-ರಾಧಾಕೃಷ್ಣ ತೊಡಿಕಾನ
ಮನೆಯಂಗಳದಲ್ಲಿ ಬೆಳೆದ ಹುಲ್ಲು ಕಡ್ಡಿಯಿಂದ ಅರಣ್ಯದಲ್ಲಿರುವ ಮರ ಗಿಡ, ಬಳ್ಳಿ, ನಾರು, ಬೇರು, ತೊಗಟೆಯಲ್ಲಿ ಹಲವು ಬಗೆಯ ಔಷಧಿಯ ಗುಣವಿರುವುದು ನಾಟಿ ವೈದ್ಯರು ಬಲ್ಲರು. ಆಧುನಿಕ ಚಿಕಿತ್ಸಾ ಪದ್ಧತಿಗಳ ನಡುವೆಯೂ ಪರಂಪರೆಯ ಹಳ್ಳಿ ಮದ್ದು ಜೀವಂತವಾಗಿ ಉಳಿದಿದೆ. ನಾಟಿ ವೈದ್ಯರಲ್ಲಿ ಕೆಲವರು ಬೇರೆ ಬೇರೆ ಕಾರಣಗಳಿಂದ ಮದ್ದು ಕೊಡುವುದನ್ನು ನಿಲ್ಲಿಸಿದರೆ ಮತ್ತೆ ಕೆಲವರು ಪಾರಂಪರಿಕ ಪದ್ಧತಿಯನ್ನು ಬಿಟ್ಟಿಲ್ಲ. ಕೆಲ ಆರೋಗ್ಯ ಸಮಸ್ಯೆಗೆ ಈಗಲೂ ಗಿಡಮೂಲಿಕೆಯ ಔಷಧಿಯನ್ನೇ ನೆಚ್ಚಿಕೊಂಡವರಿದ್ದಾರೆ.
ನಾಟಿ ವೈದ್ಯ ಪದ್ಧತಿಯನ್ನು ಪರಂರೆಯಿಂದ ಮುಂದುವರಿಸಿಕೊಂಡು ಬಂದ ಹಲವರಿದ್ದಾರೆ. ಮಾಧವ ಗೌಡ ಸುಳ್ಯಕೋಡಿ ಅವರದೂ ಪರಂಪರೆಯಿಂದ ಬಂದ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ಎಸ್. ಆರ್. ಮಾಧವ ಗೌಡ ಸುಳ್ಯಕೋಡಿ ಅವರು ಕಳೆದ ಹಲವು ದಶಕಗಳಿಂದ ಗಿಡ ಮೂಲಿಕೆಯ ಔಷಧಿಯನ್ನು ನೀಡುತ್ತಿದ್ದಾರೆ. ತಂದೆ ರಾಮಪ್ಪ ಗೌಡ ಕಲಿಸಿದ ಔಷಧಿಯಲ್ಲದೆ ತನ್ನ ಅನುಭವ ಮತ್ತು ಬೇರೆ ಬೇರೆ ಮೂಲಗಳಿಂದ ಹಲವು ಗಿಡಮೂಲಿಕೆಯ ಔಷಧಿ ಬಲ್ಲರು. ನಾಡಿನ ವಿವಿಧೆಡೆ ನಾಟಿ ವೈದ್ಯರಾಗಿ ಪರಿಚಿತರು. ಎಣ್ಣೆ, ಕಷಾಯ, ಮಾತ್ರೆ ಹೀಗೆ ಬೇರೆ ಬೇರೆ ರೂಪದಲ್ಲಿ ಔಷಧಿಯನ್ನು ನೀಡುತ್ತಿರುವ ಅವರು ಸುಮಾರು 20-25 ಬಗೆಯ ಔಷಧಿಗಳನ್ನು ತಯಾರಿಸುತ್ತಾರೆ. ಮದ್ದಿಗಾಗಿ ದೂರದೂರಿಂದ ಅವರನ್ನು ಹುಡುಕಿ ಬರುತ್ತಾರೆ.

