spot_img
Sunday, July 26, 2026
spot_imgspot_img

ಶುದ್ಧ ನೈವೇದ್ಯ ಸಮರ್ಪಣಂ, ಗದ್ದೆಯಿಂದ ಗರ್ಭಗುಡಿಗೆ ,ಸಾವಯವ ಭತ್ತಕ್ಕೆ ಜೀವ ತುಂಬುವ ಅಭಿಯಾನ

ಕರ್ನಾಟಕದ ಕರಾವಳಿ ಮತ್ತು ಮಲೆನಾಡಿನ ಭಾಗಗಳಲ್ಲಿ ಹಿಂದೆ ಭತ್ತದ ಗದ್ದೆಗಳಿದ್ದವು. ಮಳೆಗಾಲ ಆರಂಭವಾಗಿ ಕೃಷಿ ಚಟುವಟಿಕೆ ಮುಗಿದ ನಂತರ ಹಸಿರಾಗುವ ಗದ್ದೆಗಳು, ಬೆಳೆ ಕೊಯ್ಲಿಗೆ ಬರುತ್ತಿದ್ದಂತೆ ಬಂಗಾರದ ರಂಗಿನಲ್ಲಿ ಕಂಗೊಳಿಸುತ್ತಿದ್ದವು. ಗ್ರಾಮೀಣ ಬದುಕಿನ ಸೊಬಗನ್ನು ಹೆಚ್ಚಿಸುತ್ತಿದ್ದವು. ಆದರೆ ಇಂದು ಅಂತಹ ದೃಶ್ಯಗಳು ಅಪರೂಪಗುತ್ತಿದೆ. ಭತ್ತದ ಕೃಷಿಯ ಬದಲಿಗೆ ವಾಣಿಜ್ಯ ಬೆಳೆಗಳು ರೈತರನ್ನು ಹೆಚ್ಚು ಆಕರ್ಷಿಸುತ್ತಿವೆ. ಹೆಚ್ಚುತ್ತಿರುವ ಕೃಷಿ ವೆಚ್ಚ, ಕಾರ್ಮಿಕರ ಕೊರತೆ ಮತ್ತು ಭತ್ತ ಲಾಭದಾಯಕವಲ್ಲ ಎಂಬ ಭಾವನೆ ಭತ್ತದ ಕೃಷಿಯನ್ನು ದೂರ ಮಾಡಿವೆ. ಇದರ ಜೊತೆಗೆ ರಾಸಾಯನಿಕ ಕೃಷಿಯ ಪ್ರಭಾವ ಹೆಚ್ಚಿದೆ. ಸಾಂಪ್ರದಾಯಿಕ ಸಾವಯವ ಕೃಷಿ ಪದ್ಧತಿಯೂ ಕ್ಷೀಣಿಸಿದೆ.

ಇಂತಹ ಸಂದರ್ಭದಲ್ಲಿ ಉಡುಪಿ ಶ್ರೀ ಕೃಷ್ಣನಿಗೆ “ಶುದ್ಧ ನೈವೇದ್ಯ ಸಮರ್ಪಣಂ” ಯೋಜನೆಯ ಮೂಲಕ ಸಾವಯವ ಭತ್ತದ ಕೃಷಿಗೆ ಹೊಸ ಚೈತನ್ಯ ತುಂಬುವ ಪ್ರಯತ್ನ ಆರಂಭವಾಗಿದೆ. ಸೋದೆ ವಾದಿರಾಜ ಮಠದ ಪೂಜ್ಯ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಅಭಿಯಾನವು ಧಾರ್ಮಿಕ ಆಚರಣೆಯನ್ನು ಕೃಷಿ, ಭತ್ತದ ತಳಿ ಸಂರಕ್ಷಣೆಯೊಂದಿಗೆ ಬೆಸೆಯುವ ಅಪರೂಪದ ಮಾದರಿಯಾಗಿದೆ.

