spot_img
Tuesday, September 17, 2024
spot_imgspot_img
spot_img
spot_img

ಕೃಷಿಯ ಹಸಿರಿಗೆ ಉಸಿರು ನೀಡುವ “ನರ್ಸರಿ”:ತರಹೇವಾರಿ ನರ್ಸರಿಗಳ ಬಗ್ಗೆ ಒಂದಷ್ಟು ತಿಳಿದುಕೊಳ್ಳೋಣ

ಮತ್ತೆ ಮಳೆಗಾಲ ಶುರುವಾಗಿದೆ.ನೀರಿನಿಂದ ಸಮೃದ್ಧವಾಗುತ್ತಿರುವ ಭೂಮಿ ನೋಡಿದರೆ ಹೂವು ಹಣ್ಣು, ಔಷದೀಯ ಗಿಡಗಳನ್ನು ನೆಡುವ ಆಸೆಯಾಗುತ್ತದೆ. ಆಗ ನೆನಪಾಗುವುದೇ ನರ್ಸರಿ. ಸಾಲಾಗಿ ಗಿಡಗಳ ಹೆಸರುಗಳ ಜೊತೆಗೆ ನರ್ಸರಿಗಳಲ್ಲಿ ಓರಣವಾಗಿಟ್ಟಿರುವ ಗಿಡಗಳಿಗೆ,
ಬಾಳೆ, ಅಡಿಕೆ, ತೆಂಗು ಮೊದಲಾದ ಸಸಿಗಳಿಗೆ ಮಳೆಗಾಲ ಬಂದರೆ ನಿಜವಾದ ಜೀವ ಬರುತ್ತದೆ. ಸಪೋಟ, ಸೀತಾಫಲ, ರಾಮಫಲ, ರಂಬುಟಾನ್ ಮೊದಲಾದ ಹಣ್ಣಿನ ಗಿಡಗಳು ನರ್ಸರಿಗಳಲ್ಲಿ  ಕಂಗೊಳಿಸುತ್ತಿರುವುದನ್ನು ನೋಡುವುದೇ ಒಂದು ಚೆಂದ. ನರ್ಸರಿ ಎಂದರೆ ಹಾಗೇ ಅದು ನಮ್ಮುಸಿರಿನ ತುಂಬಾ ಹಸಿರ ಪ್ರೀತಿಯನ್ನು ಹೊಮ್ಮಿಸುತ್ತದೆ.

ಮಣ್ಣಿನೊಂದಿಗೆ ಕಳೆದುಹೋಗಲು, ಗಿಡಗಳನ್ನು ಪ್ರೀತಿಯಿಂದ ಕಂಡರೆ ನಿಜಕ್ಕೂ ಫಲ ಸಿಗುತ್ತದೆ ಎನ್ನುವ ಸಂದೇಶವನ್ನು ನಮಗೆ ನೀಡುತ್ತದೆ. ಹಸಿರಿನ ಕೇಂದ್ರ ಅಂದರೆ ಅದು ನರ್ಸರಿ. ತೋಟಗಾರಿಕಾ ಬೆಳೆಗಳು, ಅರಣ್ಯದ ಗಿಡಗಳು, ಔಷಧಿಯ ಗಿಡ ಬಳ್ಳಿಗಳು, ವಿವಿಧ ಫಲ, ಪುಷ್ಪ, ಅಲಂಕಾರಿಕ ಗಿಡಗಳನ್ನು ಸಮೃದ್ಧವಾಗಿ ನಮಗೆ ಒದಗಿಸಿಕೊಡುತ್ತವೆ  ನರ್ಸರಿಗಳು. ನಗರದಲ್ಲಿ ಪುಟ್ಟ ಜಾಗ ಹೊಂದಿರುವವರಿಗೂ, ಗ್ರಾಮೀಣ ಭಾಗಗಳಲ್ಲಿ ದೊಡ್ಡಮಟ್ಟದಲ್ಲಿ ಭೂಮಿ ಹೊಂದಿರುವವರಿಗೂ ನರ್ಸರಿ ವಿಧ ವಿಧ ಗಿಡಗಳನ್ನು ಒದಗಿಸಿ ಕೃಷಿ ಪ್ರೀತಿ ಮೂಡಿಸಿದೆ. ನರ್ಸರಿಯಿಂದ ಒಂದಷ್ಟು ಗಿಡಗಳನ್ನು ತಂದು ಪುಟ್ಟ ಜಾಗದಲ್ಲಿ ನೆಟ್ಟು ಬೆಳೆಸಿ, ಅದನ್ನು ಪ್ರೀತಿಯಿಂದ ಆರೈಕೆ ಮಾಡಿ ಅದು ಫಲ ಕೊಟ್ಟಾಗ ಹಿಗ್ಗಿ, ಮುಂದಿನ ಸಲ ಇನ್ನೊಂದಷ್ಟು ಗಿಡಗಳನ್ನು ತಂದು ಬೆಳೆಸಿ ಖುಷಿ ಕಂಡುಕೊಂಡವರಿದ್ದಾರೆ.