ಸರ್ಪ ಸುತ್ತು, ಪಕ್ಷವಾತ, ಅರಸಿನ ಮಂಡಿಗೆ, ಡಯಾಬಿಟಿಸ್, ಕಿಡ್ನಿ ಸ್ಟೋನ್, ನರಸಂಬಂಧಿ ರೋಗಗಳು, ಮೂಲವ್ಯಾಧಿ, ನಿದ್ರಾಹೀನತೆ, ಬಹುಮೂತ್ರ ಸಮಸ್ಯೆ, ಮಹಿಳೆಯರಲ್ಲಿ ಕಂಡುಬರುವ ಸಮಸ್ಯೆ, ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕಾಯಿಲೆಗಳು, ಕಿರುನಾಲಿಗೆಯಿಂದ ಉಂಟಾಗುವ ಸಮಸ್ಯೆ ಮೊದಲಾದುವುಗಳಿಗೆ ಗಿಡಮೂಲಿಕೆ ಔಷಧಿಯಿಂದ ಪರಿಹಾರ ಕಂಡಿರುವುದನ್ನು ಹಾಗೂ ಲಕ್ಷಕ್ಕೂ ಹೆಚ್ಚು ಮಂದಿಗೆ ಔಷಧಿಯನ್ನು ನೀಡಿರುವುದಾಗಿ ಹೇಳುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲದೆ ಉಡುಪಿ, ಕೊಡಗು, ಮೈಸೂರು, ಬೆಂಗಳೂರು ಮೊದಲಾದೆಡೆಗಳಿಂದ ಬಂದು ಔಷಧಿ ಪಡೆದು ಗುಣಮುಖರಾಗಿದ್ದಾರೆ. ಇತ್ತೀಚೆಗೆ ಜಾನುವಾರುಗಳಿಗೂ ಔಷಧಿ ನೀಡುತ್ತಿದ್ದು ದುಬಾರೆಯ ಆನೆಯೊಂದರ ಕಾಲು ನೋವಿಗೂ ಔಷಧಿಯನ್ನು ನೀಡಿದ್ದಾರೆ.

ಕೆಲವೊಂದು ಗಿಡಮೂಲಿಕೆಗಳು ಮನೆಯ ಪರಿಸರದಲ್ಲಿ ಸಿಕ್ಕಿದರೆ ಕೆಲವೊಂದನ್ನು ಬೇರೆ ಕಡೆಯಿಂದ ತರಿಸಿಕೊಳ್ಳುತ್ತಾರೆ. ಎಣ್ಣೆ, ಕಷಾಯ, ಮತ್ತು ಮಾತ್ರೆ ಸಂದರ್ಭಕ್ಕನುಗುಣವಾಗಿ ನೀಡುತ್ತಿದ್ದು ಈ ಪರಂಪರೆಯನ್ನು ಮುಂದಿನ ತಲೆಮಾರಿಗೂ ಹಸ್ತಾಂತರಿಸುವ ನಿಟ್ಟಿನಲ್ಲಿ ತನ್ನ ಮಂದಿಗೂ ಕಲಿಸಿದ್ದಾರೆ. 79 ವರ್ಷದ ಮಾಧವ ಗೌಡರು ಅನುಭವದ ಬುತ್ತಿ ಬಿಚ್ಚಿದಾಗಲೆಲ್ಲಾ ಗಿಡ ಮೂಲಿಕೆಗಳ ಅನನ್ಯತೆಯ ಅನಾವರಣವಾಗುತ್ತದೆ. ಗಿಡಮೂಲಿಕೆ ಮಾಹಿತಿ ಮಾರ್ಗದರ್ಶನ ಶಿಬಿರಗಳಲ್ಲಿ ಭಾಗವಹಿಸಿ ಶಾಲಾ ಮಕ್ಕಳಿಗೆ, ಆಸಕ್ತರಿಗೆ ಗಿಡಮರಗಳ ವೈಶಿಷ್ಟ್ಯತೆ ಅದರಲ್ಲಿರುವ ಔಷಧಿಯ ಗುಣಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಂಘ, ಪಾವಂಜೆ ಜ್ಞಾನ ಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ , ರೋಟರಿ ಕ್ಲಬ್ ಸುಳ್ಯ ಅಲ್ಲದೆ ಹಲವು ಸಂಘ ಸಂಸ್ಥೆಗಳು ಅವರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿವೆ. ಹಿರಿಯರ ಕ್ರೀಡಾಕೂಟದಲ್ಲಿಯೂ ಭಾಗವಹಿಸಿ ಬಹುಮಾನ ಪಡೆದ ಹೆಗ್ಗಳಿಕೆ ಅವರದು.
ಮಾಹಿತಿಗೆ-686095506






