ಬರಹ- ರಾಧಾಕೃಷ್ಣ ತೊಡಿಕಾನ
ಮಹಿಳೆಯರಲ್ಲಿ ಸ್ವಾವಲಂಬನೆ ಮತ್ತು ಆರ್ಥಿಕ ಸಬಲೀಕರಣದ ಜಾಗೃತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೆಲವರು ಖಾಸಗಿ ಹಾಗೂ ಸರಕಾರಿ ವಲಯಗಳಲ್ಲಿ ಉದ್ಯೋಗ ಕಂಡುಕೊಂಡರೆ, ಇನ್ನು ಕೆಲವರು ಸ್ವಉದ್ಯೋಗ ಮತ್ತು ಕಿರು ಉದ್ಯಮಗಳ ಮೂಲಕ ತಮ್ಮದೇ ಆದ ಬದುಕಿನ ದಾರಿ ಕಂಡುಕೊಳ್ಳುತ್ತಿದ್ದಾರೆ. ಸ್ವಉದ್ಯೋಗದ ಹಾದಿಯಲ್ಲಿ ಕೆಲವರಿಗೆ ಯಶಸ್ಸು ಸಿಕ್ಕರೆ, ಮತ್ತೆ ಕೆಲವರು ಸೋಲು-ಸವಾಲುಗಳನ್ನು ಎದುರಿಸುತ್ತಾರೆ. ಗೆಲುವಿನ ಹಿಂದೆ ಹಲವು ಸೋಲುಗಳ ನೋವು, ಅನುಭವ ಮತ್ತು ಪರಿಶ್ರಮ ಅಡಗಿರುತ್ತದೆ.
ಸೋಲು-ಗೆಲುವಿನ ನಡುವೆಯೇ ಸ್ವಾವಲಂಬನೆಯ ಗುರಿ ಮುಟ್ಟಿದ ಮಹಿಳೆಯರಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯ ರಾಧಾ ಶಿವಕುಮಾರ್ ಅವರೂ ಒಬ್ಬರು. ಕೃಷಿ ಉತ್ಪನ್ನಗಳನ್ನು ಆಧರಿಸಿಕೊಂಡು ಕಿರು ಉದ್ಯಮವನ್ನು ಆರಂಭಿಸಿರುವ ಅವರು, ತಮ್ಮದೇ ಆದ ಉತ್ಪನ್ನಗಳ ಮೂಲಕ ಗುರುತಿಸಿಕೊಂಡಿದ್ದಾರೆ.
ರೈತರು ಬೆಳೆಯುವ ಸಿರಿಧಾನ್ಯಗಳು ಹಾಗೂ ವಿವಿಧ ಕಾಳುಗಳನ್ನು ರೈತರಿಂದಲೇ ನೇರವಾಗಿ ಖರೀದಿಸಿ, ಅವುಗಳನ್ನು ಸಂಸ್ಕರಿಸಿ ಸಿರಿಧಾನ್ಯಗಳು ಮತ್ತು ಕಾಳುಗಳ ಜೊತೆಗೆ ಶಂಖಪುಷ್ಪ, ಒಂದಲಗ, ತುಳಸಿ, ಶುಂಠಿ, ಕಾಳುಮೆಣಸು ಮೊದಲಾದ ಮೂಲಿಕೆಗಳ ಸತ್ವವನ್ನು ಒಳಗೊಂಡ ಬಹುಧಾನ್ಯಗಳ ಮಿಶ್ರಣದ ಉತ್ಪನ್ನವು ಬಹು ಬೇಡಿಕೆಯದ್ದಾಗಿದೆ. ‘ರಾಶಿಸ್ ಸಾನ್ವಿ’ ಎಂಬ ಹೆಸರಿನಲ್ಲಿ ತಮ್ಮ ಉತ್ಪನ್ನಗಳನ್ನು ರಾಧಾ ಶಿವಕುಮಾರ್ ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಸ್ಥಳೀಯವಾಗಿ ದೊರೆಯುವ ಕೃಷಿ ಉತ್ಪನ್ನಗಳಿಗೆ ಹೊಸ ರೂಪ ನೀಡಿ ಗ್ರಾಹಕರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.

