spot_img
Saturday, July 27, 2024
spot_imgspot_img
spot_img
spot_img

ಅಡಿಕೆಯಿಂದ ಕೊಲೆಸ್ಟರಾಲ್ ನಿಯಂತ್ರಣ

 ಡಾಸರ್ಪಂಗಳ ಕೇಶವ ಭಟ್.

ಕೊಲೆಸ್ಟರಾಲ್ ಅಥವಾ  ಕೊಬ್ಬು ಎನ್ನುವುದು ಎಲ್ಲಾ ಪ್ರಾಣಿಗಳ ಜೀವಕೋಶಗಳಲ್ಲಿರುವ ಮೇಣದಂತಹ ಒಂದು ಜೈವಿಕ ವಸ್ತು. ಇದು ರಕ್ತದ ಜೀವದ್ರವದಲ್ಲಿ ದೇಹದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಲ್ಪಡುತ್ತದೆ.  ಕೊಲೆಸ್ಟರಾಲ್ ಅಂಶವು ಜೀವಕೋಶದ ಪೊರೆ, ಅಂಗಾಂಶಗಳು, ಹಾರ್ಮೋನುಗಳು, ವಿಟಮಿನ್ ಡಿ ಮತ್ತು ಪಿತ್ತರಸಗಳನ್ನು ತಯಾರಿಸಲು ಅತ್ಯವಶ್ಯಕವಾಗಿದೆ. ಆದರೆ ಕೊಲೆಸ್ಟರಾಲ್ ಪ್ರಮಾಣ ಜಾಸ್ತಿ (ಹೈಪರ್ಲಿಪಿಡೆಮಿಯಾ) ಆದಲ್ಲಿ ಅದು ಧಮನಿಗಳ ಒಳ ಪದರುಗಳಲ್ಲಿ ಕೊಬ್ಬಿನ ಅಂಶದ ಶೇಖರಣೆಯನ್ನು ಹೆಚ್ಚಿಸಿ ರಕ್ತದ ಸಮರ್ಪಕ ಸಂಚಾರಕ್ಕೆ ತಡೆಒಡ್ಡಿ ಜೀವಕ್ಕೆ ಅಪಾಯವನ್ನು ತಂದೊಡ್ಡುವ ವಿಚಾರ ನಮಗೆಲ್ಲರಿಗೂ ಗೊತ್ತಿದೆ. ಅಡಿಕೆ ಕೂಡಾ ಈ ನಿಟ್ಟಿನಲ್ಲಿ ಒಂದು ಒಳ್ಳೆಯ ಸಸ್ಯಜನ್ಯ ಔಷಧಿಯಾಗಿದೆ ಎಂಬುದಾಗಿ ಹಲವಾರು ವೈಜ್ಞಾನಿಕ ಸಂಶೋಧನೆಗಳು ಪ್ರಚುರಪಡಿಸಿವೆ. ಅಂತಹ ವಿಷಯಗಳನ್ನು ಒಟ್ಟು ಸೇರಿಸಿ ನಿಮ್ಮ ಗಮನಕ್ಕೆ ತರುವುದೇ ಈ ಲೇಖನದ ಮುಖ್ಯ ಉದ್ದೇಶ.

 

ಅಡಿಕೆಯಿಂದ ಕೊಲೆಸ್ಟರಾಲ್ ನಿಯಂತ್ರಣಅಡಿಕೆ ಮರದ ಎಲೆಯ ಸಾರ ಕೂಡ ಕೊಲೆಸ್ಟರಾಲನ್ನು ಕಡಿಮೆಮಾಡುತ್ತದೆ.  ಅಡಿಕೆ ಎಲೆಯ ಇಥನೋಲಿಕ್ ಸಾರವನ್ನು ಒಂದು ಕಿಲೋ  ದೇಹದ ತೂಕಕ್ಕೆ 200.0 ಮಿ. ಗ್ರಾಂ ನ ಪ್ರಮಾಣದಲ್ಲಿ ಇಲಿಯ ಬಾಯಿಯ ಮೂಲಕ ಕೊಟ್ಟಾಗ   ಟ್ರೈಗ್ಲಿಸರೈಡ್ ಮತ್ತು    ಕೊಲೆಸ್ಟರಾಲ್  ಮಟ್ಟ  ಗಮನಾರ್ಹ   ಕಡಿಮೆಯಾಗಿದೆ  ಎಂಬುದಾಗಿ ಡಾ. ಸಹಾನೆ ಮತ್ತು ಅವರ ತಂಡ 2013 ರಲ್ಲಿ ಹೇಳಿರುತ್ತಾರೆ.   ಎಲೆಯ ಇಥನೋಲಿಕ್ ಸಾರವಲ್ಲದೆ ಇತರ ದ್ರಾವಕಗಳಾದ ಪೆಟ್ರೋಲಿಯಂ ಈಥರ್,ಕ್ಲೋರೊಫಾರ್ಮ್ ಮತ್ತು ಮೆಥನಾಲ್ ಗಳನ್ನು ಉಪಯೋಗಿಸಿ ತೆಗೆದ ಅಡಿಕೆ ಸಾರಗಳು  ಕೂಡ  ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆಮಾಡುತ್ತವೆ ಎಂಬುದಾಗಿ ಡಾ. ಮೊಂಡಲ್ ಮತ್ತು ಅವರ ತಂಡ 2012 ರಲ್ಲಿ ಸಾದರಪಡಿಸಿದ್ದಾರೆ.

