spot_img
Monday, May 20, 2024
spot_imgspot_img
spot_img
spot_img

ಬ್ಯಾಕ್ಟೀರಿಯ ನಿವಾರಣೆಯಲ್ಲಿ ಅಡಿಕೆ ಪಾತ್ರ ತಿಳಿಯೋಣ…

– ಡಾ. ಸರ್ಪಂಗಳ ಕೇಶವ ಭಟ್   , ಸಂಯೋಜಕರು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ,  ವಾರಣಾಸಿ ಸೌಧ, ಮಿಷನ್ ರಸ್ತೆ, ಮಂಗಳೂರು .

 

ಮಾನವನು ನಾಗರೀಕತೆಯ ಪ್ರಾರಂಭದಿಂದಲೇ ಸಸ್ಯಗಳನ್ನು ಔಷಧಿಯಾಗಿ ಬಳಸುತ್ತಿದ್ದನು. ಇಂತಹ ಔಷಧೀಯ  ಸಸ್ಯಗಳ  ವಿವರಣೆಗಳನ್ನು  ಆಯುರ್ವೇದ, ಯುನಾನಿ, ಹೋಮಿಯೋಪತಿಯಂತಹ ಪ್ರಾಚೀನ ಭಾರತೀಯ ವೈದ್ಯಕೀಯ ಪದ್ಧತಿಗಳಲ್ಲಿ ಚೆನ್ನಾಗಿ ಉಲ್ಲೇಖಿಸಲಾಗಿವೆ.  ಅಡಿಕೆ ಮರ ಕೂಡಾ ಇಂತಹ ಒಂದು ಅತ್ಯಮೂಲ್ಯ ಔಷಧೀಯ ಸಸ್ಯವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯವರು 2009 ರಲ್ಲಿ ಹೊರತಂದ ಒಂದು ಪುಸ್ತಕದಲ್ಲಿ ಅಡಿಕೆಯಲ್ಲಿ 20 ಕ್ಕಿಂತಲೂ ಹೆಚ್ಚು ವಿಧ ವಿಧದ ಔಷಧೀಯ ಗುಣಗಳಿವೆ ಎಂಬುದಾಗಿ ನಮೂದಿಸಿದ್ದಾರೆ.

 

ಕೆಲವು ಹಾನಿಕಾರಕ ಬ್ಯಾಕ್ಟೀರಿಯಾಗಳು ನಮ್ಮ ದೇಹಕ್ಕೆ ಮಾಡುವ ಸಮಸ್ಯೆಗಳು ನಮಗೆಲ್ಲರಿಗೂ ತಿಳಿದ ವಿಚಾರ. ಅದರಲ್ಲೂ, ಕ್ಷಯ, ನುಮೋನಿಯಾ, ಟೈಫಾಯಿಡ್, ಮೊದಲಾದವುಗಳು ತುಂಬಾ ತೊಂದರೆಗಳನ್ನು ಉಂಟುಮಾಡುತ್ತವೆ. ಇಂತಹ ಹಾನಿಕಾರಕ ಬ್ಯಾಕ್ಟೀರಿಯಾಗಳಿಂದ ಉಂಟಾಗುವ  ಸೋಂಕು ನಿವಾರಣೆಗೆ ಬ್ಯಾಕ್ಟೀರಿಯಾ ವಿರೋಧಿ ರಾಸಾಯನಿಕ ಸಂಯುಕ್ತಗಳನ್ನು (ಆಂಟಿಬಯೋಟಿಕ್ಸ್) ಔಷಧಿಯಾಗಿ ಬಳಸಲು ವೈದ್ಯರು ಶಿಫಾರಸು ಮಾಡುತ್ತಾರೆ. ಆದರೆ, ಯಾವುದೇ ರಾಸಾಯನಿಕ ಸಂಯುಕ್ತಗಳನ್ನು ಅಸಮರ್ಪಕವಾಗಿ ಬಳಕೆ ಮಾಡಿದ್ದಲ್ಲಿ ಅವುಗಳಿಂದ ಹಲವಾರು ಅಡ್ಡಪರಿಣಾಮಗಳನ್ನು ನಾವು ಅನುಭವಿಸಬೇಕಾಗುತ್ತದೆ. ಇದನ್ನು ಮನಗಂಡು ರಾಸಾಯನಿಕ ಸಂಯುಕ್ತಗಳ ಬದಲಿಗೆ ಸಸ್ಯಜನ್ಯ ಬ್ಯಾಕ್ಟೀರಿಯಾ ನಿವಾರಕಗಳ ಬಗ್ಗೆ ಹೆಚ್ಚು ಹೆಚ್ಚು ಸಂಶೋಧನೆಗಳು ನಡೆಯುತ್ತಿವೆ. ಇಂತಹ ಸಸ್ಯಜನ್ಯ ಬ್ಯಾಕ್ಟೀರಿಯಾ ನಿವಾರಕ ಸಸ್ಯಗಳಲ್ಲಿ ನಮ್ಮಲ್ಲಿ ಹೇರಳವಾಗಿರುವ ಅಡಿಕೆ ಮರವೂ ಒಂದು. ಈಗಾಗಲೇ ಹಲವಾರು ವೈಜ್ಞಾನಿಕ ಪುರಾವೆಗಳು ಅಡಿಕೆ ಮರದಲ್ಲಿ ಪ್ರಬಲವಾದ ಬ್ಯಾಕ್ಟೀರಿಯಾ ನಿವಾರಕ ಗುಣಗಳಿವೆ ಎಂಬುದನ್ನು ಸಾಬೀತುಪಡಿಸಿವೆ. ಅಂತಹ ವೈಜ್ಞಾನಿಕ ಸಂಶೋಧನೆಗಳನ್ನು ಹುಡುಕಿ ನಿಮ್ಮ ಮುಂದೆ ತರುವುದೇ ಈ ಲೇಖನದ ಮುಖ್ಯ ಉದ್ದೇಶ.