ಕೃಷಿಕ ಕುಟುಂಬದಿಂದ ಬಂದಿರುವ ರಾಧಾ ಅವರಿಗೆ ಕೃಷಿಯೊಂದಿಗೆ ಮೊದಲಿನಿಂದಲೂ ನಂಟಿದೆ. ಅವರ ಪತಿ ಶಿವಕುಮಾರ್ ವಿದ್ಯುತ್ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿವಾಹದ ಬಳಿಕ ಗೃಹಕೃತ್ಯದಲ್ಲಿ ತೊಡಗಿಸಿಕೊಂಡಿದ್ದ ರಾಧಾ ಅವರ ಮನದಲ್ಲಿ ಸ್ವಂತ ಉದ್ಯೋಗ ಆರಂಭಿಸಿ ಸ್ವಾವಲಂಬಿಯಾಗಬೇಕೆಂಬ ಮಹತ್ವಾಕಾಂಕ್ಷೆಯೂ ಇತ್ತು. ವೈಯಕ್ತಿಕ ಬದುಕಿನ ಕಾರಣಗಳಿಂದ ಅವರು ಮಾನಸಿಕವಾಗಿ ಕುಗ್ಗಿದ್ದರೂ, ಪತಿ ಶಿವಕುಮಾರ್ ಅವರ ಬೆಂಬಲ ಹಾಗೂ ಸಹೋದರಿಯ ಪ್ರೋತ್ಸಾಹದ ಮಾತುಗಳು ಅವರಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿದವು. ಅಲ್ಲಿಂದಲೇ ಸ್ವಉದ್ಯೋಗದ ಕನಸಿಗೆ ಚೈತನ್ಯ ದೊರೆಯಿತು.
ಯಶಸ್ಸಿನ ಹೆಜ್ಜೆ: ಕೃಷಿ ಉತ್ಪನ್ನ ಆಧರಿತ ಗೃಹ ಉದ್ಯಮ ಆರಂಭಿಸುವ ನಿರ್ಧಾರ ಕೈಗೊಂಡ ರಾಧಾ ಶಿವಕುಮಾರ್ ಮೊದಲು ಆಹಾರ ಉತ್ಪನ್ನಗಳ ತಯಾರಿಕೆಯ ಕುರಿತು ತಾಂತ್ರಿಕ ಮಾಹಿತಿ ಹಾಗೂ ಮಾರ್ಗದರ್ಶನ ಪಡೆದುಕೊಂಡರು. ಬಳಿಕ ಆಸುಪಾಸಿನ ರೈತರಿಂದ ದೊರೆಯುವ ಸಿರಿಧಾನ್ಯಗಳು ಮತ್ತು ಕಾಳುಗಳನ್ನು ಬಳಸಿಕೊಂಡು ಪೌಷ್ಟಿಕ ಮಿಶ್ರಣ ತಯಾರಿಸಲು ಆರಂಭಿಸಿದರು.
ಮೊದಲಿಗೆ ಉತ್ಪನ್ನಗಳನ್ನು ನೆರೆಹೊರೆಯವರಿಗೆ ನೀಡಿ ಅವರ ಅಭಿಪ್ರಾಯವನ್ನು ಪಡೆದುಕೊಂಡರು. ಉತ್ಪನ್ನಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದಂತೆ ರಾಧಾ ಅವರ ಆತ್ಮವಿಶ್ವಾಸವೂ ಹೆಚ್ಚಾಯಿತು. ಮನೆಯ ಮಟ್ಟದಲ್ಲಿ ಆರಂಭವಾದ ಪ್ರಯತ್ನ ಕ್ರಮೇಣ ಕಿರು ಉದ್ಯಮವಾಗಿ ಬೆಳೆದು, ಇಂದು ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನವನ್ನು ಕಂಡುಕೊಂಡಿದೆ.

