ನೆಲ್ಲಿಕಾಯಿ ಎಂದರೆ ಎಲ್ಲರಿಗೂ ತಿಳಿದಿರುವಂತೆ ಇದು ಹೆಚ್ಚಿನ ಪ್ರಮಾಣದ ಔಷಧೀಯ ಗುಣಗಳಿರುವ ಕಾಯಿ. ಇದರಲ್ಲಿ ವಿಟಮಿನ್ ‘ಸಿ ಹೇರಳವಾಗಿ ಇರುತ್ತದೆ. ನೆಲ್ಲಿಕಾಯಿ ಆಂಬ್ಯುಲೇಟರಿ ಔಷಧಗಳ ಗಣಿಯಾಗಿದೆ. ಇದು ದಾಳಿಂಬೆ ಹಣ್ಣಿಗಿಂತ 17 ಪಟ್ಟು ಹೆಚ್ಚು ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ಇದೊಂದು ಮಧ್ಯಮ ಗಾತ್ರದ, ಚಿಕ್ಕ ಚಿಕ್ಕ ಸೂಜಿಯಂತಹ ಎಲೆಗಳಿರುವ ಮರ. ತೊಗಟೆಯು ಬಿಳಿ ಮಾಸು ಬಣ್ಣವಿದ್ದು, ಹಸಿರು ಮತ್ತು ಹಳದಿ ಬಣ್ಣದ ಸಣ್ಣ ಸಣ್ಣ ಹೂಗಳನ್ನು ಹೊಂದಿದ್ದು, ಇದರ ಕಾಯಿಗಳು ಗುಂಡಗಿದ್ದು, ಹಸಿರು ಬಣ್ಣದಿಂದ
ಕೂಡಿರುವುದು. ಇದರ ಬಲಿತ ಹಣ್ಣು ಹೊಳಪಿನಿಂದ ಕೂಡಿರುತ್ತದೆ. ಹಣ್ಣಿನ ಮೇಲೆ ಸ್ಪಷ್ಟವಾಗಿ ಕಾಣಿಸುವ ಆರು ರೇಖೆಗಳಿರುತ್ತವೆ. ಒಣಗಿದ ನೆಲ್ಲಿಕಾಯಿಯು ಕಪ್ಪಾಗಿದ್ದು, ರುಚಿಯಲ್ಲಿ ಒಗರು ಹುಳಿಯಾಗಿರುತ್ತದೆ.
ಇದನ್ನು ನೆಲ್ಲಿಚೆಟ್ಟು ಎಂದೂ ಕರೆಯುತ್ತಾರೆ.
ಪರ್ಣಪಾತಿ ಕಾಡುಗಳಲ್ಲಿ ಇದು ಕಂಡು ಬರುವುದಲ್ಲದೇ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಇದರ ಎಲೆ ಉದುರಲು ಪ್ರಾರಂಭವಾಗಿ ಫೆಬ್ರವರಿ ಅಥವಾ ಎಪ್ರಿಲ್ನವರೆಗೆ ಎಲೆರಹಿತವಾಗಿದ್ದು ನಂತರ ಹೊಸ ಎಲೆಗಳು ಮೂಡುತ್ತವೆ. ಇದರ ಬೀಜಗಳು ಮೊಳಕೆಯೊಡೆದು ಗಿಡಗಳಾಗುವ ಪ್ರಮಾಣ ತೀರಾ ಕಡಿಮೆಯಿದ್ದು, ಬೀಜ ಮೊಳಕೆ ಒಡೆಯಲು ಒಂದು ವರ್ಷ ತೆಗೆದುಕೊಂಡ ದಾಖಲೆಗಳಿವೆ.