ಕೃಷಿಗೊಂದು ಸ್ಪೂರ್ತಿ:
ನರ್ಸರಿಗಳು ಈಗ ಎಲ್ಲಾ ವರ್ಗದ ಕೃಷಿಕರಿಗೂ ಅವರ ಯೋಜನೆ, ಆಸಕ್ತಿ ಮತ್ತು ಬೆಳೆ ಆಯ್ಕೆಗೆ ಖುಷಿಯ ದಾರಿ ಒದಗಿಸಿದೆ. ಹಿಂದೆ ತಮ್ಮ ಜಾಗದಲ್ಲಿ ಹೊಸ ಹಣ್ಣಿನ ಗಿಡಗಳನ್ನು ಬೆಳೆಯಲು ಹಣ್ಣುಗಳ ಬೀಜ, ಗಿಡ, ಕಡ್ಡಿಗಳನ್ನು ಅವಲಂಬಿಸಬೇಕಾಗಿತ್ತು. ವಿಭಿನ್ನ ಮತ್ತು ಕೆಲವೇ ವರ್ಷಗಳಲ್ಲಿ ಹಣ್ಣಿನ ಬೆಳೆ ತೆಗೆಯಲು ಆಗ ಸಾಧ್ಯವಾಗುತ್ತಿರಲಿಲ್ಲ. ಆದರೆ ಸದ್ಯದ ಸ್ಥಿತಿ ಹಾಗಿಲ್ಲ. ನರ್ಸರಿ ಹೊಕ್ಕರೆ ಸಾಕು ಕಸಿ ಮಾಡಿದ ಮಾವು, ಪೇರಳೆ, ಹಲಸು, ಚಿಕ್ಕು, ಗೇರು, ಇವೆಲ್ಲವೂ ಸುಲಭದಲ್ಲಿ ಸಿಗುತ್ತದೆ. ಈ ಕಸಿ ಮಾಡಿದ ಗಿಡಗಳು ಕೃಷಿಕರಿಗೆ ಬಲುಬೇಗ ಫಲ ನೀಡುವ ಮೂಲಕ ಅವರಲ್ಲಿ ಬೆಳೆಗಳ ಕುರಿತ ಆಸಕ್ತಿ ಮತ್ತು ನಿರೀಕ್ಷೆಯನ್ನು ಮತ್ತಷ್ಟು ಎಬ್ಬಿಸಿದೆ.

