ಬರಹ-ಆಶಾ ನೂಜಿ
ಅಡಿಕೆ, ಬಾಳೆ, ಕಾಳುಮೆಣಸು, ಕೊಕ್ಕೋ ಬೆಳೆಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬವೊಂದು ಅಡಿಕೆ ತೋಟಕ್ಕೆ ಬಂದ ಹಳದಿ ರೋಗದಿಂದಾಗಿ ತುಂಬಲಾರದಷ್ಟು ನಷ್ಟವನ್ನು ಅನುಭವಿಸಿತು. ಬೇರೆ ಕಡೆಯಿಂದ ತಂದು ನೆಟ್ಟ ಅಡಿಕೆ ಗಿಡಗಳಿಗೂ ರೋಗ ತಗುಲಿ, ಮುಂದೆ ಏನು ಮಾಡಬೇಕು ಎಂಬ ಚಿಂತೆಯಲ್ಲಿದ್ದಾಗ ಅವರ ಬದುಕಿಗೆ ಹೊಸ ದಾರಿಯೊಂದು ತೆರೆದುಕೊಂಡಿತು. ಅದೇ ಹೈನುಗಾರಿಕೆ. ಕದಳೀವನದ ಶ್ರೀನಿಧಿ ಮತ್ತು ಸೌಮ್ಯ ದಂಪತಿ ಪಾಲಿಗೆ ಹೈನುಗಾರಿಕೆ ಇಂದು ಕೇವಲ ಉದ್ಯೋಗವಲ್ಲ; ಬದುಕಿನ ಪ್ರಮುಖ ಭಾಗವಾಗಿದೆ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ಕದಳೀವನದ ಶ್ರೀನಿಧಿ ಕುಟುಂಬಕ್ಕೆ ಗೋ ಸಾಕಾಣೆ ಹೊಸತೇನಲ್ಲ. ಶ್ರೀನಿಧಿಯವರ ತಂದೆ ಉರಿಮಜಲು ಈಶ್ವರ ಭಟ್ ಮತ್ತು ತಾಯಿ ಸಾವಿತ್ರಿ ಭಟ್ ಕೃಷಿಕರು. ಕೃಷಿಗೆ ಪೂರಕವಾಗಿ ದನಗಳನ್ನು ಸಾಕುತ್ತಿದ್ದರು.
ಬಾಲ್ಯದಿಂದಲೇ ಗೋವುಗಳೊಂದಿಗೆ ಬೆಳೆದ ಅನುಭವವೇ ಮುಂದೆ ಹೈನುಗಾರಿಕೆಯತ್ತ ಹೆಜ್ಜೆ ಇಡಲು ಪ್ರೇರಣೆಯಾಯಿತು. ಹಸುಗಳನ್ನು ಸಾಕುವುದನ್ನು ನೋಡುತ್ತಾ ಬೆಳೆದಿದ್ದ ನಾನು, ತಾನೇ ಹಸುಗಳನ್ನು ಏಕೆ ಸಾಕಬಾರದು ಎಂಬ ಆಲೋಚನೆ ಶಾಲೆಗೆ ಹೋಗುತ್ತಿದ್ದಾಗಲೇ ಬಂದಿತ್ತು. ಮುಂದೆ ಕಾಲೇಜಿಗೆ ಹೋಗುವಾಗಲೇ ಹೈನುಗಾರಿಕೆ ಆರಂಭಿಸಿದೆ ” ಎನ್ನುತ್ತಾರೆ ಶ್ರೀನಿಧಿಯವರು. ಹೈನುಗಾರಿಕೆ ಮಾಡಬೇಕೆಂಬ ಆಸಕ್ತಿಯನ್ನು ಅಪ್ಪ ಅಮ್ಮನಲ್ಲಿ ಪ್ರಸ್ತಾಪಿಸಿದಾಗ “ನಿನಗೆ ಹಾಲು ಹಿಂಡಲು ಬರುತ್ತಾ…ಹಾಲು ಹಿಂಡಲು ಅಭ್ಯಾಸ ಮಾಡು ಆಮೇಲೆ ಹಸು ತಂದು ಸಾಕು ಎಂದು ಸಲಹೆಯಿತ್ತಿದ್ದರು ತಾಯಿ. ಅವರಿಂದ ಪ್ರೇರಣೆ ಪಡೆದು ದನ ಸಾಕಾಣೆ ಮಾಡಿ ಸ್ವ ಉದ್ಯೋಗಕ್ಕೆ ನಾಂದಿಯಾಯಿತು.
