spot_img
Wednesday, July 24, 2024
spot_imgspot_img
spot_img
spot_img

ಮಂಗಗಳ ಕಾಟವೇ? ಉಪಯೋಗಿಸಿ ಈ ಕೋವಿ!

ಡಮಾರ್ ….ಎಂಬ ಸದ್ದು!! ಎತ್ತ ಕಡೆಯಿಂದ ಬಂತೆಂದು ತಿರುಗಿ ನೋಡಿದರೆ ಬಂಧೂಕುಧಾರಿ ಆಗಸದತ್ತ ನೋಡುತ್ತಾ ನಿಂತಿದ್ದರು.
ಕಾಡು ಪ್ರಾಣಿಗಳ ಹಾವಳಿಯಿಂದ ಕೃಷಿಕರು ಬೆಳೆ ಉಳಿಸಿಕೊಳ್ಳಲಾಗದೆ ಬಸವಳಿದಿದ್ದಾರೆ. ಒಂದೆಡೆಯಿಂದ ಬೆಲೆಯಿಲ್ಲ. ಮತ್ತೊಂದೆಡೆಯಲ್ಲಿ ಇದ್ದ ಬೆಳೆ ಕೈಗೆ ಸಿಗುತ್ತಿಲ್ಲವಲ್ಲ ನೋವು. ಅದರಲ್ಲೂ ಮಂಗಗಳ ಉಪಟಳ ಹೇಳತೀರದು. ಅವುಗಳ ಕಾಟದಿಂದಾಗುವ ಸಂಕಟ; ತಳಮಳ ಅನುಭವಿಸಿದವರಿಗೆ ಗೊತ್ತು. ಫಸಲು ಉಳಿಯಲು ಬಿಡುವುದಿಲ್ಲ. ಹೊಡೆಯಲು ಸಿಗುವುದಿಲ್ಲ ಕೊಲ್ಲುವುದಕ್ಕೆ ಮನಸ್ಸು ಒಪ್ಪುವುದಿಲ್ಲ. ಹಾಗೇನಾದರೂ ಮಾಡಿದರೆ ಅರಣ್ಯ ಕಾನೂನು ಸುಮ್ಮನಿರುವುದಿಲ್ಲ. ಹಾಗಂತ ಕೈಕಟ್ಟಿ ಕುಳಿತಿರಲಾಗುವುದಿಲ್ಲ.ಅವುಗಳನ್ನು ದೂರ ಓಡಿಸಬೇಕು, ಏನು ಮಾಡೋಣ