ಅಡಿಕೆ ಸಾರದ ಬ್ಯಾಕ್ಟೀರಿಯಾ ವಿರೋಧಿ ಗುಣ:

ಅಡಿಕೆಯಿಂದ ತಯಾರಿಸಿದ ಎಲ್ಲಾ ತರದ ಸಾರಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ತೋರಿಸುತ್ತವೆ ಎಂಬುದಾಗಿ ಈಗಾಗಲೇ ಸಾಬೀತಾಗಿದೆ. ಬಿಸಿ ನೀರನ್ನು ಉಪಯೋಗಿಸಿ ತಯಾರಿಸಿದ ಅಡಿಕೆಯ ಸಾರವು ಒಂದು  ಎಂ ಎಲ್ ನಲ್ಲಿ 3.3 ರಿಂದ 16.0 ಮೈಕ್ರೋ ಗ್ರಾಂ ಸಾಂದ್ರತೆಯಲ್ಲಿ ಎಸ್ಚೆರಿಚಿಯಾ ಕೋಲಿ, ಕ್ಲೆಬ್ಸಿಯೆಲ್ಲಾ, ಪ್ರೋಟಿಯಸ್, ಸ್ಯೂಡೋಮೊನಾಸ್, ಸಾಲ್ಮೊನೆಲ್ಲಾ ಟೈಫಿಮುರಿಯಮ್, ಸ್ಟ್ರೆಪ್ಟೋಕೋಕಸ್ ಮ್ಯುಟಾನ್ಸ್‌ ಮತ್ತು ಸ್ಟ್ರೆಪ್ಟೋಕೋಕಸ್ ವಿರಿಡೆ ಮೊದಲಾದ ಹಾನಿಕಾರಕ ಬ್ಯಾಕ್ಟೀರಿಯಾಗಳ ಬೆಳವಣಿಗೆಗಳನ್ನು 100% ನಷ್ಟು ಪ್ರತಿಬಂಧಿಸುತ್ತದೆ ಎಂಬುದಾಗಿ ಡಾ. ಅಂತಿಕಟ್ ಮತ್ತು ಮೈಕೆಲ್ 2009 ರಲ್ಲಿ ನಡೆಸಿದ ಒಂದು ಸಂಶೋಧನೆಯಲ್ಲಿ ಕಂಡುಕೊಂಡಿದ್ದಾರೆ.