ತಾರಸಿ ತೋಟಕ್ಕೂ ಭಾರೀ ಬೇಡಿಕೆ:
ಗಿಡ ನೆಟ್ಟ ಎರಡು ಮೂರು ವರ್ಷಗಳಲ್ಲೇ ಫಲ ನೀಡಿ ಬೆಳೆ ಭಾಗ್ಯವನ್ನು ನೀಡುವ ಇಂತಹ ಗಿಡಗಳ ಖರೀದಿ ಈಗ ಜಾಸ್ತಿಯಾಗಿದೆ. ತರಕಾರಿ, ಹೂ ಗಿಡಗಳಿಗಳಿಗಂತೂ ಎಲ್ಲಿಲ್ಲದ ಬೇಡಿಕೆ. ಯಾಕೆಂದರೆ ತರಕಾರಿ, ತಾರಸಿ ತರಕಾರಿ ಎನ್ನವ ಹೊಸ ಪರಿಕಲ್ಪನೆಯನ್ನು ಹುಟ್ಟುಹಾಕಿದೆ.  ಪೇಟೆ ಮನೆಗಳಲ್ಲಿ ತಾರಸಿ ಹೊಂದಿರುವವರೂ ಈಗ ತರಕಾರಿ ಕೃಷಿ ಮಾಡುವುದು ಸುಲಭ. ಮನೆ ಎದುರು ಜಾಗವಿಲ್ಲದಿದ್ದರೇನಂತೆ? ತಾರಸಿ ಇದೆಯಲ್ಲವಾ?ಆ ತಾರಸಿ ಮೇಲೊಂದಷ್ಟು ಜಾಗವಿದ್ದರೆ, ಆ ಜಾಗದಲ್ಲಿ ತರಕಾರಿ, ಹೂ ಕೃಷಿಯನ್ನು ಮಾಡುವ ಮನಸ್ಸಿದ್ದರೆ ಸಾಕು, ಮನೆಗೆ ಬೇಕಾಗುವಷ್ಟು ತರಕಾರಿಗಳನ್ನು ಬರೀ ತಾರಸಿ ಕೃಷಿಯಿಂದಲೇ ಪಡೆಯಬಹುದು.  ಪೇಟೆಯ ತಾರಸಿಗಳಲ್ಲೇ  ಔಷಧಿಯ ಗಿಡ, ಹೂ, ತರಕಾರಿ ಗಿಡಗಳನ್ನು ಬೆಳೆಸಿ ಫಲ ಪಡೆದು ಸೈ ಎನ್ನಿಸಿಕೊಂಡವರು ಎಷ್ಟು ಮಂದಿಯಿಲ್ಲ ಹೇಳಿ? ಇವರ ಕೃಷಿ ಖುಷಿಯ ದಾರಿಗೆ, ಹಸಿರಿನಲ್ಲಿ ಕಳೆದು ಹೋಗುವ ಇವರ ಹಂಬಲಕ್ಕೆ ದಾರಿಯಾದದ್ದು ಇವೇ ನರ್ಸರಿಗಳು. ತುಂಬಾ ಮಂದಿಗೆ ನರ್ಸರಿಗಳು ಖುಷಿಗಳೀಗಷ್ಟೆ ದಾರಿ ತೋರಿಸಿಲ್ಲ, ಬದುಕು ಕಟ್ಟಿಕೊಳ್ಳಲೂ ದಾರಿ ತೋರಿಸಿವೆ, ನರ್ಸರಿ ಉದ್ಯಮವನ್ನು ನೆಚ್ಚಿಕೊಂಡು ಆ ಉದ್ಯಮದಲ್ಲಿ ಯಶಸ್ಸು
ಕಂಡವರು ನಮ್ಮ ನಡುವೆ ಇದ್ದಾರೆ.

ಕೃಷಿಗಳಲ್ಲಿ ಆಸಕ್ತಿ ಇರುವವರು ಕೂಡ ಈ ಉದ್ಯಮವನ್ನು ಆರಂಭಿಸಿ, ತಮ್ಮ ಬಳಿ ಗಿಡಗಳನ್ನು ಖರೀದಿಸಲು ಬರುವ ಮಂದಿಗೆ ಆಯಾ ಗಿಡಗಳ ಕುರಿತ ಮಾಹಿತಿ, ಆ ಗಿಡಗಳ ಆರೈಕೆ ಹೇಗೆ? ಅದು ಯಾವ ಹವಾಗುಣದಲ್ಲಿ ಹೆಚ್ಚಾಗಿ ಬೆಳೆಯುತ್ತದೆ? ಯಾವ ಕಾಲದಲ್ಲಿ ಅವುಗಳನ್ನು ನೆಟ್ಟರೆ ಚೆಂದ ಮೊದಲಾದ ಸಮರ್ಪಕ ಮಾಹಿತಿಯನ್ನು ನೀಡಿ  ಕೃಷಿಕರಿಗೂ ಮಾರ್ಗದರ್ಶನ ನೀಡಿ, ತಮ್ಮ ಬದುಕನ್ನೂ ಸ್ವಾವಲಂಬಿಗೊಳಿಸುತ್ತಿದ್ದಾರೆ.

