spot_img
Wednesday, April 29, 2026
spot_imgspot_img

ಸಿಂಗಾಪುರ ಅಡಿಕೆ ಸುಲಿಯುವುದಕ್ಕೆ ಇಲ್ಲಿದೆ ಸುಲಭ ಸಾಧನ

-ರಾಧಾಕೃಷ್ಣ ತೊಡಿಕನ

ಅಡಿಕೆ ಬೆಳೆಗಾರ ತೋಟದಲ್ಲಿ ಅಲ್ಲೊಂದು ಇಲ್ಲೊಂದು ಕಾಣುತ್ತಿದ್ದ ಸಿಂಗಾಪುರ ಅಡಿಕೆ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುತ್ತಿದೆ. ಮೇಲಿಂದ ಮೇಲೆ ಅಡಿಕೆಯನ್ನು ಕಾಡುವ ರೋಗಗಳಿಂದ ಅಡಿಕೆ ಕೃಷಿಕ ಕಂಗಾಲಾಗಿದ್ದಾನೆ. ಈ ಬೆಳೆಗೆ ಪರ್ಯಾಯ ಏನು ಎಂದು ಚಿಂತಿಸುತ್ತಿರುವಾಗ ಈ ಕಾಡು ಅಡಿಕೆಯ ಮೇಲೆ ರೈತರ ಕಣ್ಣು ಬಿದ್ದಿದೆ. ಅಡಿಕೆ ಮರಗಳು ಹಳದಿ ಎಲೆಚುಕ್ಕಿಯಿಂದ ತತ್ತರಿಸುತ್ತಿತರುವಾಗ ತನಗೇನೂ ಆಗಿಲ್ಲವೆಂಬಂತೆ ಹಚ್ಚ ಹಸಿರಾಗಿ ನಿಂತ ಸಿಂಗಾಪುರ ಅಡಿಕೆ ಮೇಲೆ ರೈತರ ಆಸಕ್ತಿ ಹೆಚ್ಚುತ್ತಿರುವುದು ಸುಳ್ಳಲ್ಲ. ರಾಜ್ಯದಲ್ಲಿ ಶೇ.10-20 ರಷ್ಟು ಈ ಕಾಡು ಅಡಿಕೆ ಇದೆ ಎನ್ನಲಾಗುತ್ತಿದೆ. ತೀರಾ ಚಿಕ್ಕದಾದ ಈ ಅಡಿಕೆ ಸುಲಿಯುವುದು ಸ್ವಲ್ಪ ತ್ರಾಸದಾಯಕವೇ. ಸ್ವಲ್ಪ ಸ್ವಲ್ಪ ಅಡಿಕೆ ಇರುವವರು ಚೂರಿಯಿಂದಲೋ, ನೆಲದಲ್ಲಿ ಹಾಕಿ ಉಜ್ಜುವುರಿಂದಲೋ ಅಥವಾ ಒರಳಿನಲ್ಲಿ ಕುಟ್ಟಿ ಸಿಪ್ಪೆ ಸುಲಿಯುತ್ತಾರೆ. ಈ ಸಂದರ್ಭದಲ್ಲಿ ಸುಲಭವಾಗಿ ಸುಲಿಯಲು ಯಾವುದಾದರೂ ಉಪಕರಣ ಇದ್ದಿದ್ದರೆ ಎಷ್ಟು ಒಳ್ಳೆಯದು ಎಂಬ ಯೋಚನೆ ಬಾರದಿರದು.