ಅನುಕೂಲತೆಗಳು:
1. ದೇಹದಲ್ಲಿ ಪಿತ್ತದೋಷದ ಪ್ರಮಾಣ ಹೆಚ್ಚಾದಾಗ ಹೊಟ್ಟೆ ಮತ್ತು ಜೀರ್ಣಾಂಗವ್ಯೂಹದ ಸಮಸ್ಯೆಗಳಾದ ಅಸಿಡಿಟಿ, ನಿಧಾನದ ಜೀರ್ಣಕ್ರಿಯೆ, ಮಲಬದ್ಧತೆ, ತಲೆನೋವು, ಹುಳಿ ತೇಗು ಇತ್ಯಾದಿ ಸಮಸ್ಯೆಗಳನ್ನು
ನಿಯಂತ್ರಿಸಲು, 5 ಗ್ರಾಂ ನೆಲ್ಲಿಕಾಯಿ ಪುಡಿಯನ್ನು ತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ಉಪಶಮನ ದೊರೆಯುತ್ತದೆ.
2. ದೇಹದಲ್ಲಿ ಕಫದ ಪ್ರಮಾಣವು ಹೆಚ್ಚಾದಾಗ ಕೆಮ್ಮು ಮತ್ತು ಉಸಿರಾಟದ ತೊಂದರೆ, ಖಿನ್ನತೆ ಮುಂತಾದ ರೋಗಗಳನ್ನು ತಡೆಗಟ್ಟಲು ನೆಲ್ಲಿಕಾಯಿ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಬೇಕು
3.ನೆಲ್ಲಿಕಾಯಿ ಶಾಂಪೂ ಬಳಕೆ ಮಾಡಿದರೆ, ಅದು ಕೂದಲನ್ನು ಕಾಂತಿಯುತವಾಗಿಸುವುದು. ಶಾಂಪೂ ತಯಾರಿಸಲು ಒಂದು ಹಿಡಿ ರೀತಾ, ನೆಲ್ಲಿಕಾಯಿ ಮತ್ತು ಶಿಕಾಕಾಯಿಯನ್ನು ಒಂದು ಲೀಟರ್ ನೀರಿಗೆ ಹಾಕಿ ರಾತ್ರಿಯಿಡಿ ನೆನೆಯಲು ಬಿಡಬೇಕು ಮರುದಿನ ಬೆಳಗ್ಗೆ ಇದನ್ನು ಹದ ಬೆಂಕಿಯಲ್ಲಿ ನೀರಿನ ಪ್ರಮಾಣವು ಅರ್ಧದಷ್ಟು ಆಗುವವರೆಗೆ ಮೆದು ಬೆಂಕಿಯಲ್ಲಿ ಕುದಿಸಬೇಕು. ಬಳಿಕ ಈ ಮಿಶ್ರಣವನ್ನು ತಣ್ಣಗಾಗಲು
ಬಿಡಬೇಕು. ನಂತರ ಇದನ್ನು ಸೋಸಿಕೊಂಡು ಅದರಿಂದ ಕೂದಲು ತೊಳೆಯಬೇಕು ಮತ್ತು ಇದನ್ನು 3-4 ದಿನಗಳವರೆಗೂ ಫ್ರಿಡ್ಜ್ನಲ್ಲಿ ಇಡಬಹುದು.
4.ನೆಲ್ಲಿಕಾಯಿ ಚೂರ್ಣ ಮತ್ತು ಕೊತ್ತಂಬರಿಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಚೆನ್ನಾಗಿ ಕಿವುಚಿ ಶೋಧಿಸಿ, ಕಲ್ಲು ಸಕ್ಕರೆ ಪುಡಿಯೊಂದಿಗೆ ಸೇವಿಸಿದರೆ ತಲೆಸುತ್ತು ನಿವಾರಣೆಯಾಗುತ್ತದೆ.
