spot_img
Sunday, December 8, 2024
spot_imgspot_img
spot_img
spot_img

ಭೂಮಿಯ ಒಡೆಯ ಅನ್ನದಾತನಿಗೊಂದು ಸಲಾಂ..!!

 

 

 

 

#ಪ್ರಬಂಧ ಅಂಬುತೀರ್ಥ

ನಾನು ಒಬ್ಬ ಅಡಿಕೆ ಬೆಳೆಗಾರ,ಕೃಷಿಕ. ಆದರೆ ನಾನು ಅನ್ನದಾತ ಅಥವಾ ನೇಗಿಲ ಯೋಗಿ ಅಲ್ಲ.
ಯಾರು ಅನ್ನದಾತ..?
ಕಳೆದ ಮೂವತ್ತು ವರ್ಷಗಳಿಂದ ನಮ್ಮ ನಾಡಿನೆಲ್ಲೆಡೆ ನೇಗಲಯೋಗಿ ಅನ್ನದಾತ ನಷ್ಟ ದಲ್ಲೇ ಭತ್ತ ಬೆಳೆಯುತ್ತಿದ್ದ. ಪ್ರತಿ ಕೆಜಿ ಭತ್ತವನ್ನು ನಷ್ಟದಲ್ಲೇ ಬೆಳೆಯುತ್ತಿದ್ದ. ಕಿಲೋ ಭತ್ತಕ್ಕೆ ಐವತ್ತು ರೂಪಾಯಿಯಿಂದ ಅರವತ್ತು ರೂಪಾಯಿ ಖರ್ಚು ಮಾಡಿ,ಹದಿನೈದು ರೂಪಾಯಿಯಿಂದ ಇಪ್ಪತ್ತು ರೂಪಾಯಿ ಮಾತ್ರ ಪಡೆದುಕೊಳ್ಳುತ್ತಿದ್ದ. ನಾನು ನೋಡಿದ ಹಾಗೆ ಕಳೆದ ವರ್ಷ ಮಾತ್ರ ಭತ್ತ ಕ್ವಿಂಟಾಲ್ ಗೆ ನಾಲ್ಕು-ಐದು ಸಾವಿರ ರೂಪಾಯಿಗಳ ದೊಡ್ಡ ಮೊತ್ತದ ಲಾಭ ನೋಡಿದ್ದು.
ತಮಿಳುನಾಡಿನ ಕಾವೇರಿ ಹರಿವಿನ ಭತ್ತದ ಕಣಿವೆ,ಕರ್ನಾಟಕದ ಗಂಗಾವತಿಯ ಭತ್ತದ ವಲಯ , ಆಂಧ್ರ, ಪಂಜಾಬ್ ಇತರೆ ರಾಜ್ಯದ ನದಿ ಮುಖಜ ಭೂಮಿಯಲ್ಲಿ ಭತ್ತವನ್ನು ವರ್ಷಕ್ಕೆ ಎರಡು-ಮೂರು ಬೆಳೆಯನ್ನು ಹೆಚ್ಚಿನ ಇಳುವರಿಯಲ್ಲಿ ಬೆಳೆದು ಬರೀ ಭತ್ತದ ಬೆಳೆಯಲ್ಲೇ ಲಾಭದಾಯಕ ಜೀವನ ನೆಡೆಸುವ ರೈತರಿದ್ದಾರೆ‌ . ಆದರೆ ಅವರಿಗೂ ಅಡಿಕೆಯಂತಹ ಕಮರ್ಷಿಯಲ್ ಬೆಳೆಯ ಎಕರೆವಾರು ಆದಾಯದೊಂದಿಗೆ ಹೋಲಿಸಿದರೆ ಖಂಡಿತವಾಗಿಯೂ ಆ ಮಟ್ಟದ ಲಾಭವಿಲ್ಲ.