ಮೊದಲು ಎರಡು ಹಸುಗಳಿಂದ ಆರಂಭವಾದ ಹೈನುಗಾರಿಕೆ ಇಂದು 15 ಹಸುಗಳು ಮತ್ತು 5 ಕರುಗಳಿರುವ ಪಶುಸಂಗೋಪನೆಯಾಗಿ ಬೆಳೆದಿದೆ. ಇವುಗಳಲ್ಲಿ ಬಹುತೇಕ ಎಚ್.ಎಫ್. ತಳಿಯ ಗೋವುಗಳಾಗಿವೆ. ಉತ್ತಮ ಹಾಲಿನ ಇಳುವರಿ, ಆರೋಗ್ಯ ಮತ್ತು ಉತ್ತಮ ತಳಿಗೆ ಅವರು ಹೆಚ್ಚಿನ ಆದ್ಯತೆ ನೀಡುತ್ತಾರೆ.
ಹೈನುಗಾರಿಕೆಯಲ್ಲಿ ಅನುಭವ ಹೊಂದಿರುವ ಶ್ರೀನಿಧಿಯವರು ಹಸು ಖರೀದಿಸುವ ವಿಚಾರದಲ್ಲಿಯೂ ಕೆಲವು ಅನುಭವದ ಮಾತುಗಳನ್ನು ಹೇಳುತ್ತಾರೆ. ಒಮ್ಮೆ ಕೋಲಾರಕ್ಕೆ ತೆರಳಿ ಹಸುವನ್ನು ಸ್ವತಃ ಪರಿಶೀಲಿಸಿ, ಹಾಲು ಹಿಂಡಿ ನೋಡಿ ತಂದು ಸಾಕಿರುವ ಅನುಭವವೂ ಅವರಿಗಿದೆ.
ದೂರದ ಊರಿನಿಂದ ಹಸುಗಳನ್ನು ತಂದು ಸಾಕುವಾಗ ಅದರ ಆರೋಗ್ಯದ ಬಗ್ಗೆ ವಿಶೇಷ ಗಮನ ನೀಡಬೇಕು. ಹಸು ಗಬ್ಬವಾಗಿರುವುದು ಅಥವಾ ಇತ್ತೀಚೆಗೆ ಕರು ಹಾಕಿರುವುದು ಮುಂತಾದ ವಿಚಾರಗಳನ್ನೂ ಗಮನಿಸಬೇಕು. ದೂರದ ಪ್ರದೇಶದಿಂದ ತರುವ ಹಸುಗಳಿಗೆ ವಾತಾವರಣ ಬದಲಾವಣೆಯಿಂದ ತೊಂದರೆ ಉಂಟಾಗುವ ಸಾಧ್ಯತೆ ಇರುವುದರಿಂದ ಅನುಭವಿಗಳ ಸಲಹೆ ಪಡೆದು ಹಸು ಖರೀದಿಸುವುದು ಉತ್ತಮ ಎನ್ನುತ್ತಾರೆ.

ಹಾಲಿನಿಂದ ಉತ್ತಮ ಆದಾಯ
ಪ್ರತಿದಿನ ಸುಮಾರು 150 ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಅದನ್ನು ತೊಡಿಕಾನದ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಪೂರೈಸುತ್ತಿದ್ದಾರೆ. ಹಾಲನ್ನು ಡೈರಿಗೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಸುವುದರಿಂದ ನಿಯಮಿತ ಆದಾಯ ದೊರೆಯುತ್ತದೆ. ಉತ್ತಮ ತಳಿಯ ಹಸುಗಳನ್ನು ಸಾಕುವುದರಿಂದ ಹಾಲಿನ ಇಳುವರಿಯೂ ಉತ್ತಮವಾಗಿರುತ್ತದೆ ಎಂಬುದು ಅವರ ಅನುಭವ. ಹೈನುಗಾರಿಕೆ ಎಂದರೆ ಕೇವಲ ಹಾಲು ಕರೆದು ಮಾರಾಟ ಮಾಡುವ ಕೆಲಸವಲ್ಲ. ಗೋವುಗಳ ಆರೈಕೆ, ಉತ್ತಮ ಆಹಾರ, ಸ್ವಚ್ಛತೆ, ಸಮಯಕ್ಕೆ ಸರಿಯಾದ ಚಿಕಿತ್ಸೆ—ಪ್ರತಿಯೊಂದು ವಿಷಯದಲ್ಲೂ ಕಾಳಜಿ ಅಗತ್ಯ.