ಬಹುತೇಕ ನರ್ಸರಿಗಳಲ್ಲಿ ಇದೀಗ ಬೇರೆ ಬೇರೆ ದೇಶದ ಹಣ್ಣಿನ ತಳಿಗಳು ಕೂಡ ಲಭ್ಯವಿದ್ದು ಕೃಷಿಕರನ್ನು ಸೆಳೆಯುತ್ತಿವೆ.  ಹಳೆಯದಾದ ದೇಶಿ ತಳಿಗಳಿಗೆ ಕಸಿ ತಂತ್ರ್ಯಜ್ಞಾನದ ಮೂಲಕ ಕಾರ್ಯಕಲ್ಪವನ್ನು ನೀಡುತ್ತ,  ಹೊಸ ತಳಿಗಳನ್ನು ಅಭಿವೃದ್ದಿ ಪಡಿಸುತ್ತ, ಹೊಸತನನ್ನು ಕೃಷಿ ಕ್ಷೇತ್ರಕ್ಕೆ ತರುವ ಕೆಲಸ ಮಾಡುತ್ತಿವೆ ನರ್ಸರಿಗಳು. ಈ ವರೆಗೆ ರೈತರು ನೋಡಿರದ ಬೇರೆ ಬೇರೆ ದೇಶದ ತಳಿಗಳು ಇಲ್ಲಿ ಸುಲಭವಾಗಿ ಲಭ್ಯವಾಗುವುದರಿಂದ ಆಗುವ ಪ್ರಯೋಜನವೇನೆಂದರೆ ಆ ಹಣ್ಣು ತಮ್ಮ ತೋಟದಲ್ಲಿ ಬೆಳೆಸಲು ಸಾಧ್ಯವೇ ಈ ಹಣ್ಣನ್ನು ಬೆಳೆದು ತಾವ್ಯಾಕೆ ಒಂದೊಳ್ಳೆ ಮಾರುಕಟ್ಟೆಯನ್ನು ಕಂಡುಕೊಳ್ಳಬಾರದು? ಎನ್ನುವ ಯೋಚನೆ ಕೃಷಿಕರಲ್ಲಿ ಹುಟ್ಟಿದೆ. ತುಂಬಾ ಕೃಷಿಕರು ವಿದೇಶಿ ಹಣ್ಣುಗಳ ಗಿಡ ಬೆಳೆದು ಫಲ ಕಂಡುಕೊಂಡು ಸಂತೃಪ್ತರಾಗಿದ್ದಾರೆ ಕೂಡ.

ನರ್ಸರಿಯಲ್ಲಿ ಹೂ ಗಿಡಗಳ ಲೋಕ:
ಅಂದದ ಚಂದದ ಹೂವುಗಳನ್ನು ನೋಡಿ ಮನ ಸೋಲದವರಾರು ಹೇಳಿ? ಹೂವೆಂದರೆ ಎಲ್ಲರಿಗೂ ಒಂದಲ್ಲ ಒಂದು ರೀತಿ ಕಾಡುತ್ತದೆ. ಮನೆಗಳಲ್ಲಿ ನಿತ್ಯವೂ ಹೂ ಗಿಡದಲ್ಲಿ ಹೂವು ಅರಳಿದರೆ ಮನಸ್ಸಿಗೆ ನೆಮ್ಮದಿಯಾಗದೇ ಇರುತ್ತದೆಯೇ? ಧಾರ್ಮಿಕ ಆಚರಣೆ, ಕೇಶಾಲಂಕಾರಕ್ಕೆ, ಮನೆಯ ಅಂದ ಚೆಂದಕ್ಕೆ  ಹೂವುಗಳೇ ಭೂಷಣ. ಮಲ್ಲಿಗೆ, ಚೆಂಡು ಹೂ, ಪಾರಿಜಾತ, ಸುಗಂಧರಾಜ,
ಸುರಗಿ, ಬ್ರಹಕಮಲ, ಕನಕಾಂಬರ, ಸೇವಂತಿಗೆ, ಡೆಲಿಯಾ ಮೊದಲಾದ ಹೂವುಗಳನ್ನು ಮನೆಯ ಅಂಗಳದಲ್ಲಿಯೇ ಬೆಳೆಸಿ ಖುಷಿ ಕಾಣಬಹುದು. ಮಲ್ಲಿಗೆ, ಕನಕಾಂಬರ, ಸೇವಂತಿಗೆ, ಚೆಂಡು ಹೂವುಗಳು ಆರ್ಥಿಕವಾಗಿಯೂ ಕೈಹಿಡಿಯಬಹುದಾದ ಹೂವುಗಳು. ಇಂತಹ ಬಗೆಬಗೆಯ ಹೂಗಿಡಗಳ ದೊಡ್ಡ ಲೋಕವೇ ನಮಗೆ ನರ್ಸರಿಯಲ್ಲಿ ತೆರೆದುಕೊಳ್ಳುತ್ತವೆ. ದಿನೇ ದಿನೇ ಪುಷ್ಪೋದ್ಯಮ ಹೊಸ
ರೂಪು ಪಡೆದುಕೊಳ್ಳುತ್ತದೆ, ಇದಕ್ಕೆ ತಕ್ಕಂತೆ ನರ್ಸರಿಗಳೂ ಕೂಡ ಅತ್ಯಾಕರ್ಷಕ ಹೂ ಗಿಡಗಳನ್ನು ಪುಷ್ಪ ಕೃಷಿಯ ಆಸಕ್ತರಿಗೆ ಪರಿಚಯಿಸುತ್ತಿದೆ. ಕಂಪಿನಿಂದ , ಮನಸ್ಸನ್ನು ಸೆಳೆಯುವ ಹೂಗಳಿಂದ ಹಿಡಿದು, ಕಂಪಿಲ್ಲದೇ  ಬಣ್ಣ ಬೆಡಗುಗಳಿಂದ ಕೈಬೀಸಿ ಕರೆಯುವ ಹೂಗಳೂ ನರ್ಸರಿಗಳಲ್ಲಿವೆ. ಪುಷ್ಪ ಕೃಷಿಗೂ ನರ್ಸರಿ ಉದ್ಯಮ ಹೊಸ ಹೊಸ ತಿರುವುಗಳನ್ನು ನೀಡುತ್ತಲೇ ಇದೆ.

