರು. ತೋಟದ ಪಕ್ಕವೇನೊ ಹಳ್ಳವೇನೋ ಇದೆ. ಆದ್ರೇ ಬೇಸಿಗೆ ದಿನದಲ್ಲಿ ಬತ್ತಿ ಹೋದರೇ (?) ಸಮಸ್ಯೆ ಆಗಬಹುದು ಎಂದುಕೊಂಡು ಹಳ್ಳಕ್ಕೆ ಪಂಪ್ ಹಾಕಲಿಲ್ಲ. ಹಳ್ಳ ಹಾಗೂ ತೋಟದ ಅಂಚಿನಲ್ಲಿ  ಬೃಹತ್  ಕೆರೆಯನ್ನು ( 16 ಅಡಿ ಸುತ್ತಳತೆಯ ತೆರೆದ ಬಾವಿ) ಮೊದಲು ನಿರ್ಮಿಸಿಕೊಂಡರು. ದೇವರ ದಯೇಯಿಂದ ಸಾಕಷ್ಟು ನೀರು ಲಭಿಸಿತು. ಕರೆಯ ನೀರು ಇಳಿದರೂ, ಪಕ್ಕದಲ್ಲಿಯೇ ಹರಿಯುವ ಹಳ್ಳದ ನೀರು ಕೆರೆಗೆ ಬರಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಹೀಗಾಗಿ ಇದುವರೆಗೆ ನೀರಿನ ಸಮಸ್ಯೆಯೇನು ಆಗಲಿಲ್ಲ. ಸಾಕಷ್ಟು ನೀರು ಲಭಿಸಿದ್ದರಿಂದಲೇ, ಧೈರ್ಯ ಮಾಡಿ ಸೊಪ್ಪನ ಬೆಟ್ಟದಲ್ಲಿ  ಹಣ್ಣು ಹಂಪಲಿನ ಗಿಡ,ಬಾಳೆ,ಕಾಫಿ…ಇತ್ಯಾದಿ ಥರಥರದ ಗಿಡಗಳನ್ನು ಹಚ್ಚಲು ಆಸಕ್ತಿ ವಹಿಸಿದೆ. ನನ್ನ ಅದೃಷ್ಟಕ್ಕೆ ಹಚ್ಚಿದ ಗಿಡಗಳೆಲ್ಲವೂ ಚನ್ನಾಗಿ ಬಲಿಯುತ್ತಾ ಇದ್ದು, ನನ್ನ ನಿರೀಕ್ಷೆಗಿಂತಲೂ ವೇಗವಾಗಿ  ಬೆಳೆಯುತ್ತಾಯಿದೆ. ಸಾಕಷ್ಟುನೀರು  ಸಿಗದಿದ್ದರೇ  ಸೊಪ್ಪನ ಬೆಟ್ಟವನ್ನು ಈ ರೀತಿಯಾಗಿ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿರಲಿಲ್ಲ; ನನ್ನ ಕನಸಿನ ತೋಟವೂ ತಲೆಯೇತ್ತಿ ನಿಲ್ಲೂತ್ತಲೂ ಇರಲಿಲ್ವೇನೋ.. ಎಂದು ಗಿರೀಶ್ ಹೆಗಡೆ  ತಮ್ಮ ಅನುಭವದ ಬುತ್ತಿ ಹಾಗೂ ಸಂಶಯವನ್ನು  ಮುಕ್ತವಾಗಿ ತೆರೆದಿಡುತ್ತಾರೆ. 

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group