2-3 ಸೆ.ಮಿ ಉದ್ದ ಹಾಗೂ 1 ಸೆ.ಮಿ ದಪ್ಪದ ಅಡಿಕೆಯನ್ನು ಸುಲಿಯುವ ಸಮಸ್ಯೆಯನ್ನು ಮನಗಂಡು ಮೂಡಬಿದ್ರೆಯ ಮೈಟ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಸರಳ ಉಪಕರಣವನ್ನು ತಯಾರಿಸಿದ್ದಾರೆ. ಈ ಉಪಕರಣ ಸಣ್ಣ ಅಡಿಕೆಯನ್ನು ಲೀಲಾಜಾಲವಾಗಿ ಸುಲಿದು ಕೊಡಬಲ್ಲುದು. ಮೈಟಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಓದುತ್ತಿರುವ ಬೆಳ್ತಂಗಡಿ ತಾಲೂಕಿನ ಗುರುವಾಯನನಕೆರೆಯ ಮನೋಜ್ ಕುಮಾರ್ ಬಿ.ವಿ ಅವರಿಗೆ ಅಡಿಕೆ ಕೃಷಿಯಿದೆ. ಅವರ ತೋಟದಲ್ಲಿ ಸಿಂಗಾಪುರ ಅಡಿಕೆ ಅಂದರೆ ಕಾಡು ಅಡಿಕೆ ಗಿಡಗಳಿವೆ. ಈ ಅಡಿಕೆಗೂ ಮಾರುಕಟ್ಟೆಯಲ್ಲಿ ಉತ್ತಮ ದರವಿದ್ದರೂ ಸುಲಿಯುವ ಕಷ್ಟ ಯಾರಿಗೂ ಬೇಡ. ಹಾಗಾಗಿ ಈ ಅಡಿಕೆ ಇದ್ದರೂ ಅದನ್ನು ಹೆಕ್ಕುವುದು, ಸಂಗ್ರಹಿಸುವುದು ಸ್ವಲ್ಪ ಕಡಿಮೆ. ಈ ಅಡಿಕೆ ಸುಲಿಯಲು ಸುಲಭ ಉಪಕರಣ ತಯಾರಿಸ ಬೇಕೆಂದು ನಿರ್ಧಾರಿಸಿದ ವಿದ್ಯಾರ್ಥಿಗಳ ತಂಡಕ್ಕೆ ಪ್ರಾಧ್ಯಾಪಕ ವರ್ಗದವರ ಬೆಂಬಲವು ಸಿಕ್ಕಿತ್ತು .ಮೆಕ್ಯಾನಿಕಲ್ ಇಂಜಿನಿಯರ್ ಮಾಡುತ್ತಿರುವ ಮನೋಜ್ ಕುಮಾರ್, ದೀಕ್ಷತ್ ಕೆ.ಗೌಡ, ಸ್ವಸ್ತಿಕ್, ಇಲೆಕ್ರಾö್ಟನಿಕ್ಸ್ ವಿಭಾಗದ ದೀಪಕ್, ಸಂಸ್ಥೆಯ ಹಿರಿಯ ವಿದ್ಯಾರ್ಥಿ ವಿಭಾಗದ ಪ್ರದ್ಯಮ್ನನ ಮೂರ್ತಿ ಜೊತೆಯಾದರೆ ಮೆಕ್ಯಾನಿಕಲ್ ವಿಭಾಗ ಸಹಾಯಕ ಪ್ರಾದ್ಯಾಪಕ ಯುವರಾಜ್ ಕೆ.ಟಿ, ಅಸೋಸಿಯೇಟೆಡ್ ಫ್ರೊಫೆಸರ್ ಡಾ. ಶಿವರಾಮು ಹೆಚ್.ಟಿ ಅವರ ಮಾರ್ಗದರ್ಶನದಲ್ಲಿ ಸರಳ ಉಪಕರಣ ತಯಾರಾಯಿತು.

Pic: Ram Ajekar

ವೈಶಿಷ್ಟ್ಯವೇನು?

ಕೈಯಲ್ಲಿ ಒಂದು ಕೆಜಿ ಅಡಿಕೆ ಸಿಪ್ಪೆ ಸುಲಿಯುವುದಕ್ಕೆ ಒಂದೆರಡು ಗಂಟೆಯಾದರೂ ತಗಲುತ್ತದೆ. ಆದರೆ ಈ ಯಂತ್ರದಲ್ಲಿ ಎರಡೇ ನಿಮಿಷದಲ್ಲಿ ಕಡಿಮೆಯೆಂದರೂ 2 ಕೆ.ಜಿ ಅಡಿಕೆ ಸುಲಿಯಬಹುದಾಗಿದೆ. 0.5 ಹೆಚ್‌ಪಿ ಮೋಟಾರ್ ಅಳವಡಿಸಿಕೊಂಡರೆ ಸಾಕು. ಕಡಿಮೆ ವಿದ್ಯುತ್ ಸಾಕಾಗುತ್ತದೆ. ಈ ಯಂತ್ರದ ಭಾರ 15-20 ಕೆಜಿಯಷ್ಟೇ. ಪೋರ್ಟೆಲ್ ಆದುದರಿಂದ ಎಲ್ಲಿ ಬೇಕೆಂದರಲ್ಲಿ ಸುಲಭವಾಗಿ ಕೊಂಡೊಯ್ಯಬಹುದು. ಸಮಯದ ಉಳಿತಾಯವಾಗುತ್ತದೆ. ಮಾನವ ಶ್ರಮ ಕಡಿಮೆಯಾಗುತ್ತದೆ. ಮನೆಯಲ್ಲಿರುವ ಹಿರಿಯರು ಕಿರಿಯರು ಯಾರು ಬೇಕಾದರೂ ಸುಲಭವಾಗಿ ನಿರ್ವಹಣೆ ಮಾಡಬಹುದು.

