spot_img
Saturday, July 27, 2024
spot_imgspot_img
spot_img
spot_img

ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ದರ ನಿಗದಿಯಾಗಲಿ..!!

#ರಾಧಾಕೃಷ್ಣ ತೋಡಿಕನ

 

ಕೃಷಿಗೆ ವೈಜ್ಞಾನಿಕವಾದ ಬೆಲೆ ನಿಗದಿ ಮತ್ತು ಬೆಂಬಲ ಬೆಲೆ ಖಾತರಿ ಕಾಯಿದೆ ಜಾರಿ ಬೇಡಿಕೆಯಿಟ್ಟು ರೈತರ ಚಳುವಳಿಯಾಗುತ್ತಿದೆ. ಕೃಷಿ ಉತ್ಪನ್ನಗಳ ಬೆಲೆ ಕುಸಿದಾಗ ಕೇಂದ್ರ ಸರಕಾರ ಕೆಲವು ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಿಸಿದೆ. ಒಂದಿಷ್ಟು ಷರತ್ತುಗಳನ್ನು ವಿಧಿಸಿ ನಿಗದಿತ ಪ್ರಮಾಣದಲ್ಲಿ ಬೆಂಬಲ ಬೆಲೆಯಡಿ ಕೃಷಿ ಉತ್ಪನ್ನಗಳನ್ನು ಖರೀದಿಸಿದೆ. ಆದರೆ ಬೆಂಬಲ ಬೆಲೆಯ ಅನುಕೂಲತೆಗಳು ಎಲ್ಲಾ ರೈತರಿಗೆ ದೊರೆಯುತ್ತದೆ ಎಂಬ ಖಾತರಿ ಇಲ್ಲ. ಇತ್ತೀಚಿಗಷ್ಟೇ ಕೇಂದ್ರ ಹಾಗೂ ರಾಜ್ಯ ಕೊಬ್ಬರಿಗೆ ಬೆಂಬಲ ಬೆಲೆ ಘೋಷಿಸಿತು. ಆದರೆ ಖರೀದಿ ಆರಂಭವಾದಾಗ ಅದರಲ್ಲೂ ವಂಚನೆಗಳಾದವು. ಬಹಳಷ್ಟು ರೈತರು ಬೆಂಬಲ
ಬೆಲೆ ವ್ಯವಸ್ಥೆಯಿಂದಲೇ ಹೊರಗುಳಿಯುವಂತಾಯಿತು.

ರೈತರ ಕೃಷಿ ಉತ್ಪನ್ನಗಳು ಮಾರುಕಟ್ಟೆಗೆ ಬರುವ ಋತುಮಾನಗಳಲ್ಲಿ ಒಮ್ಮೆಲೆ ಬೆಲೆಗಳು ಪಾತಾಳಕ್ಕಿಳಿಯುತ್ತವೆ. ಸಾಮಾನ್ಯ ರೈತರಲ್ಲಿ ಆ ಬೆಳೆಯನ್ನು ದಾಸ್ತಾನು ಇರಿಸಿಕೊಳ್ಳುವ ಅನುಕೂಲತೆಗಳು ಇರುವುದಿಲ್ಲ. ಮನೆಸೇರಿದ ಉತ್ಪನ್ನಗಳನ್ನು ಮಾರಾಟ ಮಾಡಬೇಕಾದ ಅನಿವಾರ್ಯತೆಯೂ ಹೆಚ್ಚಿರುತ್ತದೆ. ಆದುದರಿಂದಲೇ ಉತ್ಪನ್ನಗಳು ಮಾರುಕಟ್ಟೆಗೆ ಬಂದ ಮೇಲೆ ಅದರ ಹವಾವೇ ಬದಲಾಗುತ್ತದೆ. ಬೆಲೆ ತಳಮಟ್ಟಕ್ಕಿಳಿಯುತ್ತದೆ. ರೈತರಿಗೂ ಇದರಿಂದ ಲಾಭವಾಗುವುದಿಲ್ಲ. ಗ್ರಾಹಕರಿಗೂ ಪ್ರಯೋಜನವಾಗುವುದಿಲ್ಲ. ಉದ್ಯಮ ಕ್ಷೇತ್ರಗಳಿಂದ ತಯಾರಿಯಾಗಿ ಹೊರಬರುವ ಪ್ರತಿಯೊಂದು ವಸ್ತುಗಳು ನಿಗದಿತ ಬೆಲೆಯನ್ನೇ ಮುದ್ರಿಸಿಕೊಂಡು ಹೊರಬರುತ್ತದೆ. ಆದರೆ ರೈತರ ಉತ್ಪನ್ನಗಳಿಗೆ ನಿಗದಿತ ಬೆಲೆ ಇಲ್ಲ. ಮಾರುಕಟ್ಟೆಯಲ್ಲೇ ಅದರ ದರ ನಿಗದಿಯಾಗುತ್ತದೆ. ಹತ್ತು-ಹದಿನೈದು ವರ್ಷದ ಹಿಂದಿನ ಬೆಲೆ ಅಥವಾ ಅದಕ್ಕಿಂತಲೂ ಕಡಿಮೆ ಬೆಲೆಗೆ ಈಗಲೂ ಖರೀದಿಯಾಗುತ್ತದೆ. ಇದಕ್ಕೆ ಅಪವಾದ ಎಂಬಂತೆ ಅಪರೂಕ್ಕೊಮ್ಮೊಮ್ಮೆ ಉತ್ತಮ ಬೆಲೆ ದೊರೆತ್ತಿರುವುದೂ ಇದೆ.