 

ಈಥೈಲ್ ಆಲ್ಕೋಹಾಲ್ ಉಪಯೋಗಿಸಿ ತಯಾರಿಸಿದ ಅಡಿಕೆಯ ಸಾರ ಕೂಡ ಬ್ಯಾಕ್ಟೀರಿಯಾ ನಿರೋಧಕ ಗುಣವನ್ನು ತೋರಿಸಿದೆ ಎಂಬುದಾಗಿ  ಡಾ. ಕಾರ್ಫ್ರೊಮ್ ಮತ್ತು ಅವರ ತಂಡ 2009 ರಲ್ಲಿ ಹೇಳಿದ್ದಾರೆ. ಅವರು ಇಂತಹ ಸಾರವನ್ನು  ಬ್ಯಾಸಿಲಸ್ ಸೆರಿಯಸ್, ಎಸ್ಚೆರಿಚಿಯಾ ಕೋಲಿ, ಸ್ಟ್ಯಾಫಿಲೋಕೋಕಸ್ ಆರಿಯಸ್‌ ಮತ್ತು ಸಾಲ್ಮೊನೆಲ್ಲಾ ಟೈಫಿ ಮೊದಲಾದ ಬ್ಯಾಕ್ಟೀರಿಯಾಗಳ ಮೇಲೆ ನಡೆಸಿದ ಪ್ರಯೋಗಗಳಿಂದ ಸಾಬೀತು ಮಾಡಿರುತ್ತಾರೆ.

 

ಡಾ. ಚಿನ್ ಮತ್ತು ಅವರ ತಂಡ 2013 ರಲ್ಲಿ ಎಸ್ಚೆರಿಚಿಯಾ ಕೋಲಿ, ಪ್ರೋಟಿಯಸ್ ವಲ್ಗ್ಯಾರಿಸ್, ಸ್ಯೂಡೋಮೊನಾಸ್ ಎರುಜಿನೋಸಾ, ಸಾಲ್ಮೊನೆಲ್ಲಾ ಟೈಫಿ, ಸಾಲ್ಮೊನೆಲ್ಲಾ ನಾನ್-ಟೈಫಿ, ಶಿಗೆಲ್ಲ ಫ್ಲೆಕ್ಸ್‌ನೆರಿ ಮತ್ತು ವಿಬ್ರಿಯೊ ಕಾಲರಾಗಳ ಮೇಲೆ ನಡೆಸಿದ ಒಂದು ಸಂಶೋಧನೆಯಲ್ಲಿ ಅಡಿಕೆಯ ಎಥನೋಲಿಕ್ ಸಾರವು ಕೂಡ ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ತೋರಿಸುತ್ತದೆ ಎಂಬುದಾಗಿ ಹೇಳಿದ್ದಾರೆ. ಹಾಗೆಯೇ ಪ್ರೋಟಿಯಸ್ ವಲ್ಗ್ಯಾರಿಸ್ ಎಂಬ ಬ್ಯಾಕ್ಟೀರಿಯಾದ ಮೇಲೆ ಇದರ ಪರಿಣಾಮ ಸಾಮಾನ್ಯ ಪ್ರತಿಜೀವಕ ‘ಸಿಪ್ರೊಫ್ಲೋಕ್ಸಾಸಿನ್’ ನಸ್ಟೆ ಇತ್ತು ಎಂಬುದಾಗಿಯೂ ಅವರು ತಿಳಿಸಿದ್ದಾರೆ.

 

ಇದರಂತೆ,  ಅಡಿಕೆಯ ಈಥೈಲ್ ಅಸಿಟೇಟ್ ಸಾರ ಎಸ್ಚೆರಿಚಿಯಾ ಕೋಲಿ ಮತ್ತು ಸ್ಟ್ಯಾಫಿಲೋಕೋಕಸ್ ಆರಿಯಸ್‌ ತಳಿಗಳ ಮೇಲೆ ಪ್ರಬಲವಾದ ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ತೋರಿಸಿದೆ ಎಂಬುದಾಗಿ ಡಾ. ಸಲುತನ್ ಮತ್ತು ಬಿಲ್ಲಕುರ 2015 ರಲ್ಲಿ ನಡೆಸಿದ ಅಧ್ಯಯನದಲ್ಲಿ ಹೇಳಿದ್ದಾರೆ.