ಸಿರಿಧಾನ್ಯ ಮಿಶ್ರಣಕ್ಕೆ ಬೇಡಿಕೆ
ರಾಧಾ ಶಿವಕುಮಾರ್ ಅವರ ಪ್ರಮುಖ ಉತ್ಪನ್ನಗಳಲ್ಲಿ ಸಿರಿಧಾನ್ಯ ಮತ್ತು ಕಾಳುಗಳ ಮಿಶ್ರಣ ಪ್ರಮುಖವಾದುದು. ಪೌಷ್ಟಿಕಾಂಶಗಳನ್ನು ಒಳಗೊಂಡ ಈ ಮಿಶ್ರಣವನ್ನು ಗಂಜಿಯ ರೂಪದಲ್ಲಿ ಅಥವಾ ಪಾನೀಯವಾಗಿ ಸೇವಿಸಬಹುದು. ದೋಸೆ, ಚಪಾತಿ ಮೊದಲಾದವುಗಳ ಹಿಟ್ಟಿನಲ್ಲಿಯೂ ಬೆರೆಸಿ ಬಳಸಬಹುದಾಗಿದೆ. ಎಲ್ಲ ವಯೋಮಾನದವರಿಗೂ ಉಪಯುಕ್ತವಾಗುವಂತಹ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳನ್ನು ಬಳಸುವ ಉದ್ದೇಶದಿಂದ ಉತ್ಪನ್ನಗಳನ್ನು ರೂಪಿಸಿರುವುದಾಗಿ ರಾಧಾ ಹೇಳುತ್ತಾರೆ. ಮಕ್ಕಳ ಬೆಳವಣಿಗೆ ಸೇರಿದಂತೆ ಆರೋಗ್ಯಕರ ಆಹಾರ ಪದ್ಧತಿಗೆ ಸಿರಿಧಾನ್ಯಗಳ ಬಳಕೆ ಸಹಕಾರಿ ಎಂಬುದು ಅವರ ಅಭಿಪ್ರಾಯವಾಗಿದೆ. ಸಿರಿಧಾನ್ಯ ಮಿಶ್ರಣಕ್ಕೆ ದೊರೆತ ಉತ್ತಮ ಪ್ರತಿಕ್ರಿಯೆ ರಾಧಾ ಅವರನ್ನು ಇನ್ನಷ್ಟು ಆಹಾರ ಉತ್ಪನ್ನಗಳನ್ನು ತಯಾರಿಸುವತ್ತ ಪ್ರೇರೇಪಿಸಿತು.

ನುಗ್ಗೆ ಸೊಪ್ಪು ಮೌಲ್ಯವರ್ಧನೆ
ನುಗ್ಗೆಕಾಯಿ ತರಕಾರಿಯಾಗಿ ಬಳಕೆಯಾಗುತ್ತಿದ್ದರೂ, ನುಗ್ಗೆಸೊಪ್ಪಿನ ಬಳಕೆ ಅಷ್ಟಾಗಿ ವ್ಯಾಪಕವಾಗಿಲ್ಲ. ಇದನ್ನು ಗಮನಿಸಿದ ರಾಧಾ ಅವರು ನುಗ್ಗೆಸೊಪ್ಪನ್ನು ಒಣಗಿಸಿ ಮೌಲ್ಯವರ್ಧನೆ ಮಾಡುವ ಮೂಲಕ ನುಗ್ಗೆಸೊಪ್ಪಿನ ಪುಡಿಯನ್ನು ತಯಾರಿಸಲು ಆರಂಭಿಸಿದರು. ಇದರ ಜೊತೆಗೆ ಹುರುಳಿಕಾಳು ಚಟ್ನಿ ಪುಡಿ, ಪುಳಿಯೋಗರೆ ಪುಡಿ ಸೇರಿದಂತೆ ಹಲವು ಆಹಾರ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಸ್ಥಳೀಯವಾಗಿ ದೊರೆಯುವ ಕೃಷಿ ಉತ್ಪನ್ನಗಳನ್ನು ವ್ಯರ್ಥವಾಗದಂತೆ ಬಳಸಿಕೊಂಡು ಅವುಗಳಿಗೆ ಮೌಲ್ಯವರ್ಧನೆ ಮಾಡುವ ಪ್ರಯತ್ನ ಅವರದು.
