spot_img
Friday, October 11, 2024
spot_imgspot_img
spot_img
spot_img

ಸಹಕಾರಿ ಸಂಸ್ಥೆ ವಿಲೀನದ ಬದಲು ಪರಸ್ಪರ ಸಹಕಾರ ನೀತಿಯಿರಲಿ:ಸಂಪಾದಕೀಯ

ಕೇಂದ್ರ ಸರಕಾರವು ಸಹಕಾರಿ ಕ್ಷೇತ್ರವನ್ನು ರಾಷ್ಟ್ರೀಯ ಮಟ್ಟದಲ್ಲಿ ಬಲಪಡಿಸಲು ಮುಂದಾಗಿರುವುದು ಸಹಕಾರಿ ರಂಗದಲ್ಲಿ ಹೊಸ ಸಾಧ್ಯತೆಯನ್ನು ತೆರೆದಿಟ್ಟಿದೆ. ರಾಷ್ಟ್ರೀಯ ಮಟ್ಟದಲ್ಲಿ ಸಹಕಾರಿ ರಂಗವನ್ನು ಏಕರೂಪದ ವೇದಿಕೆಯಡಿಯಲ್ಲಿ ತರುವ, ಅದರ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೆಜ್ಜೆಯಿರಿಸಿದೆ.

ದೇಶದಲ್ಲಿ ಕ್ಷೀರಕ್ರಾಂತಿಗೆ ಅಡಿಪಾಯ ಹಾಕಿಕೊಟ್ಟ ಅಮೂಲ್ ಸಂಸ್ಥೆಯೊಂದಿಗೆ ರಾಷ್ಟçದಲ್ಲಿ ಎರಡನೆಯ ಸ್ಥಾನ ಪಡೆದುಕೊಂಡಿರುವ ಕರ್ನಾಟಕದ ಕೆಎಂಎಫ್ ಸಂಸ್ಥೆಯನ್ನು ವಿಲೀನಗೊಳಿಸುವ ಪ್ರಸ್ತಾಪಕ್ಕೆ ಸಹಜವಾಗಿ ವಿರೋಧ ವ್ಯಕ್ತವಾಗಿದೆಯಾದರೂ ಸಂಸ್ಥೆಗಳ ನಡುವೆ ಸಹಕಾರ-ಸಹಭಾಗಿತ್ವದ ಬಗ್ಗೆ ಚರ್ಚೆಯಾಗುತ್ತಿದೆ.

ಅಮೂಲ್ ಅಂತರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿದೆ. ಅದರ ಉತ್ಪನ್ನಗಳು ಹಲವಾರು ದೇಶಗಳಿಗೆ ರಫ್ತಾಗುತ್ತಿದೆ. ಕರ್ನಾಟಕದಲ್ಲಿ ಕೆಎಮ್ಎಫ್ ಹಾಗೂ ನಂದಿನಿ ಉತ್ಪನ್ನಗಳು ಮನೆ ಮಾತಾಗಿದೆ. ರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿದೆ.  ಅದರ ಉತ್ಪನ್ನಗಳ ರಫ್ತು ಮಟ್ಟವನ್ನೂ ತಲುಪಿದೆ.

ಪ್ರಪಂಚದಾದ್ಯಂತ ಸುಮಾರು ೭೫ಕ್ಕೂ ಹೆಚ್ಚು ದೇಶಗಳು ಹಾಲಿನ ಕೊರತೆಯನ್ನು ಎದುರಿಸುತ್ತಿವೆ ಎಂದು ಹೇಳಲಾಗುತ್ತಿದೆ. ಹಾಲು ಉತ್ಪಾದನೆಯಲ್ಲಿ ಭಾರತ ಜಗತ್ತಿನಲ್ಲಿ ಪ್ರಥಮ ಸ್ಥಾನ ಹೊಂದಿದೆ. ಆದರೆ ರಫ್ತು ಪ್ರಮಾಣ ಕಡಿಮೆ. ಆದುದರಿಂದ ಹಾಲಿನ ಉತ್ಪನ್ನಗಳಿಗೆ ವಿದೇಶದಲ್ಲಿ ಮಾರುಕಟ್ಟೆ ಕಂಡುಕೊಳ್ಳುವ ಅವಕಾಶಗಳು ಹೆಚ್ಚಿವೆ. ಕೆಎಂಎಫ್ ಸಂಸ್ಥೆಯನ್ನು ಅಮೂಲಿನೊಂದಿಗೆ ವಿಲೀನ ಗೊಳಿಸಿದರೆ ನಂದಿನಿಯ ಅಸ್ಮಿತೆ ನಮ್ಮ ಮುಂದೆ ಬಂದು ನಿಲ್ಲುತ್ತದೆ. ನಂದಿನಿ ಉಳಿಯಬೇಕು. ಅದರೊಂದಿಗೆ ಕೆಎಮ್‌ಎಫ್ ಪ್ರಗತಿ ಹೊಂದಬೇಕು. ಆದುದರಿಂದ ವಿಲೀನ ತರವಲ್ಲ. ಆದರೆ ಕೊಡುಕೊಳ್ಳುವ ತತ್ವದಡಿಯಲ್ಲಿ ಕಾರ್ಯ ನಿರ್ವಹಿಸಬಹುದು. ಅಮೂಲ್ ಸಂಸ್ಥೆಯಲ್ಲಿರುವ ರಫ್ತಿಗೆ ಪೂರಕವಾದ ಗುಣಮಟ್ಟ, ತಾಂತ್ರಿಕತೆಯನ್ನು ಕೆಎಮ್‌ಎಫ್‌ಗೆ ನೀಡುವುದಲ್ಲದೆ ಕೆಎಮ್‌ಎಫ್ ಸಂಸ್ಥೆಯ ಉತ್ಪಾದನಾ ಸಾಮರ್ಥ್ಯವನ್ನು  ಅಮೂಲ್ ಬಳಸಿಕೊಳ್ಳಬಹುದು. ಇದರಿಂದ ಎರಡೂ ಸಂಸ್ಥೆಗಳಿಗೆ ಹೆಚ್ಚು ಪ್ರಯೋಜನವಾಗಬಹುದು.

