spot_img
Wednesday, June 19, 2024
spot_imgspot_img
spot_img
spot_img

ಈಗ ರೈತರ ಚಿತ್ತ ಡ್ರಂಸೀಡರ್‌ನತ್ತ : ಡ್ರಂಸೀಡರ್‌ ಬಗ್ಗೆ ಒಂದಷ್ಟು ತಿಳಿದುಕೊಳ್ಳೋಣ

ಭತ್ತದ ಉತ್ಪಾದನೆಯ ಹಲವಾರು ಸಮಸ್ಯೆಗಳಲ್ಲಿ ಸಮಯಕ್ಕೆ ಸರಿಯಾಗಿ ಕಾಲುವೆಗಳಲ್ಲಿ ನೀರನ್ನು ಬಿಡದಿರುವುದು, ಕೆಲಸದಾಳುಗಳ ಕೊರತೆ ಹಾಗೂ ಸುಸ್ಥಿರವಾದ ಇಳುವರಿ ಪಡೆಯುವಲ್ಲಿ ಸುಧಾರಿತ ಬೇಸಾಯ ಕ್ರಮಗಳನ್ನು ಅಳವಡಿಸಿಕೊಳ್ಳದಿರುವುದು ಪ್ರಮುಖ ಕಾರಣಗಳಾಗಿವೆ. ನಮ್ಮ ರಾಜ್ಯದ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ನೀರು ಬಂದ ಕೂಡಲೆ ಎಲ್ಲಾ ರೈತರು ಒಟ್ಟಿಗೆ ಭೂಮಿ ಸಿದ್ಧತೆ, ಸಸಿಮಡಿ ತಯಾರಿಸುವಿಕೆ ಮತ್ತು ನಾಟಿ ಕೆಲಸಗಳನ್ನು ಪ್ರಾರಂಭಿಸುವುದರಿಂದ ಕೃಷಿ ಕಾರ್ಮಿಕರ ಕೊರತೆಯುಂಟಾಗಿ ಸಮಯಕ್ಕೆ ಸರಿಯಾಗಿ ನಾಟಿ ಮಾಡಲಾಗದೆ ನಿರ್ದಿಷ್ಟ ಅಂತರ, ಆಳ ಮತ್ತು ಸಸಿಗಳನ್ನು ಕಾಪಾಡಿಕೊಳ್ಳಲಾಗದೆ ಇಳುವರಿಯಲ್ಲಿ ಕುಂಠಿತವಾಗುತ್ತಿದೆ.

ಈ ಸಮಸ್ಯೆಯನ್ನು ಹೋಗಲಾಡಿಸಿ ಹೆಚ್ಚಿನ ಇಳುವರಿಯನ್ನು ಪಡೆಯುವುದರ ಜೊತೆಗೆ ಕಾರ್ಮಿಕರ ಅವಲಂಬನೆಯನ್ನು ಕಡಿತಗೊಳಿಸಿ, ಖರ್ಚನ್ನು ಕಡಿಮೆ ಮಾಡುವ ಪರ್ಯಾಯ ಭತ್ತದ ಬೇಸಾಯ ಪದ್ಧತಿ ಎಂದರೆ ಡ್ರಂಸೀಡರ್‌ನಿಂದ ಭತ್ತದ ನೇರ ಭಿತ್ತನೆ ವಿಧಾನವಾಗಿದೆ.

ಡ್ರಂ ಸೀಡರ್ ನೇರ ಬಿತ್ತನೆಯ ಸುಧಾರಿತ ಬೇಸಾಯ ಕ್ರಮಗಳು
ಕಾಲ ಮತ್ತು ತಳಿಗಳು

ಡ್ರಂ ಸೀಡರ್‌ನಿಂದ ಭತ್ತ ಬಿತ್ತಲು ಮುಂಗಾರು ಮತ್ತು ಬೇಸಿಗೆ ಹಂಗಾಮುಗಳು ಸೂಕ್ತ. ಮುಂಗಾರಿನಲ್ಲಿ ದೀರ್ಘಾವದಿ ತಳಿಯಾದಲ್ಲಿ ಜುಲೈ ಎರಡನೇ ವಾರದೊಳಗೆ; ಮಧ್ಯಮಾವಧಿ ತಳಿಗಳಾದಲ್ಲಿ ಆಗಸ್ಟ್ ಕೊನೆ ವಾರದೊಳಗೆ ಬಿತ್ತನೆ ಮಾಡಬೇಕಾಗುತ್ತದೆ. ನೇರ ಬಿತ್ತನೆಗೆ ಎತ್ತರಕ್ಕೆ ಬೆಳೆಯುವ, ಸಣ್ಣ ಅಕ್ಕಿ ಗುಣವುಳ್ಳ ಕಾಂಡ ದುರ್ಬಲವಾಗಿರುವ ತಳಿಗಳು ಸೂಕ್ತವಲ್ಲ.