ಅರಣ್ಯ ನರ್ಸರಿ ಬಗ್ಗೆ ಒಂದಿಷ್ಟು:

ಕಾಡೆಂದರೆ ನಿಸರ್ಗ ಮಾತೆಯ ಬೆಡಗಿನ ನಾಡು, ಕಾಡಿನ ಒಂದೊಂದು ಮರವೂ ನಾಡಿಗೆ ಉಸಿರನ್ನು ದಾಟಿಸುತ್ತದೆ. ಆಗಸದೆತ್ತರಕ್ಕೆ ಬೆಳೆದು ನಿಂತಿರುವ ಕಾಡಿನ ಮರಗಳು ನಮಗೂ ಮಗಿಲಿನೆತ್ತರಕ್ಕೆ ಕರೆದುಕೊಂಡು ಹೋಗುವಂತೆ ಭಾಸವಾಗುತ್ತದೆ. ಇದು ಆ ಮರಗಳಿರುವ ಅದಮ್ಯ ಶಕ್ತಿಯೇ ಸರಿ. ಸೀತಾಫಲ, ನೆಲ್ಲಿಕಾಯಿ, ಸಾಗುವಾನಿ, ರಕ್ತಚಂದನ,ಬಿದಿರು, ಹೆಬ್ಬಲಸು, ಹಲಸು, ಮಾವು,ಪುನರ್ಪುಳಿ, ಜಾರಿಗೆ ಮೊದಲಾದ ಮರಗಳು ಕಾಡಿನಲ್ಲಿ ಕಾಡುವ ಮರಗಳು. ಅರಣ್ಯದಲ್ಲಿ ಬೆಳೆಯುವ ಈ ಗಿಡಗಳನ್ನು ಕಂಡು ಅದನ್ನು ನಾಡಿನಲ್ಲಿಯೂ ಬೆಳೆಸಬೇಕು, ತಮ್ಮ ತೋಟದಲ್ಲಿಯೂ ಬೆಳೆದು ನೆಮ್ಮದಿ ಕಾಣಬೇಕು ಎನ್ನುವ ಕೃಷಿಕರು ಇಂತಹ ಗಿಡಗಳನ್ನು ನರ್ಸರಿಯಲ್ಲಿ ಕೊಳ್ಳುತ್ತಾರೆ. ತಮ್ಮ ತೋಟದಲ್ಲಿಯೂ ಬೆಳೆದು ಫಲ ಕಾಣುತ್ತಾರೆ. ನರ್ಸರಿಗಳು ಅರಣ್ಯದಲ್ಲಿ ಬೆಳೆಯುವ ಅಪರೂಪದ ಜಾತಿಗಳ ಹಣ್ಣಿನ ಗಿಡಗಳನ್ನು ಒದಗಿಸುತ್ತವೆ.  ನರ್ಸರಿಗಳು ಒದಗಿಸುವ ಈ ಹಣ್ಣಿನ ಗಿಡಗಳನ್ನು ತೋಟದಲ್ಲಿ ನೆಟ್ಟು ಪುಟ್ಟ ಕಾಡನ್ನು ನಿರ್ಮಾಣ ಮಾಡಿ ನಾವು ಕಾಡಲ್ಲೇ ಬದುಕುತ್ತಿದ್ದೇವೆ ಎನ್ನುವಂತೆ ಖುಷಿ ಕಂಡುಕೊAಡವರು ಬಹಳಷ್ಟು ಮಂದಿ ಇದ್ದಾರೆ.