ಇತ್ತೀಚಿಗೆ ಹಲವು ಮಂದಿ ಬೇರೆ ಬೇರೆ ಉಪಾಯಗಳನ್ನು ಕಂಡುಕೊಳ್ಳಲು ಆರಂಭಿಸಿದ್ದಾರೆ. ಅವುಗಳಲ್ಲಿ ಮಂಗ ಓಡಿಸುವ ಕೋವಿಯೂ ಒಂದು. ಕೃಷಿಕರೇ ಕಂಡುಕೊಂಡ ಕೆಲವು ವಿಧದ ಕೋವಿಗಳಿವೆ. ಕೃಷಿಕ ಹಾಗೂ ಸಹಕಾರಿ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಣೂರು ನರಸಿಂಹ ಕಾಮತ್ ಅವರು ಮಂಗ ಓಡಿಸುವ ಕೋವಿ ಸಿದ್ಧಪಡಿಸಿದ್ದಾರೆ. ನಳಿಕೆ-ಹಿಡಿಕೆ ಗುಣಮಟ್ಟದ ಕಬ್ಬಿಣದಿಂದಲೇ ತಯಾರಿಸಿದ ಕೋವಿಯದು. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ನರಸಿಂಹ ಕಾಮತ್ ತೆಂಗು ಕೃಷಿಕರು. ೧ ಎಕರೆ ತೆಂಗಿನ ತೋಟವಿದೆ. ಪ್ರತಿ ವರ್ಷ ೭-೮ಸಾವಿರದಷ್ಟು ತೆಂಗಿನ ಕಾಯಿ ಕೊಯಿಲು ಮಾಡುತ್ತಿದ್ದರು. ಇತ್ತೀಚೆಗಿನ ಮೂರು-ನಾಲ್ಕು ವರ್ಷಗಳಲ್ಲಿ ಅವರ ತೋಟಕ್ಕೆ ಮಂಗಗಳು ಲಗ್ಗೆ ಇಡುತ್ತಿವೆ. ತೆಂಗಿನ ಮರವಿದೆ. ಫಲಬಿಡುತ್ತಿದೆ. ಮನೆ ಬಳಕೆಗೆ ಬೇಕಾದ ತೆಂಗಿನಕಾಯಿ ಮಾತ್ರ ಇಲ್ಲ. ಮಾರುಕಟ್ಟೆಯಿಂದಲೇ ಖರೀದಿಸಬೇಕಾದ ಪರಿಸ್ಥಿತಿ. ಇದರಿಂದ ನೊಂದ ಅವರು ಮಂಗಗಳನ್ನು ಓಡಿಸುವ ಬೇರೆ ಬೇರೆ ಪ್ರಯೋಗಗಳನ್ನು ಮಾಡಿ ನೋಡಿದರು. ಯಾವುದಕ್ಕೂ ಮಂಗಗಳು ಜಗ್ಗಲಿಲ್ಲ. ಎಳನೀರು ಕಿತ್ತು ಹಾಳುಗೆಡವುದನ್ನು ಬಿಡಲಿಲ್ಲ. ಬೇರೆ ಏನಾದರೂ ದಾರಿಯಿದೆಯೇ ಎಂದು ಜಾಲತಾಣದಲ್ಲಿ ಹುಡುಕಾಡಿದರು. ಆಗ ಕಂಡದ್ದು ಮಂಗಗಳನ್ನು ಓಡಿಸುವ ಕೋವಿ. ಅದರಿಂದ ಪ್ರೇರೇಪಿತರಾಗಿ ತನ್ನದೇ ಆದ ಕಲ್ಪನೆಯ ಕೋವಿ ತಯಾರಿಕೆಗೆ ರೂಪುರೇಷೆಗಳನ್ನು ಹಾಕಿಕೊಂಡರು