ಆದರೆ ನಮ್ಮ ಮಲೆನಾಡು-ಕರಾವಳಿ ಮತ್ತು ಸುತ್ತ ಮುತ್ತಲಿನ ಪ್ರದೇಶದಲ್ಲಿ ಅನೇಕ ರೈತರು ಪ್ರಕೃತಿ ವಿಕೋಪ, ಕೂಲಿ ಕಾರ್ಮಿಕರ ಕೊರತೆ ಮತ್ತು ಹಾಕಿದ ಬಂಡವಾಳದ ಹೂಡಿಕೆಗಿಂತ ಹಲವಾರು ಪಟ್ಟು ನಷ್ಟ ಆಗುತ್ತದೆ ಎಂದು ಗೊತ್ತಿದ್ದೂ ನಾವು ರೈತರು, ಒಕ್ಕಲುತನ ನಮ್ಮ ಜೀವ -ಜೀವನ , ನಮ್ಮ ಹಕ್ಕು ನಾವು ಭತ್ತ ಬೆಳೆಯಲೇಬೇಕು ಎಂದು ನಷ್ಟದಲ್ಲೂ ಭತ್ತ ಬೆಳೆವ ರೈತರು ನಿಜವಾದ ಅನ್ನದಾತರು ಮತ್ತು ನೇಗಿಲಯೋಗಿಗಳು..
ನಮ್ಮ ಮಲೆನಾಡು-ಕರಾವಳಿ ಮತ್ತು ಸುತ್ತ ಮುತ್ತಲಿನ ರೈತರು ಅಡಿಕೆ ಬೆಲೆ – ಬೆಳೆ ಅಬ್ಬರದ ನಡುವೆಯೂ ಭತ್ತ ಬೆಳೆವ ಪೂಜ್ಯನೀಯ “ಭಾವನಾತ್ಮಕತೆಯ ” ಕಾರಣದಿಂದ ಭತ್ತ ಬೆಳೆಯುವ ಕಾರಣಕ್ಕಾಗಿ ಈ ಭಾಗದ ಲಕ್ಷಾಂತರ ಗೋವುಗಳು ಉಳಿದಿದೆ.. ಸರ್ಕಾರದ ಅನ್ನಭಾಗ್ಯದ ಅಕ್ಕಿ ಸಿಗುವ ಮೊದಲು ಕೋಟ್ಯಾಂತರ ಜನರಿಗೆ ಕೊಂಡು ಉಣ್ಣುವ,ಬಜೆಟ್ ಸ್ನೇಹಿ,ಜೇಬು ಸುಡದಷ್ಟು ದರದಲ್ಲಿ ಅಕ್ಕಿ ಈ ಭಾಗದ ರೈತರ ಬೆವರ ಶ್ರಮದಿಂದ ಲಭ್ಯವಾಗುತ್ತಿತ್ತು. ಈ ಅನ್ನದಾತರಿಗೆ ಅನ್ನ ಉಣ್ಣುವ ಪ್ರತಿಯೊಬ್ಬರೂ ಕೃತಜ್ಞತೆ ಸಲ್ಲಿಸಬೇಕು..
ಅನ್ನದಾತೋ ಸುಖೀಭವ.. ಎಂದು ಅನ್ನ ಉಂಡವರು ಹರಿಸಲು ಇಂತಹ ನೂರು ಕಾರಣಗಳಿವೆ..
