ಬರಹ-ರಾಧಾಕೃಷ್ಣ ತೊಡಿಕಾನ, ಚಿತ್ರ- ಪ್ರಸಾದ್
ಮಹಿಳೆಯರು ಗೃಹಕೃತ್ಯಗಳಿಗೆ ಮಾತ್ರ ಸೀಮಿತವಾಗದೆ ತಮ್ಮದೇ ಆದ ಆದಾಯದ ದಾರಿಯನ್ನು ಕಂಡುಕೊಳ್ಳುತ್ತಿದ್ದಾರೆ. ಐಟಿ-ಬಿಟಿ ಸೇರಿದಂತೆ ವಿವಿಧ ಖಾಸಗಿ ಹಾಗೂ ಸರ್ಕಾರಿ ಉದ್ಯೋಗ ಕ್ಷೇತ್ರಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿರುವಂತೆಯೇ, ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯಲ್ಲೂ ಮಹಿಳೆಯರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಆದರೆ ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ದುಡಿಮೆ ಹೆಚ್ಚಿದ್ದರೂ, ಆ ದುಡಿಮೆಗೆ ತಕ್ಕ ಆರ್ಥಿಕ ಸ್ವಾವಲಂಬನೆ ಕಡಿಮೆ. ಆದರೆ ಕೆಲಮಂದಿ ಮಹಿಳೆಯರು ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧನೆಗೊಳಿಸಿ ಸ್ವಾವಲಂಬನೆಯ ಹಾದಿ ಹಿಡಿದ್ದಾರೆ. ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದ ಅರುಂಧತಿ ರಿತ್ತಿ ಅವರು ಆಹಾರ ಉತ್ಪನ್ನಗಳ ತಯಾರಿ ಮತ್ತು ಮಾರಾಟದ ಮೂಲಕ ತನ್ನದಾದ ಆಹಾರ ಉದ್ಯಮವನ್ನು ಕಟ್ಟಿ ಬೆಳೆಸಿದ್ದಾರೆ.
ಅರುಂಧತಿ ರಿತ್ತಿಯವರು ಕೃಷಿಕ ಕುಟುಂಬದವರು. ಕೃಷಿಯಲ್ಲಿ ತೊಡಗಿಕೊಳ್ಳುವ ಜತೆಗೆ ಸ್ವಉದ್ಯೋಗ ಆರಂಭಿಸಬೇಕೆಂಬ ಆಸೆಯಿತ್ತು. ಆಹಾರ ಉತ್ಪನ್ನಗಳ ತಯಾರಿಕೆಯ ಬಗ್ಗೆ ಆಸಕ್ತಿ ತಳೆದ ಅವರು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮಾರ್ಗದರ್ಶನ ಪಡೆದರು. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ಗೃಹ ಉದ್ಯಮದಲ್ಲಿ ತಯಾರಿಸಬಹುದಾದ ವಿವಿಧ ಉತ್ಪನ್ನಗಳ ಕುರಿತು ತರಬೇತಿಯನ್ನೂ ಪಡೆದರು.
ತರಬೇತಿಯ ಬಳಿಕ ಉಪ್ಪಿನಕಾಯಿ, ಚಟ್ನಿಪುಡಿ, ಮಸಾಲೆ ಪುಡಿ, ಹಪ್ಪಳ, ಸಾಂಬಾರ್ ಪುಡಿ, ಅರಿಶಿನ ಪುಡಿ, ಪುಳಿಯೋಗರೆ, ನುಗ್ಗೆ ಸೊಪ್ಪಿನ ಪುಡಿ, ಜೋಳದ ರೊಟ್ಟಿ ಸೇರಿದಂತೆ ಹಲವು ಆಹಾರ ಉತ್ಪನ್ನಗಳನ್ನು ತಯಾರಿಸಲು ಆರಂಭಿಸಿದರು. ಸಣ್ಣ ಪ್ರಮಾಣದಲ್ಲಿ ಆರಂಭಿಸಿದ ಈ ಗೃಹ ಉದ್ಯಮಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆಯಿತು. ಈಗ ತಿಂಗಳಿಗೆ ಸುಮಾರು 2 ಟನ್ ಆಹಾರ ಉತ್ಪನ್ನಗಳು ಸಿದ್ಧವಾಗುತ್ತಿವೆ.