ರಾಧಾ ಅವರ ಆಹಾರ ಉತ್ಪನ್ನಗಳು ಹಾಪ್ಕಾಮ್ಸ್, ಮಾಲ್ಗಳು ಸೇರಿದಂತೆ ವಿವಿಧ ಅಂಗಡಿಗಳಲ್ಲಿ ಲಭ್ಯವಿವೆ. ಅಲ್ಲದೆ ಗ್ರಾಹಕರು ನೇರವಾಗಿ ಸಂಪರ್ಕಿಸಿ ಉತ್ಪನ್ನಗಳನ್ನು ಖರೀದಿಸುತ್ತಾರೆ. ರಾಜ್ಯದ ವಿವಿಧ ಭಾಗಗಳಿಗೂ ಕೊರಿಯರ್ ಮೂಲಕ ಉತ್ಪನ್ನಗಳನ್ನು ಕಳುಹಿಸಲಾಗುತ್ತಿದೆ. ಸ್ಥಳೀಯವಾಗಿ ಆರಂಭವಾದ ಉದ್ಯಮ ಇಂದು ರಾಜ್ಯದ ವಿವಿಧೆಡೆ ಗ್ರಾಹಕರನ್ನು ತಲುಪಿರುವುದು ರಾಧಾ ಅವರ ಪರಿಶ್ರಮದ ಫಲವಾಗಿದೆ.
ಕಿರು ಉದ್ಯಮದ ಮೂಲಕ ರಾಧಾ ಶಿವಕುಮಾರ್ ತಮ್ಮ ಬದುಕಿಗೆ ಸ್ವಾವಲಂಬನೆಯ ದಾರಿ ಕಂಡುಕೊಂಡಿರುವುದಷ್ಟೇ ಅಲ್ಲದೆ, ಇನ್ನಿಬ್ಬರು ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶವನ್ನೂ ಕಲ್ಪಿಸಿದ್ದಾರೆ. ಆಸಕ್ತ ಮಹಿಳೆಯರಿಗೆ ಆಹಾರ ಉತ್ಪನ್ನಗಳ ತಯಾರಿಕೆ ಕುರಿತು ತರಬೇತಿಯನ್ನೂ ನೀಡುತ್ತಿದ್ದಾರೆ.

ತಮ್ಮ ಸ್ವಾವಲಂಬನೆಯ ಪಯಣ ಮತ್ತಷ್ಟು ಮಹಿಳೆಯರಿಗೆ ಪ್ರೇರಣೆಯಾಗಬೇಕು ಎಂಬ ಆಶಯ ಅವರದು. ಗ್ರಾಮೀಣ ಪ್ರದೇಶದ ಮಹಿಳೆಯರು ತಮ್ಮಲ್ಲಿರುವ ಕೌಶಲ್ಯವನ್ನು ಗುರುತಿಸಿಕೊಂಡು, ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಉದ್ಯಮ ಆರಂಭಿಸಬಹುದು ಎಂಬುದಕ್ಕೆ ರಾಧಾ ಅವರು ಸಾಕ್ಷಿಯಾಗಿದ್ದಾರೆ. ಸೋಲಿನ ಅನುಭವಗಳಿಂದ ಕುಗ್ಗದೆ, ಸಣ್ಣ ಪ್ರಮಾಣದಿಂದ ಆರಂಭಿಸಿ ಹಂತಹಂತವಾಗಿ ಮುನ್ನಡೆದ ರಾಧಾ ಶಿವಕುಮಾರ್ ಅವರ ಪಯಣ ಆರ್ಥಿಕ ಸ್ವಾವಲಂಬನೆ ಬಯಸುವ ಮಹಿಳೆಯರಿಗೆ ಸ್ಫೂರ್ತಿದಾಯಕವಾಗಿದೆ.
“ಆಸಕ್ತಿ, ಶ್ರದ್ಧೆ ಮತ್ತು ಶ್ರಮವಿದ್ದರೆ ಯಶಸ್ಸಿನ ಪಥವು ತನ್ನಿಂದ ತಾನೇ ತೆರೆದುಕೊಳ್ಳುತ್ತದೆ” ಎಂಬುದು ರಾಧಾ ಶಿವಕುಮಾರ್ ಅವರ ನಂಬಿಕೆ. ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡುವ ಮೂಲಕ ರೈತರಿಗೆ ಮಾರುಕಟ್ಟೆ, ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಮತ್ತು ಗ್ರಾಹಕರಿಗೆ ಪೌಷ್ಟಿಕ ಆಹಾರ—ಈ ಮೂರು ಬೆಸೆದುಕೊಂಡಿರುವ ಇಂತಹ ಕಿರು ಉದ್ಯಮಗಳು ಗ್ರಾಮೀಣ ಭಾಗದಲ್ಲಿ ಹೊಸ ಅವಕಾಶಗಳನ್ನು ತೆರೆದುಕೊಂಡಿವೆ
ಸಂಪರ್ಕ: 9741849110