ಬೊಜ್ಜು ನಿರ್ವಹಣೆಯಲ್ಲಿ ಅಡಿಕೆ: ಬೊಜ್ಜು ಅಥವಾ ಸ್ಥೂಲಕಾಯತೆಯು ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನ ಚಯಾಪಚಯ ಕ್ರಿಯೆಯ ದೀರ್ಘಕಾಲದ ಅಸ್ವಸ್ಥತೆಯಾಗಿದೆ. ಸ್ಥೂಲಕಾಯಕ್ಕೆ ಮುಖ್ಯ ಅಂಶಗಳು ಆನುವಂಶಿಕ ಅಥವಾ ಅನಿಯಮಿತ ಆಹಾರ ಸೇವನೆ ಅದರಲ್ಲೂ ವಿಶೇಷವಾಗಿ ಕೊಬ್ಬು, ಸಕ್ಕರೆ ಮತ್ತು ಲವಣಯುಕ್ತ ಆಹಾರಗಳ ಅಧಿಕ ಸೇವನೆ ಅಲ್ಲದೆ ಜಡ ಜೀವನ ಶೈಲಿ. ಈ ಅಸ್ವಸ್ಥತೆಯಲ್ಲಿ ಅಡಿಪೋಸ್ ಅಂಗಾಂಶ ಮತ್ತು ಕೆಲವು ಆಂತರಿಕ ಅಂಗಗಳಾದ ಯಕೃತ್ತು, ಹೃದಯ, ಸ್ನಾಯುಗಳು ಇತ್ಯಾದಿಗಳಲ್ಲಿ ಅಸಹಜ ಅಥವಾ ಅತಿಯಾದ ಕೊಬ್ಬಿನ ಶೇಖರಣೆಯನ್ನು ನಾವು ಕಾಣಬಹುದು.   ಇದು ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ, ರಕ್ತನಾಳದ ಕಾಯಿಲೆಗಳು ಮತ್ತು ಕ್ಯಾನ್ಸರ್ ಸೇರಿದಂತೆ ಹಲವಾರು ದೀರ್ಘಕಾಲದ ಕಾಯಿಲೆಗಳಿಗೆ ಕೂಡ ಕಾರಣವಾಗುತ್ತದೆ. ಹಲವಾರು ಸಸ್ಯಗಳಲ್ಲಿ ವಿಧ ವಿಧದ ಸ್ಥೂಲಕಾಯ-ವಿರೋಧಿ ಸಾಮರ್ಥ್ಯದ ಸಸ್ಯರಾಸಾಯನಿಕ ಸಂಯುಕ್ತಗಳು ಇವೆ ಎಂಬುದಾಗಿ ವೈಜ್ಞಾನಿಕ ಪುರಾವೆಗಳು ಹೇಳುತ್ತವೆ. ಅವುಗಳಲ್ಲಿ ಮುಖ್ಯವಾಗಿ ಸಸ್ಯಗಳಲ್ಲಿನ ಫ್ಲೇವನಾಯ್ಡ್‌ಗಳು, ಟೆರ್ಪೆನಾಯ್ಡ್‌ಗಳು, ಪಾಲಿಫಿನಾಲ್‌ಗಳು, ಆಲ್ಕಲಾಯ್ಡ್‌ಗಳು ಮತ್ತು ಟ್ಯಾನಿನ್‌ಗಳು. ಅಡಿಕೆಯಲ್ಲ್ಲಿಇಂತಹ ಕೆಲವು ಅಂಶಗಳು ಹೇರಳವಾಗಿವೆ.ಕೊಬ್ಬಿನ ಚಯಾಪಚಯವನ್ನು ಕಾಪಾಡಿಕೊಳ್ಳಲು ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಕೊಬ್ಬುಗಳಾಗಿ ಪರಿವರ್ತಿಸುವ ಕ್ರಿಯೆಯನ್ನು ಕಡಿಮೆ ಮಾಡಲು ಅಡಿಕೆ ಸಹಕಾರಿಯಾಗಿದೆ ಎಂಬುದಾಗಿ ಡಾ. ಜಿಯೋನ್ ಮತ್ತು ಅವರ ತಂಡ 2000 ವರದಿ ಮಾಡಿದ್ದಾರೆ.  ಬೀಟೆಲ್ ಕ್ವಿಡ್ (ತಾಂಬೂಲ)  ಅಥವಾ ಅಡಿಕೆಯನ್ನು ಹ್ಯಾಮ್ಸ್ಟರ್‌ ಎನ್ನುವ ಮೂಷಿಕಗಳಿಗೆ ಸತತವಾಗಿ ನಾಲ್ಕು ತಿಂಗಳು ತಿನ್ನಿಸಿದಾಗ ಅವುಗಳ ದೇಹದ ತೂಕದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ ಎಂದು ಡಾ. ಚಿಯಾಂಗ್ ಮತ್ತು ಅವರ ತಂಡ 2004 ರಲ್ಲಿ ಹೇಳಿರುತ್ತಾರೆ. ಅಡಿಕೆಯನ್ನು ಜಗಿಯುವುದರಿಂದ ಹಸಿವು ಕಡಿಮೆಯಾಗುವುದು, ಚಟುವಟಿಕೆ ಮತ್ತು ಕ್ರಿಯಾಶೀಲತೆ ವರ್ಧಿಸುವುದು ಎಂಬುದಾಗಿ ಡಾ. ಶ್ರೀಹರಿ ಮತ್ತು ಅವರ ತಂಡ 2010 ರಲ್ಲಿ ಪ್ರಕಟಿಸಿದ್ದಾರೆ.  ಇದರ ಪರಿಣಾಮವಾಗಿ ದೇಹದಲ್ಲಿನ ಹೆಚ್ಚುವರಿ ಕೊಬ್ಬು ಮತ್ತು ಅಧಿಕ ತೂಕ ಕಡಿಮೆಯಾಗವುದರಲ್ಲಿ ಸಂಶಯವಿಲ್ಲ.