5.ನೆಲ್ಲಿಕಾಯಿಯಲ್ಲಿ ವಿಟಮಿನ್ ‘ಸಿ’ ಹೆಚ್ಚಿರುವುದರಿಂದ ಶೀತ ಮತ್ತು ಗಂಟಲು ನೋವಿನಂತಹ ಕಾಯಿಲೆಗಳಿದ್ದಲ್ಲಿ, ಎರಡು ಚಮಚ ಜೇನುತುಪ್ಪದೊಂದಿಗೆ ಎರಡು ಚಮಚ ನೆಲ್ಲಿಕಾಯಿ ಪುಡಿಯನ್ನು
ಮಿಶ್ರಣ ಮಾಡಿ. ಈ ಮಿಶ್ರಣವನ್ನು ದಿನಕ್ಕೆ ಮೂರು ಬಾರಿ ಸೇವಿಸಿದರೆ ಗಂಟಲು ನೋವು ಮತ್ತು ಶೀತವನ್ನು ಇದು ನಿವಾರಿಸುತ್ತದೆ
6. ಒಣಗಿದ ನೆಲ್ಲಿಕಾಯಿಯನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
7. ನೆಲ್ಲಿಕಾಯಿಯನ್ನು ತುರಿದು 100 ಮಿ.ಲೀ. ತೆಂಗಿನೆಣ್ಣೆ ಹಾಕಿ ಗಾಜಿನ ಬಾಟಲಿಯಲ್ಲಿ ಮುಚ್ಚಳ ಹಾಕಿಡಬೇಕು. ಈ ಬಾಟಲಿಯನ್ನು 15 ದಿನಗಳ ಕಾಲ ಪ್ರತಿನಿತ್ಯವೂ ಬಿಸಿಲಿಗೆ ಇಡಬೇಕು. ನಂತರ ಈ ಎಣ್ಣೆಯನ್ನು ಸೋಸಿ ಈ ಎಣ್ಣೆಯನ್ನು ನೇರವಾಗಿ ಕೂದಲಿಗೆ ಹಚ್ಚಿಕೊಂಡರೆ ಕೂದಲು ಸೊಂಪಾಗಿ ಬೆಳೆಯುವುದಲ್ಲದೇ ಕೂದಲು ಉದುರುವುದು ಕಡಿಮೆಯಾಗುತ್ತದೆ.
8. ಹಸಿ ನೆಲ್ಲಿಕಾಯಿ ಜ್ಯೂಸ್ ಕುಡಿಯುತ್ತಿದ್ದರೆ ಕೂದಲು ಬಿಳಿಯಾಗು ಸಮಸ್ಯೆ ನಿವಾರಣೆಯಾಗುತ್ತದೆ. ನೆಲ್ಲಿಕಾಯಿ ಜ್ಯೂಸನ್ನು ತಲೆಗೆ ಹಚ್ಚಿಕೊಂಡರೆ ಕೂದಲು ಸೊಂಪಾಗಿ ಬೆ
9.ದೊಡ್ಡ ಗಾತ್ರದ 5-6 ಹಸಿ ನೆಲ್ಲಿಕಾಯಿಗಳನ್ನು ಬೀಜಗಳನ್ನು ತೆಗೆದು ತುಸು ಬಿಸಿಮಾಡಿ ರಸವನ್ನು ಹಿಂಡಿ ಬಟ್ಟೆಯಲ್ಲಿ ಸೋಸಿ ಕಬ್ಬಿನಹಾಲಿನೊಂದಿಗೆ ಕುಡಿದರೆ ಉರಿಮೂತ್ರ ನಿವಾರಣೆಯಾಗುತ್ತದೆ.
ಅನಾನುಕೂಲತೆಗಳು:
ನೆಲ್ಲಿಕಾಯಿ ಆಂಟಿ ಪ್ಲೇಟ್ಲೆಟ್ ಗುಣಗಳನ್ನು ಹೊಂದಿರುವುದರಿದ ಅಧಿಕ ಪ್ರಮಾಣದಲ್ಲಿ ನೆಲ್ಲಿಕಾಯಿಯನ್ನು ಸೇವಿಸಿದರೆ, ಅದು ರಕ್ತವನ್ನು ದುರ್ಬಲಗೊಳಿಸಿ ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಯನ್ನು ತಡೆಯಬಹುದು ಮತ್ತು ಗಾಯವಾದ ಸಂದರ್ಭದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಆಗದೇ ರಕ್ತಸ್ತ್ರಾವ ಹೆಚ್ಚಾಗುವ ಸಂಭವ ಇರುತ್ತದೆ.