ಹಾಗೆಯೇ, ಅಡಿಕೆಯ ಅಸಿಟೋನ್ ಸಾರವು ಎಸ್ಚೆರಿಚಿಯಾ ಕೋಲಿ, ಪ್ರೋಟಿಯಸ್ ಮಿರಾಬಿಲಿಸ್ ಮತ್ತು ಸ್ಟ್ಯಾಫಿಲೋಕೋಕಸ್ ಎಪಿಡರ್ಮಿಡಿಸ್ ತಳಿಗಳ ವಿರುದ್ಧ  ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ತೋರಿಸಿದೆ ಎಂಬುದಾಗಿ ಡಾ. ಹಜಾರಿಕಾ ಮತ್ತು ಸೂದ್ ಅದೇ ಸಮಯದಲ್ಲಿ ಹೇಳಿರುತ್ತಾರೆ.

 

ಅಡಿಕೆಯ ಎಥನಾಲ್ ಸಾರ ಕೂಡ ಪ್ರಬಲವಾದ ಬ್ಯಾಕ್ಟೀರಿಯಾ ವಿರೋಧಿ ಏಜೆಂಟ್ ಎಂದು ಡಾ. ಖಾನ್ ಮತ್ತು ಅಖ್ಟರ್ 2020 ರಲ್ಲಿ ವರದಿ ಮಾಡಿದ್ದಾರೆ. ಮೈಕ್ರೋಕೋಕಸ್, ವಿಬ್ರಿಯೊ ಕಾಲರಾ, ಸಾಲ್ಮೊನೆಲ್ಲಾ ಟೈಫಿ, ಸಾಲ್ಮೊನೆಲ್ಲಾ ಪ್ಯಾರಾ ಟೈಫಿ, ಎಸ್ಚೆರಿಚಿಯಾ ಕೋಲಿ, ಸ್ಟ್ಯಾಫಿಲೋಕೋಕಸ್ ಆರಿಯಸ್‌ ಮತ್ತು ಸ್ಯೂಡೋಮೊನಾಸ್ ಏರುಜಿನೋಸಾ ಮೊದಲಾದ ಬ್ಯಾಕ್ಟೀರಿಯಾಗಳ ಮೇಲೆ ಈ ಸಾರ ಪರಿಣಾಮಕಾರಿ ಎಂಬುದಾಗಿ ಅವರು ಕಂಡುಕೊಂಡಿದ್ದಾರೆ.

 

ಬ್ಯಾಸಿಲಸ್ ಸಿರಿಯಸ್, ಎಸ್ಚೆರಿಚಿಯಾ ಕೋಲಿ, ಸ್ಟ್ಯಾಫಿಲೋಕೋಕಸ್ ಆರಿಯಸ್‌ ಮತ್ತು ಸಾಲ್ಮೊನೆಲ್ಲಾ ಟೈಫಿ ಎಂಬ ಬ್ಯಾಕ್ಟೀರಿಯಾಗಳ ಮೇಲೆ 2009 ರಲ್ಲಿ ಡಾ. ಕಾರ್ಫ್ರೊಮ್ ಮತ್ತು ಅವರ ತಂಡ ನಡೆಸಿದ ಒಂದು ತುಲನಾತ್ಮಕ ಅಧ್ಯಯನದಲ್ಲಿ ಅಡಿಕೆಯ ನೀರಿನ ಸಾರ, ಅಸಿಟೋನ್ ಸಾರ ಮತ್ತು ಈಥೈಲ್ ಆಲ್ಕೋಹಾಲ್ ಸಾರಗಳು ಒಂದೇ ರೀತಿಯ ಬ್ಯಾಕ್ಟೀರಿಯಾ ವಿರೋಧಿ ಗುಣ ಲಕ್ಷಣಗಳನ್ನು ಪ್ರದರ್ಶಿಸಿದವು, ಆದರೆ ಅಡಿಕೆಯ ಈಥೈಲ್ ಅಸಿಟೇಟ್ ಸಾರವು  ಆವುಗಳಿಗಿಂತ ಕಡಿಮೆ ಪರಿಣಾಮಕಾರಿ ಆಗಿತ್ತು ಎಂಬುದಾಗಿ ಹೇಳಿರುತ್ತಾರೆ.

