spot_img
Wednesday, October 23, 2024
spot_imgspot_img
spot_img
spot_img

ಈ ಯುವ ಇಂಜಿನಿಯರ್ ಕಂಪೆನಿ ಉದ್ಯೋಗ ಬಿಟ್ಟರು, ಹೈನೋದ್ಯಮದಲ್ಲಿ ಯಶಸ್ಸು ಕಂಡರು!

ಅಲ್ಲಿ ಮೂರು ಅಂತಸ್ತಿನ ಮಹಲೊಂದು ಎದ್ದು ಕಾಣುತ್ತಿತ್ತು.  ಈ ಹಳ್ಳಿಯಲ್ಲಿ ಅಷ್ಟೊಂದು ದೊಡ್ಡ ಅಂದವಾದ ಬಂಗಲೆ ಯಾರದಿರಬಹುದು ಮತ್ತು ಅಲ್ಲಿ ಯಾರು ವಾಸ್ತವ್ಯವಿರಬಹುದು ಎಂಬ ಕುತೂಹಲ; ಒಳಹೊಕ್ಕು ನೋಡಿದರೆ ಅಲ್ಲೊಂದು ದೊಡ್ಡ ಸಂಸಾರ !!

ತನ್ನೊಡೆಯನ ಬರುವಿಕೆಯನ್ನು ಕಂಡು ಎದ್ದು ನಿಂತು ಗೌರವ ತೋರಿದವು. ತಮಗೇನು ತಂದಿರೆಂದು ಎಂದು ಕೈ ಮತ್ತು ಮುಖ ನೋಡತೊಡಗಿದವು. ಕೆಲವೊಂದು ಮುಖವೆತ್ತಿ ಕಣ್ಣರಳಿಸಿದರೆ ಮತ್ತೆ ಕೆಲವು ನಾಲಗೆ ಹೊರಚಾಚಿ ಕೈಯನ್ನು ಮೆದುವಾಗಿ ಸ್ಪರ್ಶಿಸಿ ಪ್ರೀತಿಯ ಸಂಕೋಲೆಯಲ್ಲಿ ಬಂಧಿಸಿದವು. ಈ ದೊಡ್ಡ ಕುಟುಂಬ ಯಾವುದೆಂದು  ಬಲ್ಲಿರಾ.? ಯುವ ಇಂಜಿನಿಯರ್ ಜಯಾಗುರು ಎ ಆಚಾರ್ ಹಿಂದಾರು ಅವರ ಪಾಲನೆಯಲ್ಲಿರುವ ಗೋ ಸಂಸಾರ