ಕಳೆದ ನಾಲ್ಕೈದು ವರ್ಷಗಳಿಂದ ‘ರಾಜಲಕ್ಷ್ಮಿ’ ಎಂಬ ಹೆಸರಿನಲ್ಲಿ ಆಹಾರ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಅರುಂಧತಿಯವರು, ತಾವು ಬೆಳೆಯುವ ಕೃಷಿ ಉತ್ಪನ್ನಗಳಿಗೆ ಮಾತ್ರವಲ್ಲದೆ ಇತರ ರೈತರು ಬೆಳೆಯುವ ಉತ್ಪನ್ನಗಳನ್ನು ಖರೀದಿಸಿ ಅವುಗಳನ್ನು ಸಂಸ್ಕರಿಸಿ ವಿವಿಧ ಆಹಾರ ಉತ್ಪನ್ನಗಳನ್ನು ತಯಾರಿಸುತ್ತಾರೆ. ಹಲವು ಉತ್ಪನ್ನಗಳನ್ನು ಸ್ಥಳೀಯವಲ್ಲದೆ ಬೆಂಗಳೂರಿನ ವಿವಿಧ ಅಂಗಡಿಗಳಿಗೆ ಕಳುಹಿಸಿಕೊಡುತ್ತಿದ್ದಾರೆ. ಇದರಿಂದ ಕೃಷಿ ಉತ್ಪನ್ನಗಳಿಗೆ ಹೆಚ್ಚುವರಿ ಮೌಲ್ಯ ದೊರೆಯುವುದರ ಜೊತೆಗೆ, ಉತ್ತಮ ಬೆಲೆ ಸಿಗುವಂತಾಗಿದೆ.
ಅರುಂಧತಿ ರಿತ್ತಿಯವರ ಗೃಹ ಉದ್ಯಮಕ್ಕೆ ಸಂಜೀವಿನಿ ಮಹಿಳಾ ಸ್ವಸಹಾಯ ಒಕ್ಕೂಟವು ಆರ್ಥಿಕ ನೆರವು ನೀಡಿದೆ. ಹಾವೇರಿ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದಲೂ ತಾಂತ್ರಿಕ ಮಾಹಿತಿ ಮತ್ತು ಸಲಹೆಗಳನ್ನು ನೀಡಿ ಪ್ರೋತ್ಸಾಹಿಸಿದೆ. ಪತಿ ಮಹಾಂತೇಶ ರಿತ್ತಿ ಅವರ ಬೆಂಬಲವೂ ಯಶಸ್ಸಿಗೆ ಸಹಕಾರಿಯಾಗಿದೆ. ಎನ್ನುತ್ತಾರೆ ಅರುಂಧತಿ ರಿತ್ತಿ
ತಮ್ಮ ಉದ್ಯಮವನ್ನು ಬೆಳೆಸಿಕೊಂಡಿರುವ ಅರುಂಧತಿಯವರು ತಾವೊಬ್ಬರೇ ಸ್ವಾವಲಂಬಿಯಾಗುವುದಕ್ಕೆ ಸೀಮಿತವಾಗದೆ, ಹಲವು ಮಂದಿ ಮಹಿಳೆಯರಿಗೂ ಉದ್ಯೋಗಾವಕಾಶ ಕಲ್ಪಿಸಿದ್ದಾರೆ. ರೈತರ ಉತ್ಪನ್ನಗಳನ್ನು ಖರೀದಿಸುವ ಮೂಲಕ ಅವರಿಗೂ ಉತ್ತಮ ಮಾರುಕಟ್ಟೆ ಮತ್ತು ಬೆಲೆ ದೊರಕಲು ನೆರವಾಗುತ್ತಿದ್ದಾರೆ.
ಕೃಷಿ ಉತ್ಪನ್ನಗಳನ್ನು ಕೇವಲ ಕಚ್ಚಾ ವಸ್ತುವಾಗಿ ಮಾರಾಟ ಮಾಡುವ ಬದಲು, ಅವುಗಳಿಗೆ ಮೌಲ್ಯವರ್ಧನೆ ಮಾಡಿ ಮಾರುಕಟ್ಟೆಗೆ ಪರಿಚಯಿಸಿದರೆ ರೈತ ಕುಟುಂಬಗಳ ಆದಾಯವನ್ನು ಹೆಚ್ಚಿಸಬಹುದು ಎಂಬುದಕ್ಕೆ ಅರುಂಧತಿಯವರ ಸಾಧನೆ ಸಾಕ್ಷಿಯಾಗಿದೆ. ಮಹಿಳೆಯರ ಶ್ರಮಕ್ಕೆ ಆರ್ಥಿಕ ರೂಪ ನೀಡುವ ಇಂತಹ ಗೃಹ ಉದ್ಯಮಗಳು ಗ್ರಾಮೀಣ ಮಹಿಳೆಯರ ಸ್ವಾವಲಂಬನೆಗೆ ಹೊಸ ದಾರಿ ತೆರೆದಿವೆ. ಮಾಹಿತಿಗಾಗಿ:7090804872