ಬಿತ್ತನೆ ಪ್ರಮಾಣ ಮತ್ತು ಬೀಜ ತಯಾರಿ

ಒಂದು ಎಕರೆಗೆ 25 ಕಿ.ಗ್ರಾಂ ಬಿತ್ತನೆ ಬೀಜ ಬಿತ್ತಬೇಕು. ಈ ಬೀಜವನ್ನು 24 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ ನೀರಿನಿಂದ ಹೊರತೆಗೆದು, ಪ್ರತಿ ಕಿ.ಗ್ರಾಂ ಬೀಜಕ್ಕೆ 4 ಗ್ರಾಂ ಕಾರ್ಬೆಡೆಜಿಂ ಶಿಲೀಂಧ್ರ ನಾಶಕದಿಂದ ಉಪಚರಿಸಿ 36 ಗಂಟೆಗಳ ಕಾಲ ಗಾಳಿಯಾಡುವ ಗೋಣಿ ಚೀಲದಲ್ಲಿ ಕಟ್ಟಿ ಬೆಚ್ಚನೆಯ ಸ್ಥಳದಲ್ಲಿ ಇಟ್ಟು ಚೀಲದ ಮೇಲೆ ಕಲ್ಲಿನ ತೂಕವನ್ನಿಡಬೇಕು. ಚೀಲದ ಮೇಲ್ಮೈ ಒಣಗದಂತೆ ಚೀಲದ ಮೇಲೆ ಆಗಾಗ್ಗೆ ತೆಳುವಾಗಿ ನೀರು ಚಿಮುಕಿಸುತ್ತಿರಬೇಕು. ಈ ರೀತಿ ಮಾಡುವುದರಿಂದ 36 ಗಂಟೆಗಳಲ್ಲಿ ಬೀಜ ಕುಡಿ ಮೊಳಕೆಯೊಡೆಯುತ್ತದೆ. ಈ ಕುಡಿ ಮೊಳಕೆಯನ್ನು ಡ್ರಂನಲ್ಲಿ ಸಮನಾಗಿ ತುಂಬಿ ಬಿತ್ತನೆ ಮಾಡಬೇಕು ಬೇಸಿಗೆ ಕಾಲದಲ್ಲಿ ಉಷ್ಣಾಂಶ ಹೆಚ್ಚು ಇರುವುದರಿಂದ ಕುಡಿ ಮೊಳಕೆ 36 ಗಂಟೆಗಳಿಗಿಂತ ಮುಂಚೆ ಬರಬಹುದು.

ಭೂಮಿ ಸಿದ್ಧತೆ
ಡ್ರಂ ಸೀಡರ್ ನೇರ ಭಿತ್ತನೆಯ ಯಶಸ್ಸಿಗೆ ಸರಿಯಾದ ರೀತಿಯಲ್ಲಿ ಭೂಮಿ ಸಿದ್ಧಪಡಿಸುವುದು ಬಹುಮುಖ್ಯ. ಇಲ್ಲವಾದಲ್ಲಿ ಬಿತ್ತನೆಯಲ್ಲಿ ವ್ಯತ್ಯಾಸವಾಗಿ ಸಸಿಗಳ ಸಂಖ್ಯೆ ಹಾಗೂ ಬೆಳವಣಿಗೆಯಲ್ಲಿ ಏರುಪೇರಾಗಿ ಇಳುವರಿ ಕುಂಠಿತಗೊಳ್ಳುತ್ತದೆ. ಆದ ಕಾರಣ ಭೂಮಿಯನ್ನು ಚೆನ್ನಾಗಿ ಸಿದ್ಧಪಡಿಸಿಕೊಳ್ಳಬೇಕು. ನಾಟಿಗೆ ಭೂಮಿಯನ್ನು ಸಿದ್ಧಪಡಿಸಿಕೊಳ್ಳುವ ಮಾದರಿಯಲ್ಲಿ ಸಿದ್ಧಪಡಿಸಿ ಗದ್ದೆಯನ್ನು ಉಬ್ಬು ತಗ್ಗುಗಳಿಲ್ಲಿದೆ ಒಂದೇ ಸಮನಾಗಿರುವಂತೆ ಮಟ್ಟ ಮಾಡುವುದರಿಂದ ಗದ್ದೆಯ ನೀರನ್ನು ಹೊರಗೆ ಬಿಸಿಯಲು ಹಾಗೂ ತೆಳುವಾಗಿ ನೀರುಣಿಸಲು ಅವಕಾಶವಿರುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಬೀಜವನ್ನು ಬಿತ್ತುವ ಮುನ್ನ ತಾಕಿನಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು.