ಕೂಲಿಕಾರ್ಮಿಕರ ಸಂಬಳ ಹೆಚ್ಚಾಗಿದೆ. ಕೃಷಿಗೆ ಬೇಕಾದ ಒಳಸುರಿಗಳು, ಸಾವಯುವ ಗೊಬ್ಬರ, ರಾಸಾಯನಿಕ ಗೊಬ್ಬರ, ಕೃಷಿ ಯಂತ್ರೋಪಕರಣಗಳ ಬೆಲೆ ಹೆಚ್ಚಾಗಿದೆ. ಆದರೆ ಕೃಷಿ ಉತ್ಪನ್ನಗಳ ಬೆಲೆ ಕುಂಟುತ್ತಲೇ ಸಾಗಿದೆ. ರೈತರಿಗೆ ಆಗುವ ಕಷ್ಟ ನಷ್ಟಗಳು ಕಡಿಮೆಯಾಗಬೇಕಾದರೆ ಕೃಷಿ ಉತ್ಪನ್ನಗಳ ವೈಜ್ಞಾನಿಕವಾದ ಬೆಲೆ ನಿಗದಿಯಾಗಬೇಕು. ರೈತರು ಕೇಳುತ್ತಿರುವುದು ಅದನ್ನೇ. ಸ್ವಾಮಿನಾಥನ್ ಆಯೋಗದ ವರದಿಯು ಪ್ರತಿಪಾದಿಸಿರುವುದು ವೈಜ್ಞಾನಿಕವಾದ ಬೆಲೆಯನ್ನೇ. ಕೃಷಿ ಉತ್ಪನ್ನಗಳ ಬೆಲೆ ಕುಸಿದಾಗ ಕೇಂದ್ರ ಸರಕಾರವು ಬೆಂಬಲ ಬೆಲೆ ಘೋಷಿಸುತ್ತದೆ. ಆದರೆ ಅದು ವೈಜ್ಞಾನಿಕ ಬೆಲೆಯಲ್ಲ. ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಒಂದು ರೀತಿಯ ಸಮಾಧಾನ ತರುವ, ಬೆಲೆ ಕುಸಿತ ತಡೆಗಟ್ಟಲು ಸಹಾಯವಾಗುವ ಬೆಲೆಯೇ ವಿನಃ ನಷ್ಟದಿಂದ ಲಾಭದ ಹಳಿಗೆ ತರುವಂತದ್ದಲ್ಲ.