ನೆಲ್ಲಿಕಾಯಿ ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದರಿಂದ, ಶೀತದ ಸಂದರ್ಭದಲ್ಲಿ ಆಮ್ಲಾವನ್ನು ಸೇವಿಸಿದರೆ, ಅದು ಅವುಗಳನ್ನು ಸುಧಾರಿಸುವ ಬದಲು ರೋಗಲಕ್ಷಣಗಳನ್ನು ಇನ್ನಷ್ಟು ಹೆಚ್ಚಿಸಬಹುದು. ಆದ್ದರಿಂದ, ಶೀತ ಮತ್ತು ಶೀತದ ಸಂದರ್ಭದಲ್ಲಿ ಸೇವಿಸದೇ ಇರುವುದು ಉತ್ತಮ.
ಕಡಿಮೆ ಮಳೆಯಾಗುವ ಪ್ರದೇಶದಲ್ಲೂ ಚೆನ್ನಾಗಿ ಬೆಳೆಯುವ ಗುಣವನ್ನು ನೆಲ್ಲಿ ಹೊಂದಿದ್ದು, ಇದನ್ನು ಜಮೀನಿನ ಬದು ಅಥವಾ ಪಾಳು ಜಮೀನು, ಹಿತ್ತಿಲು, ಖಾಲಿ ನಿವೇಶನದಲ್ಲೂ ಬೆಳೆಯಬಹುದು. ಗಿಡಗಳನ್ನು 30-30 ಅಡಿ ಅಂತರದಲ್ಲಿ 2 ಅಡಿ ಆಳದ ಗುಂಡಿ ತೋಡಿ ಅದಕ್ಕೆ ಕೆಂಪು ಮಣ್ಣು, ತಿಪ್ಪೆ ಗೊಬ್ಬರ, ಬೇವು ಮತ್ತು ಹೊಂಗೆ ಹಿಂಡಿಯನ್ನು ಹಾಕಿ ಬಳಿಕ ಗಿಡ ನಾಟಿ ಮಾಡಬೇಕು. ಮಳೆಯಾಗದಿದ್ದರೆ ಅವಶ್ಯಕ್ಕೆ ತಕ್ಕಷ್ಟು ನೀರು ಕೊಡಬೇಕು.ಇದಕ್ಕೆ ರೋಗದ ಹಾವಳಿ ತೀರಾ ಕಮ್ಮಿಯಾದ್ದರಿಂದ ಗಿಡ ನೆಟ್ಟು 7-8 ವರ್ಷಕ್ಕೆ ನೆಲ್ಲಿಕಾಯಿ ಫಸಲು ನೀಡಲು ಪ್ರಾರಂಭಿಸುತ್ತದೆ.
ಸುಧಾರಿತ ತಳಿಗಳಾದರೆ ಮೂರನೇ ವರ್ಷಕ್ಕೆ ಫಸಲು ಕೊಡುತ್ತದೆ. ಜೂನ್ ತಿಂಗಳು ಗಿಡಿ ನಾಟಿಗೆ ಪ್ರಶಸ್ತವಾಗಿದ್ದು, ಚೆನ್ನಾಗಿ ನಿರ್ವಹಣೆ ಮಾಡಿದರೆ ಒಂದು ಗಿಡದಿಂದ ವರ್ಷಕ್ಕೆ 2೦೦ ಕೆ.ಜಿ ನೆಲ್ಲಿಕಾಯಿ ಪಡೆಯಬಹುದು. ಒಮ್ಮೆ ಗಿಡವನ್ನು ನೆಟ್ಟರೆ 7೦ ವರ್ಷ ನಿರಂತರವಾಗಿ ಇಳುವರಿ ಕೊಡುತ್ತದೆ.