ಬಿತ್ತನೆ

ಮೊಳಕೆಯೊಡೆದ ಬೀಜವನ್ನು ಡ್ರಂ ಸೀಡರ್‌ನಲ್ಲಿರುವ ನಾಲ್ಕು ಡ್ರಂಗಳಿಗೂ ಸಮನಾಗಿ ಅಂದರೆ ಡ್ರಂನಲ್ಲಿ ಮುಕ್ಕಾಲು ಭಾಗ ಬರುವಂತೆ ತುಂಬಿ ಡ್ರಂ ಬಾಗಿಲನ್ನು ಸರಿಯಾಗಿ ಮುಚ್ಚಿ, ಮುಚ್ಚಳದ ಚಿಲಕವನ್ನು ಮರದ ಕಡ್ಡಿ ಅಥವಾ ಕಬ್ಬಿಣದ ತಂತಿಯಿಂದ ಭದ್ರಪಡಿಸಿ, ನಂತರ ಡ್ರಂ ಅನ್ನು ಗದ್ದೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಸಾಲುಗಳು ಬರುವಂತೆ ಕೈಯಿಂದ ಎಳೆಯಬೇಕು.

ಸಾಮಾನ್ಯವಾಗಿ ಇದನ್ನು ಕೆಸರು ಗದ್ದೆಯಲ್ಲಿ ಎಳೆಯಲು ಒಬ್ಬ ಕಾರ್ಮಿಕನಿಂದ ಸಾಧ್ಯ. ಅವಶ್ಯಕತೆ ಇದ್ದರೆ ಇಬ್ಬರು ಕಾರ್ಮಿಕರು ಸೇರಿಕೊಂಡು ಎಳೆಯಬಹುದು. ಈ ರೀತಿ ಎಳೆದಾಗ ಗಾಲಿಗಳು ತಿರುಗಿ ಈ ಮೂಲಕ ಡ್ರಂಗಳು ಸಹ ತಿರುಗಿ, ಡ್ರಂಗಳ ರಂಧ್ರಗಳ ಮೂಲಕ ಭಿತ್ತನೆ ಬೀಜ ಸಾಲಿನಲ್ಲಿ ಬೀಳುತ್ತವೆ. ಒಮ್ಮೆಗೆ 8 ಸಾಲುಗಳು ಮೂಡುತ್ತವೆ. ಒಬ್ಬ ಮನುಷ್ಯ ಒಂದು ದಿನಕ್ಕೆ ಎರಡು ಎಕರೆಗೆ ಸಲೀಸಾಗಿ ಬಿತ್ತನೆ ಮಾಡಬಹುದು. ಬಿತ್ತಿದ ತಾಕುಗಳಲ್ಲಿ ಮೊದಲು ಹತ್ತು ದಿನಗಳವರೆಗೂ ತೇವ ಒಣಗದಂತೆ ಹಾಗೂ ನೀರು ಸಹ ನಿಲ್ಲದಂತೆ ಎಚ್ಚರಿಕೆ ವಹಿಸಿ, ಪೈರು ಬೆಳೆದಂತೆ ನೀರಿನ ಪ್ರಮಾಣವನ್ನು ಹೆಚ್ಚಿಸಿ ಎರಡು ಇಂಚು ನೀರು ನಿಲ್ಲಿಸಬೇಕು.