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಅದನ್ನು ಕಾಯಿದೆ ರೂಪದಲ್ಲಿ ಜಾರಿಗೊಳಿಸಬೆಕೇಂಬುದೇ ರೈತರ ಬೇಡಿಕೆ ಮತ್ತು ಹೋರಾಟ. ಕೇಂದ್ರ ಸರಕಾರ ಮತ್ತು ರೈತರ ಸಂಘಟನೆ ಈ ಬಗ್ಗೆ ಮಾತುಕತೆಯನ್ನು ನಡೆಸಿವೆ. ಆದರೆ ಸರಕಾರ ಕೆಲವು ಉತ್ಪನ್ನಗಳಿಗೆ ಮಾತ್ರ ಬೆಂಬಲ ಬೆಲೆ ನೀಡುವುದಕ್ಕೆ ಸಮ್ಮತಿಸಿದೆ ಎನ್ನಲಾಗುತ್ತಿದೆ. ಆದರೆ ರೈತರು ಬೆಳೆಯುವ ಕೆಲವೇ ಕೆಲವು ಉತ್ಪನ್ನಗಳಿಗೆ ಬೆಂಬಲ ಬೆಲೆ ಸಿಕ್ಕರೆ ಸಾಕೇ?. ರೈತರ ಪ್ರತಿಯೊಂದು ಬೆಳೆಗೂ ನಿಗದಿತ ಬೆಲೆ ಬೇಡವೇ? ಎಂಬ ಪ್ರಶ್ನೆ ಬಂದಾಗ ಎಲ್ಲಾ ಬೆಳೆಗಳಿಗೂ ಬೆಂಬಲ ಬೆಲೆ ನಿಗದಿ ಅವಶ್ಯಕ.

ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಬೆಳೆಯುವ ಪ್ರತಿಯೊಂದು ಬೆಳೆಗೆ ಏಕ ರೂಪದ ಬೆಂಬಲ ಬೆಲೆಯೇ ಅಥವಾ ಆಯಾ ರಾಜ್ಯಗಳ ಕೃಷಿ ಅನುಕೂಲತೆಗಳನ್ನು ಆಧರಿಸಿ ಬೆಂಬಲ ಬೆಲೆಯೇ ಎಂಬುವುದರತ್ತಲೂ ಗಮನ ಹರಿಸುವುದು ಅಗತ್ಯ. ವೈಜ್ಞಾನಿಕ ಬೆಂಬಲ ಬೆಲೆ ಆಧಾರದಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಸಿದರೆ ಮಾರುಕಟ್ಟೆಯಲ್ಲಿ ದರವೂ ಹೆಚ್ಚಾಗುತ್ತದೆ. ಗ್ರಾಹಕರ ಮೇಲೆ ಅದರ ಪರಿಣಾಮ ಬೀರುತ್ತದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರಕಾರದ ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯವು ಕೇಂದ್ರದ ಮೂರು ಸಂಸ್ಥೆಗಳ ಮೂಲಕ ಸಾರ್ವಜನಿಕರಿಗಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಭಾರತ್ ಅಕ್ಕಿ, ಭಾರತ್ ಅಟ್ಟಾ, ದಾಲ್, ಈರುಳ್ಳಿಯಂತೆ ಕಡಿಮೆ ಬೆಲೆಗೆ ಇತರ ಕೃಷಿ ಉತ್ಪನ್ನಗಳನ್ನು ಸರಕಾರ ಜನಸಾಮಾನ್ಯರ ಕೈಗೆ ನೀಡಬಹುದು. ಸರಕಾರ ಏನೇ ಮಾಡಲಿ, ಯೋಚಿಸಲಿ. ಕೃಷಿಕ ಬೆಳೆದ ಕೃಷಿ ಉತ್ಪನ್ನಗಳಿಗೆ ಅರ್ಹ ಬೆಲೆ ಸಿಗಲೇಬೇಕು. ಈ ನಿಟ್ಟಿನಲ್ಲಿ ಸರಕಾರ ಮುಂದಡಿಯಿಡಲಿ. ಎಲ್ಲ ಬೆಳೆಗಳಿಗೆ ವೈಜ್ಞಾನಿಕವಾದ ದರ ನಿಗದಿಪಡಿಸಲಿ.

 

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group