 

 ಅಡಿಕೆಯಲ್ಲಿ, ಅದರಲ್ಲೂ ಎಳೆಯ ಅಡಿಕೆಯಲ್ಲಿ ಟ್ಯಾನಿನ್ ನ ಅಂಶ 45.0% ಗಿಂತಲೂ ಹೆಚ್ಚಿದೆ ಎಂಬುದಾಗಿ ಡಾ. ಮೇಥಿವ್ ಮತ್ತು ಅವರ ತಂಡ 1964 ರಲ್ಲಿ ಪ್ರಕಟಿಸಿದ್ದಾರೆ. ಇಂತಹ ಟ್ಯಾನಿನ್‌ ಸಮೃದ್ಧವಾಗಿರುವ ಅಡಿಕೆ ಯನ್ನು ಸ್ಥೂಲಕಾಯದ ಚಿಕಿತ್ಸೆಗಾಗಿ ಆಯುರ್ವೇದದಲ್ಲಿ ಬಳಸಲಾಗುತ್ತದೆ ಎಂಬುದಾಗಿ ಡಾ. ವರ್ಮಾ ಮತ್ತು ಅವರ ತಂಡ 2014 ರಲ್ಲಿ ಹಾಗೂ ಡಾ. ಸುಡಾನ್ ಮತ್ತು ಅವರ ತಂಡ 2016 ರಲ್ಲಿ ಸಾದರಪಡಿಸಿರುತ್ತಾರೆ

ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ಮಂಗಳೂರು ಇದರ ಸಹಯೋಗದಲ್ಲಿ  ಯಸ್ ಡಿ ಯಂ ಆಯುರ್ವೇದ ಕಾಲೇಜು ಮತ್ತು  ಫಾರ್ಮಸಿ, ಉಡುಪಿಯಲ್ಲಿ ಪ್ರೊಫೆಸರ್ ಆಗಿದ್ದ ಡಾ. ಡಿ ಯನ್ ಶರ್ಮಾ ಅವರ ನೇತೃತ್ವದಲ್ಲಿ ಅಡಿಕೆಯನ್ನು ಉಪಯೋಗಿಸಿ ಅಭಿವೃದ್ಧಿಪಡಿಸಿದ ‘ಪೂಗ ಟ್ರಿಮ್’ ಎನ್ನುವ ಒಂದು ಆಯುರ್ವೇದ ಉತ್ಪನ್ನ ಕೊಲೆಸ್ಟರಾಲ್ ಮತ್ತು ಬೊಜ್ಜಿನ ನಿಯಂತ್ರಣಕ್ಕೆ ಉತ್ತಮ ಪೂರಕ ಆಹಾರವಾಗಿದೆ ಎಂಬುದಾಗಿ ಕಂಡುಬಂದಿರುವುದು ನಿಟ್ಟಿನಲ್ಲಿ ಒಂದು ಗಮನಾರ್ಹ ಬೆಳವಣಿಗೆ.

 

 

 

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group