ಪೋಷಕಾಂಶಗಳ ನಿರ್ವಹಣೆ

ಶಿಫಾರಸ್ಸಿನಂತೆ ಎಕರೆಗೆ 4 ಟನ್ ಕೊಟ್ಟಿಗೆ ಗೊಬ್ಬರ ಅಥವಾ 2 ಟನ್ ಹಸಿರೆಲೆ ಗೊಬ್ಬರವನ್ನು ಬಿತ್ತನೆಗೆ 3 ವಾರ ಮುಂಚಿತವಾಗಿ ಭೂಮಿಗೆ ಸೇರಿಸಬೇಕು. ಪ್ರತಿ ಎಕರೆಗೆ 4೦ ಕೆ.ಜಿ. ಸಾರಜನಕ, 2೦ ಕೆ.ಜಿ. ರಂಜಕ ಹಾಗೂ 2೦ ಕೆ.ಜಿ. ಪೊಟ್ಯಾಷ್ ಒದಗಿಸುವ ರಸಗೊಬ್ಬರಗಳನ್ನು ಕೊಡಬೇಕು. ಬಿತ್ತುವ ಮುನ್ನ ಶಿಫಾರಸ್ಸಿನಂತೆ ಶೇ 1೦ ಭಾಗ ಸಾರಜನಕ, ಪೂರ್ತಿರಂಜಕ ಹಾಗೂ ಶೇ 5೦ ರಷ್ಟು ಪೊಟ್ಯಾಷ್ ಗೊಬ್ಬರವನ್ನು ಮೂಲ ಗೊಬ್ಬರಗಳಾಗಿ ಬಳಸಬೇಕು. ಉಳಿದ ಶೇ 6೦ ಭಾಗ ಸಾರಜನಕ ಹಾಗೂ ಶೇ 5೦ ರಷ್ಟು ಪೊಟ್ಯಾಷನ್ನು ಮೇಲುಗೊಬ್ಬರವಾಗಿ ಬಳಸುವುದು. ಶಿಫಾರಸ್ಸು ಮಾಡಿದ ಸಾರಜನಕವನ್ನು ನಾಲ್ಕು ಹಂತಗಳಲ್ಲಿ ಶೇ 1೦ ಭಾಗವನ್ನು ಭಿತ್ತನೆ ಮಾಡುವಾಗ, ಶೇ 4೦ ಭಾಗವನ್ನು ತೆಂಡೆ ಬರುವ ಸಮಯದಲ್ಲಿ ಶೇ 25 ಭಾಗವನ್ನು ತುಂಬು ತೆಂಡೆಗಳು ಬರುವಾಗ ಮತ್ತು ಶೇ 25 ಭಾಗವನ್ನು ತೆನೆ ಹುಟ್ಟುವ ಸಮಯದಲ್ಲಿ ಹಾಗೂ ಶೇ 5೦ ರಷ್ಟು ಪೊಟ್ಯಾಷನ್ನು ಗರ್ಭಾಂಕುರ ಸಮಯದಲ್ಲಿ ಕೊಡುವುದರಿಂದ ಭತ್ತದ ಇಳುವರಿಯನ್ನು ಹೆಚ್ಚಿಸಬಹುದು.

ಅಂತರ ಬೇಸಾಯ
ಬಿತ್ತನೆ ಬೀಜವನ್ನು ನೇರವಾಗಿ ಬಿತ್ತುವುದರಿಂದ ಅಂತರ ಬೇಸಾಯ ಬಲು ಸುಲಭ. ಬಿತ್ತಿದ 20 ಮತ್ತು 4೦ ದಿನಗಳಲ್ಲಿ ಎರಡು ಬಾರಿ“ಕೋನೋ ವೀಡರ್” ಎಂಬ ಯಂತ್ರವನ್ನು ಸಾಲುಗಳ ಮಧ್ಯೆ ಹಾಯಿಸಿದಾಗ ಭೂಮಿಯು ಸಡಿಲಗೊಂಡು ಕಳೆಗಳು ಮಣ್ಣಿನಲ್ಲಿ ಸೇರಲ್ಪಡುತ್ತವೆ. ರೋಟರಿ ವೀಡರ್‌ನ್ನು ಮೂರು ಬಾರಿ ಅಂದರೆ 2೦, 4೦ ಮತ್ತು 6೦ ದಿವಸಗಳಲ್ಲಿ ಹಾಯಿಸುವುದರಿಂದ ಬುಡಕ್ಕೆ ಹೆಚ್ಚು ಮಣ್ಣು ಒತ್ತರಿಸಿ ಬೆಳೆ ಬೀಳುವುದಿಲ್ಲ.