ದ.ಕ ಜಿಲ್ಲೆಯ ಪುತ್ತೂರಿಗೆ ಸಮೀಪದಲ್ಲಿರುವ ಹಳ್ಳಿ ಮುಂಡೂರು. ಈ ಗ್ರಾಮದ ಹಿಂದಾರಿನ ಭಾಸ್ಕರ ಎ ಆಚಾರ್ ಅವರ ಪುತ್ರ ಜಯಾಗುರು ಎ ಆಚಾರ್ ಅವರು ಇಂಜಿನಿಯರಿಂಗ್ ಶಿಕ್ಷಣ ಪಡೆದವರು. ಇತರ ಯುವ ಸಮುದಾಯದಂತೆ ಉದ್ಯೋಕ್ಕಾಗಿ ನಗರದ ಕಡೆ ಮುಖ ಮಾಡಿದ್ದರು. ಮಧ್ಯ ಪ್ರದೇಶದ ಭೂಪಾಲಿನ ದಿಲೀಪ್ ಬಿಲ್ಡ್ಕಾನ್ ಎಂಬ ದೊಡ್ಡ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು. ಉತ್ತಮ ವೇತನವೂ ಇತ್ತು. ಆದರೇನು ಕರೋನಾ ಮಹಾಮಾರಿ ಪರವೂರಿನಲ್ಲಿ ಇರುವ ಬಹಳಷ್ಟು ಮಂದಿ ಉದ್ಯೋಗಿಗಳನ್ನು ತಮ್ಮ ತಮ್ಮ ಮೂಲಗಳಿಗೆ ಹಿಂತಿರುಗಿವಂತೆ ಮಾಡಿತ್ತು. ಜಯಾಗುರು ಅವರು ಅದಕ್ಕೆ ಹೊರತಾಗಿರಲಿಲ್ಲ. ಊರು ಸೇರಿಕೊಂಡರು. ಊರಲ್ಲಿ ಸುಮ್ಮನೆ ಕಾಲಹರಣ ಮಾಡುವ ಬದಲು ಏನಾದರೂ ಸಾಧನೆ ಮಾಡಬೇಕೆಂದು ಅವರ ಮನಸ್ಸಿನಲ್ಲಿ ಹೊಳೆದಾಗ  ಕಣ್ಣೆದುರಿಗೆ ಬಂದದ್ದು  ಹಳ್ಳಿಯಲ್ಲಿ ನಡೆಯುವ ಪರಂಪರೆಯ ಹೈನುಗಾರಿಕೆ. ಮನೆಯಲ್ಲಿ ಗೋವುಗಳ ಸಾಕಾಣೆಯಿತ್ತು . ಅದಕ್ಕೆ ಪೂರಕವಾಗಿ ಜಯಾಗುರು ಅವರು ಕಟ್ಟಡವನ್ನು ನಿರ್ಮಿಸಿಕೊಂಡಿದ್ದರು. ಹೈನುಗಾರಿಕೆಗೆ ಹೊಸ ಸ್ಪರ್ಶ ನೀಡಲು ಮುಂದಾದರು. ೧೦-೧೫ ರಷ್ಟಿದ್ದ ದನಗಳ ಸಂಖ್ಯೆ ಏರಿಕೆಯಾಯಿತು. ಹೈನುಗಾರಿಕೆ ಕೈ ಹಿಡಿಯಿತು. ಉದ್ಯೋಗಕ್ಕಾಗಿ ಮತ್ತೆ ನಗರದತ್ತ ದೃಷ್ಟಿ ಹಾಯಿಸದೆ ತನ್ನ ಊರಲ್ಲೇ ಹೈನುಗಾರಿಕೆ ಹಾಲಿನ ಉದ್ಯಮ-ವ್ಯವಹಾರವನ್ನು ಹುಟ್ಟು ಹಾಕಿದರು. ಕಂಪೆನಿಯಡಿಯಲ್ಲಿ ತಾನು ಕೆಲಸ ಮಾಡುವ ಬದಲು ತಾನೇ ಸ್ಥಳೀಯ ಹಾಗೂ ಹೊರರಾಜ್ಯದ ಹತ್ತಾರು ಮಂದಿಗೆ ಉದ್ಯೋಗದಾತರಾದರು

ಗೋವುಗಳಿಗೆ ಬಂಗಲೆ

ಗೋ ಸಾಕಾಣೆಯೆಂದರೆ ಹಟ್ಟಿಯೊಂದರ ಕಲ್ಪನೆ ಕಣ್ಣಮುಂದೆ ನಿಲ್ಲುತ್ತದೆ. ಆನಂತರ ಸುಧಾರಣೆ ಕಂಡ ಹಟ್ಟಿಗಳಿವೆ. ಆದರೆ ಇಲ್ಲಿ ಹಾಗಲ್ಲ. ಮೂರು ಅಂತಸ್ತಿನ ಭವ್ಯ ಬಂಗಲೆಯಿದೆ. ಪ್ರತಿಯೊಂದು ಹಂತವು ೫೫೦೦ ಚದರ ಅಡಿ ವಿಸ್ತೀರ್ಣವಿದೆ. ಎದುರು-ಬದುರಾಗಿ ಮೂರು ಸಾಲುಗಳಲ್ಲಿ ದನಗಳನ್ನು ಕಟ್ಟಲಾಗುತ್ತಿದೆ. ಎರಡನೇ ಅಂತಸ್ತಿನಲ್ಲಿ ಹಾಲು ಕರೆಯುವ ಹಸುಗಳು ಹಾಗೂ ದೊಡ್ಡ ಕರುಗಳು, ತಳ ಹಂತದಲ್ಲಿ ಇತರ ದನಗಳು ಹಾಗೂ ಸಣ್ಣ ಕರುಗಳು.  ಆಧುನಿಕವಾದ ಬೈಪಣೆ, ಯಾಂತ್ರೀಕೃತವಾದ ನೀರಿನ ವ್ಯವಸ್ಥೆ, ಬೆಚ್ಚಗಿರಲು ರಬ್ಬರ್ ಹಾಸಿಗೆ, ಉಷ್ಣಾಂಶ ಕಾಪಾಡಿಕೊಳ್ಳಲು ಪ್ಯಾನ್, ಯಂತ್ರದಿAದ ಹಾಲು ಕರೆಯುವಿಕೆ ಮೊದಲಾದ ಸೌಲಭ್ಯವಿದೆ. ಸಗಣಿಯನ್ನು ಮೇಲಿಂದ ಸುಲಭವಾಗಿ ಕೆಳ ಅಂತಸ್ತಿಗೆ ಸಾಗಾಟ, ಗೋ ಮೂತ್ರ ಹಾಗೂ ಹಟ್ಟಿ ತೊಳೆದ ನೀರು ಹೋಗಲು ಅಲ್ಲಲ್ಲಿ ಪೈಪುಗಳು, ಆಧುನಿಕತೆಯನ್ನು ಹೊದ್ದುಕೊಂಡ ಆರಾಮದಾಯಕವಾದ ಗೋವಿನ ಮನೆಯಿದು