ಕೆಲವೊಮ್ಮೆ ಭತ್ತದ ಬೀಜ ಬಿತ್ತಿ ಸಸಿ ಮಾಡಲು ಅಗೇಡಿ ಸಿದ್ದ ಮಾಡಲು ನೀರು ಇರದು.. ಸಸಿ ಬಂದು ನೆಡುವ ಅವಧಿ ಮುಗಿಯುತ್ತಾ ಬಂದರೂ ಮಳೆಬಾರದು..ಗದ್ದೆ ನೆಟ್ಟು ಹೊಡೆ ಬರುವ ಸಮಯದಲ್ಲಿ ಮಳೆ ಕೈ ಕೊಟ್ಟು ಗದ್ದೆ ಕುಗರ ತೊಡಗುತ್ತದೆ..ನೀರಿನ ಕೊರತೆ ,ಮಿಡತೆಯ ಕಾಟ..ಗದ್ದೆ ಚಿಪ್ಪು ಒಡೆದು ಆಗಸದತ್ತ ಮುಖ ಮಾಡುತ್ತಿರುವಾಗಲೇ ಕಾಡು ಪ್ರಾಣಿಗಳ ಹಾವಳಿ ಶುರುವಾಗುತ್ತದೆ..ಗದ್ದೆ ನೆಟ್ಟ ಒಂದು ತಿಂಗಳ ನಂತರ ಮಲೆನಾಡಿನ ಕೆಲವು ಕಡೆಯಲ್ಲಿ ಗದ್ದೆಯಲ್ಲೇ ಹಕ್ಕೆ ಮನೆ ಮಾಡಿ ರಾತ್ರಿ ಗದ್ದೆಗೆ ದಾಳಿ ಮಾಡುವ ಕಾಡು ಹಂದಿಗಳ ಕಾಯಬೇಕು..ಈ ಕಾಡು ಹಂದಿಗಳನ್ನಾದರೂ ಸೋಲಾರ್ ಬೇಲಿಗಳಿಂದ ತಡೆ ಮಾಡಬಹುದು. ಆದರೆ ಮಂಗಗಳ ಕಾಟದಿಂದ ಭತ್ತ ಉಳಿಸಿಕೊಳ್ಳಲು ಭತ್ತದ ಬೆಳೆಗಾರ ಕೊನೆಯಲ್ಲಿ ಭತ್ತದ ಮೂಟೆ ಮಾಡಿ ಮನೆಯ ಗೋದಾಮು ಸೇರಿಸುವ ತನಕವೂ ಹೋರಾಟ ಮಾಡಬೇಕು..
ನಮ್ಮ ಮಲೆನಾಡಿನ ಅನೇಕ ಕಡೆಗಳಲ್ಲಿ ಗದ್ದೆ ಬೇಸಾಯ ಮಾಡುವುದನ್ನು ಅನ್ನದಾತ ರೈತ ಮಿತ್ರರು ಸಂಪೂರ್ಣ ಬಿಟ್ಟರೆ ಸುತ್ತ ಮುತ್ತಲಿನ ಅಡಿಕೆ ಬೆಳೆಗಾರರು ಅಡಿಕೆ ಬೆಳೆಯನ್ನು ಉಳಿಸಿಕೊಳ್ಳಲು ಹೆಣಗಾಡಬೇಕಾಗುತ್ತದೆ. ಸುತ್ತ ಮುತ್ತಲಿನ ಪ್ರದೇಶದಲ್ಲಿ ಭತ್ತದ ಬೆಳೆ ಇದ್ದರೆ ಅಡಿಕೆ ರಸ ತುಂಬುವ ಸಮಯದಲ್ಲಿ ಮಂಗಗಳ ಅಡಿಕೆಯ ಮೇಲೆ ದಾಳಿ ಮಾಡುವುದು ಸ್ವಲ್ಪಮಟ್ಟಿಗೆ ತಡೆಯಾಗುತ್ತದೆ.ಈಗ ಭತ್ತದ ಬೆಳೆ ಬಹುತೇಕ ಯಾಂತ್ರಿಕ ವಾಗಿ ಒಂದಷ್ಟು ಸಮಸ್ಯೆ ಕಡಿಮೆಯಾದರೂ ಭತ್ತ ಕೊಯ್ಲಿಗೆ ಬಂದಾಗ ಮಳೆ ಬಂದರೆ ತೀರಾ ಅಪಾಯ.ಕೆಲವು ಚಿಕ್ಕ ಚಿಕ್ಕ ಭತ್ತದ ಗದ್ದೆಯಲ್ಲಿ ಭತ್ತ ಬೆಳೆವ ಭತ್ತದ ಬೆಳೆಗಾರರು ಭತ್ತ ಕೊಯ್ಲು ಮಾಡಲು ಕಾರ್ಮಿಕರನ್ನು ಒಟ್ಟು ಮಾಡಲು ಪಡಿಪಾಟಿಲು ಪಡುವುದು ಅತ್ಯಂತ ಕಷ್ಟ.