 

ಅಡಿಕೆಯ  ನ್ಯಾನೋಪಾರ್ಟಿಕಲ್ಸ್:

ಬ್ಯಾಕ್ಟೀರಿಯಾ ವಿರೋಧಿ ಚಟುವಟಿಕೆಯಲ್ಲಿ ಅಡಿಕೆಯ ನ್ಯಾನೋಪಾರ್ಟಿಕಲ್ಸ್ ಅದರ ಸಾಮಾನ್ಯ ಸಾರಗಳಿಗಿಂತ ಗಣನೀಯವಾಗಿ ಉತ್ತಮವಾಗಿದೆ ಎಂಬುದಾಗಿ ಕೆಲವು ಸಂಶೋಧನೆಗಳು ತಿಳಿಸಿವೆ. ಅಡಿಕೆಯ ನೀರಿನ ಸಾರವನ್ನು ಬಳಸಿದಾಗ ಬ್ಯಾಸಿಲಸ್ ಸಬ್ಟಿಲಿಸ್ ಮತ್ತು ಸ್ಯೂಡೋಮೊನಾಸ್ ಎರುಜಿನೋಸಾಗಳ ಪ್ರತಿಬಂಧಕ ವಲಯಗಳು ಕ್ರಮವಾಗಿ 11.0 ಮತ್ತು 13.0 ಮಿ. ಮೀ. ಆಗಿತ್ತು, ಆದರೆ ಅದೇ ಸಾಂದ್ರತೆಯ ಅಡಿಕೆಯ ತಾಮ್ರದ ನ್ಯಾನೋಪಾರ್ಟಿಕಲ್ಸ್ ಬಳಸಿದಾಗ ಪ್ರತಿಬಂಧಕ ವಲಯಗಳು ಹೆಚ್ಚಾಗಿ ಕ್ರಮವಾಗಿ 25.0 ಮತ್ತು 23.0 ಮಿ. ಮೀ. ಎಂಬುದಾಗಿತ್ತು ಎಂದು ಡಾ. ಪ್ರದೀಪ್ ಮತ್ತು ಅವರ ತಂಡ 2019 ರಲ್ಲಿ ಹೇಳಿದ್ದಾರೆ.

 

ಅಡಿಕೆ ಮರದ ಎಲೆ:

ಅಡಿಕೆಯಂತೆ ಅಡಿಕೆ ಮರದ ಎಲೆ ಕೂಡ ಬ್ಯಾಕ್ಟೀರಿಯಾ ವಿರೋಧಿ ಚಟುವಟಿಕೆಯನ್ನು  ತೋರಿಸುತ್ತದೆ. ಡಾ. ಸುರೇಂದ್ರನ್ ಮತ್ತು ಯುವರಾಜ್ 2010 ರಲ್ಲಿ ಬ್ಯಾಸಿಲಸ್ ಸಿರಿಯಸ್ ಮತ್ತು ಸ್ಯೂಡೋಮೊನಾಸ್ ಫ್ಲೋರೊಸೆನ್ಸ್ ವಿರುದ್ಧ ಅಡಿಕೆ ಎಲೆಯ ಸಾರದ ಬ್ಯಾಕ್ಟೀರಿಯಾ ವಿರೋಧಿ ಪರಿಣಾಮವನ್ನು ವರದಿ ಮಾಡಿದ್ದಾರೆ. ಹಾಗೆಯೇ, ಕ್ಲೆಬ್ಸಿಲ್ಲಾ ನ್ಯುಮೋನಿಯಾ, ಎಂಟರೋಬ್ಯಾಕ್ಟರ್ ಏರೋಜೆನೆಸ್, ಸ್ಟ್ಯಾಫಿಲೋಕೋಕಸ್ ಎಪಿಡರ್ಮಿಡಿಸ್, ಬ್ಯಾಸಿಲಸ್ ಸಬ್ಟಿಲಿಸ್ ಮತ್ತು ಎಂಟ್ರೊಕೋಕಸ್ ಫೇಕಾಲಿಸ್‌ ಮೊದಲಾದ ಬ್ಯಾಕ್ಟೀರಿಯಾಗಳ ಮೇಲೆ ಡಾ. ಅಂಬಿಕಾ ಮತ್ತು ರಾಜಗೋಪಾಲ್ 2017 ರಲ್ಲಿ ನಡೆಸಿದ ಅಧ್ಯಯನದಲ್ಲಿ ಅಡಿಕೆ ಎಲೆಯ ಅಸಿಟೋನ್ ಸಾರವು ಇಂತಹ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯಲು ತುಂಬಾ ಪರಿಣಾಮಕಾರಿ ಎಂಬುದಾಗಿ ಕಂಡುಕೊಂಡಿದ್ದಾರೆ.