ಎಚ್.ಎಫ್. ತಳಿಯ ಗೋವುಗಳಿಗೆ ಉತ್ತಮ ಪೌಷ್ಟಿಕ ಆಹಾರ ನೀಡಬೇಕು. ಜೋಳ, ಗೋಧಿ ಬೂಸ, ಹಿಂಡಿ, ಲವಣ ಮಿಶ್ರಣ ಹಾಗೂ ಕ್ಯಾಲ್ಸಿಯಂ ಮುಂತಾದವುಗಳನ್ನು ಅಗತ್ಯಕ್ಕೆ ತಕ್ಕಂತೆ ನೀಡುತ್ತಾರೆ. ಜೊತೆಗೆ ಅವರು ತಾವೇ ನೆಟ್ಟು ಬೆಳೆಸಿದ ಹಸಿರು ಮೇವು ಮತ್ತು ಜೋಳದ ಹುಲ್ಲನ್ನೂ ನೀಡುತ್ತಾರೆ.
ಒಂದು ಹಸುವಿಗೆ ದಿನಕ್ಕೆ ಸುಮಾರು ₹3೦೦ರಷ್ಟು ಆಹಾರದ ಖರ್ಚು ಬರುತ್ತದೆ. ಆದ್ದರಿಂದ ಹಾಲಿನಿಂದ ಬರುವ ಆದಾಯವನ್ನು ಲೆಕ್ಕ ಹಾಕುವಾಗ ಆಹಾರ, ಔಷಧಿ ಮತ್ತು ಇತರ ನಿರ್ವಹಣಾ ವೆಚ್ಚಗಳನ್ನೂ ಪರಿಗಣಿಸಬೇಕಾಗುತ್ತದೆ. ಹೈನುಗಾರಿಕೆಯ ದಿನಚರಿ ಬೆಳಗಿನ ಜಾವವೇ ಆರಂಭವಾಗುತ್ತದೆ. ಬೆಳಗ್ಗೆ ಸುಮಾರು ಐದು ಗಂಟೆಗೆ ಹಾಲು ಹಿಂಡುವ ಕೆಲಸಕ್ಕೆ ಹಟ್ಟಿಗೆ ತೆರಳುತ್ತಾರೆ.. ಮತ್ತೆ ಸಂಜೆ ಸುಮಾರು ನಾಲ್ಕು ಗಂಟೆಗೆ ಹಾಲು ಹಿಂಡುವ ಕೆಲಸ ಆರಂಭವಾಗುತ್ತದೆ. ಯಂತ್ರದ ಮೂಲಕ ಹಾಲು ಹಿಂಡಲಾಗುತ್ತದೆ.
ಹಸುಗಳಿಗೆ ಮೊದಲು ಆಹಾರ ನೀಡಲಾಗುತ್ತದೆ. ಆಹಾರ ಸೇವಿಸಿದ ಬಳಿಕ ಅವುಗಳಿಗೆ ಸಾಕಷ್ಟು ನೀರು ಕುಡಿಯಲು ವ್ಯವಸ್ಥೆ ಮಾಡಲಾಗಿದೆ. ಹಟ್ಟಿಯಲ್ಲಿ ದೋಣಿಯಾಕಾರದ ನೀರಿನ ತೊಟ್ಟಿ ಮಾಡಲಾಗಿದ್ದು, ಗೋವುಗಳು ತಮಗೆ ಬೇಕಾದಷ್ಟು ನೀರು ಕುಡಿಯುವಂತೆ ವ್ಯವಸ್ಥೆ ಕಲ್ಪಿಸಿದ್ದಾರೆ. ಈ ಎಲ್ಲ ಕೆಲಸಗಳಲ್ಲಿ ಶ್ರೀನಿಧಿಯವರ ಪತ್ನಿ ಸೌಮ್ಯ, ತಂದೆ ತಾಯಿ ಹಾಗೂ ಮಕ್ಕಳು ಸಹ ತಮ್ಮ ಕೈಲಾದ ಸಹಾಯ ಮಾಡುತ್ತಾರೆ.