ಅನೇಕ ಸರ್ತಿ ಭತ್ತ ಕೊಯ್ಲು ಮಾಡಿ ದಡಿ ಒಣಗಲು ಬಿಟ್ಟು ಎರಡು ದಿನ ಬಿಟ್ಟಾಗಲೇ ದಿಢೀರಾಗಿ ಮಳೆ ಬಂದರೆ ಒಂದು ಸೀಝನ್ ಭತ್ತ ಬೆಳೆಯಲು ರೈತ ಪಟ್ಟ ಶ್ತಮ ನೀರಿನಲ್ಲಿ ಹೋಮ..ಭತ್ತದ ಕೊಯ್ಲಿನ‌ ಸಂದರ್ಭದಲ್ಲಿ ರೈತನ ದುಗುಡ ಆತಂಕಗಳು ಮೇರೆ ಮೀರಿರುತ್ತದೆ. ಭತ್ತ ಒಣಹುಲ್ಲನ್ನ ಅಕಾಲಿಕ ಮಳೆಯ ನಡುವೆ ಹಾಳಾಗದಂತೆ ಉಳಿಸಿಕೊಳ್ಳುವ ಹೋರಾಟದಲ್ಲಿ ರೈತ ಕಂಗಾಲಾಗಿರುತ್ತಾನೆ.ಇಷ್ಟೆಲ್ಲಾ ಶ್ರಮ ಪಟ್ಟ ರೈತ ತನಗೆ ಸಾಕಾಗಿ ಉಳಿದ ಭತ್ತ ಮತ್ತು ಒಣಹುಲ್ಲನ್ನು ಮಾರುಕಟ್ಟೆದಾರ ಕೊಟ್ಟ ಬೆಲೆಗೆ ಮಾರಿ ತೃಪ್ತಿ ಪಡೆಯಬೇಕು.
ಆದರೆ ಇತ್ತೀಚಿನ ವರ್ಷಗಳಲ್ಲಿ ಭತ್ತದ ಹುಲ್ಲಿಗೆ ಕೊಂಚ ತೃಪ್ತಿದಾಯಕ ಬೆಲೆ ಬಂದಿದೆ. ಈ ತೃಪ್ತಿದಾಯಕ ಬೆಲೆ ಪಾಪದ ಅನುತ್ಪಾದಕ ಎಂಬ ಹಣಪಟ್ಟಿಯ ಮಲೆನಾಡು ಗಿಡ್ಡ ತಳಿಗಳ ಹೊಟ್ಟೆಯ ಮೇಲೆ ಹೊಡೆದು ಮಲೆನಾಡು ಗಿಡ್ಡ ಸಾಕಲು ಗೋ-ಪಾಲಕರಿಗೆ ನಷ್ಟವಾಗಿ ಗೋ-ಪಾಲಕರು ಮಲೆನಾಡು ಗಿಡ್ಡ ಸಿಕ್ಕ ಸಿಕ್ಕವರಿಗೆ ಮಾರುವಂತಾದದ್ದು ದುರ್ಭಾಗ್ಯವೇ ಸರಿ. ಆದರೆ ಇದರ ನಡುವೆಯೂ ಒಂದಷ್ಟು ದೇಸಿ ಹಸುಗಳಿಗೆ ಮಲೆನಾಡು ಕರಾವಳಿಯ ರೈತ ಭತ್ತ ಬೆಳೆಗಾರರಿಂದ ಮೇವು ಲಭ್ಯವಾಗುತ್ತಿದೆ.ಈಗಲೂ ಅನೇಕ ಊರುಗಳಲ್ಲಿ ವಿಸ್ತಾರ ವಾದ ಭತ್ತದ ಗದ್ದೆ ಬಯಲಿನ ಕಾರಣ ಒಂದಷ್ಟು ಗೋವುಗಳಿಗೆ ಮೇವು ಲಭ್ಯ ವಾಗುತ್ತಿದೆ.