ಹೆಚ್‌ಎಫ್, ಜರ್ಸಿ, ಗೀರ್, ಪಾರ್ಕರ್ ಮೊದಲಾದ ತಳಿಗಳಿವೆ. ೮೫ ಹಸುಗಳು ಹಾಲು ನೀಡುತ್ತಿದ್ದರೆ ಕರುಗಳು ಸೇರಿದಂತೆ ಒಟ್ಟು ೧೫೦ ದನಗಳಿವೆ. ಬಹುತೇಕ ದನಗಳು ಈ ಪಾಲನಾ ಕೇಂದ್ರದಲ್ಲಿ ಹುಟ್ಟಿ ಬೆಳೆದವುಗಳು.

೭೫೦ ಲೀಟರ್ ಹಾಲು ಉತ್ಪಾದನೆ

ಪ್ರತಿದಿನ ೭೦೦ರಿಂದ ೭೫೦ ಹಾಲು ಉತ್ಪಾದನೆಯಾಗುತ್ತಿದೆ. ಬಹುತೇಕ ಹಾಲನ್ನು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಪೂರೈಸಲಾದರೆ ಸ್ಥಳೀಯ ಮಾರಾಟಗಾರರು, ಶಾಲೆಗಳಿಗೆ, ಪರಿಸರದಲ್ಲಿ ಶುಭ ಸಮಾರಂಭಗಳಿಗೆ ಹಾಲು ಬೇಕೇಂದಾಗ ನೀಡುತ್ತಾರೆ. ಮಜ್ಜಿಗೆಗೂ ಸ್ಥಳೀಯವಾದ ಮಾರುಕಟ್ಟೆಯಿದೆ ಮನೆಯಲ್ಲೇ ತುಪ್ಪ ಮಾಡಲಾಗುತ್ತಿದೆ. ಮಂಗಳೂರು, ಬೆಂಗಳೂರಿನಲ್ಲಿ ಈ ತುಪ್ಪಕ್ಕೆ ಬೇಡಿಕೆಯಿದೆ. ತುಪ್ಪ ಕಿಲೋವೊಂದಕ್ಕೆ ೭೫೦ ರೂಪಾಯಿಗೆ ಮಾರಾಟವಾಗುತ್ತಿದೆ. ಮುಂಬರುವ ದಿನಗಳಲ್ಲಿ ಹಾಲು ಸಂಸ್ಕರಣೆ, ಪ್ಯಾಕಿಂಗ್ ಹಾಗೂ ಇತರ ಉತ್ಪನ್ನಗಳ ತಯಾರಿ ಯೋಜನೆಯು ಜಯಾಗುರು ಅವರಲ್ಲಿದೆ

ಪಶುಆಹಾರ, ಕಾರ್ಮಿಕರ ವೇತನ ಹೆಚ್ಚಳವಾಗಿರುವುದರಿಂದ ಹಾಲಿನ ದರ ಕೂಡಾ ಅದನ್ನು ಸರಿದೂಗಿಸುವಂತೆ ಹೆಚ್ಚಳವಾದರೆ ಹೈನುಗಾರರಿಗೆ ಅನುಕೂಲವಾಗುತ್ತದೆ.  ಹಾಲಿನ ಲೆಕ್ಕಾಚಾರ ಮಾತ್ರವಲ್ಲದೆ ಅದರ ಉಪ ಉತ್ಪನ್ನಗಳನ್ನು ವ್ಯವಹಾರಿಕವಾಗಿ ಕಂಡಾಗ ಖರ್ಚುವೆಚ್ಚಗಳನ್ನು ಸರಿದೂಗಿಸಬಹುದು ಅವರು ಎನ್ನುತ್ತಾರೆ