ಅಡಿಕೆ ಮರದ ಬೇರು:

ಅಡಿಕೆ ಮರದ ಬೇರಿನ ಸಾರವು ಕೂಡ ಬ್ಯಾಕ್ಟೀರಿಯಾ ವಿರೋಧಿ ಎಂದು ಕಂಡುಬಂದಿದೆ. ಡಾ. ಬೇಬಿ ಮತ್ತು ರಾಫೆಲ್ 2014 ರಲ್ಲಿ ಅಡಿಕೆ ಬೇರಿನ ಎಥನಾಲ್ ಸಾರವು ಬ್ಯಾಸಿಲಸ್ ಸೆರಿಯಸ್, ಸ್ಟ್ಯಾಫಿಲೋಕೋಕಸ್ ಆರಿಯಸ್‌, ಸಾಲ್ಮೊನೆಲ್ಲಾ ಟೈಫಿ, ಸ್ಯೂಡೋಮೊನಾಸ್ ಎರುಜಿನೋಸಾ, ಕ್ಲೆಬ್ಸಿಲ್ಲಾ ನ್ಯುಮೋನಿಯಾ ಮತ್ತು ಸ್ಟ್ರೆಪ್ಟೋಕೋಕಸ್ ಪಯೋಜಿನಿಸ್ ಮೊದಲಾದ ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸುತ್ತದೆ ಎಂಬುದಾಗಿ ಹೇಳಿದ್ದಾರೆ. ಹಾಗೆಯೇ, ಡಾ. ಅಂಬಿಕಾ ಮತ್ತು ರಾಜಗೋಪಾಲ್ 2017 ರಲ್ಲಿ ಅಡಿಕೆ ಬೇರಿನ ಅಸಿಟೋನ್ ಸಾರವನ್ನು ಉಪಯೋಗಿಸಿ ಬ್ಯಾಕ್ಟೀರಿಯಗಳಾದ ಎಂಟ್ರೊಕೋಕಸ್ ಫೇಕಾಲಿಸ್‌, ಕ್ಲೆಬ್ಸಿಲ್ಲಾ ನ್ಯುಮೋನಿಯಾ, ಎಂಟರೋಬ್ಯಾಕ್ಟರ್ ಏರೋಜೆನೆಸ್,  ಸ್ಟ್ಯಾಫಿಲೋಕೋಕಸ್ ಎಪಿಡರ್ಮಿಡಿಸ್ ಮತ್ತು ಬ್ಯಾಸಿಲಸ್ ಸಬ್ಟಿಲಿಸ್ ಅವುಗಳ ಮೇಲೆ ನಡೆಸಿದ ಪ್ರಯೋಗಗಳಲ್ಲಿ ಕೂಡ ಇದನ್ನು ಸಾಬೀತು ಪಡಿಸಿದ್ದಾರೆ.