ಒಂದು ಕಾಲದಲ್ಲಿ ನಮ್ಮ ಮಲೆನಾಡಿನಲ್ಲಿ ಕಂದಕದ ಕಣಿವೆಯ ನಡುವೆ ಮಾತ್ರ ನೆಲೆಗೊಂಡಿದ್ದ ಅಡಿಕೆ ಬೆಳೆ ಇಂದು ನೀರಾವರಿ ಕ್ರಾಂತಿಯಿಂದ ಮಲೆನಾಡಿನ ಗುಡ್ಡ ಬೆಟ್ಟ ಬಯಲು ಬ್ಯಾಣ ಕಾಡು ಎಲ್ಲವನ್ನೂ ಆಹುತಿ ತೆಗೆದುಕೊಂಡಿದೆ. ಈ ಆಹುತಿಯ ಆಸ್ವಾದನೆಯಲ್ಲಿ ಮಲೆನಾಡಿನ ಬೃಹತ್ ನೀರಿಂಗಿಸುವ ಟ್ಯಾಂಕ್ ಆಗಿದ್ದ ಸಮೃದ್ಧ ಭತ್ತದ ಗದ್ದೆಯನ್ನು ಆಹುತಿ ಮಾಡಿಕೊಂಡು ಅಡಿಕೆ ತೋಟವಾಗಿ ಪರಿವರ್ತನೆ ಮಾಡಿಕೊಂಡಾಗಿದೆ.
ಇದರ ದುಷ್ಪರಿಣಾಮ ನೇರವಾಗಿ ಮಲೆನಾಡಿನ ಅಂತರ್ಜಲದ ಮೇಲಾಗಿದೆ.ಏಪ್ರಿಲ್ ತಿಂಗಳ ನಂತರ ಬಹುತೇಕ ಯಾವುದೇ ಬಾವಿಯಲ್ಲೂ ನೀರಿಲ್ಲ.ಮಲೆನಾಡಿನಲ್ಲಿ ಇಂದು ಕುಡಿಯುವ ನೀರಿಗೂ ಬೋರ್ ವೆಲ್ ಆಶ್ರಯ ಎನ್ನುವುದು ಅತ್ಯಂತ ವಿಷಾದನೀಯ ಸಂಗತಿ. ಭತ್ತ ಬೆಳೆವುದನ್ನು ಬಿಟ್ಟು ಒಕ್ಕಲು ತನದ ಭೂಮಿಯ ಜೊತೆಗಿನ ಬಾಂಧವ್ಯ ಕಳೆದುಕೊಂಡ ಅನ್ನದಾತ ಇಂದು ಗುಟ್ಕಾದಾತ ಮಾತ್ರ.
ನಾವು ಅಡಿಕೆ ಬೆಳೆಗಾರರು ಖಂಡಿತವಾಗಿಯೂ ಭತ್ತ ಬೆಳೆವ ಭಾವನಾತ್ಮಕ ಅನ್ನದಾತ ರೈತನಂತೆ ನಷ್ಟ ಮಾಡಿಕೊಂಡು ಅಡಿಕೆ ಬೆಳೆಯುತ್ತೀವ..?ಮಲೆನಾಡು ಕರಾವಳಿಯ ನೇಗಿಲಯೋಗಿ ಅನ್ನದಾತರು ಸಂಪೂರ್ಣವಾಗಿ ಭತ್ತ ಬೆಳೆಯುವುದರಿಂದ ಹಿಂದೆ ಸರಿದರೆ ಖಂಡಿತವಾಗಿಯೂ ಮಲೆನಾಡು ಸಂಪೂರ್ಣ ಬರನಾಡು ಆಗುವುದರಲ್ಲಿ ಸಂಶಯವಿಲ್ಲ..
ಭತ್ತಕ್ಕೆ ನ್ಯಾಯಯುತ ಬೆಲೆ ಬರಲಿ..
