ಶಿವಮೊಗ್ಗ: ತಾಲೂಕಿನ ರಾಮನಗರ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳ ವತಿಯಿಂದ ರೈತ ಮಹಿಳೆಯರಿಗೆ ತೆಂಗಿನಕಾಯಿ ಬಿಸ್ಕತ್ ತಯಾರಿಸುವ ವಿಧಾನದ ಕುರಿತು ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ತೆಂಗಿನಕಾಯಿಯನ್ನು ಬಳಸಿ ರುಚಿಕರವಾದ ಬಿಸ್ಕತ್ ತಯಾರಿಸುವ ವಿಧಾನ, ಅಗತ್ಯವಿರುವ ಕಚ್ಚಾ ವಸ್ತುಗಳು, ತಯಾರಿಕೆಯ ಹಂತಗಳು ಹಾಗೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಲಾಯಿತು. ತೆಂಗಿನಕಾಯಿಯಂತಹ ಸ್ಥಳೀಯ ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧಿತ ಆಹಾರ ಪದಾರ್ಥಗಳಾಗಿ ಪರಿವರ್ತಿಸುವುದರಿಂದ ಅವುಗಳ ಬಳಕೆಯನ್ನು ಹೆಚ್ಚಿಸುವುದರ ಜೊತೆಗೆ ಹೆಚ್ಚುವರಿ ಆದಾಯ ಗಳಿಸಲು ಅವಕಾಶವಿದೆ ಎಂಬುದನ್ನು ತಿಳಿಸಲಾಯಿತು.
ಇಂತಹ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಯಿಂದ ಗ್ರಾಮೀಣ ಮಹಿಳೆಯರು ಸ್ವಯಂ ಉದ್ಯೋಗ ಆರಂಭಿಸಲು, ಸಣ್ಣ ಪ್ರಮಾಣದ ಗೃಹೋದ್ಯಮಗಳನ್ನು ಸ್ಥಾಪಿಸಲು ಹಾಗೂ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಹಕಾರಿಯಾಗುತ್ತದೆ. ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ ಮೂಲಕ ಗ್ರಾಮೀಣ ಮಹಿಳೆಯರ ಉದ್ಯಮಶೀಲತೆಯನ್ನು ಉತ್ತೇಜಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಊರಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.










