ಬ್ರಹ್ಮಾವರ: ಕರಾವಳಿ ಕರ್ನಾಟಕದ ಕೃಷಿ ಅಭಿವೃದ್ಧಿ, ಆಧುನಿಕ ತಂತ್ರಜ್ಞಾನಗಳ ಪರಿಚಯ ಹಾಗೂ ರೈತರು ಮತ್ತು ವಿಜ್ಞಾನಿಗಳ ನಡುವೆ ನೇರ ಸಂವಾದಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಅ.17 ಮತ್ತು 18ರಂದು ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಆವರಣದಲ್ಲಿ ಕೃಷಿ ಮತ್ತು ತೋಟಗಾರಿಕೆ ಮೇಳ 2026 ಆಯೋಜಿಸಲಾಗಿದೆ.
ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ಬ್ರಹ್ಮಾವರ ಕೇಂದ್ರದಲ್ಲಿ ನಡೆಯುವ ಈ ಮೇಳದಲ್ಲಿ ಬರ ಪರಿಸ್ಥಿತಿಯಲ್ಲಿ ಕೃಷಿ ನಿರ್ವಹಣೆ, ಭವಿಷ್ಯದ ತೋಟಗಾರಿಕಾ ಬೆಳೆಗಳು, ಅಡಿಕೆ ಬೆಳೆಯ ಕೀಟ ಮತ್ತು ರೋಗಗಳ ಸಮಗ್ರ ನಿರ್ವಹಣೆ, ಲಾಭದಾಯಕ ಹೈನುಗಾರಿಕೆ ಹಾಗೂ ಮೀನುಗಾರಿಕೆಗೆ ವಿಶೇಷ ಆದ್ಯತೆ ನೀಡಲಾಗಿದೆ.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಮೇಳವನ್ನು ಉದ್ಘಾಟಿಸಲಿದ್ದು, ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ಶಾಸಕ ಯಶ್ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದು, ವಿಶ್ವವಿದ್ಯಾಲಯದ ಕುಲಪತಿ ಎಂ.ವಿ. ಧನಂಜಯ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.
ಆಧುನಿಕ ಕೃಷಿ ತಂತ್ರಜ್ಞಾನಗಳ ಪ್ರದರ್ಶನ
ಮೇಳದಲ್ಲಿ ಭತ್ತದ ಹೊಸ ತಳಿಗಳು, ಬೀಜೋತ್ಪಾದನಾ ತಾಕುಗಳು ಹಾಗೂ ಅಡಿಕೆ, ತೆಂಗು, ಗೋಡಂಬಿ, ಮಾವು ಮತ್ತು ರಬ್ಬರ್ ಬೆಳೆಗಳ ಕುರಿತು ಮಾಹಿತಿ ನೀಡಲಾಗುತ್ತದೆ. ತೆಂಗಿನ ತೋಟದಲ್ಲಿ ಅಂತರ ಬೆಳೆಗಳ ಪ್ರಾತ್ಯಕ್ಷಿಕೆ, ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಳಕೆ, ಡ್ರೋನ್ ಮೂಲಕ ಕೃಷಿ ಕಾರ್ಯಗಳು ಹಾಗೂ ನೀರಿನ ಅಭಾವ ಎದುರಿಸಲು ಹನಿ ಮತ್ತು ತುಂತುರು ನೀರಾವರಿ ಪದ್ಧತಿಗಳ ಪ್ರದರ್ಶನವೂ ಇರಲಿದೆ.
ಜೈವಿಕ ತ್ಯಾಜ್ಯವನ್ನು ಬಂಗಾರದ ಹುಳುಗಳ ನೆರವಿನಿಂದ ಶೀಘ್ರವಾಗಿ ಸಾವಯವ ಗೊಬ್ಬರವಾಗಿ ಪರಿವರ್ತಿಸುವ ತಂತ್ರಜ್ಞಾನ, ಹೈನುಗಾರಿಕೆ, ಕೋಳಿ, ಕುರಿ, ಹಂದಿ ಮತ್ತು ಜೇನುಸಾಕಣೆ, ಮೀನುಸಾಕಣೆ ಕೊಳ ಹಾಗೂ ಚಿಟ್ಟೆ ಉದ್ಯಾನವೂ ಮೇಳದ ಆಕರ್ಷಣೆಗಳಾಗಿವೆ.
ರೈತರಿಗೆ ಅಗತ್ಯವಿರುವ ಕೃಷಿ ಯಂತ್ರೋಪಕರಣಗಳು, ಬೀಜಗಳು ಮತ್ತು ಸಸಿಗಳ ಪ್ರದರ್ಶನ ಹಾಗೂ ಮಾರಾಟಕ್ಕಾಗಿ 200ಕ್ಕೂ ಅಧಿಕ ಮಳಿಗೆಗಳನ್ನು ತೆರೆಯಲಾಗುತ್ತದೆ.
ಆರು ಪ್ರಗತಿಪರ ರೈತರಿಗೆ ಸನ್ಮಾನ
ಮೇಳದ ಅಂಗವಾಗಿ ಭವಿಷ್ಯದ ತೋಟಗಾರಿಕಾ ಬೆಳೆಗಳು, ಅಡಿಕೆ ರೋಗಗಳ ನಿರ್ವಹಣೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಹಾಗೂ ರೈತ ಉತ್ಪಾದಕ ಕಂಪನಿಗಳು ಎದುರಿಸುತ್ತಿರುವ ಸವಾಲುಗಳ ಕುರಿತು ವಿಶೇಷ ತಾಂತ್ರಿಕ ಗೋಷ್ಠಿಗಳು ನಡೆಯಲಿವೆ. ರೈತರು ಮತ್ತು ವಿಜ್ಞಾನಿಗಳ ನಡುವೆ ನೇರ ಸಂವಾದಕ್ಕೂ ಅವಕಾಶ ಕಲ್ಪಿಸಲಾಗಿದೆ.
ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಆರು ಪ್ರಗತಿಪರ ರೈತರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುತ್ತದೆ. ಕೃಷಿಯಲ್ಲಿನ ಹೊಸ ತಂತ್ರಜ್ಞಾನಗಳು, ವೈಜ್ಞಾನಿಕ ಬೆಳೆ ನಿರ್ವಹಣೆ ಹಾಗೂ ಲಾಭದಾಯಕ ಕೃಷಿ ಪದ್ಧತಿಗಳ ಕುರಿತು ಮಾಹಿತಿ ಪಡೆಯಲು ಈ ಮೇಳ ರೈತರಿಗೆ ಉತ್ತಮ ವೇದಿಕೆಯಾಗಲಿದೆ.