ಭತ್ತ ಬೆಳೆಗಾರನಿಗೆ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಆಗುವ ನಷ್ಟ ಕ್ಕೆ ಸರ್ಕಾರ ನ್ಯಾಯಯುತ ಪರಿಹಾರ ನೀಡಲಿ..ಭತ್ತ ಬೆಳೆಯುವ ರೈತರಿಗೆ ಕೃಷಿ ಇಲಾಖೆ ಪ್ರತಿ ಎಕರೆ ಇಷ್ಟು ಎಂಬಂತೆ ಪ್ರೋತ್ಸಾಹ ಧನ ನೀಡಲಿ..ಸಮಾಜ ಸಾವಯವ ಭತ್ತದ ಕೃಷಿಯನ್ನು ಪ್ರೋತ್ಸಾಹಿಸಿ,ಉತ್ತಮ ಬೆಲೆ ಕೊಟ್ಟು ಭತ್ತದ ಬೆಳೆಯನ್ನು ಕೊಂಡು ಭತ್ತ ಬೆಳೆವ  ಬೆಳೆಗಾರರ ಚೈತನ್ಯ ಹೆಚ್ಚಿಸುವ ಕೆಲಸ ಆಗಬೇಕಿದೆ.ಇವತ್ತು ನಮ್ಮ ನಡುವಿನ ಮುಕ್ಕಾಲು ಪಾಲು ಜನ ಮಿಲ್ ಅಕ್ಕಿ,ಅಂಗಡಿಯಲ್ಲಿ ರೆಡಿ ಮೇಡ್ ಅಕ್ಕಿ ಕೊಂಡರೆ ಎಷ್ಟೇ ಚೆನ್ನಾಗಿದೆ ಎಂದರೂ ಅಕ್ಕಿ ಮಾರಾಟಗಾರ ಪಾಲೀಷ್ ಅಕ್ಕಿ ಬೆರಸಿ ಬೆರಕೆ ಅಕ್ಕಿಯನ್ನೇ ಗ್ರಾಹಕರಿಗೆ ಮಾರಾಟ ಮಾಡುವುದು. ಮಧುಮೇಹಿಗಳು ಪಾಲೀಷ್ ಇಲ್ಲದ ಅಕ್ಕಿ ಬಳಸಿ ಅನ್ನ ಮಾಡಿ ಉಂಡರೆ ಮಧುಮೇಹ ನಿಯಂತ್ರಣ ಸಾಧ್ಯ.ನಮ್ಮ ಮಲೆನಾಡಿಗನೇಕರಿಗೆ ಇತ್ತೀಚಿನ ವರ್ಷಗಳಲ್ಲಿ ಸ್ವಂತ ಭತ್ತ ಬೆಳೆಯುವುದನ್ನು ಬಿಟ್ಟು ಮಾರುಕಟ್ಟೆಯಲ್ಲಿ ರೆಡಿಮೇಡ್ ಅಕ್ಕಿ ಕೊಂಡು ಮನೆಗೆ ತಂದು ಅನ್ನ ಮಾಡಿ ಉಣ್ಣುವಾಗ ಸ್ವಂತ ಭತ್ತ ಬೆಳೆದು ಅಕ್ಕಿ ಮಾಡಿಸಿ ಉಣ್ಣುವ ಬೆಲೆ ಏನೆಂದು ಅರ್ಥ ವಾಗುತ್ತಿದೆ.
ಎಷ್ಟೇ ದುಡ್ಡು ಕೊಟ್ಟರೂ ರೆಡಿಮೇಡ್ ಅಕ್ಕಿ ಉತ್ತಮವಲ್ಲ‌ . ಭತ್ತ ಕೊಳ್ಳವವರು ನೇರವಾಗಿ ಭತ್ತದ ಬೆಳೆಗಾರ ಉತ್ತಮ ಗುಣಮಟ್ಟದ ಭತ್ತ ಕೊಟ್ಟರೆ ಅದೃಷ್ಟ..ಯಾವಾಗ ನಾವು ರೈತರು ನಮ್ಮ ಅವಶ್ಯಕತೆಯ ಕೃಷಿ ಉತ್ಪನ್ನವನ್ನು ಮಾರುಕಟ್ಟೆಯಿಂದ ಕೊಳ್ಳಲು ಆರಂಭಿಸುತ್ತೀವೋ ಆಗಿನಿಂದ ಸ್ವತಃ ಕೃಷಿಕರಾಗಿ ನಮಗೆ ಸ್ವಯಂ ಕೃಷಿಯ ಮಹತ್ವ ಅರಿವಿಗೆ ಬರುತ್ತದೆ.