ತಂದೆ ಭಾಸ್ಕರ ಆಚಾರ್ ಮಾರ್ಗದರ್ಶನ ತಾಯಿ ಸುಜಾತ ಆಚಾರ್ ಸಹಕಾರವನ್ನು ನೆನಪಿಸಿಕೊಳ್ಳುವ ಅವರು ಮುಂದೆ ಇನ್ನಷ್ಟು ಆಧುನಿಕ ತಂತ್ರಜ್ಞಾನ ಅಳವಡಿಸಿ ಹೈನುಗಾರಿಕೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ, ಬೇರೆ ಬೇರೆ ಹಾಲಿನ ಉತ್ಪನ್ನಗಳನ್ನು ತಯಾರಿಸುವ ಆಶಯ ಹೊಂದಿದ್ದಾರೆ.  ಹೈನುಗಾರಿಕೆ ಯಶಸ್ಸನ್ನು ನೋಡಲು ದೂರದೂರಿನಿಂದಲೂ ಬರುತ್ತಾರೆ.

 ಸಗಣಿ ಪುಡಿ ಘಟಕ

ಹೈನುಗಾರಿಕೆ ಇರುವಲ್ಲಿ ಸಗಣಿಗೂ ಮೌಲ್ಯವಿದೆ.  ಅದನ್ನು ಸಂಸ್ಕರಿಸಿದರೆ ಬೆಲೆಯೂ ಹೆಚ್ಚುತ್ತದೆ. ಜಯಾಗುರು ಅವರು ಸಗಣಿ ಮೌಲ್ಯವರ್ಧನೆ ಮಾಡುತ್ತಾರೆ. ಅದಕ್ಕಾಗಿ ಪಂಜಾಬಿನಿಂದ ಡಿ ವಾಟರಿಂಗ್ ಎಂಬ ಯಂತ್ರವನ್ನು ತರಿಸಿಕೊಂಡಿದ್ದಾರೆ. ಈ ಯಂತ್ರಕ್ಕೆ ಸಗಣಿಯನ್ನು ಹಾಕಿದರೆ ನೀರಿನಾಂಶವನ್ನು ಕಳೆದುಕೊಂಡು ಸಗಣಿ ಹುಡಿಹುಡಿಯಾಗಿ ಟ್ಯಾಂಕಿನಲ್ಲಿ ಶೇಖರಣೆಯಾಗುತ್ತದೆ ಈ ಪುಡಿಯನ್ನು ೫೦ಕೆಜಿ ಪ್ಯಾಕೆಟ್ ಮಾಡಿ ಮಾರಾಟ ಮಾಡುತ್ತಾರೆ. ಈ ಸಗಣಿ ಪುಡಿಗೆ ಕೃಷಿಕರಿಂದ ಭಾರೀ ಬೇಡಿಕೆಯಿದೆ. ಬೇಕಾದಷ್ಟು ಪೂರೈಕೆ ಮಾಡಲಾಗುತ್ತಿಲ್ಲ ಎನ್ನುತ್ತಾರೆ ಜಯಾಗುರು ಆಚಾರ್

ದನ ಸಾಕಣೆದಾರರು ಹೆಚ್ಚಾಗಿ ತಮ್ಮ ಕೃಷಿ ತೋಟಗಳಿಗೆ ಸ್ಲರಿ ಬಿಟ್ಟು ಸುಮ್ಮನಾಗುತ್ತಾರೆ. ಇವರಲ್ಲಿ ಬೃಹತ್ ಪ್ರಮಾಣದಲ್ಲಿ ಉತ್ಪಾದನೆಯಾಗುವ ಗೋ ಮೂತ್ರ, ಹಟ್ಟಿ ತೊಳೆದ ನೀರು ಹಾಗೂ ಸಗಣಿ ನೀರಿನ ಸಾರವನ್ನು ದೊಡ್ಡದಾದ ಟ್ಯಾಂಕಿನಲ್ಲಿ ಸಂಗ್ರಹಿಸಿ ಬೇಕಾದ ಕೃಷಿಕರಿಗೆ ಮಾರಾಟ ಮಾಡುತ್ತಾರೆ. ನಿಗದಿತ ಹಣ ಪಾವತಿಸಿದರೆ ಸಾಕು; ಸುಮಾರು ಏಳು ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕರಿನಲ್ಲಿ ತುಂಬಿಸಿ  ಸಂಬಂಧಪಟ್ಟವರ ತೋಟಗಳಿಗೆ ಹರಿಸುತ್ತಾರೆ. ದೂರದೂರುಗಳಿಂದ ಬೇಡಿಕೆ ಬಂದಲ್ಲಿ ಸಾಗಾಟ ದರದಲ್ಲಿ ಮಾತ್ರ ವ್ಯತ್ಯಾಸವಾಗುತ್ತದೆ.