ಅಡಿಕೆ ಮರದ ಸಿಂಗಾರ:

ಅಡಿಕೆ ಮರದ ಸಿಂಗಾರದಲ್ಲಿ ಕೂಡ ಬ್ಯಾಕ್ಟೀರಿಯಾ ನಾಶಕ ಗುಣಗಳಿವೆ ಎಂಬುದಾಗಿ ಡಾ. ಶೆನ್ ಮತ್ತು ಅವರ ತಂಡ 2017 ರಲ್ಲಿ ಎಸ್ಚೆರಿಚಿಯಾ ಕೋಲಿ ಮತ್ತು ಸ್ಟ್ಯಾಫಿಲೋಕೋಕಸ್ ಆರಿಯಸ್‌ ತಳಿಗಳಗಳ ಮೇಲೆ ನಡೆಸಿದ ಅಧ್ಯಯನಗಳಿಂದ ಕಂಡುಕೊಂಡಿದ್ದಾರೆ.

 

ಅಡಿಕೆಯ ಚೊಗರು:

ಅಡಿಕೆಯಲ್ಲಿ ಕೆಂಪಡಿಕೆಯ ಮಾದರಿಯನ್ನು ತಯಾರಿಸುವಾಗ, ಎಳೆಯ ಅಡಿಕೆಗಳನ್ನು ಮೊದಲು ಕುದಿಸಬೇಕು ಮತ್ತು ಈ ಪ್ರಕ್ರಿಯೆಯಲ್ಲಿ ‘ಚೋಗರು’ ಎಂಬ ಸಾಂದ್ರೀಕೃತ ದ್ರವವು ಅಡಿಕೆಯಿಂದ ಹೊರಬರುತ್ತದೆ. ಡಾ. ನೇತ್ರಾವತಿ ಮತ್ತು ಅವರ ತಂಡ 2010 ರಲ್ಲಿ ಅಂತಹ ದ್ರವದ ಜೀವಿರೋಧಿ ಚಟುವಟಿಕೆಯನ್ನು ಎಂಟರೊಬ್ಯಾಕ್ಟರ್ ಏರೋಜೆನ್‌, ಸ್ಟ್ಯಾಫಿಲೋಕೋಕಸ್ ಆರಿಯಸ್‌, ಎಸ್ಚೆರಿಚಿಯಾ ಕೋಲಿ ಮತ್ತು ಬ್ಯಾಸಿಲಸ್ ಸಬ್ಟಿಲಿಸ್ ಎನ್ನುವ ನಾಲ್ಕು ಬ್ಯಾಕ್ಟೀರಿಯಾ ತಳಿಗಳ ಮೇಲೆ ಪರೀಕ್ಷಿಸಿ ಅಡಿಕೆಯ ಚೊಗರು ಬ್ಯಾಕ್ಟೀರಿಯಾ ವಿರೋಧಿ ಚಟುವಟಿಕೆಯನ್ನು ಹೊಂದಿದೆ ಎಂಬುದಾಗಿ ಹೇಳಿದ್ದಾರೆ.

 

ಅನಿಸಿಕೆ:

ಹೀಗೆ ಅಡಿಕೆ ಮರದ ಹಲವಾರು ಜೈವಿಕ ಭಾಗಗಳು ಮಾನವನನ್ನು ಬಾಧಿಸುವ ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿವೆ ಎಂಬುದಾಗಿ ನಮಗೆ ತಿಳಿದು ಬರುತ್ತದೆ. ಚೀನಾದಲ್ಲಿ ಅಡಿಕೆಯನ್ನು ಉಪಯೋಗಿಸಿ ತಯಾರಿಸಿದ 25 ಕ್ಕಿಂತಲೂ ಹೆಚ್ಚು ಔಷಧಿಗಳು ಈಗಾಗಲೇ ಬಳಕೆಯಲ್ಲಿವೆ. ಈ ವಿಷಯಗಳಲ್ಲಿ ನಾವು ಕೂಡ ಇನ್ನೂ ಹೆಚ್ಚಿನ ಅಧ್ಯಯನ ಮಾಡಿ ಅಡಿಕೆಯನ್ನು ಔಷಧಿಯಾಗಿ ಬಳಸುವಲ್ಲಿ ಗಮನಹರಿಸಿದಾಗ ಅಡಿಕೆಗೆ ಇನ್ನಿಲ್ಲದ ಬೇಡಿಕೆ ಬರುವುದರಲ್ಲಿ ಸಂಶಯವಿದೆಯೇ?

 

 

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group