ರೈತರು ತಮ್ಮ ಹೊಲ,ಗದ್ದೆ,ತೋಟದಲ್ಲಿ ಬೆಳೆ ಬೆಳೆಯುತ್ತಾರೆ. ಫಸಲು ಮನೆ ತಲುಪುವಾಗ ಕೆಲವೊಮ್ಮೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿರುತ್ತದೆ. ಅನಿವಾರ್ಯವಾಗಿ ಉತ್ಪನ್ನಗಳನ್ನು ಮಾರಾಟ ಮಾಡಬೇಕಾಗುತ್ತದೆ. ಆಗ ರೈತರು ನಷ್ಟ ಅನುಭವಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಉತ್ಪನ್ನಗಳನ್ನು ಸಂಸ್ಕರಿಸಿ ಮೌಲ್ಯವರ್ಧನೆಗೊಳಿಸುವ ವ್ಯವಸ್ಥೆ ಯಿದ್ದರೆ ಅದರ ಮೂಲಕ ಸಂಸ್ಕರಿತ ಉತ್ಪನ್ನಗಳಿಗೆ ಉತ್ತಮ ದರವನ್ನು ಪಡೆಯಬಹುದು. ಸ್ವ ಉದ್ಯೋಗವನ್ನೂ ಮಾಡಿಕೊಳ್ಳಬಹುದು. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಿಂದ ಆದಾಯವೂ ಹೆಚ್ಚಳವಾಗುತ್ತದೆ. ಗ್ರಾಹಕರಿಗೆ ಉತ್ತಮ ಗುಣಮಟ್ಟ ಆಹಾರ ಉತ್ಪನ್ನಗಳನ್ನು ಒದಗಿಸುವುದು ಸಾಧ್ಯವಾಗುತ್ತದೆ.
ಅಹಾರ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಸಂಸ್ಕರಣೆ ಫಟಕ ನಿರ್ಮಿಸಿಕೊಳ್ಳುವುದಕ್ಕೆ ಆಸಕ್ತಿಯಿದ್ದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಯಿದೆ. ಕೃಷಿ ಇಲಾಖೆಯ ಮೂಲಕ ಅನುಷ್ಠಾನಗೊಳ್ಳುತ್ತಿರುವ ಈ ಯೋಜನೆಯಡಿ ದಾಲ್ ಪ್ರೊಸೆಸರ್, ಫ್ಲೋರ್ ಮಿಲ್, ಮಿನಿ ರೈಸ್ ಮಿಲ್,ಮಿನಿ ಆಯಿಲ್ ಎಕ್ಸ್ ಪೆಲ್ಲರ್, ರಾಗಿ ಕ್ಲೀನಿಂಗ್ ಮೆಷೀನ್, ಶುಗರ್ ಕ್ಯಾನ್ ಪ್ರೆಸ್ಸಿಂಗ್ ಯೂನಿಟ್, ಪಲ್ವರೈಸರುಗಳು, ರವಾ ಅಥವಾ ಕ್ಯಾಟಲ್ ಫೀಡ್ ಮಿಷನ್, ಶಾವಿಗೆ ಮಿಷನ್, ಚಿಲ್ಲಿ ಪೌಂಡಿಂಗ್ ಮಿಷನ್,ಶಾವಿಗೆ, ಕಬ್ಬಿನ ಜ್ಯೂಸ್ ಮಿಷನ್,ವೀಟ್ ಪಾಲಿಷರ್ ಮೊದಲಾದುವುಗಳು ಸಹಾಯಧನದಲ್ಲಿ ದೊರೆಯಲಿದೆ
ಸಾಮಾನ್ಯ ವರ್ಗದ ರೈತರಿಗೆ ಶೇಕಡ 50 ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡ ರೈತರಿಗೆ ಶೇಕಡ 90ರಂತೆ ಗರಿಷ್ಠ 1 ಲಕ್ಷ ಮೀರದಂತೆ ಕೃಷಿ ಉತ್ಪನ್ನ ಸಂಸ್ಕರಣ ಘಟಕಗಳು ಹಾಗೂ ಎಚ್ ಡಿಪಿಇ ಟರ್ಪಾಲುಗಳಿಗೆ ಸಹಾಯಧನವಿದೆ. ಆಸಕ್ತ ರೈತರು ಆಯಾ ಪ್ರದೇಶಗಳ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯನ್ನು ಸಂಪರ್ಕಿಸಬಹುದು
ಮಾಹಿತಿ : ಸಹಾಯಕ ಕೃಷಿ ನಿರ್ದೇಶಕರು ಕೃಷಿ ಇಲಾಖೆ ಕಾರ್ಕಳ