 ಸಹಜ ಹಾಗೂ ಸಾವಯವ ಪದ್ಧತಿಯಲ್ಲಿ ಬೆಳೆದ ಸಾಂಪ್ರದಾಯಿಕ ಭತ್ತದ ತಳಿಗಳ ಅಕ್ಕಿಯಿಂದ ಪ್ರತಿದಿನ ಉಡುಪಿ ಶ್ರೀಕೃಷ್ಣನಿಗೆ ಶುದ್ಧ ನೈವೇದ್ಯವನ್ನು ಸಮರ್ಪಿಸುವುದು. ಈ ಯೋಜನೆಯ ಮೂಲ ಉದ್ದೇಶ. ನೈವೇದ್ಯ ಸಮರ್ಪಣೆಗೆ ಮಾತ್ರ ಯೋಜನೆ ಸೀಮಿತವಾದುದಲ್ಲ. ಅಳಿವಿನಂಚಿನಲ್ಲಿರುವ ಭತ್ತದ ತಳಿಗಳನ್ನು ಉಳಿಸುವ ಮತ್ತು ಸಾವಯವ ಕೃಷಿಗೆ ಹೊಸ ಮೌಲ್ಯ ನೀಡುವ ಜಾಗೃತಿ ಮೂಡಿಸುವ ಪ್ರಯತ್ನ ಇದರಲ್ಲಿದೆ. ಭತ್ತದ ಕೃಷಿ ಪರಂಪರೆಯೆಂದರೆ ಅದೊಂದು ಕಾಯಕ ಮಾತ್ರವಲ್ಲ. ಅದರಲ್ಲೂ ಧಾರ್ಮಿಕ ಆಚರಣೆ, ನಂಬಿಕೆಯಿದೆ

ಒಡಿಶಾದ ಪುರಿ ಜಗನ್ನಾಥ ದೇವಾಲಯದಲ್ಲಿ ಶ್ರೀ ದೇವರಿಗೆ ಪ್ರತಿದಿನ ವಿಭಿನ್ನ ಭತ್ತದ ತಳಿಗಳಿಂದ ಉತ್ಪಾದಿಸಿದ ಅಕ್ಕಿಯಿಂದ ನೈವೇದ್ಯ ಸಮರ್ಪಿಸುವ ಪರಂಪರೆಯಿದೆ. ಅದೇ ಮಾದರಿಯನ್ನು ಉಡುಪಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ಕೈಗೊಳ್ಳುವ ಸಂಕಲ್ಪದಿಂದ “ಶುದ್ಧ ನೈವೇದ್ಯ ಸಮರ್ಪಣಂ” ಯೋಜನೆ ರೂಪುಗೊಂಡಿದೆ.

2022 ರಲ್ಲಿ ಸೋದೆ ಶ್ರೀಗಳು ಸಾವಯವ ರೈತರಿಗೆ ವಿವಿಧ ಸಾಂಪ್ರದಾಯಿಕ ಭತ್ತದ ತಳಿಗಳ ಬೀಜ ವಿತರಿಸುವ ಮೂಲಕ ಈ ಯೋಜನೆಗೆ ಚಾಲನೆ ನೀಡಿದ್ದರು. ಅಂದಿನಿಂದ ಈ ಅಭಿಯಾನ ಹಂತಹಂತವಾಗಿ ವಿಸ್ತರಿಸುತ್ತಿದ್ದು, ಇತ್ತೀಚೆಗೆ ಉಡುಪಿಯ ಸೋದೆ ಮಠದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಇನ್ನೂರಕ್ಕೂ ಹೆಚ್ಚು ಸಾವಯವ ರೈತರಿಗೆ ಮತ್ತೆ ವಿವಿಧ ತಳಿಯ ಭತ್ತದ ಬೀಜ ವಿತರಿಸಲಾಯಿತು.

“ಗದ್ದೆಯಿಂದ ಗರ್ಭಗುಡಿಗೆ” ಎಂಬುದು ಶ್ರೀ ಸ್ವಾಮೀಜಿಯವರ ಪರಿಕಲ್ಪನೆ. ಈ ಯೋಜನೆಯ ಜೀವಾಳ. ರೈತ ಬೆಳೆದ ಆಹಾರ ಧಾನ್ಯಗಳು ಧಾರ್ಮಿಕ ಆಚರಣೆಯ, ಹಬ್ಬ ಹರಿದಿನಗಳ ಸಂಸ್ಕೃತಿಯ ಭಾಗವಾಗಿದೆ. ಧಾನ್ಯ ದೇವರ ಸನ್ನಿಧಿಗೆ ತಲುಪುವುದು ಕೃಷಿಗೆ ದೊರೆಯುವ ಅತ್ಯುನ್ನತ ಗೌರವ ಎಂಬ ಸಂದೇಶವನ್ನು ಈ ಯೋಜನೆ ನಾಡಿಗೆ ಸಾರಿದೆ. ಸ್ವಾಮೀಜಿಯವರು ವಿವಿಧ ಜಿಲ್ಲೆಗಳಲ್ಲಿ ಪಾದಯಾತ್ರೆ ನಡೆಸಿ ರೈತರನ್ನು ಭೇಟಿ ಮಾಡಿ ಸಾವಯವ ಭತ್ತದ ಕೃಷಿಯ ಮಹತ್ವವನ್ನು ಮನದಟ್ಟು ಮಾಡಿದ್ದಾರೆ. 2028-30 ರ ಸೋದೆ ಪರ್ಯಾಯದ ವೇಳೆಗೆ ಈ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ತರುವ ಸಂಕಲ್ಪವೂ ಶ್ರೀಗಳದ್ದಾಗಿದೆ. ಈ ಯೋಜನೆ ದಕ್ಷಿಣ ಭಾರತದಲ್ಲಿಯೇ ಪ್ರಥಮ ಪ್ರಯತ್ನವಾಗಿದೆ.