ಶ್ರೇಯಸ್ ಇಂಜಿನಿಯರಿಂಗ್ ಇಂಡಸ್ಟಿಸ್ ಎಂಬ ಸಂಸ್ಥೆಯನ್ನು ಕಾಮತ್ ಅವರು ಹೊಂದಿದ್ದುದರಿAದ ತನ್ನ ಕಲ್ಪನೆಯ ಕೋವಿ ತಯಾರಿಕಗೆ ಮುಂದಾದರು. ಎರಡು ಅಡಿ ಉದ್ದದ ಒಂದು ಇಂಚು ಸುತ್ತಳತೆಯ ಕಬ್ಬಿಣದ ಪೈಪನ್ನು ತೆಗೆದುಕೊಂಡು ಒಂದು ಬದಿಯಲ್ಲಿ ತಿರುಗಣಿ ಮಾಡಿಕೊಂಡರು. ಒಂದು ಕಡೆ ನಳಿಕೆ ಭಾಗ. ಮತ್ತೊಂದು ಕಡೆ ಹಿಡಿಕೆ ಅದರ ನಡುವೆ ತಿರುಗಣೆಯಿರುವ ಕಪ್ಲರ್ ಜೋಡಣೆ. ಅದಕ್ಕೊಂದು ಸಣ್ಣ ತೂತು. ಪಟಾಕಿಯನ್ನು ಕಪ್ಲರ್ ಒಳಗೆ ತೂರಿಸಿ ಆದರ ಬತ್ತಿಯನ್ನು ಕಪ್ಲರ್ ಒಳಗಿನ ತೂತಿನ ಮೂಲಕ ಹೊರತರಲಾಗುತ್ತದೆ. ನಳಿಕೆಯ ತಿರುಗಣೆಯ ಭಾಗದಲ್ಲಿ ಕಾಗದದ ಚೂರುಗಳನ್ನು ತುರುಕಿಸಬೇಕು. ನಳಿಕೆಯ ಚಿಕ್ಕ ಚಕ್ಕ ಹತ್ತು-ಹನ್ನೆರಡು ಕಲ್ಲುಗಳನ್ನು ಹಾಕಬೇಕು. ಎಲ್ಲ ಸಿದ್ಧಗೊಳಿಸಿ ಮಂಗಳಲ್ಲಿರುವ ಕಡೆ ಗುರಿಮಾಡಿ ಪಟಾಕಿಯ ಬತ್ತಿಗೆ ಬೆಂಕಿ ಹಚ್ಚಿದರೆ ಬತ್ತಿ ಉರಿದು ಪಟಾಕಿ ಸಿಡಿದು ನಳಿಕೆಯ ಮೂಲಕ ಹೊರಹೋಗುವ ರಭಸಕ್ಕೆ ಕಾಗದದ ಚೂರು ಚೂರಾಗಿ ಕಲ್ಲುಗಳು ೬೦-೮೦ ದೂರದವರೆಗೆ ಸಿಡಿಯುತ್ತದೆ. ಮಂಗಗಳು ಗಾಬರಿಯಿಂದ ಎದ್ದು ಬಿದ್ದು ಓಡಲಾರಂಭಿಸುತ್ತವೆ. ಅಪಾಯದ ಸೂಚನೆ ಅವುಗಳ ತಂಡಗಳಿಗೆ ಸಿಕ್ಕ ಕೂಡಲೇ ಉಳಿದವು ಪಲಾಯನಗೈಯ್ಯುತ್ತವೆ. ಎಳನೀರು ಮಾತ್ರವಲ್ಲ, ಬಾಳೆ, ಹಣ್ಣು ಹಂಪಲು, ತರಕಾರಿ ಬೆಳೆಗಳ ರಕ್ಷಣೆಗೂ ಈ ಕೋವಿಯನ್ನು ಬಳಸಿ ಮಂಗಗಳನ್ನು ಓಡಿಸಬಹುದು. ಪರವಾನಿಗೆ ಬೇಕಿಲ್ಲ. ಬೆಲೆಯೂ ಹೆಚ್ಚಿಲ್ಲ.

ಆರಂಭದಲ್ಲಿ ನನ್ನ ಉಪಯೋಗಕ್ಕಾಗಿ ಈ ಕೋವಿ ಮಾಡಿದೆ. ಅದನ್ನು ನೋಡಿದ ಕೃಷಿಕರು ಕೃಷಿಕರು ತಮಗೂ ಇಂತಹ ಕೋವಿ ಮಾಡಿಕೊಡಿ ಎಂದು ಬೇಡಿಕೆಯಿಟ್ಟರು. ಈವರೆಗೆ ೩೦೦-೪೦೦ಕೋವಿಗಳನ್ನು ಮಾಡಿಕೊಟ್ಟಿದ್ದೇನೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬೇಡಿಕೆಯೂ ಬರುತ್ತಿದೆ. ಮಂಗಗಳನ್ನು ಓಡಿಸಲು ಇದೊಂದು ಸುರಕ್ಷಿತ ಹಾಗೂ ಕಡಿಮೆ ವೆಚ್ಚದ ಸಾಧನ. ದಪ್ಪ ಕಬ್ಬಿಣವನ್ನು ಉಪಯೋಗಿಸಿರುವುದರಿಂದ ಪಟಾಕಿ ಸಿಡಿಯುವಾಗ ಯಾವುದೇ ಅಪಾಯವಿಲ್ಲ. ಸಿಡಿತಕ್ಕೆ ಬಿಸಿಯಾಗುವುದಿಲ್ಲ ವರ್ಷಕ್ಕೊಮ್ಮೆ ಪೆಯಿಂಟ್ ಕೊಟ್ಟರೆ ಸಾಕು ಎನ್ನತಾರೆ ನರಸಿಂಹ ಕಾಮತ್ ಮಾಹಿತಿಗೆ ಮೊ: ೯೯೦೨೦೨೯೦೨೦

-ರಾಧಾಕೃಷ್ಣ ತೊಡಿಕಾನ 

 

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group