ನಾವ್ಯಾರೂ ತರಕಾರಿ ಬೆಳೆಯೋಲ್ಲ..
ವಾರ ವಾರವೂ ಪಟ್ಟಣದ ಸಂತೆ ಗ್ರಾಹಕರಿಂದ ಕಿಕ್ಕಿರಿಯುತ್ತದೆ.. ಸಂಪೂರ್ಣ ರಾಸಾಯನಿಕಯುಕ್ತ ಅನಾರೋಗ್ಯಕರ ತರಕಾರಿ ಕೊಂಡು ತಿಂದು ಅನಾರೋಗ್ಯ ಪಡೆಯುತ್ತೀವಿ.ಮನೆ ಖರ್ಚಿಗಾಗುವಷ್ಟಾದರೂ ಬೆಲ್ಲವನ್ನು ನಾವು ಉತ್ಪಾದನೆ ಮಾಡಿಕೊಳ್ಳುತ್ತಿದ್ದೆವು..ಈಗ ನಾವು ಬೆಲ್ಲ ತಯಾರು ಮಾಡೊಲ್ಲ. ಮಾರುಕಟ್ಟೆಯ ಸುಣ್ಣದ ಸಕ್ಕರೆಯ ಬೆಲ್ಲಕೊಂಡು ತಂದು ಕೃತಾರ್ಥರಾಗುತ್ತಿದ್ದೇವೆ..ನಮ್ಮ ಸರ್ಕಾರದ ನೀತಿಗಳು, ಮಾರುಕಟ್ಟೆ ವ್ಯವಸ್ಥೆ, ಹವಾಮಾನ, ಕಾಡು ಪ್ರಾಣಿಗಳ ಹಾವಳಿ, ಕೂಲಿ ಕಾರ್ಮಿಕರ ಕೊರತೆ ಇತ್ಯಾದಿ ವಿಚಾರಗಳು ಈ ದೇಶದ ಕೃಷಿಯನ್ನು ಕೊಲ್ಲುತ್ತಿದೆ.
ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್ ರವರು ನಮ್ಮ ದೇಶದ ಕೃಷಿ ಅವಲಂಬನೆಯನ್ನು ನಲವತ್ತೈದು ಪ್ರತಿಶತದಿಂದ ಐದು ಪ್ರತಿಶತಕ್ಕೆ ಇಳಿಸಬೇಕು ಎಂದು ಹೇಳಿಕೆ ನೀಡಿದ್ದರು. ಅವರೇಕೆ ಹಾಗೆಂದಿದ್ದರು ಎಂದರೆ ಜಾಗತೀಕರಣವಾದ ಮೇಲೆ ಮುಕ್ತ ಕೃಷಿ ಅನಿವಾರ್ಯತೆಯ ಕಾರಣದಿಂದಾಗಿ ಇಡೀ ಪ್ರಪಂಚದ ಕೃಷಿ ಭೂಮಿಯಲ್ಲಿ ಬೆಳೆ ಇಳುವರಿ ಭಾರತದ ಕೃಷಿ ಮತ್ತು ಕೃಷಿಕನ ಬದುಕಿನ ಮೇಲಾಗುತ್ತಿದೆ. ಭಾರತೀಯ ಕೃಷಿ ಮಾರುಕಟ್ಟೆಗಳು ಇದೀಗ ಬಹುತೇಕ ಕೃಷಿ ಉತ್ಪನ್ನಗಳಿಗೆ ಕೇವಲ ಭಾರತೀಯ ಕೃಷಿಕರ ಮೇಲೆ ನೆಚ್ಚಿಕೊಂಡಿಲ್ಲ..!!