ಈ ಅಭಿಯಾನವನ್ನು ಯಶಸ್ವಿಗೊಳಿಸಲು ಕೃಷಿ ಸಂಘಟನೆಗಳು ಮತ್ತು ಸಾವಯವ ಕೃಷಿಕರು ಕೈಜೋಡಿಸಿದ್ದಾರೆ. ಹಾದಿಗಲ್ಲು ನಡುವಿನಮನೆ ಸಂಸ್ಥಾನದ ಅಭಯಲಕ್ಷ್ಮಿನೃಸಿಂಹ ದೇವಸ್ಥಾನದ ಧರ್ಮದರ್ಶಿ ಹಾದಿಗಲ್ಲು ಲಕ್ಷ್ಮೀನಾರಾಯಣ ಅವರು ಈ ಪರಿಕಲ್ಪನೆಗೆ ರೂಪ ನೀಡಿದ್ದು, ಕೃಷಿ ಪ್ರಯೋಗ ಪರಿವಾರದ ಕಾರ್ಯಕರ್ತರು ಹಾಗೂ ಅನೇಕ ಸಾವಯವ ಕೃಷಿಕರು ಇದರ ಅನುಷ್ಠಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕೃಷಿಪ್ರಯೋಗ ಪರಿವಾರದ ಸದಸ್ಯರಾದ ಸರು ದಿನೇಶ್,ಅರುಣ, ಚಕೋಡಬೈಲ್ ಶ್ರೀವತ್ಸ, ಆ.ಶ್ರೀ. ಆನಂದ, ಕಾರ್ಕಳದ ಶ್ರೀನಿವಾಸ ಭಟ್ ಇರ್ವತ್ತೂರು ಈ ಅಭಿಯಾನದ ಯಶಸ್ಸಿಗೆ ಕೈಜೋಡಿಸಿದ್ದಾರೆ.

ಸಾವಯವ ಕೃಷಿ ಚಳವಳಿಗೆ ಅಡಿಪಾಯ ಹಾಕಿದ್ದ ಕೃಷಿ ಋಷಿ ಪುರುಷೋತ್ತಮ ರಾವ್ ಅವರ ಕನಸಿನ ಫಲವಾಗಿ ಬೆಳೆದ ಕೃಷಿ ಪ್ರಯೋಗ ಪರಿವಾರ ಮತ್ತು ಪುರುಷೋತ್ತಮ ರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನವು ಅಪರೂಪದ ಭತ್ತದ ತಳಿಗಳ ಸಂರಕ್ಷಣೆ ಮತ್ತು ಸಾವಯವ ಕೃಷಿಯ ವಿಸ್ತರಣೆಯಲ್ಲಿ ತೊಡಗಿಕೊಂಡಿದ್ದು ಈ ಅಭಿಯಾನ ಅವರ ಕನಸಿಗೆ ಮತ್ತೊಂದು ಆಯಾಮವನ್ನು ನೀಡಿದೆ.

ಭತ್ತದ ಕೃಷಿ ಆಹಾರ ಉತ್ಪಾದನೆಗಷ್ಟೇ ಸೀಮಿತವಾದುದಲ್ಲ. ಅದು ನಮ್ಮ ಸಂಸ್ಕೃತಿ, ಜೀವನ ಪದ್ಧತಿಯ ಪ್ರತೀಕವಾಗಿದೆ. “ಗದ್ದೆಯಿಂದ ಗರ್ಭಗುಡಿಗೆ” ಎಂಬ ಈ ಅಭಿಯಾನವು ಸಾವಯವ ಕೃಷಿಗೆ ಉತ್ತೇಜನ ನೀಡುವುದರ ಜೊತೆಗೆ ಅಪರೂಪದ ಭತ್ತದ ತಳಿಗಳು ಮರು ಚೈತನ್ಯ ಪಡೆಯಲಿವೆ. ಈ ಪರಿಕಲ್ಪನೆಯಡಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ನೀಡಬಹುದು. ಒಂದು ಎಕ್ರೆ ಭತ್ತ ಬೆಳೆಯುವ ಖರ್ಚುವೆಚ್ಚಗಳನ್ನು ಭರಿಸುವ ಪ್ರಯೋಜಕತ್ವವನ್ನು ವಹಿಸಿಕೊಳ್ಳಬಹುದು.

ಬರಹ: ರಾಧಾಕೃಷ್ಣ ತೊಡಿಕಾನ

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group