ದನಗಳಿಗೆ ಸೈಲೇಜ್

ದನಗಳಿಗೆ ಬೇಕಾದ ಪಶು ಆಹಾರದಲ್ಲಿ ಸೈಲೇಜನ್ನು  ತಮ್ಮಲ್ಲಿಯೇ  ತಯಾರಿಸಿಕೊಳ್ಳುತ್ತಾರೆ. ಅದಕ್ಕೆ ಬೇಕಾದ ಜೋಳದ ಕಡ್ಡಿಗಳನ್ನು ಹಾಸನ ಜಿಲ್ಲೆಯ ಆಸುಪಾಸಿನ ಊರುಗಳಿಂದ ಲಾರಿಯಲ್ಲಿ ತರಿಸಿಕೊಳ್ಳುತ್ತಾರೆ. ಆ ನಂತರ ಛಾಪ್ ಕಟ್ಟರಿನಿಂದ ತುಂಡರಿಸಿಕೊಂಡು ೧೫ ಅಡಿ ಆಳ ಹಾಗೂ ಹತ್ತು ಅಡಿ ವ್ಯಾಸವುಳ್ಳ ಗುಂಡಿ(ಬಾವಿ)ಯೊಳಗೆ ಹಾಕಿ ತಿಂಗಳ ಕಾಲ ಗಾಳಿಯಾಡದಂತೆ ಭದ್ರವಾಗಿ ಮುಚ್ಚಿಡಲಾಗುತ್ತಿದೆ. ಒಂದು ತೊಟ್ಟಿಯಲ್ಲಿ ಸುಮಾರು ೨೫ಟನ್ ಉತ್ಪಾದನೆಯಾಗುತ್ತದೆ. ಇಂತಹ ನಾಲ್ಕು ತೊಟ್ಟಿಗಳಲ್ಲಿ ಸೈಲೇಜ್ ನಿರಂತರವಾಗಿ ಆಗುತ್ತಲೇ ಇರುತ್ತದೆ. ದಿನವೊಂದಕ್ಕೆ ೧ಟನ್ ಸೈಲೇಜ್ ಬಳಕೆಯಾದರೆ ನೇಫಿಯರ್ ಹುಲ್ಲು, ಸಿದ್ಧ ಪಶುಆಹಾರ ಬಳಸುತ್ತಾರೆ. ಆಸುಪಾಸಿನಲ್ಲಿರುವ ಹಾಳೆತಟ್ಟೆ ತಯಾರಿಕಾ ಘಟಕಗಳಲ್ಲಿ ನಿರುಪಯುಕ್ತ ಹಾಳೆ ತುಂಡುಗಳನ್ನು ತಂದು ಪುಡಿಗೈದು ದನಗಳಿಗೆ ನೀಡಲಾಗುತ್ತದೆ.

ಜಯಾಗುರು ಅವರು ಮುಂಡೂರು ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರು ಹಾಗೂ ಸಾಮಾಜಿಕ ಸಂಘಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ. ಅಡಿಕೆ, ತೆಂಗು ತೋಟವಿದ್ದು ಸ್ಲರಿ ಬಳಸಿ ಸಾವಯವ ಕೃಷಿಯನ್ನು ಮಾಡುತ್ತಿದ್ದಾರೆ.

-ರಾಧಾಕೃಷ್ಣ ತೊಡಿಕಾನ ಮೊ : ೯೪೮೧೭೫೦೦೮೫

 

 

 

 

 

 

 

 

 

 

 

 

 

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group