ಈ ಯಂತ್ರದಲ್ಲಿ ಅಡಿಕೆ ಹಾಳಾಗುವುದಿಲ್ಲ. ಪುಡಿಯಾಗುವುದಿಲ್ಲ. ಗೀರುಗಳು ಬೀಳುವುದಿಲ್ಲ. 6-7 ಸಾವಿರ ಈಗಿನ ಬೆಲೆಯಾದರೂ ದೊಡ್ಡ ಮಟ್ಟದಲ್ಲಿ ಉತ್ಪಾದನೆಯಾದರೆ ಖರ್ಚುವೆಚ್ಚಗಳು ತಗ್ಗಿ ಬೆಲೆ ಇನ್ನೂ ಕಡಿಮೆಯಾಗಬಹುದು ಎಂಬುದು ಯಂತ್ರ ತಯಾರಿ ವಿದ್ಯಾರ್ಥಿಗಳ ಅಭಿಪ್ರಾಯವಾಗಿದೆ. ಮೃತಿಕಾ ಅಗ್ರೋಟೆಕ್ ಎಂಬ ಸಂಸ್ಥೆಯನ್ನು ಇದರ ತಯಾರಿಗಾಗಿ ಹುಟ್ಟು ಹಾಕಲಾಗಿದೆ. ಬೇಡಿಕೆಯಿದೆ.ಆಸಕ್ತರಿಗೆ ಈ ಯಂತ್ರವನ್ನು ತಯಾರಿಸಿ ಕೊಡಲಾಗುವುದು.

ಅಡಿಕೆ ಸುಲಿಯುವ ಈ ಉಪಕರಣಕ್ಕೆ ಪೇಟೆಂಟ್ ಕೂಡಾ ದೊರೆತಿದೆ. ಈ ಉಪಕರಣವನ್ನು ಬಹೂಪಯೋಗಿ ಯಂತ್ರವಾಗಿ ಮಾರ್ಪಡಿಸುವ ಯೋಜನೆ ಇವರಿಗಿದೆ. ಕಾಳುಮೆಣಸು, ಕಾಫಿ, ಸಾಮಾನ್ಯ ಅಡಿಕೆ, ಸಂಸ್ಕರಿಸುವಂತೆ ಮಾರ್ಪಡಿಸುವ ಉದ್ದೇಶವಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳಳಾಗುತ್ತಿವೆ

ಇದಲ್ಲದೆ ತೋಟಗಳಿಗೆ ಸ್ಪಿಂಕ್ಲರ್ ನೀರು ಹಾಯಿಸುವುದಕ್ಕೂ ಸರಳ ಸಾಧನ ತಯಾರಿಸಿದ್ದಾರೆ. ಸ್ಪಿಂಕ್ಲರ್ ಅಳವಡಿಸುವ ಕುಟ್ಟಿಗೆ ಕ್ಲಿಪ್ಗಳನ್ನು ಅಳವಡಿಸಿ ಸ್ಪಿಂಕ್ಲರನ್ನು ಚಾಲೂ ಮಾಡುವುದು ಸಾಮಾನ್ಯ. ಈ ಕ್ಲಿಪ್‌ಗಳನ್ನು ಒತ್ತಿ ತೆಗೆಯಬೇಕಾಗುತ್ತದೆ. ಆಗ ಕೈಗೂ ಒತ್ತಡ ಬೀಳುತ್ತದೆ. ಅದನ್ನು ನಿವಾರಿಸುವ ನಿಟ್ಟಿನಲ್ಲಿ ಮೆಕಾನಿಸಮ್ ರಿಪ್ಲೇಶ್ ಮೆಂಟ್ ಸಿಸ್ಟಮ್ ಅಳವಡಿಸಲಾಗುತ್ತಿದೆ. ಸ್ಪಿಂಕ್ಲರ್ ಒಂದೆಡೆಯಿಂದ ಮತ್ತೊಂಡೆಗೆ ಬದಲಾಯಿಸಲು ಸುಲಭ..ನೀರಿನ ಉಳಿತಾಯ ಸಮಯದ ಉಳಿತಾಯವಾಗುತ್ತದೆ. ಈ ಸಾಧನಕ್ಕೂ ಪೇಟೆಂಟ್ ದೊರೆತಿದೆ

ಸಿಂಗಾಪು ಅಡಿಕೆ ಸುಲಿಯುವ ಯಂತ್ರಕ್ಕೆ ಗ್ರಾಸ್ ರೂಟ್ ಇನಾವೇಶನ್-2025 ರಾಜ್ಯ ಮಟ್ಟದ ಪ್ರಶಸ್ತಿಯೂ ದೊರೆತ್ತಿದೆ ಮಾಹಿತಿಗೆ 7975270723

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group