ಕಳೆನಾಶಕಗಳ ಬಳಕೆ
ಉದಯಪೂರ್ವ ಕಳೆನಾಶಕವಾಗಿ ಎಕರೆಗೆ ಪ್ಲೆಟಿಲಾಕ್ಲೋರ್ ಮತ್ತು ಸೇಫನರ್ ಶೇ 3೦, ಇ.ಸಿ. 4೦೦ ಮಿ.ಲೀ ಅಥವಾ ಶೇ 1೦ರ ಪೈರಜೋಸಲ್ಫರಾನ್ ಈಥೈಲ್ 1೦೦ ಗ್ರಾಂ ಪುಡಿಯನ್ನು 3೦ ಕಿ.ಗ್ರಾ. ಹುಡಿಯಾದ ಮರಳಿನೊಡನೆ ಬೆರೆಸಿ, ಬಿತ್ತನೆ ಮಾಡಿದ 3 ರಿಂದ 5 ದಿವಸಗಳೊಳಗಾಗಿ ಗದ್ದೆಯಲ್ಲಿ ಎಲ್ಲಾ ಭಾಗಕ್ಕೂ ಬೀಳುವ ಹಾಗೆ ಎರಚಬೇಕು. ಕಳೆನಾಶಕವನ್ನು ಉಪಯೋಗಿಸುವ ಮುಂಚೆ ಗದ್ದೆಗೆ ನೀರು ಹಾಯಿಸಿ ಬಸಿಯಬೇಕು. ಬಸಿದ ನಂತರ ಕಳೆನಾಶಕವನ್ನು ಎರಚಬೇಕು. ಕಳೆನಾಶಕ ಎರಚಿದ ೪೮ ಗಂಟೆಗಳ ನಂತರ ನೀರು ಹಾಯಿಸಿ ಬಸಿಯಬೇಕು.

ನೀರು ನಿರ್ವಹಣೆ
ಡ್ರಂಸೀಡರ್‌ನ ಬಿತ್ತನೆ ಮಾಡಿರುವ ತಾಕಿನಲ್ಲಿ ನೀರು ನಿರ್ವಹಣೆ ಅತಿ ಮುಖ್ಯ. ಡ್ರಂ ಎಳೆದ ಎರಡು ವಾರದವರೆಗೆ ಗದ್ದೆಯಲ್ಲಿ ತೇವ ಆರದಂತೆ ಹಾಗೂ ನೀರು ಸಹ ನಿಲ್ಲದಂತೆ ಎಚ್ಚರಿಗೆ ವಹಿಸಬೇಕು. ನಂತರ ಬೆಳವಣಿಗೆಗೆ ಅನುಗುಣವಾಗಿ ನೀರಿನ ಮಟ್ಟವನ್ನು ಹೆಚ್ಚಿಸಿ ಕೊನೆಯತನಕ ನೀರಿನ ಮಟ್ಟ ಮೀರದಂತೆ ನೋಡಿಕೊಳ್ಳುವುದು ಕಟಾವಿಗೆ ಹತ್ತು ದಿವಸ ಮುಂಚಿತವಾಗಿ ನೀರು ಹಾಯಿಸುವುದನ್ನು ತಪ್ಪಿಸಿ ಭೂಮಿ ಒಣಗಲು ಅನುವು ಮಾಡಿ ನಂತರ ಕಟಾವು ಮಾಡುವುದು ಬಹು ಮುಖ್ಯವಾಗಿ ಭತ್ತದ ತಾಕುಗಳಲ್ಲಿ ಸತತವಾಗಿ ನೀರು ನಿಲ್ಲಿಸದೆ