ಎಲ್ಲೋ ದೂರದ ಬ್ರೆಜಿಲ್ ನಲ್ಲಿ ಅತಿ ಹೆಚ್ಚು ಕಾಫಿ ಇಳುವರಿ ಬಂದರೆ ಇಲ್ಲಿ ಮಲೆನಾಡಿನ ಕೊಡಗು ಚಿಕ್ಕಮಗಳೂರಿನ ಕಾಫಿ ಬೆಳೆಗಾರನ ಉತ್ಪತ್ತಿಯ ಮೇಲೆ ಪ್ರಹಾರವಾಗುತ್ತದೆ. ಮಲೇಷಿಯಾ, ಥಾಯ್ಲಾಂಡ್, ಶ್ರೀಲಂಕಾದ ಹೆಚ್ಚುವರಿ ಅಡಿಕೆ ಮಲೆನಾಡು, ಬಯಲು ಸೀಮೆಯ ಅಡಿಕೆ ಬೆಳೆಗಾರರ ಆರ್ಥಿಕತೆಯ ಮೇಲೆ ಹೊಡೆತ ನೀಡುತ್ತದೆ. ‌ಅಲ್ಲೆಲ್ಲೋ ದಕ್ಷಿಣ ಆಫ್ರಿಕಾದ ಭತ್ತದ ಬೆಳೆ ನಮ್ಮ ಗಂಗಾವತಿ ಭತ್ತದ ಬೆಳೆಗಾರನ ಶ್ರಮಕ್ಕೆ ಪೆಟ್ಟು ನೀಡುತ್ತದೆ..
 ಜಾಗತಿಕರಣದ ನಂತರದ ವರ್ಷಗಳಲ್ಲಿ ಯಾವುದೇ ರೈತರೂ “ನಾವಿಲ್ಲದೇ ಜಗತ್ತಿಲ್ಲ ” ಎಂಬ ಭಾವ ಮಾಡಿಸಿಕೊಳ್ಳಲು ಸಾಧ್ಯವಿಲ್ಲ. ಇವತ್ತು ಕೃಷಿ-ಕೃಷಿಕರು ಅನಿವಾರ್ಯವಲ್ಲ ಎನ್ನುವ ಸ್ಥಿತಿಗೆ ಬಂದಿದೆ. ಕೃಷಿಯಲ್ಲಿ ಬಹುತೇಕ ಯಾಂತ್ರಿಕತೆ ಮತ್ತು ಭಾವನಾತ್ಮಕತೆಯ ಸುತ್ತ ವ್ಯವಸ್ಥೆಯ ಕಾರಣ ನಿಜವಾದ ಅನ್ನದಾತರೂ ನಾವು ರೈತರು,ನಾವು ಅನ್ನದಾತರು ಎಂಬ ಹೆಮ್ಮೆ ಪಡುವ ಹಾಗಿಲ್ಲ. ಭಾರತೀಯರಂತೂ ಹಾಗೆ ಅಹಂ ಮೂಡಿಸಿಕೊಳ್ಳುವ ಹಾಗಿಲ್ಲ..!!
ಜಾಗತಿಕ ಬಂಡವಾಳಷಾಹಿ ಕಂಪನಿಗಳು ಇಡೀ ಭಾರತದಲ್ಲಿ ಉಳಿದಿರುವ ಏಕೈಕ “ಭಾರತೀಯತೆಯಾದ ಕೃಷಿ”ಯನ್ನೂ ಆಪೋಷಣ ತೆಗೆದುಕೊಳ್ಳುವತ್ತ ಸಾಗುತ್ತಿರುವುದಂತೂ ನಿಚ್ಚಳ..ಈ ಎಲ್ಲಾ ಹೋರಾಟ ಗೊಂದಲಗಳ ನಡುವೆ ಸಮಸ್ತ ಭಾರತೀಯರಿಗಾಗಿ ಭತ್ತ, ರಾಗಿ,ಜೋಳ,ಗೋಧಿ, ಸಿರಿಧಾನ್ಯಗಳ ಬೆಳೆವ ನಿಜವಾದ “ಅನ್ನದಾತ” ರಿಗೆ ನಮೋ ನಮಃ..
spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group