ಡೈರಿ ಉದ್ಯಮದಿಂದ ರೈತರ ಆದಾಯವೂ ವೃದ್ಧಿಯಾಗಬೇಕು. ಹಾಗೂ ಉದ್ಯೋಗವೂ ಸೃಷ್ಟಿಯಾಗಬೇಕು. ಸ್ಥಳೀಯ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮಟ್ಟದಲ್ಲಿಯೇ ಗುಣಮಟ್ಟದ ಉತ್ಪನ್ನಗಳ ತಯಾರಿಗೆ ರೂಪುರೇಷೆಗಳನ್ನು ಸಿದ್ಧಪಡಿಸಬೇಕು. ಹಾಲು ಉತ್ಪಾದಕರ ಸಂಘಗಳು ಒಕ್ಕೂಟಗಳಾಗಿ, ಒಕ್ಕೂಟಗಳು ಸೇರಿ ಮಹಾಮಂಡಲವಾಗಿ ರಾಜ್ಯ ಮಟ್ಟದಲ್ಲಿ ಕಾರ್ಯನಿರ್ವಹಿತ್ತಿರುವ ಸಂಸ್ಥೆಗಳು ಸೇರಿ ರಾಷ್ಟಿಯ ಬೃಹತ್ ಮಂಡಲ ರೂಪಿಸಿಕೊಂಡರೆ ದೇಶೀಯ ಹಾಗೂ ವಿದೇಶೀಯ ಮಾರುಕಟ್ಟೆಗಳಲ್ಲಿ ಪಾರಮ್ಯ ಮೆರೆಯಲು ಸಾಧ್ಯವಾಗಬಹುದು. ಮೌಲ್ಯವರ್ಧಿತ ಆಹಾರ ಉತ್ಪನ್ನಗಳು, ಕೃಷಿ ಉತ್ಪನ್ನಗಳನ್ನು ರಪ್ತು ಮಾಡುವುದಕ್ಕೂ ರಾಷ್ಟಿಯ ಮಟ್ಟದ ಸಹಕಾರಿ ಸಂಸ್ಥೆಗಳಿರಬೇಕು. ಖಾಸಗಿ ವಲಯಗಳು ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತಿದ್ದರೂ ಸಹಕಾರಿ ರಂಗದ ಕೊಡುಗೆ ಕಡಿಮೆಯೇ. ರಫ್ತು ಪೂರಕ ಇಲಾಖೆ, ಸಂಸ್ಥೆಗಳಿದ್ದರೂ ಅವು ರೈತರ ಕೃಷಿ, ಆಹಾರ ಉತ್ಪನ್ನಗಳ ರಫ್ತುವಿಗೆ ವಹಿಸಿದ ಕಾಳಜಿ ಹೇಳಿಕೊಳ್ಳುವಂತದೇನಿಲ್ಲ.

ಕೇಂದ್ರ ಸರಕಾರವು ಸಹಕಾರಿ ರಫ್ತು ಸಂಸ್ಥೆಗಳನ್ನು ಹುಟ್ಟು ಹಾಕುತ್ತಿರುವುದು ಉತ್ತಮ ಬೆಳವಣಿಗೆ. ಅಮೂಲ್, ನಾಫೆಡ್, ಇಪ್ಕೋ, ಕ್ರಿಬ್ಕೋ ಎನ್‌ಸಿಡಿಸಿಯಂತಹ ಸಂಸ್ಥೆಗಳು ಕೈಜೋಡಿಸಿ ಬಹುಕೋಟಿ ಬಂಡವಾಳ ಹೂಡಲು ಮುಂದಾಗಿರುವುದು ಸಹಕಾರಿ ಕ್ಷೇತ್ರದಲ್ಲಿ ಹೊಸ ಭರವಸೆ ಹುಟ್ಟು ಹಾಕಿದೆ.

 

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group