ಭೂಮಿಯಲ್ಲಿ ತೇವಾಂಶದ ಮಟ್ಟವನ್ನು ಗಮನಿಸಿ ನೀರು ಕೊಡುವುದರಿಂದ ಒಟ್ಟಾರೆ ಬೆಳೆಯ ಪೂರ್ಣ ಅವಧಿಯವರೆಗೆ ಸರಾಸರಿ 178 ಸೆಂ.ಮೀ. ನಷ್ಟು ನೀರು ಹಾಯಿಸಿದಂತಾಗುತ್ತದೆ. ಅದೇ ನಾಟಿ ಪದ್ಧತಿಗೆ ಸುಮಾರು 222 ಸೆಂ.ಮೀ. ನಷ್ಟು ನೀರು ಬೇಕಾಗುತ್ತದೆ.
ಡ್ರಂಸೀಡರ್ ಪದ್ಧತಿಯನ್ನು ನಾಟಿ ಪದ್ಧತಿಗೆ ಹೋಲಿಸಿದರೆ ಸುಮಾರು ಶೇ 18 ರಷ್ಟು ನೀರಿನಲ್ಲಿ ಉಳಿತಾಯ ನೀರಿನ ಉತ್ಪಾದಕತೆಯನ್ನು ಗಮನಿಸಿದರೆ ಡ್ರಂ ಸೀಡಾರ್ ಬೇಸಾಯ ಪದ್ಧತಿಯಲ್ಲಿ 33 ಕಿ.ಗ್ರಂ/ ಹೆಕ್ಟೇರ್ ಸೆಂ.ಮೀ. ಆದರೆ ನಾಟಿ ಪದ್ಧತಿಯಲ್ಲಿ 22 ಕಿ.ಗ್ರಾಂ./ಹೆಕ್ಟೇರ್ ಸೆಂ.ಮೀ. ಅಂದರೆ ಈ ಹೊಸ ಪದ್ಧತಿಯಿಂದ ಶೇ 48 ರಷ್ಟು ನೀರಿನ ಉತ್ಪಾದಕತೆಯಲ್ಲಿ ಹೆಚ್ಚಳ. ಈ ಪದ್ಧತಿಯನ್ನು ಅಳವಡಿಸಿ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಬೆಳೆದಾಗ ನೀರಿನ ಉಳಿತಾಯದ ಜೊತೆಗೆ ಬೆಳೆ ತೀವ್ರತೆಯನ್ನು ಹೆಚ್ಚು ಮಾಡಬಹುದು.

ಡ್ರಂ ಸೀಡರ್ ನೇರ ಬಿತ್ತನೆಯಿಂದಾಗುವ ಅನುಕೂಲಗಳು
 ಸಕಾಲದಲ್ಲಿ ಬಿತ್ತನೆ ಮಾಡಿಕೊಳ್ಳಬಹುದು.
 ನಿರ್ದಿಷ್ಟ ಪ್ರಮಾಣದ ಸಸಿಗಳ ಸಂಖ್ಯೆ ಕಾಪಾಡಿಕೊಳ್ಳಬಹುದು.
 ಸಸಿಮಡಿ ತಯಾರಿಕೆ ಹಾಗೂ ನಾಟಿಗೆ ತಗಲುವ ಖರ್ಚಿನಲ್ಲಿ ಉಳಿತಾಯ.
 ಕಳೆ ನಿಯಂತ್ರಣಕ್ಕೆ ತಗಲುವ ಖರ್ಚಿನಲ್ಲಿ ಉಳಿತಾಯ.
 ಶೇ 10-12 ರಷ್ಟು ನೀರಿನಲ್ಲಿ ಉಳಿತಾಯ.
 ನಾಟಿಗೆ ಹೋಲಿಸಿದಲ್ಲಿ 10 ದಿವಸ ಮುಂಚಿತವಾಗಿ ಕಟಾವಿಗೆ ಬರುತ್ತದೆ.
 ಉಪಯೋಗಿಸುವುದು ಸರಳ ಮತ್ತು ಸುಲಭ.

ನಾಗೇಶ್, ಸಿ. ಆರ್. ಡಾ. ಸೌಮ್ಯಲತಾ ಬಿ. ಎಸ್., ಮತ್ತು ಸಹನ. ಎಸ್.ಆರ್.,
 ಸಹಾಯಕ ಪ್ರಾಧ್ಯಪಕರು, ಬೇಸಾಯ ಶಾಸ್ತ್ರ ವಿಭಾಗ, ಕೃಷಿ ಮಹಾವಿದ್ಯಾಲಯ, ವಿ. ಸಿ. ಫಾರಂ., ಮಂಡ್ಯ
 ಕಿರಿಯ ಸಂಶೋಧನಾ ಸಹಚರರು, ಅಖಿಲ ಭಾರತ ಸುಸಂಘಟಿತ ಕಿರು ಧಾನ್ಯಗಳ ಸಂಶೋಧನಾ ಪ್ರಾಯೋಜನೆ, ವಲಯ ಕೃಷಿ ಸಂಶೋಧನಾ ಕೇಂದ್ರ, ವಿ. ಸಿ. ಫಾರಂ., ಮಂಡ್ಯ

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group