“ಇದು ಒಬ್ಬರಿಂದ ಮಾತ್ರ ಆಗುವ ಕೆಲಸವಲ್ಲ. ಮನೆಯವರೆಲ್ಲರೂ ಸಹಕಾರ ನೀಡಬೇಕು. ಹುಲ್ಲು ತಯಾರಿಸುವ ಕೆಲಸಕ್ಕೂ ಕೆಲಸಗಾರರ ಸಹಾಯ ಬೇಕಾಗುತ್ತದೆ,” ಎನ್ನುತ್ತಾರೆ ಶ್ರೀನಿಧಿಯವರು. ನಿಜಕ್ಕೂ ‘ಹನಿ ಹನಿ ಕೂಡಿದರೆ ಹಳ್ಳ’ ಎಂಬ ಮಾತು ಸುಳ್ಳಲ್ಲ. ಒಬ್ಬರ ಪರಿಶ್ರಮದಿಂದ ಮಾತ್ರ ಇಷ್ಟು ದೊಡ್ಡ ಪ್ರಮಾಣದ ಪಶುಸಂಗೋಪನೆ ನಡೆಸುವುದು ಕಷ್ಟ. ಕುಟುಂಬದ ಸಹಕಾರ, ಕೆಲಸಗಾರರ ನೆರವು, ಪ್ರಾಣಿಗಳ ಮೇಲಿನ ಕಾಳಜಿ ಮತ್ತು ನಿರಂತರ ಪರಿಶ್ರಮ—ಇವೆಲ್ಲವೂ ಸೇರಿ ಹೈನುಗಾರಿಕೆ ಸ್ವಾಬಲಂಬನೆಯ ಸ್ವ ಉದ್ಯೋಗ ಉದ್ಯಮವನ್ನಾಗಿ ರೂಪಿಸಿವೆ.
.ಹೈನುಗಾರಿಕೆಯಿಂದ ಹಾಲಿನ ಆದಾಯವನ್ನಷ್ಟೇ ಲೆಕ್ಕಾಚಾರ ಮಾಡಬಾರದು. ಗೋವುಗಳ ಸಗಣಿ ಮತ್ತು ಗಂಜಲವೂ ಪ್ರಯೋಜನಕಾರಿಯಾದುದು. ಸಗಣಿ ಮತ್ತು ಗಂಜಲವನ್ನು ಅಡಿಕೆ ಮರಗಳ ಬುಡಕ್ಕೆ ಹಾಕುವುದರಿಂದ ಸಾವಯವ ಗೊಬ್ಬರವಾಗಿಯೂ ಬಳಸಿಕೊಳ್ಳುತ್ತಾರೆ. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚುವುದರ ಜೊತೆಗೆ ರಾಸಾಯನಿಕ ಗೊಬ್ಬರದ ಖರ್ಚೂ ಕಡಿಮೆಯಾಗುತ್ತದೆ.