ಔಷಧಿಯ ಗಿಡಗಳ ನರ್ಸರಿ:

ಇದು ಖಾಯಿಲೆಗಳ ಯುಗ.ಆಧುನಿಕ ಜೀವನಶೈಲಿ ನಮಗೆ ಸುಖವನ್ನು ಮಾತ್ರ ನೀಡುತ್ತಿಲ್ಲ ಸಾಲು ಸಾಲು ಖಾಯಿಲೆಗಳನ್ನೂ ದಯಪಾಲಿಸುತ್ತಿದೆ. ಈ ಕಾಲದಲ್ಲಿ ಎಷ್ಟು ಎಚ್ಚರಾಗಿದ್ದರೂ ಸಾಮಾನ್ಯವಾಗಿ ಕಾಡುವ ಖಾಯಿಲೆಗಳ ಕಾಟದಿಂದ ತಪ್ಪಿಸಿಕೊಳ್ಳುವುದೂ ಕಷ್ಟ. ಹೀಗಿರುವಾಗ ಖಾಯಿಲೆಗಳನ್ನು ಕೊಂಚವಾದರೂ ನಿಯಂತ್ರಣದಲ್ಲಿಟ್ಟುಕೊಳ್ಳಲು  ನಮಗೆ ಔಷಧಿಯ ಸಸ್ಯಗಳು ನೆರವಾಗುತ್ತವೆ. ಶೀತ, ನೆಗಡಿ, ಕೆಮ್ಮು, ಗಾಯ ಮೊದಲಾದ ಸಾಮಾನ್ಯ ಬಗೆಯ  ಖಾಯಿಲೆಗಳಿಗೆ ಈ ಔಷದಿಯ ಗಿಡಗಳೇ ಪರಿಹಾರ, ಆಯುರ್ವೇದದಲ್ಲಿ ಕೆಲವೊಂದು ಗಿಡಗಳ ಕಾಂಡ, ಎಲೆ, ಹೂವು, ಕಾಯಿಗಳಿಗೂ ಶಕ್ತಿ ಇದೆ ಎನ್ನಲಾಗುತ್ತದೆ. ಆಯುರ್ವೇದ ಅದನ್ನು ಕಂಡುಕೊಂಡಿದೆ ಕೂಡ. ಅಂತಹ ಔಷಧಿಯ ಗಿಡಗಳೂ  ನರ್ಸರಿಗಳಲ್ಲಿ ಲಭ್ಯವಿದೆ.ಇವುಗಳನ್ನು ನೆಟ್ಟರೆ  ಆ ಗಿಡಗಳ ಮಹತ್ವವನ್ನು, ಉಪಯೋಗವನ್ನು ಸರಿಯಾಗಿ ಅರಿತರೆ ಮನೆಯಲ್ಲಿಯೇ ಸಣ್ಣ ಪುಟ್ಟ ಖಾಯಿಲೆಗಳನ್ನು ವಾಸಿ ಮಾಡಬಹುದು.

ತರಕಾರಿ ನರ್ಸರಿ:

ತರಕಾರಿ ಇಲ್ಲದೇ ಅಡುಗೆ ಸಪ್ಪೆ. ಟೊಮೆಟೋ, ಆಲೂಗೆಡ್ಡೆ, ಸೊಪ್ಪು,ಗೆಣಸು, ಹೂ ಕೋಸು ಮೊದಲಾದ ತರಕಾರಿಗಳು ಅಡುಗೆಗೆ ಜೀವ ನೀಡುತ್ತದೆ. ದಿನ ನಿತ್ಯ ಬಳಕೆಗೆ ಬೇಕಾದ ತರಕಾರಿಗಳನ್ನು ನಾವು ಮನೆಯ ಪುಟ್ಟ ಜಾಗದಲ್ಲಿಯೇ ಬೆಳೆಸಬಹುದು. ನರ್ಸರಿಗಳಲ್ಲಿ ಲಭ್ಯವಿರುವ ತರಕಾರಿ ಸಸ್ಯಗಳು ಅನೇಕ. ಹಾಗಲಕಾಯಿ, ಸೋರೆಕಾಯಿ, ಪಾಲಕ್, ಹೀರೆಕಾಯಿ, ಟೊಮೆಟೋ,ಎಲೆಕೋಸು,ಕುಂಬಳಕಾಯಿ,ಸೌತೆಕಾಯಿ ಮೊದಲಾದ ತರಕಾರಿಗಳ ಸಸ್ಯಗಳನ್ನು ನಾವು ಬೆಳೆಸಬಹುದು.ತಾರಸಿ ತರಕಾರಿ ತೋಟ ಸದ್ಯ ಜನಪ್ರೀಯತೆ ಪಡೆದಿರುವುದರಿಂದ ನರ್ಸರಿಗಳಲ್ಲಿ ತರಕಾರಿ ಸಸ್ಯಗಳು ಚೆನ್ನಾಗಿ ಮಾರಾಟ ಕಾಣುತ್ತಿದೆ.

ತೋಟಗಾರಿಕಾ ನರ್ಸರಿ:

ಕೃಷಿಕರಿಗೆ ತೋಟಗಾರಿಕಾ ಬೆಳೆಗಳೇ ಆರ್ಥಿಕ ಚೇತನ ನೀಡುತ್ತವೆ  ತಾಳೆ, ತೆಂಗು, ಏಲಕ್ಕಿ, ಅಡಿಕೆ, ಕರಿಮೆಣಸು, ಕಾಫಿ ಮೊದಲಾದ ತೋಟಗಾರಿಕಾ ಬೆಳೆಗಳು ನರ್ಸರಿಗಳಲ್ಲಿ ಭಾರಿ ಪ್ರಮಾಣದಲ್ಲಿ ಮಾರಾಟವಾಗುತ್ತದೆ. ಜರ್ಬೇರಾ, ಅರ್ಕಿಡ್ ಕೃಷಿ, ಹೈಡ್ರೋಪೋನಿಕ್ಸ್ ಪೂರಕವಾಗಿ ನರ್ಸರಿ ಉದ್ಯಮಗಳಿವೆ. ನರ್ಸರಿಯಿಂದಲೇ ತೋಟಗಾರಿಕಾ ಸಸಿಗಳನ್ನು ಕೊಂಡುಕೊAಡು ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ.

ಹಣ್ಣು ನರ್ಸರಿ:  ರುಚಿಕರ ಹಣ್ಣುಗಳೆಂದರೆ ಎಲ್ಲರಿಗೂ ಜೀವ. ಹಲವು, ಮಾವು, ಪೇರಳೆ,,ಬಾಳೆ, ಪಪ್ಪಾಯಿ,ಜಮ್ಮುನೇರಳೆ,,ದ್ರಾಕ್ಷಿ, ದಾಳಿಂಬೆ, ಕಿತ್ತಳೆ, ಪನ್ನೇರಳೆ, ರಂಬುಟಾನ್, ಮ್ಯಾಂಗೋಸ್ಟಿನ್ ಮೊದಲಾದ ಹಣ್ಣುಗಳು ವಿವಿಧ ಹೈಬ್ರೀಡ್ ತಳಿಗಳು ನರ್ಸರಿಗಳಲ್ಲಿ ಧಾರಾಳವಾಗಿ ಲಭ್ಯವಿದೆ.ಹಣ್ಣಿನ ಕೃಷಿ ಕೃಷಿಕರಿಗೆ ಆರ್ಥಿಕ ಶಕ್ತಿಯಾಗಿಯೂ ಪರಿಣಮಿಸಿದೆ. ಒಟ್ಟಾರೆಯಾಗಿ ನರ್ಸರಿ ಉದ್ಯಮ ಕೃಷಿಗೂ ಸ್ಪೂರ್ತಿಯಾಗಿದೆ. ಕೃಷಿಯ ಹಸಿರಿಗೆ ಉಸಿರು ನೀಡುವ ಐಸಿರಿಯಾಗಿದೆ.

-ಪ್ರಸಾದ ಶೆಣೈ

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group