ಹೀಗಾಗಿ ಹೈನುಗಾರಿಕೆ ಕೇವಲ ಆದಾಯದ ಮೂಲವಲ್ಲ. ಅದು ಕೃಷಿಯೊಂದಿಗೂ ಬೆಸೆದುಕೊಂಡಿರುವ ಒಂದು ಸಮಗ್ರ ಜೀವನ ಪದ್ಧತಿ. ಒಂದು ಕಡೆ ಹಾಲಿನಿಂದ ನಿಯಮಿತ ಆದಾಯ, ಮತ್ತೊಂದೆಡೆ ಕೃಷಿಗೆ ಬೇಕಾದ ಸಾವಯವ ಗೊಬ್ಬರ, ಸಗಣಿಯಿಂದ ಗೋಬರ್ ಗ್ಯಾಸ್ ಜೊತೆಗೆ ಮನೆಯ ಇಂಧನದ ಉಳಿತಾಯ—ಹೈನುಗಾರಿಕೆಯ ಹಲವು ಪ್ರಯೋಜನಗಳು ಈ ಕುಟುಂಬಕ್ಕೆ ದೊರೆಯುತ್ತಿವೆ. ಗೋವುಗಳ ಆರೈಕೆ ಮಾಡುವುದು, ಪ್ರತಿದಿನ ಅವುಗಳಿಂದ ಹಾಲು ಪಡೆಯುವುದು ಮಾತ್ರವಲ್ಲದೆ ಅವುಗಳೊಂದಿಗೆ ಬೆಳೆಸಿಕೊಂಡಿರುವ ಆತ್ಮೀಯತೆಯೂ ಅವರಿಗೆ ಸಂತೋಷ ನೀಡುತ್ತದೆ.

ಶ್ರೀನಿಧಿಯವರು ಓದಿದ್ದು ಕಾನೂನು ಪದವಿ.ಅವರನ್ನು ಆಕರ್ಷಿಸಿದ್ದು ಮಾತ್ರ ಹೈನುಗಾರಿಕೆ. ಅಡಿಕೆ ತೋಟಕ್ಕೆ ಬಂದ ರೋಗದಿಂದಾಗಿ ಕೃಷಿಯಲ್ಲಿ ನಷ್ಟ ಅನುಭವಿಸಿದಾಗ ಈ ಕುಟುಂಬ ಕುಗ್ಗಲಿಲ್ಲ. ಗೋಸಾಕಣೆಯ ಅನುಭವವನ್ನು ತನ್ನದಾಗಿಸಿಕೊಂಡು ಅದನ್ನೇ ಬದುಕಿನ ಹೊಸ ದಾರಿಯನ್ನಾಗಿ ಮಾಡಿಕೊಂಡು ಯಶಸ್ವಿ ಹೈನುಗಾರರಾದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಗೋವುಗಳನ್ನು ಸಾಕಿ ಹೈನುಗಾರಿಕೆಯನ್ನು ವಿಸ್ತರಿಸುವ ಆಸೆಯೂ ಶ್ರೀನಿಧಿಯವರಿಗಿದೆ.
ಹೈನುಗಾರಿಕೆಯನ್ನು ಆರಂಭಿಸಲು ಬಯಸುವವರಿಗೆ ಅವರ ಸಲಹೆಯೂ ಸರಳವಾದದ್ದು—ಆಸಕ್ತಿ, ಪರಿಶ್ರಮ ಮತ್ತು ತಾಳ್ಮೆ ಇರಬೇಕು. ಗೋವುಗಳಿಗೆ ಉತ್ತಮ ಆಹಾರ, ಸ್ವಚ್ಛ ವಾತಾವರಣ ಮತ್ತು ಸಮಯಕ್ಕೆ ಸರಿಯಾದ ಚಿಕಿತ್ಸೆ ನೀಡಬೇಕು. ಆರಂಭದಲ್ಲಿ ಕಡಿಮೆ ಗೋವುಗಳಿಂದ ಪ್ರಾರಂಭಿಸಿ ಅನುಭವ ಪಡೆದುಕೊಂಡ ನಂತರ ಹಂತಹಂತವಾಗಿ ವಿಸ್ತರಿಸುವುದು ಉತ್ತಮ. ಪರಿಶ್ರಮದಿಂದ ಮುನ್ನಡೆದರೆ ನಷ್ಟವನ್ನೂ ಹೊಸ ಅವಕಾಶವಾಗಿ ಪರಿವರ್ತಿಸಬಹುದು ಎಂಬುದನ್ನು ಇವರ ಹೈನುಗಾರಿಕೆಯ ಬದುಕು ಕಲಿಸಿದೆ.ಶ್ರೀನಿಧಿಯವರ ಹೈನುಗಾರಿಕೆಯ ಪಯಣದ ಹಿಂದೆ ಮನೆಮಂದಿಯ ಪ್ರೋತ್ಸಾಹವೂ ಪ್ರಮುಖವಾಗಿದೆ.
ಶ್ರೀನಿಧಿಯವರ ಅಮ್ಮನ ಪ್ರಕಾರ, ಎಚ್.ಎಫ್. ಮತ್ತು ಜರ್ಸಿ ತಳಿಯ ಹಸುಗಳು ಉತ್ತಮ ಹಾಲಿನ ಇಳುವರಿ ನೀಡುವ ಸಾಮರ್ಥ್ಯ ಹೊಂದಿವೆ. “ಹಸು ಸಾಕಿದರೆ ಒಳ್ಳೆಯ ಉತ್ಪತ್ತಿಯೂ ಇದೆ, ಮನಸ್ಸಿಗೂ ಖುಷಿ ಸಿಗುತ್ತದೆ,” ಎನ್ನುವ ಅವರ ಮಾತಿನಲ್ಲಿ ಹೈನುಗಾರಿಕೆಯ ಮೇಲಿನ ಪ್ರೀತಿ ಮತ್ತು ಅಭಿಮಾನ ಎದ್ದು ಕಾಣುತ್ತದೆ.

ಬೆದೆಗೆ ಬಂದ ಕರುವಿಗೆ ಒಂದು ವರ್ಷ ಎರಡು ತಿಂಗಳ ನಂತರ ಇನ್ಸಾಮಿನೇಶನ್ ಮಾಡಬಹುದು. ಹೆಣ್ಣು ಕರುವೇ ಆಗಬೇಕೆಂದರೆ ಹೆಣ್ಣು ಕರುವಿನ ಇಂಜೆಕ್ಷನ್ ಇದೆ. ಅದನ್ನೇ ಕೊಡಬಹುದು. ಅದರಿಂದ ಹಸುಗಳ ವಂಶಾಭಿವೃದ್ಧಿಯಾಗುತ್ತದೆ ಎನ್ನುತ್ತಾರೆ ಸಾವಿತ್ರಿ ಭಟ್

ಪರಿಶ್ರಮಕ್ಕೆ ಸಿಕ್ಕ ಗೌರವ
ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಈ ಕುಟುಂಬದ ಪರಿಶ್ರಮ ಮತ್ತು ಸಾಧನೆಗೆ ವಿವಿಧ ಪ್ರಶಸ್ತಿಗಳೂ ದೊರೆತಿವೆ. ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಈ ಕುಟುಂಬಕ್ಕೆ ಬಂದಿರುವ ಪ್ರಶಸ್ತಿಗಳು ಅವರ ನಿರಂತರ ಪರಿಶ್ರಮಕ್ಕೆ ಸಿಕ್ಕ ಗೌರವ. ಶ್ರೀನಿಧಿಯವರು ಹೈನೋದ್ಯಮದಲ್ಲಿ ಮಾಡಿದ ಸಾಧನೆಗೆ ಹಲವಾರು ಪ್ರಶಸ್ತಿಗಳು ದೊರೆತಿವೆ. ತೊಡಿಕಾನದ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಹೆಚ್ಚು ಹಾಲು ನೀಡುತ್ತಿರುವುದು ಶ್ರೀನಿಧಿ ಕುಟುಂಬವೇ. ಪ್ರತೀವರುಷವೂ ಅವರಿಗೆ ಮೊದಲ ಬಹುಮಾನ. ಗೌರವ ಧನದೊಂದಿಗೆ ಪ್ರಶಸ್ತಿ ಸನ್ಮಾನ. ತೊಡಿಕಾನ ಶಾಲಾ ಅಮೃತ ಮಹೋತ್ಸವದಲ್ಲಿ ಶ್ರೀನಿಧಿಯವರ ಸಾಧನೆಗೆ ಗೌರವ ಸಂದಿದೆ.
ಶ್ರೀನಿಧಿಯವರ ತಾಯಿ ಸಾವಿತ್ರಿ ಭಟ್ ಅವರು ತೊಡಿಕಾನ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿAದ 2025-26ನೇ ಸಾಲಿನ ಸಾಧನಾ ಪ್ರಶಸ್ತಿ ಸಂಘಕ್ಕೆ ಲಭಿಸಿದೆ. ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದಿಂದಲೂ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.









